ಇವಾ ಯಾವೂರವಾ...
ಮೊನ್ನೆ ಆಕಾಶವಾಣಿಯಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ 1973 ರ "ಯಡಕಲ್ಲು ಗುಡ್ಡದ ಮೇಲೆ" ಚಲನಚಿತ್ರದ...ಯಾವೂರವಾ ಇವಾ ಯಾವೂರವಾ...ಹಾಡು ಪ್ರಸಾರ ವಾಗುತ್ತಿತ್ತು,ಅದನ್ನು ಕೇಳುತ್ತಾ ಮನಸ್ಸು ನನ್ನ ಬಾಲ್ಯದ ದಿನಗಳಲ್ಲಿ ತೇಲಿ ಹೋಯಿತು.
ಮೂಲತಃ ಬೆಳಗಾವಿಯವರಾದ ನಮ್ಮ ತಂದೆ, ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ ಕಲಬುರ್ಗಿ ಸ್ನಾತಕೋತ್ತರ ಕೇಂದ್ರಕ್ಕೆ ನೇಮಕಗೊಂಡು ೧೯೭೦ ರಲ್ಲಿ ದೂರದ ಕಲಬುರ್ಗಿಗೆ ಬಂದು ನೆಲೆಸಿದ್ದರು. ಮನೆಯ ಐದು ಮಕ್ಕಳಲ್ಲಿ ಕಿರಿಯ ಮಗನಾದ ನನಗೆ ಆಗ ಸುಮಾರು ನಾಲ್ಕು ವರ್ಷ ವಯಸ್ಸು. ನೂತನ ವಿದ್ಯಾಲಯದ ಹಿಂದೆ /ಎಸ್.ಬಿ. ಕಾಲೇಜಿನ ಮೈದಾನದ ಮುಂದೆ ತಲೆಎತ್ತಿದ ಸಂಗಮೇಶ್ವರ ನಗರ ಬಡಾವಣೆಯಲ್ಲಿ ಹೊಸದಾಗಿ ಕಟ್ಟಿದ ಮನೆಯ ವಾಸ್ತು ನಂತರದ ಪ್ರಥಮ ಬಾಡಗಿಯವರಾಗಿ ನಾವು ಬಂದು ನೆಲೆಸಿದೆವು. ಕಲಬುರ್ಗಿಯಲ್ಲಿ ಆಗ ಪ್ರಚಲಿತವಿದ್ದ ಪದ್ಧತಿಯ ಪ್ರಕಾರ ಪ್ರತೀ ೩ ವರ್ಷಕ್ಕೆ ಮನೆ ಮಾಲೀಕರು ಯಾವುದಾದರೂ ಒಂದು ಕ್ಷುಲ್ಲಕ ಕಾರಣ ನೀಡಿ ಬಾಡಿಗೆಯವರಿಂದ ಮನೆ ಖಾಲಿ ಮಾಡಿಸುತ್ತಿದ್ದರು. ಅದೇ ಪ್ರಕಾರ ಸಂಗಮೇಶ್ವರ ನಗರದಲ್ಲಿ ಎರಡು ಮನೆಗಳನ್ನು ಬದಲಾಯಿಸಿ ನಂತರ ಕೆ.ಯಿ.ಬಿ.ಯ ಹಿಂದೆ/ಫಾರೆಸ್ಟ್ ಆಫೀಸ ಎದುರಿನ ಭಾಗದಲ್ಲಿ ಮತ್ತೆರಡು ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದೆವು. ಹತ್ತು ವರ್ಷದ ಬಾಡಿಗೆ ಮನೆಯ ಇರುವಿಕೆಯಲ್ಲಿ ನಾಲ್ಕು ಮನೆ ಮಾಲೀಕರ ವಿವಿಧ ಸಿಹಿಕಹಿ ಅನುಭವಗಳನ್ನು ಉಂಡ ನಮ್ಮ ತಂದೆತಾಯಿ ಸ್ವಂತ ಮನೆಯನ್ನು ಕಲಬುರ್ಗಿ ನಗರದ ಕೇಂದ್ರ ಭಾಗದಲ್ಲಿಯ ವಿಠ್ಠಲ ನಗರ (ಎನ್.ವಿ. ಲೇಔಟ್) ನಲ್ಲಿ ೧೯೮೨ ರಲ್ಲಿ ಕಟ್ಟಿಸಿದರು. ಆವಾಗಿನಿಂದ "ಚಂದ್ರಿಕಾ", ವಿಠ್ಠಲ ನಗರ, ಕಲಬುರ್ಗಿ ನಮ್ಮ ಶಾಶ್ವತ ವಿಳಾಸ ವಾಯಿತು.
ಹಾಗಾಗಿ ನನ್ನ ಪ್ರಾಥಮಿಕ ಶಿಕ್ಷಣ ದಿಂದ ಪಿ.ಯು.ಸಿ. ವರೆಗೆ ನೂತನ ವಿದ್ಯಾಲಯ ನಂತರ ಇಂಜಿನಿಯರಿಂಗನಲ್ಲಿ ಬಿ.ಇ. ಹಾಗೂ ಎಮ್.ಇ. ಪದವಿ ಗಳನ್ನು ಪಿ.ಡಿ.ಎ. ಇಂಜಿನಿಯರಿಂಗ ಕಾಲೇಜಿನಲ್ಲಿ ಮುಗಿಸಿ ಮುಂದೆ ನಮ್ಮ ಮನೆತನದ ಉದ್ಯೋಗವಾದ ಶಿಕ್ಷಕ ವೃತ್ತಿಯನ್ನು ಕೆ.ಬಿ.ಎನ್. ಇಂಜನಿಯರಿಂಗ ಕಾಲೇಜಿನಲ್ಲಿ ಕಲಬುರ್ಗಿಯಲ್ಲಿಯೇ ಪ್ರಾರಂಭಿಸಿದೆ.
ಕಲಬುರ್ಗಿಯ ನನ್ನ ಬಾಲ್ಯದ ಬಹುತೇಕ ಗೆಳೆಯರ ಹೊಲಮನೆಗಳು, ಕಲಬುರ್ಗಿ ಜಿಲ್ಲೆಯ ಒಂದಿಲ್ಲೊಂದು ಊರು/ಹಳ್ಳಿಯಲ್ಲಿದ್ದವು.ಸ್ವಾಭಾವಿಕವಾಗಿಯೇ ಅವರ ಬಂಧುಬಳಗವೆಲ್ಲವೂ ಕೂಡಾ ಕಲಬುರ್ಗಿ ನಗರ ಅಥವಾ ಸುತ್ತಮುತ್ತಲಿನ ನಗರ/ತಾಲೂಕಿನವರು.
ನಮ್ಮ ತಂದೆಯವರು ಕಲಬುರ್ಗಿ ನಗರದಲ್ಲಿ ಸ್ವಂತ ಮನೆ ಕಟ್ಟಿದ್ದರೂ ನಮ್ಮ ಚೂರು ಪಾರು ಹೊಲಗದ್ದೆಗಳು ಇದ್ದದ್ದು ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಪಾರೀಶ್ವಾಡ ಎಂಬ ಹಳ್ಳಿಯಲ್ಲಿ ಅಂತೆ.(ಅವೂ ಕಾಲಾಂತರದಲ್ಲಿ ಉಳುವವನೇ ಭೂಮಿಯ ಒಡೆಯ ಎಂದು ರೈತರಪಾಲಾಗಿದ್ದವಂತೆ.) ಇನ್ನು ನಮ್ಮ ಬಹುತೇಕ ಬಂಧು ಬಳಗವೆಲ್ಲ ಬೆಳಗಾವಿ/ಧಾರವಾಡ/ಪುಣೆಗಳಲ್ಲಿ.
ಜೊತೆಗೆ ನಮ್ಮ ಮನೆಯಲ್ಲಿನ ಶಿಸ್ತು,ಅಡುಗೆ/ಊಟ,ಕನ್ನಡ ಮಾತಾಡುವ ಶೈಲಿಯಲ್ಲಿ ಸ್ವಲ್ಪ ಬೆಳಗಾವಿಯ ಛಾಪು ಇದ್ದದ್ದು ಸಹಜ.
ನಮ್ಮ ಮನೆಯ ಅಡುಗೆಯಲ್ಲಿ ಹುಳಿ,ಖಾರದ ಪ್ರಮಾಣ ಕಡಿಮೆಯಾದರೆ ಬೆಲ್ಲದ ಪ್ರಮಾಣ ಸ್ವಲ್ಪ ಜಾಸ್ತಿಯೇ. ನನಗಾದರೋ ಗೆಳೆಯರ ಮನೆಯ ಬಿಸಿಬಿಸಿ ಭಕ್ಕರಿ( ಜೋಳದ ರೊಟ್ಟಿ),ಹುಳಿ ಮುಂದಿರುವ ಮುದ್ದೀ ಪಲ್ಯಾ, ಭರಡಾ ಪಲ್ಯಾ, ಖಾರವಾದ ಖಗ್ಗ ಟೋಮೆಟೋ ಚಟ್ನಿ, ರುಚಿಕರವಾದ ಶೇಂಗಾ ಹಿಂಡಿ ಮುಂತಾದವು ಬಹಳ ಸೇರುತ್ತಿದ್ದವು. ಕಲಬುರ್ಗಿಯ ಪುದೀನಾ, ಪುಂಡಿಪಲ್ಯಾ ನಮ್ಮ ಮನೆಯ ಮೆಟ್ಟಿಲು ಹತ್ತಿದ್ದು ಮತ್ತು ಅಡುಗೆಯಲ್ಲಿ ಹುಳಿ ಖಾರಗಳ ಪ್ರಮಾಣ ಹೆಚ್ಚಾದದ್ದು ನಮ್ಮ ಹಿರಿಯ ಅತ್ತಿಗೆ ಹೈದರಾಬಾದ್ ದಿಂದ ಬಂದ ನಂತರವೇ. ಅದರಂತೆಯೇ ವಾರದ ಆರೇಳು ದಿನ ನಮ್ಮ ತಾಯಿ ಚಪಾತಿ ಮಾಡುತ್ತಿದ್ದರು. ಕಲಬುರ್ಗಿಯವರಾದ ನನ್ನ ಎರಡನೇಯ ಅತ್ತಿಗೆಯವರು ಬಂದನಂತರ ಆಗಾಗ ಜೋಳದ ರೊಟ್ಟಿಯ ಪ್ರಮಾಣ ಸ್ವಲ್ಪ ಜಾಸ್ತಿ ಆಯಿತು.
ಕಲಬುರ್ಗಿಗೆ ಬಂದ ಹೊಸದರಲ್ಲಿ ನಾವು ಮಾತನಾಡುವಾಗ ಸಹಜವಾಗಿ ಪ್ಯಾಟಿಗೆ ಹೋಗೋಣ,ಬರೋಣ ಎಂಬ ಕ್ರಿಯಾಪದಗಳ ಬಳಕೆ ಮಾಡಿದರೆ ನಮ್ಮ ಗೆಳೆಯರು ಬಾಜಾರ್ ಕ್ಕ ಹೊಗಂ, ಬರಂ ಅಂತ ಹೇಳುತ್ತಿದ್ದರು.ಅದೇತರಹ ನಾವು ಅಕ್ಕ ಮನ್ಯಾಗ ಇದ್ದಾಳ,ಅಣ್ಣ ಇದ್ದಾನ ಅನ್ನುವ ರೂಢಿ ಇದ್ದರೆ ನನ್ನ ಗೆಳೆಯರಿಗೆ ಅಕ್ಕ ಹಾಳ, ಅಣ್ಣ ಹಾನ ಅನ್ನುವ ರಾಟಿ. ಸಮಯ ಕಳೆದಂತೆ ನನಗರಿವಿಲ್ಲದೇ ನಿಧಾನವಾಗಿ ನಾನು ಮಾತನಾಡುವ ಶೈಲಿಯಲ್ಲಿ ಕಲಬುರ್ಗಿ ಕನ್ನಡದ ಛಾಪು ಮೂಡುತ್ತಾ ಹೋಯಿತು.
ಅಕಸ್ಮಾತ್ತಾಗಿ ಒದಗಿಬಂದ ಉದ್ಯೋಗಾವಕಾಶದಿಂದಾಗಿ ಹುಟ್ಟಿಬೆಳೆದ ಕಲ್ಯಾಣ ಕರ್ನಾಟಕದ ಕಲಬುರ್ಗಿಯಿಂದ ಕಿತ್ತೂರು ಕರ್ನಾಟಕದ ಬೆಳಗಾವಿಗೆ ಬಂದು ನೆಲೆಸಿ ಹತ್ತಿರಹತ್ತಿರ ೩೦ ವರ್ಷವಾಗಲು ಬಂದಿದೆ.
ನಾನು ಬೆಳಗಾವಿಗೆ ಬಂದು ನೆಲೆಸಿದ ಮೇಲೆ ನಾನೂ ಈ ನಾಡಿನವನೇ, ಹಿಂದೆ ನಮ್ಮ ಹೊಲಗದ್ದೆಗಳು ಇದ್ದದ್ದು ಇಲ್ಲಿಯೇ ಪಕ್ಕದ ಖಾನಾಪೂರ ತಾಲೂಕಿನಲ್ಲಿ ಹಾಗೂ ನಮ್ಮ ಎಲ್ಲ ಬಂಧು ಬಳಗ ಇರುವುದು ಇಲ್ಲಿಯೇ, ಮತ್ತೂ ನಮ್ಮ ತಂದೆ ಹುಟ್ಟಿ ಬೆಳೆದದ್ದು, ಶಾಲಾ ಕಾಲೇಜುಗಳ ವಿದ್ಯಾಭ್ಯಾಸ ಮಾಡಿದ್ದು ಜೊತೆಗೆ ಶಾಲಾ ಶಿಕ್ಷಕ ವೃತ್ತಿ ಪ್ರಾರಂಭಿಸಿದ್ದು ನಂತರ ಕಾಲೇಜು ಪ್ರಾಧ್ಯಾಪಕರಾದದ್ದೂ ಎಲ್ಲವೂ ಬೆಳಗಾವಿಯಲ್ಲಿಯೇ ಹಾಗಾಗಿ ನಾನು ಮೂಲತಃ ಬೆಳಗಾವಿಯವ ಎಂದಾದರೂ, ನಾನು ಇಲ್ಲಿ ಹುಟ್ಟಿ ಬೆಳೆದಿಲ್ಲ ಹಾಗೆಯೇ ನಮ್ಮ ಮನೆಯಲ್ಲಿನ ಅಡುಗೆ/ಊಟ ,ಕನ್ನಡ ಮಾತಾಡುವ ಶೈಲಿಯಲ್ಲಿ ಸ್ವಲ್ಪ ಕಲಬುರ್ಗಿಯ ಪ್ರಭಾವ ಸೇರಿದ್ದರ ಅರಿವು ಇಲ್ಲಿ ಬಂದು ಮೇಲೆ ಆಗ ಹತ್ತಿತು.
ಬೆಳಗಾವಿಯವರ ಕನ್ನಡದಲ್ಲಿ ಅನೇಕ ಮರಾಠಿ ಪದಗಳ/ಭಾವದ ಬಳಕೆ ಸಹಜವಾಗಿದೆ. ನನ್ನ ಸಹೋದ್ಯೋಗಿಗಳಿಗೆ ಸಂಜೆ "ಭಾಜಿ ತರಲು ಮನೆಯ ಹೊರಗೆ ಬೀಳುವ ಸವಯ್" (ತರಕಾರಿ ತರಲು ಹೊರಗೆ ಹೋಗುವ ರೂಢಿ) ಇದೆ. ನಮ್ಮ "ಪೌಣ್ಯಾರ" (ಬಳಗದವರ) ಮನೆಗೆ ಹೋದಾಗ ನನಗೆ ಕುಡಿಯಲು ಸ್ವಲ್ಪ ನೀರು ಬೇಕೆಂದಾಗ ಮನೆಯ ಯಜಮಾನತಿ ನೀರು ಕೊಡ್ತೀನಿ "ಗಪ್" ಅಂದಾಗ ಮೊದಲ ಸಲ ನಾನು ಸ್ವಲ್ಪ ಹೌ ಹಾರಿದ್ದೆ. ಇಲ್ಲಿಯ ಮನೆ ಕೆಲಸದವರು,ತರಕಾರಿ ವ್ಯಾಪಾರಿಗಳು ಹೊಸದಾಗಿ ಮದುವೆಯಾದ ನನ್ನ ಮನೆಯಾಕೆಯನ್ನು ವೈನಿ/ ಮಾವಶಿ ಎಂದೂ ನನ್ನನ್ನು ಕಾಕಾ ಎಂದೂ ಸಂಭೋದಿಸಿದಾಗ ನನಗೆ ಮೊದಮೊದಲು ಸ್ವಲ್ಪ ಮುಜುಗರವೆನಿಸಿ ಸಿಟ್ಟಾಗಿದ್ದರೂ ನಂತರ ಅವರು ವ್ಯವಹಾರದಲ್ಲಿ ತಮ್ಮ ಆತ್ಮೀಯತೆಯನ್ನು ಪ್ರದರ್ಶಿಸುತ್ತಿದ್ದಾರೆ ಎಂದು ನಿಧಾನವಾಗಿ ಅರಿತೆ. ಕಲಬುರ್ಗಿಯಲ್ಲಿ ನಾವು ಮೇ ತಿಂಗಳ ಮಧ್ಯಾಹ್ನದ ೪೨ ಡಿಗ್ರೀ ಬಿಸಿಲಿನಲ್ಲಿ ಛತ್ರಿಯನ್ನು ಬಿಡಿ, ತಲೆಗೆ ಒಂದು ಸಾದಾ ಟೋಪಿಯನ್ನೂ ಹಾಕಿಕೊಳ್ಳದೇ ತಿರುಗಾಡುತ್ತಿದ್ದೆವು, ನಮ್ಮ ಬೆಳಗಾವಿಯಲ್ಲೀಗ ನಾನು ೨೪ ಡಿಗ್ರೀ ಬಿಸಿಲಿನಲ್ಲಿ ಛತ್ರಿಯನ್ನು ಹಿಡಿದೇ ಮನೆಯ ಹೊರಗೆ ಬೀಳುವುದು ಸವಯ ಆಗಿದೆ.
ವಿಪರ್ಯಾಸವೆಂದರೆ, ನನ್ನ ಜೀವನದ ಮೊದಲಿನ ೩೦ ವರ್ಷ ಹುಟ್ಟಿ ಬೆಳೆದ ಕಲಬುರ್ಗಿ ನನ್ನನ್ನು ದೂರದ ಬೆಳಗಾವಿಯವ ಎಂದು ಭಾವಿಸಿದರೆ ಈಗ ಇಲ್ಲಿಯ ಬೆಳಗಾವಿಯವರು ನನ್ನನ್ನು ಕಲಬುರ್ಗಿಯವ ಎಂದು ಗುರುತಿಸುತ್ತಾರೆ.
ಅಂತೂ ನಾನು ಇಲ್ಲಿಯವರಿಗೆ ಅಲ್ಲೀಯವ ಮತ್ತು ಅಲ್ಲಿಯವರಿಗೆ ಇಲ್ಲೀಯವ !!!..
ಆದರೆ ನನಗೆ ಇಬ್ಬರೂ ಆತ್ಮಿಯರೇ.
-ಜಯಂತ ಕಿತ್ತೂರ
ತುಂಬಾ ಚೆನ್ನಾಗಿ ಮೂಡಿಬಂದಿದೆ 👏🏻👏🏻.
ಪ್ರತ್ಯುತ್ತರಅಳಿಸಿನಿಮ್ಮ ಅನಿಸಿಕೆಗಳನ್ನು ನಾನು ಓದಿದಾಗ ನಮ್ಮ ಹಿರಿಯರು ಮೂಲತಃ ಮೈಸೂರಿನವರು. ನಾನು ನನ್ನ ಬಾಲ್ಯವನ್ನು ಕಾಲೇಜಿನ ಓದನ್ನು ಸ್ನಾತಕೋತರ ಪದವಿಯನ್ನು ಅಂದರೆ 22 ವರ್ಷ ಬೆಳೆದಿದ್ದು ಆಡಿದ್ದು ಕಲ್ಬುರ್ಗಿಯಲ್ಲಿ. ಅಲ್ಲಿಯ ಊಟ, ಭಾಷೆ, ಎಲ್ಲವನ್ನೂ ರೂಡಿಸಿಕೊಂಡಿದ್ದೇನೆ.ಅದರಲ್ಲಿ ಬೆಳೆದ, ನಾನು ಸೊಲಾಪುರ್, ಪುಣೆ, ಅಥವಾ ಮುಂಬೈನಲ್ಲಿ ಇರಬೇಕೆಂದು ಅಂದುಕೊಂಡೆ. ಆದರೆ ನನಗೆ ಕೆಲಸ ಸಿಕ್ಕಿದ್ದು ಮೈಸೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜು ಆದ ಯುವರಾಜ ವಿಜ್ಞಾನ ಕಾಲೇಜಿನಲ್ಲಿ. ಈಗ ಇಲ್ಲಿ ಸೂಕ್ಷ್ಮ ಜೀವಶಾಸ್ತ್ರದ ಪ್ರೊಫೆಸರ್ ಆಗಿದ್ದೇನೆ.ಈಗಲೂ ಸಹ ಅಲ್ಲಿಯ ಭಾಷೆ, ಪ್ರೀತಿ ನೇರ ಖಡಕ್ ನೋಡಿ ಎಲ್ಲವನ್ನು ಇಷ್ಟಪಡುತ್ತೇನೆ. ನಮ್ಮ ಹಿರಿಯರು ಮೈಸೂರಿನವರಾದರು ನಾವು ಕಲ್ಬುರ್ಗಿಯವರಾಗಿದ್ದೇವೆ. ಜಯಂತ್ ಹಂಪಾಪುರ.
ಪ್ರತ್ಯುತ್ತರಅಳಿಸಿVery nice 🙂👍
ಪ್ರತ್ಯುತ್ತರಅಳಿಸಿಕಲಬುರ್ಗಿಯಲ್ಲಿ ಕಳೆದ ಬಾಲ್ಯದಿಂದ ಹಿಡಿದು ಜವಾಬ್ದಾರಿ ಯುವಕ ನಾಗುವ ವರೆಗಿನ ಸವಿನೆನಪುಗಳನ್ನು ಯಥಾವತ್ತಾಗಿ ದಾಖಲಿಸಿದ ನಿಮ್ಮ ಕಿರು ಬರಹ ಚೆನ್ನಾಗಿದೆ.
ಪ್ರತ್ಯುತ್ತರಅಳಿಸಿಸರ್ ತುಂಬಾ ಚೆನ್ನಾಗಿ ಬರೆದಿದ್ದೀರಿ ನಿಮ್ಮ ವೃತ್ತಿ ಜೀವನದ ಬಗ್ಗೆಯೂ ಬರೆಯಬಹುದು ನಿಮ್ಮಿಂದ ಇನ್ನು ಹೆಚ್ಚಿನ ಬರವಣಿಗೆಗಳು ಬರಲಿ..ಅಭಿನಂದನೆಗಳು..💐💐🙏🙏
ಪ್ರತ್ಯುತ್ತರಅಳಿಸಿನಿಮ್ಮ ಬರಹ ಬಹಳ ಚಲೋ ಅದ. ಇದರಾಗೆ ಬೆಳಬುರ್ಗಿ ಭಾಷಾ ನೋಡಿ ನಾವು ಹೌಹಾರಿವಿ. ನೀವೆಲ್ಲ ಬೆಳೆದ್ರು ಎಲ್ಲೇ ಹೊಟ್ಟೆ ತುಂಬ್ಕೊಂಡರೂ, ನಿಮ್ಮ ಬೇರು ಹಾವೇರ್ಯಾಗದ. ಅಂಬೇಗಾಲು, ಇಡೋದು ಉಡುದಾರದಿಂದ ನಿಕ್ಕರು ಇಲ್ಲೇ ಸುರು ಆಗಿದ್ದು. ಗಾಳಿಪಟ ಎಲ್ಲಿ ಹಾರಾಡಿದ್ರು ದಾರ ಇಲ್ಲಿಯದ. ಮರೀ ಬ್ಯಾಡ್ರಾ ಮತ್ತ್
ಪ್ರತ್ಯುತ್ತರಅಳಿಸಿ😁👍
ಅಳಿಸಿGreat one Jayant👌 I can connect with this article very much.. especially I have tell people even my country and multiple states
ಪ್ರತ್ಯುತ್ತರಅಳಿಸಿಅದ್ಬುತ ಸರ್ 👍
ಪ್ರತ್ಯುತ್ತರಅಳಿಸಿSuper
ಪ್ರತ್ಯುತ್ತರಅಳಿಸಿ👍
ಪ್ರತ್ಯುತ್ತರಅಳಿಸಿಸರ್ ತುಂಬಾ ಚೆನ್ನಾಗಿ ಬರೆದಿದ್ದೀರಿ ನಿಮ್ಮ ಇನ್ನು ಹೆಚ್ಚಿನ ಬರವಣಿಗೆಗಳು ಬರಲಿ.ಅಭಿನಂದನೆಗಳು. 🙏🙏🙏
ಪ್ರತ್ಯುತ್ತರಅಳಿಸಿಅದ್ಭುತ ಬರಹ ಸರ್, ಕಲಬುರ್ಗಿ ಬಿಸಿಲ ನಾಡು ಆದ್ರೂ ಜನರು ಮನಸ್ಸು ತುಂಬಾ ತಂಪು
ಪ್ರತ್ಯುತ್ತರಅಳಿಸಿ