ಉ.ಸೇ.ಆ...
ನಮ್ಮೂರಿನಲ್ಲಿನ ಒಂದು ಸಾಂಸ್ಕೃತಿಕ ಸಂಘಟನೆ ಕಳೆದ ಹತ್ತಾರು ವರ್ಷಗಳಿಂದ ಪಕ್ಷಮಾಸ, ಅಧಿಕಮಾಸ, ಚಾತುರ್ಮಾಸ ಎನ್ನದೇ ಪ್ರತೀ ಮಾಸ ತಪ್ಪದೇ ನಗೆ ಸಂಜೆ ಕಾರ್ಯಕ್ರಮ ಏರ್ಪಡಿಸುತ್ತಾ ಬಂದಿದೆ. ಈ ಕಾರ್ಯಕ್ರಮ ಇಷ್ಟು ದೂರವನ್ನು ಕ್ರಮಿಸಿ ಬಂದಿರುವುದರ ಹಿನ್ನೋಟವನ್ನು ಅವಲೋಕಿಸಿದರೆ ಒಂದು ವಿಷಯ ಬಹಳ ಸ್ಪಷ್ಟವಾಗಿ ಕಾಣಿಸುತ್ತದೆ. ಪ್ರತೀ ತಿಂಗಳ ಕಾರ್ಯಕ್ರಮಗಳಲ್ಲಿ ರಸವತ್ತಾಗಿ ಮಾತನಾಡುವವರು, ಸ್ವರಚಿತ ಹಾಸ್ಯಪದ್ಯ/ಚುಟುಕು ಪ್ರಸ್ತುತ ಪಡಿಸುವವರು, ಅಥಿತಿ ಉಪನ್ಯಾಸಕರು, ಕಲಾಕಾರರು, ಭಾಷಣಕಾರರು, ಮತ್ತು ತಿಂಗಳ ಕಾರ್ಯಕ್ರಮದ ಥೀಮ್, ಕಾರ್ಯಕ್ರಮ ಜರುಗಿಸುವ ನವನವೀನ ಶೈಲಿ ಇತ್ಯಾದಿ ಬದಲಾದರೂ ಪ್ರತೀ ತಿಂಗಳ ಆಮಂತ್ರಣ ಪತ್ರಿಕೆಯಲ್ಲಿನ "ಉಪಹಾರ ಸೇವಿಸಿಯೇ ಆಸೀನರಾಗಿ" ಎಂಬ ಪೇಟೆಂಟ್ ರಿಜಿಸ್ಟರ್ ಮಾಡದ ಆ ಪಂಚ್ ಲೈನ್ ಮಾತ್ರ ಬದಲಾಗಿಲ್ಲ. ಅಷ್ಟೇಅಲ್ಲ, ಆ ಉಪಹಾರದ ಕಾಯಂ ಐಟಂ 'ಉಪ್ಪಿಟ್ಟು' ಮತ್ತು ಅದರ ರುಚಿ ಕೂಡಾ ಅಷ್ಟೇನೂ ಬದಲಾಗಿಲ್ಲ ಎಂಬುದು ಒಂದು ವಿಶೇಷ. ಪ್ರತೀ ತಿಂಗಳು ಈ ಕಾರ್ಯಕ್ರಮ ತಪ್ಪದೇ ಒಂದು ನಿಶ್ಚಿತ ತಿಥಿಯಂದು ಸಂಜೆ ೪.೩೦ ರಿಂದ ಸುಮಾರು ಎರಡು-ಎರಡೂವರೆ ಗಂಟೆ ಜರುಗುತ್ತದೆ. ಕೆಲವೊಂದು ಸಲ ನಗರದಲ್ಲಿ ಇತರ ಯಾವುದೋ ಸಾಂಸ್ಕೃತಿಕ ಕಾರ್ಯಕ್ರಮ ಇದೇ ಸಮಯದಲ್ಲೇ ಏರ್ಪಟ್ಟಾಗ ಅಲ್ಲಿಯ ಪ್ರೇಕ್ಷಕರ ಉಪಸ್ಥಿತಿ ಕಡಿಮೆ ಇರುತ್ತದೆಯಂತೆ. ಆ ಕಾರ್ಯಕ್ರಮದ ಆಯೋಜಕರು, ನಮ್ಮ ಘನ ಸರ್ಕಾರ ಬಿಟ್ಟಿ ಭಾಗ್ಯಗಳನ್ನು ನೀಡಿ ಮತದಾರರ...