ದಿಖಾವೇಪೆ ಮತ್ ಜಾವೋ ಅಕಲ್ ಲಗಾವೋ...
ಈ ಶ್ವೇತ ವರಾಹ ಕಲ್ಪದ ವೈವಸ್ವತ ಮನ್ವಂತರದ ೨೮ನೇ ಕಲಿಯುಗದ ಗತ ಶಾಲಿವಾಹನ ಶಕ ವರ್ಷ ೧೯೪೭ ವಿಶ್ವಾವಸು ಸಂವತ್ಸರದಲ್ಲಿ ಗೂಗಲ್/ಚಾಟ್ ಜಿಪಿಟಿಗಳೇ ಗುರುಗಳು ಮತ್ತೂ ಅವುಗಳು ಹೇಳಿದ್ದೇ ವೇದವಾಕ್ಯ ಎಂದು ನಂಬಿರುವ ನವದಂಪತಿಗಳು ನುರಿತ ಪ್ರಸೂತಿ ತಜ್ಞ ವೈದ್ಯರ ಇಲ್ಲವೇ ಕನಿಷ್ಠ ಪಕ್ಷ ಅನುಭವಿ ಪ್ರಸೂತಿಕಾಗ್ರಹದ ದಾದಿಯ ಸಲಹೆ/ಸಹಾಯವನ್ನೂ ಕೇಳದೇ ತಮ್ಮ ಪ್ರಥಮ ಮಗುವಿನ ಹೆರಿಗೆಯ ಸಮಯದಲ್ಲಿ ಕೇವಲ ಗೂಗಲ್/ಚಾಟ್ ಜಿಪಿಟಿಗಳ ವಿಶ್ಲೇಷಣೆ ಅಥವಾ ವಿವರಗಳನ್ನು ನಂಬಿ ಯಡವಟ್ಟು ಮಾಡಿಕೊಳ್ಳುವುದನ್ನು ಪತ್ರಿಕೆಗಳಲ್ಲಿ ಓದಿರಬಹುದು. ಈಗ PUC, CET ಪರೀಕ್ಷೆ ಬರೆದ ಬಹಳಷ್ಟು ವಿದ್ಯಾರ್ಥಿಗಳ ಮತ್ತೂ ಅವರ ಪಾಲಕರ ಪರಿಸ್ಥಿತಿಯೂ ಇದೇ ತೆರನಾಗಿದೆ.
ಮರಾಠಿಯಲ್ಲಿ ಒಂದು ಗಾದೇಮಾತಿದೆ "ಐಕಾವ ಜನಾಚ ಕರಾವ ಮನಾಚ" ಅದರ ಅರ್ಥ, ಯಾರದೋ ಮಾತನ್ನು ಕಣ್ಣುಮುಚ್ಚಿ ನಂಬದೇ ಎಲ್ಲರ ವಿಚಾರಗಳನ್ನು ಕೇಳಿ ಸಾರಾಸಾರ ವಿಚಾರಮಾಡಿ ನಿನ್ನ ನಿರ್ಧಾರ ತೆಗೆದುಕೊ ಎಂದು.ಇಂದು ನೀವು ತೆಗೆದುಕೊಳ್ಳುವ ನಿರ್ಧಾರ ಬೆಳಗ್ಗೆ ಶೇರುಪೇಟೆ ಸೂಚ್ಯಂಕ ನೋಡಿ ಹಣ ಹೂಡುವ ನಿರ್ಧಾರ ಮಾಡಿ ಮಧ್ಯಾಹ್ನದ ವೇಳೆಗೆ ಹೂಡಿದ ಹಣ ವೃದ್ಧಿಯಾಗಿ ಅಥವಾ ಕ್ಷೀಣಿಸಿ ವ್ಯಾಪಾರ ವ್ಯವಹಾರ ಮುಗಿಸಿ ಮತ್ತೆ ನಾಳೆಗೆ ಹೊಸದಾಗಿ ಅದೃಷ್ಟಕ್ಕೆ ಪ್ರಯತ್ನಿಸುವ ಶೇರು ಮಾರುಕಟ್ಟೆಯ ಡೇ ಟ್ರೇಡಿಂಗ್ ನಿರ್ಧಾರದ ತರಹದ್ದಲ್ಲ. ಬದಲಾಗಿ ಇಂದು ತಾವು ತೆಗೆದುಕೊಳ್ಳುವ ನಿರ್ಧಾರ ವಿದ್ಯಾರ್ಥಿಯ ಭವಿಷ್ಯದ ದೃಷ್ಟಿಯಿಂದ ಬಹಳ ದೂರಗಾಮಿ ಪ್ರಭಾವ ಬೀರುವದಾಗಿದೆ.
ಸುದೀರ್ಘ ೩೫ ವರ್ಷ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರೊಫೆಸರಾಗಿ ವಿದ್ಯಾರ್ಥಿಗಳಿಗೆ ಪಾಠ ಮಾಡುವುದರ ಜೊತೆಗೆ ಪ್ಲೇಸ್ಮೆಂಟ್ ಆಫೀಸರ್, ವಿಭಾಗ ಮುಖ್ಯಸ್ಥ, ಡೀನ್ ಆಗಿ ಮತ್ತೂ ಮೂರು ವರ್ಷ ಪ್ರಾಂಶುಪಾಲ ಜವಾಬ್ದಾರಿ ಹುದ್ದೆಗಳ ನಿರ್ವಹಣೆಯ ಅನುಭವದ ಆಧಾರದ ಮೇಲೆ ಇಂದಿನ ಪಾಲಕರು ಮತ್ತೂ ವಿದ್ಯಾರ್ಥಿಗಳಿಗೆ ಕೆಲವೊಂದು ಕಿವಿಮಾತುಗಳನ್ನು ಹೇಳಿ ನನ್ನ ಸಾಮಾಜಿಕ ಕರ್ತವ್ಯ ನಿರ್ವಹಿಸುವ ಪ್ರಯತ್ನ ಇದಾಗಿದೆ.
ನಾವು ಯಾವ ಊರಿಗೆ ಹೋಗಬೇಕಾಗಿದೆ ಎಂದು ಗೊತ್ತಿಲ್ಲದಿದ್ದರೆ ಯಾವುದೇ ಹಾದಿಯೂ ನಮ್ಮನ್ನು ಅಲ್ಲಿಗೆ ಕರೆದೊಯ್ಯ ಬಹುದು. ಮೊದಲು ನಾವು ಯಾವ ಊರಿಗೆ ಹೋಗಬೇಕಾಗಿದೆ ಎಂದು ನಿರ್ಧರಿಸಿದರೆ ಅದಕ್ಕೆ ಯಾವ ದಾರಿ ಮತ್ತೂ ಯಾವ ವಾಹನ ಎಂದು ನಿರ್ಧರಿಸುವುದು ಸುಲಭ. ಒಂದು ಮಾತನ್ನು ನಾವು ನೆನಪಿಟ್ಟುಕೊಳ್ಳಬೇಕಾದದ್ದು ಏನೆಂದರೆ, ಭವಿಷ್ಯದಲ್ಲಿ ನನ್ನ ಜೀವನ ಗುರಿ ಏನು, ಏನನ್ನು ಸಾಧಿಸಲು ಬಯಸುತ್ತೇವೆ, ಜೀವನೊಪಾಯಕ್ಕೆ ಯಾವ ತರಹದ ವೃತ್ತಿಯನ್ನು ಮಾಡಬಯಸುವೆ ಎಂಬ ಸ್ಪಷ್ಟತೆಯನ್ನು ಹೊಂದಿರುವುದು. ಈ ಸ್ಪಷ್ಟತೆಯನ್ನು ಪಡೆಯಲು ನಾವು ನಮ್ಮ ಜ್ಞಾನೇಂದ್ರಿಯಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ನಾವು ಎತ್ತರದ ಗುಡ್ಡದ ಮೇಲೆ ನಿಂತು ದಿಗಂತದವರೆಗೆ ಕಣ್ಣು ಹರಿಸಿದರೆ ಜಾಗತಿಕ ಮಟ್ಟದಲ್ಲಿ ಸಧ್ಯ ಏನೆಲ್ಲಾ ನಡೆದಿದೆ ಮತ್ತೂ ಅದರ ದೂರಗಾಮಿ ಪರಿಣಾಮಗಳು ಏನಾಗಬಹುದು ಮತ್ತು ಆ ಸನ್ನಿವೇಶಕ್ಕೆ ಈಗ ನಾವು ಆಯ್ಕೆಮಾಡುತ್ತಿರುವ ಶಿಕ್ಷಣ ಹೇಗೆ ಸಹಕಾರಿ ಯಾಗಬಲ್ಲದು ಎಂಬ ವಿವೇಚನೆ ಬರಬಹುದು.
ಈಗ್ಗೆ ಹತ್ತಿಪ್ಪತ್ತು ವರ್ಷಗಳ ಹಿಂದಿನವರೆಗೆ PUC ಯ ನಂತರದ ಉನ್ನತ ಶಿಕ್ಷಣ/ಕಲಿಕಾ ಆಯ್ಕೆಗಳು ಬೆರಳೆಣಿಕೆಯಷ್ಟಿದ್ದವು.ಆದರೆ, ಇಂದಿನ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನದ (ಕೃತಕ ಬುದ್ಧಿಮತ್ತೆ, ಸ್ವಯಂಚಾಲನ ತಂತ್ರ ಮತ್ತೂ ಮಷೀನ್ ಲರ್ನಿಂಗ್ ಮುಂತಾದವು) ಮತ್ತೂ ಅಷ್ಟೇ ವೇಗವಾಗಿ ಬದಲಾಗುತ್ತಿರುವ ಭೌಗೋಳಿಕ ಮತ್ತೂ ರಾಜಕೀಯ ಪರಿಸ್ಥಿತಿಯ (ಜಾಗತೀಕರಣದ ಅಥವಾ ರಾಷ್ಟ್ರವಾದದ)ದಿನಗಳಲ್ಲಿ ಅವಕಾಶಗಳು ಮತ್ತು ಶಕ್ಯತೆಗಳು ಅಪಾರ ಮತ್ತೂ ಅಷ್ಟೇ ಅಸ್ಪಷ್ಟ. ಹಾಗಾಗಿ ಇಂದಿನ ದಿನಗಳಲ್ಲಿ ಉನ್ನತ ಶಿಕ್ಷಣದ ಆಯ್ಕೆಯ ನಿರ್ಧಾರ ತೆಗೆದುಕೊಳ್ಳುವುದು ಸುಲಭದ ಮಾತಲ್ಲ.
ಮೊನ್ನೆ ಮಾರುಕಟ್ಟೆಯಲ್ಲಿ ಟೊಮೇಟೊ ಅಥವಾ ಈರುಳ್ಳಿ ಬೆಲೆ ಗಗನಕ್ಕೇರಿತ್ತು ಎಂದು ಎಲ್ಲಾ ರೈತರೂ ತಮ್ಮ ಹೊಲಗದ್ದೆಗಳಲ್ಲಿ ಅದನ್ನೇ ಬೆಳೆದರೆ ನಾಳೆ ಎರಡೇ ತಿಂಗಳಲ್ಲಿ ಮಾರುಕಟ್ಟೆಯಲ್ಲಿ ಆವಕ ಜಾಸ್ತಿಆಗಿ ಟೊಮೇಟೊ ಅಥವಾ ಈರುಳ್ಳಿ ಬೆಲೆ ಪಾತಾಳಕ್ಕೆ ಸೇರಬಹುದು. ಮುರ್ನಾಲ್ಕು ತಿಂಗಳು ಕಷ್ಟಪಟ್ಟು ಬೆಳೆದ ಟೊಮೇಟೊ ಅಥವಾ ಈರುಳ್ಳಿಗಳನ್ನು ತಲೆಕೆಟ್ಟು ರೈತರು ರಸ್ತೆಯಲ್ಲಿ ಚೆಲ್ಲಿಹೋಗುವ ಪರಿಸ್ಥಿತಿ ಒಂದೆಡೆಯಾದರೆ, ಜಿಲ್ಲೆಯಲ್ಲಿ/ರಾಜ್ಯದಲ್ಲಿ ಅನೇಕ ಸಕ್ಕರೆ ಕಾರ್ಖಾನೆಗಳಿವೆ ಅವು ನಿಶ್ಚಿತವಾಗಿ ನಾವು ಬೆಳೆದ ಕಬ್ಬನ್ನು ಖರೀದಿಸುತ್ತವೆ ಎಂದು ಎಲ್ಲಾ ರೈತರೂ ತಮ್ಮ ಹೊಲಗದ್ದೆಗಳಲ್ಲಿ ಕೇವಲ ಕಬ್ಬನ್ನೇ ಬೆಳೆದರೆ ಸಕ್ಕರೆ ಕಾರ್ಖಾನೆಗಳು ಕೇವಲ ಒಳ್ಳೆ ರಸಭರಿತ ಕಬ್ಬಿನ ಕಟಾವನ್ನು ತಮ್ಮ ಕಾರ್ಖಾನೆಗಳ ಕಬ್ಬು ಅರೆಯುವ ಶಕ್ತಿ ಮತ್ತೂ ಅವಶ್ಯಕತೆಗೆ ಅನುಗುಣವಾಗಿ ಖರೀದಿಸಿ ನಂತರ ಕಂತುಗಳಲ್ಲಿ ಹಣ ಪಾವತಿಗೆ ರೈತರು ತಿಂಗಳುಗಟ್ಟಲೇ ಅಲೆದಾಡುವ ಪತ್ರಿಕಾ ವರದಿಗಳನ್ನು ನಾವೇಲ್ಲ ಓದಿರಲು ಸಾಕು. ಜಾಣರಾದ ಪ್ರಗತಿಪರ ರೈತರು ಇತರರ ಸಾಧನೆಯ ಸಾಧಕ ಬಾಧಕಗಳ ವೃತ್ತಾಂತವನ್ನು ಕೇಳಿ/ನೋಡಿ ಮೊದಲು ತಮ್ಮ ಹೊಲಗದ್ದೆಗಳ ನೆಲ-ಜಲಗಳ ಸಾಮರ್ಥ್ಯದ ಬಗ್ಗೆ ಚೆನ್ನಾಗಿ ಅರಿತು ನಂತರ ತಮ್ಮ ಬೆಳೆಗಳ ಆಯ್ಕೆ ಮಾಡುವರು. ತಮ್ಮ ಹೊಲಗದ್ದೆಗಳ ಸುತ್ತಲೂ ಮತ್ತೂ ಕೆಲ ಭಾಗದಲ್ಲಿ ಫಲಕೊಡಲು ತಡವಾದರೂ ದಶಕಗಳವರೆಗೆ ನಿರಂತರ ಫಲ ನೀಡುವ ಮಾವು ,ತೆಂಗು ಮುಂತಾದವನ್ನು ನೆಟ್ಟು ಬೆಳೆಸುವುದು.ಇನ್ನೂಳಿದ ಭಾಗದಲ್ಲಿ ಮಾರುಕಟ್ಟೆಯ ಅಗತ್ಯತೆಗೆ ಅನುಗುಣವಾಗಿ ಕೆಲವೇ ತಿಂಗಳುಗಳಲ್ಲಿ ಕಟಾವಾಗುವ ತರಕಾರಿ, ದವಸ ಧಾನ್ಯ ಮುಂತಾದವನ್ನು ಬೆಳೆಯುವುದು. ಪ್ರಗತಿಪರ ರೈತರ ಬೆಳೆಯ ಆಯ್ಕೆ ನಮ್ಮ ವಿದ್ಯಾರ್ಥಿಗಳ ಕೋರ್ಸು/ ಕಾಲೇಜುಗಳ ಆಯ್ಕೆಗೆ ಸೂಕ್ತ ಉದಾಹರಣೆ.
ಈಗ PUC, CET ಪರೀಕ್ಷೆ ಬರೆದ ವಿದ್ಯಾರ್ಥಿಗಳ ಮತ್ತೂ ಅವರ ಪಾಲಕರ ಮುಖ್ಯ ಸಮಸ್ಯೆಯೆಂದರೆ ಕೋರ್ಸು ಮತ್ತೂ ಕಾಲೇಜು ಇವೆರಡರಲ್ಲಿ ಯಾವುದಕ್ಕೆ ಹೆಚ್ಚಿನ ಮಹತ್ವ/ಪ್ರಾಶಸ್ತ್ಯ ನೀಡಬೇಕೆಂಬುದು. ವೈದ್ಯಕೀಯ /ದಂತವೈದ್ಯಕೀಯ, ಫಾರ್ಮಸಿ ಅಥವಾ BSc ಅಗ್ರಿ ಮುಂತಾದ ವೃತ್ತಿಪರ ಶಿಕ್ಷಣದಲ್ಲಿ ಆಯ್ಕೆಗೆ ವಿವಿಧ ಕೋರ್ಸುಗಳ ಗೊಂದಲವಿಲ್ಲ. ಅಲ್ಲಿ ಕೇವಲ ಕಾಲೇಜಿನ ಆಯ್ಕೆಯ ಸಮಸ್ಯೆ. ಇನ್ನು BA/BCom/BSc/BCA/BBA ಮುಂತಾದ ಡಿಗ್ರೀ ಕೋರ್ಸ್ ಗಳಲ್ಲಿ ಕೆಲವು ವಿಶೇಷ ವಿಷಯಗಳ ಆಯ್ಕೆಗೆ ಅವಕಾಶ ಇರುತ್ತವೆ. ಆದರೆ, ಸರ್ವೇಸಾಮಾನ್ಯವಾಗಿ ಇಂಜಿನಿಯರಿಂಗನಲ್ಲಿ ಕೋರ್ಸುಗಳ ಸಂಖ್ಯೆಗಳೂ ಹೆಚ್ಚು ಮತ್ತೂ ಅದೇ ರೀತಿ ಕಾಲೇಜುಗಳೂ ಅನೇಕ. ಈ ಪರಿಸ್ಥಿಯಲ್ಲಿ ಕೋರ್ಸು ಮತ್ತೂ ಕಾಲೇಜು ಇವೆರಡರಲ್ಲಿ ಯಾವುದಕ್ಕೆ ಹೆಚ್ಚಿನ ಮಹತ್ವ/ಪ್ರಾಶಸ್ತ್ಯ ನೀಡಬೇಕೆಂಬುದು ನಿಜಕ್ಕೂ ಒಂದು ಮಹತ್ವದ ಪ್ರಶ್ನೆ?. You are known by the company you keep, Tell me who are your friends and I will tell you what you are ಅಥವಾ ಮೂರ್ಖರ ಗುರುವಾಗುವುದಕ್ಕಿಂತ ಜ್ಞಾನಿಯ ಶಿಷ್ಯನಾಗಿರುವುದು ಶ್ರೇಷ್ಠ ಎಂಬ ವಿವಿಧ ಅನುಭವದ ಗಾದೇಮಾತುಗಳನ್ನು ನೀವು ಕೇಳಿರಲು ಸಾಕು.
ಸಂಸ್ಕೃತದ ಒಂದು ಶ್ಲೋಕ ಹೀಗಿದೆ.
"आचार्यात् पदमादत्ते पादं शिष्यः स्वमेधया। पादं सब्रह्मचारिभ्यः पादं कालक्रमेण च ॥"
ಅಂದರೆ,ವಿದ್ಯಾರ್ಥಿಗಳು ಕಾಲು ಭಾಗ ಜ್ಞಾನವನ್ನು ಶಿಕ್ಷಕರಿಂದ ತರಗತಿಯಲ್ಲಿ ಕಲಿಯುತ್ತಾರೆ ಮತ್ತೊಂದು ಕಾಲು ಭಾಗವನ್ನು ಸ್ವಪ್ರಯತ್ನ/ ಪ್ರಾಯೋಗಿಕವಾಗಿ ಕಲಿಯುತ್ತಾರೆ ಮತ್ತೊಂದು ಕಾಲು ಭಾಗವನ್ನು ಸಹಪಾಠಿಗಳಿಂದ ಕಲಿಯುತ್ತಾರೆ. ಇನ್ನು ಉಳಿದೊಂದು ಕಾಲು ಭಾಗವನ್ನು ಜೀವನ ಅನುಭವ ಕಲಿಸುತ್ತದೆ. ಇವೆಲ್ಲವೂ ಸೂಚಿಸುವುದು ಒಳ್ಳೆಯ ಕಾಲೇಜಿನ ಪ್ರಾಮುಖ್ಯತೆಯನ್ನೇ ಹೊರತೂ ಕೋರ್ಸನ್ನಲ್ಲ. ಒಳ್ಳೆಯ ಕಾಲೇಜಿನಲ್ಲಿ ಸಾಮಾನ್ಯವಾಗಿ ಉನ್ನತ ಶ್ರೇಣಿಯ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿ ಮತ್ತೂ ಅದರಂತೆಯೇ ಸ್ಪರ್ಧಾತ್ಮಕ ವಾತಾವರಣ ಮತ್ತೂ ಅವಕಾಶಗಳು ಜಾಸ್ತಿ. ಆದ್ದರಿಂದ ಒಳ್ಳೆಯ ಕಾಲೇಜಿನ ಆಯ್ಕೆ ಪ್ರಥಮ ಆದ್ಯತೆಯದಾಗಬೇಕೇ ಹೊರತು ಕೋರ್ಸ್ ಅಲ್ಲ. ಒಳ್ಳೆಯ ಕಾಲೇಜಿನ ಯಾವುದೇ ಕೋರ್ಸ್ ಕಳಪೇ ಮಟ್ಟದ ಕಾಲೇಜಿನ ಉತ್ತಮ ಕೋರ್ಸಕಿಂತಲು ಹೆಚ್ಚಿನ ಮತ್ತೂ ವಿವಿಧ ವೃತ್ತಿಯ ಅವಕಾಶಗಳನ್ನು ಒದಗಿಸುತ್ತದೆ ಎಂಬುದು ಅನುಭವದ ಅಭಿಪ್ರಾಯ.
ಶಿಕ್ಷಣದ ವ್ಯಾಪಾರೀಕರಣದ ಇಂದಿನ ದಿನಗಳಲ್ಲಿ ಮಾರುಕಟ್ಟೆಯ ಅಗತ್ಯತೆಗೆ ಅನುಗುಣವಾಗಿ ಅಥವಾ ವಿದ್ಯಾರ್ಥಿ ಗ್ರಾಹಕರನ್ನು ಆಕರ್ಷಿಸಲು ಕಾಲೇಜುಗಳು ದಿನಕ್ಕೊಂದು ಹೊಸ ಕೋರ್ಸಗಳನ್ನು ಪ್ರಾರಂಭಿಸುತ್ತಿವೆ ಮತ್ತೂ ಅಷ್ಟೇ ವೇಗವಾಗಿ ಕೋರ್ಸಗಳನ್ನು ಮುಚ್ಚುತ್ತವೆ. ಅಷ್ಟೇ ಅಲ್ಲ ಅದಕ್ಕೆ ಪೂರಕವಾದ ಜಾಹಿರಾತು /ವಿಶ್ಲೇಷಣೆ ಗಳನ್ನು ಜಾರಿಮಾಡುತ್ತವೆ. ಇನ್ನೂ ಅನೇಕರು ಇಂಟರ್ನೆಟ್ ಸರ್ಚದಲ್ಲಿ ತಮ್ಮ ಕಾಲೇಜಿನ ವಿವಿಧ ಕೋರ್ಸುಗಳು ಪ್ರಮುಖವಾಗಿ ಕಾಣಿಸುವಂತೆ ಮಾಡಲೂ ಪ್ರಯತ್ನಿಸುವದುಂಟು. ಅನೇಕ ಪಾಲಕರು ತಮ್ಮ ಮಗುವಿಗೆ CS /IS ಕೋರ್ಸುಗಳ ಸೀಟೇ ಬೇಕು ಎಂದು ಹೇಳುವುದನ್ನು ಸಾಕಷ್ಟು ಕಾಣಬಹುದು. ಕಾರಣ ಅವರ ಕಂದ ಯಾವಾಗಲೂ ಕಂಪ್ಯೂಟರ್ ಗೇಮ್ ಆಡುತ್ತಾನೆ ಅದಕ್ಕೆ ಅವನಿಗೆ ಅದೇ ಕೋರ್ಸ್ ಸೂಕ್ತ ಮತ್ತೂ ಅವನಿಗೆ ಇಷ್ಟ ಎಂದು ಸಬೂಬು ನೀಡುತ್ತಾರೆ. ಇನ್ನೂ ಅನೇಕರು ಜನ ಮರುಳೋ ಜಾತ್ರೆ ಮರುಳೋ ಎಂದು CS /IS ಕೋರ್ಸುಗಳ ಮತ್ತೂ ಇತ್ತಿಚಿಗೆ ಅವುಗಳ ಮರಿಗಳಾದ AI & ML ಕೋರ್ಸುಗಳನ್ನು ಆಯ್ಕೆ ಮಾಡಿಕೊಳ್ಳುವ ಪ್ರವೃತ್ತಿ ಜಾಸ್ತಿಯಾಗಿದೆ. ಇದಕ್ಕೆ ಮುಖ್ಯ ಕಾರಣ ಏನಕೇನ ಪ್ರಕಾರೇಣ ತಮ್ಮ ಮಗುವಿಗೆ ಡಿಗ್ರಿ ಮುಗಿಯುವದರಲ್ಲಿ ಒಂದು ನೌಕರಿ ಸಿಗಲಿ ಎಂಬುದಾಗಿರುತ್ತದೆ. ಹತ್ತಿಪ್ಪತ್ತು ವರ್ಷಗಳ ಹಿಂದೆ ಹಾಗೆ ಬಯಸುವುದು ಒಂದು ರೀತಿಯಲ್ಲಿ ಸರಿಯೇ ಇದ್ದಿತು.ಇದು ಒಂದು ರೀತಿಯಲ್ಲಿ ಹಿಂದೆ ನಡೆದು ಬಂದ ರಸ್ತೆಯನ್ನು ಪಕ್ಕದ/ಹಿಂಬದಿಯ ಕನ್ನಡಿಯಲ್ಲಿ ನೋಡಿ ಕಾರನ್ನು ಮುಂದೆ ಓಡಿಸಿಕೊಂಡು ಹೋಗುವ ಪ್ರವೃತ್ತಿ. ಆದರೆ ಇತ್ತೀಚಿನ ತೀವ್ರಗತಿಯಲ್ಲಿ ಬದಲಾಗುತ್ತಿರುವ ತಂತ್ರಜ್ಞಾನದ, ಜಾಗತಿಕ ರಾಜಕೀಯ ವಿದ್ಯಮಾನಗಳ ಮತ್ತೂ ಸರ್ಕಾರದ ನೀತಿಗಳ ಹಿನ್ನೆಲೆಯಲ್ಲಿ ಬದಲಾದ ನೌಕರಿ ಮಾರುಕಟ್ಟೆಯ ಹಾಗೂ ವಿವಿಧ ವೃತ್ತಿ ಅವಕಾಶಗಳ ಸನ್ನಿವೇಶದಲ್ಲಿ ಇದು ಎಷ್ಟು ಪ್ರಯೋಜನಕಾರಿ ಎಂಬುದು ವಿಚಾರ ಯೋಗ್ಯ ವಿಷಯ.
ನಾವು ಕಟ್ಟುವ ಮನೆಯ ಅಡಿಪಾಯ ಗಟ್ಟಿಯಾಗಿದ್ದರೆ ನಾವು ಕಾಲಕ್ಕೆ ತಕ್ಕಂಥಾ ಇಟ್ಟಿಗಿಯ ಅಥವಾ ಇತರ ತರಹದ ಗೋಡೆ ಕಟ್ಟಿ ಬೇಕಾದಾಗ ಮಾರ್ಪಾಡು ಮಾಡಿ ಅದಕ್ಕೆ ವಿವಿಧ ಬಗೆಯ ಬಣ್ಣಗಳನ್ನೋ ಅಥವಾ ವಾಲ್ ಪೇಪರ್ ಗಳನ್ನೋ ಯಾವಾಗ ಬೇಕಾದರೂ ಹಚ್ಚಬಹುದು. ಆದರೆ, ಅಡಿಪಾಯ ಗಟ್ಟಿಯಾಗಿರದೇ ದಿಢೀರನೇ ಕಟ್ಟಿದ ಕೇವಲ ಆಕರ್ಷಕ ಬಣ್ಣದ ಟೊಳ್ಳು ಗೋಡೆಯ ಮನೆ ಒಂದೇ ಭೂಕಂಪಕ್ಕೆ ನೆಲಸಮ ಆಗುವ ಸಾಧ್ಯತೆ ಹೆಚ್ಚು. ಸಮುದ್ರದಲ್ಲಿ ಈಜಲು ಕಲಿತವರು ನದಿ ಹಳ್ಳ ಕೊಳ್ಳಗಳಲ್ಲಿ ಲೀಲಾಜಾಲವಾಗಿ ಈಜಿ ದಡ ಸೇರಬಹುದು ಹೊರತು ಈಜು ಕೊಳದಲ್ಲಿ ಕಲಿತವರು ಸಮುದ್ರ ಬಿಡಿ ಹಳ್ಳ ನದಿಗಳಲ್ಲಿ ಈಜಲು ತಡಕಾಡುವರು.
ನಾವು ಮಾಡುವ ಊಟ ಮುಖ್ಯವಾಗಿ ದೇಹಕ್ಕೆ ಹಿತಕರವಾಗಿ ಆರೋಗ್ಯಕರವಾಗಿರಬೇಕು. ಒಳ್ಳೆಯ ಅಕ್ಕಿಯ ಹಿತಕರವಾಗಿ ಬೆಂದ ಅನ್ನ ಮುಖ್ಯ. ಅದಕ್ಕೆ ಗ್ರಾಹಕನ ಬೇಡಿಕೆಗೆ ಅನುಗುಣವಾಗಿ ಕೆನೆಭರಿತ ಗಟ್ಟಿ ಮೊಸರು ಬೆರೆಸಿ ಮೇಲೆ ಸ್ವಲ್ಪ ತುಪ್ಪದ ಒಗ್ಗರಣೆ ಕೊಟ್ಟು ಮೊಸರನ್ನ ಮಾಡಬಹುದು ಇಲ್ಲವೇ ವಿವಿಧ ತರಕಾರಿಯ ಹೋಳುಗಳ ಜೊತೆ ರುಚಿಯ ಮಸಾಲೆ ಬೆರೆಸಿ ಪಲಾವ್ ಭಾತ್, ಇಲ್ಲವೇ ಬೇಳೆ ಬೆರಸಿ ಬಿಸಿಬೇಳೆ ಭಾತ್ ಅಥವಾ ಸಾದಾ ಚಿತ್ರಾನ್ ಮಾಡಿ ಜೊತೆಗೆ ನಂಜಿಕೊಳ್ಳಲು ಯಾವುದೇ ವ್ಯಂಜನ ಇದ್ದರೂ ನಡೆದೀತು. ಹೊರತಾಗಿ, ಕಳಪೆ ಅಕ್ಕಿಯ ಸರಿಯಾಗಿ ಬೆಂದಿರದ ಅನ್ನದ ಯಾವುದೇ ಭಾತ್ ನ ಊಟವಿದ್ದು ಬಾಯಿ ರುಚಿಯ ವಿವಿಧ ಬಗೆಯ ಬಣ್ಣ ಬಣ್ಣದ ಉಪ್ಪಿನಕಾಯಿ, ಚಟ್ನಿ, ಸಂಡಿಗೆ ಮುಂತಾದ ಆಕರ್ಷಕ ವ್ಯಂಜನಗಳಿದ್ದರೂ ಆರೋಗ್ಯಕ್ಕೆ ಹಿತಕರವೆನಿಸದು. ಮತ್ತೂ ಗ್ರಾಹಕ ಸಂತುಷ್ಟನಾಗಲಾರ.
ಹೇಳುವ ತಾತ್ಪರ್ಯವಿಷ್ಟೇ, ನಾವು ಒಳ್ಳೆಯ ಕಾಲೇಜಿನಲ್ಲಿ ಬೇಸಿಕ್ ಬ್ರ್ಯಾಂಚನಲ್ಲಿ ಡಿಗ್ರಿ ಪಡೆಯುವ ಜೊತೆಗೆ ದಿನದಿಂದ ದಿನಕ್ಕೆ ಮಾರುಕಟ್ಟೆಗೆ ಲಗ್ಗೆಇಡುತ್ತಿರುವ ಹೊಸ ಹೊಸ ತಂತ್ರಜ್ಞಾನದ/ಸಾಫ್ಟವೇರ್ ಸರ್ಟಿಫಿಕೇಟ್ ಕೋರ್ಸಗಳನ್ನು ಆಫ್ ಲೈನ್ ಅಥವಾ ಆನ್ ಲೈನ್ ನಲ್ಲಿ ಕಲಿತು, ಮೈನರ್ ಕೋರ್ಸುಗಳನ್ನೋ ಇಲ್ಲವೇ ಇಂಟರ್ನ್ಶಿಪ್ ಅಥವಾ ಪ್ರಾಜೆಕ್ಟ್ ಗಳನ್ನು ಮಾಡಿ ಆ ವಿಷಯದ ಜ್ಞಾನಾರ್ಜನೆ ಮಾಡಿ ಮೂಲಭುತ ಇಂಜಿನಿಯರಿಂಗ್ ಉತ್ಪಾದನಾ ಕೈಗಾರಿಕೆಗಳು ಅಥವಾ ಯಾವುದೇ ಸಾಫ್ಟವೇರ್ ಸೇವಾ ಉದ್ಯಮದಲ್ಲಿ ಕೆಲಸ ಮಾಡಬಹುದು. ಆದರೆ, ಕೇವಲ ಸಾಫ್ಟವೇರ್ ಡಿಗ್ರಿ ಮಾಡಿದವರು ಇಂಜಿನಿಯರಿಂಗ್ ಉತ್ಪಾದನಾ ಕೈಗಾರಿಕೆಗಳಲ್ಲಿ ಕೆಲಸ ಮಾಡುವುದು ಕಷ್ಟಕರ ಎಂಬುದು. ಇಂದಿನ ಅನೇಕ ಸಾಫ್ಟವೇರ ಕಂಪನಿಗಳ ಯಶಸ್ವಿ ಮುಖ್ಯಸ್ಥರುಗಳು ಹೊಂದಿರುವುದು CS/IS ಸಾಫ್ಟವೇರ ಡಿಗ್ರಿಗಳಲ್ಲ ಎಂಬುದು ನಾವು ಮನಗಾಣಬೇಕಾದ ವಿಷಯ.
ಇನ್ನೊಂದು ಮಾತು,ಕೇವಲ ನಾವು ಆಯ್ಕೆ ಮಾಡಿಕೊಂಡ ಕೋರ್ಸಾಗಲಿ/ಕಾಲೇಜಿನಲ್ಲಿ ಪಡೆದುಕೊಂಡ ಮಾರ್ಕ್ಸ್ ಅಥವಾ ಡಿಗ್ರಿಯಾಗಲೀ ನಮಗೆ ಯಾವುದೇ ವೃತ್ತಿಯಲ್ಲಿ ಯಶವನ್ನು ಖಚಿತಪಡಿಸುವದಿಲ್ಲ ಎಂಬುದೂ ಅಷ್ಟೇ ಸ್ಪಷ್ಟ. ಅದಕ್ಕೇ ನಾನು ವಿದ್ಯಾರ್ಥಿಗಳು ಮತ್ತೂ ಪಾಲಕರಿಗೆ ಹೇಳುವುದು "Marks alone will not take you to Mars". ನಾವು ಬೇಡಿ ಬಯಸಿ ಆಯ್ಕೆಮಾಡಿ ಹಣ ತೆತ್ತು ಮಾಡುವ ಯಾವುದೇ ವೃತ್ತಿಪರ ಅಥವಾ ಇತರೇ ಕೋರ್ಸು ಡಿಗ್ರಿ ಸರ್ಟಿಫಿಕೇಟ್ ಪಡೆಯುವಲ್ಲಿ ಸಹಕಾರಿ. ಆದರೆ ಕೇವಲ ಆ ಸರ್ಟಿಫಿಕೇಟು ಪಡೆಯುವದೇ ನಾವು ಮಾಡುವ ಕೋರ್ಸನ ಉದ್ದೇಶವಲ್ಲ ಎಂದು ಮನಗಾಣಬೇಕು. ನಮ್ಮ ಉದ್ದೇಶ ನಾವು ಯಾವುದೇ ಕೋರ್ಸ್ ಮಾಡಿ ಸರ್ಟಿಫಿಕೇಟ ಪಡೆದು ಮುಂದೆ ಆಯ್ಕೆ ಮಾಡಿಕೊಳ್ಳುವ ವೃತ್ತಿಗೆ ಈ ಸರ್ಟಿಫಿಕೇಟು ಮತ್ತೂ ಅದರ ಜೊತೆಗೆ ಇತರ ಕೌಶಲ್ಯತೆಗಳನ್ನು ಪಡೆದುಕೊಳ್ಳುವಲ್ಲಿ ಪೂರಕವಾದ ಅವಕಾಶವನ್ನು ಕಾಲೇಜು ಒದಗಿಸಬೇಕು ಎಂಬುದು ಅಷ್ಟೇ ಮುಖ್ಯ.
ನಾವು ಯಾವುದೇ ಕೋರ್ಸ್ ಮಾಡಿ ನಂತರ ನಾವು ಮಾಡಬಯಸುವ ವೃತ್ತಿಗಳನ್ನು ಕೆಳಗಿನ ಮೂರು ಪ್ರಕಾರಗಳಲ್ಲಿ ವಿಂಗಡಿಸಬಹುದು.
ಒಂದು, employee- ಉದ್ಯೋಗಿ(ಅದು ಸರ್ಕಾರಿ, ಅರೆ ಸರ್ಕಾರಿ ಅಥವಾ ಖಾಸಗಿ-ಸ್ಥಳಿಯ ಅಥವಾ ಬಹುರಾಷ್ಟ್ರೀಯ ಕಂಪನಿ/ಸಂಸ್ಥೆಯಲ್ಲಿ ನೌಕರಿ). ಎರಡು, employer - ಉದ್ಯೋಗದಾತ (ಸ್ವಂತ ಸಂಸ್ಥೆಯನ್ನು ಕಟ್ಟಿ ಅಥವಾ ತಂದೆಯಿಂದ ಬಳುವಳಿಯಾಗಿ ಬಂದ ಸಂಸ್ಥೆಯಲ್ಲಿ ಇತರರನ್ನು ನೌಕರಿಗೆ ಇಟ್ಟುಕೊಂಡು ನಡೆಸುವುದು) ಮತ್ತು ಮೂರನೆಯ ಆಯ್ಕೆ self employed ( consulting or service ) - ಸ್ವಂತ ಉದ್ಯೋಗ.
ನಮ್ಮ ಆಯ್ಕೆ ಈ ಮೂರು ವೃತ್ತಿ ಪ್ರಕಾರಗಳಲ್ಲಿ ಯಾವುದೇ ಆದರೂ ಒಂದು ಮಾತಂತೂ ಸತ್ಯ. ಅದೆಂದರೆ ನಮ್ಮಲ್ಲಿರಲೇಬೇಕಾದ ಗುಣಗಳು/ ಮನಸ್ಥಿತಿ ಅಥವಾ ಬೆಳೆಸಿಕೊಳ್ಳಬೇಕಾದ ದೃಷ್ಟಿಕೋನ. ಅವೂ ಕೂಡಾ ಮೂರು. ಒಂದು, ನಿರಂತರವಾಗಿ ಕಠಿಣ ಪರಿಶ್ರಮ (hard working). ಎರಡು, ಸತ್ಯನಿಷ್ಠೆ (honesty & sincerity) ಮತ್ತೂ ಮೂರು, ನಿರಂತರ ಕೌಶಲ್ಯತೆ/ಸಾಮರ್ಥ್ಯದ (upgrading the skills and knowledge) ಅಭಿವೃದ್ಧಿ.
ಈ ಮೂರೂ ನಮ್ಮಲ್ಲಿ ಇಲ್ಲವಾದಲ್ಲಿ, ನಮ್ಮ ಆಯ್ಕೆ ಯಾವುದೇ ಆದರೂ ಆ ವೃತ್ತಿಯಲ್ಲಿ ಯಶಸ್ಸನ್ನು ಪಡೆಯುವದು ಅನುಮಾನ.
ಈ ಮೂರು ಪ್ರಕಾರದ ವೃತ್ತಿಗಳಲ್ಲಿಯ ಕೆಲವೊಂದು ಯಶಸ್ವಿ ಉದಾಹರಣೆಗಳನ್ನು ನೋಡೋಣ. ಮೂರು ಪ್ರಕಾರದ ವೃತ್ತಿಗಳಲ್ಲಿ ಹೆಚ್ಚಿನ ಜನರ ಆಯ್ಕೆ ನೌಕರಿ. ಈ ನೌಕರಿಗಳು ಸಾಮಾನ್ಯವಾಗಿ ಎರಡು ಪ್ರಕಾರದವು. ೧. ಸರ್ಕಾರಿ/ಅರೆ ಸರ್ಕಾರಿ (ಕೇಂದ್ರ ಅಥವಾ ರಾಜ್ಯ) ನೌಕರಿ. ಈ ವಿಭಾಗದಲ್ಲಿ ಉದಾಹರಿಸಬಹುದಾದವರು ನಮ್ಮ ಇಂದಿನ ವಿದೇಶಾಂಗ ಖಾತೆಯ ಮಂತ್ರಿ, ನಿವೃತ್ತಿ IFS ಅಧಿಕಾರಿ ಶ್ರೀ ಜಯಶಂಕರ್, ಇತ್ತಿಚೆಗೆ ನಿವೃತ್ತರಾದ ISRO ದ ಮುಖ್ಯಸ್ಥ ಡಾ.ಸೋಮನಾಥ ಅಥವಾ DRDO ದ ಮುಖ್ಯಸ್ಥ ನಂತರ ರಾಷ್ಟ್ರಪತಿಯಾದ ದಿವಂಗತ ಡಾ.ಅಬ್ದುಲ್ ಕಲಾಮ್ ಇವರು. ೨. ಖಾಸಗಿ ಸಂಸ್ಥೆಗಳಲ್ಲಿ ನೌಕರಿ.ಇದರಲ್ಲಿ ಎರಡು ಬಗೆಯವು... ಸ್ಥಳಿಯ ಮತ್ತೂ ವಿದೇಶಿ (ಬಹುರಾಷ್ಟ್ರೀಯ) ಸಂಸ್ಥೆಗಳು. ಭಾರತದ ಸಹಕಾರಿ ರಂಗದ ಯಶಸ್ವಿ ಸಂಸ್ಥೆಯಾದ ಅಮೂಲ್ ನ ಕರ್ತಾ ಧರ್ತಾ ಆಗಿದ್ದ ಡಾ.ವರ್ಗೀಸ ಕುರಿಯನ್, ಟಾಟಾ ಸಂಸ್ಥೆಯ ಇಂದಿನ ಮುಖ್ಯಸ್ಥ ಶ್ರೀ N ಚಂದ್ರಶೇಖರನ್ ಅಥವಾ ಇನ್ಫೋಸಿಸ್ ನ ಮಾಜಿ CFO ಶ್ರೀ ಮೋಹನದಾಸ ಪೈ , ಗೂಗಲ್ ನ ಮುಖ್ಯಸ್ಥ ಶ್ರೀ ಸುಂದರ್ ಪಿಚೈ ಅಥವಾ ಪೆಪ್ಸಿಯ ಮುಖ್ಯಸ್ಥೆಯಾಗಿದ್ದ ಶ್ರೀಮತಿ ಇಂದಿರಾ ನೂಯಿ ಮುಂತಾದವರ ಉದಾಹರಣೆ ನೋಡಬಹುದು.
ಇನ್ನು ಎರಡನೆಯ ವೃತ್ತಿ ಪ್ರಕಾರವಾದ ಉದ್ಯೋಗದಾತಾ ಅಂದರೆ ಸ್ವಂತ ಸಂಸ್ಥೆಯನ್ನು ಕಟ್ಟಿ ಅಥವಾ ತಂದೆಯಿಂದ ಬಳುವಳಿಯಾಗಿ ಬಂದ ಸಂಸ್ಥೆಯಲ್ಲಿ ಇತರರನ್ನು ನೌಕರಿಗೆ ಇಟ್ಟುಕೊಂಡು ನಡೆಸುವುದು. ಶ್ರೀ ರತನ್ ಟಾಟಾ, ಶ್ರೀ ಕುಮಾರ ಮಂಗಲಂ ಬಿರ್ಲಾ ಮುಂತಾದವರು ತಲತಲಾಂತರ ದಿಂದ ಬಂದ ಸಂಸ್ಥೆಗಳನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ, ಶ್ರೀ ಮುಕೇಶ್ ಅಂಬಾನಿ, ಶ್ರೀ ರಾಜೀವ್ ಬಜಾಜ್ ಮುಂತಾದವರು ತಂದೆಕಟ್ಟಿದ ಸಂಸ್ಥೆಯನ್ನು ಮುನ್ನಡೆಸುವಲ್ಲಿ ಯಶಸ್ವಿಯಾದವರ ಕೆಲವು ಉದಾಹರಣೆಗಳು.ತಂದೆ ಅಥವಾ ತಲತಲಾಂತರದಿಂದ ಬಳುವಳಿಯಾಗಿ ಬಂದ ಸಂಸ್ಥೆಯನ್ನು ಮುನ್ನಡೆಸುವವರ ಸಂಖ್ಯೆ ನಮ್ಮ ದೇಶದಲ್ಲಿ ಜಾಸ್ತಿ ಆದರೂ ಇತ್ತೀಚಿನ ದಿನಗಳಲ್ಲಿ ಮೊದಲ ತಲೆಮಾರಿನ ಉದ್ಯೊಗದಾತಾರರು ಅಂದರೆ ಸ್ಟಾರ್ಟಪ್ ಗಳ ಒಡೆಯರನ್ನು ಕಾಣಬಹುದು. ಪ್ರಥಮ ತಲೆಮಾರಿನ ಸಂಸ್ಥೆಯನ್ನು ಕಟ್ಟಿ ಉದ್ಯೋಗಗಳನ್ನು ಸೃಷ್ಟಿಸಿ ಸಾವಿರಾರು ಜನರಿಗೆ ಉದ್ಯೋಗದಾತಾರರಲ್ಲಿ ಶ್ರೀ ನಾರಾಯಣ ಮೂರ್ತಿ,ಶ್ರೀ ಗೌತಮ ಅದಾನಿ ಅಥವಾ ಓಲಾ ಸಂಸ್ಥೆಯ ಶ್ರೀ ಭಾವೇಶ ಅಗರವಾಲ್, ನಾರಾಯಣ ಹೃದಯಾಲಯ ಕಟ್ಟಿದ ಡಾ. ದೇವಿ ಪ್ರಸಾದ ಶೆಟ್ಟಿ, ಥೈರೋಕೇರದ ಡಾ.ವೇಲುಮಣಿ ಮುಂತಾದವರನ್ನು ನೋಡಬಹುದು. ಅಲ್ಲದೇ ಸತ್ಯನಿಷ್ಠೆ, ಪ್ರಾಮಾಣಿಕತೆಯ ಕೊರತೆಯಿಂದಾಗಿ ತಾವು ಕಟ್ಟಿ ಬೆಳೆಸಿದ ಸಂಸ್ಥೆಯನ್ನು ಹಾಳುಮಾಡಿದ ಸತ್ಯಂ ಕಂಪ್ಯೂಟರ್ಸನ ಶ್ರೀ ರಾಮಲಿಂಗ ರಾಜುವನ್ನು ಅಥವಾ ಬೈಜುದ ಶ್ರೀ ರವೀಂದ್ರನ್ ಅವರ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇವೆ.
ಮೂರನೇಯ ವೃತ್ತಿ ವಿಭಾಗವಾದ ಸ್ವಂತ ಉದ್ಯೋಗದ ಉದಾಹರಣೆಗಳೆಂದರೆ ವಿವಿಧ ಪ್ರಕಾರದ ಅನೇಕ ಯಶಸ್ವಿ ವೈದ್ಯರು, ವಕೀಲರು, ಚಾರ್ಟರ್ಡ್ ಅಕೌಂಟಂಟ್, ಬಿಜಿನೆಸ್/ಮ್ಯಾನೇಜಮೆಂಟ ಕನ್ಸಲ್ಟಂಟ್, ಆರ್ಕಿಟೆಕ್ಟ್/ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ಮುಂತಾದವರನ್ನು ನಮ್ಮೂರಲ್ಲಿಯೇ ನೋಡಬಹುದು.
ಮೇಲೆ ಕಾಣುವ ಮೂರು ತರಹದ ವೃತ್ತಿಯಲ್ಲಿ ಯಶಸ್ವಿಯಾದ ಎಲ್ಲ ಉದಾಹರಣೆಗಳಲ್ಲಿ ಕಂಡುಬಂದ ಸಾಮಾನ್ಯ ಲಕ್ಷಣಗಳೆಂದರೆ ಈ ಮೊದಲು ಹೇಳಿದ ಮೂರು ಗುಣವಿಶೇಷಗಳಾದ ಕಠಿಣ ಪರಿಶ್ರಮ, ಸತ್ಯನಿಷ್ಠೆ ಮತ್ತೂ ನಿರಂತರ ಕೌಶಲ್ಯತೆ/ಸಾಮರ್ಥ್ಯದ ಅಭಿವೃದ್ಧಿ ಎಂಬುವು ಅಲ್ಲವೇ?. ಇನ್ನು ಆ ಮೂರು ವೃತ್ತಿ ಪ್ರಕಾರಗಳಲ್ಲಿ ಯಾವುದೂ ಶ್ರೇಷ್ಠ ಅಥವಾ ಕನಿಷ್ಠ ವೃತ್ತಿಯಂತಿಲ್ಲ. ಪ್ರತಿಯೊಂದು ವೃತ್ತಿ ಪ್ರಕಾರಗಳೂ ತಮ್ಮದೇ ಆದ ಕೆಲವು ವೈಶಿಷ್ಟ್ಯಗಳನ್ನು ಹೊಂದಿರುತ್ತವೆ. One man's food is another man's poison. ಅದನ್ನು ಮನಗಂಡು ನಮ್ಮ ಸ್ವಭಾವ-ಸಾಮರ್ಥ, ಸುತ್ತಲಿನ ಪರಿಸರ-ಪರಿಸ್ಥಿತಿಗಳಿಗೆ ಅನುಗುಣವಾಗಿ ಹಾಗೂ ನಮ್ಮ ಜೀವನೊದ್ದೇಶ, ಸಾಧಿಸಬೇಕೆಂಬ ಗುರಿ, ನಮ್ಮ ಮನೆಯ ಪರಿಸ್ಥಿತಿ, ಅಗತ್ಯತೆಗಳು, ಮನೆಯಲ್ಲಿ ನಮ್ಮ ಜವಾಬ್ದಾರಿ/ಕನಿಷ್ಟ ಕರ್ತವ್ಯಗಳು ಹಾಗೂ ಸಹಕಾರದ ಲಭ್ಯತೆ ಮುಂತಾದವನ್ನು ಆಕಲನ ಮಾಡಿ ನಮ್ಮ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವುದು ನಮ್ಮ ಸ್ವಂತ ಕರ್ತವ್ಯವೇ ಹೊರತು ಪಾಲಕರ, ಮಿತ್ರಬಾಂಧವರದ್ದಲ್ಲ.!!!
ಇಂದು ಜಗತ್ತಿನಾದ್ಯಂತ ಅಬಾಲವೃದ್ದರು ಬಳಸುವ ಒಂದು ವಸ್ತು ಅಂದರೆ ಅದು ನಮ್ಮೆಲ್ಲರ ಕೈಯಲ್ಲಿರುವ ಸೆಲ್ ಫೋನ್. ಒಂದು ವೇಳೆ ಒಂದೇ ತರಹದ ಸಾಮರ್ಥ್ಯದ ವಿವಿಧ ಕಂಪನಿಯ ಸೆಲ್ ಫೋನಗಳು ಒಂದೇ ದರದಲ್ಲಿ ಮಾರಾಟಕ್ಕಿದ್ದರೆ ಪ್ರತಿಯೊಬ್ಬರೂ ತಾವು ವೈಯಕ್ತಿಕವಾಗಿ ಆಯ್ಕೆಮಾಡಿಕೊಳ್ಳುವ ಬ್ರ್ಯಾಂಡ್ ಯಾವುದಾಗಿರಬಹುದು? ಸರಿಯಾಗಿ ಊಹಿಸಿದಿರಿ,ದರ ಒಂದೇ ಆದರೆ ನಾವು ಸಹಜವಾಗಿ ಬಯಸುವುದು ಶ್ರೇಷ್ಠವಾದ ಬ್ರ್ಯಾಂಡ್ ನ ಫೋನ್ ತಾನೇ. ನಮ್ಮಲ್ಲಿ ಅನೇಕರು ಬೆಲೆ ಸ್ವಲ್ಪ ಜಾಸ್ತಿ ಆದರೂ ಪರವಾಗಿಲ್ಲ ನಾವು ಬಯಸುವುದು ಉತ್ಕೃಷ್ಟ ಗುಣಮಟ್ಟದ ಸೆಲ್ ಫೋನ್. ಯಾಕೆಂದರೆ ಅದನ್ನು ಬಳಸುವ ಸರಳತೆ,ಅದರ ಬ್ಯಾಟರಿ ಗುಣಮಟ್ಟ ಮತ್ತೂ ದೀರ್ಘ ಬಾಳಿಕೆ, ಬೆಳೆಸುವಲ್ಲಿಯ ಅನುಭವ ಎಲ್ಲವೂ ಉತ್ಕೃಷ್ಟ. ಇದೇ ತೆರನಾಗಿ ವಿಚಾರಮಾಡಿ ನೋಡಿ, ನೌಕರಿ ಕೊಡಬಯಸುವವರು ಎಲ್ಲಾ ನೌಕರಿ ಬಯಸುವವರಿಗೆ ನೀಡುವ ಪಗಾರ (ಸಂಬಳ) ಒಂದೇ ಆದಲ್ಲಿ ಅವರು ಸಹಜವಾಗಿ ಬಯಸುವುದು ಶ್ರೇಷ್ಠವಾದ ಗುಣಮಟ್ಟದ ಅಭ್ಯರ್ಥಿಯನ್ನು. ನನ್ನಲ್ಲಿ ಆ ಶ್ರೇಷ್ಠತೆಯ ಗುಣಗಳು ಎಷ್ಟಿವೆ ಮತ್ತೂ ನಾವು ಆಯ್ಕೆಮಾಡಿಕೊಂಡ ಕೋರ್ಸು ಮತ್ತೂ ಕಾಲೇಜು ಅವನ್ನು ನನ್ನಲ್ಲಿ ಬೆಳೆಸಿಕೊಳ್ಳುವಲ್ಲಿ ಸಹಕಾರಿಯಾಗುವ ಗುಣಮಟ್ಟದ ಶಿಕ್ಷಣ/ತರಬೇತಿ ನೀಡುವುದೋ ಎಂಬುದನ್ನು ಖಾತ್ರಿ ಗೊಳಿಸಿಕೊಳ್ಳುವುದು ಮುಖ್ಯ.
ಊಹೆ ಮಾಡಿ, ನಮ್ಮ ಮನೆಯ ಕಾರು ನಡೆಸಲು ಡ್ರೈವರನನ್ನು ನೇಮಿಸಿಕೊಳ್ಳುವಾಗ ನಾವು ಸಹಜವಾಗಿ ಮೊದಲು ಪರಿಶೀಲಿಸುವದು ಅವನು ಡ್ರೈವರ್ ಲೈಸೆನ್ಸ್ ಹೊಂದಿದ್ದಾನೋ ಇಲ್ಲವೂ ಎಂಬುದು. ಕೇವಲ ಡ್ರೈವರನ ಲೈಸೆನ್ಸ ನೋಡಿ ನಾವು ಸರ್ವಥಾ ಅವನನ್ನು ಡ್ರೈವರ್ ನೌಕರಿಗೆ ಇಟ್ಟುಕೊಳ್ಳುವದಿಲ್ಲ. ನಾವು ಮುಖ್ಯವಾಗಿ ಬಯಸುವುದು ಆ ಡ್ರೈವಿಂಗ್ ಲೈಸೆನ್ಸ ಹೊಂದಿದ ಚಾಲಕ ನಮ್ಮ ಕಾರನ್ನು ತನ್ನ ಸ್ವಂತ ಕಾರಿನಂತೆ ತಿಳಿದು ನಡೆಸಲಿ ಎಂಬುದಲ್ಲವೇ?. ಒಬ್ಬ ಡ್ರೈವಿಂಗ್ ಲೈಸೆನ್ಸ ಹೊಂದಿದ ಸಕ್ಷಮ್ಯ ಚಾಲಕ ಮುಖ್ಯವಾಗಿ ನಮ್ಮಲ್ಲಿರುವ ಸಧ್ಯದ ಕಾರನ್ನು ಚೆನ್ನಾಗಿ ನಡೆಸುವವನಾಗಿದ್ದರೆ ನಾಳೆ ನಾವು ಖರೀದಿಸುವ ಇನ್ನಾವುದೋ ಬ್ರ್ಯಾಂಡಿನ ಇವಿ, ಹೈಬ್ರಿಡ್,ಸಿಎನ್ ಜಿ ಅಥವಾ ಮತ್ತಾವುದೋ ಹೊಸ ತಂತ್ರಜ್ಞಾನದ ಕಾರು/ಜೀಪುಗಳು ಮತ್ತೂ ಅವುಗಳಲ್ಲಿಯ ಹೊಸತಲೆಮಾರಿನ ಉಪಕರಣಗಳನ್ನು ಉಪಯೋಗಿಸುವುದನ್ನು ಕಲಿತು ಸುರಕ್ಷಿತವಾಗಿ ನಡೆಸುವ ಕ್ಷಮತೆ ಹೊಂದುವನು. ಆದರೆ ಕೇವಲ ಹೊಸತಲೆಮಾರಿನ ಉಪಕರಣಗಳ ಜ್ಞಾನವಿದ್ದು ಮುಖ್ಯವಾಗಿ ಕಾರನ್ನೇ ಸರಿಯಾಗಿ ನಡೆಸಲು ಬರದೇ ಇರುವ ಚಾಲಕನು ಅನವಶ್ಯಕ. ಇನ್ನು ನಾವು ನೇಮಿಸಿಕೊಂಡು ಆ ಕಾರು ಡ್ರೈವರ್ ಕಾರಿನ ಸಣ್ಣ ಪುಟ್ಟ ರಿಪೇರಿ/ಮೆಂಟೇನನ್ಸ ಕಾರ್ಯ ಮಾಡುವುದನ್ನು ನಾವು ಅಪೇಕ್ಷಿಸುತ್ತೇವೆ. ನಿತ್ಯ ಸರಿಯಾದ ಸಮಯಕ್ಕೆ ಕೆಲಸಕ್ಕೆ ಬಂದು ಮೊದಲು ಕಾರನ್ನು ತೊಳೆದು ಜೊತೆಗೆ ಅಂಗಳದಲ್ಲಿನ ಗಿಡಗಳಿಗೆ ನೀರುಣಿಸುವದನ್ನೂ ಮಾಡಿದರೆ, ಮನೆಯ ವೃದ್ಧರು, ಹೆಂಗಸರು,ಮಕ್ಕಳನ್ನು ಕಾಳಜೀಯಿಂದ ಅವರ ಗಂತವ್ಯ ಸ್ಥಳಕ್ಕೆ ಸುರಕ್ಷಿತವಾಗಿ ಕಾರಲ್ಲಿ ಕರೆದೊಯ್ದು ಬರುವಾಗ ಮನೆಗೆ ಬೇಕಾಗುವ ಕಿರಾಣಿ ಸಾಮಾನುಗಳನ್ನು ತರುವವನಾದರೆ ನಾವು ಅವನಿಗೆ ಸ್ವಲ್ಪ ಹೆಚ್ಚು ಪಗಾರ ನೀಡಿಯಾದರೂ ಇಟ್ಟುಕೊಳ್ಳುತ್ತೇವೆಯೇ ಹೊರತು ಯಾವುದೇ ಪರಿಸ್ಥಿತಿಯಲ್ಲಿ ಅವನನ್ನು ನೌಕರಿಯಿಂದ ತೆಗೆಯುವ ವಿಚಾರ ಮಾಡಲಾರೆವು. ಅದೇ ರೀತಿ ನಾವು ಯಾವುದೇ ವೃತ್ತಿಯನ್ನು ಮಾಡಿದರೂ (ಇನ್ನೊಬ್ಬರ ನೌಕರಿ/ಸ್ವಂತ ಉದ್ಯೋಗ ಅಥವಾ ಉದ್ಯೊಗದಾತಾ) ಪ್ರತಿಯೊಬ್ಬರೂ ಸ್ವಾಭಾವಿಕವಾಗಿ ನಮ್ಮಿಂದ ಬಯಸುವುದು ಪೆಪ್ಸಿಯ 'ಎ ದಿಲ್ ಮಾಂಗೆ ಮೋರ' ಅಲ್ಲವೇ. ಹಾಗಿರುವಾಗ, ನನ್ನಲ್ಲಿ ಇನ್ನೊಬ್ಬರು ಬಯಸುವ 'ಎ ದಿಲ್ ಮಾಂಗೆ ಮೋರ' ಇದೆಯೋ ಎಂದು ಆಗಾಗ ಪರಾಮರ್ಶಿಸಿಕೊಂಡು ಇಲ್ಲವಾದರೆ ಆ ಗುಣಗಳನ್ನು ಬೆಳೆಸಿಕೊಳ್ಳುವುದು ಸೂಕ್ತ ಮತ್ತೂ ನಾವು ಆಯ್ಕೆಮಾಡಿಕೊಂಡ ಕೋರ್ಸು ಮತ್ತೂ ಕಾಲೇಜು ಕೇವಲ ಪಠ್ಯ ಶಿಕ್ಷಣ ನೀಡದೇ ಜೊತೆಗೆ ನಮ್ಮ ಮುಂದಿನ ವೃತ್ತಿಗೆ ಬೇಕಾದ 'ಎ ದಿಲ್ ಮಾಂಗೆ ಮೋರ' ಸೇವೆ ಕೊಡುವ ಆಸಕ್ತಿ ಮತ್ತೂ ಪ್ರವೃತ್ತಿಯನ್ನು ಹೊಂದಿದೆಯೋ ಎಂಬುದನ್ನು ಪರಾಮರ್ಶೆ ಮಾಡಬೇಕಲ್ಲವೇ?
ನಾವು ಒಳ್ಳೆಯ ಊಟಕ್ಕೆಂದು ಹುಡುಕಿಕೊಂಡು ಹೋಗುವ ಹೊಟೇಲಿನ ಎಂಬಿಯನ್ಸ ಚೆನ್ನಾಗಿರುವುದು ಅಥವಾ ಅಲ್ಲಿ ಸಿಗುವ ಊಟಕ್ಕೂ ಮೊದಲಿನ ಚಾಟ/ಸ್ಟಾರ್ಟರಗಳಾಗಲಿ ಮತ್ತೂ ಸಮಾಪ್ತಿಯ ಡೆಜರ್ಟಾಗಲಿ ಎಷ್ಟು ಮುಖ್ಯವೋ ಅಷ್ಟೇ ಅಥವಾ ಅದಕ್ಕಿಂತ ಮುಖ್ಯ ಅಲ್ಲಿ ಉಪಲಬ್ದವಿರುವ ಮೇನ್ ಕೋರ್ಸ್ ಊಟದ ಆಹಾರದ ಗುಣಮಟ್ಟ. ಅದಕ್ಕೆ ಹೇಳುವುದು "ದಿಖಾವೇಪೆ ಮತ್ ಜಾವೋ ಅಕಲ್ ಲಗಾವೋ"ಎಂದು.
-ಡಾ.ಜಯಂತ ಕಿತ್ತೂರ
ಉಪಯುಕ್ತ ಬರಹ.ಪಾಲಕರ ಮಾರ್ಗ ಸೂಚಿ.ಅಭಿನಂದನೆ
ಪ್ರತ್ಯುತ್ತರಅಳಿಸಿWell compiled and thought provocative article!
ಪ್ರತ್ಯುತ್ತರಅಳಿಸಿChennagide gurugale
ಪ್ರತ್ಯುತ್ತರಅಳಿಸಿVery nicely written in simple language. Please translate this article in English to reach more people.
ಪ್ರತ್ಯುತ್ತರಅಳಿಸಿLot of thoughts have converged from the rich experience having seen diverse technological transformation… education for life if is motive it will ease confusion and bring purpose to life…🙏🙏
ಪ್ರತ್ಯುತ್ತರಅಳಿಸಿಎಲ್ಲ ಚಿಕ್ಕ ದೊಡ್ಡ ವಿಷಯ ಗಳನ್ನು ಬರಹಗgalannagi ಪರಿವರ್ತಿಸುವ ಕ್ಷಮತೆ ನಿಮ್ಮಲ್ಲಿದೆ keep it up
ಪ್ರತ್ಯುತ್ತರಅಳಿಸಿಚೆನ್ನಾಗಿ ಬರೆದಿದ್ದೀರಾ..., ಇಂದಿನ ಪಿ.ಯು.ಸಿ. ಪಾಸಾದ ವಿದ್ಯಾರ್ಥಿಗಳಿಗೆ ಹಾಗೂ ಅವರ ಪಾಲಕರನ್ನೂ ಒಳಗೊಂಡಂತೆ...! ಮುಖ್ಯವಾಗಿ ಸ್ವಯಂ ಆಸಕ್ತಿ ಇರುವ ವಿಷಯನ್ನು ತಿಳಿದುಕೊಂಡು, ಅದರಲ್ಲಿಯೇ ನಿಷ್ಠೆಯಿಂದ, ಕಠಿಣ ಪರಿಶ್ರಮಗಳಿಂದ, ಅಂತರ್ಸತ್ಯಕ್ಕೆ ಅನುಗುಣವಾಗಿ ನಡೆದುಕೊಂಡಲ್ಲಿ ಎಲ್ಲ ಮಾರ್ಗ ಗಳೂ ಯಶಸ್ಸಿನೆಡೆಗೆ ಕೊಂಡೊಯ್ಯುತ್ತವೆ. ಇದಕ್ಕೆ ಒತ್ತು ಕೊಟ್ಟು ಉದಾಹರಣೆಗಳ ಸಹಿತ ತಮ್ಮ ಮಾರ್ಗದರ್ಶಕ ಲೇಖನವನ್ನು ಸಿದ್ಧಪಡಿಸಿದ್ದೀರಿ...! ಅನಂತಾನಂತ ಧನ್ಯವಾದಗಳು...!
ಪ್ರತ್ಯುತ್ತರಅಳಿಸಿಕುರಾಜನ್.
ಬಹಳ ಚೆನ್ನಾಗಿದೆ ಈಗಿನ ಮಕ್ಕಳಿಗೆ ಇದು ಮಾರ್ಗದರ್ಶಿ ಲೇಖನ . ಧನ್ಯವಾದಗಳು.🙏💐
ಪ್ರತ್ಯುತ್ತರಅಳಿಸಿSir, nice and timely article. Helping all the parents and aspirants. Personally your article helped me and my daughter sir.
ಪ್ರತ್ಯುತ್ತರಅಳಿಸಿSir, you wrote selection of College is important rather than course but now a days in my personal opinion college ranking is based on placements rather than good teaching and learning.
Very well written sir
ಪ್ರತ್ಯುತ್ತರಅಳಿಸಿI only hope youngsters have patience to read
ಮಾರ್ಗದರ್ಶಿ ಲೇಖನ ಚೆನ್ನಾಗಿ ಮೂಡಿ ಬಂದಿದೆ.
ಪ್ರತ್ಯುತ್ತರಅಳಿಸಿ"ದೀಖಾವೆಪೆ ಮತ ಜಾವ ಅಕಾಲ ಲಗಾವ್ " So True .. ಆನುಭವ , ಗ್ಲಾನ ಗಳಿಂದಒಳಗೂಡಿದ ಲೇಖನ , ವಿವಿಧ ಉದಾಹರಣೆಗಳೊಂದಿಗೆ , ವಿದ್ಯಾರ್ಥಿವರಂದಕ್ಕೂ, ಅವರ ಪಾಲಕರಿಗೂ ಉಪಯುಕ್ತವಾಗಲಿದೆ . ಲೇಖನ ಸಾಕಷ್ಟು ವಿದ್ಯಾರ್ಥಿಗಳನ್ನು ತಲುಪಲಿ ಎಂದು ಆಶಿಸುತ್ತೇನೆ. Well written. Keep writing...
ಪ್ರತ್ಯುತ್ತರಅಳಿಸಿSir very well and nicely written this is helpful to students and parents also.
ಪ್ರತ್ಯುತ್ತರಅಳಿಸಿ