ನನ್ನ ಬಿಳಿ ತಲೆಯ ಬಣ್ಣಗಳು ...(ಭಾಗ-೧)




೩೫ ವರ್ಷಗಳ ಸುದೀರ್ಘ ಶಿಕ್ಷಣ ಕ್ಷೇತ್ರದಲ್ಲಿಯ ನನ್ನ ಸೇವೆಯನ್ನು ಮುಗಿಸಿ ನೌಕರಿಯಿಂದ ನಿವೃತ್ತಿಯ ನಂತರ, ಅಂದರೆ ಈ ವೃತ್ತಿಯಲ್ಲಿಯ ಮುಖ್ಯ ಆಕರ್ಷಣೆಗಳಲ್ಲಿ ಒಂದಾಗಿದ್ದ ಅರ್ಧ ವಾರ್ಷಿಕ/ವಾರ್ಷಿಕ ಸೂಟೀಗಳನ್ನು ಸಂಪೂರ್ಣ ಮರೆತು, ಬಿಡುವಿಲ್ಲದೇ ದುಡಿದು,EL ಜೊತೆ CL ಹೊಂದಿಸಿಕೊಂಡು ರಜೆ ಹಾಕುವಂತಿಲ್ಲ, ಸರ್ಕಾರಿ ರಜೆ ಮತ್ತೂ ರವಿವಾರಗಳ ನಡುವೆ CL ಗಳನ್ನು ಹೊಂದಿಸಿಕೊಂಡು ಒಟ್ಟು ೫ ದಿನಕ್ಕಿಂತ ಜಾಸ್ತಿ ರಜೆ ಹಾಕುವಂತಿಲ್ಲ ಎಂಬಿತ್ಯಾದಿ ಅನೇಕ ಬದಲಾದ ರಜಾ ಸಂಬಂಧಿ ನೌಕರಿಯ ನಿಯಮಗಳಿಂದ ಮುಕ್ತವಾದ ಮೇಲೆ, ನಾನು ಪತ್ನಿಸಮೇತನಾಗಿ ನಮ್ಮ ಉತ್ತರ ಕರ್ನಾಟದ ವಿವಿಧ ಕ್ಷೇತ್ರಗಳ ಪರ್ಯಟನದಲ್ಲಿದ್ದೆ.

ಅಂದು ಬೆಳಗ್ಗೆ ನಾವು ಬೆಳಗಾವಿಯಿಂದ ಉತ್ತರಕನ್ನಡ ಜಿಲ್ಲೆಯ ಸ್ವಾದಿ (ಸೋಂದಾ) ಗೆ ಕಾರಿನಲ್ಲಿ ಹೊರಟಿದ್ದೆವು. ಹಳಿಯಾಳದ ಮಿತ್ರರು ತಮ್ಮಲ್ಲಿ ಚಹಾಕ್ಕೆ ಇಳಿಯಲು ಆಗ್ರಹ ಪೂರ್ವಕ ಒತ್ತಾಯಿಸಿದರು. ಅವರ ಸಲಹೆಯ ಪ್ರಕಾರ, ನಮ್ಮ ಪ್ರವಾಸವನ್ನು ಯಲ್ಲಾಪುರ ತಾಲೂಕಿನ ಚಂದಗುಳಿ ಗ್ರಾಮದ ಸುಮಾರು 700 ವರ್ಷಗಳ ಹಿಂದೆ ಪ್ರತಿಷ್ಠಾಪನೆಗೊಂಡ ಘಂಟೆ ವಿನಾಯಕನ ದರ್ಶನ ಮಾಡಿಕೊಂಡು ಮುಂದುವರಿಸಲು ನಿರ್ಧರಿಸಿದೆವು. ಮುಖ್ಯ ರಸ್ತೆಯಿಂದ ಒಳತಿರುಗಿ ನಾಲ್ಕಾರು ಕಿಲೋಮೀಟರ್ ಮಲೆನಾಡಿನ ಕಾಡಿನ ರಮಣೀಯ ಪ್ರಶಾಂತ ಪರಿಸರದಲ್ಲಿ ನಾವು ಗುಡಿ ತಲುಪಿದಾಗ ಮಧ್ಯಾಹ್ನದ ಎರಡು ಘಂಟೆ ಆಗಿತ್ತು. ನಮ್ಮಂಥಾ ದೂರದ ಊರುಗಳಿಂದ ಬಂದ ನಾಲ್ಕಾರು ಕಾರಿನ ಜನ ಮಾತ್ರ ದೇವಸ್ಥಾನದ ಪರಿಸರದಲ್ಲಿದ್ದರು. ಭಕ್ತರ ಸಾವಿರಾರು ಗಂಟೆಗಳಿಂದ ಆವೃತನಾದ ಗಣಪತಿಯ ದರ್ಶನ ಪಡೆದು ಹೊರಬಂದಾಗ ಅಪರಿಚಿತ ವ್ಯಕ್ತಿಯೊಬ್ಬರು "ನಿಮ್ಮನ್ನು ಗುಡಿಯಲ್ಲಿ ನೋಡಿ ಒಂದು ಕ್ಷಣ ಆಶ್ಚರ್ಯ ಪಟ್ಟೆ, ಲಕ್ಷ್ಮೀಕಾಂತ ದಾಸ್ ಯಾವುದೇ ಸೆಕ್ಯೂರಿಟಿ ಸಿಬ್ಬಂದ ಇಲ್ಲದೇ ಇಲ್ಲಿ ಇರುವುದು ಹೇಗೆ ಎಂದು ಅಂದುಕೊಂಡೆ" ಅಂತಂದರು. ನನಗೆ ನಿಮ್ಮ ಮಾತಿನ ಅರ್ಥ ಆಗ್ಲಿಲ್ಲ ಅಂತ ನಾನಂದಾಗ ಅವರು, "ಅರೇ ನಿಮಗೆ ಆರ್ ಬಿ ಐ ಗವರ್ನರ್ ಗೊತ್ತಿಲ್ಲವೇ ,ನೀವು ಅವರಂತೆಯೇ ಕಾಣುವಿರಿ" ಅಂದರು. ಆಗ ನನಗೆ ಅರಿವಾಯಿತು, ಅವರು ಶಕ್ತಿಕಾಂತ ದಾಸ್ ಅವರ ಬಗ್ಗೆ ಮಾತಾಡುತ್ತಿದ್ದಾರೆ ಎಂದು. ನಾನು "ಹೌದು, ದೂರದಿಂದ ನೋಡಿದಾಗ ನನ್ನ ಮುಖಚರ್ಯೆ ಸ್ವಲ್ಪ ಅವರ ತರಹ ಇದೆ, ಅದೂ ನಾನು ಕೋಟು ಧರಿಸಿದಾಗ ಜಾಸ್ತಿ ಹೋಲಿಕೆ ಕಂಡುಬರುವುದೆಂದು ಇತರರೂ ಅನ್ನುವುದು ಉಂಟು" ಅಂದೆ.

ನನ್ನ ಕಲಬುರ್ಗಿಯ ಅಣ್ಣನ ಮೂರು ವರ್ಷದ ಮೊಮ್ಮಗಳು ಟಿವಿಯಲ್ಲಿ ಆರ್ ಬಿ ಐ ಗವರ್ನರ್ ಅನ್ನು ಕಂಡಾಗಲೆಲ್ಲ "ಜಯು ತಾತಾ" ಅನ್ನುವಳಂತೆ. ನಮ್ಮೀರ್ವರ  ಮುಖಚರ್ಯೆಯ ಹೋಲಿಕೆಗಳಲ್ಲಿ ಇತರ ಅಂಶಗಳೊಂದಿಗೆ ಒಂದು ಮುಖ್ಯ ಅಂಶವಾದ ನನ್ನ ಮತ್ತು ಅವರ ತಲೆಗೂದಲ ಸಾಂದ್ರತೆ, ಬಾಚಿಕೊಂಡಿರುವ ರೀತಿ ಮತ್ತು ತಲೆಗೂದಲ ಬಿಳಿಯಾಗಿರುವ ಸರಿಸುಮಾರು ಪ್ರಮಾಣ ಹಾಗೂ ಅದೇ ರೀತಿ, ಕಪ್ಪು ಮಿಶ್ರಿತ ಬಿಳುಪು ಮೀಸೆಗಳಲ್ಲಿಯ ಸಾಮ್ಯ ಕೂಡ ಎಂಬುದು ನನ್ನ ಅಭಿಪ್ರಾಯ.

ಈ ತಲೆ ಕೂದಲ ನೆರತಕ್ಕೆ ತಜ್ಞರು ಅನೇಕ ಕಾರಣಗಳನ್ನು ಹೇಳುತ್ತಾರೆ, ಆದರೆ ನಮ್ಮ ಮನೆಯಲ್ಲಿ ಕನ್ನಡಕ ಮತ್ತು ತಲೆ ಕೂದಲ ನೆರತ ಅನುವಂಶೀಯವಾಗಿ ಬಂದಿರುವುದು. ನಮ್ಮ ಪಾಲಕರಿಬ್ಬರ ತಲೆಗೂದಲು ಬಿಳುಪಿಗೆ ತಿರುಗಲಾರಂಭಿಸಿದ್ದು ಅವರ ವಯಸ್ಸಿನ ಮುವತ್ತರಲ್ಲಿದ್ದಾಗಂತೆ. ತಂದೆಯವರು ಆಗ ಕಾಲೇಜು ಪ್ರಾಧ್ಯಾಪಕರಾದ್ದರಿಂದ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲಿಲ್ಲ. ಹಾಗೆಯೇ ತಾಯಿ, ನಾವೆಲ್ಲ ಚಿಕ್ಕವರಿದ್ದಾಗ ಇದರ ಬಗ್ಗೆ ಹೆಚ್ಚಿಗೆ ವಿಚಾರ ಮಾಡಿರಲಿಲ್ಲವಂತೆ. ಆದರೆ ಮನೆಯ ಹೆಣ್ಣುಮಕ್ಕಳು ಬೆಳೆದಂತೆ, ನೆರೆಹೊರೆಯವರ ಸಲಹೆಯ ಮೇರೆಗೆ ಹಿರಿಯ ಮಗಳ ಮದುವೆಯವರೆಗೆ ಅಂತೂ ತಮ್ಮ ತಲೆಗೂದಲಿಗೆ ಕರೀ ಬಣ್ಣ ಸವರಿಕೊಂಡಿದ್ದರು.

ಅರವತ್ತರ ದಶಕದಲ್ಲಿ ಸಾಹಿತಿ ದೇಜಗೌ ಅವರೊಟ್ಟಿಗಿನ ಒಂದು ಹಳೇ ಫೋಟೋದಲ್ಲಿ ನಮ್ಮ ತಂದೆಯವರ ಕರೀ ಕೂದಲನ್ನು ನೋಡಿದ ನೆನಪು ಬಿಟ್ಟರೆ ನಾನು (ಮನೆಯಲ್ಲಿ ಕೊನೆಯ ಮಗ) ಚಿಕ್ಕಂದಿನಿಂದಲೂ ನಮ್ಮ ತಂದೆಯವರ ಬಿಳಿ ತಲೆಗೂದಲನ್ನೇ ನೋಡಿ ಬೆಳೆದವನು.

ನನಗೆ ದೂರದ ಅಕ್ಷರಗಳನ್ನು ಓದಲು ಕನ್ನಡಕದ ಅವಶ್ಯಕತೆ ಕಂಡುಬಂದದ್ದು ಮತ್ತು ನನ್ನ ತಲೆಗೂದಲು ಬಿಳುಪಿಗೆ ತಿರುಗಲಾರಂಭಿಸಿದ್ದು ನಾನು ಕಲಬುರ್ಗಿಯಲ್ಲಿ ಇಂಜಿನೀಯರಿಂಗ್ ಕಾಲೇಜು ಪ್ರಾಧ್ಯಾಪಕ ವೃತ್ತಿಯನ್ನು ಆರಂಭಿಸಿದ ವರ್ಷಗಳಲ್ಲಿ. ಕಣ್ಣಿಗೆ ಚಾಳೀಸ ಬಂದಿತು ಆದರೆ ತಲೆಗೂದಲಿಗೆ ನಾನೂ ತಲೆ ಕೆಡಿಸಿಕೊಳ್ಳಲಿಲ್ಲ. ತಂದೆಯವರಂತೆ ಅವೆರಡೂ ನನಗೂ ಸ್ವಾಭಾವಿಕ ಮತ್ತು ನನ್ನ ವೃತ್ತಿಗೌರವದ ದ್ಯೋತಕ ಎಂದು ಅಂದುಕೊಂಡೆ.

ನಮ್ಮ ಬೆಳಗಾವಿಯ ಜನ ಬೇಸಿಗೆಯ ಬಿಸಿಲು ೨೪ ಡಿಗ್ರೀ ದಾಟುವ ಮೊದಲೇ ತಲೆಯ ಮೇಲೆ ಛತ್ರಿ ಹಿಡಿದು ಮನೆಯಿಂದ ಹೊರಬಿದ್ದರೇ, ಕಲಬುರ್ಗಿಯ ೪೨ ಡಿಗ್ರೀ ಕಡು ಬೇಸಿಗೆಯಲ್ಲೂ ಅಲ್ಲಿಯ ಜನಕ್ಕೆ ತಲೆಗೆ ಟೋಪಿ, ಛತ್ರಿ ಬಳಸಿಗೊತ್ತಿಲ್ಲ. ಅಲ್ಲೇ ಬೆಳೆದು ಓಡಾಡಿದ ನನಗೆ, ಮನುಷ್ಯನ ತಲೆಯ ಮೇಲೆ ಯಥೇಚ್ಛವಾಗಿ ಕೂದಲಿರುವುದು ಮುಖ್ಯವೆನಿಸುತ್ತದೆಯೇ ಹೊರತು ಅದರ ಬಣ್ಣವಲ್ಲ.ಇನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿದರೆ,ತಲೆಯ ಮೇಲಿನ ಬಿಳಿಗೂದಲು ಕಪ್ಪು ಕೂದಲಿಗಿಂತಲೂ ಬೆಳಕಿನ/ಬಿಸಿಲಿನ ಕಿರಣಗಳನ್ನು ಜಾಸ್ತಿ ಪ್ರತಿಫಲಿಸುತ್ತವೆ ಮತ್ತು ಅದರಿಂದಾಗಿ ಮಂಡೆ ಬಿಸಿ ಪ್ರಮಾಣ ಕಡಿಮೆ. 

ಟಿ.ಸಿ.ಎಚ್. ಕಾಲೇಜು ಪ್ರಾಂಶುಪಾಲರಾದ ನಮ್ಮ ಮಾವನವರು ಮದುವೆಗೆ ಹೆಣ್ಣು ತೋರಿಸಲು ಗುಲ್ಬರ್ಗಾಕ್ಕೆ ಬಂದಾಗ, ಅವರ ತಲೆಗೂದಲು ನಮ್ಮ ತಂದೆಯವರಂತೆ ಬೆಳ್ಳಗೇ. ಆ ವೇಳೆಗಾಗಲೇ ನನ್ನ ತಲೆಯಲ್ಲೂ ಬಿಳಿ ಕೂದಲುಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದವು. ನಾನಾದರೋ ಅವುಗಳನ್ನು ಮರೆಮಾಚುವ ಪ್ರಯತ್ನ ಮಾಡಿರಲಿಲ್ಲ. ಧಾರವಾಡಕ್ಕೆ ಹಿಂತಿರುಗಿ ಹೋದಮೇಲೆ ಅವರ ಮನೆಯಲ್ಲಿ ಚರ್ಚೆಯಾದಾಗ, ನಮ್ಮ ಅತ್ತೆಯವರು ನನ್ನ ತಲೆಯಲ್ಲಿಯ ಬೆಳ್ಳೀ ಗೆರೆಗಳನ್ನು (ನಾನು ಅವರಿಗೆ ನಮಸ್ಕರಿಸಿದಾಗ) ಕಂಡ ವಿಚಾರವನ್ನು ಪ್ರಸ್ತಾಪಿಸಿದರೂ, ಆ ವಿಷಯ ಅಷ್ಟು ಮಹತ್ವ ಪಡೆಯಲಿಲ್ಲವಂತೆ.ಅದು ನನ್ನ ಭಾಗ್ಯ. 

ನಮ್ಮ ಮದುವೆಯಾದ ಹೊಸದರಲ್ಲಿ ಧಾರವಾಡದ ಮಾಳಮಡ್ಡಿಯ ವನವಾಸಿ ರಾಮನ ಗುಡಿಯ ಕಟ್ಟಿಯ ಮೇಲೆ ಕೂತು ಹತ್ತಿ ಬತ್ತಿ ಮಾಡಿತ್ತಿದ್ದ ನಮ್ಮ ಅತ್ತೆಯ ಪರಿಚಯದ ಅಜ್ಜಿಗೆ ನಾವಿಬ್ಬರೂ ಗೌರವ ಪೂರ್ವಕವಾಗಿ ನಮಸ್ಕರಿಸಿದಾಗ ಆ ಹಿರಿಯ ಜೀವ, ಅದಾಗಲೇ ನನ್ನ ತಲೆಯಲ್ಲಿನ ಬಿಳಿಗೆರೆಗಳನ್ನು  ನೋಡಿ, ನನ್ನ ಶ್ರೀಮತಿಯನ್ನುದ್ದೇಶಿಸಿ "ಸುಜಾತಾ ಬಿಳಿಯಾಗಿರುವುದೆಲ್ಲ ಹಾಲಲ್ಲಮ್ಮ,be careful" ಎಂತನ್ನಬೇಕೇ? ನಾನೂ "ಹೌದೌದುss ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪಲ್ಲ ಅನ್ನೋ ಗಾದೆ ಸುಳ್ಳಲ್ಲ" ಅಂತ ಅಂದದ್ದನ್ನು ನನ್ನ ಶ್ರೀಮತಿ ಇನ್ನೂ ಮರೆತಿಲ್ಲವಂತೆ.!!!

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಆರಂಭಕ್ಕೂ ಮುಂಚೆ ಇಂಜಿನಿಯರಿಂಗ್ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲು ಬೆಳಗಾವಿಯಿಂದ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡಕ್ಕೆ ನಾವು ಹೋಗಿಬರುತ್ತಿದ್ದೆವು. ಬೆಳಗಾವಿ ಮತ್ತು ಧಾರವಾಡಗಳೆರಡೂ ಪಿ ಬಿ (ಪುಣೆ-ಬೆಂಗಳೂರು) ಹೈವೇ ಮೇಲೆ ಇರುವುದರಿಂದ ಬಸ್ಸುಗಳಿಗೇನೂ ಕಡಿಮೆಯಿಲ್ಲ. ಆದರೂ ಪ್ರವಾಸದ ವೇಳೆ ಕಡಿಮೆಯಾಗುತ್ತದೆ ಎಂದು ನಾವು ಯಾವಾಗಲೂ ದೂರದ ಊರಿನ ಎಕ್ಸಪ್ರೆಸ್ ಬಸ್ಸುಗಳನ್ನು ಹತ್ತುವುದು. ಅದೇಕೋ ಅಂದು ಎಕ್ಸಪ್ರೆಸ್ ಬಸ್ಸಿನಲ್ಲಿ ನನಗೆ ಕೂಡಲು ಸೀಟು ಸಿಗಲಿಲ್ಲ. ನಮ್ಮ ಬಸ್ಸಿನ ಡ್ರೈವರ್ ಇಂಜಿನ್ ಚಾಲು ಮಾಡಿದ್ದು ಇನ್ನೂ ಹೆಚ್ಚಿನ ಗಿರಾಕಿಗಳಿಗಾಗಿ ಕಾಯುತ್ತಿದ್ದ. ಅಷ್ಟರಲ್ಲಿ ಪಕ್ಕದ ಬಸ್ಸೂ ಚಾಲು ಆದದ್ದನ್ನು ಗಮನಿಸಿ ನಾ ನಿಂತಲ್ಲಿಯ ಪಕ್ಕದ ಸೀಟಿನಲ್ಲಿ ಕುಳಿತ ಯುವಕನೊಬ್ಬ ಸೀಟು ಖಾಲಿಮಾಡಿ ಆ ಬಸ್ಸನ್ನು ಹತ್ತಲು ಹೊರನಡೆದ. ನಾನು ಆ ಸೀಟಲ್ಲಿ ಕೂಡುವಷ್ಟರಲ್ಲಿ ಆ ಯುವಕ ವಾಪಸ್ ಬಂದು ಇದು ತಾನು ಕೂತ‌ ಸೀಟು, ಪಕ್ಕದ ಬಸ್ಸು ಯಾವ ಊರಿಗೆ ಹೋಗುವುದೆಂದು ನೋಡಲು ಮಾತ್ರ ಹೋಗಿದ್ದು ಅದಕ್ಕೆ ತನಗೆ ಸೀಟು ಬಿಟ್ಟು ಕೊಡಬೇಕೆಂದು ಡಿಮಾಂಡ ಮಾಡತೊಡಗಿದ. ನಾನು ಅದಕ್ಕೆ ಸುತಾರಾಂ ಒಪ್ಪಲಿಲ್ಲ. ನನ್ನ ಪ್ರಕಾರ ಒಂದು ಸಲ ಸೀಟು ಖಾಲಿ ಮಾಡಿದ ನಂತರ ಅದರ ಮೇಲೆ ಯಾವ ಅಧಿಕಾರವೂ ಉಳಿಯುವದಿಲ್ಲ ಎಂಬುದಾಗಿತ್ತು. ಅಷ್ಟರಲ್ಲಿ ನಮ್ಮ ಬಸ್ಸು ನಿಧಾನವಾಗಿ ನಿಲ್ದಾಣವನ್ನು ಬಿಟ್ಟು ಹೊರನಡೆದಿತ್ತು. ನಮ್ಮಿಬ್ಬರ ಮಾತೂ ಹಾಗೇ ಮುಂದುವರೆಯಿತು. ಆಗ ಕಂಡಕ್ಟರ್ ಆ ಯುವಕನನ್ನು ಉದ್ದೇಶಿಸಿ " ತಮ್ಮಾSS ಅವರ ತಲೆಗಾದರೂ ಮರ್ಯಾದೆ ಕೊಟ್ಟು ಸುಮ್ಮನಾಗು, ಅವರು ಕೂತಿರಲಿ" ಅಂದಾಗ ನನ್ನ ಪಕ್ಕದ ಸಹ ಪ್ರಯಾಣಿಕರೂ ಹೌದೆಂದು ದನಿಗೂಡಿಸಿ ನನ್ನ ಸೀಟಿನ ಮೇಲಿನ ಹಕ್ಕನ್ನು ಇನ್ನಷ್ಟು ಭದ್ರಪಡಿಸಿದರು. ನನ್ನ ಜೀವನದಲ್ಲಿ ಮೊದಲ ಬಾರಿಗೆ ನನ್ನ ಕರಿಬಿಳಿ ತಲೆಗೂದಲಿನ ಲಾಭವನ್ನು ಅನುಭವಿಸಿದೆ ಹಾಗೂ ಮನಸ್ಸಿನಲ್ಲಿ ನನ್ನ ಕರಿಬಿಳಿ ತಲೆಗೆ ಧನ್ಯವಾದ ಹೇಳಿದೆ.


-ಜಯಂತ ಕಿತ್ತೂರ 

ಕಾಮೆಂಟ್‌ಗಳು

  1. ಜಯಂತ,ಬರಹ ಚೆನ್ನಾಗಿದೆ. ಇದೆ ರೀತಿಯ ಇನ್ನಷ್ಟು ಎಂದು ಆಶಿಸುತ್ತೇನೆ.

    ಪ್ರತ್ಯುತ್ತರಅಳಿಸಿ
  2. ಜಯಂತ, ಬರಹ ಚೆನ್ನಾಗಿದೆ, ನಾನು ನಿನ್ನ ತರಹ ಕೆಲವು ಸಲ ಬಿಳಿ ಕೂದಲಿನ ಅಡ್ವಾಂಟೇಜ್ ಪಡೆದುಕೊಂಡಿರುವೆ

    ಪ್ರತ್ಯುತ್ತರಅಳಿಸಿ
  3. ನಾನು kle belagavi ನಲ್ಲಿ ಪೇಪರ್ ಮೌಲ್ಯಮಾಪನಕ್ಕೆ ಹಾಜರಾಗುತ್ತಿರುವಾಗ ಸಹ ಮೌಲ್ಯಮಾಪನ ಮಾಡುವವರೊಂದಿಗೆ ಸಂವಹನ ನಡೆಸುವಾಗ ನೀವು ನನ್ನ ಸಹಪಾಠಿ ಎಂದು ನಾನು ವ್ಯಕ್ತಪಡಿಸಿದೆ. ಅವನಿಗೆ ಆಶ್ಚರ್ಯವಾಯಿತು. ನಿಮ್ಮ ಬಿಳಿ ಕೂದಲಿನಿಂದಾಗಿ ನೀವು ತುಂಬಾ ಹಿರಿಯ ವ್ಯಕ್ತಿ ಎಂದು ಅವರು ಭಾವಿಸಿದ್ದರು.

    ಪ್ರತ್ಯುತ್ತರಅಳಿಸಿ
  4. ತುಂಬ ಮಾರ್ಮಿಕ ಪ್ರಸಂಗದ ಅನುಭವದ ನುಡಿಗಳು.

    ಪ್ರತ್ಯುತ್ತರಅಳಿಸಿ
  5. ಡಾ.ಸುರೇಶ ಜಾಧವ ಕಲಬುರಗಿಫೆಬ್ರವರಿ 16, 2025 ರಂದು 06:03 PM ಸಮಯಕ್ಕೆ

    ತುಂಬ ಮಾರ್ಮಿಕ ಪ್ರಸಂಗದ ಅನುಭವದ ನುಡಿಗಳು

    ಪ್ರತ್ಯುತ್ತರಅಳಿಸಿ
  6. ಒಳ್ಳೆಯ ‌ಬರಹ. ಬರವಣಿಗೆ ಮುಂದುವರೆಯಲಿ. ಪುಸ್ತಕ ರೂಪದಲ್ಲಿ ಪ್ರಕಟವಾದರೆ ಇನ್ನೂ ಒಳ್ಳೆಯದು.
    ಬರವಣಿಗೆಯಲ್ಲಿ ಲಾಲಿತ್ಯವಿದೆ. ಸುಲಲಿತ ಭಾಷೆಯಿಂದಾಗಿ ಸೊಗಸು ಹೆಚ್ಚಾಗಿದೆ.

    ಪ್ರತ್ಯುತ್ತರಅಳಿಸಿ
  7. Nice article.. I can relate to many of your stories. I did go one mile ahead of you.. I lost half them already!

    ಪ್ರತ್ಯುತ್ತರಅಳಿಸಿ
  8. ಅದ್ಭುತ ಸರ್‌. ಆ ಹುಡುಗ ನಿಮ್ಮ ಸೀಟ್ ಬಿಟ್ಟುಕೊಡಲು ಸಹ ಕೂದಲು ಸಹಾಯ ಮಾಡುತ್ತದೆ ಎಂಬುದನ್ನ ನೆನಪಿಸಿದ್ದಕ್ಕೆ. ಸರ್ ನಿಮ್ಮ ಬರವಣಿಗೆಯಲ್ಲಿ ನನಗಿಷ್ಟವಾಗುವುದು ಎಲ್ಲಿಯೂ ಲ್ಯಾಗ್ ಆಗದಂತೆ ಬೇಜಾರೆನಿಸದಂತೆ ಯಾವುದನ್ನ ಎಷ್ಟು ತಿಳಿಸಬೇಕು, ಎಲ್ಲಿ ಗಾದೆ, ವಚನ, ನುಡಿಮುತ್ತುಗಳನ್ನ ಬಳಸಬೇಕು ಎಂಬ ಆ ಅಕ್ಷರ ಜ್ಞಾನ ಬಹಳ ಖುಷಿಕೊಡುತ್ತದೆ. ಕಣ್ಣ ಮುಂದ್ ನಡದೇತಿ ಪಾ‌ ನಮ್ಮ ಗುರುಗಳು ಹೇಳುವುದು ಅನ್ನುವತರಹ. ಶುಭವಾಗಲಿ ಸರ್🙏🏻

    ಪ್ರತ್ಯುತ್ತರಅಳಿಸಿ
  9. ಜೀವನದ ಪ್ರಸಂಗಗಳ ವರ್ಣನೆ ಚೆನ್ನಾಗಿ ಮಾಡಿದ್ದೀರಾ. ಸಹಜ ಭಾಷೆಯಲ್ಲಿ ಮೂಡಿಬಂದಿರುವ ವಿಷಯ ಓದಲು ಒಂಥರಾ ರುಚಿಕರ.
    ಭಾಷಾ ಸಾಹಿತ್ಯಕ್ಕೆ ಸಹಜತೆ ಮತ್ತು ಪ್ರಸಂಗಗಳ ವರ್ಣನೆ ಅತ್ಯಾವಶ್ಯಕ. ಖುಷಿಯಾಯ್ತು.

    ಪ್ರತ್ಯುತ್ತರಅಳಿಸಿ
  10. ಬಿಳಿಕೂದಲಿನ ಭೋದಿಸತ್ವ.. ಚೆನ್ನಾಗಿ ಮೂಡಿಬಂದಿದೆ... ಸರ್..

    ಪ್ರತ್ಯುತ್ತರಅಳಿಸಿ
  11. ಚೆನ್ನಾಗಿ ಬರೆದಿದ್ದೀರಿ ಪ್ರೊಫೆಸರ್. ನನ್ನ ತಮ್ಮ ಕಿಶೋರ ಬಹಳ ವರ್ಷಗಳ ಹಿಂದೆ ನಿಮಗೆ ಬೆಳಗಾವಿಯಲ್ಲಿ ಭೇಟಿಯಾಗದ್ದಾ. ಬಾಲ್ಯದಿಂದಲೂ ನಾವು ನೀವು ಜೊತೆಯಾಗಿ ಆಟ ಆಡಿ ಬೆಳೆದವರಾದ್ದರಿಂದ ನಿಮ್ಮ ಸಂಪೂರ್ಣ ಬಿಳಿ ತಲೆಗೂದಲು ನೋಡಿ ನನಗ್ಹೇಳಿದ್ದಾ " ಜಯಂತರಿಗೆ ಕೆಲಸದ ಒತ್ತಡ ಬಹಳ ಜಾಸ್ತಿ ಇರಬಹುದು ತಲೆಯೆಲ್ಲಾ ಬಿಳಿಯಾಗಿದೆ " ಅಂದಿದ್ದು ನೆನಪು.

    ಪ್ರತ್ಯುತ್ತರಅಳಿಸಿ
  12. Sir you have taken me through journey of black and white 😂😂

    ಪ್ರತ್ಯುತ್ತರಅಳಿಸಿ
  13. ಅನುಭವದ ಬುತ್ತಿ ಸ್ಮೃತಿ
    ಪಟಲದಿಂದ ತುಂಬಾ ಮುದವಾಗಿ ಮೂಡಿ ಬಂದಿದೆ ಗುರುಗಳೇ.

    ಪ್ರತ್ಯುತ್ತರಅಳಿಸಿ
  14. ಲಲಿತ ಪ್ರೆರಬಂಧಕ್ಕೆ ವಿಷಯ ಚೆನ್ನಾಗಿದೆ. ಬರೆಹ ಚೆನ್ನಾಗಿ ಮೂಡಿ ಬಂದಿದೆ. ಸೀಟು ದೊರಕಿಸಿಕೊಟ್ಟ ಬಿಳಿ ಕೂದಲಿನ ಪ್ರಸಂಗ ಎಲ್ಲರ ಗಮನ ಸೆಳೆಯುತ್ತದೆ. ಅಭಿನಂದನೆಗಳು - ಗುಂಡೇನಟ್ಟಿ ಮಧುಕರ

    ಪ್ರತ್ಯುತ್ತರಅಳಿಸಿ
  15. ಲೇಖನ ಘಟನೆಗಳಿಂದ ತುಂಬಿಕೊಂಡು ಚೆನ್ನಾಗಿ ಬೆಳೆದಿದೆ.ಅಭಿನಂದನೆಗಳು

    ಪ್ರತ್ಯುತ್ತರಅಳಿಸಿ
  16. What if hair turned white, the nostalgic journey captured, is full of colors!! Keep painting the blogs, keep your blog brush busy...wonderful...

    ಪ್ರತ್ಯುತ್ತರಅಳಿಸಿ
  17. Again, a nice article indeed like all previous ones! Well compiled.

    ಪ್ರತ್ಯುತ್ತರಅಳಿಸಿ
  18. ನಲುಮೆಯ ಜಯಂತ ಅವರೇ, ಡಾ. ಕೃಷ್ಣಮೂರ್ತಿ ಕಿತ್ತೂರು ಅವರ ಸುಪುತ್ರರಾದ ನಿಮ್ಮ ಕನ್ನಡ ಭಾಷೆ ಅವರಷ್ಟೇ ಸರಳ ಹಾಗು ಪರಿಣಾಮಕಾರಿ. ವಿಷಯವನ್ನು ವಿಶ್ಲೇಷಸುವ ಸೂಕ್ಷ್ಮತೆಯಲ್ಲಿ ನಿಮ್ಮ ಹಾಸ್ಯ ಪ್ರಜ್ಞೆ ಸೂಪರ್. ಮುಗ್ದ ಮೊಗದ ಜಯಂತನಿಂದ ಹಿಡಿದು ಪ್ರಭುದ್ದ ಪ್ರಿನ್ಸಿಪಾಲರಾದಗೂ, ನಿಮ್ಮ ಅದೇ ವಿನಯ ಹಾಗು ಹಸನ್ನಮುಖ ನಿಮ್ಮ ಬಿಳಿ ಕೂದಲಿನಷ್ಟೇ ಶುಭ್ರ. ಅಭಿಮಾನ ಪೂರ್ವಕ ಅಭಿನಂದನೆಗಳು 💐🙌

    ಪ್ರತ್ಯುತ್ತರಅಳಿಸಿ
  19. Along with Glass and Grey hair, you have also inherited this fine style of writing article.Anna must be throughly pleased with your write up.🫱👍

    ಪ್ರತ್ಯುತ್ತರಅಳಿಸಿ
  20. Sir I read part 2 regarding white colour now I confused should I I coloured my hair because regularly I am colouring my hairs

    ಪ್ರತ್ಯುತ್ತರಅಳಿಸಿ
  21. Very well written bold & descriptive article Dr. Kittur sir. Clear & concise article. Congratulations sir.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ದಿಖಾವೇಪೆ ಮತ್ ಜಾವೋ ಅಕಲ್ ಲಗಾವೋ...

ಇವಾ ಯಾವೂರವಾ...