ಸೆಪ್ಟೆಂಬರ್ ೨೯ ವಿಶ್ವ ಹೃದಯ ದಿನ.

 

ನಮ್ಮ ಮನೆತನದ ಉದ್ಯೋಗ ಶಿಕ್ಷಣ (ಅಧ್ಯಯನ ಮತ್ತು ಅಧ್ಯಾಪನ) ಆದುದರಿಂದ ನಾನು ಚಿಕ್ಕವನಿದ್ದಾಗಿನಿಂದಲೂ ನಮ್ಮ ಮನೆಯಲ್ಲಿ ಎರಡೆರಡು(ಕನ್ನಡ ಮತ್ತು ಇಂಗ್ಲೀಷ್) ದಿನಪತ್ರಿಕೆಗಳು ಬರುತ್ತಿದ್ದವು. ಆಗ ನಮ್ಮೆಲ್ಲರ ಶಾಲಾ ಕಾಲೇಜುಗಳ ಸಮಯಗಳು ಬೇರೆ ಬೇರೆ ಇರುವ ಕಾರಣ ನಮ್ಮ ನಮ್ಮ ಅನುಕೂಲಕ್ಕೆ ತಕ್ಕಂತೆ ನಾವೆಲ್ಲರೂ ಬೇರೆ ಬೇರೆ ಸಮಯದಲ್ಲಿ ಮಧ್ಯಾಹ್ನದ ಊಟ ಮತ್ತು ಎರಡೂ ಪತ್ರಿಕೆಗಳನ್ನು ತಿರುವಿ ಹಾಕುವ ದನ್ನು ಮಾಡುತ್ತಿದ್ದೆವು. ರಾತ್ರಿ ಊಟ ಮಾತ್ರ ಮನೆಯ ಎಲ್ಲ ಸದಸ್ಯರೂ ಒಟ್ಟಿಗೆ ಮಾಡುವ ಪದ್ಧತಿ ಇತ್ತು. ಆ ಸಮಯದಲ್ಲಿ ಅಂದಿನ ಪತ್ರಿಕೆಗಳಲ್ಲಿ ಪ್ರಕಟವಾದ ವಿವಿಧ ವಿಷಯಗಳ ಮೇಲೆ ಸಂವಾದ/ವಿಶ್ಲೇಷಣೆ ನಡೆಯುತ್ತಿತ್ತು ಮತ್ತು ಮನೆಯ ಎಲ್ಲ ಸದಸ್ಯರೂ ಭಾಗವಹಿಸುತ್ತಿದ್ದೆವು.ಹಾಗಾಗಿ ನನ್ನಲ್ಲಿ ಚಿಕ್ಕವನಿದ್ದಾಗಿನಿಂದಲೂ ವರ್ತಮಾನ ಪತ್ರಿಕೆಗಳನ್ನು ಓದುವ, ಜಗತ್ತಿನ ಆಗು ಹೋಗುಗಳ ಬಗ್ಗೆ ಅರಿಯುವ ಮತ್ತು ವಿಷಯಗಳನ್ನು ವಿಶ್ಲೇಷಿಸುವ ಹವ್ಯಾಸ ಬೆಳೆಯಿತು. ಮುಂದೆ ಕಾಲೇಜು ದಿನಗಳಲ್ಲಿ ಧೈರ್ಯದಿಂದ ಚರ್ಚಾ ಕೂಟ ಗಳಲ್ಲಿ ಭಾಗವಹಿಸಿ ಪ್ರಭಾವಿಯಾಗಿ ವಿಷಯಗಳ ಮಂಡನೆ ಮಾಡುವಲ್ಲಿಯೂ ಸಹಕಾರಿಯಾಯಿತು.


ಈಗಿನ ದಿನಗಳಲ್ಲಿ ಇತರ ಆಧುನಿಕ ಸುದ್ದಿ ಮಾಧ್ಯಮಗಳ ಪ್ರಭಾವ ಹೆಚ್ಚಾಗಿದ್ದರೂ ಉದ್ಯೋಗದಿಂದ ನಿವೃತ್ತಿಯ ನಂತರ ನನ್ನ 

ಪತ್ರಿಕೆಗಳ ಓದಿನ ಚಟ ಸ್ವಲ್ಪ ಜಾಸ್ತಿಯೇ ಆಗಿದೆ. ಇದಕ್ಕೆ ಸಾಮಾನ್ಯ ಕಾರಣ ನೌಕರಿಯ ಒತ್ತಡ,ಕಿರಿಕಿರಿ ಇಲ್ಲದ ಸಮಯ ಲಭ್ಯತೆ ಆದರೆ  ಮತ್ತೊಂದು ಬೆರಳೊತ್ತಿನಲ್ಲಿ ಲಭ್ಯವಿರುವ ಅನೇಕ ಪತ್ರಿಕೆಗಳ ಡಿಜಿಟಲ್ ಆವೃತ್ತಿಗಳು.


ಎಂದಿನಂತೆ ಮೊನ್ನೆ ಸೆಪ್ಟೆಂಬರ್ ೨೯ ರ ವಿಶ್ವ ಹೃದಯ ದಿನದಂದು ಹಲವು ವರ್ತಮಾನ ಪತ್ರಿಕೆಗಳನ್ನು ನಮ್ಮ ಮುದ್ದಿನ ಮಗಳು ನನ್ನ ನಿವೃತ್ತಿಯ ಉಡುಗೊರೆಯಾಗಿ ಕೊಡಿಸಿದ ಟ್ಯಾಬ್ ನಲ್ಲಿ ಓದುತ್ತಾ ನಿವೃತ್ತಿ ಜೀವನಶೈಲಿಯ ಬೆಳಗಿನ ಎರಡು ಚಹಾ ಗಳ ನಡುವಿನ ಸಮಯವನ್ನು ಕಳೆಯುತ್ತಿದ್ದೆ /ಸದುಪಯೊಗ ಪಡೆಸಿಕೊಳ್ಳುತ್ತಿದ್ದೆ.ಫಕ್ಕನೆ ,ವಿಶ್ವ ಹೃದಯ ದಿನದ ಆರಂಭ ಮತ್ತು ಅದರ ಉದ್ದೇಶಗಳನ್ನು ತಿಳಿಯಲು ವಿಕಿಪೀಡಿಯದಲ್ಲಿ ಕಣ್ಣಾಡಿಸಿದಾಗ ಅದು ಹೇಳಿತು...೧೯೯೯ರಿಂದ ಪ್ರತಿ ವರ್ಷದ ಸೆಪ್ಟೆಂಬರ್ ನಲ್ಲಿ ಕೊನೆಯ ಭಾನುವಾರ ವಿಶ್ವ ಹೃದಯ ದಿನವನ್ನು (World Heart Day) ವಿಶ್ವ ಹೃದಯ ಸಂಸ್ಥೆ (ವರ್ಲ್ಡ್ ಹಾರ್ಟ್ ಫೆಡರೇಷನ್ ) ಯು ಆಯೋಜಿಸುತ್ತಿದೆ ಆದರೆ ೨೦೧೧ ರಿಂದ ವಿಶ್ವ ಹೃದಯ ದಿನವನ್ನು ಸೆಪ್ಟೆಂಬರ್ ಕೊನೆಯ ಭಾನುವಾರದ ಬದಲಾಗಿ ೨೯ ಸೆಪ್ಟೆಂಬರ್ ನಂದು ಆಚರಿಸಲಾಗುತ್ತದೆ ವಿಶ್ವ ಹಾರ್ಟ್ ಫೆಡರೇಶನ್ ಸಂಸ್ಥೆಯು ಮುಖ್ಯ ಅಪಾಯಕಾರಿ ಅಂಶಗಳಾದ , ತಂಬಾಕು, ಅನಾರೋಗ್ಯಕರ ಆಹಾರ ಮತ್ತು ದೈಹಿಕ ಚಟುವಟಿಕೆ ಇಲ್ಲದೇ ಇರುವಿಕೆಗಳನ್ನು ನಿಯಂತ್ರಿಸುವುದರಿಂದ ಹೃದಯ ರೋಗ ಮತ್ತು ಹೃದಯಾಘಾತಗಳಿಂದ ಅಕಾಲಿಕ ಮರಣಗಳನ್ನು ಕನಿಷ್ಠ ಪ್ರತಿಶತ ೮೦ ರಷ್ಟರ ಮಟ್ಟಿಗೆ ತಪ್ಪಿಸಬಹುದಾಗಿದೆ ಎಂದು ಪ್ರಚಾರ ಮಾಡುತ್ತದೆ ಎಂದು....ಅದರಂತೆ ನಮ್ಮಲ್ಲಿಯೂ ಪ್ರತೀ ವರ್ಷ ಸೆಪ್ಟೆಂಬರ್ ತಿಂಗಳ ೨೯ ರಂದು ವಿಶ್ವ ಹೃದಯ ದಿನ ಆಚರಿಸಲಾಗುತ್ತದೆ. 


ಆ ದಿನದ ಸುಮಾರು ಎಲ್ಲಾ ವರ್ತಮಾನ ಪತ್ರಿಕೆಗಳು ಸಾಮಾನ್ಯವಾಗಿ ೨ ರಿಂದ ೩ ಪುಟಗಳನ್ನು ಇದಕ್ಕಾಗಿ ಮೀಸಲಾಗಿ ಇಟ್ಟಿರುತ್ತವೆ.ಮೇಲ್ನೋಟಕ್ಕೆ ಇದು ನಾಗರೀಕರ ಆರೋಗ್ಯದ ಬಗ್ಗೆ ಪತ್ರಿಕಾ ಮಾಧ್ಯಮಕ್ಕೆ ಇರುವ ಕಾಳಜಿಯನ್ನು/ ಕಳಕಳಿಯನ್ನು ಬಿಂಬಿಸುತ್ತದೆ.ಇರಲಿ.

ಸ್ವಲ್ಪ ಕೂಲಂಕಷವಾಗಿ ವಿಶ್ಲೇಷಿಸಲಾಗಿ ಪತ್ರಿಕೆಗಳಲ್ಲಿ ಕೆಲವು ಜಾಹೀರಾತ್ಮಕ ಲೇಖನಗಳು, ಸಂದರ್ಶನಗಳು ಮತ್ತು ಅನೇಕ ಜಾಹೀರಾತುಗಳು ರಾರಾಜಿಸುತ್ತಿದ್ದವು.


ಕೆಲವು ಪತ್ರಿಕೆಗಳಲ್ಲಿ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳ ಹೃದಯ ಸಂಬಂಧಿ ದೇಶ ವಿದೇಶಗಳ ದೊಡ್ಡ ದೊಡ್ಡ ಪದವಿಗಳನ್ನು ಹೊಂದಿದ ವೈದ್ಯರು ಬರೆದ ಲೇಖನಗಳು ಪ್ರಕಟವಾಗಿದ್ದವು. ಸಮಯ ಇಲ್ಲದಷ್ಟು ಮೈ ತುಂಬಾ ಕೆಲಸ ಇರುವಾಗಲೂ ಯಾವಾಗ ವೈದ್ಯರುಗಳು ಲೇಖನಗಳನ್ನು ಬರೆದು ಪತ್ರಿಕೆಗಳಲ್ಲಿ ಪ್ರಕಟಣೆಗೆ ಕೊಡುತ್ತಾರೋ ಇನ್ನು ಯಾವಾಗ ಕೈ ತುಂಬಾ ಹಣ ಮಾಡುತ್ತಾರೋ ಅಂತೂ ಅವರ ಹೆಸರಿನಲ್ಲಿ ಪ್ರಕಟವಾದ ಲೇಖನಗಳನ್ನು ಓದಲು ಸಾಕು.


ಈಗೀಗ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರು ವರ್ಷಕ್ಕೆ ಕನಿಷ್ಠ ಒಂದೆರಡಾದರೂ ಸಂಶೋಧನಾ ಲೇಖನಗಳನ್ನು ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟಿಸದಿದ್ದರೆ ಆ ವರ್ಷ ಪಗಾರದ ಇನ್ಕ್ರಿಮೆಂಟ್ ಮರೆಯ ಬೇಕಾಗುವ ಸಂಧಿಗ್ಧತೆ ಯಿಂದ ಬಚಾವಾಗಲು ತಮ್ಮ ಸ್ನಾತಕ /ಸ್ನಾತಕೋತ್ತರ ಅಥವಾ ಪಿ ಎಚ್ ಡಿ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಿ ಹಾಗೂ ಹೀಗೂ ಅವರಿಂದ ಲೇಖನಗಳನ್ನು ತಯಾರಿಸಿ ತಮ್ಮ ಹೆಸರಿನೊಂದಿಗೆ ಅವರ ಹೆಸರನ್ನು ಸೇರಿ ಸಿ/ಸದೇ ಪ್ರಕಟಿಸುವುದನ್ನು ನೋಡಿದ ಇತ್ತೀಚಿಗೆ ನಿವೃತ್ತಿಯಾದ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕನಿಗೆ ಪತ್ರಿಕೆಗಳಲ್ಲಿ ಪ್ರಕಟವಾದ ವೈದ್ಯರ ಲೇಖನಗಳು "ಬಿಸಿ ಹಾಲನ್ನು ಕುಡಿಯಲು ಹೋಗಿ ಬಾಯಿ ಸುಟ್ಟುಕೊಂಡ ಬೆಕ್ಕು ಮಜ್ಜಿಗೆಯನ್ನು ಊದಿ ಕುಡಿದಂತೆ" ಎಂಬ ಗಾದೆಯನ್ನು ನೆನಪಿಸಿತು ಇರಲಿ. ಹಾಗೆಂದು ಎಲ್ಲರಿಲ್ಲದಿದ್ದರೂ ಕೆಲವು ವೈದ್ಯರು ತಮ್ಮ ಬಿಡುವಿಲ್ಲದ ವೃತ್ತಿಜೀವನದಲ್ಲಿ ಸಾಮಾಜಿಕ ಕಳಕಳಿಯಿಂದ ಜನ ಸಾಮಾನ್ಯರಿಗೆ ತಿಳಿಯುವ ಲೇಖನಗಳನ್ನು ಬರೆಯುವ ಇಲ್ಲವೆ ಸಂದರ್ಶನ ನೀಡುವುದನ್ನು ನಾವು ನೋಡಬಹುದು. 


ಇನ್ನು ಕೆಲವು ಲೇಖನಗಳು ಆಧುನಿಕ ಒತ್ತಡದ ಸ್ಪರ್ಧಾತ್ಮಕ ಜೀವನ, ಬದಲಾದ ಆಹಾರ,ವಿಹಾರ,ವ್ಯಾಯಾಮ ಶೈಲಿಗಳು,ವಿವಿಧ ಪ್ರಕಾರದ ದುಶ್ಚಟಗಳು ಹೇಗೆ ಹೃದಯ ಸಂಬಂಧಿ ವಿವಿಧ ಕಾಯಿಲೆಗಳ ವೃದ್ಧಿಗೆ ಕಾರಣವಾಗಿವೆ ಎಂಬುದನ್ನು ಮನವರಿಕೆ ಮಾಡಿಕೊಡುವ ಪ್ರಯತ್ನವಾಗಿ  ಸರ್ಕಾರ ಅಥವಾ ವಿಶ್ವ ಸಂಸ್ಥೆಯ ಆರೋಗ್ಯ ಸಂಬಂಧಿ ವಿಭಾಗಗಳು ಪ್ರಕಟಿಸಿದ ಹೃದಯ ಸಂಬಂಧಿ ವಿವಿಧ ಪ್ರಕಾರದ ಖಾಯಿಲೆಗಳ, ವಿವಿಧ ವಯೋಮಾನದ, ವಿವಿಧ ವೃತ್ತಿನಿರತ ಗಂಡಸು ಮತ್ತು ಹೆಂಗಸು ಹೃದಯ ರೋಗಿಗಳ ಮತ್ತು ಹೃದ್ರೋಗದಿಂದ ಅಕಾಲಿಕ ಮರಣ ಹೊಂದಿದ ಜನರ ಅಂಕಿ ಅಂಶಗಳು ಹೇಗೆ ವರ್ಷದಿಂದ ವರ್ಷಕ್ಕೆ ವೃದ್ಧಿ ಆಗುತ್ತಿವೆ ಎಂಬುದರ ರೇಖಾ ಚಿತ್ರಗಳನ್ನು ಒಳಗೊಂಡಿರುತ್ತವೆ. ಅವನ್ನು ಸೂಕ್ಷ್ಮ ಹೃದಯದವರು ಓದಿದರೆ ಗಾಬರಿಯಾಗಿ ದಿಢೀರನೇ ಬಿಪಿ ಏರಿಸಿ ಕೊಂಡು ಬಿಡುವಂತೆ ಇರುತ್ತವೆ.!!!

 

ವಿವಿಧ ಪ್ರಕಾರದ ಆಧುನಿಕ ರೋಗ ನಿಧಾನದ ಪರೀಕ್ಷೆಗಳು,ಅವುಗಳಿಗಾಗಿ ಸಂಶೋಧಿಸಿದ ವಿವಿಧ ಉಪಕರಣಗಳು ಮತ್ತು ಅವುಗಳ ಲಭ್ಯತೆ ಜೊತೆಗೆ ವಿವಿಧ ಪ್ರಕಾರದ ಆಧುನಿಕ ಔಷಧಿಗಳು, ಶಸ್ತ್ರಚಿಕಿತ್ಸೆಗಳು ಈಗ ಉಪಲಬ್ದವಾಗಿರುವುದರ ಬಗ್ಗೆ ಮಾಹಿತಿ ಎಂಬೆಲ್ಲ ವಿವರಗಳ ಲೇಖನಗಳೂ ಕಂಗೊಳಿಸುತ್ತಾ ಇರುತ್ತವೆ. ಬಹುಶಃ ಈ ತರಹದ ಲೇಖನಗಳನ್ನು ಸಂಬಂಧ ಪಟ್ಟ ದೊಡ್ಡ ದೊಡ್ಡ ರೋಗ ತಪಾಸಣಾ ಪ್ರಯೋಗಾಲಯ (ಲ್ಯಾಬೋರೇಟರಿ)ಗಳ ಇಲ್ಲಾ ಕಾರ್ಪೊರೇಟ್ ವೈದ್ಯಕೀಯ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಪ್ರಕಟವಾಗಿರುವ ಶಂಕೆ ಬರುವುದು ಸಹಜ.


ಜೊತೆಗೆ ಕೇಂದ್ರ/ರಾಜ್ಯ ಆರೋಗ್ಯ ಸಚಿವರ ದೊಡ್ಡ ಫೋಟೊ ದೊಂದಿಗೆ ಅವರ ಸಂದರ್ಶನ ಇಲ್ಲಾ ಅವರ ನುಡಿಮುತ್ತುಗಳು ಮತ್ತು ಆರೋಗ್ಯ ಇಲಾಖೆಯು ಈ ವಿಷಯದಲ್ಲಿ ಎಷ್ಟು ಹಣ ಖರ್ಚು/ಪೊಲು ಮಾಡಿದೆ ಎಂಬಿತ್ಯಾದಿ ವಿವರಗಳ ಜಾಹೀರಾತುಗಳು ಕಣ್ಣಿಗೆ ರಾಚುತ್ತವೆ. 


ಇನ್ನು ಈ ಎಲ್ಲ ವಿವರಗಳನ್ನು ವಿಶೇಷ ದಿನದಂದು ೨-೩ ಪುಟಗಳಲ್ಲಿ ಪ್ರಕಟಣೆಗೆ ತಗಲುವ ಖರ್ಚು ವೆಚ್ಚಗಳನ್ನು ನೀಗಿಸಲು ಮತ್ತು ಸ್ವಲ್ಪ ಲಾಭವನ್ನೂ ತಂದುಕೊಡಲು ಪತ್ರಿಕೆಗಳಲ್ಲಿ ಪ್ರತಿಷ್ಠಿತ ಹೃದಯ ವೈದ್ಯಕೀಯ ಸಂಸ್ಥೆಗಳ, ದೊಡ್ಡ ದೊಡ್ಡ ರೋಗ ತಪಾಸಣಾ ಪ್ರಯೋಗಾಲಯಗಳ, ಪ್ರತಿಷ್ಠಿತ ಸರಣಿ ಔಷಧಿಯ ಸಂಸ್ಥೆಗಳ ಜಾಹೀರಾತುಗಳು ರಾರಾಜಿಸುವುದನ್ನು ಎಲ್ಲರೂ ನೋಡಿರಲು ಸಾಕು.


ನಮ್ಮ ಸಾಮಾನ್ಯ ಅರಿವಿನ ಪ್ರಕಾರ ರಕ್ತನಾಳಗಳ ಒಳ ಪದರಿನಲ್ಲಿ ಶೇಖರಣೆ ಆಗುವ ಕೊಲೆಸ್ಟ್ರಾಲ್, ನಾಳಗಳಲ್ಲಿ ರಕ್ತ ಸರಾಗವಾಗಿ ಹರಿಯದಂತೆ ಮಾಡುತ್ತದೆ. ಇದರಿಂದ ಹೃದಯ ಎಂಬ ಪಂಪು ರಕ್ತವನ್ನು ದೇಹದ ಎಲ್ಲಾ ಭಾಗಗಳಿಗೆ ಪೂರೈಸಲು ನಿರಂತರವಾಗಿ ಹೆಚ್ಚಿನ ಒತ್ತಡದಿಂದ ಕೆಲಸ ಮಾಡಬೇಕಾಗುತ್ತದೆ. ಜೊತೆಗೆ ಇಂದಿನ ಆಧುನಿಕ ತೀವ್ರ ತಮವಾದ ಪೈಪೋಟಿಯ ಜೀವನ ಪದ್ಧತಿಯು ಹೃದಯದ ಮೇಲೆ ನಮಗೆ ಅರಿವಿಲ್ಲದಂತೆ ಮಾನಸಿಕ ಒತ್ತಡವನ್ನು ಬೀರುತ್ತದೆ.


ಮನುಷ್ಯನ ದೇಹದ ಆರೋಗ್ಯದ ಮೇಲೆ ಮಾನಸಿಕ ಆರೋಗ್ಯ ಪ್ರಮುಖ ಪ್ರಭಾವವನ್ನು ಬೀರುತ್ತದೆ ಎಂದು ಆಧುನಿಕ ಔಷಧ ಪದ್ಧತಿಗಳಲ್ಲಿ ಒಂದಾದ ಹೋಮಿಯೋಪತಿಯು ಬಲವಾಗಿ ಪ್ರತಿಪಾದಿಸುತ್ತದೆ. ನಮ್ಮ ಸನಾತನ ಧರ್ಮಶಾಸ್ತ್ರಗಳೂ ಇದನ್ನೇ ಸಾರಿ ಸಾರಿ ಹೇಳುತ್ತವೆ. 


ಹೃದಯದ ಆರೋಗ್ಯಕ್ಕೆ ಭೌತಿಕ ಕ್ರಿಯೆ ಗಳಾದ ಸರಿಯಾದ ಆಹಾರ, ವಿಹಾರ,ವ್ಯಾಯಾಮ ಗಳ ಜೊತೆಗೆ ಹೃದಯ ವೈಶಾಲ್ಯತೆ ಬಹುಮುಖ್ಯವಾಗಿದೆ. 


ನಮ್ಮ ಸರಳ ಸಜ್ಜನಿಕೆಯ ಜೀವನ, ಪ್ರಾಂಜಲತೆ, ನಿಷ್ಕಪಟತನ, ನಿಗರ್ವತೆ, ಕ್ಷಮತ್ವ, ದಮತ್ವ ಮುಂತಾದವುಗಳು ಹೃದಯ ವೈಶಾಲ್ಯತೆಯನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುತ್ತವೆ. 


ಇದನ್ನು ಅರಿತ ನಾವೆಲ್ಲರೂ  ನಮ್ಮ ಹೃದಯದ ಭೌತಿಕ ಆರೋಗ್ಯದ ಜೊತೆಗೆ ಮಾನಸಿಕ/ಬೌದ್ಧಿಕ ಆರೋಗ್ಯವನ್ನು ವೃದ್ಧಿಸಿಕೊಳ್ಳುವ ದಿನಚರಿಯನ್ನು ಅಳವಡಿಸಿಕೊಳ್ಳುವ ಪ್ರಯತ್ನ ಮಾಡಿ ವಿಶ್ವ ಹೃದಯ ದಿನದ ಆಚರಣೆಯನ್ನು ಸಾರ್ಥಕಗೊಳಿಸೋಣ.


- ಜಯಂತ ಕಿತ್ತೂರ

ಕಾಮೆಂಟ್‌ಗಳು

  1. ಚಿಕ್ಕ ವಯಸ್ಸಿನಲ್ಲಿ ಪತ್ರಿಕೆ ಓದುವ ಹವ್ಯಾಸ ಸಾಮಾನ್ಯ ಜ್ಞಾನ ವೃದ್ಧಿಗೆ ಸಹಾಯವಾಗುವ ವಿಷಯ ದೊಂದಿಗೆ ಪ್ರಾರಂಭವಾದ ತಮ್ಮ ಬರಹ ವಿಶ್ವ ಹೃದಯ ದಿನ ಕುರಿತು ಸವಿಸ್ತಾರವಾದ ಮಾಹಿತಿಯೊಂದಿಗೆ ಪೂರ್ಣಗೊಂಡು ಅತ್ಯಂತ ಸರಳವಾಗಿ ಓದಿಸಿಕೊಂಡು ಹೋಯಿತು. ಅಭಿನಂದನೆಗಳು.

    ಪ್ರತ್ಯುತ್ತರಅಳಿಸಿ
  2. Sir, Good one
    Nice and beautifully expressed heart related precautions in current fast lifestyle.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನನ್ನ ಬಿಳಿ ತಲೆಯ ಬಣ್ಣಗಳು ...(ಭಾಗ-೧)

ದಿಖಾವೇಪೆ ಮತ್ ಜಾವೋ ಅಕಲ್ ಲಗಾವೋ...

ಇವಾ ಯಾವೂರವಾ...