ಜಲಪೂರ್ಣ ತ್ರಯೋದಶಿಯಂದು ಗುರು ವಂದನೆ.
ಇನ್ನು ನಿವೃತ್ತಿಯ ಸಂತೃಪ್ತಿಯ ಜೀವನದ ಸವಿಯನ್ನು ಸವಿಯುತ್ತಾ ಬಾಲ್ಯದಿಂದ ಇಲ್ಲಿಯವರೆಗೆ ನನ್ನ ಜೀವನ ಹೇಗೆ ವಿವಿಧ ಹಂತದಲ್ಲಿ ರೂಪಗೊಳ್ಳುತ್ತಾ ಬಂದಿತೆಂಬುದನ್ನು ಮೆಲುಕು ಹಾಕುತ್ತಾ ಹೋದಾಗ, ನನಗೆ ಮೊದಲು ಅನಿಸಿದ್ದು, ಜನ್ಮ ಮತ್ತು ಸಂಸ್ಕಾರ ನೀಡಿದ ತಾಯಿ ತಂದೆಯವರು,ವಿದ್ಯಾಬುದ್ಧಿ ಕಲಿಸಿದ ಶಾಲಾ ಶಿಕ್ಷಕರು ಹಾಗೂ ಬಾಲ್ಯದ ಒಳ್ಳೆಯ ಗೆಳೆಯರ ಗುಂಪು ಈ ಮೂರು ಜನರ ಪ್ರಭಾವ ಬಹಳ ಪ್ರಮುಖವಾದವುಗಳೆಂದು.
ಹಲವು ವರ್ಷಗಳ ಹಿಂದೆ ತಾಯಿ ತಂದೆಯವರನ್ನು ಕಳೆದುಕೊಂಡಿರುವ ನನಗೆ ಈಗ ಇರುವ ಇನ್ನಿಬ್ಬರನ್ನು ಭೇಟಿಯಾಗಿ ನನ್ನ ಕೃತಜ್ಞತೆಗಳನ್ನು ಸಲ್ಲಿಸಬೇಕೆಂಬ ತುಡಿತ ಮನಸ್ಸಿನಲ್ಲಿ ಪ್ರಾರಂಭವಾಯಿತು.
ನೌಕರಿಯ ಪಾಬಂಧಿ (ಬಂಧನ)ಯಿಂದ ಮುಕ್ತನಾದ ನಾನು ದೀಪಾವಳಿಗೆಂದು ಸಂಸಾರ ಸಮೇತನಾಗಿ ಕಲಬುರ್ಗಿಯ ಅಣ್ಣನ ಮನೆಗೆ ನಾಲ್ಕುದಿನ ಮೊದಲೇ ಬಂದಿಳಿದೆ.
ಊರು ಮುಟ್ಟಿದ ಮೇಲೆ ಮಾಡಿದ ಮೊದಲ ಕೆಲಸವೆಂದರೆ ನನ್ನಂತೆಯೇ ಶಿಕ್ಷಕರ ಮಕ್ಕಳಾದ ಮತ್ತು ಕಲಬುರ್ಗಿ ನಗರದಲ್ಲಿಯೇ ಶಿಕ್ಷಣ ಕ್ಷೇತ್ರದಲ್ಲಿ ನಿರತರಾದ ಹಾಗೂ ನೂತನ ವಿದ್ಯಾಲಯದಲ್ಲಿ ನನ್ನೊಂದಿಗೆ ಪ್ರಾಥಮಿಕ ದಿಂದ ಹೈಸ್ಕೂಲ್ ವರೆಗಿನ ಸಹಪಾಠಿ ಮಿತ್ರರಾದ ಡಾ.ಪ್ರಲ್ಹಾದ ಬುರಲಿ ಮತ್ತು ಡಾ.ವಿಶಾಲದತ್ತ ಕೊಹೀರರನ್ನು ಭೇಟಿ ಮಾಡಿ ನನ್ನ ಮನದಾಳದ ಮಾತನ್ನು ಹಂಚಿಕೊಂಡಿದ್ದು.
ಬಾಲ್ಯದ ಗೆಳೆಯರನ್ನು ನಾವುಗಳು ಅನೇಕ ಸಲ ಪರಸ್ಪರ ಭೇಟಿಯಾಗುವ ಸಂದರ್ಭ/ಅವಕಾಶಗಳು ಮೇಲಿಂದ ಮೇಲೆ ಬರುತ್ತವೆ. ಶಿಕ್ಷಕ ವೃತ್ತಿಯಿಂದ ನಿವೃತ್ತಿಯಾಗಿ ಬೆಳಗಾವಿಯಲ್ಲಿ ನೆಲೆಸಿರುವ ನನಗೆ, ಓದು ಬರಹ ಕಲಿಸಿ, ತಿದ್ದಿ ತೀಡಿ, ವಿದ್ಯಾವಂತನನ್ನಾಗಿ ಮಾಡಿ, ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೆರೇಪಿಸಿ, ಜೀವನದ ಭದ್ರ ಬುನಾದಿಯನ್ನು ಹಾಕಿದ ನಮ್ಮ ಶಾಲಾ ಶಿಕ್ಷಕರನ್ನು ಭೇಟಿಯಾಗುವ ಸಂದರ್ಭಗಳು ವಿರಳ. ಆದುದರಿಂದ ದೀಪಾವಳಿಯ ಈ ಸುಸಂದರ್ಭದಲ್ಲಿ ನಾವು ಕಲಿತ ನೂತನ ವಿದ್ಯಾಲಯದ ಕನಿಷ್ಠ ಪಕ್ಷ ನಾಲ್ಕು ಶಿಕ್ಷಕರ ಮನೆಗೆ ತೆರಳಿ ಅವರ ಕುಶಲೋಪರಿಯನ್ನು ವಿಚಾರಿಸಿ,ಶಾಲು ಹೊದಿಸಿ ಸನ್ಮಾನಿಸಿ ಅವರು ಕಾಲಿಗೆ ಬಿದ್ದು ಆಶೀರ್ವಾದ ಪಡೆಯಬೇಕೆಂಬ ನನ್ನ ಬಯಕೆಯನ್ನರಿತ ಇಬ್ಬರೂ ಮಿತ್ರರು, ತಮ್ಮೆಲ್ಲ ಇತರ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಈ ಕೆಲಸವನ್ನು ಮೊದಲು ಮಾಡೋಣ ಎಂದು ನಿರ್ಧರಿಸಿದರು.
ಕಲಬುರ್ಗಿಯ ಪ್ರತಿಷ್ಠಿತ ಆರ್.ಜೆ. ಪಿ.ಯು. ಕಾಲೇಜನ್ನು ಸಮರ್ಪಕವಾಗಿ ಮುನ್ನಡೆಸುತ್ತಿರುವ ಡಾ.ಪ್ರಲ್ಹಾದ ಬುರಲಿ ಕೂಡಲೇ ಯಾವ ಮಾಸ್ತರುಗಳು ಕಲಬುರ್ಗಿಯಿಂದ ದೂರ ಮಕ್ಕಳಜೊತೆ ಇದ್ದಾರೆ, ಯಾರು ಇನ್ನೂ ಕಲಬುರ್ಗಿಯಲ್ಲಿಯೇ ನೆಲೆಸಿದ್ದಾರೆಂಬ ಮಾಹಿತಿಯನ್ನು ತೆಗೆದರೆ, ಕೇ.ಬಿ.ಎನ್. ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿರುವ ಡಾ.ವಿಶಾಲದತ್ತ ಕೊಹೀರ್ ಯಾವ ಯಾವ ಮಾಸ್ತರ್ ಗಳ ಮನೆಗಳು ಯಾವ ದಿಕ್ಕುಗಳಲ್ಲಿ ಇವೆ ಮತ್ತು ನಾವು ಯಾರ ಮನೆಗೆ ಮೊದಲು ಹಾಗೂ ಯಾರ ಮನೆಗೆ ನಂತರ ಹೋಗುವುದೆಂದು ನಿರ್ಧರಿಸಿದ.
ವರ್ಷವಿಡೀ ಮಡವುಗಟ್ಟಿದ ಕಿಲುಬನ್ನು ತೆಗೆಯಲು ಗಂಗೆಯನ್ನು ಆವ್ಹಾನಿಸುವ ಜಲಪೂರ್ಣ ತ್ರಯೋದಶಿಯ ಸಾಯಂಕಾಲ ಮಾಸ್ತರುಗಳ ಭೇಟಿಗೆ ಸೂಕ್ತ ಸಮಯ ಎಂದು ತೀರ್ಮಾನಿಸಿದೆವು. ಅದರಂತೆ, ಅಕ್ಟೋಬರ್ ೩೦ ರ ಸಾಯಂಕಾಲ ನಾವು ಮೊದಲು ತೆರಳಿದ್ದು ಶ್ರೀ ಪುರುಷೋತ್ತಮ ಸರ್ ಮನೆಗೆ.
ನಾವು ಮೂವರೂ ಕಾರಿನಿಂದ ಇಳಿದಾಗ ಸರ್ ತಮ್ಮ ಕಂಪೌಂಡ್ ನ ಗೇಟಿನಲ್ಲಿ ಹಾಕಿದ್ದ ಕುರ್ಚಿಯಲ್ಲಿ ತಮ್ಮ ಶ್ರೀಮತಿಯವರೊಂದಿಗೆ ಸಂಜೆಯ ಸಮಯವನ್ನು ಕಳೆಯುತ್ತಿದ್ದರು. ಅನಿರೀಕ್ಷಿತವಾಗಿ ಬಂದ ಅತಿಥಿಗಳನ್ನು ಸರ್ ಅವರ ಶ್ರೀಮತಿಯವರು ಮನೆಯ ಒಳಗೆ ಸ್ವಾಗತಿಸಿದರು. ಅಷ್ಟರಲ್ಲಿ ಪುರುಷೋತ್ತಮ ಸರ್ ನಿಧಾನವಾಗಿ ಒಳನಡೆದು ಬಂದು ಆಸೀನರಾದರು. ನಾವು ಮಾಧ್ಯಮಿಕ ಶಾಲೆಯಲ್ಲಿದ್ದಾಗ ನಮಗೆ ಸಮಾಜ ವಿಜ್ಞಾನ ವಿಷಯವನ್ನು ಪುರುಷೋತ್ತಮ ಮಾಸ್ತರು ಕಲಿಸುತ್ತಿದ್ದರು. ಅವರಿಂದ ಸ್ವಾತಂತ್ರ ಚಳುವಳಿಯ, ಸತ್ಯಾಗ್ರಹದ ಪಾಠಗಳನ್ನು ಬಲು ಸ್ವಾರಸ್ಯದಿಂದ ಕೇಳಿದ್ದೆವು. ಹೆಸರಿಗೆ ಅನ್ವರ್ಥಕ ದಂತೆ ಪುರುಷೋತ್ತಮ ಸರ್ ಎಂದೂ ಯಾವ ವಿದ್ಯಾರ್ಥಿಗಳಿಗೂ ಜೋರಾಗಿ ಗದರಿಸಿ ಬೈದವರಲ್ಲ ಇನ್ನೂ ಛಡಿಯಿಂದ ಹೊಡೆಯುವ ಪ್ರಶ್ನೆಯೇ ಇಲ್ಲ.ನಾವು ೭ ನೇ ಇಯತ್ತೆಯಲ್ಲಿದ್ದಾಗ ಪುರುಷೋತ್ತಮ ಸರ್ ನಮ್ಮ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು. ಆಗ ಒಂದು ದಿನ ಯಾವುದೋ ಒಬ್ಬ ಮಾಸ್ತರು ನಮ್ಮ ಕ್ಲಾಸಿನ ಕೆಲವು ವಿದ್ಯಾರ್ಥಿಗಳಿಗೆ ಅನಗತ್ಯವಾಗಿ (ನಮ್ಮ ಪ್ರಕಾರ) ತುಂಬಾ ಕಠೋರ ದಂಡ ಶಿಕ್ಷೆ ನೀಡಿದ್ದರು. ಪುರುಷೋತ್ತಮ ಸರ್ ಹೇಳಿದ ಸ್ವಾತಂತ್ರ್ಯ ಚಳುವಳಿಯ/ ಸತ್ಯಾಗ್ರಹದ ಪಾಠಗಳಿಂದ ಪ್ರೆರೇಪಿತರಾದ ನಾವು ಆ ದಂಡ ನೀಡಿದ ಮಾಸ್ತರರ ವಿರುದ್ಧ ಘೋಷಣೆಗಳನ್ನು ಕೂಗಿದ್ದೆವು.ಅಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಮಾಸ್ತರರ ವರ್ತನೆಯನ್ನು ವಿರೋಧಿಸಿದ ಪ್ರಸಂಗ ಕೇಳರಿಯದ ವರ್ತನೆಯಾಗಿತ್ತು. ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಪುರುಷೋತ್ತಮ ಸರ್ ನಮ್ಮಲ್ಲಿ ಕೆಲವು ಲೀಡರ್ ಗಿರಿ ವಹಿಸಿದ ವಿದ್ಯಾರ್ಥಿಗಳನ್ನು(ನನ್ನನ್ನೂ ಸೇರಿ) ಶಾಲೆಯ ಮುಖ್ಯೋಪಾಧ್ಯಾಯರ ಕೋಣೆಗೆ ಕರೆಯಿಸಿಕೊಂಡು ಇನ್ನೂಮ್ಮೆ ಈ ತರಹ ಶಿಕ್ಷಕರ ವಿರುದ್ಧ ಬಂಡಾಯದ/ಉದ್ಧಟತನದ ವರ್ತನೆಯನ್ನು ಮಾಡುವುದಿಲ್ಲ ಎಂದು ತಪ್ಪೊಪ್ಪಿಗೆ/ಕ್ಷಮಾಪಣೆಯ ಪತ್ರ ಬರೆಯಿಸಿಕೊಂಡು ಮತ್ತೂ ನಮ್ಮ ವಿರುದ್ಧ ದೂರಿದ್ದ ಶಿಕ್ಷಕರಿಗೂ ಮಕ್ಕಳೊಂದಿಗೆ ಕಠೋರವಾಗಿ ವರ್ತಿಸವಂತೆ ಸಮಾಧಾನದ ಮಾತನ್ನು ಹೇಳಿ ವಿಷಯವನ್ನು ಜಾಸ್ತಿ ಬೆಳೆಸದೇ(ನಮ್ಮ ಪಾಲಕರ ಗಮನಕ್ಕೆ ತರದೇ) ಅಲ್ಲಿಯೇ ಪರಿಸಮಾಪ್ತಿ ಮಾಡಿ ತಮ್ಮ ಪ್ರೀತಿಯ ವಿದ್ಯಾರ್ಥಿಗಳನ್ನು ಕಾಪಾಡಿದ್ದರು ಎಂಬ ಮಾತನ್ನು ನಾನು ಇಂದಿಗೂ ನೆನಪು ಹಾರಿಲ್ಲ.
ಆಗ ತಾರುಣ್ಯದಲ್ಲಿದ್ದ ಪುರುಷೋತ್ತಮ ಸರ್ ಅವರ ಮುಖದ ತೇಜ ಈಗಿನ ೮೦ ರ ಆಸುಪಾಸಿನ ಇಳಿ ವಯಸ್ಸಿನಲ್ಲಿ ಸ್ವಲ್ಪವೂ ಮಾಸದೇ ಇನ್ನೂ ಅನೇಕ ಪಟ್ಟು ಅಧಿಕವಾದಂತೆ ಗೋಚರಿಸಿತು. ಆದರೆ ಅವರ ದೇಹದ ಆಲಸ್ಯ , ಚಟುವಟಿಕೆಯಲ್ಲಿ ಸ್ವಲ್ಪ ಮಂದಗತಿ ಕಾಣಿಸಿತು.ಪ್ರಲ್ಹಾದನನ್ನು ತಕ್ಷಣ ಗುರುತು ಹಿಡಿದ ಪುರುಷೋತ್ತಮ ಸರ್, ಇವನ ಮನಿ ಇಲ್ಲೇ ಇದೆಯಂದರೆ, ವಿಶಾಲದತ್ತನನ್ನು ನೋಡಿ 'ಶ್ರಾದ್ಧದ ದಿನ ಭೇಟಿ ಮಾಡುವವ' ಎಂದು ನುಡಿದರು (ಸರ್ ಅವರ ತಂದೆಯ ಮತ್ತೂ ವಿಶಾಲದತ್ತನ ತಾಯಿಯವರ ಶ್ರಾದ್ಧದ ತಿಥಿ ಒಂದೇ ದಿನವಂತೆ). ಶಾಲಾ ದಿನಗಳ ನಂತರ ನಾನು ಪುರುಷೋತ್ತಮ ಸರ್ ಅನ್ನು ಇದೇ ಮೊದಲ ಸಲ ಭೇಟಿ ಮಾಡಿದ್ದರಿಂದ ನನ್ನ ಗುರುತು ಬೇಗ ಹತ್ತಲಿಲ್ಲ. ವಿಶಾಲದತ್ತ, ನಾನೀಗ ದೂರದ ಬೆಳಗಾವಿಯ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನ ಪ್ರಿನ್ಸಿಪಾಲ್/ಪ್ರೊಫೆಸರ್ ಆಗಿ ನಿವೃತ್ತನಾದ ವಿಷಯವನ್ನು ಸರ್ ಗೆ ತಿಳಿಸಿದ. ನಾವು ಭೇಟಿಯಾಗಲು ಬಂದು ಉದ್ದೇಶವನ್ನು ತಿಳಿಸಿ ತೆಗೆದುಕೊಂಡು ಹೋಗಿದ್ದ ಶಾಲನ್ನು ಹೊದಿಸಿ ಧಾರವಾಡ ಪೇಡಾ ಡಬ್ಬಿಯನ್ನು ಕೊಟ್ಟು ಗುರುಗಳ ಕಾಲಿಗೆ ಬಿದ್ದು ಆಶೀರ್ವಾದ ಪಡೆದೆವು. ಸರ್ ಅವರ ಶಿಸ್ತುಬದ್ಧ ನಿವೃತ್ತಿಯ ಜೀವನದ ದಿನಚರಿ, ಅತಿ ಶೃದ್ಧೆಯಿಂದ ಮಾಡುವ ನಿತ್ಯದ ದೇವರ ಪೂಜೆ ಪುನಸ್ಕಾರಗಳು,ತಪ್ಪದೇ ಪಾಲಿಸುವ ವೃತ ನಿಯಮಗಳು ಅವರನ್ನು ಕಾಡಿದ ಎರಡೆರಡು ಸ್ಟ್ರೋಕುಗಳಿಂದ ಹೇಗೆ ಪಾರು ಮಾಡಿದೆವು ಎಂಬುದನ್ನು ಅವರ ಶ್ರೀಮತಿಯವರಿಂದ ತಿಳಿದೆವು.ಅವರು ಆಗ್ರಹ ಪೂರ್ವಕ ನೀಡಿದ ಚಹಾಪಾನ ಮಾಡಿ ಹೋರಡಬೇಕೆಂದಾಗ ಪುರುಷೋತ್ತಮ ಸರ್ ನನ್ನನ್ನು ಗುರುತಿಸಿದವರಂತೆ "ಇವಾ ಭಾಳ ಹುಷಾರು" ಎಂದು ಉದ್ಗರಿಸಿದರು. ನಾವು ಮಾಸ್ತರ್ ರ ಆಶೀರ್ವಾದ ಪಡೆದು ಧನ್ಯತಾ ಭಾವದಿಂದ ಅವರ ಮನೆಯಿಂದ ಹೊರಬಿದ್ದೆವು.
ವಿಶಾಲದತ್ತನ ಪ್ಲ್ಯಾನಿನ ಪ್ರಕಾರ ನಮ್ಮ ಮುಂದಿನ ಸವಾರಿ ಶ್ರೀ ಏ.ಕೇ.ಪೂಜಾರೀ ಸರ್ ಮನೆಯಾಗಿತ್ತು. ನಗು ಮೊಗದ ಪೂಜಾರೀ ಸರ್ ನಮಗೆ ಶಾಲೆಯಲ್ಲಿ ಕಬ್ಬಿಣದ ಕಡಲೆಯಂದು ಮಕ್ಕಳು ಕಲಿಯಲು ಹೆದರುವ ಗಣಿತವನ್ನು ಸುಲಭವಾಗಿ ಹಾಗೂ ಬಹಳ ರಸವತ್ತಾಗಿ ಕಲಿಸುತ್ತಿದ್ದರು.ಅವರ ಕ್ಲಾಸಿನಲ್ಲಿ ಆಗಾಗ ತಿಳಿಹಾಸ್ಯದ ಪ್ರಸಂಗಗಳು ಇರುತ್ತಿದ್ದವು.ಅನೇಕ ಬಾರಿ ನಮ್ಮಲ್ಲಿ ಯಾರೋ ಒಬ್ಬರಿಂದ ಜೋಕುಗಳನ್ನೂ ಹೇಳಿಸುತ್ತಿದ್ದರು. ಹೀಗಾಗಿ ಇಡೀ ವರ್ಗದ ಹುಡುಗರೆಲ್ಲಾ ಇವರ ಕ್ಲಾಸಿನ ಹಾದಿಯನ್ನು ಎದಿರು ನೋಡುತ್ತಿದ್ದೆವು.
ನಾವು ಏ.ಕೇ.ಪೂಜಾರೀ ಮಾಸ್ತರ ಅವರ ಮನೆ ಬಾಗಿಲಿನ ಬೆಲ್ ಬಾರಿಸಿದಾಗ ಅವರು ಅದೇ ನಗು ಮೊಗದ ಆತ್ಮೀಯತೆಯಿಂದ ನಮ್ಮನ್ನು ಸ್ವಾಗತಿಸಿದರು. ನಮ್ಮ ಹಾಗೂ ಕ್ಲಾಸಿನ ಅನೇಕ ಮಿತ್ರರ ಕುಶಲೋಪರಿಯ ಬಗ್ಗೆ ವಿಚಾರಿಸಿ ಮಾಹಿತಿ ಪಡೆದರು. ಅವರೊಂದಿಗೆ ನಮ್ಮ ಕ್ಲಾಸಿನಲ್ಲಿನ ಕೆಲವು ಹಾಸ್ಯದ ಪ್ರಸಂಗಗಳ ಮೆಲುಕನ್ನು ಹಾಕಿದೆವು. ನಾವುಗಳು ಎಷ್ಟು ಬೇಡವೆಂದರೂ ಬಿಡದೇ ಚಹಾಪಾನ ಮಾಡಿಸಿದರು. ತಮ್ಮೂರು ಮೋತಕಪಲ್ಲಿಯ ಹನುಮಪ್ಪನ ಗುಡಿಯ ಬಗ್ಗೆ ವಿಚಾರಿಸಿದಾಗ ಪುಜಾರ ಸರ್, ಗುಡಿಯ ಜೀರ್ಣೋದ್ಧಾರದ ಬಗ್ಗೆ ಬಹಳ ಹೆಮ್ಮೆಯಿಂದ ವಿವರಿಸಿದರು. ನಾವು ಧಿಡೀರನೆ ಬಂದ ವಿಷಯವನ್ನು ತಿಳಿಸಿ ಅವರಿಗೆ ಶಾಲು ಹೊದಿಸಿ ಸನ್ಮಾಸಿದಾಗ ಅವರ ಕಣ್ಣಂಚಿನಲ್ಲಿ ಮೂಡಿದ ಆನಂದ ಭಾಷ್ಪಗಳು ನಮ್ಮನ್ನೂ ಭಾವುಕರನ್ನಾಗಿಸಿದವು. ನಂತರ, ವಿಶಾಲದತ್ತನಿಂದ ಅವರ ಶ್ರೀಮತಿಯವರ ಅನಾರೋಗ್ಯದ ಬಗ್ಗೆ ತಿಳಿದು ನನಗೆ ಸ್ವಲ್ಪ ಖೇದವೆನಿಸಿತು.
ಪೂಜಾರಿ ಸರ್ ಅವರನ್ನು ಪಕ್ಕದ ಮನೆಯ, ಶ್ರೀ ಪಿ.ಎನ್.ಜೋಶಿ ಸರ್ ( ನಮಗೆ ಕನ್ನಡದ ಪಾಠ ಹೇಳಿದ), ಬಗ್ಗೆ ವಿಚಾರಿಸಿದಾಗ,ಕೂಡಲೆ ಅವರನ್ನು ಫೋನಿನಲ್ಲಿ ಸಂಪರ್ಕಿಸಲು ಪ್ರಯತ್ನಿಸಿದರು.
ಜೋಶಿ ಸರ್ ಫೋನಿನಲ್ಲಿ ಸಿಗಲಿಲ್ಲ.ಆಗ ಗೋಡೆಯ ಮೇಲಿನ ಗಡಿಯಾರವನ್ನು ನೋಡಿದ ಪೂಜಾರೀ ಮಾಸ್ತರು ತಮ್ಮ ಯಂದಿನ ತಿಳಿ ಹಾಸ್ಯದ ಮಾತಿನಲ್ಲಿ "ಈಗ ಅವ ವೆಂಕಟೇಶ್ವರ ಗುಡ್ಯಾಗ ಗಾಯನ ಸೇವೆ ಮಾಡತಿರ್ತಾನ" ಎಂದು,ಕೂಡಲೇ ಪಿ.ಎನ್.ಜೋಶಿ ಮಾಸ್ತರ ಅವರ ಶ್ರೀಮತಿಯವರಿಗೆ ಫೋನಾಯಿಸಿ ಅವರ ಹಳೆಯ ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿದ್ದು ಪಿ.ಎನ್.ಜೋಶಿ ಸರ್ ಅವರನ್ನು ಭೇಟಿಯಾಗಲು ಕಾಯುತ್ತಿರುವ ವಿಚಾರ ತಿಳಿಸಿದರು. ಈ ನಡುವೆ ವಿಶಾಲದತ್ತನ ತಾಯಿಯವರು ತಪ್ಪದೇ ಪ್ರತೀ ತಿಂಗಳು ಶಾಲೆಗೆ ಬಂದು ವಿವಿಧ ಮಾಸ್ತರಗಳನ್ನು ಭೇಟಿಯಾಗಿ ಮಗನ ಶೈಕ್ಷಣಿಕ ಪ್ರಗತಿಯ ಬಗ್ಗೆ ಚರ್ಚಿಸುತಿದ್ದ ವಿಚಾರವನ್ನು ಪೂಜಾರಿ ಮಾಸ್ತರ್ ನೆನೆಸಿಕೊಂಡರು. ಕೆಲವೊಂದು ಸಾರಿ ವಿಶಾಲದತ್ತನ ತಾಯಿಯವರು ಕೈಯ್ಯಲ್ಲಿ ವ್ಯಾನಿಟಿ ಬ್ಯಾಗನ್ನು ಹಿಡಿದು ಶಾಲೆಯನ್ನು ಪ್ರವೇಶಿದಾಗ ನಮ್ಮಲ್ಲಿ ಕೆಲವು ಸಹಪಾಠಿಗಳು ಕ್ಲಾಸಿನಿಂದ ಓಡಿ ಹೋದ ಪ್ರಸಂಗಗಳನ್ನು ನಾವೂ ನೆನೆದೆವು. ಇರಲಿ, ಸ್ವಲ್ಪ ಸಮಯದಲ್ಲಿ ಜೋಶಿ ಸರ್ ಗುಡಿಯಿಂದ ವಾಪಸ್ ಮನೆಗೆ ಬಂದ ಸಮಾಚಾರ ಬಂದಮೇಲೆ ನಮ್ಮೊಂದಿಗೆ ಪೂಜಾರೀಸರೂ ಅವರ ಮನೆಗೆ ಬಂದರು.
ನಾವು ಮಾಧ್ಯಮಿಕ ಶಾಲೆಯಲ್ಲಿದ್ದಾಗ ಪಿ.ಎನ್.ಜೋಶಿ ಸರ್ ತಮ್ಮ ಬಿ.ಎ. ಬಿ.ಎಡ್. ಪದವಿಯೊಂದಿಗೆ ನೂತನ ವಿದ್ಯಾಲಯಕ್ಕೆ ಹೊಸದಾಗಿ ನೇಮಕ ಗೊಂಡಿದ್ದರು. ವಿಶಾಲವಾದ ಹಣೆಯ ಸೌಮ್ಯ ಸ್ವಭಾವದ ಅಂದಿನ ಅವರ ಮುಖ ಛಾಯೆಯಲ್ಲಿ ಇಂದಿಗೂ ನನಗೆ ಬಹಳ ವ್ಯತ್ಯಾಸ ಕಾಣಲಿಲ್ಲ. ಆದರೆ ಅಂದಿನ ಕ್ರಾಪ್ ಕೇಶವಿನ್ಯಾಸ ಬದಲಾಗಿ ಧಾರ್ಮಿಕ ಶಿಕಾ ಕಾಣಿಸಿತು.ಅಂದು ಅವರ ಕೈಯಲ್ಲಿ ರಾರಾಜಿಸುತ್ತಿದ್ದ ಸ್ಟೇನ್ಲೆಸ್ ಸ್ಟೀಲ್ ಫ್ರೇಮಿನ ದೊಡ್ಡ ಡಯಲ್ ನ ಎಚ್.ಎಮ್.ಟಿ. ವಾಚು ಇಂದು ಅವರ ಕೈಯಲ್ಲಿ ಕಾಣಲಿಲ್ಲ. ಬಹುಶಃ ಸರ್ ಅವರ ನಿವೃತ್ತಿಯೊಂದಿಗೆ ಅದರ ಅವಶ್ಯಕತೆಯೂ ಕಡಿಮೆಯಾಗಿ ಅದೂ ತನ್ನ ಸೇವೆಯಿಂದ ರಿಟಾಯರ್ ಆಗಿರಬಹುದು. ಪಿ.ಎನ್.ಜೋಶಿ ಸರ್ ಬಹಳ ಉತ್ಸಾಹದಿಂದ ಭಾವಪೂರ್ಣವಾಗಿ ಹಾಡಿ ಕಲಿಸಿದ "ಬಾರಿಸು ಕನ್ನಡ ಡಿಂಡಿಮವ..." ಗೀತೆಯನ್ನು ನಾವ್ಯಾರೂ ಇಂದೂ ಮರೆತಿಲ್ಲ.ಅದರಂತೆ ಜೋಶಿ ಸರ್ ಮತ್ತು ಎಮ್.ಜಿ.ಕುಲಕರ್ಣಿ ಸರ್ ನಮಗೆಲ್ಲ ಅಂದು ಒತ್ತಾಯ ಪೂರ್ವಕವಾಗಿ ಬಾಯಿ ಪಾಠ ಮಾಡಿಸಿದ "ಪ್ರಥಮಾ ಉ, ದ್ವಿತೀಯಾ ಅನ್ನು, ತ್ರಿತಿಯಾ ಇಂದ...."ಎಂಬ ಕನ್ನಡ ವಿಭಕ್ತಿ ಪ್ರತ್ಯಯಗಳನ್ನು ಇಂದೂ ನಮ್ಮ ನಾಲಿಗೆಯ ತುದಿಯಲ್ಲಿಯೇ ಇವೆ. ಪೂಜಾರಿ ಸರ್ ಮತ್ತೂ ಜೋಶಿ ಸರ್ ಗಳ ಶಿಕ್ಷಕವೃತ್ತಿಯ ಆರಂಭದ ದಿನಗಳ ಹಾಗೂ ಅವರ ಜೊತೆಗಿನ ನಮ್ಮ ವಿದ್ಯಾರ್ಥಿ ದಿನಗಳ ಸವಿ ನೆನಪುಗಳನ್ನು ಮೆಲುಕು ಹಾಕುತ್ತಿರುವಾಗ ಜೋಶಿ ಸರ್ ಅವರ ಶ್ರೀಮತಿಯವರು ಒಳಗಿನಿಂದ ತಾವು ಮಾಡಿದ ದೀಪಾವಳಿಯ ಫರಾಳದ ತಾಟನ್ನು ತಂದರು.
ತಾವು ಬಿ.ಎಡ್. ಪರೀಕ್ಷೆ ಪಾಸಾಗಿದ್ದರೂ ಟಿ.ಸಿ.ಎಚ್.ಮಾಡದೇ ಮಾಧ್ಯಮಿಕ ಶಾಲೆಯ ಮಾಸ್ತರ್ ನೌಕರಿ ಸೇರಿದ್ದರಿಂದ ಅರ್ಹತೆಗಿಂತ ತಡವಾಗಿ ಪ್ರಮೋಷನ್ ಪಡೆದರೂ ಶಿಕ್ಷಕ ವೃತ್ತಿಯ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿ ಸಮಾಧಾನದಿಂದ ನಿವೃತ್ತಿಹೊಂದಿ ನಂತರ ಮನೆಯ ಹತ್ತಿರವಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದ ಆಗು ಹೋಗುಗಳಲ್ಲಿ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಜೋಶಿ ಸರ್ ನಮಗೆಲ್ಲಾ ಆದರ್ಶಪ್ರಾಯರು.
ಪಿ.ಎನ್.ಜೋಶಿ ಮಾಸ್ತರ್ ರನ್ನು ಸನ್ಮಾನಿಸಿ ಅವರ ಆಶೀರ್ವಾದ ಪಡೆದು ನಾವು ತೆರಳಿದ್ದು ಹತ್ತಿರವೇ ಇದ್ದ ನಮ್ಮ ಹೈಸ್ಕೂಲಿನ ಇಂಗ್ಲಿಷ್ ಮಾಸ್ತರ್ ಆದ ಶ್ರೀ ಭಾದ್ರೀ ಸರ್ ಅವರ ಮನೆಗೆ.
ಬೆಳಗಾವಿಯ ಆರ್.ಪಿ.ಡಿ. ಕಾಲೇಜಿನಿಂದ ೧೯೭೦ ರ ದಶಕದಲ್ಲಿ ಬಿ.ಎ.ಪದವಿಯನ್ನು ಪಡೆದು ಇಂಗ್ಲೀಷ್ ಶಿಕ್ಷಕರಾಗಿ ಕಲಬುರ್ಗಿಯ ನೂತನ ವಿದ್ಯಾಲಯದಲ್ಲಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ ಕೆಲವು ವರ್ಷ ಭಾದ್ರೀ ಸರ್ ಸಂಗಮೇಶ್ವರ ನಗರದಲ್ಲಿ ನಮ್ಮ ಮನೆಯ ಪಕ್ಕದಲ್ಲಿ ವಾಸವಾಗಿದ್ದರು. ಯಾವಾಗಲೂ ನೀಟಾಗಿ ಇಸ್ತ್ರಿಮಾಡಿದ ಇನ್ ಶರ್ಟ್ ಪ್ಯಾಂಟನೊಂದಿಗೆ ಶಾಲೆಗೆ ಬರುತ್ತಿದ್ದ ಭಾದ್ರೀ ಸರ್ ಕ್ಲಾಸಿಗೆ ಎಂಟ್ರಿ ಕೊಡುತಿದ್ದದ್ದು ಡಸ್ಟರ್ ದಿಂದ ಕ್ಲಾಸಿನ ಬಾಗಿಲಿಗೆ ಎರಡು ಬಾರಿ ನಾಕ್ ಮಾಡಿಯೇ.ಕ್ಲಾಸುಗಳಲ್ಲಿ ಇಂಗ್ಲೀಷ್ ಪ್ರೋಸ/ ಪೊಯಂ ಪಾಠಗಳನ್ನು ಬಹಳ ಅರ್ಥಗರ್ಭಿತವಾಗಿ/ರಸವತ್ತಾಗಿ ಹೇಳಿದರೆ ಇಂಗ್ಲೀಷ್ ಗ್ರಾಮರ್ ಅನ್ನು ಅಷ್ಟೇ ಗಾಂಭೀರ್ಯದಿಂದ ಕಲಿಸುತ್ತಿದ್ದರು.ಭಾದ್ರೀ ಸರ್ ಜಾಸ್ತಿಯಾಗಿ ಹೈಸ್ಕೂಲಿನ ಇಂಗ್ಲೀಷ್ ಮಾಧ್ಯಮದ ವರ್ಗಗಳಿಗೆ ಕಲಿಸುತ್ತಿದ್ದರು. ನಮ್ಮ ಹೈಸ್ಕೂಲಿನಲ್ಲಿ ಇಂಗ್ಲೀಷ್ ವಿಷಯವನ್ನು ರಸವತ್ತಾಗಿ ಕಲಿಸುತ್ತಿದ್ದ ಭಾದ್ರೀ ಮತ್ತು ಬಿ.ಆರ್.ಕೆ. ಸರ್ ಗಳ ಮಧ್ಯೆ ಒಂದು ರೀತಿಯಲ್ಲಿ ಧನಾತ್ಮಕ ಪೈಪೋಟಿ ಇರುತಿತ್ತು.
ನಾವು ಭಾದ್ರೀ ಸರ್ ಅವರ ಮನೆ ಬಾಗಿಲು ನಾಕ್ ಮಾಡಿವ ಹೊತ್ತಿಗೆ ಸಮಯ ತಡ ಸಂಜೆಯ ಒಂಬತ್ತರ ಮೇಲಾಗಿತ್ತು. ಮನೆ ಬಾಗಿಲನ್ನು ತೆಗೆದು ನಮ್ಮನ್ನು ಒಳ ಬರಮಾಡಿಕೊಂಡಾಗ ನಮಗರಿವಾದದ್ದು ಭಾದ್ರೀ ಸರ್ ತಮ್ಮ ನಿವೃತ್ತಿಯ ನಂತರ ಕೆಲಸದಲ್ಲಿರುವ ಕಾಲೇಜಿನ ವಿದ್ಯಾರ್ಥಿಗಳಿಗೆ ಎಕ್ಸ್ಟ್ರಾ ಲೆಕ್ಟರ ತೆಗೆದುಕೊಂಡು ಅದೇ ತಾನೆ ಮನೆಸೇರಿದ್ದರೆಂದು. ಐದು ದಶಕಗಳ ಪರ್ಯಂತ ನಿರಂತರ ಇಂಗ್ಲೀಷ್ ವಿಷಯವನ್ನು ಸಾವಿರಾರು ವಿದ್ಯಾರ್ಥಿಗಳಿಗೆ ಕಲಿಸಿದರೂ ಇಂದಿಗೂ ಇಂಗ್ಲೀಷ್ ಭಾಷೆಯನ್ನು ಕಲಿಸುವ ಅವರ ಉತ್ಸಾಹ ಸ್ವಲ್ಪವೂ ಮಾಸದೇ ಇರುವುದು ನೋಡಿ ನಾವು ಮೂವರೂ ಬೆಪ್ಪನೆ ಬೆರಗಾದೆವು. ಅವರ ಎಂದಿನ ಸೌಮ್ಯ ಸ್ವಭಾವ, ಸರಳ ಸಜ್ಜನಿಕೆ, ಪ್ರತೀ ಮಾತಿನಲ್ಲಿಯ ಗಾಂಭೀರ್ಯ ನಮ್ಮನ್ನು ಮಂತ್ರ ಮುಗ್ಧರನಾಗಿಸಿದವು. ಅವರು ನಮ್ಮೆಲ್ಲರ ಔದ್ಯೋಗಿಕ ಜೀವನದ ಪ್ರಗತಿಯನ್ನು ತಿಳಿದು ಆನಂದ ವ್ಯಕ್ತ ಪಡಿಸಿದರಲ್ಲದೇ, ನಮ್ಮ ಮತ್ತು ನಮ್ಮ ಅಣ್ಣಂದಿರ ಬ್ಯಾಚಿನ ಅನೇಕ ವಿದ್ಯಾರ್ಥಿಗಳ ಬಗ್ಗೆ ವಿಚಾರಿಸಿದರು. ನಾವು ಬಂದು ವಿಷಯ ತಿಳಿಸಿ ಶಾಲು ಹೊದಿಸಿ ಸನ್ಮಾಸಿದಾಗ ಅವರ ಮುಖದಲ್ಲಿ ಒಂದುರೀತಿಯ ಸಾರ್ಥಕತೆಯ ಭಾವ ಒಡಮೂಡಿತ್ತು.
ಭಾದ್ರೀ ಮಾಸ್ತರ್ ರಿಂದ ಆಶೀರ್ವಾದ, ಹಾರೈಕೆ ಪಡೆದು ಅವರ ಮನೆಯಿಂದ ನಾವು ಹೊರ ಬಂದಾಗ ರಾತ್ರಿಯ ೧೦ ಘಂಟೆಯ ಮೇಲಾಗಿತ್ತು.
ಕಲಬುರ್ಗಿಯ ನೂತನ ವಿದ್ಯಾಲಯದ ೧೯೮೨ ನೇ ವರ್ಷದ ೧೦ನೇ ತರಗತಿಯ ಬ್ಯಾಚಿನ ವಿದ್ಯಾರ್ಥಿಗಳ ಪ್ರತಿನಿಧಿಗಳಾಗಿ ನಾವು ಮೂವರು ಅಂದು ಭೇಟಿಯಾದ ಪ್ರತಿಯೊಬ್ಬ ಮಾಸ್ತರ್ ರಿಂದ ಆಶೀರ್ವಾದ ಜೊತೆಗೆ ಜೀವನದ ಪಾಠ ಒಂದನ್ನು ಕಲಿತ ಸಾರ್ಥಕತೆ ನಮ್ಮದಾಗಿತ್ತು.
-ಜಯಂತ ಕಿತ್ತೂರ
Awesome writing Jayant, I loved reading your blog and thanks for rekindling the school memories.
ಪ್ರತ್ಯುತ್ತರಅಳಿಸಿAnother great article 👏👌 Thank you very much for giving me an opportunity to meet our favorite teachers. All the three teachers have taught me and left unique impression on me. Keep writing 🙏👌
ಪ್ರತ್ಯುತ್ತರಅಳಿಸಿInteresting..!!
ಪ್ರತ್ಯುತ್ತರಅಳಿಸಿExcellent writing Sir,
ಪ್ರತ್ಯುತ್ತರಅಳಿಸಿAfter reading your school memories my mind went to my highschool days. Thanks for sharing your stories. Please keep writing 🙏🙏