ಚಾಳೀಸ್ ದೇತೊ

ಬೆಳಗಾವಿಯ ಪ್ರತಿಷ್ಠಿತ ಜಿ.ಐ.ಟಿ. ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲನ ಪಾತ್ರದಲ್ಲಿ, ಶತಮಾನದ ಮಹಾಮಾರಿ ಕೋವಿಡ್ ನಂತರದ ದಿನಗಳಲ್ಲಿ, ಕಾರ್ಯನಿಮಿತ್ತ ಅನೇಕ ಸಲ ಬೆಂಗಳೂರು ಮತ್ತೂ ಇತರೆಡೆ ಪ್ರವಾಸಮಾಡುವ ಅನಿವಾರ್ಯತೆ ಇರುತಿತ್ತು. ಪ್ರತೀಸಲವೂ ನಮ್ಮ ಕಾಲೇಜಿನ ಕಾರಿನ ನಿಗದಿತ ಡ್ರೈವರ್ ನಮ್ಮ ಮನೆಯಿಂದ ರೈಲು/ವಿಮಾನ ನಿಲ್ದಾಣಕ್ಕೆ ಬಿಡುವ ಮತ್ತೂ ನಿಲ್ದಾಣದಿಂದ ಮನೆಗೆ ತಲುಪಿಸುವ ಕಾರ್ಯ ತಪ್ಪದೇ ವಿಧೇಯತೆಯಿಂದ ನಿರ್ವಹಿಸುತ್ತಿದ್ದ.

ಅಂದು ರಾತ್ರಿ ೯ ಘಂಟೆಗೆ, ಹೊಸದಾಗಿ ಪ್ರಾರಂಭವಾದ ಬೆಳಗಾವಿ - ಬೆಂಗಳೂರು ಎಕ್ಸಪ್ರೆಸ್ ರೈಲುಗಾಡಿ ಹಿಡಿಯಲು ರೈಲ್ವೆ ಸ್ಟೇಶನ್ ಗೆ ಹೋಗುವದಿತ್ತು ಆದರೆ ಪ್ರತಿಸಾರಿ ಸ್ಟೇಶನ್ ಗೆ ಬಿಟ್ಟುಬರಲು ಬರುತ್ತಿದ್ದ ಕಾರಿನ ಡ್ರೈವರ್ ಸಂಜೆ ೮ ಘಂಟೆಗೆ ಫೋನ್ ಮಾಡಿ ತನ್ನ ಮಗನು ಸಂಜೆ ಆಟವಾಡುವಾಗ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದು ಅವನನ್ನು ಕರೆದುಕೊಂಡು ಆಸ್ಪತ್ರೆಗೆ ತೆರಳಿರುವದಾಗಿ ಹಾಗೂ ತನ್ನ ಬದಲು ಬೇರೆ ಡ್ರೈವರ್ ನ ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತಿರುವದಾಗಿ ತಿಳಿಸಿದನು. ಬದಲಿ ಡ್ರೈವರ್ ನ ವ್ಯವಸ್ಥೆ ಮಾಡುವುದನ್ನು ನಿಲ್ಲಿಸಿ ಮಗನ ಆರೈಕೆಯ ಕಡೆಗೆ ಗಮನಕೊಡೆಂದು ಹೇಳಿ ಫೋನ್ ಕೆಳಗಿಟ್ಟೆ. ನನ್ನ ಫೋನ್ ಸಂಭಾಷಣೆಯನ್ನು ಆಲಿಸಿದ ಮುದ್ದಿನ ಮಗಳು ಅದೇ ತಾನೆ ನಾವು ಖರೀದಿಸಿದ ಹೊಸ SUV ಕಾರಿನಲ್ಲಿ ನನ್ನನ್ನು ರೈಲು ನಿಲ್ದಾಣಕ್ಕೆ ಬಿಟ್ಟು ಬರಲು ತಯಾರಾದಳು. ನನ್ನ ಶ್ರೀಮತಿಯಾದರೋ ರಾತ್ರಿ ಹೊತ್ತು ಹೆಣ್ಣುಮಕ್ಕಳು ಹೊಸ ಕಾರನ್ನು ನಡೆಸಿಕೊಂಡು ಒಬ್ಬಳೇ ರೈಲು ನಿಲ್ದಾಣದಿಂದ ಮನೆಗೆ ಬರುವುದಕ್ಕೆ ಸುತಾರಾಂ ಒಪ್ಪಲಿಲ್ಲ. ಇನ್ನು ಮಗಳು ಸ್ಕೂಟರ್ ನಲ್ಲಿ ಬಿಟ್ಟುಬರಬೇಕೆಂದು ಅದನ್ನು ಹೊರತೆಗೆದರೆ ನಮ್ಮ ದುರದೃಷ್ಟಕ್ಕೆ ಅದರ ಗಾಲಿಯಲ್ಲಿ ಗಾಳಿ ಇರಲಿಲ್ಲ.

ಅನಿವಾರ್ಯವಾಗಿ ಒಂದು ದಿನದ ಮಟ್ಟಿಗೆ ಪ್ರವಾಸಕ್ಕಾಗಿ ಹೊರಟ ನನ್ನ ಬ್ಯಾಗು ಚಿಕ್ಕದು ಮತ್ತು ಹಗುರವಾಗಿತ್ತು. ಇನ್ನು ತಡಮಾಡದೇ ಬ್ಯಾಗನ್ನು ಹೆಗಲಿಗೇರಿಸಿ ನಡೆದು ಮೇನ್ ರೋಡಿನ ಬಸ್ ಸ್ಟಾಪ್/ಆಟೋ ಸ್ಟಾಂಡಿಗೆ ನಾನು ಬಂದರೆ ಕೇವಲ ಒಂದೆ ಒಂದು ಆಟೋ ಬಕಪಕ್ಷಿಯಂತೆ ನಿಂತಿತ್ತು. ಓಲಾ/ಉಬರ್ ಇಲ್ಲದ ಕರ್ನಾಟಕದ ಎರಡನೇ ರಾಜ್ಯಧಾನಿ, ಗಡಿನಾಡು ಬೆಳಗಾವಿಯಲ್ಲಿ, ಘನ ಸರ್ಕಾರ ಮಹಿಳೆಯರಿಗೆ ಬಿಟ್ಟೀ ಬಸ್ ಭಾಗ್ಯ ನೀಡಿದ ಮೇಲಂತೂ ಆಟೋದವರು ಹೇಳಿದ್ದೇ ದರ.

ಹೊತ್ತಾದರೆ ರೈಲು ತಪ್ಪುವ ಭಯದಿಂದ, ಸಿಟಿ ಬಸ್ಸಿಗಾಗಿ ಜಾಸ್ತಿ ಕಾಯದೇ, ರೈಲ್ವೆ ಸ್ಟೇಶನ್ ಗೆ ಎಷ್ಟು ಎಂದು ಕನ್ನಡದಲ್ಲಿ ಆ ಆಟೋದವನಿಗೆ ಕೇಳಿದೆ. ಅವನು ಮರಾಠಿ ಯಲ್ಲಿ "ಐಷಿ" (೮೦) ಎಂದ. ಕೇವಲ ಎರಡು ಕಿಲೋಮೀಟರ್ ದೂರದ ಹಾದಿಗೆ ಅಷ್ಟು ಹಣ ಕೊಡಲು ಮನಸ್ಸಾಗಲಿಲ್ಲ.ನಾನು ಮತ್ತೆ ಕನ್ನಡದಲ್ಲಿ ಐವತ್ತು ಕೊಡುತ್ತೇನೆ ಎಂದೆ. ಅದಕ್ಕೆ ಆ ಮರಾಠಿ ಆಟೋದವ "ಪನ್ನಾಸ ದ್ಯಾ" (೫೦ ಕೊಡಿ) ಅಂದ.

ಬೆಳಗಾವಿಯಲ್ಲಿದ್ದೂ ಅವನ ಕನ್ನಡ ಮಾತಾಡಲು/ವ್ಯವಹರಿಸಲು ಕಲಿಯದ ಮೊಂಡುತನವೋ ಅಥವಾ ಮರಾಠೀ ದುರಭಿಮಾನವೋ ತಿಳಿಯಲಿಲ್ಲ. ನನ್ನ ಕನ್ನಡಾಭಿಮಾನವನ್ನು ಬಿಟ್ಟು ಚೌಕಶಿ ಬುಧ್ಧಿಇಂದ "ಚಾಳೀಸ ದೇತೊ" (೪೦ ಕೊಡುತ್ತೇನೆ) ಅಂದೆ. ಅವನು ಆಗುವದಿಲ್ಲ ಅಂತ ಕೈ ಸನ್ನೆ ಮಾಡಿದ.

ಅಷ್ಟರಲ್ಲಿ ಅಪರೂಪಕ್ಕೆ ಸಿಟಿ ಬಸ್ ಬರುವುದು ಕಾಣಿಸಿತು. ಕೈಮಾಡಿ ಬಸ್ಸು ಹತ್ತಿ ಖಾಲಿ ಇರುವ ಕಿಟಕಿಯ ಪಕ್ಕ ಕೂತು ಕಂಡಕ್ಟರ್ ಗೆ ರೈಲ್ವೆ ಸ್ಟೇಶನ್ ಅಂತ ಹೇಳಿ ೨೦ರ ನೋಟು ಕೊಟ್ಟೆ. ಆತ ಟಿಕೆಟನೊಂದಿಗೆ ೧೫ ರೂ. ಹಿಂತಿರುಗಿಸಿದ.

ನಾನು ಆ ಮರಾಠಿ ಆಟೋದವನನ್ನು ಕಿಟಕಿ ಇಂದ ಹಿಂತಿರುಗಿ ನೋಡಿ ಮನಸ್ಸಿನಲ್ಲಿ ಕನ್ನಡದ ನಗು ಬೀರಿದೆ ....


- ಜಯಂತ ಕಿತ್ತೂರ

ಕಾಮೆಂಟ್‌ಗಳು

  1. ಸರ್, ನೀವು ರಿಕ್ಷಾ ಚಾಲಕನ ಬಗ್ಗೆ ಬರೆದ ಲೇಖನ, ನಾವು ಅನೇಕ ಸಾರಿ ಎದುರಿಸಿದ ಅನುಭವಗಳನ್ನೂ ಪ್ರತಿಬಿಂಬಿಸುತ್ತದೆ. ಬಹಳ ಚಂದ ಬರೆದಿರಿ....

    ಪ್ರತ್ಯುತ್ತರಅಳಿಸಿ
  2. ಅನುಭವದ ಅನುಭೂತಿ. ಮೂವತ್ತೈದು ಲಾಭವಾದರೆ, ಮಗಳಿಂದ ಕಾರ್ ಮೂಲಕ ಮೊದಲ ಬಾರಿ ಡ್ರಾಪ್ ತೆಗೆದುಕೊಳ್ಳುವುದನ್ನು ತಪ್ಪಿಸಿ ಕೊಂಡಿದ್ದು ಹೆಚ್ಚು ನೆನಪಲ್ಲಿ ದಾಖಲಾಗಿದೆ.

    ಪ್ರತ್ಯುತ್ತರಅಳಿಸಿ
  3. ಕನ್ನಡಾಭಿಮಾನ ....ಖುಷಿಕೊಡ್ತು

    ಪ್ರತ್ಯುತ್ತರಅಳಿಸಿ
  4. ನೀವು ಈ ಲೇಖನ ಪ್ರಾಂಶುಪಾಲ ಅಂತ ಪ್ರಾರಂಭ ಮಾಡಿದ್ದು ಕಂಡು ಬಹುತೇಕ Internal marks ಅಂದುಕೊಂಡಿದ್ದೆ ಸರ.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನನ್ನ ಬಿಳಿ ತಲೆಯ ಬಣ್ಣಗಳು ...(ಭಾಗ-೧)

ದಿಖಾವೇಪೆ ಮತ್ ಜಾವೋ ಅಕಲ್ ಲಗಾವೋ...

ಇವಾ ಯಾವೂರವಾ...