ಶೇಂಗಾ ಚಿಕ್ಕಿ ...

ನಾನು ನೂತನ ವಿದ್ಯಾಲಯ ಹೈಸ್ಕೂಲಿನ ೮ನೇ ತರಗತಿಯಲ್ಲಿದ್ದಾಗ, ಬಿಂದುಮಾಧವ ಸರ್ ನಮಗೆ ವಿಜ್ಞಾನ ವಿಷಯವನ್ನು ಕಲಿಸುತ್ತಿದ್ದರು. ಅಂದು ಮಾಸ್ತರ್ ಜೀವಶಾಸ್ತ್ರದ ಪಾಠ ಮಾಡುತ್ತಾ ಸಸ್ಯ ಮತ್ತು ಪ್ರಾಣಿಗಳಲ್ಲಿಯ ದ್ವಿನಾಮ /ದ್ವಿಪದ ನಾಮಕರಣದ ವ್ಯವಸ್ಥೆಯನ್ನು ವಿಜ್ಞಾನಿ ಕ್ಯಾರೊಲಸ್ ಲಿನ್ನಿಯಸ್ ಪರಿಚಯಿಸಿದರು. ಈ ವ್ಯವಸ್ಥೆಯ ಪ್ರಕಾರ, ಪ್ರತಿಯೊಂದು ಜೀವಿಯು ನನ್ನ ಎರಡು ಹೆಸರುಗಳು - ಕುಲದ ಹೆಸರು ಮತ್ತು ಜಾತಿಯ ಹೆಸರು ಹೊಂದಿರುತ್ತದೆ.ಜೀವಿಗಳ ಕುಲದ ಹೆಸರು ಮತ್ತು ಜಾತಿಯ ಹೆಸರನ್ನು ಒಟ್ಟಿಗೆ ಬರೆಯಲಾಗಿ ಅದರ ವೈಜ್ಞಾನಿಕ ಹೆಸರು ಎಂದು ಕರೆಯಲಾಗುತ್ತದೆ. ಈ ವ್ಯವಸ್ಥೆಯಲ್ಲಿ ಮಾನವನಿಗೆ ಹೋಮೋ ಸೇಪಿಯನ್ಸ್ ಎಂದೂ ಜೇನುನೊಣಕ್ಕೆ ಅಪಿಸ್ ಮೆಲ್ಲಿಫೆರಾ ಎಂದು ದ್ವಿನಾಮ ನಾಮಕರಣ ಮಾಡಲಾಗಿದೆ  ಎಂದು ವಿವರಿಸಿದ್ದರು.

ಮರುದಿನ, ನಮ್ಮ ಬಿಂದುಮಾಧವ ಮಾಸ್ತರು, ಭೌತಶಾಸ್ತ್ರದ ಯಾವುದೋ ಒಂದು ಪಾಠವನ್ನು ಹೇಳುತ್ತಿದ್ದರು. ಹಿಂದಿನ ಸಾಲಿನ ಕೊನೆಯ ಬೆಂಚಿನ ಕಾಯಂ ಗಿರಾಕೀಗಳಾದ ಕಿಟ್ಯಾ ಮತ್ತು ಮಲ್ಲ್ಯಾ(ಕೃಣಾರಾವ ಕುಲಕರ್ಣಿ ಮತ್ತು ಮಲ್ಲಿಕಾರ್ಜುನ ದೇವನೂರ) ಗುಸು ಗುಸು ಅಂತ ಮಾತನಾಡುತ್ತಿದ್ದರು. ಬಹಳ ಕಡಕ್ ಮಾಸ್ತರರು ಎಂದು ಖ್ಯಾತರಾದ ಬಿಂದುಮಾಧವ ಸರ್ ಅಂದೇಕೋ ಬಹಳ ಶಾಂತವಾಗಿ ಇಬ್ಬರಿಗೂ ತಮ್ಮ ಹತ್ತಿರ ಬರಲು ಆದೇಶಿಸಿದರು.ಇಬ್ಬರೂ ಸ್ವಲ್ಪ ಆಶ್ಚರ್ಯ ಹಾಗೂ ಗಾಬರಿ ಮಿಶ್ರಿತ ಮುಖಚರ್ಯೆಯಿಂದ ಮಾಸ್ತರ್ ಸನಿಹ ತಪ್ಪಿತಸ್ಥರ ಹಾಗೆ ಬಂದು ನಿಂತರು. ಮಾಸ್ತರರು, ಅವರನ್ನು ನಮ್ರತೆಯಿಂದ ಕರೆದ ಹಾವ ಭಾವ ದಿಂದಾಗಿ ಕ್ಲಾಸಿನ ಎಲ್ಲಾ ಹುಡುಗರಿಗೂ ಆಶ್ಚರ್ಯವೂ ಆಶ್ಟರ್ಯ.ಮಾಸ್ತರರು ಮಾತ್ರ, ಸಮಾಧಾನ ದಿಂದ ನಾನು ನಿನ್ನೆ ಕ್ಲಾಸಿನಲ್ಲಿ ವಿವರಿಸಿದ ದ್ವಿನಾಮ ನಾಮಕರಣ ಎಂದರೆ ಏನು ಎಂದು ಅವರಿಬ್ಬರಿಗೆ ಪ್ರಶ್ನಿಸಿದರು. ಮಲ್ಯಾ, ಜಾಸ್ತಿ ವಿಚಾರ ಮಾಡದೇ, ತನಗೆ ಗೊತ್ತಿಲ್ಲವೆಂದು ಪ್ರಾಮಾಣಿಕ ಉತ್ತರ ನೀಡಿದರೆ, ನಮ್ಮ ಕಿಟ್ಯಾ ತನ್ನ ಚಾಲಾಕಿತನ ಮತ್ತು ಸಾಮಾನ್ಯ ಜ್ಞಾನದ ಮಿಶ್ರಣದಿಂದ, ಕೇಳಿದ ಪ್ರಶ್ನೆಯಯಲ್ಲಿ ತನ್ನದೇ ಆದ ತರ್ಕ ಮಾಡಿ, "ಪಾಲಕರು ತಮ್ಮ ಮಗನಿಗೆ ಶಾಲೆಯಲ್ಲಿ 'ರಾಮ' ಎಂದು ಹೆಸರು ನೊಂದಾಯಿಸಿರುತ್ತಾರೆ ಆದರೆ ಮನೆಯಲ್ಲಿ 'ಚಿನ್ನ/ರನ್ನ/ಪುಟ್ಟ' ಎಂದು ಪ್ರೀತಿಯಿಂದ ಕರೆಯುತ್ತಾರೆ.ಇದಕ್ಕೆ ದ್ವಿನಾಮ ನಾಮಕರಣ ಎನ್ನುತ್ತಾರೆ" ಎಂದು ಉತ್ತರಿಸಿದ.ಅಂದು ಏಕೋ ಶಾಂತ ಮೂರ್ತಿಯಂತಿದ್ದ ಮಾಸ್ತರರ ಸಿಟ್ಟು ನೆತ್ತಿಗೇರಿತು, ಇಬ್ಬರ ಮುಖಗಳು ಬಾತು ಮಾರುತಿಯ ಮುಖಗಳಾಗಿದ್ದವು!!!,ಇರಲಿ.

ನಮ್ಮ ಕಿಟ್ಯಾ, ಅಂದು ಹೇಳಿದ ಮಾತಿನಲ್ಲಿ ಸ್ವಲ್ಪ ತಥ್ಯವಿದೆಯಂದು ನನಗನಿಸುತ್ತದೆ. ನಮ್ಮ ಪಾಲಕರ ತಲೆಮಾರಿನ ಪ್ರತೀ ಮನೆಗಳಲ್ಲಿ ೬-೮ ಮಕ್ಕಳುಗಳು ಇರುವುದು ಸಾಮಾನ್ಯವಾಗಿತ್ತು ಹಾಗೂ ಆಗ ಸಹಜವಾಗಿ, ದೇವರ ಹೆಸರುಗಳಾದ ರಾಮ, ಕೃಷ್ಣ, ನಾರಾಯಣ, ಪ್ರಹ್ಲಾದ ಗಳನ್ನೇ ಮಕ್ಕಳಿಗೆ ಇಡುವುದು ರೂಢಿಯಲ್ಲಿತ್ತು. ಮೊಮ್ಮಕ್ಕಳ ಅಂತಹ ಹೆಸರುಗಳು ಅನೇಕ ಸಲ ತಮ್ಮ ಪತಿರಾಯರ ಹೆಸರುಗಳಾದ್ದರಿಂದ, ಮುಜುಗರ ತಪ್ಪಿಸಲು ಮನೆಯಲ್ಲಿಯ ಅಜ್ಜಿಯರು, 'ಕಿಟ್ಟಿ ,ನಾನಿ' ಎಂದು ಕರೆಯುತ್ತಿದ್ದರೆ, ಮಗುವಿನ ತಾಯಿ ' ಚಿನ್ನ,ರನ್ನ,' ಎಂದು ಕರೆಯುವದು ಸಾಮಾನ್ಯವಾಗಿತ್ತು. ಕಾಲಾಂತರದಲ್ಲಿ ಮನೆಯಲ್ಲಿನ ಮಕ್ಕಳ ಸಂಖ್ಯೆಯು ಗಣನೀಯವಾಗಿ ಕ್ಷೀಣಿಸಿರುವದನ್ನೂ ಮತ್ತೂ ಮಕ್ಕಳಿಗೆ ಭಾವನಾತ್ಮಕ ಹೆಸರುಗಳಾದ ಆನಂದ, ಸಂತೋಷ,ಉಲ್ಲಾಸ ಇಲ್ಲವೆ ದೇವರ ಆರಾಧನೆಯ ಪೂಜಾ,ಆರತಿ,ಅಕ್ಷತಾ, ಪ್ರಸಾದ ಮುಂತಾದ ಹೆಸರುಗಳನ್ನು ಪಾಲಕರು ಇಟ್ಟಿರುವುದನ್ನು ನೋಡಬಹುದು. ಅದೇ ತರಹ ಮನೆಯಲ್ಲಿ ಪ್ರೀತಿಯಿಂದ ಬೇಬಿ, ಪುಟ್ಟು, ಛೋಟು, ಮುನ್ಯಾ ಮುಂತಾಗಿ ಕರೆಯುವುದು ಸಾಮಾನ್ಯವಾಗಿ ಪ್ರಚಲಿತವಾದವು. ಆದರೆ ಇತ್ತೀಚಿನ ದಿನಗಳ ತಂದೆ ತಾಯಂದಿರು, ತಮಗೆ ಹುಟ್ಟುವ ಒಂದು ತಪ್ಪಿದರೆ ಎರಡು ಮಕ್ಕಳಿಗೆ ಎಂದೂ ಯಾರೂ ಕೇಳಿರದ (ಬಹಳ ಅಪರೂಪದ) ವಿಚಿತ್ರ ಹೆಸರುಗಳನ್ನು ಇಡುತ್ತಾರೆ, ಅವೂ ಎರಡೇಎರಡು ತಪ್ಪಿದರೆ ಮೂರು ಅಕ್ಷರಗಳ ಹೆಸರುಗಳು ,ಅದರಲ್ಲಿ ಮೊದಲಿನ ಅಕ್ಷರ ಗಂಡನ ಹೆಸರನ ಮೊದಲ ಅಕ್ಷರ ಮತ್ತು ಎರಡನೆಯ/ಕಡೆಯ ಅಕ್ಷರ ತಾಯಿಯ ಹೆಸರಿನ ಮೊದಲ/ಕಡೆಯ ಅಕ್ಷರಗಳ  ಕಾಂಬಿನೇಷನ್ ಆಗಿರುತ್ತವೆ. ಇನ್ನು, ನಾವು ಯಾರಾದರೂ ಆ ಹೆಸರಿನ ಅರ್ಥವನ್ನು ಕೇಳುವ ಧೈರ್ಯ ಮಾಡಿದರೆ, ಅದು ಆಫ್ರಿಕಾ ಇಲ್ಲವೇ ದಕ್ಷಿಣ ಅಮೇರಿಕಾದ ಯಾವುದೋ ಒಂದು ಬುಡಕಟ್ಟು ಜನಾಂಗದ ದೇವತೆಯ ಹೆಸರು ಎಂದು ಸಮಜಾಯಿಷಿ ನೀಡುತ್ತಾರೆ!!!. ಅಂತಹ ಆ ಹೆಸರುಗಳನ್ನು ಹಳೆಯ ಅಜ್ಜಿ ತಾತಂದಿರು ಬಿಡಿ, ತಮ್ಮ ಸ್ವಂತ ಅತ್ತೆ ಮಾವಂದಿರಿಗೆ ಕರೆಯಲು ಕಷ್ಟವೆಂದು ಅರಿತೋ/ ಅರಿಯದೆಯೋ, ಇಲ್ಲಾ ತಮ್ಮ ಮಕ್ಕಳ ಮೇಲಿನ ಅದಮ್ಯ ಪ್ರೀತಿಯಿಂದಲೋ, ಮನೆಯಲ್ಲಿ ಬಂಟೀ,ಬಬ್ಲಿ,ಚಿಳ್ಳು,ಪಿಲ್ಲೂ ಎಂದು ಕರೆಯುವುದುಂಟು. ನನ್ನ ಅಣ್ಣನ ಮಗಳು ತನ್ನ ಪ್ರೀತಿಯ ಇಬ್ಬರು ಮಕ್ಕಳಿಗೆ ಕುರುಕಲು ತಿಂಡಿಗಳಾದ ಕುಕ್ಕೀ,ಚಿಕ್ಕೀ ಎಂದು ಮನೆಯಲ್ಲಿ ಕರೆಯುವುದುಂಟು. ನನಗೆ ಈ ಚಿಕ್ಕೀ ಇಂದಿಗೂ ಬಾಯಲ್ಲಿ ನೀರೂರಿಸುವ ಸಿಹಿ ವಸ್ತು. ನನ್ನನ್ನು ಚಿಕ್ಕಂದಿನಿಂದ ಬಲ್ಲವರು ಇಂದಿಗೂ ಪ್ರೀತಿಯಿಂದ ಚಿಕ್ಕೀ ಜಯಂತ ಅಂತ ಕರೆಯುವುದುಂಟು.ಇದಕ್ಕೆ ಕಾರಣ ಚಿಕ್ಕಿಯ ಮೇಲಿನ ನನ್ನ ಅದಮ್ಯ ಪ್ರೀತಿ.

ನಮ್ಮ ತಂದೆಯವರು ಕುಟುಂಬ ಸಮೇತ ಕಲಬುರ್ಗಿಯ ಸಂಗಮೇಶ್ವರ ನಗರದಲ್ಲಿ ನೆಲೆಸಿದ ಆರಂಭಿಕ ದಿನಗಳಲ್ಲಿ, ಮನೆಯಲ್ಲಿ ಕಿರಿಯ ಮಗನಾದ ನನಗಿನ್ನೂ ಹಣದ ವಿವಿಧ ನಾಣ್ಯಗಳ ಮತ್ತೂ ರುಪಾಯಿ ನೋಟುಗಳ ಮೌಲ್ಯ ಮತ್ತು ವ್ಯತ್ಯಾಸ ಅರಿಯದ ನಾಲ್ಕು ವರ್ಷ ವಯಸ್ಸಿರಲಿಕ್ಕೆ ಸಾಕು. 

ಒಂದು ದಿನ, ಪಕ್ಕದ ಮನೆಯ ಗೆಳೆಯನ ತಂದೆಯವರು ಅವನೊಂದಿಗೆ ನನಗೂ ನಮ್ಮ ಮನೆಯ ಹತ್ತಿರವೇ ಇದ್ದ ಕಿರಾಣಿ ಅಂಗಡಿಯಲ್ಲಿ ಶೇಂಗಾ ಚಿಕ್ಕಿ ಕೊಡಿಸಿದ್ದರು. ಮೊದಲ ಬಾರಿಗೆ ತಿಂದ ಚಿಕ್ಕೀಯ ರುಚಿ ನನಗೆ ಬಹಳ ಹಿಡಿಸಿತ್ತು. ನನಗೆ ಮತ್ತೆ ಚಿಕ್ಕೀ ತಿನ್ನಬೇಕೆಂಬ ಬಯಕೆ ಆದಾಗ ನನ್ನ ಗೆಳೆಯ ಮನೆಯಲ್ಲಿಂದ ಹಣ ತಂದು ಅಂಗಡಿಯಲ್ಲಿ ಕೊಟ್ಟರೆ ಮತ್ತೆ ಇಬ್ಬರೂ ಚಿಕ್ಕೀ ತಿನ್ನಬಹುದೆಂದ. ಆಗ ನನಗೆ ತಿಳಿದ ವಿಷಯ ಅಂದ್ರೆ ಶೇಂಗಾ ಚಿಕ್ಕಿ ಕೇವಲ ಅಂಗಡಿಯಲ್ಲಿ ಕಾಸು ಕೊಟ್ಟಾಗ ಮಾತ್ರ ಸಿಗುವ ರುಚಿಕರವಾದ ವಸ್ತುವೆಂದು. ನನಗೆ ಚಿಕ್ಕೀ ತಿನ್ನುವ ತೀವ್ರತೆ ಇಷ್ಟಾಗಿತ್ತೆಂದರೆ ನಾನು ನಮ್ಮ ಮನೆಯಲ್ಲಿ ತಾಯಿಯವರು ಬಳಕೆಗೆ ಎಂದು ಸ್ವಲ್ಪ ಎತ್ತರದ ಮಾಡದಲ್ಲಿ ಇಟ್ಟ ಹಣದ ಡಬ್ಬಿಯಲ್ಲಿ ಯಾರೂ ನೋಡದ ಸಮಯದಲ್ಲಿ ಕೈಹಾಕಿ ಸಿಕ್ಕ ಐದು ರುಪಾಯಿಯ ನೋಟನ್ನು ಮುಚ್ಚಿಟ್ಟುಕೊಂಡು ಗೆಳೆಯನೊಂದಿಗೆ ಮನೆಯ ಹತ್ತಿರವಿದ್ದ ಆ ಅಂಗಡಿಗೆ ತೆರಳಿದೆ. 

ನನಗಿಂತಲೂ ಒಂದೆರಡು ವರ್ಷ ದೊಡ್ಡನಾನಿದ್ದ ನನ್ನ ಗೆಳೆಯ ಅಂಗಡಿಯವನೊಂದಿಗೆ ವ್ಯವಹರಿಸಲು ಮುಂದಾಗಿ ನನ್ನಿಂದ ಆ ಐದು ರೂಪಾಯಿಯ ನೋಟನ್ನು ಪಡೆದು ಅಂಗಡಿಯವನ ಕೈಗಿತ್ತು ನಮಗೆ ಚಿಕ್ಕೀ ಕೊಡೆಂದು ಕೇಳಿದ. ಅಂಗಡಿಯ ಅಂಕಲ್ ಎಷ್ಟು ಚಿಕ್ಕಿ ಬೇಕೆಂದು ಕೇಳಿದಾಗ, ಆ ನೋಟಿಗೆ ಎಷ್ಟು ಬರುತ್ತದೆಯೋ ಅಷ್ಟು ಕೊಡೀ ಅಂದ. ಪ್ರಾಮಾಣಿಕ ಹಾಗೂ ಜವಾಬ್ದಾರಿಯುತ ಅಂಗಡಿಯ ಅಂಕಲ್ ನಮ್ಮಿಬ್ಬರ ಕೈಗಳಿಗೆ ನಾಲ್ಕಾರು ಚಿಕ್ಕೀಗಳನ್ನಿತ್ತು ಕಳಿಸಿದ. ನಾವು ಅವುಗಳನ್ನು  ಸವಿಯುತ್ತಾ ಎನೋ ಒಂದು ದೊಡ್ಡ ಸಾಧನೆ ಮಾಡಿದವರಂತೆ ಕುಣಿಯುತ್ತಾ ಇತರರೊಂದಿಗೆ ಆಟವಾಡಲು ತೆರಳಿದೆವು.

ಸ್ವಲ್ಪ ಹೊತ್ತಿನಲ್ಲಿ ನನ್ನ ಚಿಕ್ಕಕ್ಕ ನನ್ನನ್ನು ಹುಡುಕುತ್ತಾ ಆಟದ ಮೈದಾನಕ್ಕೆ ಬಂದು ನನ್ನನ್ನು ಕರೆದುಕೊಂಡು ತಕ್ಷಣ ಮನೆಗೆ ಬರಲು ಅಮ್ಮ ಕಳಿಸಿರುವದಾಗಿ ತಿಳಿಸಿದಳು.

ಅಕ್ಕನೊಂದಿಗೆ ಮನೆಗೆ ಬರುವಾಗ ಅಂಗಡಿಯ ಅಂಕಲ್ ನಮ್ಮ ಮನೆಗೆ ಬಂದು ಹೋದ ವಿಚಾರ ಅರಿತೆ. ಮನೆ ತಲುಪಿದಾಗ ಎಂದೂ ಕಾಣದ ಸಿಟ್ಟನ್ನು ನಮ್ಮಮ್ಮನ ಕಣ್ಣಲ್ಲಿ ಕಂಡು ನನಗೆ ಪರಿಸ್ಥಿತಿಯ ಗಂಭೀರತೆಯ ಅರಿವಾಯ್ತು.ಹಾಗೆ ನೋಡಿದರೆ, ನಮ್ಮಮ್ಮ ಮಕ್ಕಳನ್ನು ಬೈದು ಹೊಡೆದು ಬುದ್ಧಿ ಹೇಳಿರುವುದು ತೀರಾ ವಿರಳ. ನಾವುಗಳು ಬಹಳ ಹಟ ಮಾಡಿದಾಗ ಅಥವಾ ಹೇಳಿದ ಮಾತನ್ನು ಕೇಳದೇ, ಅಭ್ಯಾಸವನ್ನು ಸಮರ್ಪಕವಾಗಿ ಮಾಡದೇ ಇದ್ದಾಗ ಅವರು ಉಪಯೋಗಿಸುತ್ತಿದ್ದ ಬ್ರಹ್ಮಾಸ್ತ್ರ ವೆಂದರೆ..."ಈಗ ನಾನು ನಿನಗೆ ಏನನ್ನೂ ಹೇಳುವುದಿಲ್ಲ, ಸಂಜೆ ನಿಮ್ಮ ತಂದೆ ವಿಶ್ವವಿದ್ಯಾಲಯದಿಂದ ಮನೆಗೆ ಬರಲಿ, ಆಗ ಅವರಿಗೆ ಹೇಳುವೆ" ಎಂಬುದು. ಹಾಗೆ ನೋಡಿದರೆ,ನಾವುಗಳು ತಂದೆಯವರಿಂದ ಬೈಸಿಕೊಂಡು ಅಥವಾ ಹೊಡೆಸಿಕೊಂಡ ಪ್ರಸಂಗಗಳು ವಿರಳ. ಹಾಗೆ ತಂದೆಯವರಿಂದ ಅಕಸ್ಮಾತಾಗಿ ಬೈಸಿಕೊಂಡಾಗ, ಮಾತಿನ ಪೆಟ್ಟಿಗಿಂತಲೂ ಆದ ಅಪಮಾನದ ನೋವು ನಮ್ಮಲ್ಲಿ ತೀಕ್ಷ್ಣವಾಗಿ ಇರುತಿತ್ತು. 

ನಮ್ಮಮ್ಮ,ಪಂಚತಂತ್ರದ, ಭಾಗವತದ, ಐತಿಹಾಸಿಕ ಕಥೆಗಳನ್ನೋ ಅಥವಾ ಅವಳೇ ನಮಗಾಗಿ ರಚಿಸಿದ ಹಟಮಾರಿ ಮುದ್ದಣ್ಣ ನ ಕಥೆಯನ್ನು ಹೇಳಿ ತಿದ್ದಿ ತೀಡಿ ನಮ್ಮನ್ನು ಬೆಳೆಸಿದವಳು. ಆದರೆ, ಅಂದು ನಾನು ಮಾಡಿದ ಕಳ್ಳತನದ ತಪ್ಪಿಗೆ ನಮ್ಮಮ್ಮನ ಕೈಯಿಂದ ಮೈಮೂರ ಹೊಡೆತ ತಿಂದಿದ್ದೆ.ನನ್ನ ಅಸಹಾಯಕ ಪರಿಸ್ಥಿತಿಯನ್ನು ನೋಡಿ ತಾಳಲಾರದೇ, ನನ್ನನ್ನು ಹೊಡೆತಗಳಿಂದ ಬಿಡಿಸಿಕೊಳ್ಳಲು ಧಾವಿಸಿದ ದೀದಿ (ನನ್ನ ಚಿಕ್ಕಕ್ಕ)ನೂ ನಾಲ್ಕು ಏಟು ತಿಂದಿದ್ದಳು.ನಮ್ಮಿಬ್ಬರನ್ನೂ ಕೈಕಾಲು ಕಟ್ಟಿ ಮಂಚದ ಕೆಳಗೆ ತಳ್ಳಿದಳು ನಮ್ಮಮ್ಮ.ನಾನು ಮಾಡಿದ ಕಳ್ಳತನದ ಅಪರಾಧಕ್ಕೆ ನನಗೆ ತಕ್ಕ ಶಿಕ್ಷೆಯಾದರೇ,ಅಪರಾಧಿಯ ಪಕ್ಷವಹಿಸಿ ಬಚಾಯಿಸಲು ಪ್ರಯತ್ನಿದ್ದಕ್ಕೆ ನನ್ನಕ್ಕನಿಗೂ ಶಿಕ್ಷೆಯಾಗಿತ್ತು.ಸಂಜೆ ನಮ್ಮ ತಂದೆಯವರು ವಿಶ್ವವಿದ್ಯಾಲಯದಿಂದ ಬಂದು ತಾಯಿಯವರಿಂದ ಎಲ್ಲ ವಿವರ ಪಡೆದರು.ನಂತರ ನನ್ನಣ್ಣನಿಗೆ ನಮ್ಮಿಬ್ಬರನ್ನೂ ಆ ಬಂಧನ ದಿಂದ ಬಿಡಿಸಲು ಹೇಳಿ, ಈ ತರಹದ ಅಪರಾಧ ನಾನು ಎಂದೂ ಮಾಡುವುದಿಲ್ಲವೆಂದು ನಮ್ಮಮ್ಮನಲ್ಲಿ ಬೇಡಿಕೊಂಡು ಅವರಿಂದ ಕ್ಷಮಾಯಾಚನೆ ಪಡೆಯತಕ್ಕದ್ದೆಂದು ಆದೇಶಿಸಿದ್ದರು. 

ನಾವಿಬ್ಬರು ಬಂಧನದಿಂದ ಬಿಡುಗಡೆ ಹೊಂದಿ ಕೈ ಕಾಲು ತೊಳೆದುಕೊಂಡು ದೇವರ ಕೋಣೆಗೆ ತೆರಳಿ ಭಗವಂತನ ಮುಂದೆ ನಿಂತು ಪ್ರಮಾಣ ಮಾಡಿ ತಾಯಿಯವರ ಕಾಲಿಗೆ ಬಿದ್ದಿದ್ದೆವು. ನಂತರ ನಮ್ಮ ತಾಯಿ ನನ್ನಕ್ಕನ ಕೈಗೆ ೧೦ ಪೈಸೆ ಕೊಟ್ಟು ನನಗೆ ನನ್ನ ಪ್ರೀತಿಯ ಚಿಕ್ಕೀ ಕೊಡಿಸಿ ಕೊಂಡು ಬರಲು ಕಳಿಸಿದ್ದರು.

ಆ ಪ್ರಸಂಗವೇ ನನ್ನ ಬಾಲ್ಯದ ದಿನಗಳಲ್ಲಿ ಅಮ್ಮನಿಂದ ಹೊಡೆತ ತಿಂದ ಮೊದಲನೇಯ ಮತ್ತೂ ಕಡೆಯ ಘಟನೆಯಾಗಿದ್ದೂ, ನನ್ನ ಬಾಲ್ಯದ ಚಿಕ್ಕೀಯ ಚಿಕ್ಕಪ್ರಸಂಗ ನಮಗೆಲ್ಲ ಜೀವನದ ದೊಡ್ಡ ಪಾಠವನ್ನು ಕಲಿಸಿತು. 

ಮೊನ್ನೆ,ನನ್ನ ೩೫ ವರ್ಷಗಳ ಸುದೀರ್ಘ ಇಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್ ನೌಕರಿಯ ನಿವೃತ್ತಿಯ ದಿನದಂದು ಬೆಳ್ಳಂಬೆಳಗ್ಗೆ ಬೆಂಗಳೂರಿಂದ ಬೆಳಗಾವಿಯ ನನ್ನ ಮನೆಗೆ ಸರ್ಪ್ರೈಸ್ ಆಗಿ ಬಂದಿಳಿದ ನನ್ನ ಪ್ರೀತಿಯ ದೀದಿ, ನನಗಾಗಿ ತಂದ ಚಿಕ್ಕೀ ಪಾಕೀಟನ್ನು ಉಡುಗೊರೆಯಾಗಿ ನನ್ನ ಕೈಗಿತ್ತಾಗ ನಮ್ಮಿಬ್ಬರ ಕಣ್ಣೂ ತೇವವಾಗಿದ್ದವು.


-ಜಯಂತ ಕಿತ್ತೂರ 


ಕಾಮೆಂಟ್‌ಗಳು

  1. Beautifully written and articulated. The stories heard during childhood have been put up by you nicely pappa

    ಪ್ರತ್ಯುತ್ತರಅಳಿಸಿ
  2. ಬಹಳ ಚೆನ್ನಾಗಿದೆ ಸರ್ . ಜೀವನದ ಪ್ರತಿಯೊಂದು ಘಟನೆಗಳು ಪಾಠವನ್ನು ಕಲಿಸುತ್ತವೆ .

    ಪ್ರತ್ಯುತ್ತರಅಳಿಸಿ
  3. ಹಳೆಯ ನೆನಪನ್ನು ಹಸಿರು ಮಾಡಿತು ನಿನ್ನ ಲೇಖನ. ,🤗
    ಓದುತ್ತಾ ಓದುತ್ತಾ ಮತ್ತೊಮ್ಮೆ ಕಣ್ಣಾಲಿಗಳು ತುಂಬಿ ಬಂದವು........
    ನಿನ್ನ ಪ್ರೀತಿಯ ದೀದೀ

    ಪ್ರತ್ಯುತ್ತರಅಳಿಸಿ
  4. ಶೇಂಗಾ ಚಿಕ್ಕಿ ಬಾಲ್ಯದಿಂದ ಹಿಡಿದು ಹಲ್ಲು ಗಟ್ಟಿಯಾಗಿರೋ ವಯೋ ವೃದ್ಧರು ಕೂಡ ಇಷ್ಟ ಪಡುವ ಸಿಹಿ ತಿನಿಸು. ಆದರೆ ಬಾಲ್ಯದಲ್ಲಿ ಸಿಹಿ ಚಿಕ್ಕಿ ಹಿಂದೆ ಕಹಿ ಪ್ರಸಂಗ ಒಂದಿರುವದನ್ನು ಯಾವದೇ ಹಿಂಜರಿಕೆಯಿಲ್ಲದೆ ಹಂಚಿ ಕೊಂಡಿದ್ದು ಮುದ ನೀಡಿತು.

    ಪ್ರತ್ಯುತ್ತರಅಳಿಸಿ
  5. ಸರಳ ಆಗಿ ಓದಬಹುದಾದ ಉತ್ತಮ ಲೇಖನ ತುಂಬಾ ನೆನಪುಗಳು ತೇಲಿ ಹೋದವು

    ಪ್ರತ್ಯುತ್ತರಅಳಿಸಿ
  6. ಶೇಂಗಾ ಚಿಕ್ಕಿ ಕಥೆ ನಮಗೂ ಬಾಯಲ್ಲಿ ನೀರೂರಿತು. ನಿಮ್ಮ ಲೇಖನ ಬಹಳ ಸುಂದರವಾಗಿ ಮೂಡಿ ಬಂದಿದೆ. ಧನ್ಯ ವಾದಗಳು. ನಮಸ್ಕಾರ 🙏💐

    ಪ್ರತ್ಯುತ್ತರಅಳಿಸಿ
  7. ಶೇಂಗಾ ಚಿಕ್ಕಿ ಕಥೆ ಲೇಖನ ಬಹಳ ಸುಂದರವಾಗಿ ಮೂಡಿ ಬಂದಿದೆ, ಧನ್ಯ ವಾದಗಳು 👌🙏💐

    ಪ್ರತ್ಯುತ್ತರಅಳಿಸಿ
  8. ಸ್ಮೃತಿ ಗಂಧವತಿ ..... ನೆನಪುಗಳು ಗಂಧ ತೀಡಿಧಂಗ...

    ಪ್ರತ್ಯುತ್ತರಅಳಿಸಿ
  9. ಸ್ಮೃತಿ ಗಂಧವತಿ.... ನೆನಪುಗಳು ಗಂಧ ತೀಡಿಧಂಗ

    ಪ್ರತ್ಯುತ್ತರಅಳಿಸಿ
  10. Interesting story, had similar incident with me during my days but instead chikki, it was Sugar candy for me

    ಪ್ರತ್ಯುತ್ತರಅಳಿಸಿ
  11. Nice one ☝️ This story reminded me the teaching style of Bindu Madhav sir. He was a great teacher.. he always asked us not to write anything while he is teaching. Many of his classes I still remember.

    ಪ್ರತ್ಯುತ್ತರಅಳಿಸಿ
  12. ಆತ್ಮೀಯ ಸರ್, ನಿಮ್ಮ ಬಾಲ್ಯದ ಘಟನೆಗಳ ಸುಂದರ ಬರಹಗಳಿಂದ ನಾನು ನನ್ನ ಬಾಲ್ಯವನ್ನು ಆಗಾಗ್ಗೆ ನೆನಪಿಸಿಕೊಳ್ಳುತ್ತೇನೆ. ನಿಮ್ಮ ಪ್ರತಿಯೊಂದು ಸಣ್ಣ ಬರಹಗಳನ್ನು ಓದಿ ತುಂಬಾ ಸಂತೋಷವಾಯಿತು.

    ಪ್ರತ್ಯುತ್ತರಅಳಿಸಿ
  13. ಸರ್, ಈ ನಿಮ್ಮಬರಹವು ತುಂಬಾ ಚೆನ್ನಾಗಿದೆ ಮತ್ತು ಈಗಿನ ಪೀಳಿಗೆಗೆ ಒಂದು ಒಳ್ಳೆಯ ಸಂದೇಶವಾಗಿದೆ.

    ಪ್ರತ್ಯುತ್ತರಅಳಿಸಿ
  14. ಸರ್
    ಬಾಲ್ಯದ ಘಟನೆ, ಆಗಿನ ಕೌಟುಂಬಿಕ ವ್ಯವಸ್ಥೆ, ಸರಿ ತಪ್ಪುಗಳನ್ನು ಅರಿತು ಬೆಳೆದ ಪರಿ - ಎಲ್ಲವೂ ಚೆನ್ನಾಗಿ ಮೂಡಿ ಬಂದಿದೆ.

    ಪ್ರತ್ಯುತ್ತರಅಳಿಸಿ
  15. Sir,
    Interesting story, had similar incident with me during my childhood days but instead of chikki, it was Roasted Channa's for me.
    Still my mother remember this incident 😀😀😀

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನನ್ನ ಬಿಳಿ ತಲೆಯ ಬಣ್ಣಗಳು ...(ಭಾಗ-೧)

ದಿಖಾವೇಪೆ ಮತ್ ಜಾವೋ ಅಕಲ್ ಲಗಾವೋ...

ಇವಾ ಯಾವೂರವಾ...