ಐಸ್ಕ್ರೀಮ್ ನ ಮಹಿಮೆ
ವಿದ್ಯಾಕಾಶಿ ಎಂದೇ ಹೆಸರುವಾಸಿಯಾದ ಧಾರವಾಡದಲ್ಲಿ ಮೂರು ವರ್ಷ ಬಿಎಸ್ಸೀ ನಂತರ ಒಂದು ವರ್ಷ ಬಿಎಡ್ ಪದವಿ ಪಡೆದು ನನಗೂ ನಮ್ಮ ತಾಯಿಯಂತೆ ಆದರ್ಶ ಶಿಕ್ಷಕಿಯಾಗುವ ಆಸೆ, ಆದರೆ ಅದೇ ತಾನೆ ಟಿಸಿಎಚ್ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ ತಂದೆಯವರಿಗೆ ಒಂದು ಒಳ್ಳೆಯ ಮನೆತನ ನೋಡಿ ನನ್ನ ಮದುವೆ ಮಾಡಿ ತಮ್ಮ ಜವಾಬ್ದಾರಿಯನ್ನು ಕಡಿಮೆ ಮಾಡಿಕೊಳ್ಳುವ ತವಕ. ಅಂತೂ ಮನೆಯ ಹತ್ತಿರದ ಒಂದು ಶಾಲೆಯಲ್ಲಿ ಪಾಠ ಮಾಡಲು ಪ್ರಾರಂಭಿಸಿದ ಕೆಲವೇ ತಿಂಗಳುಗಳಲ್ಲಿ ದೂರದ ಗುಲ್ಬರ್ಗಾ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರ ಮನೆತನದ ಸಂಬಂಧವನ್ನು ತಂದೆಯವರು ಪ್ರಸ್ತಾಪಿಸಿದರು.ಅವರದು ದೊಡ್ಡ ಕೂಡು ಕುಟುಂಬ. ಮನೆಯ ಮಕ್ಕಳು ಸೊಸೆಯಂದಿರು ಕನಿಷ್ಠವೆಂದರೂ ಸ್ನಾತಕೊತ್ತರ ಪದವಿಧರರು.ವಿಶೇಷ ವೆಂದರೆ ಮೂರೂ ಗಂಡು ಮಕ್ಕಳು ಕ್ರಮವಾಗಿ ಡಿಗ್ರೀ ಕಾಲೇಜು /ಮೆಡಿಕಲ್ ಕಾಲೇಜು/ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರುಗಳು ಎಂದೆಲ್ಲಾ ವಿವರಿಸಿ ಶಿಫಾರಸ್ಸು ಮಾಡಿದರು.
ಅಂತೂ ನನ್ನ ಶಿಕ್ಷಕಿಯ ವೃತ್ತಿ ಕೆಲವೇ ತಿಂಗಳುಗಳಲ್ಲಿ ಸಮಾಪ್ತಿ ಹೊಂದಿ, ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕನೊಂದಿಗೆ ಮದುವೆಯಾಗಿ ಅತೀ ಬಿಸಿಲೂರು ಎಂಬ ಖ್ಯಾತಿಯ ಗುಲ್ಬರ್ಗಾ ಸೇರಿದೆ. ಮನೆಯ ಹಿರಿಯ ಸೊಸೆ, ನಗರದ ಪ್ರತಿಷ್ಠಿತ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ನಾನೂ ಅವರ ಶಾಲೆಯಲ್ಲಿ ಇಲ್ಲವೆ ಮನೆ ಸನಿಹದ ರೋಟರಿ ಸಂಸ್ಥೆಯ ಶಾಲೆಯಲ್ಲಿ ಟೀಚರ ಕೆಲಸ ಸೇರಿಕೊಂಡು ನನ್ನ ಶಿಕ್ಷಕಿಯ ವೃತ್ತಿಯನ್ನು ಪುನಃ ಆರಂಭಿಸಬೇಕೆಂಬ ಆಸೆಯನ್ನು ಪತಿದೇವರಲ್ಲಿ ನಿಧಾನವಾಗಿ ವ್ಯಕ್ತಪಡಿಸಿದೆ. ಮೊದಲು ಹೊಸ ಊರು ಪರಿಸರಕ್ಕೆ ಹೊಂದಿಕೊಂಡು ಒಂದೆರಡು ವರ್ಷ ಹಾಯಾಗಿರು ಆಮೇಲೆ ನೋಡಿದರಾಯಿತು ಎಂದು ನನ್ನನ್ನು ಸಮಝಾಯಿಸಿದರು.
ಕಲಬುರ್ಗಿಯ ಮೊದಲನೆಯ ಬೇಸಿಗೆಯ ಕಾವು ತಾಳಲಾರದೇ ನಾನು ಇಡೀ ಜೀವನವನ್ನು ಅಲ್ಲಿ ಹೇಗೆ ಸಾಗಿಸುವುದು ಎಂಬ ಚಿಂತೆಯಲ್ಲಿ ಇರುವಾಗ ನನ್ನ ಮನೆಯವರಿಗೆ ಧಿಡೀರನೆ ಬೆಳಗಾವಿಯ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ನೌಕರಿ ಸಿಕ್ಕು ನಾವಿಬ್ಬರು ನಮ್ಮ ಪುಟ್ಟ ಕಂದಮ್ಮನೊಂದಿಗೆ ಬೆಳಗಾವಿಯಲ್ಲಿ ಸಂಸಾರ ಹೂಡಿದೆವು.
ಮಲೆನಾಡಿನ ಸೆರಗಿನಲ್ಲಿರುವ ಬೆಳಗಾವಿ, ಅತೀ ಮಳೆಯ ತಂಪೂರು. ಧಾರವಾಡದಿಂದ ಭೌಗೋಳಿಕವಾಗಿ ಹತ್ತಿರವಿದ್ದರೂ ಸಾಂಸ್ಕೃತಿಕವಾಗಿ ದೂರದ ಪುಣೆ ಶಹರಕ್ಕೆ ಹತ್ತಿರವಿದೆ. ಮೂಲತಃ ಬೆಳಗಾವಿಯವರಾದ ನನ್ನ ಗಂಡನಿಗೆ ಮರಾಠಿ ಭಾಷೆ ಮತ್ತು ಸಂಸ್ಕೃತಿಯ ಸಂಪರ್ಕ ಇದ್ದ ಕಾರಣ ಅವರು ಬೇಗನೆ ಹೊಸ ಪರಿಸರಕ್ಕೆ ಹೊಂದಿಕೊಂಡರು. ಆದರೆ ಅಚ್ಚು ಕನ್ನಡ ನಾಡಿನವಳಾದ ನನಗೆ ಮರಾಠಿ ವಗ್ಗಲ್ಲಿಲ್ಲ. ಹೊಸ ನಗರ, ಭಾಷೆ , ಸಂಸ್ಕೃತಿಗಳಿಗೆ ನಿಧಾನವಾಗಿ ಹೊಂದಿಕೊಳ್ಳುವ ಪ್ರಯತ್ನಮಾಡತೊಡಗಿದೆ.
ಸಂಸಾರದ ಜವಾಬ್ದಾರಿ ನಿರ್ವಹಿಸುವಲ್ಲಿ, ಪುಟ್ಟ ಮಗಳ ಆಟೂಟಗಳನ್ನು ನೋಡಿಕೊಳ್ಳುವುದರ ಮಧ್ಯೆ ಶಿಕ್ಷಕಿಯಾಗುವ ನನ್ನ ಕನಸು ನನಸಾಗುವ ಲಕ್ಷಣಗಳು ನಿಧಾನವಾಗಿ ಮಾಸತೊಡಗಿದವು. ಆದರೆ ಮುದ್ದಿನ ಮಗಳನ್ನು ಚೆನ್ನಾಗಿ ಬೆಳೆಸಿ ಆದರ್ಶ ತಾಯಿಯಾಗುವ ಬಯಕೆಗಳು ಒಡಮೂಡತೊಡಗಿದವು. ನನ್ನ ಮಗಳಾದರೋ ಮನೆಯ ಕನ್ನಡದೊಂದಿಗೆ ಹೊರಗೆ ಮರಾಠಿಯನ್ನೂ ಮಾತನಾಡಲು ಬಹುಬೇಗ ಕಲಿತು ಬೆಳಗಾವಿಯ ಚುರುಕು ಹುಡುಗಿಯಾಗಿ ಬೆಳೆಯ ಹತ್ತಿದಳು. ನೋಡ ನೊಡುವದರಲ್ಲಿ ಮಗಳಿಗೆ ಮೂರು ವರ್ಷ ತುಂಬಿದವು.
ಪತಿರಾಯರು ಕಾಲೇಜಿನ ಸಹೋದ್ಯೋಗಿಗಳಲ್ಲಿ ವಿಚಾರಿಸಿ, ನಮ್ಮ ಮನೆಯ ಸಮೀಪದಲ್ಲಿ ಮರಾಠಿ ಮಹಿಳೆಯೊಬ್ಬರು ಪುಣೆಯ ಮಾದರಿಯ ಇಂಗ್ಲಿಷ್ ಮಾಧ್ಯಮದ ನರ್ಸರಿ ಶಾಲೆ ನಡೆಸುತ್ತಿದ್ದು ಬಹಳ ಹೆಸರು ಮಾಡಿದೆ, ತಿಂಗಳ ಫೀಸು ಸ್ವಲ್ಪ ಜಾಸ್ತಿಯೇ, ಆದರೆ ಅಲ್ಲಿ ತರಗತಿಯಲ್ಲಿ ಕೆಲವೇ ವಿದ್ಯಾರ್ಥಿಗಳನ್ನು ಹೊಂದಿರುತ್ತಾರೆ ಮತ್ತು ಮೊದಲು ಪಾಲಕರ ಇಂಟರ್ ವ್ಯೂ ನಂತರ ಮಗುವಿನ ಇಂಟರ್ ವ್ಯೂ ನಡೆಸುತ್ತಾರೆಂದೂ ಮಕ್ಕಳ ಪ್ರವೇಶಕ್ಕೆ ಯಾವುದೇ ಶಿಫಾರಸ್ಸು ನಡೆಯುವುದಿಲ್ಲವೆಂದೂ ಮಾಹಿತಿ ಪಡೆದರು.
ನಾನು ನನ್ನ ನೌಕರಿಯ ಸಲುವಾಗಿ ಇಷ್ಟು ತಯಾರೀ ಮಾಡಿದ್ದೆನೋ ಇಲ್ಲವೋ,ಆದರೆ ಮಗಳ ನರ್ಸರಿ ಶಾಲೆಯ ಪ್ರವೇಶದ ಇಂಟರ್ ವ್ಯೂಗೆ ತಯಾರಿ ಮಾಡಿದೆ.ಜೊತೆಗೆ ಮಗಳನ್ನು ಅವಳ ಇಂಟರ್ ವ್ಯೂಗೆ ತಯಾರಿ ಮಾಡಿಸಿದೆ. ಅಂತೂ ನಾವು ಇಂಟರ್ ವ್ಯೂನಲ್ಲಿ ಪಾಸಾಗಿ ಮಗಳಿಗೆ ಮನೆಯ ಹತ್ತಿರವೇ ಇದ್ದ ಆ ಪ್ರತಿಷ್ಠಿತ ನರ್ಸರಿಗೆ ಪ್ರವೇಶ ಸಿಕ್ಕಾಯಿತು.
ಬೆಳಗ್ಗೆ ಮಗಳನ್ನು ಶಾಲೆಗೆ ಕಳುಹಿಸಿ ಅವರು ತಮ್ಮ ಕಾಲೇಜಿಗೆ ಹೊದರೆ ಮನೆಯ ಅಡುಗೆ ಕೆಲಸಗಳನ್ನು ಮುಗಿಸಿ ಯಜಮಾನರು ಮಧ್ಯಾಹ್ನದ ಊಟಕ್ಕೆ ಮನೆಗೆ ಬರುವುದರ ಒಳಗಾಗಿ ಮಗಳನ್ನು ಶಾಲೆಯಿಂದ ಕರೆದು ಕೊಂಡು ಬರುವುದು ನನ್ನ ಕೆಲಸ.
ಶಾಲೆಯಲ್ಲಿ ಎಲ್ಲ ಮಕ್ಕಳಿಗೆ ಶಾಲೆಯವರೇ ಬೆಳಗಿನ ತಿಂಡಿ ಕೊಡುವ ವ್ಯವಸ್ಥೆಯಿಂದಾಗಿ ಗಡಿಬಿಡಿಯಲ್ಲಿ ಮಗಳಿಗಾಗಿ ಡಬ್ಬಿ ಕಟ್ಟುವ ವ್ಯಾಪ ಇರಲಿಲ್ಲ. ದಿನಾಲೂ ಶಾಲೆಯಿಂದ ಕರೆದುಕೊಂಡು ಬರುವಾಗ ದಾರಿಯಲ್ಲಿ ಇಂದು ಯಾವ ತಿಂಡಿ ಕೊಟ್ಟರು, ಯಾವ ಬಗೆಯ ಆಟ ಆಡಿಸಿದರು, ಯಾವ ಹಾಡು ಕಲಿತೆ,ಯಾವ ಹುಡುಗರು ಗಲಾಟೆ ಮಾಡಿದರು, ಯಾವ ಗೆಳತಿ ಯಾವ ಡ್ರೆಸ್ ಹಾಕಿಕೊಂಡು ಬಂದಿದ್ದಳು ಎಂಬೆಲ್ಲ ವಿವರಗಳನ್ನು ಮಗಳಿಂದ ತಿಳಿದು ಆನಂದಿಸುತ್ತಾ ಮನೆ ಸೇರುತ್ತಿದ್ದೆವು.
ಪ್ರತೀ ತಿಂಗಳೂ ಶಾಲೆಯಲ್ಲಿ ಒಂದಿಲ್ಲೊಂದು ಸಾಂಸ್ಕೃತಿಕ ಕಾರ್ಯಕ್ರಮ/ಸ್ಪರ್ಧೆಗಳನ್ನು ಏರ್ಪಡಿಸಿರುತಿದ್ದರು. ಅದಕ್ಕೆ ಬೇಕಾದ ಮಗಳ ಎಲ್ಲ ಪರಿಕರಗಳ ತಯಾರಿಯನ್ನು ಇಂಜಿನಿಯರ್ ಆದ ಅವಳ ತಂದೆಯವರು ಮುತುವರ್ಜಿ ವಹಿಸಿ ಮಾಡುತ್ತಿದ್ದರಲ್ಲದೇ ಮಗಳು ನಿರ್ವಿಹಿಸುವ ಪಾತ್ರದ ತಯಾರಿ/ತಾಲೀಮೂ ಮಾಡಿಸುತ್ತಿದ್ದರು. ಮುದ್ದಿನ ಮಗಳು ಶಾಲೆಯ ವಿವಿಧ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು ಶಿಕ್ಷಕರಿಂದ ಪ್ರಶಂಸೆಗೆ ಪಾತ್ರವಾದಾಗ ನಮ್ಮಿಬ್ಬರಿಗೂ ಆದ ಹೆಮ್ಮೆ ಅಷ್ಟಿಷ್ಟಲ್ಲ.
ಹೀಗೆಯೇ ನೋಡ ನೋಡುವುದರಲ್ಲಿ ದಿನಗಳು,ತಿಂಗಳುಗಳು ಉರುಳಿ ವಾರ್ಷಿಕ ಪರೀಕ್ಷೆ ಮುಗಿದು ಫಲಿತಾಂಶದ ದಿನ ಬಂದಿತು. ಆ ದಿನದ ಹಾದಿಯನ್ನು ಕಾತರದಿಂದ ಕಾಯುತ್ತಿದ್ದ ನಾನು ಮತ್ತು ನನ್ನ ಮಗಳು ಸಂಭ್ರಮದಿಂದ ಶಾಲೆಯ ಕಡೆಗೆ ಹೆಜ್ಜೆ ಹಾಕಿದೆವು.ಪತಿರಾಯರು ಎಂದಿನಂತೆ ತಮ್ಮ ಕಾಲೇಜಿಗೆ ತೆರಳಿದರು.
ಇಪ್ಪತ್ತೇ ಮಕ್ಕಳಿದ್ದ ನರ್ಸರಿ ಶಾಲೆಯಲ್ಲಿ, ನಮ್ಮ ಮಗಳ ಸರ್ವತೋಮುಖ ಪ್ರತಿಭೆಗೆ ಪುರಸ್ಕಾರದಂತೆ ವರ್ಗಕ್ಕೆ ಪ್ರಥಮ ಸ್ಥಾನ ಗಳಿಸಿದ್ದಳು.ನಮ್ಮ ಅತ್ತೆಮಾವನವರ ಎಂಟು ಜನ ಮಮ್ಮಕಳಲ್ಲಿ ಕಿರಿಯಳಾದ ನನ್ನ ಮಗಳ ಈ ಸಾಧನೆ, ಅವಳಿಗಿಂತ ನನ್ನ ಹರುಷಕ್ಕೆ ಕಾರಣವಾಗಿತ್ತು.
ಮಗಳ ಜೀವನದ ಪ್ರಥಮ ಅಂಕಪಟ್ಟಿ (ಮಾರ್ಕ್ಸ್ ಕಾರ್ಡ್) ಮತ್ತು ಇತರ ಬಹುಮಾನಗಳನ್ನು ಪಡೆದು ಬೇಗ ಮನೆಗೆ ಹೋಗಿ ಫೋನ್ ಮಾಡಿ (ಲ್ಯಾಂಡ ಲೈನ್ ಫೋನಿನ ಕಾಲವದು) ಕಲಬುರ್ಗಿಯ ನಮ್ಮ ಮಾವನವರಿಗೆ ಅವರ ಮುದ್ದಿನ ಮಮ್ಮಗಳ ಫಲಿತಾಂಶದ ವಿವರಗಳನ್ನು ಹೆಮ್ಮೆಯಿಂದ ಯಾವಾಗ ತಿಳಿಸಿದೆನೋ ಎಂಬ ಆತುರ ನನಗಾದರೆ, ತನ್ನ ಗೆಳತಿಯರೊಂದಿಗೆ ಇನ್ನೂ ಸ್ವಲ್ಪ ಹೊತ್ತು ಮಾತಾಡುವ/ಆಟವಾಡುವ ಆಸೆ ಮಗಳಿಗೆ. ಅಂತೂ ಹೇಗೋ ಮಗಳನ್ನು ಕರೆದುಕೊಂಡು ಮನೆ ಸೇರಿದಾಗ ಬೇಸಿಗೆಯ ಭರ್ತಿ ೧೨ ಘಂಟೆ ಸಮಯವಾಗಿತ್ತು.
ಇನ್ನೇನು ಸಾವರಿಸಿಕೊಂಡು ಮಾವನರಿಗೆ ಫೋನ್ ಮಾಡಬೇಕೆಂಬುದರಲ್ಲಿ, ಮಗಳ ಮುಖ್ಯವಾದ ಮಾರ್ಕ್ಸ್ ಕಾರ್ಡ್ ಮಾತ್ರ ಕಾಣಿಸಲಿಲ್ಲ. ತಡಕಾಡಿ ನೋಡಿದರೆ ಉಳಿದ ಕಾಗದಗಳು, ಮೆಡಲ್ ಗಳಿದ್ದವೇ ಹೊರತು ಮಾರ್ಕ್ಸ್ ಕಾರ್ಡ್ ಮಾತ್ರ ಕಾಣಿಸಲಿಲ್ಲ. ಮತ್ತೆ ಮತ್ತೆ ಶಾಲೆಯಿಂದ ತಂದ ಕಾಗದಗಳನ್ನು ಬಿಡಿ ಬಿಡಿಯಾಗಿ ನೆಲದ ಮೇಲೆ ಹರಡಿ ನೋಡಿದೆ. ಉಹೂಂ... ಮಾರ್ಕ್ಸ್ ಕಾರ್ಡ್ ಮಾತ್ರ ಇರಲಿಲ್ಲ.ಮನೆಯ ಕಡೆಗೆ ಬರುವಾಗ ನಮ್ಮಿಬ್ಬರಲ್ಲಿ ಯಾರು ಏನನ್ನು ಹಿಡಿದು ಕೊಂಡಿದ್ದೆವು ಎಂತೆಲ್ಲ ನೆನೆಸಿಕೊಂಡೆ. ಹೌದು, ಮಾರ್ಕ್ಸ್ ಕಾರ್ಡನ್ನು ನಾನೇ ಹಿಡಿದು ಕೊಂಡಿದ್ದೆ. ಮಗಳು ತನಗೆ ಬಂದ ಪದಕ ಮತ್ತು ಶಾಲೆಯಲ್ಲಿ ತಿನ್ನಲು ಕೊಟ್ಟ ಚಿಪ್ಸನ ಪಾಕೀಟನ್ನು ಹಿಡಿದುಕೊಂಡು ಬಂದಿದ್ದಳು. ಹಾದಿಯಲ್ಲಿ ಸಿಕ್ಕ ಜೋಶಿ ಆಂಟಿಗೆ ಮಗಳ ಸಾಧನೆಯ ಕುರುಹಾದ ಸರ್ಟಿಫಿಕೇಟ್, ಮಾರ್ಕ್ಸ್ ಕಾರ್ಡ್ ಗಳನ್ನು ಹೆಮ್ಮೆಯಿಂದ ತೋರಿಸಿದ್ದರ ನೆನಪಾಯಿತು. ಅಂದರೆ , ಅಲ್ಲಿಂದ ಮನೆ ಸೇರುವುದರಲ್ಲಿ ಮಾರ್ಕ್ಸ್ ಕಾರ್ಡ್ ಮಾಯವಾಗಿತ್ತು.
ಮೇಲೆ ಫ್ಯಾನ್ ತಿರುಗುತ್ತಿದ್ದರೂ ಮೈ ಬೆವರಲಾರಂಭಿಸಿತು. ವಿಷಯದ ಗಾಂಭೀರ್ಯ ಅರಿಯದ ಮುಗ್ಧ ಮಗಳು ನಮ್ಮ ಮನೆಯ ಎದುರಿನ ಹೊಸ ಮನೆ ಕಟ್ಟುವ ಸೈಟಿನಲ್ಲಿದ್ದ ವಾಚಮನ್ ನ ಮಗನ ಜೊತೆ ಆಟ ಆಡಲು ಹೋಗುವೆನೆಂದು ಹಟ ಮಾಡತೊಡಗಿದಳು. ನನಗಾದರೋ ಮೈ ಪರಚಿಕೊಳ್ಳುವಷ್ಟು ಸಿಟ್ಟು, ಜೊತೆಗೆ ದುಖಃ, ಗಾಬರಿ, ಆತಂಕ ಕೂಡಿಕೊಂಡಿದ್ದವು. ಇನ್ನೇನು ಸ್ವಲ್ಪ ಹೊತ್ತಿಗೆ ಗಂಡ ಊಟಕ್ಕೆ ಮನೆಗೆ ಬರುವ ಸಮಯ. ಮೋದಲೇ ಅತೀ ಶಿಸ್ತಿನ ಮನುಷ್ಯ, ಮೇಲೆ ಇಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್ ಬೇರೆ. ಮನೆಯಲ್ಲಿ ಯಾವಾಗಲೂ " place for evey thing and everything in its place" ಎಂದು ನನಗೂ ಮಗಳಿಗೂ ಪಾಠ ಮಾಡುವವರು. ಎಷ್ಟೋ ಸಾರಿ ಮಗಳು ತನ್ನ ಆಟಿಕೆಗಳನ್ನು /ಪುಸ್ತಕವನ್ನು ಬಳಸಿದ ನಂತರ ಅವುಗಳ ನಿರ್ಧಾರಿತ ಜಾಗದಲ್ಲಿ ಇಡದೇ ಇದ್ದುದ್ದಕ್ಕೆ ಅವನ್ನು ನೇರವಾಗಿ ಬೀದಿಯ ಕಸದ ತೊಟ್ಟಿಗೆ ಹಾಕ್ಕಿದ್ದು ನೆನಪಾಯಿತು. ಈಗ ಅವರಿಗೆ ಏನು ಉತ್ತರ ಹೇಳುವುದು,ಏನು ಮಾಡುವುದು, ಒಂದೂ ತೋಚದಂತಾಯಿತು. ತೌರು ಮನೆಯ ಹಾಗೂ ಅತ್ತೆ ಮನೆಯ ಕುಲ ದೇವರುಗಳನ್ನೂ ಹಾಗೆಯೇ ಕಾರ್ತಿ ವೀರಾರ್ಜುನನ್ನು ಮನದಲ್ಲಿ ಪ್ರಾರ್ಥಿಸಿಕೊಂಡೆ. ನಿಧಾನವಾಗಿ ಸಾವರಿಸಿಕೊಂಡು ನಮ್ಮ ಮನೆಯಿಂದ ಹಾದಿಯಲ್ಲಿ ಜೋಶಿ ಆಂಟಿ ಸಿಕ್ಕ ಜಾಗದ ತನಕ ರಸ್ತೆಯ ಎರಡೂ ಬದಿಗೆ ಎರಡೆರಡು ಬಾರಿ ನಾನೂ,ಮಗಳೂ ಹುಡುಕಾಡಿದೆವು. ಉಹೂಂ... ಎಷ್ಟು ಹುಡುಕಿದರೂ ಮಾರ್ಕ್ಸ್ ಕಾರ್ಡ್ ಮಾತ್ರ ಕಾಣಿಸಲಿಲ್ಲ/ ಸಿಗಲಿಲ್ಲ.
ಮೊದಲೇ ಬೆಸಿಗೆಯ ಮಧ್ಯಾಹ್ನದ ಬಿಸಿಲು, ಮೇಲೆ ತಲೆ ಬಿಸಿಯಾಗಿ ಸುಟ್ಟ ಬದನೇಕಾಯಿ ಆಗಿತ್ತು.ನನ್ನೊಟ್ಟಿಗೆ ಅಲೆದಾಡಿ ಮಗಳೂ ಸುಸ್ತಾಗಿದ್ದಳು. ಇವತ್ತು ಬೆಳಿಗ್ಗೆ ಎದ್ದು ಯಾರ ಮುಖ ನೋಡಿದೆನೋ, ಗಂಡನಿಂದ ಯಾವ ಮಂಗಳಾರತಿ ಕಾದಿದೆಯೋ ಎಂದು ಯೇಚಿಸುತ್ತಾ ಮನೆಯ ಕಡೆಗೆ ಬರುತ್ತಿರುವಾಗ, ಹತ್ತಿರವಿದ್ದ ಐಸ್ ಕ್ರೀಮ್ ಅಂಗಡಿಯನ್ನು ಕಂಡು ಮಗಳು "ಅಮ್ಮ ಐಸ್ ಕ್ರೀಮ್" ಎಂದಳು. ಮುಂದೆ ಏನಾಗುತ್ತದೆಯೋ ಆಗಲಿ ಈಗಂತೂ ಐಸ್ ಕ್ರೀಮ್ ತಿಂದು ಗರಂ ಆದ ಮಂಡೆಯನ್ನಾದರೂ ತಂಪಾಗಿಸಿಕೊಂಡರಾಯಿತೆಂದು ಅಂಗಡಿಯವನಿಗೆ ಎರಡು ಐಸ್ ಕ್ರೀಮ್ ಕೊಡೆಂದು ಹೇಳಿದೆ. ಥಟ್ಟನೆ ಮಗಳು "ಮೂರು" ಅಂದಳು. ಬೇಡಮ್ಮ, ನಿಮ್ಮಪ್ಪ ಈಗ ಐಸ್ ಕ್ರೀಮ್ ತಿನ್ನಲು ಇಷ್ಟಪಡಲಿಕ್ಕಿಲ್ಲ ಎಂದೆ. "ಅಮ್ಮಾ ಮೂರನೇ ಐಸ್ ಕ್ರೀಮ್ ಅಪ್ಪನಿಗಲ್ಲ ನನ್ನ ಗೆಳೆಯ ಬಸ್ಸೂಗೆ"( ಮನೆ ಎದುರಿನ ಸೈಟಿನಲ್ಲಿದ್ದ ವಾಚಮನ್ ನ ಮಗ) ಅಂತೆದಳು. ಆಯಿತೆಂದು ಮೂರು ಐಸ್ ಕ್ರೀಮ್ ಗಳನ್ನು ಪ್ಯಾಕ್ ಮಾಡಿಸಿಕೊಂಡು ಮನೆಯ ಕಡೆಗೆ ಹೆಜ್ಜೆ ಹಾಕಿದೆವು. ನಿರಾಸೆ, ಹತಾಶೆಯಿಂದ ಮನೆ ಸೇರುವ ಮೊದಲು, ಎದುರಿನ ಸೈಟಿನಲ್ಲಿದ್ದ ವಾಚಮನ್ ನ ಶೆಡ್ಡಿಗೆ ಹೋಗಿ ಒಂದು ಐಸ್ ಕ್ರೀಮ್ ಹೊರತೆಗೆದು ಬಸ್ಸೂನನ್ನು ಕೂಗಿದೆ. ಬಸ್ಸೂ ಓಡಿ ಹೊರಗೆ ಬಂದ. ಏನಾಶ್ಚರ್ಯ!!! ಬಸ್ಸೂನ ಕೈಯಲ್ಲಿ ನನ್ನ ಮಗಳ ಮಾರ್ಕ್ಸ್ ಕಾರ್ಡ್ ಇದ್ದಿತು. ವಿಚಾರಿಸಿದಾಗ ತಿಳಿಯಿತು, ಅದು ನನ್ನ ಕೈ ಜಾರಿ ನಮ್ಮ ಮನೆಯ ಪಕ್ಕದಲ್ಲಿ ರಸ್ತೆಯಲ್ಲಿ ಬಿದ್ದಿತ್ತು. ಏನನ್ನೂ ಅರಿಯದ ಅವನು ಅದನ್ನು ಎತ್ತಿಕೊಂಡು ಹೋಗಿ ಶೆಡ್ಡಿನಲ್ಲಿ ತೊಟ್ಟಿಲಲ್ಲಿ ಮಲಗಿದ್ದ ತನ್ನ ತಂಗಿಗೆ ಅದರಿಂದ ಗಾಳಿ ಹಾಕುತ್ತಾ ಕೂತಿದ್ದನಂತೆ. ನಾನು ಅವನಿಗಾಗಿ ತಂದ ಐಸ್ ಕ್ರೀಮ್ ಕೊಡಲು ಕೂಗಿದಾಗ ಅದನ್ನು ಕೈಯಲ್ಲಿ ಹಿಡಿದುಕೊಂಡು ಹಾಗೆಯೇ ಓಡಿ ಬಂದಿದ್ದ....
- ಜಯಂತ ಕಿತ್ತೂರ
ಈ ಬರೆಹದ ಮೊದಲ ಸುಗುಣವೆಂದರೆ ಅದರ ನಿರರ್ಗಳತೆ,ಸುಲಲಿತ ಹರಿವು.ನಾಲ್ಕಾರು ವರ್ಷಗಳ ಅವಧಿಯ ಘಟನೆಗಳನ್ನು ಕಡಿಮೆ ಸಾಲಿನಲ್ಲಿ ಆಕರ್ಷಕವಾಗಿ ನಿರೂಪಿಸುವ ರೀತಿ...
ಪ್ರತ್ಯುತ್ತರಅಳಿಸಿಪ್ರಬಂಧ ಮಾದರಿಯ ರಚಿತವಾದರು ಇದು ಕಥೆ ಹೇಳುವತ್ತ ಹೆಚ್ಚು ಆಸಕ್ತಿ ವಹಿಸಿದೆ.ಸಣ್ಣ ಸಂಗತಿಯ ಕುತೂಹಲವನ್ನು ಕೊನೆಯ ವರೆಗೆ ಉಳಿಸಿಕೊಂಡು ಹೋಗಿದೆ...
ದಿನನಿತ್ಯದ ಘಟನೆಗಳಿಗು ಅದರದೆ ಆದ ಮಹತ್ವ ಇರುವುದನ್ನು ಈ ಗದ್ಯ ಭಾಗ ಸಾಧಿಸಿ ತೋರಿಸಿದೆ.
ಜಯಂತ್, ಅಭಿನಂದನೆಗಳು..
ಜೀವನದ ಸಣ್ಣ ಸಣ್ಣ ಕ್ಷಣಗಳನ್ನು ಐಸ್ಕ್ರೀಮ್ ನಂತೆ ಚೀಪಿ ಸವಿಯಬೇಕು ಎಂದು ಚೆನ್ನಾಗಿ ಮೂಡಿ ಬಂದಿದೆ
ಪ್ರತ್ಯುತ್ತರಅಳಿಸಿAwesome story 👌 I know it’s your better half’s story.. who wrote it? It doesn’t matter.. we got to read an amazing experience. Thank you .. keep writing ✍️
ಪ್ರತ್ಯುತ್ತರಅಳಿಸಿಲೇಖನದಲ್ಲಿ ಜೀವನದ ಸೌಂದರ್ಯವನ್ನು ಹಾಗೂ ಸಾಮಾಜಿಕ ಸಂಬಂಧಗಳ ಶ್ರೇಯಸ್ಸನ್ನು ಅತ್ಯಂತ ಹೃದಯಸ್ಪರ್ಶಿಯಾಗಿ ಬರೆದಿದ್ದೀರಿ
ಪ್ರತ್ಯುತ್ತರಅಳಿಸಿReminds me of "Swamy and Friends" from Malgudi Days . A strict head of the family is always a blessing, which newer generation may not realise.
ಪ್ರತ್ಯುತ್ತರಅಳಿಸಿನಿಮ್ಮ ಬರವಣಿಗೆಯು ನಡೆದು ಹೋದ, ಮನದಲ್ಲಿ ಅಚ್ಚೊತ್ತಿ ಹೋದ ಘಟನೆಗಳ ಸರಳ, ಸುಂದರ ನಿರೂಪಣೆ ಕೊನೆಯವರೆಗೂ ತನ್ನ ಗಟ್ಟಿತನ ಉಳಿಸಿಕೊಂಡು, ಮನ ಮುಟ್ಟುವಂತೆ ಸುಖಾಂತ್ಯ ಕಂಡು, ಘಟನೆಯ ಕೊನೆಯಲ್ಲಿ ಅನುಭವಿಸಿದ ಸಂತೋಷ ಓದುಗನಿಗೂ ತಲುಪುವಲ್ಲಿ ಯಶಸ್ವಿಯಾಗಿದೆ.
ಪ್ರತ್ಯುತ್ತರಅಳಿಸಿಸರಳ ಹಾಗೂ ಸುಂದರವಾಗಿ ಮೂಡಿ ಬಂದಿದೆ. ನಾವೇ ಅದನ್ನು ಅನುಭವಿಸಿದ ಹಾಗೇ ಆಯಿತು. ಒಳ್ಳೆಯ ಬರವಣಿಗೆ ಧನ್ಯವಾದಗಳು.😊🙏
ಪ್ರತ್ಯುತ್ತರಅಳಿಸಿಸರಳ ಹಾಗೂ ಸುಲಲಿತ ಬರವಣಿಗೆ... ಇಷ್ಟ ಆಯ್ತು
ಪ್ರತ್ಯುತ್ತರಅಳಿಸಿಚಿಕ್ಕದಾಗಿ, ಚೊಕ್ಕವಾಗಿ, ವಿಶಿಷ್ಟ ಶೈಲಿಯಲ್ಲಿ ಮೂಡಿಬಂದಿದೆ. ಮುಂದಿನ ಬರಹಕ್ಕಾಗಿ ಕಾಯುತ್ತಿದ್ದೇವೆ ಸರ್.
ಪ್ರತ್ಯುತ್ತರಅಳಿಸಿಪದಗಳ ಬಳಕೆ , ವಿವರಣೆಯ ರೀತಿ , ಅಭಿವ್ಯಕ್ತ ಪಡಿಸುವ ಸಾಮರ್ಥ್ಯ, ಕುತೂಹಲ ಉಂಟುಮಾಡುವ ಬರವಣಿಗೆ , ಓದುಗರ ಮನಕ್ಕೆ ಮುದ ನೀಡುತ್ತದೆ. ಗುರುಗಳೇ , ಉತ್ಕೃಷ್ಟ ಲೇಖನಗಳು🙏
ಪ್ರತ್ಯುತ್ತರಅಳಿಸಿVery touching moments and interesting situation and recalls lots of memories..!! Very interesting writing sir
ಪ್ರತ್ಯುತ್ತರಅಳಿಸಿA Testimony to -" Smart things come in small packages"
ಪ್ರತ್ಯುತ್ತರಅಳಿಸಿNicely narrated.
Deepika Chate
ಅಳಿಸಿಅಂತೂ ಮಾರ್ಕ್ಸ್ ಕಾರ್ಡು ಸಿಕ್ಕಿತು...ಅಬ್ಬಾ....ತಮ್ಮ ಪತ್ನಿಯ ಅನುಭವದ ಘಟನೆಯನ್ನು ಎಳೆಯೆಳೆಯಾಗಿ ಬಿಚ್ಚಿಡುತ್ತ ಸುಂದರವಾಗಿ ನಿರೂಪಿಸಿದ್ದೀರಿ ಸರ್.ನೈಜತೆಯನ್ನು ಪ್ರತಿಬಿಂಬಿಸುವ ಲೇಖನ ಚೆನ್ನಾಗಿ ಪ್ರಸ್ತುತ ಪಡಿಸಿದ್ದೀರಿ ಸರ್