ವಾಟ್ಸ್ಯಾಪ್ ನ Good morning ಸಂದೇಶ
ಸ್ಮಾರ್ಟ್ ಫೋನ್ ಮತ್ತು ಅದರಲ್ಲಿ ವಾಟ್ಸ್ಯಾಪ್ ಬಂದಾಗಿನಿಂದ ದಿನಾಲೂ ಬೆಳ್ಳಂಬೆಳಿಗ್ಗೆ ಶುಭ ಮುಂಜಾನೆ/Good morning ಸಂದೇಶಗಳು ಫೋನುಗಳಲ್ಲಿ ಹರಿದಾಡದಿದ್ದರೇ ಕೆಲವರಿಗೆ ತಮ್ಮ ಪ್ರಾತರ್ವಿಧಿಗಳು ಪೂರ್ಣ ಆಗುವ ಸಾಧ್ಯತೆ ಕಡಿಮೆ,ಇರಲಿ.
ಕೆಲವರು ಪ್ರತಿದಿನವೂ ತಪ್ಪದೇ ಹೊಸ ಹೊಸ ಸಂದೇಶಗಳನ್ನು ಸೃಷ್ಟಿಸಿ ಅಥವಾ ಇಂಟರ್ನೆಟ್ ನಲ್ಲಿ ಹೆಕ್ಕಿತೆಗೆದು ರವಾನಿಸಿದರೆ, ಇನ್ನೂ ಅನೇಕರು ತಮಗೆ ಫಾರ್ವರ್ಡ್ಆಗಿ ಬಂದ ಸಂದೇಶಗಳನ್ನು ಮರುಪ್ರಸಾರ ಮಾಡುವ ಅಭ್ಯಾಸವನ್ನು ರೂಡಿ ಮಾಡಿಕೊಂಡಿರುತ್ತಾರೆ.ಈ ಪ್ರವೃತ್ತಿಯು ಮೊದಮೊದಲು ವರ್ಗ,ವರ್ಣ,ಲಿಂಗ ಭೇದವಿಲ್ಲದೇ ಎಲ್ಲ ವಯೋಮಾನದವರಲ್ಲಿ ಕಂಡುಬಂದರೆ, ಝೆನ್ ಝೀ ವಿದ್ಯಾರ್ಥಿ/ಯುವ ಪೀಳಿಗೆಯಲ್ಲಿ ನಿಧಾನವಾಗಿ ಕ್ಷೀಣಿಸಿದಂತೆ ಕಾಣುತ್ತದೆ. ಆದರೇ, ಐವತ್ತಕ್ಕೂ ಮೇಲ್ಪಟ್ಟ ಪ್ರಭುಧ್ಧ ನಾಗರೀಕರಲ್ಲಿ ಅದರಲ್ಲಿಯೂ ನಿವೃತ್ತಿಯ ಆಸುಪಾಸಿನವರಲ್ಲಿ ಇದು ಇನ್ನೂ ಚಾಲ್ತಿಯಲ್ಲಿದ್ದಂತೆ ಕಾಣುತ್ತದೆ.ಈ ಟ್ರೆಂಡ್ ಅಥವಾ ಪ್ರವೃತ್ತಿಗೆ ಕಾರಣಗಳನ್ನು ವಿಶ್ಲೇಷಿಸಿದಾಗ ಕಂಡುಬಂದದ್ದೆಂದರೆ, ಯುವ ಪೀಳಿಗೆಯವರಲ್ಲಿನ ಸಮಯದ ಕೊರತೆ ಹಾಗೂ ಜೀವನಾನುಭವದ ಮಾತಿನ ಅನಗತ್ಯತೆಯ ಭಾವನೆಯಾದರೆ, ವಯಸ್ಕರಲ್ಲಿಯ ಇದರ ವ್ಯತಿರಿಕ್ತತೆ. ಅಲ್ಲದೇ ಇತ್ತೀಚಿಗೆ ನಾ ಕಂಡ ಕೆಲವು ವಾಟ್ಸ್ಯಾಪ್ ಯುನಿವರ್ಸಿಟಿಯಲ್ಲಿ ವಯಸ್ಕರಿಗಾಗಿ ಬಿತ್ತರವಾಗುವ ಸಲಹೆಗಳಲ್ಲೊಂದಾದ ... ದಿನಾಲೂ ಈ ತರಹದ ಗುಡ್ ಮಾರ್ನಿಂಗ್ ಸಂದೇಶ ತಪ್ಪದೇ ರವಾನಿಸುವುದು ತಮ್ಮ ಕೈ, ಕಣ್ಣುಗಳಿಗೆ ಹಾಗೂ ಬುದ್ಧಿಗೆ ವ್ಯಾಯಾಮ ಮತ್ತೂ ತಾವು ಇನ್ನೂ ಜೀವಂತವಾಗಿದ್ದು, ತಮ್ಮಲ್ಲಿ ಅವೆಲ್ಲವೂ ಸ್ಥಿಮಿತದಲ್ಲಿರುದನ್ನು ತಮ್ಮ ಆಪ್ತ ಮಿತ್ರ ಬಾಂಧವರಲ್ಲಿ ತಿಳಿಸುವ ಪ್ರಮಾಣ ಲಕ್ಷಣವೆಂಬುದು!!!.
ಒಂದು ವರದಿಯ ಪ್ರಕಾರ, ಈ ರೀತಿ ದಿನಾಲೂ ಜಗತ್ತಿನಾದ್ಯಂತ ಫಾರ್ವರ್ಡ್ ಆಗುವ ಗುಡ್ ಮಾರ್ನಿಂಗ್ ಸಂದೇಶಗಳನ್ನು ವಿಶ್ಲೇಷಿಸಿದಾಗ ಅರಿತ ವಿಷಯವೆಂದರೆ ಭಾರತದಲ್ಲಿ ಸ್ಮಾರ್ಟ್ ಫೋನ್ ಬಳಸುವ ಪ್ರತೀ ಮೂರು ಜನರಲ್ಲಿ ಒಬ್ಬ ಈ ಚಟವನ್ನು ಹೊಂದಿದ್ದು, ಅಮೇರಿಕಾದಲ್ಲಿ ಇದರ ಪ್ರಮಾಣ ಪ್ರತಿ ಹತ್ತು ಜನರಲ್ಲಿ ಒಬ್ಬನಂತೆ. ಈ ತರಹದ ಗುಡ್ ಮಾರ್ನಿಂಗ್ ಸಂದೇಶಗಳು ಕೇವಲ ಟೆಕ್ಸ್ಟ್ ದಿಂದ ಕೂಡಿರದೇ ಬಣ್ಣ ಬಣ್ಣದ ಚಿತ್ರ ಅಥವಾ ವಿಡಿಯೋಗಳಿಂದ ಕೂಡಿದ್ದ ಸಂದೇಶಗಳಿದ್ದರೇ ಅವು ಕೇವಲ ವಾಟ್ಸ್ಯಾಪ್ ಸಾಫ್ಟವೇರ್ ದ ನಿರ್ವಹಣೆಯ ಮೇಲಷ್ಟೇ ಪರಿಣಾಮ ಬೀರದೆ, ನಾವು ಬಳಸುವ ಸೆಲ್ ಫೋನ್ ನಲ್ಲಿನ ಮೆಮೊರಿಯನ್ನು ನಮಗರಿವಿಲ್ಲದಂತೆ ನುಂಗಿ ನೀರು ಕುಡಿದು ನಮ್ಮ ಫೋನ್ ನ ಕೆಲಸದ ಕ್ಷಮತೆಯನ್ನು ಮಂದಗತಿಗೆ ತಳ್ಳುತ್ತದೆ ಎಂಬ ಅರಿವು ನಮಗಿರಲು ಸಾಕು.
ಆದರೂ, ಇಂತಹ ಸಂದೇಶಗಳು ಕೆಲವೊಮ್ಮೆ ನಮ್ಮನ್ನು ಚಿಂತನೆಗೆ ಹಚ್ಚುತ್ತಿವೆ ಎಂಬುದರಲ್ಲಿ ಎರಡು ಮಾತಿಲ್ಲ.
ಇಂದು ಬೆಳಗ್ಗೆ ನನ್ನ ಗೆಳೆಯರ ಒಂದು ವಾಟ್ಸ್ಯಾಪ್ ಗುಂಪಿನಲ್ಲಿ ಈ ಕೆಳಗಿನ ಶುಭ ಮುಂಜಾನೆಯ ಸಂದೇಶವನ್ನು ಕಂಡೆ.
"ಈ ನಾಲ್ಕು ವಿಷಯಗಳಿಗೆ ಯಾವತ್ತೂ ನಾಚಿಕೆಪಡಬೇಡ. ಹಳೆಯ ಬಟ್ಟೆ ಧರಿಸಿದಾಗ, ಬಡ ಸ್ನೇಹಿತರ ಜೊತೆ ವಡನಾಟ ಇದ್ದಾಗ, ವಯಸ್ಸಾದ ಪೋಷಕರನ್ನು ಪೋಶಿಸುವಾಗ ಮತ್ತು ಸರಳ ಜೀವನ ಅಳವಡಿಸಿಕೊಂಡಾಗ. Good morning friends 🙏"
ನಾಚಿಕೆ (ಲಜ್ಜೆ/ ಸಂಕೋಚ) ಒಂದು ಭಾವನಾತ್ಮಕ ವಿಷಯವಾಗಿದ್ದು ಸಮಾಜದ ಎಲ್ಲ ವರ್ಗದ ಜನರಲ್ಲಿ, ಎಲ್ಲ ವಯಸ್ಸಿನವರಲ್ಲಿ, ವಿವಿಧ ಸ್ಥರದಲ್ಲಿ ಅಥವಾ ವಿವಿಧ ಸನ್ನಿವೇಶಗಳಲ್ಲಿ ಕಾಣಿಸುತ್ತದೆ. ಸಾಮಾನ್ಯವಾಗಿ ನಾಚಿಕೆ ಗಂಡಸರಿಗಿಂತಲೂ ಹೆಂಗಸರಲ್ಲಿ ಸ್ವಲ್ಪ ಜಾಸ್ತಿಯೇ. ಸ್ತ್ರೀಯರಿಗೆ ನಾಚಿಕೆಯೇ ಭೂಷಣ ಎನ್ನುವದೂ ಉಂಟು.
ಒಂದು ಉತ್ತಮ ಸಮಾಜದ ನಿರ್ವಹಣೆಯಲ್ಲಿ, ಸಮಾಜದಲ್ಲಿಯ ಜನರಲ್ಲಿರುವ ನಾಚಿಕೆಯ ಸ್ವಭಾವ ತನ್ನದೇ ಆದ ಪರಿಣಾಮವನ್ನು ಬೀರುತ್ತದೆ ಮತ್ತು ಸ್ವಲ್ಪಮಟ್ಟಿಗೆ ಅದರ ಅವಶ್ಯಕತೆಯೂ ಇರುತ್ತದೆ. ಆದರೇ, ಒಬ್ಬ ವ್ಯಕ್ತಿಯಲ್ಲಿ ಲಜ್ಜೆ/ನಾಚಿಕೆ/ಸಂಕೋಚ ಅತೀಯಾಗಿರುವುದು ಅವರಲ್ಲಿಯ ಸ್ವಾಭಿಮಾನ ಮತ್ತು ಆತ್ಮವಿಶ್ವಾಸದ ಕೊರತೆಯನ್ನು ಸೂಚಿಸುತ್ತದೆ. ತನ್ನ ಮಾತು,ಕೃತಿ ಅಥವಾ ವರ್ತನೆಯಿಂದಾಗಿ ಎಲ್ಲಿ ನಾಲ್ಕು ಜನ ಏನಂದುಕೊಂಡಾರೋ ಎಂಬ ಕಾಲ್ಪನಿಕ ಭಯ ಅನೇಕರಲ್ಲಿಯ ಸಂಕೋಚದ ಸ್ವಭಾವಕ್ಕೆ ಒಂದು ಮುಖ್ಯ ಕಾರಣವಾಗಿರಲು ಸಾಕು. ಆದರೆ ಇಂದಿಗೂ ಆ ನಾಲ್ಕು ಜನ ಯಾರೆಂದು ನಾ ಕಾಣೆ.ನಿಮಗೇನಾದರೂ ಸಿಕ್ಕರೆ ನನಗೆ ತಿಳಿಸಲು ಮರೆಯಬೇಡಿ!!!
ಮೇಲಿನ ಶುಭ ಮುಂಜಾನೆಯ ಸಂದೇಶದಲ್ಲಿಯ ನಾಲ್ಕು ವಿಷಯಗಳಲ್ಲಿ ಮೊದಲನೇಯದು...ಹಳೆಯ ಬಟ್ಟೆ ಧರಿಸಿದಾಗ ನಾಚಿಕೆ ಪಡಬೇಕಿಲ್ಲ ಎಂಬುದರ ವಿಷಯಕ್ಕೆ ಬಂದರೆ, ನಾವು ಅಂಗಡಿಯಿಂದ ಖರೀದಿಸಿ ತಂದು ಮೊದಲಬಾರಿಗೆ ತೊಟ್ಟಾದ ನಂತರ ಆ ಬಟ್ಟೆ ಹೊಸದಾಗಿರದೇ ಹಳೆಯದು ಅನಿಸಿಕೊಳ್ಳುತ್ತದೆ ಅಲ್ಲವೇ?. ಹಾಗೆ ನೋಡಿದರೆ ತಾನು ಎಷ್ಟೇ ಶ್ರೀಮಂತರಾಗಿದ್ದರೂ ಪ್ರತೀದಿನ ಒಂದು ಹೊಸ ಬಟ್ಟೆ ಖರೀದಿಸಿ ತೊಡಲು ಸಾದ್ಯವೆ? ಇಂದು ಜಗತ್ತಿನಲ್ಲಿ ಅತ್ಯಂತ ಶ್ರೀಮಂತನೆನಿಸಿಕೊಂಡಿರುವ ಅಮೇರಿಕಾದ ಇಲಾನ್ ಮಸ್ಕ ಕೂಡ ಹೀಗೆ ಮಾಡದಿರನು.!!! ಹಾಗಿರುವಾಗ, ಜನಸಾಮಾನ್ಯರಾದ ನಾವೇಕೆ ಹಳೆಯ ಬಟ್ಟೆ ಧರಿಸುವಲ್ಲಿ ನಾಚಿಕೆ/ಸಂಕೋಚ ಪಡಬೇಕು? ಇನ್ನು ಸ್ವಲ್ಪ ಆಧ್ಯಾತ್ಮಿಕವಾಗಿ ನೋಡಿದರೆ, ಭಗವದ್ಗೀತೆಯ ಅಧ್ಯಾಯ ೨ ರ ಶ್ಲೋಕ ೨೨,
ವಾಸಾಂಸಿ ಜೀರ್ಣಾನಿ ಯಥಾ ವಿಹಾಯ ನವಾನಿ ಗೃಹ್ಣಾತಿ ನರೋSಪರಾಣಿ ।
ತಥಾ ಶರೀರಾಣಿ ವಿಹಾಯ ಜೀರ್ಣಾನ್ಯನ್ಯಾನಿ ಸಂಯಾತಿ ನವಾನಿ ದೇಹೀ ||
ದಲ್ಲಿ ಶ್ರೀ ಕೃಷ್ಣ ಉಪದೇಶಿಸಿದಂತೆ, ಮನುಷ್ಯನು ಹೇಗೆ ಜೀರ್ಣವಾದ ಹಳೆಯ ಬಟ್ಟೆ ಬರೆಗಳನ್ನು ಬಿಸುಟು ಬೇರೇ ಹೊಸತಾದುದ್ದನ್ನು ಉಡುತ್ತಾನೋ ಹಾಗೇ-ಜೀವ ಒಂದು ದೇಹವನ್ನು ಬಿಟ್ಟು ಬೇರೆ ಹೊಸ ದೇಹವನ್ನು ಪಡೆಯುತ್ತಾನೆ. ಅಂದರೆ ನಾನೆಂಬ ಆತ್ಮವು, ನಾವೆಲ್ಲ ಸಾಮಾನ್ಯವಾಗಿ ನಾನೇ ಅದು ಎಂದು ತಿಳಿದಿರುವ ಈ ಶರೀರವೆಂಬ ಬಟ್ಟೆಯನ್ನು ತೊಟ್ಟಿದ್ದು, ಈ ಮನುಷ್ಯ ಶರೀರ ಜರ್ಜರಿತ ಅಥವಾ ಹಳೆಯದು ಆದಾಗ ಇದನ್ನು ತೊರೆದು ಬೇರೊಂದು ಹೊಸ ಶರೀರವೆಂಬ ಬಟ್ಟೆಯನ್ನು ಧರಿಸುತ್ತಾನೆ ಎಂದಾದರೂ, ನಾವು ತೊಟ್ಟಿರುವ ಈ ಶರೀರವೆಂಬ ಹಳೆಯ ಬಟ್ಟೆಯ ಮೇಲೆ ನಮಗೆ ದಿನಕಳೆದಂತೆ ನಮಗೆ ಅಭಿಮಾನ ಹೆಚ್ಚಾಗುವುದೇ ಹೊರತು ನಾವೆಂದೂ ನಾಚಿಕೆ ಪಟ್ಟವರಲ್ಲ, ಅಲ್ಲವೇ?
ಇನ್ನು ಎರಡನೇಯ ವಿಷಯ, ಬಡ ಸ್ನೇಹಿತರ ಜೊತೆ ಒಡನಾಟದ ವಿಚಾರಕ್ಕೆ ಬಂದರೆ... ಬಡತನ ಮತ್ತು ಶ್ರೀಮಂತಿಕೆಯ ಬಗ್ಗೆ ಎರಡು ವಿಚಾರಗಳು.ಮೊದಲನೇಯದು, ಬಡತನ ಮತ್ತು ಶ್ರೀಮಂತಿಕೆ ಈ ಎರಡೂ ಸಾಪೇಕ್ಷ ಶಬ್ದಗಳಾಗಿವೆ. ಅಂದರೆ ನಾವು ಇನ್ನೊಬ್ಬರೊಂದಿಗೆ ಹೋಲಿಸಿದಾಗ ಮಾತ್ರ ಅವರಿಗಿಂತಲೂ ಬಡವ ಅಥವಾ ಶ್ರೀಮಂತ ಎಂದು ತಿಳಿಯಬಹುದು ಇಲ್ಲವಾದರೆ, ಅಂದರೆ ನಮ್ಮಷ್ಟಕೆ ನಾವೇ ಬಡವ ಅಥವಾ ಶ್ರೀಮಂತ ಎಂಬ ಪ್ರಶ್ನೆ ಉದ್ಭವಿಸುವದಿಲ್ಲ.
ಇನ್ನು ಎರಡನೇಯ ವಿಚಾರ ಬಡತನ ಅಥವಾ ಶ್ರೀಮಂತಿಕೆ ಯಾವ ವಿಷಯದಲ್ಲಿ ಎಂಬ ಪ್ರಶ್ನೆ. ಸಾಮಾನ್ಯವಾಗಿ ಒಬ್ಬ ಮನುಷ್ಯನ ಬಾಹ್ಯ ಬಡತನ ಅಥವಾ ಶ್ರೀಮಂತಿಕೆಯನ್ನು ಎಣಿಸುವದುಂಟು. ಅಂದರೆ ಅವನ ಆಸ್ತಿ,ಸಂಪತ್ತು, ಬ್ಯಾಂಕ್ ಬ್ಯಾಲೆನ್ಸ್ ನಿಂದಲೇ ಅವನು ನಮಗಿಂತ ಶ್ರೀಮಂತ/ಬಡವ ಎಂದು ವ್ಯಾಖ್ಯಾನಿಸುವದುಂಟು. ಆದರೆ ನಾವು ಮನುಷ್ಯನ ಆಂತರಿಕ ಬಡತನ ಅಥವಾ ಶ್ರೀಮಂತಿಕೆ ಅಂದರೆ ಅತನ ಆಚಾರ,ವಿಚಾರ, ಜ್ಞಾನ, ಮಾನವೀಯತೆ ಮುಂತಾದವುಗಳಿಂದ ಅಳಿಯಲೂ ಬಹುದು ಅಲ್ಲವೇ.ನಮ್ಮ ಸನಾತನ ಸಂಸ್ಕೃತಿಯ ಪ್ರಕಾರ, ಮನುಷ್ಯನ ಆಂತರಿಕ ಶ್ರೀಮಂತಿಕೆ ಮುಖ್ಯವೇ ಹೊರತು ಬಾಹ್ಯ ಶ್ರೀಮಂತಿಕೆಯಲ್ಲ. ಇನ್ನು ಸ್ನೇಹದ ವಿಚಾರಕ್ಕೆ ಬಂದರೆ, ಸ್ನೇಹ ಎಂಬುದು ಬಡವ-ಬಲ್ಲಿದ, ಉಚ್ಚ-ನೀಚ, ಕರಿಯ-ಬಿಳಿಯ, ಹಿರಿ-ಕಿರಿಯ ಮುಂತಾದ ಯಾವುದೇ ದ್ವಂದ್ವದ ಭೇದವಿಲ್ಲದ ಸಮಾನ ಮನಸ್ಕರ ಪವಿತ್ರವಾದ ಸಂಬಂಧ. ತ್ರೇತಾಯುಗದಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ಅನೇಕ ಸಾಮಾನ್ಯರೊಂದಿಗೆ ಸ್ನೇಹ ಹೊಂದಿದ್ದರೆ, ದ್ವಾಪರದಲ್ಲಿ ಶ್ರೀಕೃಷ್ಣ-ಸುದಾಮರ ಸ್ನೇಹ ಎಲ್ಲರಿಗೂ ಎಲ್ಲ ಕಾಲಕ್ಕೂ ಆದರ್ಶಪ್ರಾಯ. ಇನ್ನು ಇಂದಿನ ದಿನಗಳ ಉದಾಹರಣೆ ತೆಗೆದುಕೊಂಡರೆ, ಮೇರು ಚಿತ್ರನಟ ನಮ್ಮ ರಜನೀಕಾಂತ್ ಮತ್ತು ಅಂದಿನ ಅವರ ಸಾರಿಗೆ ಸಂಸ್ಥೆಯ ಸಹೋದ್ಯೋಗಿಗಳ ಜೊತೆಗಿನ ಸ್ನೇಹ ಒಡನಾಟ ಎಲ್ಲರಿಗೂ ತಿಳಿದ ವಿಷಯ. ಗೆಳೆಯರ ಸ್ನೇಹ ಒಂದು ಪವಿತ್ರವಾದ ಸಂಬಂಧಯಂತಾದ ಮೇಲೆ ಇನ್ನು ಅಲ್ಲಿ ನಾಚಿಕೆ/ಮುಜುಗರಗಳಿಗೆಲ್ಲಿಯ ಸ್ಥಾನ ಅಲ್ಲವೇ?
ಮೂರನೆಯ ವಿಚಾರ,ನಮ್ಮ ವಯಸ್ಸಾದ ಪೋಷಕರನ್ನು ಪೋಶಿಸುವಾಗ ನಾಚಿಕೆ ಪಡುವ ಅಗತ್ಯವಿಲ್ಲ ಎಂಬ ವಿಚಾರ. ನಮ್ಮನ್ನು ಹೊತ್ತು ಹೆತ್ತು ಈ ಭೂಮಿಗೆ ತಂದು, ನಾವು ಎನೂ ತಿಳಿಯದ ಅಮಾಯಕ ಹಸುಳೆಗಳಿದ್ದಾಗ ನಮ್ಮ ಪೋಷಕರು ಯಾವುದೇ ನಾಚಿಕೆ/ಹೇಸಿಗೆ ಪಡದೇ ನಮ್ಮ ಎಲ್ಲ ಮಲಮೂತ್ರಗಳನ್ನು ಬಳೆದು, ಪೋಷಿಸಿ, ಸಂಸ್ಕಾರಯುತರನ್ನಾಗಿ ಮಾಡಿ ನಮ್ಮ ಕಾಲಮೇಲೆ ನಾವು ನಿಲ್ಲುವಂತೆ ಮಾಡುವಲ್ಲಿ ನಮ್ಮ ತಾಯಿ ತಂದೆಯವರು ಪಟ್ಟ ಪರಿಶ್ರಮ, ಮಾಡಿದ ತ್ಯಾಗ,ಅಗಣಿತ.ಅವರ ಋಣವನ್ನು ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ, ಅಂತಹುದರಲ್ಲಿ ಅವರ ವೃದ್ಧಾಪ್ಯದಲ್ಲಿ ನಾವು ಮಾಡುವ ಅಲ್ಪ ಸೇವೆ ಆ ಭಗವಂತ ನೀಡಿದ ಒಂದು ಸದವಕಾಶ/ನಮ್ಮ ಭಾಗ್ಯವೆಂದು ತಿಳಿಯಬೇಕೇ ಹೊರತು ನಾಚಿಕೆ/ಮುಜುಗರ ಪಡುವ ಪ್ರಸಂಗವೆಲ್ಲಿಯದು. ರಾಮಾಯಣದಲ್ಲಿ ಉಲ್ಲೇಖಿತ ಶ್ರವಣಕುಮಾರ ಅಥವಾ ಪಂಡರಾಪುರದ ಪುಂಡಲೀಕ ಈ ವಿಷಯದಲ್ಲಿ ನಮಗೆಲ್ಲ ಆದರ್ಶ.
ಇನ್ನು ನಾಲ್ಕನೇಯದು, ಸರಳ ಜೀವನ ಅಳವಡಿಸಿಕೊಂಡಾಗಿನ ನಾಚಿಕೆಯ ವಿಷಯ.
ಜೀವನದಲ್ಲಿ ಲಕ್ಷ್ಮೀ ಕಟಾಕ್ಷ ಹೊಂದದೆ ಇದ್ದಾಗ,... 'ಹಾಲೊಲ್ಲ,ಮಸರೊಲ್ಲ ಯಾಕೊಲ್ಲ ಇಲ್ಲದಕೆ ವಲ್ಲ ಸರ್ವಜ್ಞ' ಎಂಬಂತೆ ಸರಳ ಜೀವನ ಅನಿವಾರ್ಯ. ಅಂತಹ ಸಂದರ್ಭದಲ್ಲಿ ಚಾರ್ವಾಕರಂತೆ ಸಾಲಮಾಡಿ ತುಪ್ಪ ತಿನ್ನುವ ಪ್ರವೃತ್ತಿಯಿಂದ ಒಂದು ಡಾಂಭಿಕದ/ ಆಡಂಬರದ ಜೀವನ ಶೈಲಿ ಆತ್ಮವಂಚನೆಯ ಕೆಲಸವಲ್ಲದೇ ಮತ್ತೇನು? ಅದರಿಂದ ಯಾವ ಸಾಧನೆಯೂ ಸಾಧ್ಯವಿಲ್ಲ.ಅಲ್ಲದೇ,ಈ ರೀತಿ ಇತರರ ಮೇಲೆ ಬೀರುವ ಕೃತಕ ಪ್ರಭಾವ ಬಹಳ ಸಮಯ ಇರಲಾರದು. ವ್ಯತಿರಿಕ್ತವಾಗಿ, ನಮ್ಮ ನಿಜ ಬಣ್ಣ ಬಯಲಾದಾಗ ನಾವು ಅನುಭವಿಸಬೇಕಾದ ನಾಚಿಕೆ/ಮುಜುಗರ ಅಪಾರ.ಅದರ ಬದಲು, ಹಾಸಿಗೆ ಇದ್ದಷ್ಟು ಕಾಲು ಚಾಚುವ ಗೌರವದ ಸರಳ ಮತ್ತು ಸಹಜ ಜೀವನ ಶೈಲಿ ಉತ್ತಮ. ಇನ್ನು ಭಗವಂತನ ಕೃಪೆಯಿಂದ ಕೈ ತುಂಬಾ ಹಣವಿದ್ದು ಶ್ರೀಮಂತಿಕೆ ಹೊಂದಿದ್ದರೂ ನಾವು ಅಳವಡಿಸಿಕೊಳ್ಳುವ ಸರಳ ಜೀವನ ಶೈಲಿ ನಮ್ಮ ವ್ಯಕ್ತಿತ್ವದ ದ್ಯೋತಕ. ನಮ್ಮಲ್ಲಿ ರತನ್ ಟಾಟಾ,ಸುಧಾ ಮೂರ್ತಿ ಯಂತಹ ಅನೇಕರನ್ನು ನಮ್ಮ ಜೀವನದಲ್ಲಿ ಕಾಣಬಹುದು. ಅವರಾರೂ, ತಾವು ಅಳವಡಿಸಿಕೊಂಡ ಸರಳ ಜೀವನ ಶೈಲಿಯ ಬಗ್ಗೆ ನಾಚಿಕೆ ಪಟ್ಟವರಲ್ಲವಾದಮೇಲೆ ನಾವೂ ಸರಳ ಜೀವನ ಶೈಲಿ ಅಳವಡಿಸಿಕೊಂಡರೆ ನಾಚಿಕೆ ಪಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಅಲ್ಲವೇ?
ಅಂತೂ ಇಷ್ಟೊಂದು ವಿಚಾರ ಲಹರಿಗೆ ಹಚ್ಚಿದ ಒಂದು ಒಳ್ಳೆಯ good morning ಸಂದೇಶ ಫಾರ್ವರ್ಡ್ ಮಾಡಿದ ಆ ಗೆಳೆಯನಿಗೆ ನನ್ನ ಕೃತಜ್ಞತೆಗಳು.
-ಜಯಂತ ಕಿತ್ತೂರ
Nice article Jayant,
ಪ್ರತ್ಯುತ್ತರಅಳಿಸಿcontent tumba chennagide.
ಸರ್, ಈ ಬರಹ ತುಂಬಾ ಚೆನ್ನಾಗಿದೆ.ಯುವಕರು ಓದಲೇಬೇಕು.
ಪ್ರತ್ಯುತ್ತರಅಳಿಸಿVery nice article 👍👍
ಪ್ರತ್ಯುತ್ತರಅಳಿಸಿNice article sir , Words of wisdom
ಪ್ರತ್ಯುತ್ತರಅಳಿಸಿಸರ್
ಪ್ರತ್ಯುತ್ತರಅಳಿಸಿಸರಳ - ಸುಂದರ ವಾಗಿ ಬರೆದಿದ್ದೀರಿ.
ತುಂಬಾ ಚೆನ್ನಾಗಿದೆ ಸರ್
ಪ್ರತ್ಯುತ್ತರಅಳಿಸಿಬಹಳ ಚೆನ್ನಾಗಿದೆ..!!!
ಪ್ರತ್ಯುತ್ತರಅಳಿಸಿSir,
ಪ್ರತ್ಯುತ್ತರಅಳಿಸಿVery good article indeed, as always!
Very nice sir
ಪ್ರತ್ಯುತ್ತರಅಳಿಸಿ