ಹೀಗೊಂದು ಸಿನಿಮಾ ಕಥೆ...
ಬೆಂಗಳೂರಿನಲ್ಲಿರುವ ನನ್ನ ಮಗಳು ಕೆಲ ದಿನಗಳ ಹಿಂದಷ್ಟೇ, 'ಲಾ ಪತಾ ಲೇಡೀಸ್' ಎಂಬ ಒಳ್ಳೆಯ ಸಿನಿಮಾ ಬೆಳಗಾವಿಯ ಪ್ರತಿಷ್ಠಿತ ಸಿನಿಮಾ ಮಂದಿರದಲ್ಲಿ ಓಡುತ್ತಿದ್ದು ಅದನ್ನು ನೋಡಿ ಬನ್ನಿರಿ ಎಂದು ಎರಡು ಟಿಕೆಟ್ ಗಳ ಕ್ಯುಆರ್ ಕೋಡನ್ನು ಆನ್ ಲೈನ್ ನಲ್ಲಿ ಪಡೆದು ಅದರ ಪ್ರತಿಯನ್ನು ವಾಟ್ಸ್ಯಾಪ್ ನಲ್ಲಿ ಹಂಚಿಕೊಂಡಳು. ನಾವಿಬ್ಬರು ಬೇಗ ರಾತ್ರಿ ಊಟ ಮುಗಿಸಿ ಸೆಕೆಂಡ್ ಶೋ ಸಿನಿಮಾ ಶುರುವಾಗುವ ವೇಳೆಗೆ ಸರಿಯಾಗಿ ತೆರಳಿ ಕಾರನ್ನು ಪಾರ್ಕ್ ಮಾಡಿ ಸಿನಿಮಾ ಮಂದಿರದಲ್ಲಿ ದಾಖಲಾದೆವು.
ಕ್ರತಕವಾಗಿಯಾದರೂ ನಯವಾಗಿ ಸ್ವಾಗತಿಸಿ ಕ್ಯುಆರ್ ಕೋಡನ್ನು ಸ್ಕ್ಯಾನ ಮಾಡಿದ ಸಿಬ್ಬಂದಿ,ನಾವು ಒಳಗೆ ಪ್ರವೇಶಿಸುವದಕ್ಕೂ ಮುನ್ನ ಸೆಕ್ಯೂರಿಟಿ ತಪಾಸಣೆಗೆ ಸಾಗುವಂತೆ ಸೂಚಿಸಿದಳು. ಆ ಪ್ರಕರಣದ ನಂತರ ಒಳಗೆ ಪ್ರವೇಶಿಸಿದಾಗ ಇಡೀ ಚಿತ್ರ ಮಂದಿರದಲ್ಲಿ ನಾವಿಬ್ಬರೇ ಪ್ರೇಕ್ಷಕರು.!!! 'ಲಾ ಪತಾ ಲೇಡೀಸ್' ಸಿನಿಮಾ ನೋಡಲು ಬಂದ ನಾವೇ ಎಲ್ಲಿ 'ಲಾ ಪತಾ' ಆದೇವೋ ಎಂಬ ಭೀತಿ ನನ್ನ ಶ್ರೀಮತಿಗಾದರೆ, ಅದಾವುದೋ ಹಿಂದಿ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಥಿಯೇಟರ್ ನ ಎಲ್ಲಾ ಟಿಕೆಟ್ ಖರೀದಿಸಿ ತಾನೋಬ್ಬನೇ ಕೂತು ಸಿನಿಮಾ ನೋಡಿದಂತೆ ನನಗನಿಸಿತು. ಅಂತೂ ಸಿನೆಮಾ ಸುರುವಾಗಿ ಐದು ನಿಮಿಷಗಳ ನಂತರ ನಮ್ಮಂತೆ ಇನ್ನೆರಡು ಮೂರು ಜೋಡಿಗಳು ಚಿತ್ರ ಮಂದಿರದಲ್ಲಿ ನುಸುಳಿಕೊಂಡಾಗ ನನ್ನ ಶ್ರೀಮತಿಗೆ ಜೀವದಲ್ಲಿ ಜೀವ ಬಂದಂತಾಯಿತು.
ನಿಜ, ಭವ್ಯವಾದ ಮತ್ತು ಅತೀ ಸ್ವಚ್ಛವಾದ ಸಿನಿಮಾ ಮಂದಿರದ ದೊಡ್ಡ ಬೆಳ್ಳಿ ಪರದೆ,ಅತ್ಯಾಧುನಿಕ ಸಿನಿಮಾ ಪ್ರೊಜೆಕ್ಟರ್, ನೂರಾರು ಡೆಸಿಬೆಲ್ ಶಬ್ದದ ಹತ್ತೆಂಟು ಡಾಲ್ಬಿ ಸ್ಪೀಕರ್ ಗಳ ವ್ಯವಸ್ಥೆ, ಮಂದಿರದಲ್ಲಿ ತಂಪಾಗಿ ಹಿತವಾದ ಗಾಳಿ ಸೂಸುವ ಎ.ಸಿ.ಗಳು, ಹಾಗೆಯೇ ಐಶಾರಾಮಿ ಆಸನ ಎಲ್ಲವೂ ನಮ್ಮನ್ನು ಎರಡು ಮೂರು ತಾಸು ಕನಸಿನ ಸ್ವರ್ಗ ಲೋಕದಲ್ಲಿ ತೇಲಾಡಿಸುವ ವ್ಯವಸ್ಥೆ, ಮಧ್ಯಂತರದಲ್ಲಿ ನಾವು ಕೂತಲ್ಲಿಗೇ ಬಂದು ಆರ್ಡರ್ ತೆಗೆದುಕೊಂಡು ತಂದು ಕೊಡುವ ಪೊಟ್ಟಣದ ತುಂಬಾ ಗರಿಗರಿ ಪಾಪ್ಕಾರ್ನ್ ಮತ್ತು ಕಾಫೀ (ಇವೆರಡನ್ನು ಬಿಟ್ಟು ಬೇರೆ ಎನೂ ಸಿಗುವುದಿಲ್ಲ), ನೈಸರ್ಗಿಕ ಕರೆಗೆ ತೆರಳುವ ಟಾಯ್ಲೆಟ್ ನಲ್ಲಿ ತೇಲಿ ಬರುವ ಸುಗಂಧ, ಸುಮಧುರ ಸಂಗೀತ, ಝಗಮಗಿಸುವ ಬೆಳಕು,ಲಕಲಕ ಹೊಳೆಯುವ ಕನ್ನಡಿ ಇದ್ದರೂ ಅದೇಕೋ ಬಾಲ್ಯದ ಸಿನಿಮಾ ಮಂದಿರಗಳಲ್ಲಿನ ಹುರುಪು, ಉತ್ಸಾಹ ಇಂದಿನ ಸಿನಿಮಾ ಮಂದಿರಗಳಲ್ಲಿ ನನಗೆ ಕಾಣಲಾಗಲಿಲ್ಲ.
ನಾವು ಚಿಕ್ಕವರಿದ್ದಾಗ,ಕನ್ನಡ ಅಥವಾ ಹಿಂದಿ ಯಾವುದೇ ಸಿನಿಮಾ ನಮ್ಮೂರಿಗೆ ಬರುವ ಅನೇಕ ದಿನಗಳ ಮೊದಲು ಊರಲ್ಲೆಲ್ಲಾ ಸಿನಿಮಾದ ಪೋಸ್ಟರ್ ಗಳು ರಾರಾಜಿಸುತ್ತಿದ್ದವು ಮತ್ತೂ ಟಾಂಗಾಗಳಿಗೆ ಸಿನಿಮಾದ ಪೋಸ್ಟರ್ ಗಳನ್ನು ಕಟ್ಟಿ ಲೌಡ ಸ್ಪೀಕರ್ ನಲ್ಲಿ 'ಮೊದಲ ಮೂರು ದಿನ, ಪ್ರತಿ ದಿನ ನಾಲ್ಕು ಆಟಗಳು, ನಂತರ ದಿನಾಲೂ ಮೂರು ಆಟಗಳು' ಎಂದು ಪ್ರಚಾರ ಮಾಡುತ್ತ ಊರತುಂಬೆಲ್ಲ ತಿರುಗಿದರೇ, ಚಿಕ್ಕ ಮಕ್ಕಳು ಆ ಟಾಂಗಾದ ಹಿಂದೆ ತಮ್ಮ ಗಲ್ಲಿಯ ಆರಂಭದಿಂದ ಕೊನೆಯವರೆಗೆ ಸಿನಿಮಾದ ಕರಪತ್ರಗಳನ್ನು ಪಡೆಯಲು ಓಡುತ್ತಿದ್ದರು. ಅಲ್ಲದೇ ಸಿನೆಮಾದ ಪೋಸ್ಟರ್ ಗಳಲ್ಲಿನ ನಾಯಕ-ನಾಯಕಿಯರ ಭಾವ-ಭಂಗಿಗಳನ್ನು ನೋಡಿ ಮತ್ತು ರೇಡಿಯೋದಲ್ಲಿ ಸಿನೇಮಾದ ಮಧುರ ಚಿತ್ರಗೀತೆಗಳನ್ನು ಆಲಿಸಿದ ಸಿನಿಮಾ ಪ್ರೀಯರ ಮನಸ್ಸಿನಲ್ಲಿ ಚಿತ್ರ ಕಥೆಯನ್ನು ಅರಿಯುವ, ನಾಯಕ-ನಾಯಕಿಯರ ಕಲ್ಪಿಸಿದ ಸರಸ-ವಿರಸ/ಪ್ರಣಯದ ಪ್ರಸಂಗಗಳನ್ನು ನೋಡುವ ತವಕ,ಆತುರಗಳನ್ನು ವೃದ್ಧಿಸಿರುತ್ತಿದ್ದವು. ಹೀಗಿರುವಾಗ, ಕಿಕ್ಕಿರಿದು ತುಂಬಿದ ಸಿನಿಮಾ ಮಂದಿರದಲ್ಲಿ ಗೆಳೆಯರು/ಬಂಧು ಬಾಂಧವರನೊಡಗೂಡಿ ಸಿನೆಮಾ ನೋಡಲು ಹೋಗುವುದರ ಉತ್ಸಾಹ ಒಂದಾದರೆ, ಸಿನಿಮಾದ ವಿವಿಧ ಸೀನು ಸನ್ನಿವೇಶಗಳನ್ನು ಅವಲಂಬಿಸಿ ರಸಿಕರು ಹೊಡೆಯುವ ಶೀಟೀ, ಚಪ್ಪಾಳೆಗಳ ಆರ್ಭಟ, ಜೊತೆಗೆ ಪ್ರೇಕ್ಷಕರು ಹೊಡೆಯುವ ವಿವಿಧ ಡೈಲಾಗುಗಳು, ಚಿಲ್ಲರೆ ಕಾಸಿನ ತೂರಾಟ, ದುಃಖದ ಸನ್ನಿವೇಶಕ್ಕೆ ಸ್ಪಂದಿಸಿ ಕಣ್ಣು ಮೂಗುಗಳನ್ನು ವರೆಸಿಕೊಂಡು ಅಳುವ ಹೆಣ್ಣುಮಕ್ಕಳು ಮತ್ತು ತಾಯಂದಿರ ಭಾವುಕತೆಗಳು, ಸಿನಿಮಾ ಶೋ ಕ್ಕೂ ಮುನ್ನ ತಾಸುಗಟ್ಟಲೆ ನೂಕುನುಗ್ಗಲಿನ ಪಾಳಿಯಲ್ಲಿ ನಿಂತು, ಪಾಲಕರು ಪರಿಶ್ರಮದಿಂದ ಗಳಿಸಿ ಉಳಿಸಿದ ಹಣದಲ್ಲಿ ಕಾಡಿ ಬೇಡಿ ಪಡೆದ ದುಡ್ಡು ಕೊಟ್ಟು ಸಿನೆಮಾ ಟಿಕೆಟ್ ಪಡೆಯುವ ಪರಿ ಇನ್ನೊಂದು. ಸಿನಿಮಾ ನಡೆದಾಗ ಮಾರಲು ಬರುವ ಉಪ್ಪುಹಚ್ಚಿದ ಶೇಂಗಾ,ವಠಾಣಿ, ಚಿಕ್ಕೀ, ನಿಂಬಿಹುಳಿ ಪೇಪರಮಿಂಟು, ಸೋಡಾಗಳು ಮತ್ತು ಮಧ್ಯಂತರದಲ್ಲಿಯ ಮಿರ್ಚಿ, ಕಟ್ ಭಜಿ,ಸೂಸಲಾ, ಗರಂ ಗರಂ ಹಾಫ್ ಕಪ ಚಹಾ ಮುಂತಾದವು ಕಣ್ಣು ಕಿವಿಗಳ ಜೊತೆಗೆ ನಾಲಿಗೆಗೂ ಸ್ವರ್ಗ ಸುಖವನ್ನು ನೀಡುತ್ತಿದ್ದವು.
೧೯೭೦ ರ ದಶಕದಲ್ಲಿ ನಾವು ನೆಲೆಸಿದ ಸಂಗಮೇಶ್ವರ ನಗರದಿಂದ ಕಲಬುರ್ಗಿಯಲ್ಲಿದ್ದ ಎಲ್ಲ ಟಾಕೀಸುಗಳು ಬಹಳ ದೂರವೇನಿರಲಿಲ್ಲ. ಮಾರ್ಕೇಟ್ ನಲ್ಲಿದ್ದ 'ಪ್ರಕಾಶ್' ಊರಿನಲ್ಲಿಯೇ ಅತಿ ದೊಡ್ಡ ಥಿಯೇಟರ್. ಅದರ ಪಕ್ಕದ ರಸ್ತೆಯಲ್ಲಿದ್ದ 'ನ್ಯೂ ಮದನ್' ಚಿಕ್ಕ ಚೊಕ್ಕ ಸಿನಿಮಾ ಮಂದಿರ. ನವ ದಂಪತಿಗಳಿಗೆ ಬಾಲ್ಕನಿಯಲ್ಲಿದ್ದ ಚಿಕ್ಕ ಚಿಕ್ಕ ಕೂಪೆಗಳು ಅದರ ವಿಶೇಷತೆ.ಬಹಳ ಜನಪ್ರೀಯ ಸಿನಿಮಾಗಳು ಮೊದಲು ಪ್ರಕಾಶ್ ನಲ್ಲಿ ಹಲವು ವಾರ/ತಿಂಗಳು ನಡೆದ ನಂತರ ನ್ಯೂ ಮದನ ಟಾಕೀಸ್ ಗೆ ಬದಲಿ ಆಗುತ್ತಿದ್ದವು.ಇನ್ನು ಜಗತ್ ಸರ್ಕಲ್ ನಿಂದ ಹಪ್ತ ಗುಂಬಜ್ ಕಡೆಗೆ ಹೋಗುವ ಹಾದಿಯಲ್ಲಿ 'ತಿರಂದಾಜ' ಟಾಕೀಸ ಇತ್ತು. ಅಲ್ಲಿ ಬಹುತೇಕ ಹಿಂದಿ ಸಿನಿಮಾಗಳೇ ಜಾಸ್ತಿ ಬರುತ್ತಿದ್ದವು, ಅಲ್ಲದೇ ವಯಸ್ಕರಿಗಾಗಿ ಮಾತ್ರ ಇದ್ದ ಸಿನಿಮಾಗಳಿಗೆ ಈ ಟಾಕೀಸ್ ಫೇಮಸ್ಸು. ಕೆಲವೂಂದು ಬಹಳ ಜನಪ್ರಿಯ ಸಿನಿಮಾಗಳು ಈ ತಿರಂದಾಜ ಮತ್ತೂ ಪ್ರಕಾಶ್ ಟಾಕೀಜ ಎರಡರಲ್ಲಿಯೂ ಅರ್ಧ ತಾಸು ಅಂತರದಲ್ಲಿ ಓಡುತ್ತಿದ್ದವು. ಒಂದು ಟಾಕೀಸನಲ್ಲಿ ಷೋ ಪ್ರಾಂರಂಭವಾಗಿ ಅರ್ಧ ತಾಸಿನಲ್ಲಿ ಆರೆಂಟು ರೀಲು ಓಡಿದ ನಂತರ ಅವನ್ನು ತಗಡಿನ ಪೇಟಿಯಲ್ಲಿಟ್ಟು ಇನ್ನೊಂದು ಟಾಕೀಜ್ ಗೆ ಸಾಯಕಲ್ ರಿಕ್ಷಾದಲ್ಲಿ ಸಾಗಿಸಿ ಅಲ್ಲಿ ಸಿನಿಮಾ ಷೋ ಪ್ರಾರಂಭಿಸುತ್ತಿದ್ದರು. ಮಜಾ ಅಂದ್ರೆ, ಕೆಲವೊಂದು ಸಲ ಪೇಟೀ ಬರಲು ತಡವಾದಾಗ ಸಿನಿಮಾ ಅರ್ಧಕ್ಕೇ ನಿಂತು ಲೈಟುಗಳು ಹತ್ತುತ್ತಿದ್ದವು.ಅಂಥಹ ಸಂದರ್ಭ ಬೀಡಿ ಸಿಗರೇಟು ಚಟದವರಿಗೆ ಸುಸಂಧಿ.
ಇತ್ತ, ಪುಠಾಣಿ ಗಲ್ಲಿಯಲ್ಲಿದ್ದ 'ಲಕ್ಷ್ಮೀ'ಟಾಕೀಸ್ ಕಲಬುರ್ಗಿಯಲ್ಲಿಯೇ ಅತೀ ಹಳೆಯದು. ಕಾರು,ಬೈಕುಗಳನ್ನು ಅತೀ ಚಿಕ್ಕದಾದ ಗಲ್ಲಿಯಲ್ಲಿ ತರಲಾಗದೇ ಗಾಡೀ ಮಾಲೀಕರು ಕಪಡಾ ಬಝಾರದಲ್ಲಿ ಪಾರ್ಕ್ ಮಾಡಬೇಕಾಗುತ್ತಿತ್ತು. ಲಕ್ಷ್ಮೀ ಟಾಕೀಸ್ ನಲ್ಲಿ ಕನ್ನಡ ಸಿನಿಮಾಗಳಿಗೆ ಮೊದಲ ಆದ್ಯತೆ. ಇಲ್ಲಿ ಎರಡು ಕನಸು ಫಿಲಂ ನ 'ಪೂಜಿಸಲೆಂದೇ ಹೂಗಳ ತಂದೇ' ಹಾಡು ಮೊಳಿಗಿತೆಂದರೆ ಇನ್ನು ಸಿನಿಮಾ ಪ್ರಾರಂಭ ಆಗುವುದೆಂದು ಸೂಚನೆ. ನನಗೆ ನೆನಪಿದ್ದ ಪ್ರಕಾರ, ನಾನು ಬಾಲ್ಯದಲ್ಲಿ ನೋಡಿದ ಮೊದಲ ಸಿನಿಮಾ, ೧೯೭೩ ರಲ್ಲಿ ತೆರೆಕಂಡ 'ಗಂಧದ ಗುಡಿ', ಈ ಲಕ್ಷ್ಮೀ ಟಾಕೀಸ್ ನಲ್ಲಿಯೇ.
ಈ ಎಲ್ಲ ಟಾಕೀಸುಗಳೂ ನಮ್ಮ ಸಂಗಮೇಶ್ವರ ನಗರದ ಪೂರ್ವಕ್ಕಿದ್ದರೆ, ಹೊಸದಾಗಿ ಪ್ರಾರಂಭವಾದ, ಆಗಿನ ಅತ್ಯಂತ ನೂತನ ವಿನ್ಯಾಸದ 'ಸಂತೋಷ'ಟಾಕೀಸ್ ಪಶ್ಚಿಮಕ್ಕಿತ್ತು. ಟಾಕೀಸಿನ ಮುಂದುಗಡೆ ಕಂಪೌಂಡನಲ್ಲಿ ಸಾಕಷ್ಟು ಜಾಗವಿದ್ದು ಶೋ ಪ್ರಾರಂಭಕ್ಕೂ ಮುನ್ನ ಜನ ಸೇರಲು, ನಿಲ್ಲಲು ಅನುಕೂಲವಾಗಿತ್ತು. ಥಿಯೇಟರ್ ನ ಗೋಡೆಯ ಮೇಲೆ ಸಿನಿಮಾದ ದೊಡ್ಡ ದೊಡ್ಡ ಪೋಸ್ಟರ್ ಗಳನ್ನು ಹಾಕಲು ವ್ಯವಸ್ಥೆ ಇತ್ತು. ಬೇರೆ ಬೇರೆ ಕ್ಲಾಸಿನ ಟಿಕೆಟ್ ಖರೀದಿಸಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಆ ಪ್ರಕಾರ, ಥಿಯೇಟರನ ಮುಂದಿನ ಭಾಗದಲ್ಲಿ ಬಾಲ್ಕನಿಯ ಟಿಕೆಟ್ ಖರೀದಿಸಿ ಒಳಪ್ರವೇಶಿಸಿ ನೇರವಾಗಿ ಮೇಲುಗಡೆ ನಡೆದುಕೊಂಡೇ ಹೋಗಲು ಅರ್ಧ ವೃತ್ತಾಕಾರದ ರಾಂಪ್ ನ ವ್ಯವಸ್ಥೆ ಮಾಡಲಾಗಿತ್ತು ಮತ್ತೂ ಅದರ ಕೆಳಗಡೆ ಜಾಗದಲ್ಲಿ ಒಂದು ನೀರಿನ ಕೊಡ ಹೊತ್ತ ಸುಂದರ ಬಿಳಿ ಶಿಲಾ ಬಾಲಿಕೆಯ ಕಾರಂಜಿ ಬಹಳ ಆಕರ್ಷಕವಾಗಿತ್ತು. ಪಕ್ಕದಲ್ಲಿಯೇ ಇದ್ದ ಆಫೀಸನ ಎದಿರುಗಡೆ ಮುಂದೆ ಬರುವ ಚಿತ್ರದ ಚಿಕ್ಕ ಪೋಸ್ಟರ್ ಇರುತ್ತಿತ್ತು. ಫಸ್ಟ ಕ್ಲಾಸ ಹಾಗೂ ಸೆಕೆಂಡ್ ಕ್ಲಾಸ ಟಿಕೆಟ್ಟುಗಳನ್ನು ಮಾರುವ ಪ್ರತ್ತೇಕ ಸಾಲುಗಳ ವ್ಯವಸ್ಥೆಗಳು ಟಾಕೀಜಿನ ಬಲ ಭಾಗದಲ್ಲಿದ್ದರೆ, ಥರ್ಡ್ ಕ್ಲಾಸ ಟಿಕೆಟ್ಟುಗಳನ್ನು ಮಾರುವ ಪಾಳಿ ಹಿಂದುಗಡೆ ಇತ್ತು. ನನಗೆ ನೆನಪಿದ್ದ ಹಾಗೆ, ಇದೋಂದೇ ಥಿಯೇಟರ್ ನಲ್ಲಿ ಫ್ಯಾನುಗಳ ಜೊತೆ ತಂಪು ಗಾಳಿಯ ಏರ್ ಕೂಲರ್ ವ್ಯವಸ್ಥೆ ಅಳವಡಿಸಲಾಗಿತ್ತು. ಅಲ್ಲದೇ ವಿದ್ಯುತ್ ನ ವ್ಯತ್ಯಯವಾದರೆ ಪ್ರತ್ಯೇಕ ಜನರೇಟರ್ ವ್ಯವಸ್ಥೆ ಮಾಡಲಾಗಿತ್ತು. ಸಾಮಾನ್ಯವಾಗಿ ಎಲ್ಲ ಥಿಯೇಟರಗಳಂತೆ ಇಲ್ಲಿಯೂ ಸೆಕೆಂಡ್ ಕ್ಲಾಸನ್ನು ಹೆಂಗಸರು ಮತ್ತು ಜೊತೆಗಿನ ಮಕ್ಕಳಿಗಾಗಿ ಮೀಸಲಿಡಲಾಗಿರುತ್ತಿತ್ತು. ಅದರ ಪ್ರಕಾರ ಸೆಕೆಂಡ್ ಕ್ಲಾಸ ಟಿಕೆಟ್ ನ ಪಾಳಿ ಹೆಂಗಸರಿಗೆ ಮಾತ್ರ ಇರುತ್ತಿತ್ತು.
ಅಂದಿನ ದಿನಗಳಲ್ಲಿ ಈ ಥಿಯೇಟರಗಳನ್ನು ಬಿಟ್ಟು ಸಿನಿಮಾ ನೋಡಲು ಇನ್ನೊಂದು ವ್ಯವಸ್ಥೆ ಇತ್ತು. ಅದು ನಮ್ಮ ವಾರ್ತಾ ಮತ್ತು ಪ್ರಚಾರ ಇಲಾಖೆಯವರು ಸಾರ್ವಜನಿಕವಾಗಿ ಪುಕ್ಕಟೆಯಾಗಿ ಆಗಾಗ ವಿವಿಧ ಬಡಾವಣೆಗಳಲ್ಲಿ ಗೋಡೆಯ ಮೇಲೆ ಪ್ರೊಜೆಕ್ಟರ್ ದ ಸಹಾಯದಿಂದ ತೋರಿಸುತ್ತಿದ್ದ ಡಾಕ್ಯುಮೆಂಟರಿ ಚಿತ್ರಗಳು ಅಥವಾ ಸಾಮಾಜಿಕ ಸಾಮರಸ್ಯ,ದೇಶ ಭಕ್ತಿ ವೃದ್ಧಿಸುವ ಒಳ್ಳೆಯ ಕನ್ನಡ ಅಥವಾ ಹಿಂದಿ ಚಲನಚಿತ್ರಗಳು. ಸಿನಿಮಾ ತೋರಿಸುವ ದಿನ ಇಲಾಖೆಯ ಅಧಿಕಾರಿಗಳು ಕಾಲೊನಿಯ ಕೆಲವು ಪ್ರಮುಖ ಗ್ರಹಸ್ಥರಿಗೆ ಮಾಹಿತಿಯನ್ನು ನೀಡಿದರೆ ಆ ಸುದ್ದಿಯನ್ನು ಎಲ್ಲರ ಮನೆಗಳಿಗೆ ಮುಟ್ಟಿಸುವ ಕೆಲಸವನ್ನು ನನ್ನಂಥ ಕಾಲೊನಿಯ ಮಕ್ಕಳು ಮಾಡುತ್ತಿದ್ದರು. ಸಾಮಾನ್ಯವಾಗಿ ಸಾಯಂಕಾಲ ೭-೮ ಗಂಟೆ ಸುಮಾರಿಗೆ ಸಿನಿಮಾ ಚಾಲು ಮಾಡುತ್ತಿದ್ದರು. ಅಷ್ಟರಲ್ಲಿ ಮನೆಮಂದಿಯೆಲ್ಲ (ಯಜಮಾನರೂ ಸಹಿತ) ರಾತ್ರಿ ಊಟ ಮುಗಿಸಿ ಕೂಡಲು ಖುರ್ಚಿ/ಚಾಪೆ/ಜಮಖಾನೆ ಯ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಿದ್ದರು. ಹಾಗೆ ನೋಡಿದ ಚಲನಚಿತ್ರಗಳಲ್ಲಿ ನನ್ನ ಎಳೆಯ ಮನಸ್ಸಿನ ಮೇಲೆ ತೀವ್ರ ಪ್ರಭಾವ ಬೀರಿದ ಸಿನಿಮಾ ಅಂದರೆ ಹಿಂದಿಯ 'ಆನಂದ'. ಅದರಲ್ಲಿ ನಾಯಕ ನಟ ರಾಜೇಶ್ ಖನ್ನಾ ಕ್ಯಾನ್ಸರ್ ದಿಂದ ಬಳಲಿದರೂ ಕೊನೆ ಉಸಿರು ಇರುವವರೆಗೂ ಜೀವನೋತ್ಸಾಹ ಕಳೆದುಕೊಳ್ಳದೇ ಇರುವನು.ಇರಲಿ.
ಹಾಗೆ ಊರಲ್ಲಿ ಬಂದ ಪ್ರತಿಯೊಂದು ಸಿನಿಮಾ ನೋಡಲೇಬೇಕೆಂಬ ಚಟ ನಮ್ಮ ಮನೆಯಲ್ಲಿ ಯಾರಿಗೂ ಅಷ್ಟೇನು ಇರಲಿಲ್ಲ. ಒಂದು ವೇಳೆ ನಮ್ಮಲ್ಲಿ ಯಾರಿಗಾದರೂ ಇದ್ದರೂ,ಪಾಲಕರಿಂದ ಅದಕ್ಕೆ ಅವಕಾಶ/ಪರವಾನಗಿ ಸಿಗಬಹುದಾಗಿತ್ತು ಎಂಬ ವಿಶ್ವಾಸ ನನಗಿಲ್ಲ.ಆದರೆ ಮನೆಯಲ್ಲಿದ್ದ ಎಚ್ ಎಮ್ ವ್ಹೀ ರೇಡಿಯೋದ ವಿವಿಧ ಸ್ಟೇಶನ್ ಗಳಲ್ಲಿ ಬರುವ ಕನ್ನಡ ಹಾಗೂ ಹಿಂದಿ ಹಾಡುಗಳನ್ನು ಮನಃಪೂರ್ತಿ ಕೇಳುವ ಅವಕಾಶ ನಮ್ಮ ಮನೆಯಲ್ಲಿತ್ತು. ಚಿಕ್ಕಂದಿನಲ್ಲಿ ನಾನು ಮತ್ತೂ ನನ್ನ ಇಬ್ಬರು ಅಕ್ಕಂದಿರು ಈ ಅವಕಾಶದ ಭರ್ಪೂರ ಉಪಯೋಗ ಪಡೆದುಕೊಂಡೆವು.
ಸರ್ವಸಾಧಾರಣ,ತ್ರೈಮಾಸಿಕ/ಅರ್ಧ ವಾರ್ಷಿಕ /ವಾರ್ಷಿಕ ಪರೀಕ್ಷೆ ಮುಗಿದ ಮೇಲೆ ಒಂದರಂತೆ ಸಿನಿಮಾ ನೋಡುವ ಅವಕಾಶ ನಮಗಿರುತ್ತಿತ್ತು. ಅದಲ್ಲದೇ, ಅಕ್ಕ ಪಕ್ಕದ ಮನೆಯವರು ನೋಡಿ ಬಂದು ಅವರೇನಾದರೂ ನಮ್ಮ ತಾಯಿಗೆ ಸಂಜೆಯ ಹರಟೆಯ ವೇಳೆ ಶಿಫಾರಸು ಮಾಡಿದ್ದರೆ ಆ ಸಿನಿಮಾ ನೋಡಿಬರಲು ನಮಗೆ ಪರವಾನಗಿ ಸಿಗುತ್ತಿತ್ತು. ಅಲ್ಲದೇ ಕೆಲವೊಂದು ಪೌರಾಣಿಕ/ಐತಿಹಾಸಿಕ ಸಿನಿಮಾಗಳನ್ನು ನಮ್ಮಮ್ಮ ಎಲ್ಲ ಐದು ಜನ ಮಕ್ಕಳನ್ನೂ ಟಾಂಗಾ ಮಾಡಿಕೊಂಡು ಕರೆದುಕೊಂಡು ಹೋಗಿ ತೊರಿಸಿಕೊಂಡು ಬರುತ್ತಿದ್ದರು.
೧೯೭೭ ರಲ್ಲಿ ತೆರೆಕಂಡ 'ಸೊಸೆ ತಂದ ಸೌಭಾಗ್ಯ' ಸಿನಿಮಾದಲ್ಲಿಯ ಗಾನ ಗಂಧರ್ವ ಡಾ. ಪಿ.ಬಿ.ಶ್ರೀನಿವಾಸರ 'ರವಿವರ್ಮನ ಕುಂಚದ ಕಲೆss ಬಲೆss ಸಾಕಾರವೋ' ಮತ್ತೂ ಇತರ ಹಾಡುಗಳನ್ನು ರೇಡಿಯೋದಲ್ಲಿ ಕೇಳಿ ಕೇಳಿ ಆ ಸಿನಿಮಾ ನೋಡುವ ತವಕ ನನ್ನ ಚಿಕ್ಕಕ್ಕ (ದೀದೀ) ಮತ್ತು ನನ್ನಲ್ಲಿ ತೀವ್ರವಾಗಿತ್ತು. ಆದರೆ, ಅದು ಪೌರಾಣಿಕ ಸಿನೆಮಾ ಅಲ್ಲ ಮತ್ತೂ ನಮ್ಮ ಯಾವ ಪರೀಕ್ಷೆ ಮುಗಿದ ರಜಾ ದಿನಗಳಾಗದೇ ಇಲ್ಲವಾದ್ದರಿಂದ ನಾವು ಈ ಸಿನಿಮಾಕ್ಕೆ ಹೋಗುತ್ತೇವೆ ಎಂದು ಪಾಲಕರನ್ನು ಕೇಳುವ ಧೈರ್ಯ ನಮ್ಮಲ್ಲಿರಲಿಲ್ಲ. ನನ್ನಕ್ಕ ಒಂದು ಉಪಾಯ ಮಾಡಿ ಪಕ್ಕದ ಮನೆಯ ಗೆಳತಿಯ ತಾಯಿಯಿಂದ ನಮ್ಮ ತಾಯಿಗೆ ಶಿಫಾರಸು ಮಾಡಲು ಸಫಲಳಾದಳು. ಅಂತೂ ನಾವು ಕೊನೆಯ ಮೂರು ಮಕ್ಕಳು(ನಾನು,ದೀದೀ ಮತ್ತು ಚಿಕ್ಕದಾದಾ) ಕೂಡಿ ಸಂತೋಷ ಟಾಕೀಸದಲ್ಲಿ ಸೊಸೆ ತಂದ ಸೌಭಾಗ್ಯ ನೋಡುವ ಭಾಗ್ಯ ಲಭ್ಯವಾಯಿತು.
ಸೋಮವಾರ ದಿಂದ ಶನಿವಾರದವರೆಗೆ ಶಾಲೆಯನ್ನು ತಪ್ಪಿಸಿ ಮ್ಯಾಟಿನಿ ಸಿನಿಮಾಕ್ಕೆ ಹೋಗುವುದನ್ನು ನಮ್ಮ ಮನೆಯಲ್ಲಿ ಊಹಿಸಲೂ ಸಾಧ್ಯವಿಲ್ಲದ ಕಾರಣ ಆ ದಿನಗಳಲ್ಲಿ ಸಾಯಂಕಾಲದ ಫಸ್ಟ್ ಶೋಗೆ ಹೋಗಬೇಕು. ಆದರೆ ಅಲ್ಲಿ ಒಂದು ಸಮಸ್ಯೆ ಎಂದರೆ, ರಾತ್ರಿ ೯ ಗಂಟೆಗೆ ಸಿನಿಮಾ ನೋಡಿ ಸಂತೋಷ ಟಾಕೀಜನಿಂದ ನಾವಿದ್ದ ಸಂಗಮೇಶ್ವರ ನಗರದ ಹಾದಿಯಲ್ಲಿ ಎಸ್ ಬಿ ಕಾಲೇಜಿನ ಹತ್ತಿರದ ಸ್ಮಶಾನದ ಪಕ್ಕದ ಹಾದಿಯಿಂದ ಬರಬೇಕು. ಚಿಕ್ಕ ವಯಸ್ಸಿನಲ್ಲಿ ನಮಗೆ ಆ ಧೈರ್ಯ ಇರಲಿಲ್ಲ. ಹಾಗಾಗಿ ನಾವು ರವಿವಾರ ಮಧ್ಯಾಹ್ನದ ಮ್ಯಾಟನಿ ಶೋಗೆ ಹೋಗುವದೆಂದು ನಿರ್ಧರಿಸಿದೆವು.
ಸರ್ವಸಾಧಾರಣ ಸಂತೋಷ ಥಿಯೇಟರ್ ನಲ್ಲಿ ಹೊಸ ಸಿನಿಮಾ ಹತ್ತಿದ ಮೊದಲವಾರ ಶುಕ್ರವಾರ ದಿಂದ ರವಿವಾರದ ವರೆಗೆ ದಿನದ ಎಲ್ಲಾ ನಾಲ್ಕು ಆಟಗಳಲ್ಲಿ ಅದೇ ಸಿನಿಮಾ. ಮುಂದಿನ ವಾರಗಳಲ್ಲಿ ಇಂಗ್ಲೀಷ್ ಸಿನೆಮಾಗಳನ್ನು ಮಾರ್ನಿಂಗ್ ಶೋದಲ್ಲಿ ಹಾಕುತ್ತಿದ್ದರು. ನಂತರದ ಮೂರು ಶೋಗಳಲ್ಲಿ ಮುಖ್ಯ ಸಿನಿಮಾ ಓಡುತ್ತಿತ್ತು.
'ಸೊಸೆ ತಂದ ಸೌಭಾಗ್ಯ'ಸಿನಿಮಾ ಬಂದು ಮುರ್ನಾಲ್ಕು ವಾರಗಳಾಗಿದ್ದರಿಂದ ಬೆಳಗಿನ ಮಾರ್ನಿಂಗ್ ಶೋ ದಲ್ಲಿ ಯಾವುದೋ ಇಂಗ್ಲೀಷ್ ಸಿನಿಮಾ ಓಡುತ್ತಿತ್ತು. ನಾವು ಹೋಗಬೇಕಾದ ಮ್ಯಾಟನಿ ಶೋ ಮಧ್ಯಾಹ್ನದ ೩ ಗಂಟೆಗೆ ಪ್ರಾರಂಭವಾಗುತ್ತಿತ್ತು. ನಮ್ಮ ಚಿಕ್ಕದಾದಾ ತನ್ನ ಗೆಳೆಯರಲ್ಲಿ ವಿಚಾರಿಸಿ ಈ ಸಿನಿಮಾಕ್ಕೆ ಈಗ ರೆಷ್ಯು ಎಷ್ಟಿದೆ, ಮ್ಯಾಟಿನಿ ಶೋಗೆ ಯಾವಾಗ ಹೋಗಿ ಪಾಳಿ ಹಚ್ಚಿದರೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚು ಮುಂತಾದ ಮಾಹಿತಿ ಕಲೆಹಾಕಿದ್ದ. ಆ ಪ್ರಕಾರ ನಾವು ಕನಿಷ್ಠ ಒಂದು ತಾಸು ಮೊದಲು ಹೋಗಿ ಪಾಳಿ ಹಚ್ಚಿದರೇ ಒಳಿತು ಎಂಬುದು ಅವನ ಅಭಿಪ್ರಾಯವಾಗಿತ್ತು. ಅಂದಿನ ಚಿತ್ರ ಮಂದಿರಗಳಲ್ಲಿ ಬಹಳ ಪಾಪ್ಯುಲರ್ ಸಿನಿಮಾಗಳು ಓಡುವಾಗ ಪಾಳಿಯಲ್ಲಿ ನಿಂತ ಮೊದಲ ಕೆಲವರಿಗೆ ಟಿಕೆಟ್ ಮಾರಿದ ನಂತರ ಎಲ್ಲಾ ಟಿಕೆಟ್ ಖಾಲಿ ಆದವೆಂದು ಟಿಕೆಟ್ ಕೌಂಟರ್ ನ ಕಿಟಕಿ ಬಂದು ಮಾಡುತ್ತಿದ್ದರು. ಉಳಿದೆಲ್ಲಾ ಟಿಕೆಟ್ ಗಳು ನಿಮಗೆ ಗೊತ್ತಲ್ಲಾ ಹೇಗೆ ವಿಕರಿ ಆಗುತ್ತಿದ್ದವೆಂದು. ಸೆಕೆಂಡ್ ಕ್ಲಾಸನ ಟಿಕೆಟ್ ತೆಗೆಯುವ ಜವಾಬ್ದಾರಿ ದೀದೀಯದಾಗಿದ್ದರಿಂದ ಅವಳು, ಒಂದು ತಾಸು ಬೇಡ ಎರಡು ತಾಸು ಮೊದಲೇ ಹೋಗಿ ಪಾಳಿಯಲ್ಲಿ ಮುಂದೆ ನಿಂತರೆ ನಕ್ಕೀ ಮೂರೂ ಟಿಕೆಟ್ಟು ಸಿಕ್ಕೇಸಿಗುತ್ತವೆ ಎಂದು ಅಭಿಪ್ರಾಯಪಟ್ಟಳು.ನಮಗೂ ಅದುವೇ ಸಮಂಜಸವೆನಿಸಿತು.
ಈಗಿನಂತೆ ಪ್ರತಿದಿನ ಬೆಳಿಗ್ಗೆ ನಮ್ಮ ಮನೆಯಲ್ಲಿ ನಾಸ್ಟಾ ಪಾಸ್ಟಾ ಇರುತ್ತಿರಲಿಲ್ಲ. ಕೇವಲ ರವಿವಾರ ಮಾತ್ರ ಬೆಳಗ್ಗೆ ರೇಡಿಯೋದಲ್ಲಿ ಗಿಳಿವಿಂಡು ಕೇಳುತ್ತಾ ಉಪ್ಪಿಟ್ಟು/ಅವಲಕ್ಕಿ/ಮಂಡಾಳ ವಗ್ಗರಣಿ ಜೊತೆಗೆ ಸಿಹಿಯಾದ ರಾಮನ ಪ್ರಸಾದ/ಉಂಡಿ/ಬೆಲ್ಲದ ಸಜ್ಜಗಿ ಮುಂತಾದ ಉಪಹಾರ ಸವಿಯುತ್ತಿದ್ದೆವು. ಉಳಿದ ದಿನ ಏನಿದ್ದರೂ ಮೂರೂ ಹೊತ್ತು ಭಕ್ರಿ/ಚಪಾತಿಯ ಊಟ. ಈ ರವಿವಾರ ಮಧ್ಯಾಹ್ನ ಮ್ಯಾಟನಿ ಸಿನಿಮಾಕ್ಕೆ ಹೋಗುವದಿದ್ದರಿಂದ ಅಂದಿನ ಉಪಹಾರದ ಬದಲು ಬೇಗ ಊಟವನ್ನೇ ಮಾಡಿ ಟಿಕೆಟ್ ಗೆ ಪಾಳಿಹಚ್ಚಲು ಸಂತೋಷ ಥಿಯೇಟರ್ ಗೆ ಹೋಗಲು ನಾವು ತೀರ್ಮಾನಿಸಿದೆವು.
ಇಂಟರವಲ್ ನಲ್ಲಿ ಮಾರಲು ಬರುವ ಕುರುಕಲು ತಿಂಡಿ ವಸ್ತುಗಳು ಯಾರು,ಯಾವ ಕೈಯಲ್ಲಿ ತಯಾರು ಮಾಡಿರುತ್ತಾರೋ ಅಂತಹವನ್ನು ಮೇಲೆ ಹಣಕೊಟ್ಟು ಕೊಂಡು ತಿನ್ನುವುದು ಬೇಡವೆಂದು, ತಲೆಗೆ ಎರಡರಂತೆ ಆರು ಕರ್ಚಿಕಾಯಿ ಮತ್ತು ಆರು ಚಕ್ಕುಲಿ ಮತ್ತು ಕುಡಿಯಲು ಒಂದು ನೀರಿನ ಬಾಟಲಿಯನ್ನು ಒಂದು ಬಗಲ ಚೀಲದಲ್ಲಿ ಹಾಕಿ ನಮ್ಮಮ್ಮ ಕೊಟ್ಟಳು. ನಮ್ಮೂವರಲ್ಲಿ ಹಿರಿಯನಾದ ದಾದಾ ಟಿಕೆಟ್ ಗೆ ಬೇಕಾದ ಹಣ ಮತ್ತು ಕರ್ಚಿಕಾಯಿ ಚೀಲವನ್ನು ಸಂಭಾಳಿಸುವ ಮತ್ತೂ ಇಂಟರ್ವಲ್ ನಲ್ಲಿ ತಿಂಡಿಯನ್ನು ಹಂಚುವ ಜವಾಬ್ದಾರಿ ಹೊತ್ತರೆ, ಎತ್ತರದಲ್ಲಿ ಸ್ವಲ್ಪ ಗಿಡ್ಡವಾದರೂ ನನ್ನಕ್ಕ ಮಾತುಗಾರಿಕೆಯಲ್ಲಿ ಮುಂದು,ಮೇಲಾಗಿ ಸೆಕೆಂಡ್ ಕ್ಲಾಸ ಟಿಕೆಟ್ಟುಗಳನ್ನು ಕೇವಲ ಹೆಂಗಸರಿಗೆ ಕೊಡುತ್ತಿದ್ದರಾದ್ದರಿಂದ ಪಾಳಿಯಲ್ಲಿ ನಿಂತು ಟಿಕೆಟ್ಟುಗಳನ್ನು ತೆಗೆಯುವ ಗುರುತರ ಜವಾಬ್ದಾರಿ ಅವಳದಾಗಿತ್ತು. ಮೂವರಲ್ಲಿ ಚಿಕ್ಕವನಾದ ನನ್ನದು ಏನಿದ್ದರೂ ಲಕ್ಷ್ಮಣನ ಪಾತ್ರ,ಇರಲಿ.
ನಾವು ಊಟ ಮುಗಿಸಿ ನಡೆದು ಸಂತೋಷ ಥಿಯೇಟರ್ ಗೆ ಬಂದಾಗ ಮಧ್ಯಾಹ್ನ ಸರಿ ಸುಮಾರು ಒಂದೂವರೆ ಗಂಟೆಯಾಗಿರಬಹುದು. ಟಾಕೀಸ್ ನ ಹೊರಗೆ ಕಂಪೌಂಡ್ ನಲ್ಲಿ ಜನ ಕಾಣಲಿಲ್ಲ. ನಮಗೆ ಒಂದು ಕ್ಷಣ ಸ್ವಲ್ಪ ಆಶ್ಚರ್ಯವಾಯಿತು. ಆದರೆ ಪಾರ್ಕಿಂಗ್ ನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸಾಯಕಲ್ ಗಳನ್ನು ಕಂಡು ಸಮಾಧಾನವಾಯಿತು. ಆಗಲೇ ಟಿಕೆಟ್ ಗೆ ಪಾಳಿ ಹಚ್ಚಲು ತಡವಾಯಿತೆಂದು ದೀದೀ ಲಗುಬಗೆಯಲ್ಲಿ ಹೆಂಗಸರ ಟಿಕೆಟ್ ಕೌಂಟರ್ ಕಡೆಗೆ ಧಾವಿಸತೊಡಗಿದಳು. ಅಷ್ಟರಲ್ಲಿ ಟಾಕೀಸ್ ನ ವಾಚಮನ್ ಪ್ರತ್ಯಕ್ಷನಾಗಿ ಅಯ್ಯೋ ನೀವು ಸ್ವಲ್ಪ ತಡವಾಗಿ ಬಂದಿರಿ ಆಗಲೇ ಸಿನಿಮಾದ ಇಂಟರ್ವಲ್ ಆಗುವ ಸಮಯ ಬಂದಿತು ಅಂದನು.ನಾನು ಅಲ್ಲ ವಾಚಮನ್ ಸಾಹೇಬರೇ ನಾವು ಮ್ಯಾಟಿನಿ ಶೋದ ಟಿಕೆಟ್ ಗೆ ಪಾಳಿ ಹಚ್ಚಲು ಬೇಗ ಬಂದಿರುವುದಾಗಿ ತಿಳಿಸಿದೆ. ಅವನು ಈಗಲೇ ಪಾಳಿ ಹಚ್ಚಲು ಬಿಡುವುದಿಲ್ಲ, ಕನಿಷ್ಠ ಇನ್ನೂ ಅರ್ಧ ಮುಕ್ಕಾಲು ತಾಸು ಬಿಟ್ಟು ಬನ್ನಿರಿ ಎಂದು ನಮ್ಮನ್ನು ಹೊರಗೆ ಕಳಿಸಿದ.
ಅನಿವಾರ್ಯವಾಗಿ ಹೊರಬಂದು ಸ್ವಲ್ಪಹೊತ್ತು ಹೊರಗೆ ಹಚ್ಚಿದ ಸಿನಿಮಾದ ವಿವಿಧ ದೊಡ್ಡ ದೊಡ್ಡ ಪೋಸ್ಟರ್ ಗಳನ್ನು ನೋಡಿ ಸಮಯ ಕಳೆದೆವು. ನಂತರ ಟಾಕಿಸನ ಎದಿರು ಹೊಸದಾಗಿ ನಿರ್ಮಾಣ ವಾಗುತ್ತಿದ್ದ ಭವ್ಯ ಕೇಂದ್ರ ಬಸ್ ನಿಲ್ದಾಣದ ನಿರೀಕ್ಷಣೆ ಮಾಡಿ ಬಂದೆವು. ಅಷ್ಟರಲ್ಲಿ ಆಗಲೇ ನಾಲ್ಕಾರು ಜನ ಹೆಂಗಸರು ಟಿಕೆಟನ ಪಾಳಿಯಲ್ಲಿ ನಿಂತಿದ್ದರು. ವಿನಃ ಕಾರಣ ಬಸ್ ನಿಲ್ದಾಣದಲ್ಲಿ ಬಹಳ ಸಮಯ ಕಳೆದೆವೆಂದು ನಮ್ಮನ್ನು ಬೈಯುತ್ತಾ ದೀದೀ ಲಗುಬಗೆಯಲ್ಲಿ ಟಿಕೆಟನ ಪಾಳಿ ಸೇರಿಕೊಂಡಳು. ಸಾಮಾನ್ಯವಾಗಿ ಪಾಳಿ ಪ್ರಾರಂಭವಾದ ಸುಮಾರು ಹೊತ್ತು ಪಾಳಿಯಲ್ಲಿ ನಿಂತ ಎಲ್ಲರೂ ಸಭ್ಯತೆಯಿಂದ ವರ್ತಿಸಿದರೆ, ಟಿಕೆಟ್ ಕೌಂಟರ್ ನಲ್ಲಿ ಲೈಟು ಹತ್ತಿ ಇನ್ನೇನು ಟಿಕೆಟ್ ಕೊಡುವವ ಕಿಟಕಿ ತೆಗೆಯುವ ಮುನ್ನ ಪಾಳಿಯಲ್ಲಿ ನಿಂತವರಲ್ಲಿ ನೂಕು ನುಗ್ಗಲು ಪ್ರಾರಂಭವಾಗುತ್ತಿತ್ತು.ಆಗ ಮಾತಿನ ಆರ್ಭಟ ಮತ್ತು ತೋಳು ಬಲಗಳ ಶಕ್ತಿ ಮೇಲುಗೈ ಸಾಧಿಸುತ್ತಿದ್ದವು. ಪ್ರದರ್ಶನವಾಗುತ್ತಿರುವ ಸಿನಿಮಾ ಬಹಳ ಪ್ರಸಿದ್ಧಿ/ಪ್ರಚಾರ ಪಡೆದು ಟಾಕೀಸು ಫುಲ್ ಹೌಸ್ ನಡೆಯುತ್ತಿದ್ದರೆ, ಪಾಳಿಯಲ್ಲಿ ನಿಂತವರಿಗೆ ತಲಾ ಎರಡೇ ಇಲ್ಲಾ ಮುರೇ ಟಿಕೆಟ್ ನೀಡುವ ಧಿಡೀರ್ ನಿರ್ಧಾರ ಟಿಕೆಟ್ ಕೌಂಟರ್ ನವರು ಪ್ರಕಟಿಸುತ್ತಿದ್ದರು. ಆಗಂತೂ ನೂಕು ನುಗ್ಗಲು ಇನ್ನೂ ಜಾಸ್ತಿ ಆಗುತ್ತಿತ್ತು. ಈ ಎಲ್ಲಾ ಕಾರಣದಿಂದ ಟಿಕೆಟ್ ನ ಪಾಳಿಯಲ್ಲಿ ಬಹಳ ಹೊತ್ತು ನಿಲ್ಲಬೇಕಾದ ದೀದೀಯಿಂದ ಏನಾದರೂ ಸಂದೇಶಗಳನ್ನು ಪಡೆಯಲು ಅಥವಾ ಏನಾದರೂ ಸಹಾಯ ಬೇಕಾದರೆ ತುರ್ತಾಗಿ ಒದಗಿಸಲು ನಾನು ಪಾಳಿಯ ಆಚೆಗೆ ಹನುಮನಂತೆ ನಿಂತೆ.
ಆಗಿನ ದಿನಗಳಲ್ಲಿ ಈಗಿನಂತೆ ಟಿಕೆಟ್ ಮೇಲೆ ಸೀಟ ನಂಬರ್ ಇರುತ್ತಿರಲಿಲ್ಲ. ಬಾಗಿಲಲ್ಲಿ ಟಿಕೆಟ್ ತೋರಿಸಿ ಮೊದಲು ಒಳ ನುಗ್ಗಿದವರಿಗೆ ಸೀಟು ಪಡೆಯುವ ಮೊದಲ ಆದ್ಯತೆ. ಎಲ್ಲರ ಉದ್ದೇಶ ಒಂದೇ, ಆದಷ್ಟು ಹಿಂದಿನ ಸಾಲಿನಲ್ಲಿ ಫ್ಯಾನಿನ ಗಾಳಿ ಚೆನ್ನಾಗಿ ಬರುವ ಮತ್ತು ಕೈ ಕಾಲು ಮತ್ತು ಕೂಡುವ ಸೀಟು ಗಟ್ಟಿಮುಟ್ಟಾದ ಆಸನದ ಆಯ್ಕೆ. ಆದ್ದರಿಂದ, ಅತ್ತ ದಾದಾ ಮೊದಲಿನ ಆಟ ಮುಗಿದ ನಂತರ ಮುಂದಿನ ಆಟದ ಪ್ರೇಕ್ಷರನ್ನು ಒಳಗೆ ಬಿಡುವ ಪ್ರತ್ಯೇಕ ಪ್ರವೇಶ ದ್ವಾರದಲ್ಲಿ ಪಾಳಿಯಲ್ಲಿ ನಿಂತಿದ್ದ. ಇನ್ನೇನು ಟಿಕೆಟ್ ಕೊಡಲು ಪ್ರಾರಂಭವಾಗುವ ಕೆಲವೇ ನಿಮಿಷಗಳ ಮೊದಲು ಟಿಕೆಟನ ಪಾಳಿಯಲ್ಲಿ ನಿಂತ ದೀದೀಗೆ ತಿಳಿದಿದ್ದೇನೆಂದರೆ 'ಸೊಸೆ ತಂದ ಸೌಭಾಗ್ಯ' ಸಿನಿಮಾ ಸ್ಕೋಪ್ ಚಿತ್ರವಾದ್ದರಿಂದ ಟಿಕೆಟ್ ದರ ನಾಲ್ಕಾಣೆ ಜಾಸ್ತಿ ಎಂದು. ನೂಕು ನುಗ್ಗಲಲ್ಲಿ ಹಣ ಕಳೆದುಕೊಳ್ಳಬಹುದೆಂದು ಮತ್ತು ಹೆಚ್ಚಿಗೆ ಮೊತ್ತದ ನೋಟು ಕೊಟ್ಟರೆ ವಾಪಸ್ ಕೊಡಲು ಚಿಲ್ಲರ್ ಇಲ್ಲವೆಂದು ಟಿಕೆಟ್ ಕೌಂಟರ್ ದವರು ಚಿಲ್ಲರ್ ಬುಧ್ಧಿ ತೊರಿಸುವರೆಂದು ದಾದಾ ಅವಳ ಕೈಯಲ್ಲಿ ಸರಿಯಾಗಿ ಮೂರು ಟಿಕೆಟ್ ಗೆ ಬೇಕಾದಷ್ಟೇ ಹಣ ಮಾತ್ರ ನೀಡಿದ್ದ. ಕೂಡಲೇ ೭೫ ಪೈಸೆ ಅಣ್ಣನಿಂದ ತಂದು ಕೊಡಲು ಅಕ್ಕ ಕಿರುಚಿದಳು. ನಾನು ಓಡಿ ಹೋಗಿ ಪ್ರವೇಶ ದ್ವಾರದ ಪಾಳಿಯಲ್ಲಿ ನಿಂತಿದ್ದ ಅಣ್ಣನಿಗೆ ವಿಷಯ ತಿಳಿಸಿ ಕೂಡಲೆ ಅವನಿಂದ ಹಣ ಪಡೆದು ಅಕ್ಕನ ಕೈಗೆ ಮುಟ್ಟಿಸುವುದರಲ್ಲಿ ಟಿಕೆಟ್ ಕೌಂಟರ್ ಕಿಟಕಿ ತೆಗೆದು ನೂಕು ನುಗ್ಗಲು ಪ್ರಾರಂಭವಾಗಿತ್ತು. ಅಂತೂ ಆ ಗದ್ದಲದಲ್ಲಿ ಮೂರು ಟಿಕೆಟ್ ಪಡೆಯುವಲ್ಲಿ ದೀದೀ ಯಶಸ್ವಿಯಾಗಿದ್ದಳು. ಆದರೆ ಈ ಮಧ್ಯೆ ತನ್ನ ಒಂದು ಜಡೆಯ ರಿಬ್ಬನ್ ಮತ್ತು ಕ್ಲಿಪ್ ಕಳೆದು ಕೊಂಡಿದ್ದಳು. ಮೂರು ಟಿಕೆಟ ಪಡೆದ ಖುಷಿ ಒಂದಾದರೆ ಪ್ರೀತಿಯ ರಿಬ್ಬನ್ ಮತ್ತು ಕ್ಲಿಪ್ ಕಳೆದುಕೊಂಡ ಹಳಹಳಿ ಇನ್ನೊಂದೆಡೆ. ಅಂತೂ ಸಾವರಿಸಿಕೊಂಡು ಇಬ್ಬರೂ ಚಿಕ್ಕ ದಾದಾ ನಿಂತಿದ್ದ ಸೆಕೆಂಡ್ ಕ್ಲಾಸನ ಪ್ರವೇಶ ದ್ವಾರದ ಪಾಳಿಯ ಕಡೆಗೆ ಧಾವಿಸಿದೆವು.
ಅಷ್ಟರಲ್ಲಿ ಆ ಪಾಳಿಯಲ್ಲಿ ನಿಂತ ಕೆಲ ಹೆಂಗಸರು ಸೆಕೆಂಡ್ ಕ್ಲಾಸು ಕೇವಲ ಹೆಂಗಸರಿಗೆ ಮಾತ್ರ, ನೀನು ಗಂಡಸು ಒಬ್ಬನೇ ಈ ಪಾಳಿಯಲ್ಲಿ ಹೇಗೆ ನಿಂತಿರುವಿ ಎಂದು ನಮ್ಮಣ್ಣನೊಂದಿಗೆ ತಕರಾರು ತೆಗೆದಿದ್ದರು. ಸರಿಯಾದ ಸಮಯಕ್ಕೆ ಮಧ್ಯೆ ಪ್ರವೇಶಿಸಿದ ನನ್ನಕ್ಕ ಅಣ್ಣನ ರಕ್ಷಣೆಮಾಡುವಲ್ಲಿ ಸಫಲಳಾದಳಷ್ಟೇ ಅಲ್ಲದೇ ಪ್ರವೇಶ ದ್ವಾರದ ಪಾಳಿಯಲ್ಲಿ ನಾವಿಬ್ಬರೂ ಸೇರುವಂತೆ ನೋಡಿಕೊಂಡಳು. ಯಥಾ ಪ್ರಕಾರ ಇಲ್ಲಿಯೂ ಪ್ರವೇಶದ ಬಾಗಿಲು ತೆಗೆಯುವುದರಲ್ಲಿ ಪಾಳಿಯಲ್ಲಿ ನೂಕು ನುಗ್ಗಲು ಪ್ರಾರಂಭವಾಯಿತು. ಅಂತೂ ಆ ನೂಕು ನುಗ್ಗಲಿನಲ್ಲಿ ಮೂವರೂ ಪ್ರತ್ತೇಕವಾಗಿ ಟಿಕೆಟ್ ತೋರಿಸಿ ಒಳಬಂದು ಒಂದೇ ಕಡೆ ಮೂರು ಆಸನಗಳನ್ನು ಹಿಡಿದು ಕೂತೆವು. ಮೂವರಲ್ಲೂ ಎನೋ ಒಂದು ದೊಡ್ಡ ಯುದ್ಧಮಾಡಿ ಗೆದ್ದ ಸಂಭ್ರಮದ ಖುಷಿ ಮೂಡಿತ್ತು.
ಇನ್ನೇನು ಸಿನಿಮಾ ಸುರು ಆಗುವುದಕ್ಕೂ ಮುನ್ನ ಲೈಟುಗಳು ಡಿಮ್ಮಾಗಿ ಟಾಕೀಸ್ ನಲ್ಲಿ ಧೂಮ್ರಪಾನ , ಮಧ್ಯಪಾನ ನಿಷೇಧದ ಸ್ಲೈಡಗಳು ಬೀಳಲು ಪ್ರಾರಂಭವಾಗಿದ್ದವು. ಅಕಸ್ಮಾತಾಗಿ ನಾನು ನನ್ನ ಅಂಗಿಯ ಜೇಬಿನಲ್ಲಿ ಕೈ ಹಾಕಿದರೆ ನನ್ನ ಟಿಕೆಟ್ ಸಿಗಲಿಲ್ಲ. ಚಣ್ಣದ ಕಿಸೆಗೆ ಕೈ ಹಾಕಿದರೆ ಅಲ್ಲೂ ಟಿಕೆಟ್ ಇರಲಿಲ್ಲ. ನಾನು ಪ್ರವೇಶ ದ್ವಾರದಲ್ಲಿ ಆ ನೂಕುನುಗ್ಗಲಿನಲ್ಲಿ ನನ್ನ ಟಿಕೆಟನ್ನು ಕಳೆದು ಕೊಂಡಿದ್ದೆ. ಏರ್ ಕೂಲರ್ ನ ತಂಪಾದ ಗಾಳಿ ಬೀಸಿದರೂ ನಾನು ಬೆವರಲಾರಂಭಿಸಿದೆ. ಸಿನಿಮಾ ಪ್ರಾರಂಭವಾದಮೇಲೆ ಗೇಟ್ ಕೀಪರ್ ಗಳು ಬ್ಯಾಟರಿ ಹಿಡಿದು ಟಿಕೆಟ್ ತಪಾಸಣೆಗೆ ಬಂದಾಗ ಏನು ಮಾಡಬೇಕು ಎಂಬ ಚಿಂತೆ ಪ್ರಾರಂಭವಾಗಿತ್ತು. ನಿಧಾನವಾಗಿ ಪಕ್ಕದಲ್ಲಿದ್ದ ಅಣ್ಣನಿಗೆ ವಿಷಯವನ್ನು ತಿಳಿಸಿದೆ. ಪ್ರಾರಂಭದಿಂದ ಸಿನೆಮಾ ನೋಡುವ ತವಕದಲ್ಲಿದ್ದ ನನ್ನಣ್ಣ ಪ್ರವೇಶ ದ್ವಾರದ ಹತ್ತಿರ ಎಲ್ಲಿಯಾದರೂ ಬಿದ್ದಿರಬಹುದು ಹೋಗಿ ನೋಡಿಕೊಂಡು ಬರಲು ಹೇಳಿದ. ನಾನು ಸಾಲಿನ ಎಲ್ಲಾ ಸೀಟುಗಳನ್ನು ದಾಟಿಕೊಂಡು ಪ್ರವೇಶ ದ್ವಾರದ ಪಕ್ಕದಲ್ಲಿ ಎಲ್ಲಕಡೆ ಕಣ್ಣರಳಿಸಿ ಹುಡುಕಾಡಿದೆ. ಟಾಕೀಸ್ ನಲ್ಲಿ ಆಗಲೇ ಲೈಟ್ ಗಳು ಡಿಮ್ಮಾದ್ದರಿಂದ ಟಿಕೆಟ್ ಕಾಣಿಸಲಿಲ್ಲ. ನಿಧಾನವಾಗಿ ನೆಲದಲ್ಲಿ ಕೈಯಾಡಿಸಿ ನೋಡಿದೆ.ನನ್ನ ದುರದೃಷ್ಟಕ್ಕೆ ಬರೀ ತಂಬಾಕಿನ ಚೀಟಿಗಳು,ಶೇಂಗಾ ವಠಾಣಿ ಪೊಟ್ಟಣದ ಕಾಗದಗಳು ನನ್ನ ಕೈಗೆ ಹತ್ತಿದವು.ವಾಪಸ್ ಬಂದು ನಿಧಾನವಾಗಿ ವಿಷಯವನ್ನು ಅಕ್ಕನಿಗೆ ತಿಳಿಸುವದರಲ್ಲಿ ಸಿನಿಮಾ ಪ್ರಾರಂಭವಾಗಿತ್ತು. ಬಾಗಿಲ ಬಳಿ ಹೋಗಿ ಇನ್ನೊಮ್ಮೆ ಸರಿಯಾಗಿ ನೋಡು , ಟಿಕೆಟ್ ಸಿಕ್ಕರೆ ಒಳ್ಳೆಯದು ಇಲ್ಲದಿದ್ದರೆ ಮೊದಲು ಸಿಕ್ಕ ಶೇಂಗಾ ವಠಾಣಿ ಪೊಟ್ಟಣದ ಕಾಗದದ ತುಂಡನ್ನು ತರಲು ದೀದೀ ಸಲಹೆ ನೀಡಿದಳು.
ನಾನು ರಾಘವೇಂದ್ರ ಸ್ವಾಮಿಗಳನ್ನು ನೆನೆಯುತ್ತಾ ಮತ್ತೊಮ್ಮೆ ಬಾಗಿಲ ಬಳಿ ಹೋಗಿ ಕಳೆದ ಟಿಕೆಟಗಾಗಿ ಸಾಕಷ್ಟು ಹುಡುಕಾಡಿದೆ. ಈ ಬಾರಿ ಶೇಂಗಾ ವಠಾಣಿ ಪೊಟ್ಟಣದ ಕಾಗದದ ಜೊತೆಗೆ ಸಿನಿಮಾ ಟಿಕೆಟ್ ನ ಅಳತೆಯ ಇನ್ನೊಂದು ಕಾಗದದ ತುಂಡು ಸಿಕ್ಕಿತು. ಅದು ಕಳೆದ ನನ್ನ ಟಿಕೆಟ್ ಆಗಿರಬೇಕೆಂದು ಸಂತೋಷದಿಂದ ಬಂದು ಅದನ್ನು ಅಕ್ಕನ ಕೈಗಿತ್ತೆ. ಅವಳು ಅದನ್ನು ಕಣ್ಣರಳಿಸಿ ಪರಿಶೀಲನೆ ಮಾಡಿದಳು.ಅದು ಹಳದೀ ಬಣ್ಣದ ಟಿಕೆಟ್ಟು ಆಗಿತ್ತು.ಆದರೆ ಈ ಶೋ ಗೆ ನಮಗೆ ನೀಡಿದ ಟಿಕೆಟ್ ಕಂದು ಬಣ್ಣದ್ದು. ಚಿಂತೆ ಮಾಡಬೇಡ ಸುಮ್ಮನೇ ಕಿಸೆಯಲ್ಲಿ ಇಟ್ಟುಕೋ ಗೇಟ್ ಕೀಪರ್ ಟಿಕೆಟ್ ಪರಿಶೀಲನೆ ಬಂದಾಗ ನಾನು ನೋಡಿಕೊಳ್ಳುವೆ ಅಂದಳು. ರಾಘವೇಂದ್ರ ಸ್ವಾಮಿಗಳು ನನ್ನ ಪ್ರಾರ್ಥನೆಯನ್ನು ಆಲಿಸಿರಬೇಕು, ಅಂದು ಅದೇಕೋ ಗೇಟ್ ಕೀಪರ್ ಟಿಕೆಟ್ ಪರಿಶೀಲನೆಗೆ ಬರಲೇ ಇಲ್ಲ.
ಸಿನೆಮಾ ಶುರುವಾಗಿ ಅರ್ಧ ತಾಸಾಗಿರಬೇಕು, ಹೊಟ್ಟೇಬಾಕನಾದ ನನಗೆ ಅಮ್ಮ ತಿನ್ನಲು ಕೊಟ್ಟು ಕಳಿಸಿದ ಕರ್ಚಿಕಾಯಿ, ಚಕ್ಕುಲಿ ನೆನಪಾದವು. ಕರ್ಚಿಕಾಯಿ ತಿನ್ನುವ ಬಯಕೆಯನ್ನು ಅಣ್ಣನಲ್ಲಿ ವ್ಯಕ್ತಪಡಿಸಿದೆ. ಈಗ ಇಷ್ಟು ಬೇಗ ಬೇಡ ಮಧ್ಯಂತರದಲ್ಲಿ ತಿನ್ನುವಾ ಎಂದ. ಇಂಟರ್ವಲ್ ಆದಾಗ ದಾದಾ ಕರ್ಚಿಕಾಯಿ ಚಕ್ಕುಲಿ ಇದ್ದ ಚೀಲದಲ್ಲಿ ಕೈ ಹಾಕಿದ. ಥೆಯಟರ್ ನಲ್ಲಿ ಪ್ರವೇಸುವ ನೂಕು ನುಗ್ಗಲಿನಲ್ಲಿ ಚೀಲದಲ್ಲಿದ್ದ ಆ ಕರ್ಚಿಕಾಯಿ,ಚಕ್ಕಲಿಗಳು ಪುಡಿ ಪುಡಿಯಾಗಿ ಬೆರೆತಿದ್ದವು. ಆ ಪುಡಿಪುಡಿ ಆದ ಕರ್ಚಿಕಾಯಿ, ಚಕ್ಕಲಿಗಳನ್ನು ಸಮನಾಗಿ ಮೂರು ಭಾಗದಲ್ಲಿ ಹಂಚುವುದು ಹೇಗೆ ಮತ್ತೂ ಸಿಹಿ ಮತ್ತು ಖಾರ ಮಿಶ್ರಿತ ತಿಂಡಿ ತಿನ್ನುವುದಾದರೂ ಹೇಗೆ ಎಂಬ ದೊಡ್ಡ ಸಮಸ್ಯೆ ಎದುರಾಯಿತು. ಮೂವರೂ ಕೇವಲ ಬಾಟಲಿಯಲ್ಲಿ ತಂದ ನೀರನ್ನು ಕುಡಿದು ಸಿನೆಮಾ ನೋಡಿ ಮನೆಗೆ ಹೋದಮೇಲೆ ಈ ಸಮಸ್ಯೆಯನ್ನು ಬಗೆಹರಿಸಿದರಾಯಿತು ಎಂದು ಸರ್ವ ಸಮ್ಮತಿಯಿಂದ ತೀರ್ಮಾನಿಸಿದೆವು.
ಅಂತೂ ಸೊಸೆ ತಂದ ಸೌಭಾಗ್ಯ ಸಿನಿಮಾ ನೋಡಿ ಕಣ್ಣು ಕಿವಿಗಳು ಆನಂದಪಟ್ಟವೇ ಹೋರತು ಸಿನಿಮಾ ನೋಡುತ್ತಾ ಕರ್ಚಿಕಾಯಿ ಚಕ್ಕುಲಿ ತಿನ್ನುವ ಸೌಭಾಗ್ಯವನ್ನು ನಾಲಿಗೆ ಮಾತ್ರ ಪಡೆಯಲಿಲ್ಲ.
- ಜಯಂತ ಕಿತ್ತೂರ
Yeppa, you have such a strong memories, I could recollect the Santosh Theater feel by your description. From Lapata ladies to Sose tanda Soubhagya......
ಪ್ರತ್ಯುತ್ತರಅಳಿಸಿಜಯಂತನ ನೆನಪಿನ ಶಕ್ತಿ ಅದರಲ್ಲೂ ನೀರು ಹಾಕುತ್ತಿರುವ ಶಿಲಾಬಾಲಿಕೆ ನನಗೂ ಸಂತೋಷ ಥಿಯೇಟರ್ ಕಣ್ಣು ಮುಂದೆ ಬರುವಂತಾಯ್ತು. ಸೊಗಸಾದ ವರ್ಣನೆ
ಪ್ರತ್ಯುತ್ತರಅಳಿಸಿSir, Nicely written with detail explanation. Hats off to you sir for your memory power, You remember each and every small things. I enjoyed with lots of smiles while reading this story thanks. Please keep writing Sir
ಪ್ರತ್ಯುತ್ತರಅಳಿಸಿEvery minute detail written so nicely I really enjoyed reading it
ಪ್ರತ್ಯುತ್ತರಅಳಿಸಿAmazing article.. you took us back to our childhood days👌
ಪ್ರತ್ಯುತ್ತರಅಳಿಸಿKeep writing!!
Sir nimma article super namagu namma balyadalli navu picture hodag aagidda anubhava and nenapugalannu taaja madidakke dhanyavaadgalu
ಪ್ರತ್ಯುತ್ತರಅಳಿಸಿಸಂತೋಷ್ ಟಾಕೀಸ್ ನಲ್ಲಿನ ಈ ಸಿನಿಮಾ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. 5 ಜನ ಮಕ್ಕಳಲ್ಲಿ ನಾವು ಕೊನೆಯ ಮೂವರದು ಒಂದು ಗ್ಯಾಂಗ್ ಇರುತ್ತಿತ್ತು. ನಾವುಗಳು ಒಂದುಗೂಡಿ ಅಮ್ಮನಲ್ಲಿ ಶಿಫಾರಸು ಮಾಡಿ ಈ ಸಿನಿಮಾಕ್ಕೆ ಪರ್ಮಿಷನ್ ಪಡೆದದ್ದರಿಂದ ಹಿಡಿದು ಪೂರ್ಣ ಪ್ರಕರಣವನ್ನು ಮನ ಮುಟ್ಟುವ ಹಾಗೇ ಬರೆದಿದ್ದಿ. ಜಯಂತ್. ಮಸ್ತ್ ಆರ್ಟಿಕಲ್👏
ಪ್ರತ್ಯುತ್ತರಅಳಿಸಿನಿನ್ನ ದೀದಿ..
ಕೆಲವು ಘಟನೆಗಳು ಸದಾ ಮನದಲ್ಲಿ ಹಸಿರಾಗಿ ಇರುತ್ತವೆ..... ಚೆನ್ನಾಗಿ ಬರೆದಿದ್ದೀರಿ
ಪ್ರತ್ಯುತ್ತರಅಳಿಸಿಹಳೇ ನೆನಪುಗಳು ತಾಜಾ ಆದವು.. ಕಲಬುರ್ಗಿ (ನಾವಿದ್ದಾಗಿನ ಗುಲ್ಬರ್ಗಾ) ಸಿನೆಮಾ ಥಿಯೇಟರ್ ಗಳ ವರ್ಣನೆ ಓದಿ ಬಾಲ್ಯದ ನೆನಪುಗಳು ತಾಜಾ ಆದವು.. ಒಟ್ಟಾರೆ ಗುಲ್ಬರ್ಗಾದ ಕಣ್ಣು ಮುಂದೆ. ಬಂದಂತಾಯಿತು
ಪ್ರತ್ಯುತ್ತರಅಳಿಸಿVery nice
ಪ್ರತ್ಯುತ್ತರಅಳಿಸಿ