ಗೋಡೆ ಬರಹ



ಮೊನ್ನೆ ಮೊನ್ನೆ ಮೈಕ್ರೋ ಫೈನಾನ್ಸ್ ಕಂಪನಿಗಳ ಸಾಲ ವಸೂಲಾತಿಯ ಅತಿರೇಕ ಅವಾಂತರಗಳ ಬಗ್ಗೆ ತಾವೆಲ್ಲ ಪತ್ರಿಕೆಗಳಲ್ಲಿ ಓದಿರಬಹುದು ಇಲ್ಲವೇ ಟೀವಿಯ ಸುದ್ದಿ ಮಾಧ್ಯಮಗಳಲ್ಲಿ ನೋಡಿರಲೂಬಹುದು. ಅನೇಕ ಹಳ್ಳಿಗರ ಮನೆಯ ಗೋಡೆಗಳ ಮೇಲೆ 'ಈ ಸ್ವತ್ತು ಇಂತಹವರಿಗೆ ಅಡಮಾನವಾಗಿದೆ' ಎಂದು ಕರಿ ಮಸಿಯಿಂದ ಬರೆದಿರುವ ಫೋಟೋಗಳನ್ನೂ ಪತ್ರಿಕೆಗಳಲ್ಲಿ ನೋಡಿರಬಹುದು. ಈ ಮೈಕ್ರೋ ಫೈನಾನ್ಸಗಳು ಅತೀ ಕಡಿಮೆ ವಾರ್ಷಿಕ ಆದಾಯದ ಕುಟುಂಬದ ಅವಶ್ಯಕತೆಗೆ ಅನುಸಾರವಾಗಿ ಕುಟುಂಬದ ಸದಸ್ಯರಿಗೆ ನೀಡುವ ಸಾಲದ ಕಾರ್ಯನಿರ್ವಹಣಾ ಮಾರ್ಗಸೂಚಿಯ ವಿವರಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ೨೦೨೨ ನಲ್ಲಿಯೇ ಪ್ರಕಟಿಸಿದೆ. ಕೇಂದ್ರ ಸರ್ಕಾರದ, ಭಾರತೀಯ ರಿಸರ್ವ್ ಬ್ಯಾಂಕಿನ, ಸಣ್ಣ ಸಾಲ ನೀಡುವ ಮೈಕ್ರೋ ಫೈನಾನ್ಸ್ ನವರ ಮತ್ತು ಸಾಲ ಪಡೆಯುವವರ ಹೀಗೆ ಎಲ್ಲರ ಉದ್ದೇಶಗಳು ಒಳ್ಳೆಯದೇ ಆಗಿದ್ದರೂ, ಅನಿವಾರ್ಯವಾಗಿ ಅಥವಾ ಪರಿಸ್ಥಿತಿ ಕೈಮೀರಿಯೋ ಅಥವಾ ಇನ್ನಾವುದೋ ಕಾರಣದಿಂದ ಸಕಾಲದಲ್ಲಿ ಸಾಲ ಮರುಪಾವತಿ ಮಾಡುವುದಕ್ಕಾಗದ ಪರಿಸ್ಥಿತಿಯಲ್ಲಿ ಸಾಲ ಪಡೆದವರ ಮನೆಯ ಗೋಡೆಗಳ ಮೇಲೆ ಮೈಕ್ರೋ ಫೈನಾನ್ಸ್ ಕಡೆಯವರು 'ಈ ಸ್ವತ್ತು ಇಂತಹವರಿಗೆ ಅಡಮಾನವಾಗಿದೆ' ಎಂದು ಬರೆದುದರಿಂದ ಅಪಮಾನಿತರಾದ ಸಾಲಗಾರರು, ಕೇವಲ ಆ ಮನೆಯನ್ನಲ್ಲದೇ ಆ ಊರನ್ನೇ ತೊರೆದು ಗುಳೆ ಹೋಗುತ್ತಿರುವುದು ಅಥವಾ ಇನ್ನಾವುದೋ ಅತಿರೇಕದ ನಿರ್ಧಾರ ತೆಗೆದುಕೊಂಡಿರುವುದು ನಿಜಕ್ಕೂ ಖೇದಕರ. ಇದು ಒಂದು ರೀತಿಯಲ್ಲಿ ತಾತ್ಕಾಲಿಕ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡಂತೆ ಅಲ್ಲವೇ. ಇದು ಒಂದು ವ್ಯವಸ್ಥೆಯ ಸೋಲನ್ನು ಸೂಚಿಸುತ್ತದೆ. ಸುದೀರ್ಘ (ಹುಸಿ) ನಿದ್ದೆಯಿಂದ ಎಚ್ಚರವಾದಂತೆ ನಮ್ಮ ಸರ್ಕಾರ ಈಗ ಈ ವಿಷಯದಲ್ಲಿ ಸುಗ್ರೀವಾಜ್ಞೆ/ವಿಧೇಯಕ ಹೊರಡಿಸುವ ಧಾವಂತದಲ್ಲಿರುವುದು ಊರು ಕೊಳ್ಳಿಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ ಕಾಣುತ್ತದೆ. ತಡವಾದರೂ ಪರಿಸ್ಥಿತಿಗೆ ಅನುಗುಣವಾಗಿ ಸ್ಪಂದಿಸುವ ಪ್ರಯತ್ನದಲ್ಲಿದೆ ಎಂಬುದು ಸಮಾಧಾನದ ಮಾತು.ಇರಲಿ.

ಮಾನವನ ಈ ಗೋಡೆ ಬರಹದ ಚಾಳಿ ಇಂದು ನಿನ್ನೆಯದಲ್ಲ. ಶಿಲಾಯುಗದ ಮಾನವ ಇನ್ನೂ ಶಾಸ್ತ್ರೀಯ ಭಾಷೆ, ಲಿಪಿಗಳ ಬೆಳವಣಿಗೆಗೂ ಮುನ್ನ ತನ್ನ ಮನಸ್ಸಿನಲ್ಲಿನ ವಿವಿಧ ಭಾವನೆಗಳನ್ನು ವ್ಯಕ್ತಪಡಿಸಲು ತಾನು ವಾಸವಾಗಿದ್ದ ಗುಹೆಗಳ ಗೋಡೆಗಳ ಮೇಲೆ ವಿವಿಧ ರೀತಿಯ ಚಿತ್ರಗಳನ್ನು, ನಕಾಶೆಗಳನ್ನು ಬರೆದ ಕುರುಹುಗಳನ್ನು ಇಂದಿಗೂ ಕಾಣಬಹುದು. ಅದೇ ರೀತಿ ಎಳೆಯ ಮಕ್ಕಳು ಮನೆಯ ಗೋಡೆಗಳ ಮೇಲೆ ಬಳಪ, ಸೀಸಪೆನ್ಸಿಲ್, ಸ್ಕೆಚ್ ಪೆನ್ ಮುಂತಾದವುಗಳಿಂದ ವಿವಿಧ ಪ್ರಕಾರದ ಚಿತ್ರ,ಗೆರೆಗಳನ್ನು ಗೀಚುವುದು ಸರ್ವೇ ಸಾಮಾನ್ಯ. ಇನ್ನು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪರೀಕ್ಷಾ ದಿನಗಳಲ್ಲಿ ತರಗತಿಗಳ ಗೋಡೆಯ ಮೇಲೆ ಗಣಿತದ ವಿವಿಧ ಸೂತ್ರಗಳು/ಪ್ರಮೇಯಗಳು, ರಸಾಯನ ಶಾಸ್ತ್ರದ ಸಮೀಕರಣಗಳನ್ನು ಇಲ್ಲವೆ ಜೀವಶಾಸ್ತ್ರದ ಚಿತ್ರಗಳನ್ನು ಬರೆಯುವ ಚಾಳಿ ಬೆಳೆಸಿಕೊಂಡಿರುವುದು ನನ್ನಂಥ ಶಿಕ್ಷಕವೃಂದಕ್ಕೆ ದೊಡ್ಡ ತಲೆನೋವನ್ನು ಒದಗಿಸುತ್ತವೆ ಎಂಬುದು ಬೇರೆ ಮಾತು.
ನಾಗರಿಕತೆ ಬೆಳೆದಂತೆ ಮಾನವ ಕಾಡಿನಿಂದ ಹೊರಬಂದು ಮನೆಗಳನ್ನು ಕಟ್ಟಿಕೊಂಡು ನಾಡುಗಳನ್ನು ನಿರ್ಮಿಸಿದ. ವಿವಿಧ ಭಾಷೆ ಬರವಣಿಗೆಗಳು ಬೆಳೆದವು ಮತ್ತು ಅದೇ ರೀತಿ ವಿವಿಧ ಬಗೆಯ ಗೋಡೆ ಬರಹಗಳು ಪ್ರಾರಂಭವಾದವು.
ಇಂದಿನ ಡಿಜಲೀಕೃತ ಯುಗದಲ್ಲಿ ವಿವಿಧ ಸಾಮಾಜಿಕ ಮಾಧ್ಯಮಗಳು ತಮ್ಮ ಬಳಕೆದಾರರು ತಮ್ಮ ಅಥವಾ ತಮ್ಮ ಮಿತ್ರರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲು ಸಾಮಾಜಿಕ ಮಾಧ್ಯಮದ ಗೋಡೆಗಳನ್ನು ಉಪಯೋಗಿಸುವ ಸವಲತ್ತು ನೀಡುತ್ತವೆ. ಈ ಗೋಡೆಯಲ್ಲಿ ಫೇಸ್‌ಬುಕ್, ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ಪೋಸ್ಟ್‌ಗಳನ್ನು/ವಿಷಯವನ್ನು ಸಂಗ್ರಹಿಸಿ ಒಂದೇ ಸ್ಥಳದಲ್ಲಿ ತಂದು ಡಿಜಿಟಲ್ ಪ್ರದರ್ಶನಕ್ಕಾಗಿ ಇಡಲು ಬಳಸಲಾಗುತ್ತದೆ. 

ನಾವು ಪ್ರೌಢಶಾಲೆಯ ವಿದ್ಯಾರ್ಥಿಗಳಿದ್ದಾಗ ಇದ್ದಲಿನಿಂದ ಶಾಲೆಯ ಗೋಡೆಯ ಮೇಲೆ ಹುಡುಗನ ಹೆಸರು + ಹುಡುಗಿಯ ಹೆಸರು ಅಥವಾ I love you ಹುಡುಗಿಯ ಹೆಸರು ಬರೆದಿರುವುದು ಸಾಮಾನ್ಯವಾಗಿ ಕಂಡು ಬರುತ್ತಿದ್ದವು.ಅನೇಕ ಬಾರಿ ಮುಖ್ಯೋಪಾಧ್ಯಾಯರು ಆ ಹುಡುಗ/ ಹುಡುಗಿಯ ಪಾಲಕರನ್ನು ಶಾಲೆಗೆ ಕರೆಸಿ ವಿಚಾರಣೆ ನಡೆಸುತಿದ್ದರು. ಸಾಮಾನ್ಯವಾಗಿ ಈ ತರಹದ ತರ್ಲೆ ಕೆಲಸವನ್ನು ಭಗ್ನಪ್ರೇಮಿ ಅಥವಾ ಮೂರನೆಯವರು ಯಾರೋ ಕುಚೋದ್ಯ ವಿದ್ಯಾರ್ಥಿಗಳು ಮಾಡಿರುತ್ತಿದ್ದರು. ಇಂತಹ ಗೋಡೆ ಬರಹಗಳು ಬೆಕ್ಕಿಗೆ ಚಲ್ಲಾಟ ಆದರೆ ಇಲಿಗೆ ಪ್ರಾಣ ಸಂಕಟದ ಘಟನೆಗಳಾಗಿರುತ್ತಿದ್ದವು. ಅಂಥ ಕೃತ್ಯಮಾಡಿದವರನ್ನು ಪತ್ತೆಹಚ್ಚಿ ಸೂಕ್ತ ಶಿಕ್ಷೆ ನೀಡುವಲ್ಲಿ ಶಾಲೆಯಲ್ಲಿಯ ಷರ್ಲಾಕ್‌ ಹೋಮ್ಸಗಳು ಸಹಾಯಕ್ಕೆ ಬರುತ್ತಿದ್ದರು ಎಂಬುದು ಬೇರೇಮಾತು. ಆದರೆ ಈ ಮಧ್ಯೆ ಪ್ರೌಢಾವಸ್ಥೆಯ ಹುಡುಗ/ಹುಡುಗಿಯ ಸೂಕ್ಷ್ಮ ಮನಸ್ಸಿನ ಮೇಲೆ ಈ ತರಹದ ಗೋಡೆ ಬರಹದ ಘಟನೆಗಳು ತೀವ್ರ ಪ್ರಭಾವ ಬೀರುತ್ತಿದ್ದು ಅದನ್ನು ತಡೆಯಲಾರದೆ ಕೆಲ ವಿದ್ಯಾರ್ಥಿಗಳು ಅತಿರೇಕದ ನಿರ್ಧಾರ ತೆಗೆದುಕೊಂಡಿರುವ ಅನೇಕ ಸುದ್ದಿಯನ್ನು ಪತ್ರಿಕೆಗಳಲ್ಲಿ ಓದಿರಬಹುದು. ಈ ತರಹದ ತರ್ಲೆ ಗೋಡೆ ಬರಹಗಳನ್ನು ಕೇವಲ ಶಾಲಾ ಗೋಡೆಗಳಲ್ಲದೇ ಗುಡಿ ಗುಂಡಾರಗಳ ಅಥವಾ ಪಕ್ಕದ ಹಳ್ಳಿಯ ಜಾತ್ರೇಲಿ ಇಲ್ಲವೆ ಅನೇಕ ಐತಿಹಾಸಿಕ ಸ್ಮಾರಕಗಳ ಗೋಡೆಯ ಮೇಲೆ ಇಂದೂ ಕಾಣಬಹುದು.ಈ ತರಹದ ಭಗ್ನ ಪ್ರೇಮಿಗಳಿಗೆ ಒಂದು ಸಲಹೆ... ಆ ಪ್ರೀತಿಮಾಡಿ ಕೈ ಕೊಟ್ಟವರ ಹೆಸರಿನಲ್ಲಿ ಗುಡಿ ಅಥವಾ ಐತಿಹಾಸಿಕ ಸ್ಮಾರಕಗಳಲ್ಲಿ ಒಂದು ಪಾದರಕ್ಷಾ ಸ್ಟ್ಯಾಂಡ್ ಮಾಡಿಸಿಡಬಹುದು. ಇನ್ನು ಸೇಡು ಅಥವಾ ಹಣ ಜಾಸ್ತಿ ಇದ್ದರೆ, ಆಗ ಆ ಕೈ ಕೊಟ್ಟವರ ಸ್ಮರಣಾರ್ಥ ಮೂತ್ರಾಲಯ ಕಟ್ಟಿಸಬಹುದೇ ಹೊರತು ಗೋಡೆಯ ಮೇಲೆ ಅವರ ಹೆಸರು ಬರೆದು ಗೋಡೆಗಳ ಪವಿತ್ರತೆಯನ್ನು ಹಾಳು ಮಾಡಬಾರದು.

ಮೊದಲು ನಮ್ಮೂರ ಶಾಲೆಗಳ ಪ್ರಮುಖ ಗೋಡೆಗಳ ಮೇಲೆ ಭಾರತ ದೇಶದ, ಕರ್ನಾಟಕ ರಾಜ್ಯದ ನಕಾಶೆ, ಸ್ವಾತಂತ್ರ ಸಂಗ್ರಾಮದ ಪ್ರಮುಖ ದೇಶ ಭಕ್ತರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡದ ಸಾಹಿತಿಗಳ ಚಿತ್ರಗಳನ್ನು ಬರೆದಿರುತ್ತಿದ್ದರು.ಇತ್ತೀಚೆಗೆ ಶಿಕ್ಷಣ ಇಲಾಖೆಯ ಕಲಿ-ನಲಿ ಕಾರ್ಯಕ್ರಮದ ಅಡಿಯಲ್ಲಿ ಶಾಲೆಯ ಗೋಡೆಗಳ ಮೇಲೆ ಏನೆಲ್ಲಾ ಶೈಕ್ಷಣಿಕ ಚಿತ್ರಗಳನ್ನು ಬರೆಸಬಹುದೆಂಬ ಕಾರ್ಯಾಗಾರ ಏರ್ಪಡಿಸುತ್ತದೆ. ಅಂಬಡಗಟ್ಟಿಯ ಕ್ಲಸ್ಟರ್ ಸಂಪನ್ಮೂಲ ಕೇಂದ್ರದ ಬ್ಲಾಗ ಸೈಟಿನಲ್ಲಿ ಇಂತಹ ವಿವಿಧ ಬಗೆಯಲ್ಲಿ ವರ್ಗಿಕೃತ ನೂರಾರು ಗೋಡೆ ಬರಹದ ಚಿತ್ರಗಳನ್ನು ನೋಡಿ ಯಾರೂ ಬೆರಗಾಗಬಹುದು. ನಮ್ಮೂರು ಬೆಳಗಾವಿಯಲ್ಲಿ ೨೦೧೧ ರ ವಿಶ್ವ ಸಾಹಿತ್ಯ ಸಮ್ಮೇಳನ ನಡೆದಾಗ, ನಗರದ ಪ್ರಮುಖ ರಸ್ತೆಗಳ ಬದಿಯ ಕಂಪೌಂಡನ ಗೋಡೆಗಳು ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿಗೆ ಸಂಬಂಧಿಸಿದ ವಿವಿಧ ಬಣ್ಣ ಬಣ್ಣದ ಚಿತ್ತಾರಗಳಿಂದ ರಾರಾಜಿಸುತ್ತಿದ್ದು ಎಲ್ಲರ ಮೆಚ್ಚಗೆಗೆ ಪಾತ್ರವಾಗಿತ್ತು. ಈ ತರಹದ ಗೋಡೆ ಬರಹಗಳಿಂದ ಎರಡು ಬಗೆಯ ಉಪಯುಕ್ತತೆಯನ್ನು ಕಂಡುಕೊಳ್ಳಬಹುದು. ಒಂದನೇಯ್ದು ಗೋಡೆಯ ಸೌಂದರ್ಯ ವರ್ಧನೆ, ಎರಡನೆಯ್ದು ನಾಗರಿಕರಿಗೆ ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿಯ ಪರಿಚಯ.

ಬಾಲಕರಿದ್ದಾಗ ಅಡಗೋಲಜ್ಜಿ ಕತೆಗಳಲ್ಲಿ ಬ್ರಹ್ಮರಾಕ್ಷಸ ಬ್ರಾಹ್ಮಣನನ್ನು ತಿನ್ನಲು ರಾತ್ರಿ ಅವನ ಮನೆಗೆ ಬರುವ ಕಥೆ ಕೇಳಿದ ನಾವು ಬ್ರಹ್ಮರಾಕ್ಷಸ ರಾತ್ರಿ ನಮ್ಮ ಮನೆಯ ಒಳಗೆ ಬರಬಾರದೆಂದು ನಮ್ಮ ಮನೆಯ ತಲಬಾಗಿಲ ಗೋಡೆಯ ಮೇಲೆ 'ನಾಳೆ ಬಾ' ಎಂದು ಬರೆದು ಬ್ರಹ್ಮರಾಕ್ಷಸ ರಾತ್ರಿ ನಮ್ಮ ಮನೆಗೆ ಬಂದರೆ ನಮ್ಮ ಮನೆಯ ಗೋಡೆಯ ಮೇಲೆ ನಾವು ಬರೆದ ಆದೇಶವನ್ನು ಓದಿ ಶಿರಸಾ ಪಾಲಿಸುವನೆಂಬ ವಿಶ್ವಾಸದಿಂದ ನಿಶ್ಚಿಂತರಾಗಿ ಮಲಗುತ್ತಿದ್ದೆವು. ಅದೇ ರೀತಿ ಶತಮಾನಗಳಿಂದಲೂ ಹಳ್ಳಿಯ ಮನೆಗಳ ತಲೆಬಾಗಿಲ ಎಡ ಮತ್ತು ಬಲ ಭಾಗದಲ್ಲಿ ಶುಭ-ಲಾಭ ಎಂದು ಬರೆದಿರುವುದನ್ನು ನೀವೂ ಗಮನಿಸಿರಬಹುದು.ಈ ರೀತಿ ಬರೆಯುವುದು ಮನೆಗೆ ಧನಾತ್ಮಕ ಶಕ್ತಿ , ಸಮೃದ್ಧಿ, ಅದೃಷ್ಟವನ್ನು ನೀಡುತ್ತವೆ ಎಂಬುದು ನಂಬಿಕೆ. ನಮ್ಮ ಹಳ್ಳಿಯ ಬಹಳ ಪೊಗರಿನ ಸಾಹುಕಾರನನ್ನು ಕಾಡಿಸಲು ಕೆಲವು ಪೊಲಿ ಲಪೂಟ ಹುಡುಗರು ಪಕ್ಕದ ನಾಲ್ಕಾರು ಹಳ್ಳಿಗಳ ಸಂತೆಯಲ್ಲಿ ನಮ್ಮೂರ ಸಾಹುಕಾರ ಮಕ್ಕಳ ವಿದ್ಯಾಭ್ಯಾಸಕ್ಕೆ ಹಳ್ಳಿಯ ಮನೆಯನ್ನು ಮಾರಿಕೊಂಡು ಬೆಳಗಾವಿಗೆ ಗುಳೆ ಹೋಗುವವನಿದ್ದಾನೆ ಎಂದು ಪುಕಾರು ಹಬ್ಬಿಸಿದ್ದರಂತೆ. ಈ ಸುದ್ದಿ ಸಾಹುಕಾರನ ಕಿವಿಗೂ ಬಿದ್ದು, ತನ್ನ ಘನತೆಗೆ ಆಗಬಹುದಾದ ಕುಂದನ್ನು ತಪ್ಪಿಸಲು ಆ ಸಾಹುಕಾರ ತನ್ನ ಮನೆಯ ಗೋಡೆಯ ಮೇಲೆ 'ಈ ಆಸ್ತಿ ಮಾರಾಟಕ್ಕಿಲ್ಲ' ಎಂದು ತಾನೇ ಬರೆಸಿದ ಒಂದು ಘಟನೆಯನ್ನು ನಮ್ಮಜ್ಜಿ ಹೇಳಿದ್ದು ನೆನಪಿಗೆ ಬರುತ್ತಿದೆ. ಹಳ್ಳಿಯ ವಿಚಾರ ಹಾಗಾದರೆ ನಮ್ಮ ನಗರ ಪ್ರದೇಶಗಳಲ್ಲಿ ಮನೆ ಮಾಲೀಕರು 'ಇಲ್ಲಿ ಮೂತ್ರ ಮಾಡಬಾರದು', 'ಇಲ್ಲಿ ಕಸ ಚಲ್ಲಬಾರದು', 'ಇಲ್ಲಿ ವಾಹನ ನಿಲ್ಲಿಸಬಾರದು' ಮುಂತಾಗಿ ತಮ್ಮ ಮನೆಯ ಅಥವಾ ಕಂಪೌಂಡ್ ಗೋಡೆಯ ಮೇಲೆ ತಾವೇ ಬರೆಸಿರುವುದು ಸಾಮಾನ್ಯವಾಗಿದೆ. ಆದರೆ, ನಮ್ಮ ನಗರ ಪ್ರದೇಶದ ನಾಗರಿಕರು ಅಡಗೋಲಜ್ಜಿ ಕತೆಗಳಲ್ಲಿಯ ಬ್ರಹ್ಮರಾಕ್ಷಸನಷ್ಟು ವಿಧೇಯರಾಗಿರುವುದನ್ನು ನಾಕಾಣೆ.

ನಾನು ಹತ್ತನೆಯ ತರಗತಿಯಲ್ಲಿದ್ದಾಗ ನಮ್ಮ ತಂದೆಯವರು ಸಾಲ ಮೂಲ ಮಾಡಿ ಹೊಸ ಮನೆಯನ್ನು ಕಟ್ಟಿಸಿದ್ದರು. ನಾನು ತಡರಾತ್ರಿ ಅಭ್ಯಾಸ ಮಾಡುತ್ತಾ ಕೂತಾಗ ಮನೆಯ ಹೊರಗೆ ಯಾರೋ ಗುಸು ಗುಸು ಮಾತನಾಡಿದ, ಓಡಾಡಿದ ಸಪ್ಪಳ ಕೇಳಿಬಂತು. ತೆನಾಲಿ ರಾಮನ ಮನೆಗೆ ಒಂದು ರಾತ್ರಿ ಕಳ್ಳರು ಬಂದಾಗ ಅವನು ತನ್ನೆಲ್ಲ ಹಣ ಮತ್ತು ಬೆಲೆಬಾಳುವ ವಸ್ತುಗಳನ್ನು ಪೆಟ್ಟಿಗೆಯಲ್ಲಿಟ್ಟು ಬಾವಿಯಲ್ಲಿ ಹಾಕುವ ನಾಟಕವಾಡಿ ಕಳ್ಳರನ್ನು ಹಿಡಿದ ಕಥೆಯನ್ನು ನಮ್ಮಮ್ಮ ನಿಂದ ಕೇಳಿದ್ದು ನೆನಪಾಗಿ ನಾನು ಅಂತಹುದೇ ನಾಟಕವಾಡಲು ಪ್ರಯತ್ನಿಸಿದೆ. ಆದರೆ ಮನೆಯ ಬಾಗಿಲು ತೆಗೆಯುವ ಧೈರ್ಯ ಮಾಡಲಿಲ್ಲ.ಆಶ್ಚರ್ಯಕರವಾಗಿ ನಾನು ಅಂದುಕೊಂಡಂತೆ ಮನೆಯ ಹೊರಗೆ ಬಂದ ಕಳ್ಳರು ಓಡಿ ಹೊದರು. ಮರುದಿನ ಬೆಳಿಗ್ಗೆ ಬೇಗ ಎದ್ದು ರಾತ್ರಿಯ ಘಟನೆಯ ಬಗ್ಗೆ ಮನೆ ಮಂದಿಗೆ ತಿಳಿಸಿ ಮನೆ ಬಾಗಿಲು ತೆಗೆದು ನೋಡಿದಾಗ 'ಈ ಪಕ್ಷಕ್ಕೆ ಮತ ದೇಶಕ್ಕೆ ಹಿತ' ಎಂಬ ಸ್ಲೋಗನ್ ಜೊತೆಗೆ ಪಕ್ಷದ ಚಿಹ್ನೆಯನ್ನು ರಾತ್ರಿ ನಾನು ಅಂದುಕೊಂಡಿದ್ದ ಕಳ್ಳರು ನಮ್ಮ ಹೊಸ ಮನೆಯ ಬಿಳಿ ಗೋಡೆಯ ಮೇಲೆ ಬರೆದು ಹೋಗಿದ್ದರು. ನಮ್ಮ ಮನೆಮಂದಿಗೆಲ್ಲ ಎಲ್ಲಿಲ್ಲದ ಸಿಟ್ಟು ಬಂದಿತು. ನಮ್ಮ ಮನೆಯಷ್ಟೇ ಅಲ್ಲ ನಮ್ಮ ಓಣಿಯ ಎಲ್ಲ ಮನೆಗಳ/ಕಾಂಪೌಂಡಿನ ಗೋಡೆಗಳ ಮೇಲೆ ಇದೇ ರೀತಿ ಬರೆದು ಗೋಡೆಗಳ ಸೌಂದರ್ಯವನ್ನು ಹಾಳು ಮಾಡಲಾಗಿತ್ತು. ಇದನ್ನು ಕಂಡಾಗ ನನಗೆ ತೆನಾಲಿರಾಮನ ಇನ್ನೊಂದು ಕಥೆ ನೆನಪಾಯಿತು. ಅದೇ, ಕಳ್ಳರು ಅಂದು ರಾತ್ರಿ ಯಾವ ಮನೆಗೆ ಕನ್ನ ಹಾಕಬೇಕೆಂದು ನಿರ್ಧರಿಸಿದ ಆ ಮನೆಯ ಗೋಡೆಯ ಮೇಲೆ X ಚಿನ್ಹೆ ಹಾಕಿ ಹೋಗಿರುತ್ತಾರೆ. ಇದನ್ನರಿತ ತೆನಾಲಿ ರಾಮ ಊರಿನ ಎಲ್ಲಾ ಮನೆಗಳ ಗೋಡೆಯ ಮೇಲೆ ಅದೇ ತರಹದ ಚಿನ್ಹೆಯನ್ನು ಬಳೆದು ಕಳ್ಳರಿಗೆ ಚಳ್ಳೇಹಣ್ಣು ತಿನ್ನಿಸಿದ್ದು. ಅದರಂತೆ ನಮ್ಮ ಓಣಿಯ ಎಲ್ಲ ಹಿರಿಯರು ಆ ರೀತಿ ಪಕ್ಷದ ಪ್ರಚಾರದ ಗೋಡೆ ಬರಹ ಬರೆದು ಮನೆಯ/ಕಾಂಪೌಂಡಿನ ಅಂದ ಕೆಡಿಸಿದ ಆ ಪಕ್ಷಕ್ಕೆ ಸುತಾರಾಂ ಮತ ಹಾಕಬಾರದೆಂದು ನಿರ್ಧರಿಸಿ ಆ ಪಕ್ಷಕ್ಕೆ ಚಳ್ಳೇಹಣ್ಣು ತಿನಿಸಿದರು. ಮುಂದೆ T N ಶೇಷನ್ ಭಾರತದ ಮುಖ್ಯ ಚುನಾವಣಾಧಿಕಾರಿ ಆಗುವವರೆಗೆ ಪ್ರತೀ ಚುನಾವಣೆಯಲ್ಲಿ 'ಈ ಚಿನ್ಹೆಗೆ ಮತ ಹಾಕಿ' ಅಥವಾ 'ಈ ಪಕ್ಷಕ್ಕೆ ಮತ ದೇಶಕ್ಕೆ ಹಿತ' ಎನ್ನುವ ಬರಹಗಳು ದಿನ ಬೆಳಗಾಗೋದರೊಳಗೆ ಮನೆಯ ಅಥವಾ ಕಂಪೌಂಡ್ ನ ಗೋಡೆಯ ಮೇಲೆ ಪ್ರತ್ಯಕ್ಷವಾಗಿ ಗೋಡೆಯ ಸೌಂದರ್ಯವನ್ನು ಹಾಳು ಮಾಡಿರುತ್ತಿದ್ದವು.

ಗೋಡೆ ಬರಹಕ್ಕೆ ಆಂಗ್ಲ ಭಾಷೆಯಲ್ಲಿ 'Writing on the wall' ಎಂಬ ಪದಗುಛ್ಘ ಬಳಕೆಯಲ್ಲಿದ್ದು ಇದು ಸಾಮಾನ್ಯವಾಗಿ ಸಧ್ಯದ ಪರಿಸ್ಥಿತಿಯಿಂದ ಅನಿವಾರ್ಯವಾದ ಅಪಘಾತ ಅಥವಾ ವಿಫಲತೆಯನ್ನು ಸೂಚಿಸಲು ಬಳಸಲಾಗುತ್ತದೆ. ಈ ಪದಗುಛ್ಘದ ಮೂಲವು ಪವಿತ್ರ ಗ್ರಂಥವಾದ ಬೈಬಲಿನ ಡಾನಿಯೇಲ್ ಪುಸ್ತಕದಿಂದ ಬಂದಿದೆ, ಇಲ್ಲಿ ದೇವರ ಕೈ ಒಂದು ರಹಸ್ಯ ಸಂದೇಶವನ್ನು ಗೋಡೆಯ ಮೇಲೆ ಬರೆದು, ಬಾಬಿಲೋನಿಯ ರಾಜ ಬೆಲ್ಶಚ್ಚರ್‌ಗೆ ಅವನ ಸಾಮ್ರಾಜ್ಯವೇ ನಿರ್ನಾಮವಾಗಲು ಬರುವುದನ್ನು ಸೂಚಿಸಿತ್ತು ಎಂದು ಅಂತರ್ಜಾಲದಿಂದ ತಿಳಿಯಿತು. ಫ್ರೆಂಚ್ ಕ್ರಾಂತಿಯ ಸಂದರ್ಭದಲ್ಲಿ ದೇಶದ ಜನ ರಾಜನ ಭ್ರಷ್ಟ ದುರಾಡಳಿತದಿಂದ ರೋಸಿ ಹೋಗಿ ದೊಂಬಿಎದ್ದಾಗ ಫ್ರಾನ್ಸ್‌ನ ರಾಜನಾಗಿದ್ದ ಲೂಯಿಸ್ XVI ಗೋಡೆಯ ಮೇಲಿನ ಬರಹವನ್ನು ಗ್ರಹಿಸದೇ ತನ್ನ ಅರಮನೆಯಲ್ಲಿ ಪಿಟಿಲು ಬಾರಿಸುತ್ತಾ ಕೂತಿದ್ದನೆಂದು ಇತಿಹಾಸದ ಪಾಠ ಮಾಡುವಾಗ ನಮ್ಮ ಶಿಕ್ಷಕರು ವಿವರಿಸಿದ್ದು ಇಲ್ಲಿ ನನಗೆ ನೆನಪಿಗೆ ಬರುತ್ತಿದೆ. ಇದು ಯಾವುದೇ ಘಟನೆಯಲ್ಲಿ ಅಥವಾ ಪರಿಸ್ಥಿತಿಯಲ್ಲಿ Writing on the wall‌ ಅಂದರೆ ಗೋಡೆ ಬರಹ ಎಚ್ಚರಿಕೆಯ ಸಂಕೇತಗಳನ್ನು ಗಮನಿಸದಿದ್ದರೆ ಅವಶ್ಯಕವಾದ ವಿಫಲತೆ ಅಥವಾ ಹಾನಿ ಎದುರಿಸಬೇಕಾಗಿ ಬರಬಹುದು ಎಂಬುದನ್ನು ಸೂಚಿಸುತ್ತದೆ.ಈಗ ಉತ್ತುಂಗದಲ್ಲಿರುವ ಅಂತರ್ಜಾಲದ ತಂತ್ರಜ್ಞಾನ ನಮ್ಮ ನಾಗರಿಕ ಸಮಾಜದ ಎಲ್ಲ ಆಯಾಮಗಳ ಮೇಲೆ ತನ್ನದೇ ಆದ ರೀತಿಯಲ್ಲಿ, ಕ್ಷಿಪ್ರ ಮತ್ತು ತೀವ್ರವಾದ ಪರಿಣಾಮವನ್ನು ಬೀರುತ್ತಿದೆ. ಇದನ್ನು ಗಮನಿಸದೇ ಎಂದಿನಂತೆ ನಮ್ಮ ಸಾಂಪ್ರದಾಯಿಕ ಪದ್ಧತಿಯಲ್ಲಿ ವ್ಯಾಪಾರ, ವ್ಯವಹಾರ, ಶಿಕ್ಷಣ, ಮನರಂಜನೆ, ಆಡಳಿತ‌ ಇತ್ಯಾದಿಗಳನ್ನು ಮುಂದುವರಿಸಿದರೆ ನಮಗೆ ಉಳಿಗಾಲವಿಲ್ಲ ಎಂಬುದು ಇವತ್ತಿನ ಗೋಡೆ ಬರಹ ಅಂದರೆ Writing on the wall‌. ಇದನ್ನು ಇಂದಿನ ಪ್ರತಿಯೊಬ್ಬ ನಾಗರಿಕ ಅರಿತು ತಮ್ಮ ವ್ಯವಹಾರಗಳಲ್ಲಿ ಅಗತ್ಯವಾದ ಮಾರ್ಪಾಡು ಮಾಡಿಕೊಳ್ಳುವದು ಒಳಿತು.

ಹಾಗೆಂದು ಗೋಡೆ ಬರಹ ಕೇವಲ ಎಚ್ಚರಿಕೆ ಸಂಕೇತಗಳನ್ನು , ವಿಫಲತೆಯನ್ನು ಅಥವಾ ಹಾನಿಯನ್ನು ಸೂಚಿಸುತ್ತದೆ ಎಂದೇನಿಲ್ಲ. ಅವುಗಳಿಂದ ಅನೇಕ ಕಾಣದ ವಿಷಯಗಳನ್ನು ನಾವು ಅರಿಯಬಹುದು. ಕೆಲ ತಿಂಗಳುಗಳ ಹಿಂದೆ ಬೆಳಗಾವಿಯಿಂದ ಕಲಬುರ್ಗಿಗೆ ಕಾರಿನಲ್ಲಿ ಹೋಗುತ್ತಿರುವಾಗ ಹಾದಿಯಲ್ಲಿ ಅನೇಕ ಕಡೆ 'ಸೆಪ್ಟಿಕ್ ಟ್ಯಾಂಕ್ ಕ್ಲೀನಿಂಗ್ ಮತ್ತೂ ಮೋಬೈಲ್ ನಂಬರ್, ಪೈಖಾನಿ ಟ್ಯಾಂಕ್ ಕ್ಲೀನಿಂಗ್ ಮತ್ತೂ ಮೋಬೈಲ್ ನಂಬರ್ '....ಈ ತರಹದ ಗೋಡೆ ಬರಹಗಳನ್ನು ನೋಡಿದೆ. ಅದೇ ತಾನೆ ಶ್ರೀಮದಾನಂದತೀರ್ಥರು ರಚಿಸಿದ ಸರ್ವಮೂಲ ಗ್ರಂಥಗಳಲ್ಲೊಂದಾದ ಪ್ರಮಾಣ ಲಕ್ಷಣದ ಅಧ್ಯಯನದಲ್ಲಿ ಮುಳಗಿದ್ದ ನನ್ನ ತಲೆ, ಆ ಗೋಡೆ ಬರಹದಲ್ಲಿ ಅನುಮಾನ ಪ್ರಮಾಣದ ಉದಾಹರಣೆಯನ್ನು ಕಂಡಿತು. ಅನುಮಾನ ಪ್ರಮಾಣ ಅಂದರೆ ಪ್ರತ್ಯಕ್ಷವಾಗಿ ದೋಷರಹಿತವಾಗಿ ಗ್ರಹಿಸಲಾಗದ್ದನ್ನು ವರ್ತಮಾನ ದೇಶ ಕಾಲದಲ್ಲಿ ನಿರ್ದೋಷವಾಗಿ ಕಂಡ ವಸ್ತುವಿನಿಂದ ಕಾಣದ ವಸ್ತುವನ್ನು ಗ್ರಹಿಸುವುದು. ತಿಳಿಯಲಿಲ್ಲವೇ, ಇದನ್ನು ಅರ್ಥಮಾಡಿಕೊಳ್ಳಲು ಬಹಳ ಪ್ರಚಲಿತ ಒಂದು ಉದಾಹರಣೆಯನ್ನು ನೋಡೋಣ. ದೂರದ ಗುಡ್ಡದಲ್ಲಿ ಕೇವಲ ಹೊಗೆ ಕಂಡಾಗ ನಾವು ಗುಡ್ಡದಲ್ಲಿ ಕಾಣದ ಬೆಂಕಿ ಇರುವುದನ್ನು (ಅನುಮಾನಿಸಬಹುದು) ಗ್ರಹಿಸಬಹುದು. ಯಾಕೆಂದರೆ ನಮ್ಮ ಅನುಭವದಿಂದ (ಅಡುಗೆಮನೆಯ ಒಲೆಯಲ್ಲಿನ ಬೆಂಕಿ ಮತ್ತು ಅದರಿಂದ ಹೊರಹೊಮ್ಮಿದ ಹೊಗೆಯನ್ನು ನೋಡಿ) ಅರಿತಿದ್ದೇನೆಂದರೆ ಬೆಂಕಿ ಇಲ್ಲದೇ ಹೊಗೆ ಆಡುವುದಿಲ್ಲ ಎಂಬುದು. ಅಂದರೆ, ದೂರದ ಗುಡ್ಡದಲ್ಲಿ ಹೊಗೆ ಇರಬೇಕಾದರೆ, ಅಲ್ಲಿ ಬೆಂಕಿಯೂ ಇರಲೇ ಬೇಕು. ಅದರಂತೆ, ನಾನು ಅಂದು ಹಳ್ಳೀ ರಸ್ತೆಯಲ್ಲಿ ಹೋಗುವಾಗ ಕಂಡ ಆ ಗೋಡೆ ಬರಹದಿಂದ ಕಾಣದ ಕನಿಷ್ಠ ಎರಡು ವಿಷಯವನ್ನು ಗ್ರಹಿಸಬಹುದು. ಒಂದನೇಯ್ದು ಹಳ್ಳಿಗಳಲ್ಲಿ ಕಕ್ಕಸು(ಸಂಡಾಸ/ಪಾಯಖಾನೆ) ಮನೆಗಳು ಇರುವುದು ಮತ್ತೂ ಎರಡನೇಯ್ದು, ಹಳ್ಳಿ ಜನ ಆ ಕಕ್ಕಸು ಮನೆಗಳನ್ನು ಸದ್ಬಳಕೆ ಮಾಡುತ್ತಿದ್ದಾರೆ ಎಂಬುದು. ಯಾಕೆಂದರೆ ಕಕ್ಕಸು ಮನೆ ಇಲ್ಲದಿದ್ದರೆ ಸೆಪ್ಟಿಕ್ ಟ್ಯಾಂಕ್ ಇಲ್ಲ. ಹಾಗೆಯೇ ಕಕ್ಕಸು ಮನೆಯ ಸದ್ಬಳಕೆ ಇಲ್ಲದೇ ಆ ಸೆಪ್ಟಿಕ್ ಟ್ಯಾಂಕ್ ತುಂಬುವುದಿಲ್ಲ. ಅದು ತುಂಬದೇ ಅದನ್ನು ಕ್ಲೀನ್ (ಖಾಲಿ) ಮಾಡುವ ಅವಶ್ಯಕತೆ ಉದ್ಭವಿಸುವುದಿಲ್ಲ ಎಂಬುದು. ಅಂದರೆ ವಿಪಕ್ಷಗಳು ಏನೇ ಹೇಳಿದರೂ ಕೇಂದ್ರ ಸರ್ಕಾರದ ಸ್ವಚ್ಚ ಭಾರತ ಅಭಿಯಾನ ಯಶಸ್ವಿಯಾಗಿದೆ ಎಂದು ನಾವು ಇತ್ತೀಚಿಗೆ ಹಳ್ಳಿಗಳಲ್ಲಿ ಕಂಡ ಆ ಗೋಡೆ ಬರಹದಿಂದ ಗ್ರಹಿಸಬಹುದಾದರೆ ಈಗ ಸುದ್ದಿಯಲ್ಲಿರುವ ಹಳ್ಳಿಗರ ಮನೆಯ ಗೋಡೆಗಳ ಮೇಲೆ 'ಈ ಸ್ವತ್ತು ಇಂತಹವರಿಗೆ ಅಡಮಾನವಾಗಿದೆ' ಎಂದು ಬರೆದಿರುವ ಗೋಡೆ ಬರಹಗಳನ್ನು ಕಂಡು, ಕಣ್ಣಿಗೆ ಕಾಣದ ಅನೇಕ ವಿಷಯಗಳನ್ನು ಅನುಮಾನ ಪ್ರಮಾಣದಿಂದ ಅರಿಯಬಹುದಲ್ಲವೇ?


- ಜಯಂತ ಕಿತ್ತೂರ 

ಕಾಮೆಂಟ್‌ಗಳು

  1. ಬಹಳ ವಿಷಯಗಳನ್ನು ತಿಳಿಸುವ ಗೋಡೆ ಜಾಹಿರಾತು ಲೇಖನ ತುಂಬಾ ಚನ್ನಾಗಿ ಎಲ್ಲಾ ವಿಷಯಗಳನ್ನು ಗ್ರಹಿಕೆ ಮಾಡಿ ಅವಲೋಕಿಸಿ ಪ್ರಸ್ತುತ ಪಡಿಸಿರುವ ರೀತಿ ತುಂಬಾ ಇಷ್ಟ ವಾಯಿತು .ಹಾಗೆ ನಮಗೆ ಗೊತ್ತಿರದ ಕೆಲವು ಸಂಗತಿಗಳ ಅರಿವು ಮೂಡಿತು. ಧನ್ಯವಾದಗಳು ಜಯಂತ್ ಹೀಗೆ ನಿನ್ನ ಬರವಣಿಗೆ ಇನ್ನು ಹೆಚ್ಚು ಹೆಚ್ಚು ವಿಸ್ತರಿಸಲಿ

    ಪ್ರತ್ಯುತ್ತರಅಳಿಸಿ
  2. ಭ್ಹಾಳ ಚ್ಹೋಲೋ ಅನ್ನಿಸ್ತು, ನಾವು ಸಣ್ಣವರಿದ್ದಾಗ ನೋಡಿದ ಗೋಡೆ ಜಾಹೀರಾತು ನೆನಪಾದವು.ಧನ್ಯವಾದಗಳು🙏💐☺️

    ಪ್ರತ್ಯುತ್ತರಅಳಿಸಿ
  3. ಸರ್‌ ತುಂಬಾ ಚನ್ನಾಗಿ ಪ್ರಸಕ್ತ ವಿಧ್ಯಾಮಾನದೊಂದಿಗೆ ನಿಮ್ಮ ಅನಿಸಿಕೆ ಮತ್ತು ಅನುಭವಾಗಳೊಂದಿಗೆ ಈ ಬರಹ ಚನ್ನಾಗಿ ಬಂದಿದೆ.

    ಪ್ರತ್ಯುತ್ತರಅಳಿಸಿ
  4. ಸರ್‌ ತುಂಬಾ ಚನ್ನಾಗಿ ಪ್ರಸಕ್ತ ವಿಧ್ಯಾಮಾನದೊಂದಿಗೆ ನಿಮ್ಮ ಅನಿಸಿಕೆ ಮತ್ತು ಅನುಭವಾಗಳೊಂದಿಗೆ ಈ ಬರಹ ಚನ್ನಾಗಿ ಬಂದಿದೆ.

    ಪ್ರತ್ಯುತ್ತರಅಳಿಸಿ
  5. ಗೋಡೆ ಬರಹ ತುಂಬಾ ಚೆನ್ನಾಗಿ ಮೂಡಿ ಬಂದಿದೆ ತೆನಾಲಿ ರಾಮಕೃಷ್ಣ ಕತೆ ಬಾಲ್ಯ ದಲಿ ಓದಿದು ನೆನಪಾಯಿತು

    ಪ್ರತ್ಯುತ್ತರಅಳಿಸಿ
  6. very nicely written sir. The word paikhani read it after almost decades hahaha. The writings in the toilet are also another aspect of writings on the wall. The best I read in the train toilet was in north part of India " Duniya chand pe pahunch gaya aur tu abhi bhi idhar hi baitha hai" ...........

    ಪ್ರತ್ಯುತ್ತರಅಳಿಸಿ
  7. ಸರ್ ನಾವ್ ಸಣ್ಣವರಿದ್ದಾಗ ಶರಣು ಬನ್ನಿ, ವೆಲಕಂ ಅಂತ ಬರತಿರತಿದ್ರು‌. ಈಗ ಎಲ್ಲಿ ನೋಡಿದ್ರೂ ನಾಯಿ ಇದೆ ಎಚ್ಚರಿಕೆ, plz do not park in front of the gate ಅಥವಾ ಭಾಳಂದ್ರ house for rent/lease ಇವು ಅಷ್ಟ ಬಿಟ್ರ ಬೇರೆ ಏನೂ ಕಾಣಲ್ಲ ಆಗೇತ್ರಿ‌. ಪ್ರಸ್ತುತ ಸಂದರ್ಭದಲ್ಲಿ ಈ ಲೇಖನ ಸಾಕಷ್ಟು ವಿಷಯಗಳನ್ನ ಐತಿಹಾಸಿಕವಾಗಿ ಹಿಡಿದಿಡುವ ಪ್ರಯತ್ನ ಮಾಡಿದ್ದೀರಿ. ೭೦ವರ್ಷದಿಂದ ಗ್ರಾಮ ನೈರ್ಮಲ್ಯಕ್ಕೆ ಆಗೀನ ಸರ್ಕಾರಗಳು ಹಾಕಿದ್ದ ಶ್ರಮದ ಫಲ ಈಗ ನಾವು ಹಳ್ಳಿಗಳಲ್ಲಿ ನೋಡುತ್ತಿರುವುದು ಎನ್ನುವುದು ಒಂದು ಸಮಾಧಾನಕರ ಸಂಗತಿ‌‌.. ಶುಭವಾಗಲಿ ಒಳ್ಳೆಯದಾಗಲಿ ಸರ್‌.

    ಪ್ರತ್ಯುತ್ತರಅಳಿಸಿ
  8. This itself is like written on wall..!! Super consolidation and create meaning to small things that we ignored

    ಪ್ರತ್ಯುತ್ತರಅಳಿಸಿ
  9. ನಾವು ಸಣ್ಣವರಿದ್ದಾಗಿನ ಗುಲಬರ್ಗದ ಗೋಡೆ ಮೇಲಿನ ಬರಹಗಳು ನಿಂತು ಓದಿದ, ಅದರಂತೆ ಸಿನೆಮಾ ಪೋಸ್ಟರ್ ಗಳನ್ನ ಕಾತರದಿಂದ ನೋಡಿದ ನೆನಪಾಯ್ತು . ಇತ್ತೀಚಿಗೆ ಪುಣೆ ಯಲ್ಲಿ ಗೋಡೆಮೆಲೆ ಅಲ್ಲದಿದರು ಬ್ಲ್ಯಾಕ್ಬೊರ್ಡ್ ಅಥವಾ whiteboard ಮೇಲೆ ಸಾಕಷ್ಟು ಸೂಚನೆಗಳು ಕಾಣಸಿಗುತ್ತವೆ . ಇವು ಪುಣೇರಿ ಪಾಟಿಗಳು ಅಂತ ವರ್ಲ್ಡ್ ಫೆಮುಸ ....:). ಸಾಮಾನ್ಯ ಜನರ ನಿಜಜೀವನದ ಇಂತಹ ಸುಂದರ ಅನುಭವಗಳ ಮೆಲುಕು , ಮನಸ್ಸಿಗೆ ಮುದ ನೀಡುತ್ತದೆ, ಮುಖದ ಮೇಲೆ ಮಂದಹಾಸ ಮೂಡಿಸುತ್ತದೆ. ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  10. ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ.. ಸಣ್ಣವರಿದ್ದಾಗ.. ಶಾಲೆಗೆ ಹೋಗು ಬರುವ ಹಾದಿಯಲ್ಲಿ ಗೋಡೆಗಳ ಮೇಲೆ ಬರೆದ ಜಾಹೀರಾತು ಮತ್ತು ಚುನಾವಣೆ ಪ್ರಚಾರ ಗಳು ನೆನಪಾದವು..

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನನ್ನ ಬಿಳಿ ತಲೆಯ ಬಣ್ಣಗಳು ...(ಭಾಗ-೧)

ದಿಖಾವೇಪೆ ಮತ್ ಜಾವೋ ಅಕಲ್ ಲಗಾವೋ...

ಇವಾ ಯಾವೂರವಾ...