ಅಗ್ನಿಯ ನ್ಯಾಯ

ಕಳೆದ ಡಿಸೆಂಬರ್ ನಲ್ಲಿ ನಾನು ಬರೆದ ವಾಟ್ಸ್ಯಾಪ್ ನ Good morning ಸಂದೇಶದ ವಿಶ್ಲೇಷಣೆಯ ಬ್ಲಾಗನ ನಂತರದಿಂದ ನನ್ನ ಅನೇಕ ಹಿತೈಷಿ/ಅಭಿಮಾನಿ/ಮಿತ್ರ/ಬಾಂಧವರಿಂದ Good morning ಸಂದೇಶಗಳು ವಾಟ್ಸ್ಯಾಪ್ ನಲ್ಲಿ ಪ್ರತಿದಿನ ಬೆಳಿಗ್ಗೆ ಸಾದರವಾಗುವುದು ಸ್ವಲ್ಪ ಜಾಸ್ತಿನೇ ಆಗಿದೆ. ನಾನು ಬೆಳಿಗ್ಗೆ ಏಳುವುದರಲ್ಲೇ ಅನೇಕ ಸಂದೇಶಗಳು ನನ್ನ ಓದಿಗಾಗಿ ಹಾದಿ ಕಾಯುತ್ತಿರುತ್ತವೆ. ನನ್ನ ಬೆಳಗಿನ ಕನಿಷ್ಟಪಕ್ಷ ಒಂದರ್ಧ ತಾಸು ಆ ಎಲ್ಲಾ ಸಂದೇಶಗಳನ್ನು ಓದಿ ಸೂಕ್ತವಾಗಿ ಪ್ರತಿಕ್ರಿಯಿಸುವುದಕ್ಕೆ ಮೀಸಲಾಗಿದೆ. ಅದಲ್ಲದೇ ನಾನು ಕೆಲವರಿಂದ ಇಂತಹ ಸಂದೇಶಗಳು ಬರುವ ಹಾದಿಯನ್ನೂ ಕಾಯುವೆ. ಕಾರಣ ಆ ಸಂದೇಶಗಳು ಸುಭಾಷಿತ ಮತ್ತು ಅದರ ಅರ್ಥದ ರೂಪದಲ್ಲಿರುತ್ತವೆ. ಕೆಲ ದಿನಗಳ ಹಿಂದೆ ನನ್ನ ಮಿತ್ರನಿಂದ ಬಂದ ಒಂದು ಸಂದೇಶ ಹೀಗಿತ್ತು.

ದಾನಂ ಭೋಗೋ ನಾಶಃ ತಿಸ್ರೋ ಗತಯೋ ಭವನ್ತಿ ವಿತ್ತಸ್ಯಯೋ ನ ದದಾತಿ ನ ಭುಂಗ್ತೇ ತಸ್ಯಾ ತ್ರತೀಯಾಃ ಗತಿರ್ಭವತಿ ।

ಇದರರ್ಥ, ನಾವು ಗಳಿಸಿದ ಧನಕ್ಕೆ ಮೂರೇ ದಾರಿಗಳು. ಮೊದಲನೆಯದಾಗಿ ದಾನ ಮಾಡುವುದು ಎರಡನೆಯದು ತಾನೇ ಭೋಗ ಮಾಡುವುದು. ಇವೆರಡೂ ಮಾಡದಿದ್ದರೆ ದುಡ್ಡು ಮೂರನೆಯ ದಾರಿಗೆ ಹೋಗುತ್ತದೆ ಅಂದರೆ ನಾಶವಾಗುತ್ತದೆ. ಹೇಗೆ ಜೇನುಹುಳುಗಳು ಜೇನುತುಪ್ಪ ಸಂಗ್ರಹಿಸಿ ತಾವೂ ತಿನ್ನುವುದಿಲ್ಲ ಮತ್ತು ಇನ್ನೊಬ್ಬರಿಗೂ ಕೊಡುವುದಿಲ್ಲ. ಮೂರನೆಯದಾಗಿ ಏನಾಗುತ್ತದೆ, ಯಾರೋ ತೆಗೆದುಕೊಂಡು ಹೋಗುತ್ತಾರೆ ಎಂಬುದಾಗಿತ್ತು.

ಕಾಕತಾಳೀಯವೋ ಎಂಬಂತೆ ಈ ಸಂದೇಶ ಬಂದ ಒಂದೆರಡು ದಿನಗಳಲ್ಲಿ ದೆಹಲಿ ಹೈಕೋರ್ಟನ ಒಬ್ಬ ನ್ಯಾಯಾಧೀಶರ ಮನೆಯಲ್ಲಿ ಸುಟ್ಟ ನೋಟಿನ ಕಂತೆಗಳ ದೃಶ್ಯ ವಿವಿಧ ಮಾಧ್ಯಮಗಳಲ್ಲಿ ಬಿತ್ತರವಾಯಿತು. ಇದಾದದ್ದೇ ತಡ ಹಳ್ಳಿಗಳ ಗಲ್ಲಿಗಳಿಂದ ದಿಲ್ಲಿ ದರ್ಬಾರ್ ತನಕ ಎಲ್ಲೆಡೆಗಳಲ್ಲಿ ವಿವಿಧ ಮಾಧ್ಯಮಗಳಲ್ಲಿ ಬಗೆಬಗೆಯ ‌ಬಿಸಿ ಬಿಸಿ ಚರ್ಚೆಗಳು, ಇತ್ತಂಡವಾದಗಳು ನಡೆದದ್ದೇ ನಡೆದದ್ದು.ಇದನ್ನು ಕಂಡು ಮುಜುಗರಪಟ್ಟು ಮಾನ್ಯ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಆಂತರಿಕ ಕಮೀಟಿ ರಚಿಸಿ ವಿಷಯವನ್ನು ಪರಿಶೀಲನೆಗೆ ಆದೇಶಿಸಿ ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ತೇಪೆಹಾಕಿ ವಿವಾದ ಶಾಂತ ಮಾಡಲು ಪ್ರಯತ್ನಿಸಿದ್ದು, ಆ ಕಳಂಕಿತ ನ್ಯಾಯಾಧೀಶರನ್ನು ಮರಳಿ ಅಲಹಾಬಾದ್ ಹೈಕೋರ್ಟಗೆ ಯತ್ತಂಗಡಿ ಮಾಡಿದ್ದು, ಅದರ ವಿರುಧ್ಧ ಅಲ್ಲಿಯ ನ್ಯಾಯವಾದಿಗಳ ಪ್ರತಿಭಟನೆ ಇತ್ಯಾದಿ ತಮಗೂ ತಿಳಿದ ವಿಷಯ. 

ಈ ಮಧ್ಯೆ, ನಿವೃತ್ತಿಯ ನಂತರದ ದಿನಗಳಲ್ಲಿ ನಾನು ಪ್ರಾರಂಭಿಸಿದ ಮಾರ್ನಿಂಗ್ ವಾಕ್ ಮುಗಿಸಿ ಬಂದು ದಿನದ ಎರಡನೇಯ ಕಪ್ಪು ಚಹಾ ಕುಡಿಯುತ್ತಾ ವೃತ್ತಪತ್ರಿಕೆಯನ್ನು ಓದುತ್ತಿದ್ದೆ. ಕರ್ನಾಟಕದ ಬೀದರ ನಗರದ ಒಬ್ಬ ನ್ಯಾಯಾಧೀಶರು ಹಬ್ಬದ ರಜೆಗೆಂದು ತಮ್ಮ ಸರ್ಕಾರಿ ಬಂಗಲೆಗೆ ಬೀಗ ಜಡೆದು ತಮ್ಮೂರಿಗೆ ಹೋದಾಗ ಮನೆಗೆ ನುಗ್ಗಿ ಕನ್ನಹಾಕಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿಕೊಂಡು ಹೋಗಿದ್ದನ್ನು ನ್ಯಾಯಾಧೀಶರ ಬಂಗಲೆಯ ಗಿಡಗಳಿಗೆ ನೀರು ಹಾಕಲು ಬಂದ ನೌಕರನ ಗಮನಕ್ಕೆ ಬಂದ ಸುದ್ದಿ ದಿನಪತ್ರಿಕೆಯ ಒಂದು ಮೂಲೆಯಲ್ಲಿ ಚಿಕ್ಕದಾಗಿ ವರದಿಯಾದದ್ದು ನನ್ನ ಕಣ್ಣಿಗೆ ಬಿದ್ದಿತು. ಆ ವಿಷಯ ಓದಿದ್ದೇ ತಡ ನನಗೆ ಗಾಬರಿಯಿಂದ ಬಿಪಿ ಹೆಚ್ಚಾಗಿ ಮೈಯೆಲ್ಲಾ ಬೆವರಲಾರಂಭಿಸಿತು. ಛೆ ಛೇ...ನೀವು ಗಾಬರಿಯಾಗಬೇಡಿರಿ. ಭಗವದ್ಗೀತೆಯ ಪ್ರಮಾಣಮಾಡಿ ಹೇಳುತ್ತೇನೆ, ನನಗೆ ಆ ಚಿನ್ನಾಭರಣ ದೋಚಿದ ಕಳ್ಳರಿಗಾಗಲಿ ಅಥವಾ ನೀರು ಹಾಕಲು ಬಂದ ನೌಕರನಿಗಾಗಲೀ ಅಥವಾ ಆ ನ್ಯಾಯಾಧೀಶರಿಗೇ ಆಗಲೀ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ದೂರ ದೂರದವರೆಗೆ ಯಾವುದೇ ಸಂಬಂಧವಿಲ್ಲ. ನನಗೆ ನೆನಪಿದ್ದ ಹಾಗೆ ನಮ್ಮ ತಂದೆಯವರ ಸೋದರಮಾವ ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿಯ ಒಬ್ಬ ಪ್ರತಿಷ್ಠಿತ ವಕೀಲರಲ್ಲಿ ಕಾರಕೂನರಾಗಿದ್ದರಂತೆ. ಅದು ಬಿಟ್ಟರೆ ನಮ್ಮ ಮನೆತನದಲ್ಲಿ ಇಲ್ಲಿಯತನಕ ಯಾರೂ LLB ಓದುವ ಧೈರ್ಯ ಮಾಡಿಲ್ಲ ಎಂದಾದ ಮೇಲೆ ವಕೀಲರಾಗುವುದಾಗಲಿ ನಂತರ  ನ್ಯಾಯಾಧೀಶರಾಗುವ ಪ್ರಮೇಯವೇ ಇಲ್ಲ. ನಮ್ಮದು ಮಾಸ್ತರರ ಮನೆತನ. ನಮ್ಮ ತಂದೆಯವರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿದ್ದರು. ನನ್ನ ಹಿರಿಯಣ್ಣ ಅರ್ಥಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ,ಇನ್ನೊಬ್ಬ ಅಣ್ಣ ಮೆಡಿಕಲ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕನಾದರೆ ನಾನು ಇಂಜಿನೀಯರಿಂಗ್ ಕಾಲೇಜಿನ ಪ್ರಾಧ್ಯಾಪಕನಾಗಿ ಇತ್ತೀಚಿಗೆ ನಿವೃತ್ತಿ ಹೊಂದಿರುವೆ.ಇರಲಿ, ಆ ಬೀಗ ಜಡೆದು ಊರಿಗೆ ಹೋದ ನ್ಯಾಯಾಧೀಶರ ಮನೆಗೆ ನುಗ್ಗಿ ಕನ್ನಹಾಕಿದ ಕಳ್ಳರ ಸುದ್ದಿಯನ್ನು ಓದಿ ನನಗೆ ಗಾಬರಿಯಾಗಲು ಕಾರಣ ನಮ್ಮ ಮನೆಗೆ ಬೀಗ ಹಾಕಿ ನಾವು ಬೆಂಗಳೂರಿಗೆ ನನ್ನ ಹೆಂಡತಿಯ ತಾಯಿಯ ಮನೆಗೆ ಹೋಗುವವರಿದ್ದೆವು. ಮನೆಗೆ ಬೀಗ ಹಾಕಿ ಊರಿಗೆ ಹೋದ ಒಬ್ಬ ಜಿಲ್ಲಾ ನ್ಯಾಯಾಧೀಶರ ಮನೆಯೇ ಕಳ್ಳರಿಂದ ಸುರಕ್ಷಿತವಾಗಿಲ್ಲ ಎಂದಾದರೆ ನಮ್ಮಂಥಾ ಸಾಮಾನ್ಯ ನಾಗರೀಕರ ಮನೆಯ ಗತಿ ಏನು ಎಂಬ ಯೋಚನೆ ನನ್ನನ್ನು ಕಾಡಿತ್ತು. ಈ ರೀತಿ ತಾರ್ಕಿಕ ಋಣಾತ್ಮಕ ಯೋಚನೆಗಳು ಎಲ್ಲರ ಮನಸ್ಸಿನಲ್ಲಿ ಬರುವುದು ಸರ್ವೇ ಸಾಮಾನ್ಯ ಮತ್ತು ಒಂದು ರೀತಿಯಲ್ಲಿ ಅವಶ್ಯವೇ. ಏಕೆಂದರೆ, ಈ ರೀತಿಯ ತರ್ಕಯುತ ಋಣಾತ್ಮಕ ಯೋಚನೆಗಳು ಒಬ್ಬ ಸಾಮಾನ್ಯ ಮನುಷ್ಯ ಮುಂದಾಲೋಚನೆ ಮಾಡುವುದರ ಜೊತೆಗೆ ಸೂಕ್ತ ಪರಿಹಾರ ಕ್ರಮಗಳನ್ನು ತೆಗೆದುಕೊಂಡು ಆಗಬಹುದಾದ ಅಹಿತಕರ ಘಟನೆಗಳನ್ನು ತಪ್ಪಿಸಲು ಸಹಕಾರಿ ಅಲ್ಲವೇ? ಆದರೆ, ಈ ರೀತಿಯ ಋಣಾತ್ಮಕ ಯೋಚನೆಗಳು/ಕಲ್ಪನೆಗಳು ಹೆಚ್ಚು ಹೆಚ್ಚಾಗಿ ಬರಲಾರಂಭಿಸಿದರೆ, ವಿನಃ ಕಾರಣ ಬರಲಾರಂಭಿಸಿ ಇದೇ ಗೀಳಾಗಿ ಪರಿವರ್ತನೆಯಾದರೆ, ಮನುಷ್ಯ ತನ್ನ ನೈಸರ್ಗಿಕ ತರ್ಕಬುಧ್ಧಿಯನ್ನು ಕಳೆದುಕೊಳ್ಳುವುದರೊಂದಿಗೆ ಸುಖಾಸುಮ್ಮನೆ ಎಲ್ಲಾ ವಿಷಯದಲ್ಲೂ ಗಾಬರಿ/ಭೀತಿ/ಸಂಶಯ ಪಡಲಾರಂಭಿಸುವ ಪರಿಸ್ಥಿತಿ ಎದುರಿಸುತ್ತಾನೆ.

ಗಣಿತದಲ್ಲಿ ಸಂಕೀರ್ಣ ಸಂಖ್ಯೆಗಳು (complex numbers....a+bi) ಎಂಬ ಸಂಖ್ಯೆಗಳ ಅಧ್ಯಯನ ವಿಭಾಗವಿದ್ದು ಇದರಲ್ಲಿಯ ಸಂಖ್ಯೆಗಳು ನಿಜವಾದ ಭಾಗ ಮತ್ತು ಕಾಲ್ಪನಿಕ ಭಾಗ ಎಂಬ ಎರಡು ಭಾಗಗಳ ಸಮ್ಮಿಳನವಾಗಿರುತ್ತವೆ. ಆ ಸಂಕೀರ್ಣ ಸಂಖ್ಯೆಗಳ ಲೆಕ್ಕಗಳನ್ನು ಬಿಡಿಸುವಾಗ ನಿಜ ಭಾಗಕ್ಕೆ ಮತ್ತೂ ಕಾಲ್ಪನಿಕ ಭಾಗಕ್ಕೆ ಪ್ರತ್ತೆಕವಾಗಿ ಉತ್ತರಗಳನ್ನು ಕಂಡುಹಿಡಿಯುವುದು ಉಂಟು. ಅದರಂತೆ, ನಮ್ಮ ಜೀವನದಲ್ಲಿ ಬರುವ ನಿಜ ಸಮಸ್ಯೆಗಳು ಮತ್ತೂ ಋಣಾತ್ಮಕ ಕಾಲ್ಪನಿಕ ಸಮಸ್ಯೆಗಳನ್ನು ಪ್ರತ್ಯೇಕಿಸಿ ಆ ಸಮಸ್ಯೆಗಳಿಗೆ ಯೋಗ್ಯ ಉತ್ತರವನ್ನು ಕಂಡುಕೊಳ್ಳಲು ಬರುತ್ತದೆ. ಆದರೆ ಇಲ್ಲಿ ಒಂದು ಸಮಸ್ಯೆ ಎಂದರೆ ಬಯಸದೇ ನಮ್ಮ ಮನಸ್ಸಿನಲ್ಲಿ ಬರುವ ಅತಿಯಾದ ಕಾಲ್ಪನಿಕ ಋಣಾತ್ಮಕ ವಿಚಾರ/ಸಮಸ್ಯೆಗಳನ್ನು ಗುರುತಿಸಿ ಪ್ರತ್ಯೇಕಿಸುವುದು. ಎಷ್ಟೋ ಸಂದರ್ಭಗಳಲ್ಲಿ ಈ ಸಮಸ್ಯೆಗೆ ಒಳಗಾದವರಿಗೆ ತಾವು ಈ ಸಮಸ್ಯೆಯಿಂದ ಬಳಲುತ್ತಿರುವ ಅರಿವಿರುವುದಿಲ್ಲ. ಅವರಿಗೆ ತಮ್ಮ ಕಲ್ಪನಾತ್ಮಕ ಸಮಸ್ಯೆಗಳು ನಿಜವಾದ ಸಮಸ್ಯೆಯೇ ಎಂದು ಭಾಸವಾಗುವುದು. ಇಂತಹ ಸಂದರ್ಭಗಳಲ್ಲಿ ನೀವು ಯಾವುದೇ ತರ್ಕಬದ್ಧ ಮತ್ತು ವಾಸ್ತವಿಕ ಪರಿಹಾರ ಸೂಚಿಸಿದರೂ ಅದು ಅವರ ಮನಸ್ಸಿಗೆ ಒಪ್ಪಿಗೆ ಆಗುವುದಿಲ್ಲ ಮತ್ತು ಅವರ ಕಾಲ್ಪನಿಕ ಸಮಸ್ಯೆಯಿಂದಾದ ಗಾಬರಿ ಕಡಿಮೆ ಆಗುವುದಿಲ್ಲ. ಆ ಸಂದರ್ಭದಲ್ಲಿ ವ್ಯಕ್ತಿಯ ಸುತ್ತಲಿನ ಆತ್ಮೀಯರು ಅವರ ಸಹಾಯಕ್ಕೆ ಬಂದು ಆ ವ್ಯಕ್ತಿಗೆ ಮನವಲಿಸಿ ಆದಷ್ಟು ಬೇಗ ನುರಿತ ಮನೋ ವೈದ್ಯರನ್ನು ಕಂಡು ಪರಿಹಾರ ಪಡೆಯುವುದು ಸೂಕ್ತ ಎಂಬುದು ನನ್ನ ಖಚಿತ ಅಭಿಪ್ರಾಯ. ಆದರೆ, ನನಗೇನೂ ಈಗ ಅತಿಯಾದ ಕಾಲ್ಪನಿಕ ತರ್ಕಹೀನ ಋಣಾತ್ಮಕ ಆಲೋಚನೆಗಳು ಬಂದಿಲ್ಲ, ಅಷ್ಟೆ ಅಲ್ಲ ಅದಕ್ಕಾಗಿ ಮನೋ ವೈದ್ಯರ ಸಲಹೆ ಸಮಾಲೋಚನೆಯ ಅಗತ್ಯತೆಯೂ ಇಲ್ಲ. ಬದಲಾಗಿ ಈ ಮನೆಗೆ ಬೀಗ ಜಡೆದು ನಾಲ್ಕಾರು ದಿನ ಊರಿಗೆ ಹೋದಾಗ ಆಗಬಹುದಾದ ಕಳ್ಳತನದ ಗಾಬರಿಯ ವಿಚಾರವನ್ನು ನನ್ನ ಶ್ರೀಮತಿಯಲ್ಲಿ ಪ್ರಸ್ತಾಪಿಸಿ ‌ಹೇಗಾದರೂ ಮಾಡಿ ನಾವು ಊರಿಗೆ ಹೋಗುವುದನ್ನು ತಪ್ಪಿಸಲು ನೆವ ಹೂಡುಕುವ ಪ್ರಯತ್ನ ನಾನು ಮಾಡಿದ್ದೇ ತಡ ಅವಳ ಪುಂಖಾನು ಪುಂಕವಾದ ತರ್ಕಬದ್ಧ ಲಾಯರೀ ಪಾಯಿಂಟಗಳ ಉತ್ತರ ಹರಿದು ಬಂದಿತು.

ಪ್ರೊಫೆಸರ್ ಸಾಹೇಬರೇ, ನೀವು ಇನ್ನೂ ಶಿಕ್ಷಕ ಮತ್ತೂ ನ್ಯಾಯಾಧೀಶರ ವೃತ್ತಿಗಳು ಸಾಮಾಜದ ಗೌರವಾನ್ವಿತ ಎರಡು ಕಣ್ಣುಗಳು ಎಂದೂ ಹಾಗೂ ಶಿಕ್ಷಕ ಒಳ್ಳೆಯ ವ್ಯಕ್ತಿತ್ವದ ಜವಾಬ್ದಾರಿಯುತ ನಾಗರಿಕನ ನಿರ್ಮಾಣ ಮಾಡಿದರೆ ನ್ಯಾಯಾಧೀಶ ಹಾದಿ ತಪ್ಪಿದ ನಾಗರಿಕನಿಗೆ ಅವನ ಅಪರಾಧಕ್ಕೆ ತಕ್ಕ ಸೂಕ್ತ  ಶಿಕ್ಷೆ ನೀಡಿ ಅಪರಾಧಿಯನ್ನು ಸರಿ ದಾರಿಗೆ ತಂದು ಸಮಾಜದಲ್ಲಿ ಸುಸ್ಥಿರನ್ಯಾಯ ಮತ್ತು ಸುರಕ್ಷತೆಯ ಭರವಸೆ ಮೂಡಿಸುವನು ಎಂಬ ಭ್ರಮಾ ಲೋಕದಲ್ಲಿ ವಿಹರಿಸುತ್ತಿರುವಿರಿ. ನ್ಯಾಯಾಧೀಶರೂ ಶಿಕ್ಷಕರಂತೆ ಬೇಸಿಗೆಯ ರಜೆ ಪಡೆಯುವರೆಂದು ತಿಳಿದು ಅಥವಾ ನಿಮ್ಮ ಕಾಲೇಜಿನವರು ಶಿಕ್ಷಕರಿಗೆ ಕೋಟು ಹಾಕಿಕೊಳ್ಳುವುದನ್ನು ಕಡ್ಡಾಯ ಮಾಡಿದಾಕ್ಷಣ ಇಬ್ಬರ ವೃತ್ತಿಗಳು, ಸಂಬಳ,ಸೌಲತ್ತು, ಆದಾಯಗಳು ಸಮಾನವೆಂದು ತಿಳಿದರೆ ಹೇಗೆ? ಅಂದಹಾಗೆ, ಬೇಸಿಗೆಯ ರಜೆ ಎಂದೊಡನೆಯೇ ನೆನಪಾಯಿತು, ನಿಮ್ಮ ಕಾಲೇಜು ಶೈಕ್ಷಣಿಕ ಸ್ವಾಯತ್ತತೆ (academic autonomy) ಪಡೆದಾಗಿನಿಂದ ನಿಮ್ಮ ಬೇಸಿಗೆಯ ರಜೆಗೆ ಪಂಗನಾಮ ಬಿದ್ದು ದಶಕವೇ ಆಯಿತು. ಆದರೆ ಆಂಗ್ಲರ ಕಾಲದಿಂದ ಪ್ರಾರಂಭಗೊಂಡ ನ್ಯಾಯಾಧೀಶರ ಈ ಬೇಸಿಗೆಯ ರಜಾ ಸವಲತ್ತು ನಮ್ಮ ದೇಶಕ್ಕೆ ಸ್ವಾತಂತ್ರ್ಯಸಿಕ್ಕು ಅಮೃತ ಮಹೋತ್ಸವ ಆಚರಿಸಿದರೂ ಇನ್ನೂ ಅಬಾಧಿತವಾಗಿದೆ.ಇಲ್ಲಿಯೇ ಎದ್ದು ಕಾಣುತ್ತದೆ ಎರಡೂ ವೃತ್ತಿಗಳಲ್ಲಿನ ತಾರತಮ್ಯ ಮತ್ತೂ ಅಸಮಾನತೆ.

ಹಾಃ, ಶಿಕ್ಷಕ ಮತ್ತು ನ್ಯಾಯಾಧೀಶರ ವೃತ್ತಿಗಳಲ್ಲಿ ಒಂದು ಮಟ್ಟಿಗೆ ಸಮಾನತೆ ಕಾಣಬಹುದು. ಇಂದು ವಿದ್ಯಾರ್ಥಿಗಳು ಶಿಕ್ಷಕರಿಗೆ ಮತ್ತೂ ಅಪರಾಧಿಗಳು ನ್ಯಾಯಾಧೀಶರಿಗೆ ಹೆದರುವುದಿಲ್ಲ. ಆದರೆ ಇವೆರಡಕ್ಕೂ ಕಾರಣಗಳು ಅಜಗಜಾಂತರ. ಅದರ ಬಗ್ಗೆ ವಿಶ್ಲೇಷಣೆ ಮಾಡುತ್ತಾ ನಿಂತರೆ ಒಲೆಯ ಮೇಲೆ ಇಟ್ಟ ನನ್ನ ಪಲ್ಯಾದ ವಗ್ಗರಣೆ ಹಾಳಾಗುತ್ತದೆ. ಬೆಳಿಗ್ಗೆಯಿಂದ ಈಗಾಗಲೇ ನಿಮ್ಮದು ಎರಡು ಕಪ್ಪು ಚಹಾ ಆಯಿತು. ಇನ್ನಾದರೂ ಏಳಿ, ಎಚ್ಚರವಾಗಿರಿ ನಿಮ್ಮ ಕನಸಿನ ಲೋಕದಿಂದ ಹೊರಬಂದು ಕಾಫಿಯ ಪರಿಮಳ ಸೇವಿಸಿ. ಕಾಲ ಬದಲಾಗಿದೆ.ಅಯ್ಯೋ... ನೀವು ಇಷ್ಟು ವರ್ಷ ಸೇವೆ ಮಾಡಿದ್ದು ಒಂದು ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ವೃತ್ತಿ ಎಂಬುದು ನೆನಪಿರಲಿ. ಅವರು ಕೊಟ್ಟ ಪಗಾರವೆಷ್ಟು , ಅದರಲ್ಲಿ ಉಳಿಸಿ ನೀವು ಮಾಡಿದ ಆಸ್ತಿ ಎಷ್ಟು? ಒಂದು ಸಾದಾ 2BHK ಮನೆಯನ್ನು ಕಟ್ಟಲು ನೀವು ಮಾಡಿದ ಬ್ಯಾಂಕ್ ಸಾಲದ EMI ಇಷ್ಟು ವರ್ಷ ತುಂಬುವುದರಲ್ಲೇ ನಿಮ್ಮ ಜೇಬು ಖಾಲಿ ಆಯಿತು. ನಮ್ಮ ಲಗ್ನದಲ್ಲಿ ತವರು ಮನೆಯವರು ಮಾಡಿಸಿಕೊಟ್ಟ ಎರಡು ಪಾಟ್ಲಿ, ನಾಲ್ಕು ಬಿಲ್ವರ ಬಿಟ್ಟರೆ ಬೇರೆ ಯಾವ ಬಂಗಾರದ ದಾಗಿನಾ ನಿಮ್ಮಿಂದ ನಾನು ಕಂಡಿಲ್ಲ. ಅಂತಹದರಲ್ಲಿ ಬೀಗ ಜಡಿದು ಊರಿಗೆ ಹೋದ ನಮ್ಮ ಮನೆಗೆ ಇಂದಿನ ಯಾವ ವೃತ್ತಿನಿರತ (professional) ಕಳ್ಳ ಕನ್ನ ಹಾಕುವ ಮೂರ್ಖತನ ಮಾಡಿಯಾನು? ಇಷ್ಟು ವರ್ಷ CNBC TV ನೋಡಿದಿರಿ. ಶೇರು ಮಾರುಕಟ್ಟೆಯ ಒಂದು ಸಾಮಾನ್ಯ ನಿಯಮ high-risk, high-return ಎಂಬುದು ನಿಮಗೆ ತಿಳಿದಿರುವಂತೆ ಕಾಣದು.ನಿಮ್ಮದು ಯಾವಾಗಲೂ no-risk , no-returns ಮನೋಧರ್ಮ. ಅದಕ್ಕೇ SENSEX 80,000 ದ ಗಡಿ ದಾಟಿದರೂ ನೀವು ಮಾತ್ರ ಒಂದು ನಯಾ ಪೈಸೆ ಶೇರು ಪೇಟೆಯಲ್ಲಿ ಹೂಡಿಲ್ಲ ಮತ್ತು ಹಣ ಗಳಿಸಿಲ್ಲ, ನಿಮ್ಮ ಸಹೋದ್ಯೋಗಿಗಳನ್ನು ನೋಡಿರಿ ಅವರು ಪಾರ್ಟ್ ಟೈಂ ಪಾಠ ಮಾಡಿ ಫುಲ್ ಟೈಂ ಶೇರು ಮಾರುಕಟ್ಟೆಯಲ್ಲಿ ಮುಳುಗಿ ಎಷ್ಟು ಹಣ ಗಳಿಸಿದ್ದಾರೆ.

ಈ ತುಟ್ಟಿಯ ದಿನಗಳಲ್ಲಿ ಮೂಲ ವೇತನದಲ್ಲೇ ತೆರಿಗೆಯನ್ನು ಮುರಿದುಕೊಂಡು ಬರುವ ಒಬ್ಬ ಶಿಕ್ಷಕನ ತಿಂಗಳ ಪಗಾರದ ಮುಕ್ಕಾಲು ಪಾಲು ಮೊದಲ ವಾರದಲ್ಲೇ ಖರ್ಚಾಗಿ ಉಳಿದ ಹಣದಲ್ಲಿ ಐದು ರೂಪಾಯಿಯ ಕೋತಂಬರಿಯನ್ನು UPI ಮುಖಾಂತರ ಖರೀದಿಸುವನೇ ಹೊರತು ಮನೆಯಲ್ಲಿ ಹಣ ಇಟ್ಟು ಊರಿಗೆ ಹೋಗುವ ಮೂರ್ಖತನ ಮಾಡಲಾರ. ಮನೆಗಳಲ್ಲಿ ಕಂತೆ ಕಂತೆ ಹಣ ಶೇಖರಿಸಿ ಇಡಲು ಏನಿದ್ದರೂ ವಾಮಮಾರ್ಗದ ಆದಾಯವೇ ಆಗಿರಲು ಬೇಕು.!!!

ನೀವು ಇಂದಿನ ಕಳ್ಳರನ್ನು ಇನ್ನೂ ತೆನಾಲಿರಾಮನ ಕಾಲದ ಪೆದ್ದು ಕಳ್ಳರಂತೆ ಎಂದು ತಿಳಿದಂತೆ ಕಾಣುತ್ತದೆ.ಇಂದಿನ ವೃತ್ತಿನಿರತ (professional) ಕಳ್ಳ ತನ್ನ ವೃತ್ತಿ high-risk, high-return ಪ್ರಕಾರದ್ದು ಎಂಬುದನ್ನು ಚೆನ್ನಾಗಿ ಬಲ್ಲ. ನಿಮ್ಮಂಥಾ ಮಾಸ್ತರರ ಮನೆಗೆ ಕನ್ನಹಾಕಿದರೆ ಏನೂ ಗಿಟ್ಟದು ಎಂದು ಚೆನ್ನಾಗಿ ಬಲ್ಲ. ಕಳ್ಳನ ಹೆಜ್ಜೆ ಕಳ್ಳನೇ ಬಲ್ಲ ಎಂಬ ಗಾದೆಯಂತೆ ಅವನು ಏನಿದ್ದರೂ ಕಂತೆ ಕಂತೆ ಹಣ, ಬಂಗಾರ ಮನೆಯಲ್ಲಿ ಶೇಖರಿಸುವ ಪೋಲಿಸು, ಸಾರಿಗೆ, ಲೋಕೋಪಯೋಗಿ, ನೀರಾವರಿ, ಅಬಕಾರಿ, ವಿವಿಧ ಹಿಂದುಳಿದ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಮಂಡಳಿಗಳು ಮುಂತಾದವುಗಳ ಅಧಿಕಾರಿಗಳು ಇಲ್ಲವೆ ವಕೀಲ ಅಥವಾ ನ್ಯಾಯಾಧೀಶರ ಮನೆಗೇ ಕನ್ನ ಹಾಕುವುದು ಹೊರತೂ ನಿಮ್ಮಂಥಾ ಶಿಕ್ಷಕರ ಮನೆಗಲ್ಲ. ಅಷ್ಟೇ ಏಕೆ ನಮ್ಮ ಘನ ಲೋಕಾಯುಕ್ತರು ಎಷ್ಟೇ ಮಾಹಿತಿ,ಸಾಕ್ಷಿ ಕಲೆಹಾಕಿದ್ದರೂ ರೇಡ್ ಮಾಡುವ ಮೊದಲು ಒಮ್ಮೆ ಇಂತಹ ಪ್ರೊಫೇಶ್ನಲ್ ಕಳ್ಳರ ಅಭಿಪ್ರಾಯ ಪಡೆದೇ ಮುಂದೆ ಹೆಜ್ಜೆ ಇಡುವುದಂತೆ ಎಂದು ಪಕ್ಕದ ಮನೆಯ ಪಮ್ಮಕ್ಕ ಹೇಳುವುದು. ಹಾಗೇನಾದರೂ ಒಬ್ಬ ಮೂರ್ಖ ಕಳ್ಳ ನಮ್ಮ ಮನೆಗೆ ಕನ್ನ ಹಾಕಿದರೆ ಅವನಿಗೆ ಸಿಗುವುದು ಮಣಗಟ್ಟಲೆ ನಿಮ್ಮ ಪುಸ್ತಕಗಳು ಮಾತ್ರ. ಅಪ್ಪಿತಪ್ಪಿ ಒಂದು ವೇಳೆ ಹಾಗೇನಾದರೂ ನಮ್ಮ ಮನೆಗೆ ಕಳ್ಳ ಕನ್ನಾ ಹಾಕಿದರೆ ಅದರಿಂದ ನನಗಂತೂ ಪುಗಸಟ್ಟೇ ಲಾಭವೇ ಹೊರತೂ ಹಾನಿ ಏನೂ ಇಲ್ಲ.ನಮ್ಮ ಲೇಡೀ ಕ್ಲಬ್ಬಿನಲ್ಲಿ ನನ್ನನ್ನು ಪಾಪ ಬಡ ಶಿಕ್ಷಕನ ಹೆಂಡತಿ ಎನ್ನುವವರ ಮುಂದೆ ನನ್ನ ಮೌಲ್ಯ ಗಗನಕ್ಕೆ ಏರುತ್ತದೆ ಎಂದು ಕಾಲೇಜು ಪ್ರೊಫೆಸರಗೇ ನಿರರ್ಗಳವಾಗಿ ಒಂದು ಭಾಷಣ ಬಿಗಿದು ನಾವು ಊರಿಗೆ ಹೋಗುವುದು ನಿಶ್ಚಿತ ಅಂತ ಖಾತ್ರಿ ಮಾಡಿ ಒಳನಡೆದಳು. ಇದರಿಂದ ನಾವು ಊರಿಗೆ ಹೋಗುವುದನ್ನು ತಪ್ಪಿಸುವ ಸಲುವಾಗಿ ನಾನು ಮಾಡಿದ ಮಸಲತ್ತು (strategy) ಫೇಲಾಯಿತು. ಆದರೆ, ಅವಳ ಬಹುತೇಕ ತರ್ಕಬದ್ಧ ಮಾತುಗಳಲ್ಲಿ ನನ್ನ ಮನಸ್ಸಿಗೆ ಖೇದವೆನಿಸಿದ ಮಾತೆಂದರೆ ಗೌರವಾನ್ವಿತ ನ್ಯಾಯಾಧೀಶರನ್ನೂ ಆ ಕಂತೆ ಕಂತೆ ಹಣ ಶೇಖರಿಸಿ ಮನೆಯಲ್ಲಿ ಇಡುವವರ ಪಟ್ಟಿಯಲ್ಲಿ ಸೇರಿಸಿದ್ದು. ಪಾಪ,ಇದರಲ್ಲಿ ಅವಳೇನು ತಪ್ಪು,ಇಂದಿನ ಸಮಾಜದ ಪರಿಸ್ಥಿತಿಯನ್ನು ಇದ್ದದ್ದು ಇದ್ದಂತೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದಂತೆ ಎಂಬಂತಿತ್ತು ಅವಳ ಮಾತು.

ನಾವು ಚಿಕ್ಕವರಿದ್ದಾಗ ಕಲಬುರ್ಗಿಯ ಪ್ರತಿಷ್ಟಿತ ಐವಾನ್ ಷಾಹೀ ಪ್ರದೇಶದ ಮುಖ್ಯ ರಸ್ತೆಯಲ್ಲಿಯ ನ್ಯಾಯಾಧೀಶರ ಸರ್ಕಾರಿ ಭೌವ್ಯ ಬಂಗಲೆಗಳನ್ನು ಮತ್ತೂ ಅದರ ಸುತ್ತ ಇರುತ್ತಿದ್ದ ಪೊಲೀಸ್ ಪ್ರಹರೆ ಕಂಡಿದ್ದೆ. ಸಾಯಂಕಾಲ ಅಥವಾ ರಜಾದಿನಗಳಲ್ಲಿಯೂ ನ್ಯಾಯಾಧೀಶರು ಸಮಾಜದಲ್ಲಿ ಬೆರೆಯದೆ ಸಮಾಜದ ವಿವಿಧ ಪ್ರಭಾವಿತರಿಂದ ಯಾವರೀತಿಯ ಹಂಗಿಗೆ ಬೀಳದೇ ಅಂತರ ಕಾಯ್ದುಕೊಂಡು ಪ್ರತ್ಯೇಕವಾಗಿರುತ್ತಿದ್ದರೆಂದು ಹಿರಿಯರಿಂದ ಕೇಳಿದ್ದೆವು. ನಾವು ಶಾಲಾ ರಜಾ ದಿನಗಳಲ್ಲಿ ನಮ್ಮ ಮನೆಯ ಹತ್ತಿರವಿದ್ದ ಜಿಲ್ಲಾ ನ್ಯಾಯಾಲಯದಲ್ಲಿ ಬಹಳಷ್ಟು ಸಮಯವನ್ನು ಕಳೆದದ್ದೂ ಉಂಟು. ಬೆಳಿಗ್ಗೆ ವಿವಿಧ ಪೊಲೀಸ್ ವಾಹನಗಳು ವಿಚಾರಣಾಧೀನ ಕೈದಿ/ಆರೋಪಿಗಳನ್ನು ಹೊತ್ತು ತರುತ್ತಿದ್ದವು. ಎಷ್ಟೋ ಸಾರಿ ಕೈಗಳಿಗೆ ಕೊಳ ತೊಡಿಸಿದ ಕೈದಿಗಳನ್ನೂ ನೋಡಿದ ನೆನಪು. ಅದಲ್ಲದೇ ಆ ವಿಚಾರಣಾಧೀನ ಕೈದಿ/ಆರೋಪಿಗಳನ್ನು ನೋಡಲು, ಅವಕಾಶ ಸಿಕ್ಕರೆ ಒಂದೆರಡು ಮಾತಾಡಲು ಹಳ್ಳಿಗಳಿಂದ ಬಂದ ಅವರು ಬಂಧು ಬಾಂಧವರ ಗುಂಪುಗಳು ಕೋರ್ಟ್ ಆವರಣದಲ್ಲಿ ಇರುತ್ತಿದ್ದವು. ವಿವಿಧ ಪ್ರತಿಷ್ಠಿತ ವಕೀಲರು ದೊಡ್ಡ ದೊಡ್ಡ ಕಾರುಗಳಲ್ಲಿ ಬಂದು ಗತ್ತಿನಲ್ಲಿ ಇಳಿದು ಕೋರ್ಟ್ ರೂಂ ಕಡೆಗೆ ಹೋಗುವುದು ಮತ್ತೂ ಅವರ ಹಿಂದೆ ಫೈಲುಗಳನ್ನು ಹೊತ್ತು ಅವರ ಜೂನಿಯರ್ ವಕೀಲರು/ಕಾರಕೂನರು ಮತ್ತೂ ಕಕ್ಷೀದಾರರು ದೌಡಾಯಿಸುವುದನ್ನು ಕಂಡ ನೆನಪು ಮಾಸಿಲ್ಲ. ಅದೇ ರೀತಿ ಮಾನ್ಯ ನ್ಯಾಯಾಧೀಶರುಗಳ ಗುಂಪು ತಮ್ಮ ಬಂಗಲೆಗಳಿಂದ ಕೋರ್ಟ್ ಆವರಣಕ್ಕೆ ಒಂದು ಸರ್ಕಾರಿ ಟೆಂಪೋದಲ್ಲಿ ಬರುವುದನ್ನು ನೋಡಿದ್ದೆವು. ಮಾನ್ಯ ನ್ಯಾಯಾಧೀಶರು ಕೋರ್ಟ್ ರೂಂ ನಲ್ಲಿ ದಾಖಲಾದಾಗ ಆರೋಪಿಗಳು ಕಟಕಟೆಯಲ್ಲಿ ನಿಂತಿರುವುದು, ಅಲ್ಲಿ ನೆರೆದ ಎಲ್ಲರೂ ಎದ್ದು ಗೌರವದಿಂದ ಅವರಿಗೆ ನಮಸ್ಕರಿಸುವುದು ಸಾಮಾನ್ಯವಾಗಿತ್ತು. ನ್ಯಾಯಾಧೀಶರು ಎರಡೂ ಪಕ್ಷಗಳ ವಾದಗಳನ್ನು, ಪಾಟಿ ಸವಾಲುಗಳನ್ನು ಆಲಿಸಿ ಸೂಕ್ತ ನ್ಯಾಯನಿರ್ಣಯ ಪ್ರಕಟಿಸುವಾಗ ಕೋರ್ಟ್ ರೂಂನಲ್ಲಿರುತ್ತಿದ್ದ ಜನರ ಉದ್ವೇಗ ಮತ್ತೂ ಕಾತರ ಭರಿತ ಶಾಂತತೆ ನನ್ನ ಸ್ಮ್ರತಿ ಪಟಲದಲ್ಲಿ ಇನ್ನೂ ತಾಜಾ ಆಗಿದೆ. ಈ ಸನ್ನಿವೇಶಗಳನ್ನು ಕಂಡ ನಾನು ಮತ್ತೂ ನನ್ನಕ್ಕ ಮುಂದೆ ಒಂದು ದಿವಸ ನಾವೂ ನ್ಯಾಯಾಧೀಶರಾಗಬೇಕೆಂದು ಅಂದು ಕೊಂಡಿದ್ದೆವು. ಆದರೆ, ಒಂದು ದಿವಸ ನಮ್ಮ ತಂದೆಯವರೊಂದಿಗೆ ಒಬ್ಬ ಪ್ರಸಿದ್ಧ ವಕೀಲರ ಮನೆಗೆ ಹೋದಾಗ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ನಮ್ಮ ತಂದೆಯವರಿಗಿಂತಲೂ ಆ ವಕೀಲರ ಮನೆಯ ಲಾಯರ್ ಆಫೀಸಿನ ಗ್ಲಾಸಿನ ಕಪಾಟದಲ್ಲಿ ನೀಟಾಗಿ ಜೋಡಿಸಿಟ್ಟ ಒಂದೇ ತರಹದ ನೂರಾರು ಕಾನೂನು ಪುಸ್ತಕಗಳನ್ನು ನೋಡಿ ನಾವೂ LLB ಓದಿ ಲಾಯರ್ ಆಗುವ, ಮುಂದೆ ನ್ಯಾಯಾಧೀಶರಾಗುವ ವಿಚಾರ ತಮ್ಮ ತಲೆಯಿಂದ ಅರ್ಧ ಇಳಿದಿತ್ತು. ಈ ನಡುವೆ, ಮಾತಿನ ಮಧ್ಯೆ ಆ ಪ್ರತಿಷ್ಠಿತ ವಕೀಲರು ತಮ್ಮ ವೃತ್ತಿಯಲ್ಲಿಯ ವಿವಿಧ ಬಗೆಯ ಕೇಸು ನಿಭಾಯಿಸುವ ಪ್ರಸಂಗಗಳು, ಬಗೆಬಗೆಯ ಕಕ್ಷೀದಾರರು, ಸೂರ್ಯನ ಅಡಿ ಬರುವ ಎಲ್ಲಾ ವಿಷಯಗಳ ಸಾಮಾನ್ಯ ಹಾಗೂ ಕೆಲವೊಂದು ಸಾರಿ ವಿಶೇಷ ಜ್ಞಾನದ ಅವಶ್ಯಕತೆ, ವಿವಿಧ ರೀತಿಯ ಉಚಿತ, ಅನುಚಿತ ಪಾಟಿ ಸವಾಲಿನ ಪ್ರಶ್ನೆಗಳು, ಮನಸ್ಸಿಗೆ ಒಪ್ಪಿಗೆ ಆಗದಿದ್ದರೂ ಪಾಟಿ ಸವಾಲಿನಲ್ಲಿ ಕೇಳುವ ಪ್ರಶ್ನೆ ಅಥವಾ ಎದುರಿಸುವ ಪರಿ ಮುಂತಾದ ಅನೇಕ ವಿಚಾರಗಳನ್ನು ಬಹಳ ರಸವತ್ತಾಗಿ ವಿವರಿಸಿದರು. ಮತ್ತೂ ನಿಮಗೂ ನಿಮ್ಮೂರು ತಾಲೂಕಿನ ಪ್ರತಿಷ್ಠಿತ ಜನರು ಮತ್ತೂ ಜಿಲ್ಲೆಯ ವಿವಿಧ ಇಲಾಖೆಗಳ ಗುಮಾಸ್ತರಿಂದ ಹಿಡಿದು ಅಧಿಕಾರಿಗಳ ಪರಿಚಯಗಳು ಹೇಗೆ ಒಬ್ಬ ಕಾನೂನು ಪದವೀಧರ ಯಶಸ್ವಿ ಲಾಯರಾಗಲು ಅವಶ್ಯಕ ಎಂಬುದನ್ನು ವಿವರಿಸಿದರು. ಅದನ್ನೆಲ್ಲಾ ಆಲಿಸಿ ಆ ವಕೀಲರ ಆಫೀಸಿನಿಂದ ಮನೆಗೆ ಬರುವಾಗಲೇ ನಾವಿಬ್ಬರೂ ನಮ್ಮ ತಲೆಯಲ್ಲಿದ್ದ ನ್ಯಾಯಾಧೀಶರಾಗುವ ವಿಚಾರವನ್ನು ಅಗ್ನಿಗೆ ಹಾಕಿ ಸ್ವಾಹಾ ಎಂದೆವು.!!!

ಅಗ್ನಿ ಎಂದೊಡೆ ನೆನಪಾಯಿತು, ಪಂಚ ಮಹಾ ಭೂತಗಳಲ್ಲೊಂದಾದುದು ಅಗ್ನಿ. "ಅಗ್ನಿನಾ ಸಜ್ಜತೇ ಭಸ್ಮ" ಎಂಬಂತೆ ತನ್ನ ಸಂಪರ್ಕದಲ್ಲಿ ಬಂದ ಎಲ್ಲವನ್ನೂ ಸ್ವಾಹ ಮಾಡುವುದು (ಸುಡುವುದು) ಅದರ ಗುಣಧರ್ಮ.ಅಗ್ನಿಯು ಸೃಷ್ಟಿಯಲ್ಲೇ ಅತ್ಯಂತ ಶಕ್ತಿಶಾಲಿ ಮತ್ತು ಪವಿತ್ರವಾದ ಒಂದು ಮೂಲ ಶಕ್ತಿ. ವೇದಗಳು ಅಗ್ನಿಯನ್ನು ಪ್ರಥಮ ದೇವತೆ ಎಂಬಂತೆ ಕರೆದಿವೆ — "ಅಗ್ನಿಮೀಳೆ ಪುರೋಹಿತಂ ಯಜ್ಞಸ್ಯ ದೇವಮೃತ್ವಿಜಂ" ಎಂದು ಋಗ್ಗ್ವೇದ ಆರಂಭವಾಗುತ್ತದೆ. ಅಗ್ನಿಯು ಬೆಳಕನ್ನು, ತಾಪವನ್ನು, ಶಕ್ತಿಯನ್ನು, ಮತ್ತು ಶುದ್ಧತೆಯನ್ನು ಪ್ರತಿನಿಧಿಸುತ್ತದೆ. ಆದರೆ ಅದಕ್ಕಿಂತಲೂ ಮುಖ್ಯವಾದ ವಿಷಯವೆಂದರೆ ಅಗ್ನಿಯ ದಹನ (ಸುಡುವ) ಧರ್ಮ.  

ಭಾರತದ ಸರ್ವೋಚ್ಛ ನ್ಯಾಯಾಲಯದ ಧ್ಯೇಯವಾಕ್ಯ: यतो धर्मस्ततो जयः ಅಂದರೆ, ಧರ್ಮ ಎಲ್ಲಿದೆಯೋ ಅಲ್ಲಿ ಜಯವಿದೆ ಎಂಬುದಾಗಿದೆ. ಇತ್ತೀಚಿಗೆ ನಮ್ಮ ದೇಶದ ನ್ಯಾಯಾಂಗ (ಅ)ವ್ಯವಸ್ಥೆಯಲ್ಲಿನ ವಿಶ್ವಾಸದ ಕೊರತೆ ಮತ್ತೂ ಸುಧಾರಣೆಯ ಕೂಗು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ನಮ್ಮ ನ್ಯಾಯಾಂಗ ವ್ಯವಸ್ಥೆ ಅಗ್ನಿ ಧರ್ಮವನ್ನು ಆನುಸರಿಸುವುದರ ಬಗ್ಗೆ ಗಂಭಿರ ಚಿಂತನೆ ಮಾಡುವುದು ಉಚಿತ ಎಂಬುದು ನನ್ನ ಅಭಿಪ್ರಾಯ. ಕಾರಣ,ಅಗ್ನಿಯ ಸುಡುವ ಗುಣದ ಕೆಲವು ವಿಶೇಷತೆಗಳು.

೧. ಗೊತ್ತಿದ್ದು ಅಥವಾ ಗೊತ್ತಿಲ್ಲದೇ ಬೆಂಕಿಗೆ ಯಾರೇ ಕೈ ಹಾಕಿದರೂ ಅದು ಸುಡದೇ ಬಿಡದು. ಅಪರಾಧಿಗಳು ಯಾರೇ ಆಗಿರಲಿ, ತಾವು ಮಾಡಿದ ತಪ್ಪಿಗೆ ಸಂಬಂಧಿಸಿದ ಕಾನೂನು ಮತ್ತು ಶಿಕ್ಷೆಯ ಅರಿವು ಇದ್ದೂ ಅಥವಾ ಅರಿವಿಲ್ಲದೇಯೇ ಇದ್ದರೂ ಮಾಡಿದ ಅಪರಾಧಕ್ಕೆ ಶಿಕ್ಷೆ ಎಕರೂಪದ್ದಾಗಿರಬೇಕು ಎಂಬುದು.

೨. "ಅಗ್ನಿನಾ ದಹ್ಯತೇ ಸರ್ವಂ, ನ ತಸ್ಯಾಸ್ತಿ ಪರಾಯಣಂ" ಅಂದರೆ, ಅಗ್ನಿಯು ಎಲ್ಲವನ್ನೂ ದಹಿಸುತ್ತದೆ, ಅದು ಯಾರಿಗೂ ಮನ್ನಣೆ ನೀಡದು ಅಥವಾ ಭೇದ ಭಾವವಿಲ್ಲದೆ ಸುಡುತ್ತದೆ ಎಂಬುದು. ಬೆಂಕಿ ಸುಡುವಲ್ಲಿ ತಾರತಮ್ಯ ಮಾಡುವುದಿಲ್ಲ. ಅಬಾಲವೃದ್ಧ/ಸ್ತ್ರೀಪುರುಷ ಯಾರೇ ಬೆಂಕಿಗೆ ಕೈ ಹಾಕಿದರೂ ಎಲ್ಲರಿಗೂ ಅದು ಏಕಪ್ರಕಾರವಾಗಿ ಸುಡುವುದು. ನಾವು ಎಷ್ಟೋ ಪ್ರಸಂಗಗಳಲ್ಲಿ ೧೭ ವರ್ಷ ೧೧ ತಿಂಗಳು ೨೧ ದಿವಸ ವಯಸ್ಸಿನ ಪುರುಷ ರೇಪ್ ಅಥವಾ ಕುಡಿದ ಅಮಲಿನಲ್ಲಿ ಮಾರಣಾಂತಿಕ ಕಾರು ಅಪಘಾತ ಮಾಡಿದಾಗ ಇಲ್ಲವೆ ಡ್ರಗ್ಸ ದಂಧೆಯಲ್ಲಿ ಸಿಕ್ಕಿಬಿದ್ದಾಗ ನ್ಯಾಯಾಲಯ ಆ ವ್ಯಕ್ತಿಗೆ ಇನ್ನೂ ೧೮ ವರ್ಷ ತುಂಬದ ಹಿನ್ನೆಲೆಯಲ್ಲಿ ಅವನನ್ನು ಬಾಲಾಪರಾಧಿ ಎಂದು ಪರಿಗಣಿಸಿ ಅದಕ್ಕೆ ಅನುಗುಣವಾಗಿ ಶಿಕ್ಷೆ ವಿಧಿಸಿದ ಪ್ರಸಂಗಗಳನ್ನು ಕಂಡಿದ್ದೇವೆ.ಇಂತಹ ನ್ಯಾಯವನ್ನು ಅಗ್ನಿ ಒಪ್ಪುವುದಿಲ್ಲ.

೩. ಬೆಂಕಿಗೆ ಕೈ ಹಾಕುವವರು ಯಾರೇ ಆಗಿರಲಿ ಅವರು ಎಷ್ಟು ಹೊತ್ತು ಬೆಂಕಿಗೆ ಕೈ ಹಾಕುತ್ತಾರೋ ಅಷ್ಟು ಜಾಸ್ತಿ ಅದು ಸುಡದೇ ಬಿಡದು. ಒಬ್ಬ ಅಪರಾಧಿಯು ಎಸುಗಿದ ಅಪರಾಧದ ತೀವ್ರತೆಗೆ ಅನುಗುಣವಾಗಿ ಯಾವುದೇ ಮುಲಾಜಿಲ್ಲದೇ ಎಕ ತೆರನಾದ ಶಿಕ್ಷೆ ಆಗಬೇಕೇ ಹೊರತು ಸಮಾಜದ ಸ್ಥಿತಿವಂತರು, ಪ್ರಭಾವೀ ವ್ಯಕ್ತಿಗಳು, ರಾಜಕಾರಣಿಗಳಿಗೆ ಯಾವುದೇ ತರಹದ ಸಾಫ್ಟ್ ಕಾರ್ನರ್ ಇರಕೂಡದು ಎಂಬುದನ್ನು ಸೂಚಿಸುತ್ತದೆ.

೪. ಬೆಂಕಿಗೆ ಹಾಕಿದ ಎಲ್ಲಾ ವಸ್ತುಗಳಲ್ಲಿ ಕೆಲವು ವಸ್ತುಗಳು ಬೇಗ ಮತ್ತು ಇನ್ನೂ ಕೆಲವು ನಿಧಾನವಾಗಿ ಸುಡಬಹುದು ಆದರೆ ಬೆಂಕಿ ಯಾವುದೇ ವಸ್ತುವನ್ನು ಸುಡದೇ ಬಿಡದು. ನಮ್ಮಲ್ಲಿ ಎಷ್ಟೋ ಸಾರಿ ಅಪರಾಧ ಎಸಗಿದ್ದು ಎದ್ದು ಕಾಣುತ್ತಿದ್ದರೂ ಸೂಕ್ತ ಸಾಕ್ಷ್ಯ, ಪುರಾವೆಗಳು ಉಪಲಬ್ದವಾಗದೇ (ಪೋಲೀಸರು/ಸರ್ಕಾರೀ ವಕೀಲರು/ ತನಿಖಾಧಿಕಾರಿಗಳು ಒದಗಿಸದೇ) ಆರೋಪಿಗಳು ಖುಲಾಸೆ ಹೊಂದಿರುವುದನ್ನು ಕಾಣಬಹುದು.ಇದನ್ನು ಅಗ್ನಿ ಮಾನ್ಯಮಾಡುವುದಿಲ್ಲ.

೫. ಬೆಂಕಿಗೆ ಕೈ ಹಾಕಿದ ಮರು ಕ್ಷಣದಿಂದಲೇ ಅದು ಸುಡಲು ಪ್ರಾರಂಭಿಸುವುದು. ನಮ್ಮ ದೇಶದ ವಿವಿಧ ನ್ಯಾಯಾಲಯಗಳಲ್ಲಿ ಲಕ್ಷಗಟ್ಟಲೇ ಖಟ್ಲೆಗಳು ದಶಕಗಳಿಂದ ಕೊಳೆಯುತ್ತಿವೆ. ಅಗ್ನಿಯ ಈ ಸ್ವಭಾವ "justice delayed is justice denied" ಎಂಬುದನ್ನು ಪುಷ್ಟೀಕರಿಸುತ್ತದೆ ಮತ್ತೂ ಅಪರಾಧಿಗೆ ತ್ವರಿತಗತಿಯಲ್ಲಿ ಸೂಕ್ತ ಶಿಕ್ಷೆಯನ್ನು ನ್ಯಾಯಾಲಯ ಒದಗಿಸಬೇಕು ಎಂಬುದನ್ನು ಸೂಚಿಸುತ್ತದೆ.

೬. ಎರಡೂ ಕೈಗಳನ್ನು ಬೆಂಕಿಗೆ ಹಾಕಿದರೆ ಎರಡೂ ಕೈಗಳನ್ನು ಬೆಂಕಿ ಪ್ರತ್ಯೇಕವಾಗಿ ಸುಡದೇ ಬಿಡದು. ಭಾರತದಲ್ಲಿ ಒಬ್ಬ ಆರೋಪಿಯ ವಿವಿಧ ಆರೋಪಗಳು ಸಾಬೀತಾಗಿ ವಿವಿಧ ಅವಧಿಯ ಶಿಕ್ಷೆಗೆ ಗುರಿಯಾಗಿದ್ದರೆ ಅವುಗಳಲ್ಲಿನ ದೀರ್ಘಾವಧಿಯ ಶಿಕ್ಷೆಯಲ್ಲಿ ಉಳಿದ ಅವಧಿಗಳು ಸಮ್ಮಿಳನ ಹೊಂದುವವೇ ಹೊರತು ಅಪರಾಧಿಗಳು ಪ್ರತೀ ಅಪರಾಧಕ್ಕೆ ಪ್ರತ್ತೇಕವಾಗಿ ಶಿಕ್ಷಾ ಅವಧಿಗೆ ಒಳಪಡುವುದಿಲ್ಲ. ಅಗ್ನಿಯ ನ್ಯಾಯ ಇದನ್ನು ಒಪ್ಪುವುದಿಲ್ಲ.

೭. ಬೆಂಕಿಗೆ ಕೈ ಹಾಕಿದರೆ ಚರ್ಮದ ಒಳಗೆ ಉರಿವ ನೋವಾದರೆ ಚರ್ಮದ ಹೊರಕ್ಕೆ ಗಾಯವಾಗುವುದು. ಒಂದು ವೇಳೆ ಚರ್ಮದ ಒಳಗಿನ ಉರಿತ ಬೇಗ ಕಡಿಮೆಯಾಗಿ ಹೋದರೂ ಚರ್ಮದ ಹೊರಗಿನ ಗಾಯ ಮಾಯಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಮೈ ಕೈ ಸುಟ್ಟ ತೀವ್ರತೆ ಬಹಳೇ ಜಾಸ್ತಿ ಆಗಿದ್ದರೆ ಚರ್ಮದ ವಿಕಾರ ಶಾಶ್ವತವಾಗಿ ಉಳಿದು ಕೈ ಮೈ ಸುಟ್ಟುಕೊಂಡ ವ್ಯಕ್ತಿ ಅದರ ಆಭಾಸವನ್ನು ಇತರರಿಂದ ಮರೆಮಾಚದಂತೆ ಮಾಡುತ್ತದೆ.ನಮ್ಮ ನ್ಯಾಯಾಲಯವು ವಿಧಿಸುವ ಶಿಕ್ಷೆ, ಅಪರಾಧಿ ಶಿಕ್ಷೆ ಅನುಭವಿಸಿ ಖುಲಾಸೆ ಆದ ನಂತರ ಇನ್ನೋಮ್ಮೆ ಈ ತರಹದ ಅಪರಾಧ ಎಸಗದಂತೆ ಅವನಿಗೆ ಸದಾ ಎಚ್ಚರಿಕೆ ನೀಡುವಂತಿರಬೇಕು ಎಂದು ಅಗ್ನಿಯ ನ್ಯಾಯ ಸೂಚಿಸುತ್ತದೆ. ಅಂಬೆಗಾಲಿಡುವ ಹಸುಳೆ ಅಕಸ್ಮಾತಾಗಿ ಒಮ್ಮೆ ಬೆಂಕಿಗೆ ಕೈ ಇಟ್ಟು ಸುಟ್ಟುಕೊಂಡಿತೆಂದರೆ  ಮುಂದೆ ಜೀವನ ಪರ್ಯಂತ ಆ ವ್ಯಕ್ತಿ ಬೆಂಕಿಯೊಂದಿಗೆ ಸರಸವಾಡುವುದಿಲ್ಲ. ಅಷ್ಟೇ ಏಕೆ, ಬಿಸಿ ಹಾಲು ಕುಡಿಯಲು ಹೋಗಿ ನಾಲಿಗೆ ಸುಟ್ಟುಕೊಂಡ ಬೆಕ್ಕು ಬೆಣ್ಣೆ ಭರಿತ ಮಜ್ಜಿಗೆಯನ್ನು ಹತ್ತು ಸಲ ಊದಿ ಕುಡಿಯುತ್ತದೆ ಎಂದಾದ ಮೇಲೆ ನಮ್ಮ ನ್ಯಾಯಾಂಗ ಈ ದಿಸೆಯಲ್ಲಿ ಗಮನ ಹರಿಸುವುದು ಸೂಕ್ತ ಎನಿಸುತ್ತದೆ.

ಅಗ್ನಿಯ ಪಾವಿತ್ರ್ಯತೆ ಮತ್ತೂ ನ್ಯಾಯ ಬುದ್ಧಿಯಿಂದಾಗಿಯೇ ಅಲ್ಲವೇ ನಾವೆಲ್ಲ ಅಗ್ನಿ ಸಾಕ್ಷಿಯಾಗಿ ಮದುವೆ ಆಗುವುದು, ಹೋಳಿಯ ಹಬ್ಬದಲ್ಲಿ ಕಾಮಣ್ಣನನ್ನು ಅಗ್ನಿಯಲ್ಲಿ ದಹನ ಮಾಡುವುದು, ಚಿನ್ನವನ್ನು ಅಗ್ನಿಯಲ್ಲಿ ಕರಗಿಸಿ ಶುದ್ಧ ಮಾಡುವುದು ಮತ್ತೂ ಯಜ್ಞ ಯಾಗಾದಿಗಳಲ್ಲಿ ಅಗ್ನಿಯ ಮುಖೇನ ಆಹುತಿ ಅರ್ಪಿಸುವುದು.

ಭಾಗವತ ಪುರಾಣದಲ್ಲಿ ಬರುವಂತೆ ಶ್ರೀಕೃಷ್ಣ ತನ್ನ ಅವತಾರವನ್ನು ಮುಗಿಸಿ ಪರಂಧಾಮಕ್ಕೆ ತೆರಳಿದ ನಂತರ ಪಾಂಡವರು ಪರೀಕ್ಷಿತನಿಗೆ ತಮ್ಮ ರಾಜ್ಯವನ್ನು ವಹಿಸಿ ಸ್ವರ್ಗಕ್ಕೆ ತೆರಳಿದಾಗ ದ್ವಾಪರಯುಗ ಮುಕ್ತಾಯವಾಗಿ ನಮ್ಮ ಇಂದಿನ ಕಲಿಯುಗ ಪ್ರಾರಂಭವಾಯಿತಂತೆ. ಪರೀಕ್ಷಿತ ರಾಜ ಸಂಚಾರ ಮಾಡುತ್ತಾ ತನ್ನ ರಾಜ್ಯದಲ್ಲಿ ಕಲಿ ಪ್ರವೇಶ ಮಾಡಿರುವುದರ ಕುರುಹಾಗಿ ಕಂಡದ್ದೇನೆಂದರೆ ಒಂದು ಗೋವು ಕಣ್ಣೀರು ಹಾಕುತ್ತಾ ನಿಂತಿದೆ ಅದರ ಎದುರಿಗೆ ಒಂದು ಎತ್ತು ಒಂಟಿ ಕಾಲಲ್ಲಿ ನಿಂತಿದೆ ಮತ್ತೂ ಒಬ್ಬ ರಾಜನ ವೇಷಧಾರಿ ಆ ಒಂದು ಕಾಲಮೇಲೆ ನಿಂತ ಎತ್ತಿನ ಕಾಲಿಗೆ ಬಾರ್ಕೋಲಿನಿಂದ ಆ ಒಂದು ಕಾಲೂ ಮುರಿದು ಹೋಗಲಿ ಎಂದು ಜೋರಾಗಿ ಹೊಡೆಯುತ್ತಿದ್ದಾನೆ. ಇದರ ತಾತ್ಪರ್ಯ ನಾಲ್ಕು ಕಾಲಿನ ಎತ್ತು ಎಂದರೆ ಧರ್ಮ. ಧರ್ಮಕ್ಕೆ ನಾಲ್ಕು ಕಾಲುಗಳು.ಅವೇ ತಪಸ್ಸು, ಪಾವಿತ್ರ್ಯ, ದಯಾ ಮತ್ತೂ ಸತ್ಯ. ಇಂದಿನ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕು ಕಾಲುಗಳು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತೂ ಪತ್ರಿಕಾ ರಂಗ ಎಂದೆನ್ನಬಹುದು. ನಮ್ಮ ಇಂದಿನ ನಾಗರಿಕ ಸಮಾಜದ ವಿಶ್ವಾಸ ಉಳಿದಿರುವುದೇ ನ್ಯಾಯಾಂಗವೆಂಬ ಆ ಒಂದು ಕಾಲ ಮೇಲೆ ಮಾತ್ರ.ಆ ವಿಶ್ವಾಸವನ್ನು ಉಳಿಸಿಕೊಳ್ಳುವ ಗುರುತರ ಜವಾಬ್ದಾರಿ ನಮ್ಮ ನ್ಯಾಯಾಂಗ ವ್ಯವಸ್ಥೆಯ ಮೇಲಿದೆ.

ತ್ರೇತಾಯುಗದಲ್ಲಿ ತನ್ನ ಮೇಲೆ ಕಳಂಕದ ಆಪಾದನೆ ಬಂದಾಗ ಸೀತಾಮಾತೆ ಅಗ್ನಿ ಪರೀಕ್ಷೆಗೆ ಒಳಗಾಗಿ ತನ್ನ ಪಾವಿತ್ರ್ಯತೆಯನ್ನು ಮೆರೆದಿದ್ದು ಕಲಿಯುಗದ ಇಂದಿನ ನಮ್ಮ ನ್ಯಾಯಾಂಗ ವ್ಯವಸ್ಥೆಗೆ ಆದರ್ಶ ಮಾದರಿ ಅಲ್ಲವೇ?

-ಡಾ. ಜಯಂತ ಕಿತ್ತೂರ 







ಕಾಮೆಂಟ್‌ಗಳು

  1. Very interesting comparison, thought provoking writings

    ಪ್ರತ್ಯುತ್ತರಅಳಿಸಿ
  2. Very good article Sir.

    Excellent write up and editing as well

    ಪ್ರತ್ಯುತ್ತರಅಳಿಸಿ
  3. Great article.. lot to think about and digest. Liked to see that you mentioned the fourth leg as media.. very true.

    I agree that Agni can give justice to everyone equally. But, we have people who are prepared for Agni by wearing fire resistant gloves or clothing.. how can Agni provide justice? They are smart .. use their knowledge, money or technology to overcome this. We need a better Agni or LASER which can penetrate all such layers.
    Please keep writing ✍️

    ಪ್ರತ್ಯುತ್ತರಅಳಿಸಿ
  4. Very nicely written explaining characteristics of fire , its nature way back from vedic days. How , it can be relatively implimented in the present context. Fire 🔥 .

    ಪ್ರತ್ಯುತ್ತರಅಳಿಸಿ
  5. ಹರಟೆಯ ಸ್ವಭಾವದಂತೆ ಒಂದು ಕಡೆ ನಿಲ್ಲದೆ ಮುಂದೆ ಮುಂದೆ ಸಾಗುವ ಗುಣ ಹೊಂದಿದೆ. ಅದಾಗ್ಯೂ ಕೇಂದ್ರ ಬಿಂದುವನ್ನು ಬಿಟ್ಟು ಕೊಡದೆ ನೆನಪಿಸಿಕೊಂಡು ಬಂದು ಒಂದು ಕ್ಷಣ ನಿಂತು ಮತ್ತೆ ತನ್ನ ಕಾಯಕಕ್ಕೆ ಹೋಗುತ್ತದೆ. ಲಘು ಶೈಲಿಯಲ್ಲಿ ಗಾಂಭಿರ್ಯವನ್ನು ಹಿಡಿದಿಡುವ ಹರಟೆಯ ಮುಖ್ಯ ಲಕ್ಷಣ ಕೂಡ ಇದರಲ್ಲಿದೆ.
    ಮೂರು ಪ್ರಬಂಧಗಳಿಗಾಗುವಷ್ಟು ವಿಷಯವನ್ನು ಸೇರಿಸಿದಂತೆ ಕಾಣುವ ಸಾಧ್ಯತೆ ಇರುವುದರಿಂದ ಪ್ರಬಂಧದ ಬಂಧ ಕೊಂಚ ಸಡಿಲಾಗಿ ತೋರುತ್ತದೆ.
    ಒಟ್ಟಾರೆ, ವಿಷಯದ ಆಯ್ಕೆ ಮತ್ತು ಅದಕ್ಕಾಗಿ ಸೇರಿಸಿದ ಕಚ್ಚಾ ಸರಕು ಗುಣಮಟ್ಟದ ಉತ್ಪಾದನೆಯತ್ತ ತೊಡಗಿದ್ದು ಸ್ಪಷ್ಟವಾಗಿ ಗೋಚರಿಸುತ್ತದೆ.
    ಜಯಂತ್,ಅಭಿನಂದನೆಗಳು.

    ಪ್ರತ್ಯುತ್ತರಅಳಿಸಿ
  6. ಬಹಳ ದಿನಗಳಿಂದ ನ್ಯಾಯಾಂಗದ ಕುರಿತಾದ ಒಂದು ಅಭಿಪ್ರಾಯ : 'ನ್ಯಾಯಾಲಯ ಎಂದರೆ ನ್ಯಾಯ ಕೊಡುವ ಆಲಯ ಎಂದಲ್ಲ; ಎಲ್ಲಿ ನ್ಯಾಯ ಲಯವಾಗುತ್ತದೋ ಅದೇ ಆ ಸ್ಥಳ...!' ಎಂಬುದಕ್ಕೆ ಪೂರಕವಾಗಿದೆ ಈ ಬರಹ...! ಬಹಳಷ್ಟು ವಸ್ತು ವಿಷಯಗಳು ಇದಕ್ಕೆ ಆಧಾರವಾಗಿವೆ..., ಇತ್ತೀಚಿನ ದಿನಗಳಲ್ಲಿ...! ತಮ್ಮ ಶ್ರೀಮತಿಯವರ ಸಂವೇದನಶೀಲತೆಗೂ, ಅದನ್ನು ಪೂರಕವಾಗಿ ಬಳಿಸಿಕೊಂಡು ಲೇಖನ ಬರೆದ ತಮಗೂ ಅನಂತಾನಂತ ಧನ್ಯವಾದಗಳು ಹಾಗೂ ಕೃತಜ್ಞತೆಗಳು...!
    ಕುರಾಜನ್.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನನ್ನ ಬಿಳಿ ತಲೆಯ ಬಣ್ಣಗಳು ...(ಭಾಗ-೧)

ದಿಖಾವೇಪೆ ಮತ್ ಜಾವೋ ಅಕಲ್ ಲಗಾವೋ...

ಇವಾ ಯಾವೂರವಾ...