ಲುಂಗಿಯ ಸುದ್ದಿ
ಕೆಲ ದಿನಗಳ ಹಿಂದೆ ಬಾಂಗ್ಲಾದೇಶದ ಮಾಜಿ ಅಧ್ಯಕ್ಷರೊಬ್ಬರು ರಾತ್ರೋರಾತ್ರಿ ಉಟ್ಟ ಲುಂಗಿಯಲ್ಲಿ ವಿಮಾನ ಹತ್ತಿ ದೇಶಬಿಟ್ಟು ಪಲಾಯನ ಮಾಡಿದ್ದಾರೆ ಎಂಬ ಸುದ್ದಿ ಫೋಟೋ/ ವಿಡಿಯೋ ಸಹಿತ ವೈರಲ್ ಆಗಿ ಸಾಂಪ್ರದಾಯಿಕ ಸುದ್ದಿ ಮಾಧ್ಯಮಗಳಲ್ಲಿ ಬಂದದ್ದು ತಮಗೂ ತಿಳಿದ ವಿಷಯ.
ಒಂದು ವಿಷಯ ಸುದ್ದಿಯಾಗುವಲ್ಲಿ ಮೂರು ಹಂತಗಳಿವೆ. ಒಂದು... ಘಟನೆ ಘಟಿಸಬೇಕು ಅಥವಾ ಘಟಿಸಬೇಕಾದದ್ದು ಘಟಿಸಿರಬಾರದು, ಉದಾಹರಣೆಗೆ ಹೇಳುವುದಾದರೆ ಒಬ್ಬ ಬೆಂಕಿಯಲ್ಲಿ ಕೈ ಹಾಕಿದಾಗ ಅವನ ಕೈ ಸುಡದೇ ಇರುವುದು. ಎರಡು...ಆ ಘಟನೆಯ ದೃಶ್ಯವನ್ನು ಯಾರಾದರು ನೋಡಿರಬೇಕು/ಚಿತ್ರೀಕರಿಸಿಕೊಂಡಿರಬೇಕು ಅಥವಾ ಕಾಣಿಸದಿದ್ದರೆ ಕನಿಷ್ಠಪಕ್ಷ ಕೇಳಿಸಿಕೊಂಡಿರಬೇಕು. ಸ್ಥೂಲವಾಗಿ ಹೇಳುವುದಾದರೆ, ಆ ಘಟನೆಯ ಪ್ರಕಟನೆಯ ದಾಖಲಾತಿ ಆಗಬೇಕು. ಇನ್ನು ಮೂರನೇಯದು... ಘಟನೆ ತೀರಾ ಸಾಮಾನ್ಯ ವಿಷಯವಾಗಿರದೇ, ಅದರಲ್ಲಿ ಏನೋ ವಿಶೇಷತೆ ಇರಬೇಕು. ಭೂಮಿ ಹುಟ್ಟಿದಾಗಿನಿಂದ ಸೂರ್ಯ ಉದಯಿಸುವುದು ಪೂರ್ವದಿಕ್ಕಿಗೇ. ಇಂದು ಕೂಡಾ ಅಕಸ್ಮಾತಾಗಿ ನಾವು ಹಾಸಿಗೆಯಲ್ಲಿ ಬೆಚ್ಚಗೆ ಅಥವಾ ಥಣ್ಣಗೆ ಮಲಗಿದ್ದರೂ ಅಂದರೆ ನಮ್ಮ ಜಂಬದ ಕೋಳಿ ಕೂಗಲಿ ಬಿಡಲಿ, ಸೂರ್ಯನು ಮಾತ್ರ ಪೂರ್ವದಲ್ಲಿಯೇ ಹುಟ್ಟಿರುವುದು. ಅಷ್ಟೇ ಏಕೆ, ನಾಳೆ ನಾವು ಈ ಭೂಮಿಯ ಮೇಲೆ ಇರಲಿ ಬಿಡಲಿ, ಸೂರ್ಯನು ಮಾತ್ರ ಉದಯಿಸುವುದು ಪೂರ್ವದಿಕ್ಕಿಗೆ. ಹಾಗಾಗಿ ಸೂರ್ಯ ಇಂದು ಪೂರ್ವ ದಿಕ್ಕಿಗೆ ಉದಯಿಸಿದ ಎಂಬ ಘಟನೆ ಅಥವಾ ಈ ವಿಷಯ ಸುದ್ದಿಯಾಗಲಾರದು. ಬದಲಾಗಿ ಸೂರ್ಯನು ಅಪ್ಪಿತಪ್ಪಿ ಪಶ್ಚಿಮಕ್ಕೆ ಉದಯಿಸಿದ ಎಂದು ನಮ್ಮ ಮಿತ್ರರು ಯಾರಾದರು ಬೆಳ್ಳಂಬೆಳಗ್ಗೆ ಹೇಳಿದರೆ ಅದು ಸುದ್ದಿಯಾದೀತು. ಅದೇನೆಂದರೆ, ನಿನ್ನೆ ರಾತ್ರಿ ನಮ್ಮ ಮಿತ್ರನು ಮಿತಿಮೀರಿ ಕಂಟಮಟ ಕುಡಿದಿರುವನೆಂದು ಅಲ್ಲವೇ!!!. ನಮ್ಮ ಸುದ್ದಿ ಮನೆ ಸುಬ್ಬಕ್ಕನ ಪ್ರಕಾರ, ಒಂದು ವಿಷಯ ಸುಳ್ಳ್ ಸುದ್ದಿಯಾಗಿ ಹರಡಲು ಬೇಕಾದ ಭಂಡವಾಳವೇ ಬೇರೆ. ಅಲ್ಲಿ ವಿಷಯ ಘಟಿಸಿರಲೇಬೇಕೆಂಬ ಪ್ರತಿಬಂಧವಿಲ್ಲ. ಬದಲಾಗಿ ವಿಷಯ ರೋಚಕ/ಆಘಾತಕಾರಿ/ಕುತುಹಲಕಾರಿಯಾಗಿ ಕರ್ಣಪ್ರೀಯವಾಗಿರುವುದು ಬಹಳ ಮುಖ್ಯ.ಇನ್ನು, ಈ ಸುಳ್ಳ್ ಸುದ್ದಿಗಳಲ್ಲಿ ಎರಡು ಪ್ರಕಾರಗಳಂತೆ. ಒಂದು ಹಸಿ ಸುಳ್ಳು ಸುದ್ದಿಯಾದರೆ ಇನ್ನೊಂದು ಒಣಾ ಸುಳ್ಳು ಸುದ್ದಿ. ಇರಲಿ, ಇವುಗಳ ವಿಶ್ಲೇಷಣೆಯನ್ನು ಇನ್ನೊಮ್ಮೆ ನೋಡೊಣ.
ಪ್ರಸ್ತುತ, ಒಂದು ಸತ್ಯಘಟನೆ ನಡೆದು ಅದು ಸುದ್ದಿಯಾಗುವುದಕ್ಕೂ ಮತ್ತು ಆ ಸುದ್ದಿ ನಮ್ಮ ಸಾಂಪ್ರದಾಯಿಕ ವಾರ್ತಾ ಮಾಧ್ಯಮಗಳಾದ ಪತ್ರಿಕೆ/ಟಿವಿ ನ್ಯೂಸ್ ಗಳಲ್ಲಿ ಪ್ರಕಟ/ಬಿತ್ತರವಾಗುವುದಕ್ಕೂ ಬಹಳ ವ್ಯತ್ಯಾಸವಿದೆ. ಒಂದು ಸುದ್ದಿ ಸಾಂಪ್ರದಾಯಿಕ ಮಾಧ್ಯಮಗಳಲ್ಲಿ ಬರುವುದು ಮೂರು ವಿಷಯಗಳ ಮೇಲೆ ಅವಲಂಬಿಸಿದೆ. ಮೊಟ್ಟಮೊದಲಿನದು... ಈ ಮಾಧ್ಯಮಗಳ ಗ್ರಾಹಕರು/ವೀಕ್ಷಕರು ಯಾರು ಮತ್ತು ಅವರ ಅಭಿರುಚಿ ಎಂಥಹದ್ದು ಎಂಬುದು. ಎರಡನೇಯದು...ಜಾಹೀರಾತುಗಳ ಸ್ಥಳ/ಸಮಯ ಮಿಕ್ಕು ಸುದ್ದಿ ಪ್ರಕಟಣೆಗೆ ಉಳಿದ ಜಾಗ/ಸಮಯ ಎಷ್ಟು ಎಂಬುದು. ಮತ್ತು ಮೂರನೇಯದು... ಬೇರೆ ಸುದ್ದಿ ವಿಷಯಗಳಿಗೆ ಹೋಲಿಸಿದರೆ ಈ ಸುದ್ದಿಯ ಆದ್ಯತೆ ಅಥವಾ ಇದರಿಂದ ಆಗುವ ಲಾಭ/ನಷ್ಟ ಎಷ್ಟು ಎಂಬುದು. ಸಾಮಾನ್ಯವಾಗಿ ಈ ಮೂರನೇಯದರಲ್ಲೇ ಬರುವುದು ನೋಡಿ ಮಾಧ್ಯಮದ ಸಂಪಾದಕ ಮತ್ತೂ ಮಾಧ್ಯಮದ ಮಾಲೀಕರ ನಡುವಿನ ಭಿನ್ನಾಭಿಪ್ರಾಯ. ಇರಲಿ.
ಅರಾಜಕತೆಯ ಹಿನ್ನೆಲೆಯಿರುವ ಸಣ್ಣ ಪುಟ್ಟ ಬಡ ದೇಶಗಳಲ್ಲಿ ಈ ರೀತಿಯಲ್ಲಿ ದೇಶವಾಳುವ ಅಥವಾ ಆಳಿದ ರಾಜಕಾರಣಿಗಳು/ಸರ್ವಾಧಿಕಾರಿ ದುರಾಡಳಿತಗಾರರು ಪ್ರಾಣ ಭಯದಿಂದ ದೇಶಬಿಟ್ಟು ನಡುರಾತ್ರಿ ಪಲಾಯನ ಮಾಡುವುದು ಸರ್ವೇಸಾಮಾನ್ಯ ಸಂಗತಿ. ಇನ್ನು, ಭಾರತದಂತಹ ಉದಾರವಾದಿ ಪ್ರಜಾಪ್ರಭುತ್ವ ದೇಶದಲ್ಲಿಯೂ ಗಂಭೀರ ಆರ್ಥಿಕ ಅಪರಾಧಿಗಳು ಇತ್ತೀಚಿನ ದಶಕಗಳಲ್ಲಿ ದೇಶಬಿಟ್ಟು ಪಲಾಯನ ಮಾಡಿರುವುದನ್ನು ನಾವೆಲ್ಲ ತಿಳಿದು ಬಲ್ಲೆವು. ಆದರೆ ಅವು ಯಾವವೂ ಅಷ್ಟು ದೊಡ್ಡ ಸುದ್ದಿಯಾದಂತೆ ಕಾಣದು. ಬಹುಶಃ ಮೇಲೆ ಹೇಳಿದ ವಿಷಯಗಳು ಸುದ್ದಿಯಾಗುವ ಆ ಮೂರನೆಯ ಹಂತದಲ್ಲಿ ಅವು ಸೋತಿರಬೇಕು.
ಆದರೆ, ಬಾಂಗ್ಲಾದೇಶದ ಮಾಜಿ ಅಧ್ಯಕ್ಷರ ಇತ್ತೀಚಿನ ಪಲಾಯನ ವಿಷಯ ಸುದ್ದಿಯಾಗಿ ಪ್ರಕಟಣೆಯಾಗಲು ಕಾರಣ ಉಟ್ಟ ಲುಂಗಿಯಲ್ಲಿ ದೇಶಬಿಟ್ಟು ಪಲಾಯನ ಮಾಡಿದ್ದು ಎಂಬುದು ಅಲ್ಲವೇ? ಅರೆ, ಅವರ ಸಾಮಾನ್ಯ ವೇಶಭೂಷಣವೇ ಅಂಗಿ ಮತ್ತು ಲುಂಗಿ ಆಗಿದ್ದರೆ ಅವರು ಸವಾರಿ ಮಾಡುವುದು ಸರ್ಕಾರಿ ಕಾರುಗಳೆಂಬ ಅಶ್ವದಳವಾಗಲಿ ಇಲ್ಲವೆ ಜಂಬೋ ಜೆಟ್ ವಿಮಾನವಾಗಲಿ ಯಾವುದಾದರೇನು ಆ ಉಡುಪಿನಲ್ಲಿಯೇ ಅವರು (ಅರ)ಮನೆಯಿಂದ ಹೊರಬೀಳುವುದು. ಉದಾಹರಣೆಗೆ ನಮ್ಮ ರಾಜ್ಯದವರೇ ಆದ ಮಾಜಿ ಪ್ರಧಾನಿ ಅಥವಾ ಪಕ್ಕದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿಯನ್ನು ನೋಡಬಹುದು. ಅಷ್ಟೇ ಏಕೆ, ದಕ್ಷಿಣ ಭಾರತದ ಹಳೆ ತಲೆಮಾರಿನ ಅನೇಕ ಸಿನಿಮಾಗಳ ನಾಯಕ ನಟರೂ ತಮ್ಮ ನಿಜ ಜೀವನದಲ್ಲಿ ಈ ಪಂಚೆ ಲುಂಗಿ ಉಡುತ್ತಿದ್ದದ್ದು ತಾವೂ ಕಂಡಿರಬಹುದು. ಆದರೆ, ಪ್ರಸ್ತುತ ಸುದ್ದಿಯಾದ ಬಾಂಗ್ಲಾದೇಶದ ಮಾಜಿ ಅಧ್ಯಕ್ಷರ ಸಾಮಾನ್ಯ ವೇಶಭೂಷಣ ಅಂಗಿ-ಲುಂಗಿ ಅಲ್ಲವಂತೆ. ಆದುದರಿಂದಲೇ ಅದು ಸುದ್ದಿಯಾಗಿದ್ದು ಮತ್ತು (ಅಪ)ಪ್ರಚಾರವಾಗಿದ್ದು ಎನ್ನಬಹುದು. ಅರೆ, ಅವರ ಸಾಮಾನ್ಯ ವೇಶಭೂಷಣ ಅಂಗಿ ಮತ್ತು ಲುಂಗಿ ಆಗದ್ದಿದ್ದರೆ ಏನಾಯಿತು, ಎಂದಾದರೊಂದು ದಿನ 'ಫಾರ್ ಎ ಚೇಂಜ್' ಅಂತಾದರೂ ಅವರು ಲುಂಗಿ ಉಟ್ಟಿರಬಾರದೇ? ಅವರು (ಬಾಂಗ್ಲಾದೇಶದವರು) ಲುಂಗಿ ಉಟ್ಟುಕೊಳ್ಳಬಾರದು ಎಂದು ಏನಾದರು ನಿರ್ಬಂಧವಿದೆಯಾ? ಹಾಗಂತ ನನಗೆ ನಮ್ಮ ಇಂದಿನ ಮಾಹಿತಿ ಗುರು ಗೂಗಲ್ ನಲ್ಲಿ ಮಾಹಿತಿ ಸಿಗಲಿಲ್ಲ. ಹಾಗಿದ್ದಲ್ಲಿ, ಆ ವಿಷಯ ಸುದ್ದಿಯಾಗಿ ಬಿತ್ತರವಾಗಲು ಕಾರಣ ಬಹುಶಃ ನಾವೆಲ್ಲ ಸಾಮಾನ್ಯವಾಗಿ ಮನೆಯಲ್ಲಿ ಇರುವಾಗ ಉಡುವ ಲುಂಗಿಯಂತೆ ಆ ಮಹಾಶಯನೂ ಮನೆಯಲ್ಲಿ ತನ್ನ ಮನೆಉಡುಪಾಗಿ ಲುಂಗಿ ಉಡುತ್ತಿರಬಹುದು ಮತ್ತು ಅಂದು ಮನೆಯ ಉಡುಪಾಗಿ ಉಟ್ಟ ಆ ಲುಂಗಿಯಲ್ಲಿಯೇ ಅಂದರೆ ಉಟ್ಟುಡುಗೆಯಲ್ಲೇ ನಡುರಾತ್ರಿ ಪಲಾಯನ ಮಾಡಿರಬಹುದು. ಇಲ್ಲದಿದ್ದರೆ ಅದು ಅಷ್ಟು ಮಹತ್ವದ ಸುದ್ದಿಯಾಗಿ ಸುದ್ದಿ ಮಾಧ್ಯಮದಲ್ಲಿ ಪ್ರಕಟವಾಗುತ್ತಿರಲಿಲ್ಲ ಅಲ್ಲವೇ?
ಈ ಲುಂಗಿ ನಮ್ಮ ಭಾರತೀಯ ಪಾರಂಪರಿಕ ಉಡುಗೆಯಾದ ಪಂಚೆಯ ಅಂದರೆ ಧೋತರದ ಮಾರ್ಪಾಡಾದ ರೂಪ ಅಥವಾ ತದ್ಭವ ಎನ್ನಬಹುದು. ಪಂಚೆ ಎಂಬುದಕ್ಕೆ ಆನ್ ಲೈನ್ ಅಮರಕೋಶ, ಸೊಂಟದಿಂದ ಮೊಣಕಾಲಿನ ಕೆಳಗಿನವರೆಗೂ ಮುಚ್ಚಿಕೊಳ್ಳಲು ಸೊಂಟಕ್ಕೆ ಸುತ್ತಿಕೊಂಡು ತೊಟ್ಟುಕೊಳ್ಳುವ ಒಂದು ವಿರೋಚಿತವಾದ ಬಟ್ಟೆ ಎಂದು ವಿವರಿಸುತ್ತದೆ. ನನ್ನ ಬಾಲ್ಯದ ಆಚಾರ್ಯ ಮಿತ್ರನು ತಿಳಿಸುವಂತೆ, ಪಂಚೆಗೆ ಆ ಹೆಸರು ಬರಲು ಕಾರಣ ಅದನ್ನು ಉಡುವಾಗ ಹಾಕುವ ಐದು ಗಂಟುಗಳಂತೆ. ನಾವು ಈ ಧೋತರವನ್ನು ಕಚ್ಚಿ ಹಾಕಿ ಪಂಚೆಯಂತೆ ಉಡುವಾಗ ನಮ್ಮ ಟೊಂಕಕ್ಕೆ ಸಮನಾಗಿ ಎಡಕ್ಕೆ ಮತ್ತು ಬಲಗಡೆ ಒಂದೊಂದು ಬಿಗತಾ ಬಿಗಿದು ಮತ್ತು ಮುಂದೆ ಹಾಗೂ ಹಿಂದೆ ಒಂದರಂತೆ ನೀರಿಗೆ ಮಾಡಿ ಬಿಗಿದುಕೊಳ್ಳುತ್ತೇವೆ. ಅಲ್ಲದೇ ಮುಂದಿನ ನೀರಿಗೆಯ ಕೆಳಗಿನ ತುದಿ ಭಾಗವನ್ನು ಓಡಾಡಲು ಅನುಕೂಲವಾಗಲೆಂದು ಎತ್ತಿ ಬಲಗಡೆ ಟೊಂಕಕ್ಕೆ ನೀಟಾಗಿ ಐದನೇ ಗಂಟಾಗಿ ಬಿಗಿದುಕೊಳ್ಳುತ್ತೇವೆ. ಆ ಕಾರಣದಿಂದಲೇ ಅದಕ್ಕೆ ಪಂಚೆ ಎಂದು ಹೆಸರು ಬಂದಿದೆಯಂತೆ. ಈ ರೀತಿ ಕಚ್ಚಿಹಾಕಿ ಧೋತರವನ್ನು ಉಡುವುದು, ಅದೂ ಒಳ್ಳೆಯ ಉಚ್ಚಕೋಟಿಯ ರೇಷ್ಮೆಯ ಪಂಚೆಯೇ ಆಗಿರುವುದು ಯಜ್ಞ ಯಾಗಾದಿಗಳಲ್ಲಿ ಅಥವಾ ಪೂಜೆ ಪುನಸ್ಕಾರಗಳಲ್ಲಿ ಅಪೇಕ್ಷಿತ ಮತ್ತು ಅನಿವಾರ್ಯ.ಇದಕ್ಕೆ ವೈಜ್ಞಾನಿಕ ಕಾರಣ, ಉಚ್ಚಕೋಟಿಯ ರೇಷ್ಮೆಯಿಂದ ನೇಯ್ದ ಬಟ್ಟೆಯಿಂದ ತಯಾರಿಸಿದ ಪಂಚೆ ಯಜ್ಞ ಯಾಗಾದಿಗಳಲ್ಲಿ ಅಥವಾ ಪೂಜೆ ಪುನಸ್ಕಾರಗಳಲ್ಲಿ ಇರುವ ಯಜ್ಞಕುಂಡ ಅಥವಾ ದೀಪ ಧೂಪದ ಅಗ್ನಿಗೆ ಅಕಸ್ಮಾತಾಗಿ ತಾಗಿ ಸಂಪರ್ಕಹೊಂದಿದಾಗ ಅದು ಬೇಗನೆ ಸುಡುವುದಿಲ್ಲವಂತೆ. ಇದರಿಂದ ಕರ್ಮ ಮಾಡುವ ಯಜಮಾನ ಸುರಕ್ಷಿತವಾಗಿ ಕಾರ್ಯ ಮಾಡಬಹುದು ಎಂಬುದು. ಇನ್ನು ದಿನನಿತ್ಯದ ಮಡಿಯ ಪೂಜೆ ಪುನಸ್ಕಾರಗಳಲ್ಲಿ ಚಿಕ್ಕ ಬಿಳಿ ಉಣ್ಣೆಯ ಧಾಬಳಿ ಬಳಸುವುದೂ ಇದೇ ಅನುಕೂಲಕ್ಕಾಗಿ ಅಂತೆ. ಹಿಂದಿನ ಕಾಲದ ರಾಜರು, ಸೈನಿಕರು ತಮ್ಮ ಅನುಕೂಲತೆಗೆ ತಕ್ಕಂತೆ ರೇಷ್ಮೆಯ ಇಲ್ಲವೆ ಹತ್ತಿ ಬಟ್ಟೆಯ ಪಂಚೆಯನ್ನು ವೀರಗಚ್ಚಿ ಹಾಕಿ ಉಟ್ಟು ಅನಾಯಾಸವಾಗಿ ಆನೆ,ಕುದುರೆ ಸವಾರಿ ಮಾಡಿ ಅಥವಾ ರಥವೇರಿ ಯುದ್ಧ ಮಾಡುತ್ತಿದ್ದರು ಮತ್ತು ಅದೇ ರೀತಿ ರೈತಾಪಿ ಜನರು ಹೊಲಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲದೇ, ಆ ಕಾಲದ ಸಭ್ಯ ಗ್ರಹಸ್ಥರು ಕಚ್ಚಿ ಹಾಕಿದ ಧೋತರ ಪಂಚೆ ಉಡುವುದು ಅನಿವಾರ್ಯ ಸಂಪ್ರದಾಯವಾಗಿತ್ತು. ಈಗ್ಗೆ ಎರಡು ಮೂರು ಶತಮಾನಗಳ ಹಿಂದೆ ೧೫-೧೮ ಮಳ ಉದ್ದದ ಅಳತೆಯ ಪಂಚೆಗಳು ಬಳಕೆಯಲ್ಲಿದ್ದರೆ ಇಂದಿನ ದಿನಗಳಲ್ಲಿ ಅವು ಸಾಧಾರಣ ೯ ಮಳಕ್ಕೆ ಇಳಿದಿವೆ. ಇದು ಭಾರತೀಯ ಪುರುಷನ ಸಾಮಾನ್ಯ ಮೈಕಟ್ಟಿನ ಅಳತೆ ಮತ್ತೂ ಅವನು ಮಾಡುವ ಕೆಲಸ/ಉದ್ಯೋಗಗಳಲ್ಲಿನ ವ್ಯತ್ಯಾಸ ಅಥವಾ ಮಾರ್ಪಾಡನ್ನೂ ಸೂಚಿಸುತ್ತದೆ. ಇತ್ತೀಚಿನ ವಿಭಕ್ತ ಕುಟುಂಬದ ' ಝೆನ್ ಝೀ ' ಯುವಕರು ಕಚ್ಚೆ ಹಾಕಿ ಪಂಚೆಯನ್ನು ಮನೆಯ ಹಿರಿಯರು ಉಡುವುದನ್ನು ನೋಡಿ ಕಲಿತಿಲ್ಲ. ಅಷ್ಟೇ ಅಲ್ಲ, ಮನೆಯ ಹಿರಿಯರನ್ನು ಕೇಳಿ ಕಲಿಯುವುದು ಅಪಮಾನಕರ ಎಂದು ತಿಳಿದು ಎಲ್ಲದಕ್ಕೂ ಗೂಗಲ್ ಬಾಬಾನನ್ನೆ ಅವಲಂಬಿಸಿ 'ಯು ಟ್ಯೂಬ್' ನಲ್ಲಿ ನೋಡಿ ತಮ್ಮಷ್ಟಕ್ಕೆ ತಾವೇ ಕಚ್ಚೆ ಹಾಕಿ ಪಂಚೆ ಉಡಲು ಹೋಗಿ ಯಡವಟ್ಟು ಮಾಡಿಕೊಂಡ ಪ್ರಸಂಗಗಳು ಅನೇಕ. ಇದನ್ನರಿತ ಚತುರ ಫ್ಯಾಷನ್ ಡಿಸೈನರ್ ಗಳು, ಕಚ್ಚೆಹಾಕಿದ ಪಂಚೆಯ ರೀತಿಯಲ್ಲಿ ಮುಂದೆ ಮತ್ತು ಹಿಂದೆ ನೀರಿಗೆ ಇರುವಂತೆ ಹೊಲಿದು ಧೋತರ ಪಂಚೆಯಂತೆ ಕಾಣುವ ಮತ್ತು ಎರಡೆರಡು ಜೇಬುಗಳಿರುವ ಪ್ಯಾಂಟ್ ತರಹ ತೊಡುವ ರೆಡಿಮೇಡ ಪಂಚೆಗಳನ್ನು ಮಾರುಕಟ್ಟೆಯಲ್ಲಿ ತಂದಿರುವುದು. ಆದರೆ, ಈ ತರಹ ಬಟ್ಟೆಯನ್ನು ಕತ್ತರಿಸಿ ಹೊಲಿದ ಧೋತರ, ಕಚ್ಚೆಪಂಚೆಗಳು ಸಾಂಪ್ರದಾಯಿಕ ಧಾರ್ಮಿಕ ಕಾರ್ಯಗಳಿಗೆ ಮಾನ್ಯವಲ್ಲವೆಂದು ಪುರೋಹಿತರು ಪಿಸುಮಾತುಗಳಲ್ಲಿ ಹೇಳುವುದನ್ನು ತಾವೂ ಕೇಳಿರಬಹುದು. ಆದರೆ ಏನು ಮಾಡುವುದು, ಈ ೨೧ ನೇ ಶತಮಾನದಲ್ಲಿ ಎಲ್ಲವೂ ಅನುಕೂಲ ಸಿಂಧುವಿನಂತೆ ನಡೆದಿದೆ.ಇರಲಿ, ಕನಿಷ್ಟಪಕ್ಷ ಇಂದಿನ ಯುವ ಪೀಳಿಗೆ ಇಷ್ಟಾದರೂ ಶಿಷ್ಟಾಚಾರ ಪಾಲಿಸುತ್ತಿದ್ದಾರಲ್ಲಾ ಅದೇ ಒಂದು ಸಮಾಧಾನಕರ ಸಂಗತಿ.
ಇತ್ತೀಚಿನ ಶತಮಾನದಲ್ಲಿ ೯ ಅಥವಾ ೫ ಮಳದ ಪಂಚೆಯನ್ನು ಸುಲಭವಾಗಿ ಸೊಂಟದ ಸುತ್ತ ಎಡ ಮತ್ತು ಬಲ ಭಾಗಕ್ಕೆ ಕೇವಲ ಎರಡು ಗಂಟುಗಳನ್ನು ಹಾಕಿ ಲಪಾಟಿಯಂತೆ ಸುತ್ತಿಕೊಳ್ಳುವುದಕ್ಕೆ 'ಲುಂಗಿ' ಎಂದು ಸಂಬೋಧಿಸಲಾಗುತ್ತಿದೆ. ಈ ಲುಂಗಿಗಳು ಜರತಾರೀ ರೇಷ್ಮೆಯ ಅಥವಾ ಹತ್ತಿ ಬಟ್ಟೆಯದಾಗಿರುವುದು ಸಾಮಾನ್ಯ. ಇತ್ತಿಚಿಗೆ ಪಾಲಿಯೆಸ್ಟರ್ ನೂಲಿನ ಲುಂಗಿಗಳು ಮಾರುಕಟ್ಟೆಯಲ್ಲಿ ಲಭ್ಯವಾಗಿವೆ. ಸಾಮಾನ್ಯವಾಗಿ ಅಂಚುಗಳಿರುವ ಶುಭ್ರ ಬಿಳಿಯ ಲುಂಗಿಗಳನ್ನು ದಕ್ಷಿಣ ಭಾರತದ ಪ್ರತಿಷ್ಠಿತರು, ರಾಜಕಾರಣಿಗಳು ಮತ್ತೂ ನಗರವಾಸಿ ಯಜಮಾನರುಗಳು ಸಾರ್ವಜನಿಕ ಸ್ಥಳಗಳಲ್ಲಿ ಉಟ್ಟು ತಿರುಗಾಡುವುದುಂಟು. ನಮ್ಮ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಚಕ್ಸ ಡಿಜೈನ್ ನ ಕಾಟನ್ ಲುಂಗಿಗಳನ್ನು ಮನೆಯಲ್ಲಿ ಉಡಲು ಯುವಕರು ಮತ್ತು ಯಜಮಾನರು ಇಷ್ಟಪಡುತ್ತಾರೆ. ಆದರೆ ಬಣ್ಣ ಬಣ್ಣದ ಡಿಸೈನರ್ ಲುಂಗಿಗಳು ಕೊಂಕಣ ಗೋವಾದಂತಹ ಸಮುದ್ರ ತೀರಪ್ರದೇಶದ ಮತ್ತು ನಮ್ಮ ಕರ್ನಾಟಕದ ಘಟ್ಟದ ಕೆಳಗಿನ ಕರಾವಳಿ ಪ್ರದೇಶದ ಮತ್ತೂ ಕೇರಳ ಹಾಗು ತಮಿಳುನಾಡಿನ ಶ್ರಮ ಜೀವಿಗಳು ಉಡುವುದು ಅಥವಾ ಇಷ್ಟ ಪಡುವುದುಂಟು. ಅಲ್ಲಿಯ ಜನ ಸಾಮಾನ್ಯವಾಗಿ ಆ ಲುಂಗಿಯನ್ನು ಪಾದದಿಂದ ಮೊಣಕಾಲಿನ ತನಕದ ಕೆಳಭಾಗವನ್ನು ಮಡಚಿ ಏರಿಸಿ ಟೊಂಕಕ್ಕೆ ಕಟ್ಟಿಕೊಳ್ಳುವುದನ್ನು ನೋಡಬಹುದು. ಈ ರೀತಿ ಲುಂಗಿಯನ್ನು ಏರಿಸಿ ಕಟ್ಟಿಕೊಳ್ಳುವುದು ತೇವಾಂಶ ಅಧಿಕವಾಗಿರುವ ಮತ್ತು ವಿಪರೀತ ಬೆವರು ಬರುವ ಸಮುದ್ರ ತೀರದ ಹವಾಮಾನದ ಅನಿವಾರ್ಯತೆಯೂ ಕೂಡ. ಅದಕ್ಕೇ ಅನ್ನುವುದು ' ಜೈಸಾ ದೇಸ್ ವೈಸಾ ಭೇಸ್ ' ಎಂದು. ಹಾಗೆ ನೋಡಿದರೆ ಲುಂಗಿ ದಕ್ಷಿಣ ಭಾರತದ ಉಡುಪು. ಆದರೆ, ಭಾರತದ ಇತರ ಭಾಗದ ಜನರಿಗೆ ಅದು ಪರಿಚಿತವಾದದ್ದು ಲುಂಗಿ ಡ್ಯಾನ್ಸ್ ಲುಂಗಿ ಡ್ಯಾನ್ಸ್ ಎಂಬ ಒಂದು ಹಿಂದಿ ಹಾಡಿನಿಂದಾಗಿ ಎಂದು ಕೇಳಿದ್ದೇನೆ.
೨೦೧೯ ರಲ್ಲಿ ಚೀನಾ ದೇಶದ ಅಧ್ಯಕ್ಷರು ತಮಿಳುನಾಡಿನ ಮಹಾಬಲಿಪುರಂ ಊರಿಗೆ ಭೇಟಿ ನೀಡಿದಾಗ, ನಮ್ಮ ಪ್ರಧಾನಿಯವರು ದಕ್ಷಿಣ ಭಾರತದ ಉಡುಪಾದ ಲುಂಗಿಯನ್ನು ಉಟ್ಟು ಅವರನ್ನು ಸ್ವಾಗತಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಅದು ಬಿಟ್ಟರೆ ಈಗ ಆ ಬಾಂಗ್ಲಾದೇಶದ ಮಾಜಿ ಅಧ್ಯಕ್ಷರೊಬ್ಬರು ಉಟ್ಟ ಲುಂಗಿಯಲ್ಲಿ ರಾತೋರಾತ್ರಿ ಪಲಾಯನ ಮಾಡಿದ್ದು ಸುದ್ದಿಯಾಗಿದೆ.
-ಡಾ.ಜಯಂತ ಕಿತ್ತೂರ
ಜಯಂತ, ಬರಹ ಸೊಗಸಾಗಿ ಬಂದಿದೆ
ಪ್ರತ್ಯುತ್ತರಅಳಿಸಿ👌
ಪ್ರತ್ಯುತ್ತರಅಳಿಸಿಹೆಚ್ಚಾಗಿ ದಕ್ಷಿಣ ಭಾರತದಲ್ಲಿ ಗಂಡಸರು ಸಹಜತೆ ಇಂದ ಧರಿಸುವ ಉಡುಪು..ನೀವು ಹೇಳಿದ ಹಾಗೆ.. ಅಲ್ಲಿಯ ಹವಾಮಾನದ ಪ್ರಕಾರ ದಿನ ನಿತ್ಯದ ಜೀವನದಲ್ಲಿ ಸರಳತೆ.. ಸಹಜ ರೀತಿಯಲ್ಲಿ ಉಪಲಬ್ಧ ವಾಗುವ ಉಡುಪು..
ಪ್ರತ್ಯುತ್ತರಅಳಿಸಿಬಾಂಗ್ಲಾದೇಶದ ಈ ಉಡುಪಿನಲ್ಲಿ ಪಲಾಯನ ಮಾಡಿದ ಸುದ್ದಿ.. ನಾನು ಮೊದಲು ಸಲ ಓದಿದೆ...ನೀವು ಹೇಳದ ಹಾಗೆ..ಅದಕ್ಕೆ ಹಲವಾರು ಕಾರಣ ಗಳಿರುಬಹುದು.
ವಿವಿಧ ರೀತಿಯ.. ಎಷ್ಟು ತರಹದ ಲುಂಗಿ ಉಡುವ ಪ್ರಕಾರ ಗಳನು ಬರಿದಿದ್ದು ಓದಿ ಕುತೂಹಲ.. ಮಜಾ ಬಂತು.
ಒಂದೊಂದು.. ಸಾಮಾನ್ಯ ವಿಷಯಗಳನ್ನು ತೊಗೊಂಡು..ಓದಲಿಕ್ಕೆ ಕುತೂಹಲ ಹುಟ್ಟುವಂತೆ ಮಾಡುತ್ತೀರಿ.. you have flair for the language..and blessed with linguistic abilities..
ತುಂಬಾ ಚೆನ್ನಾಗಿ ಭಾಷೆಯ ಮೇಲೆ ಪ್ರಭುತ್ವ ಇದೆ..👏🏻👌👍🙏😊
👌👍
ಪ್ರತ್ಯುತ್ತರಅಳಿಸಿಸುಂದರವಾದ ವಿಶ್ಲೇಷಣೆ
ಪ್ರತ್ಯುತ್ತರಅಳಿಸಿJayant, ಒಂದು ಲುಂಗಿಯ ವಿಷಯವನ್ನು ಎಷ್ಟೊಂದು ಅದ್ಭುತವಾಗಿ ಬರೆದಿದ್ದೀಯ, ಬರವಣಿಗೆಯ ಮೇಲೆ ನಿನ್ನ ಹಿಡಿತ ಚೆನ್ನಾಗಿದೆ. ಓದಿ ಖುಷಿಯಾಯಿತು. ಹೀಗೆ ನಿನ್ನ ಲೇಖನಗಳು ಬರುತ್ತಿರಲಿ.
ಪ್ರತ್ಯುತ್ತರಅಳಿಸಿಲುಂಗಿಯಬಗ್ಗೆ ಒಳ್ಳೆಯ ವಿಶ್ಲೇಷಣೆ sir
ಪ್ರತ್ಯುತ್ತರಅಳಿಸಿಲುಂಗಿಯ ಬಗ್ಗೆ ಗೂಡ್ ಬರಹ sir
ಪ್ರತ್ಯುತ್ತರಅಳಿಸಿಲುಂಗಿಯ ಬಗ್ಗೆ ಮಾಹಿತಿ ಬಹಳ ಕುತೂಹಲ ಮೂಡಿಸಿದೆ.ಧನ್ಯವಾದಗಳು 🙂🙏💐
ಪ್ರತ್ಯುತ್ತರಅಳಿಸಿಜಯಂತ ಅವರೆ, ಯಾವುದು ಸುದ್ದಿ ಆಗುವುದಿಲ್ಲ, ಯಾವುದು ಸುದ್ದಿಯಾಗುವದಷ್ಟೇ ಅಲ್ಲ, ವೈರಲ್ ಆಗಿ ಕಾಳ್ಗಿಚ್ಚಿನಂತೆ ಏಕೆ ಹರಡಿತ್ತದೆ ಎಂಬುದನ್ನು ' ಬಾಂಗ್ಲಾದೇಶದ ಮಾಜಿ ಅಧ್ಯಕ್ಷರು' ರಾತ್ರೋರಾತ್ರಿ ದೇಶದಿಂದ ಪರಾರಿಯಾದ ವಾರ್ತೆಯ ಜಾಡನ್ನು ಹಿಡಿದು , ಬಹಳ ಮನಮುಟ್ಟುವಂತೆ, ನಿಮ್ಮ ವೈಶಿಷ್ಟ್ಯತೆಯಾದ ತಿಳಿಹಾಸ್ಯದ ಮೂಲಕ ಪ್ರಸ್ತುತ ಪಡೆಸಿದ್ದೀರಿ. ಇನ್ನು ಧೋತರಕ್ಕೆ ' ಪಂಚೆ' ಎಂಬ ಹೆಸರು ಅದಕ್ಕೆ ಹಾಕುವ ಐದು ಗಂಟುಗಳಿಂದ ಬಂದದ್ದು ಎಂಬ ಮೂಲ ಬಹಳ ಇಂಟರೆಸ್ಟಿಂಗ್.
ಪ್ರತ್ಯುತ್ತರಅಳಿಸಿಇನ್ನು ' ಜೈಸಾ ದೇಸ್ ವೈಸಾ ಭೇಸ್' ಎಂಬ ನಿಮ್ಮ ಮಾತು ಅಕ್ಷರಶಃ ನಿಜ. ಅದನ್ನು ಪುಷ್ಟೀಕರಿಸಲು , ಲುಂಗಿಯ ಅನೇಕ ಅವತರಣಿಕೆಗಳ ಬಗ್ಗೆ ಹೇಳಿರುವದು ಅಂಕಣಕ್ಕೆ ಹೊಂದುತ್ತದೆ.
ನಿಮ್ಮ ಸ್ವಾರಸ್ಯಕರವಾದ ಅಂಕಣವನ್ನು ಆಸ್ವಾದಿಸಲು ಅವಕಾಶ ನೀಡಿದಿರಿ.
ಧನ್ಯವಾದಗಳು🙏💐
ಸೊಗಸಾದ ವಿಶ್ಲೇಷಣೆ ! ಅದು ಲುಂಗಿಯದ್ದು !! As usual interesting ... ಪಂಚೆಯ ಹೆಸರಿನ ಹಿಂದಿನ ಕಥೆ ಸ್ವಾರಸ್ಯಕರ . ಬರಹಗಳು ಮುಂಡುವರಿತ ಇರಲಿ ....
ಪ್ರತ್ಯುತ್ತರಅಳಿಸಿ