೧೦೧ ನೇ ಮಿಷನ್

ಮೊನ್ನೆ ಮೇ ೧೮ ರ ಬೆಳಗ್ಗೆ, ಉಡಾವಣೆಯಾದ ಕೆಲವೇ ನಿಮಿಷಗಳಲ್ಲಿ PSLV ರಾಕೆಟ್ ಅಸಮರ್ಪಕ ಕಾರ್ಯಕ್ಕೆ ಒಳಗಾದ ಕಾರಣ ಇಸ್ರೋದ ೧೦೧ ನೇ ಮಿಷನ್ ವಿಫಲವಾಗಿದೆ ಎಂಬ ಕಹಿ ಸುದ್ದಿಯನ್ನು ತಾವೂ ವಿವಿಧ ಸುದ್ದಿ ಮಾಧ್ಯಮಗಳಲ್ಲಿ ಓದಿ/ಕೇಳಿರಬಹುದು. ಈ ಘಟನೆ 'ನಡೆಯುವವರು ಎಡುವದೇ ಕುಳಿತವರು ಎಡುವರೇ' ಎಂಬ ಗಾದೆಯನ್ನು ನೆನಪಿಸುವುದು.

ಯಮುನೆಯ ಮಡುವಿನಲ್ಲಿ ವಿಷವನ್ನು ಕಾರಿ ಅಮಾಯಕ ಗೋವುಗಳು ಮತ್ತು ಗೋಪಾಲಕರಿಗೆ ತೊಂದರೆ ಕೊಡುತ್ತಿದ್ದ ಕಾಳಿಂಗ ಸರ್ಪದ ಹೆಡೆಯ ಮೇಲೆ ಬಾಲಕೃಷ್ಣ ಹಾರಿ ನೃತ್ಯಮಾಡಿ ದಮನ ಮಾಡಿದ್ದ ಎಂಬ ವಿಚಾರ ಶ್ರೀಮದ್ಭಾಗವತದ ದಶಮಸ್ಕಂದದಲ್ಲಿ ಬರುತ್ತದೆ. ಅದೇ ರೀತಿ, ಅಮಾಯಕ ಯಾತ್ರಿಕರಿಗೆ ಗುಂಡಿಟ್ಟು ಕೊಂದ ಆ ಶತ್ರುದೇಶದ ಭಯೋತ್ಪಾದಕರ ಠಿಕಾಣಿಗಳ ಮೇಲೆ ನಮ್ಮ ಭಾರತೀಯ ರಕ್ಷಣಾ ಪಡೆ ಬ್ರಹ್ಮೋಸ ಮತ್ತು ಆಕಾಶತೀರ ದಂತಹ ದೇಶೀಯ ಕ್ಷಿಪಣಿಗಳಿಂದ ದಾಳಿಮಾಡಿ ಧ್ವಂಸಮಾಡಿದ ಸುದ್ದಿ ತಮಗೂ ಗೊತ್ತಿರುವ ವಿಷಯ. ಇದೇ ಮೇ ತಿಂಗಳ ಮೊದಲ ವಾರ ಪ್ರಾರಂಭವಾದ ರಕ್ಷಣಾ ಪಡೆಗಳ ಈ ಆಪರೇಷನ್ ಸಿಂದೂರದ ಅಭೂತಪೂರ್ವ ಕಾರ್ಯಕ್ಷಮತೆಯ ಹಿಂದೆ ಮಹತ್ವದ ಹಿಮ್ಮೇಳ ಹಾಕಿದ್ದು ನಮ್ಮ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಇಸ್ರೋ ಎಂಬುದು ಶ್ಲಾಘನೀಯ.

ಇಸ್ರೋ ಸಂಸ್ಥೆಯ ವಿಜ್ಞಾನಿಗಳು ಹಾಗು ತಂತ್ರಜ್ಞನರು ಸ್ಥಳೀಯವಾಗಿ ಅಭಿವೃದ್ಧಿ ಪಡಿಸಿದ ರಾಕೆಟಗಳ ಮತ್ತು ಅವು ಹೊತ್ತು ಒಯ್ದು ಕರಾರುವಕ್ಕಾದ ಕಕ್ಷೆಯಲ್ಲಿ ಸ್ಥಾಪಿಸಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿರವ 'ನಾವಿಕ್' ಎಂಬ GPS ಮಾದರಿಯ ಉಪಗ್ರಹಗಳು ಮತ್ತು ಇತರ ವಿವಿಧ ದೂರ ಸಂವೇದಿ (remote sensing) ಉಪಗ್ರಹಗಳ ಸಮೂಹದ ಸಹಾಯ/ ಸಹಕಾರ ಆಪರೇಷನ್ ಸಿಂದೂರದ ಎಲೆಯ ಮರೆಯ ಕಾಯಿಯಂತಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.

ಆರು ದಶಕಗಳ ಹಿಂದೆ, ೧೯೬೨ ರಲ್ಲಿ ಉಡಾಯಿಸಿದ ಮೊದಲ ರಾಕೆಟನಿಂದ ನಮ್ಮ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಇಸ್ರೋ ಬಹುದೂರ ಸಾಗಿಬಂದಿದೆ. ಇಂದು ಇಸ್ರೋ ಮಂಗಳನ ಅಂಗಳಕ್ಕೆ ಮೊದಲ ಪ್ರಯತ್ನದಲ್ಲೇ ಲಗ್ಗೆ ಇಟ್ಟಿದೆ, ಚಂದ್ರನ ದಕ್ಷಿಣ ಧೃವವನ್ನು ಚುಂಬಿಸಿದೆ, ಸೂರ್ಯನ ಸಮೀಪ ಹೋಗಿ ವೀಕ್ಷಿಸಿದೆ. ಭಾರತದ ಒಂದು ನೂರಕ್ಕೂ ಹೆಚ್ಚು ಉಪಗ್ರಹಗಳು ಮಾತ್ರವಲ್ಲದೇ ೩೦ಕ್ಕೂ ಹೆಚ್ಚು ದೇಶಗಳ (ಅನೇಕ ಮುಂದುವರಿದ ದೇಶಗಳೂ ಸೇರಿ) ವಿವಿಧ ತರಹದ ೩೦೦ಕ್ಕೂ ಹೆಚ್ಚು ಉಪಗ್ರಹವನ್ನು ಅತೀ ಕಡಿಮೆ ಖರ್ಚಿನಲ್ಲಿ ನಿಗದಿತ ಕಕ್ಷೆಯಲ್ಲಿ ಯಶಸ್ವಿಯಾಗಿ ಸ್ಥಾಪಿಸಿದೆ. ಇಸ್ರೋದ ಸತತ ಪ್ರಯತ್ನದ ಫಲವಾಗಿ ಅಂತರೀಕ್ಷ ಅಧ್ಯಯನ ಮತ್ತು ಶಾಂತಿಯುತ ಸದ್ಬಳಕೆಯಲ್ಲಿ ಮೇಲುಗೈ ಸಾಧಿಸಿದ ಕೆಲವೇ ಮುಂಚೂಣಿ ದೇಶಗಳಲ್ಲಿ ಭಾರತವೂ ಒಂದಾಗಿದೆ. ಅಷ್ಟೇ ಅಲ್ಲದೇ, ಇಸ್ರೋ ಬಹುನಿರೀಕ್ಷಿತ ಭಾರತೀಯ ಗಗನಯಾತ್ರಿಗಳನ್ನು ಅಂತರೀಕ್ಷಕ್ಕೆ ಕೊಂಡೊಯ್ಯುವ ಗಗನಯಾನದ ತಯಾರಿಯಲ್ಲಿದೆ. 

ಬಾಹ್ಯಾಕಾಶಕ್ಕೆ ಸಂಬಂಧಿಸಿದ ಈ ಎಲ್ಲ ಸಾಧನೆಗಳು ಇಸ್ರೋ ದೇಶೀಯವಾಗಿ ಅಭಿವೃದ್ಧಿಪಡಿಸಿದ SLV, PSLV, GSLV, LVM3 (GSLV Mk-III), and SSLV ಮುಂತಾದ ಅನೇಕ ತರಹದ ರಾಕೆಟಗಳ ಸಮರ್ಪಕ ಬಳಕೆಯಿಂದ ಸಾಧ್ಯವಾಗಿದೆ. 

ನಮಗೆಲ್ಲ ತಿಳಿದ ಹಾಗೆ, ಈ ಉಪಗ್ರಹ ಉಡಾವಣೆಯ ರಾಕೆಟಗಳು ಕೆಲಸ ಮಾಡುವುದು " ಪ್ರತಿಯೊಂದು ಕ್ರಿಯೆ ಅದಕ್ಕೆ ಸಮನಾದ ಮತ್ತು ವಿರುದ್ಧ ಪ್ರತಿಕ್ರಿಯೆ ಉಂಟುಮಾಡುತ್ತದೆ " (Action and reaction are equal and opposite) ಎಂಬ ನ್ಯೂಟನ್ ನ ಚಲನೆಯ ಮೂರನೇಯ ಸರಳ ನಿಯಮದ ಆಧಾರದ ಮೇಲೆ. ಆದರೆ, ರಾಕೆಟನ ವಿನ್ಯಾಸ ಮತ್ತು ಅಭಿವೃದ್ಧಿ, ಈ ನಿಯಮ ಹೇಳಿದಷ್ಟು ಸುಲಭವಲ್ಲ. ಹೌದು, ರಾಕೆಟ್ ತಯಾರಿಕೆ ಸಾಮಾನ್ಯವಲ್ಲ, ಅದು ಬಹಳ ಕ್ಲಿಷ್ಟಕರವಾದ ತಂತ್ರಜ್ಞಾನ ಮತ್ತು ಅದಕ್ಕೆ ಅಷ್ಟೇ ಉತ್ಕ್ರಷ್ಟ ಕಾರ್ಯಕೌಶಲ್ಯ ಹಾಗು  ಕಾರ್ಯಕ್ಷಮತೆಯ ಅಗತ್ಯತೆ ಇದೆ. ಅದಕ್ಕೇ ಅಲ್ಲವೇ ಅನೇಕ ಸಲ,ಕೆಲವು ಕೆಲಸಗಳು ಪೂರ್ಣಗೊಳ್ಳದ ಸಂದರ್ಭದಲ್ಲಿ ಮೇಲಾಧಿಕಾರಿಗಳು "ಇದು ಬಹಳ ಸುಲಭದ ಕೆಲಸ, ಯಾಕೆ ಆಗಲಿಲ್ಲ, ಇದೇನು ದೊಡ್ಡ ರಾಕೆಟ್ ಸಾಯನ್ಸಾ" ಎಂದು ಹೇಳುವುದು!!! 

ಸಾಮಾನ್ಯವಾಗಿ, ವಿವಿಧ  ಬಗೆಯ ಉಪಗ್ರಹಗಳ ಉಡಾವಣೆಗೆ ಬಳಸುವ ರಾಕೆಟಗಳು ಮೂರು ಹಂತಗಳನ್ನು ಹೊಂದಿರುತ್ತವೆ. ಪ್ರತಿಯೊಂದು ಹಂತದಲ್ಲೂ ವಿವಿಧ ಬಗೆಯ ಇಂಧನವನ್ನು ದಹಿಸಿ ರಾಕೆಟ್ ಒಳಗಿನ ಗಾಳಿಯ ಒತ್ತಡವನ್ನು ವೃದ್ಧಿಸಿ ಅದನ್ನು ವಿಶೇಷವಾಗಿ ವಿನ್ಯಾಸಗೊಳಿಸಿದ ನಳಿಕೆಯ (nozzle) ಮುಖಾಂತರ ಕೆಳಕ್ಕೆ ತಳ್ಳಿದಾಗ ರಾಕೆಟ್ಟು ಮೇಲೆ ಚಿಮ್ಮುತ್ತದೆ. 

ರಾಕೆಟನ ಕೆಳಭಾಗದ ಮೊದಲ ಹಂತ, ತಾನು ನಿಂತ ಜಡತ್ವ ಸ್ಥಿತಿಯಿಂದ ಮೈ ಝಾಡಿಸಿಕೊಂಡು ಭೂಮಿಯ ಗುರುತ್ವ ಶಕ್ತಿಯ ವಿರುದ್ಧ ಹೋರಾಡಿ ಮೇಲೇಳುವ ಮಹತ್ವದ ಕಾರ್ಯವನ್ನು ಪುರೈಸುತ್ತದೆ. ಈ ಹಂತದಲ್ಲಿ ಇಂಧನದ ಅಗತ್ಯತೆ ಜಾಸ್ತಿ. ಆ ಕಾರಣಕ್ಕಾಗಿ ಘನ ಇಂಧನವನ್ನು ಬಳಸಲಾಗುತ್ತದೆ ಮತ್ತು ರಾಕೆಟನ ವಿನ್ಯಾಸ ಅದಕ್ಕೆ ಅನುಗುಣವಾಗಿ ರೂಪಿಸುತ್ತಾರೆ. ಈ ಹಂತವನ್ನು 'ಲಿಫ್ಟ್ ಆಫ್' ಹಂತ ಎನ್ನುವುದು. ಇಲ್ಲೇ ಆಯ ತಪ್ಪಿದರೆ, ಆ ರಾಕೆಟನ ಉಡಾವಣೆಯ ಮಿಷನ್ ವಿಫಲವಾಯಿತು ಎಂದೇ ಅರ್ಥ. ಆದುದರಿಂದ, ಇದು ಬಹಳ ಮಹತ್ವದ ಹಂತ. 

ಒಮ್ಮೆ ಉಪಗ್ರಹವನ್ನು ಹೊತ್ತ ರಾಕೆಟ್ಟು ಯಶಸ್ವಿಯಾಗಿ ಭೂಮಿಯಿಂದ ಸುಮಾರು ದೂರ ನಿಗದಿತ ದಿಕ್ಕಿನಲ್ಲಿ ಚಿಮ್ಮಿದ ಮೇಲೆ, ಅದು ಆದಷ್ಟು ಬೇಗ ಭಾರೀ ಗತಿ(ವೇಗ)ಯನ್ನು ಕೆಲವೇ ನಿಮಿಷಗಳಲ್ಲಿ ಸಾಧಿಸಿ, ನೂರಾರು ಕಿಲೋ ಮೀಟರಗಳ ಎತ್ತರವನ್ನು ಕ್ರಮಿಸಿ, ತಾನು ಹೊತ್ತು ತಂದ ಉಪಗ್ರಹವನ್ನು ಅದರ ನಿರ್ದಿಷ್ಟ ಕಕ್ಷೆಯ ಸಮೀಪ ಮುಟ್ಟಿಸುವುದು. ಈ ಕೆಲಸವನ್ನು ಪೂರೈಸಲು ರಾಕೆಟನ ಮಧ್ಯದ ಎರಡನೇಯ ಹಂತದಲ್ಲಿ ದ್ರವರೂಪದ ಇಂಧನವನ್ನು ಬಳಸಲಾಗುತ್ತದೆ. ಅದಕ್ಕೆ ಅನುಗುಣವಾದ ರಾಕೆಟನ ಈ ಭಾಗದ ವಿನ್ಯಾಸ ವಿಭಿನ್ನವಾಗಿರುತ್ತದೆ.

ಇನ್ನು, ಮೂರನೇಯ ಮತ್ತು ಕೊನೆಯ ಹಂತ ಬಹಳ ಮಹತ್ವದ್ದು. ತಾನು ಇಷ್ಟು ದೂರ ಕ್ರಮಿಸಿ ತಂದ ಆ ಪುಟ್ಟ ಮತ್ತು ಮಹತ್ವದ ಉಪಗ್ರಹವನ್ನು ಅದರ ಉದ್ದೇಶಿತ‌ ಕಕ್ಷೆಯಲ್ಲಿ ಕರಾರುವಕ್ಕಾಗಿ ಸ್ಥಾಪಿಸಿ ಭೂಮಿಯ ನಿಯಂತ್ರಣ ಕೇಂದ್ರದೊಂದಿಗೆ ಸಂಪರ್ಕ ಸಾಧಿಸಲು ಮತ್ತು ತನ್ನ ಜೀವನಪರ್ಯಂತ ತನ್ನ ಕಾರ್ಯನಿರ್ವಹಣೆಗೆ ಬೇಕಾದ ವಿದ್ಯುತ್ ಸೌರಫಲಕಗಳು ಸೂರ್ಯನ ಅಭಿಮುಖವಾಗಿ ಬಿಚ್ಚಿಕೊಂಡು ವಿಸ್ತಾರಗೊಳ್ಳಲು ಅನುಕೂಲವಾಗುವಂತೆ ಮಾಡುವುದು. ಇದು ಅತ್ಯಂತ ಸೂಕ್ಷ್ಮ ಕೆಲಸ, ಸ್ವಲ್ಪವೇ ಯಡವಟ್ಟಾದರೂ ಆ ಉಪಗ್ರಹ ಅಷ್ಟು ಎತ್ತರ ಹೋಗಿ ಭೂಮಿಯ ಸುತ್ತ ಸುತ್ತುವುದೇ ಹೊರತು ಅದು ಭೂ ಕೇಂದ್ರದ ಸಂಪರ್ಕ ಸಾಧಿಸದೆ ತನ್ನ ಉದ್ದೇಶಿತ ಕಾರ್ಯಕ್ಷಮತೆಯಿಂದ ವಂಚಿತವಾಗಿ ಪೂರ್ಣ ರಾಕೆಟ್ ಮಿಷನ್ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ ಆಗುವ ಸಾಧ್ಯತೆ ಇರುತ್ತದೆ. ಆದುದರಿಂದ, ಈ ಹಂತದಲ್ಲಿ ರಾಕೆಟ್ಟು ಬಳಸುವುದು ಅತ್ಯಂತ ಕ್ಲಿಷ್ಟಕರ ವಿನ್ಯಾಸ ಮತ್ತು ಭಾರೀ ಅಡ್ವಾನ್ಸ್ ತಂತ್ರಜ್ಞಾನದ ಕ್ರಯೋಜೆನಿಕ್ ಎಂಜಿನ್. ಈ ಹಂತದಲ್ಲಿ ಬಹಳ ಕಡಿಮೆ ಪ್ರಮಾಣದ ದ್ರವರೂಪದ ಅನೀಲ ಇಂಧನವನ್ನು ಬಹಳ ಕರಾರುವಕ್ಕಾಗಿ ಮತ್ತೂ ಕಾಳಜೀಪೂರ್ವಕವಾಗಿ ದಹಿಸಲಾಗುತ್ತದೆ.

ಈ ರೀತಿ, ಒಂದು ರಾಕೆಟ್ ಉಡಾವಣೆಯ ಮಿಷನ್ ಯಶಸ್ವಿಯಾಗುವಲ್ಲಿ ಅದು ಪ್ರತಿ ಹಂತದಲ್ಲಿಯೂ ತನ್ನ ಕಾರ್ಯವನ್ನು ನೂರು ಪ್ರತಿಶತ ಯಶಸ್ವಿಯಾಗಿ ನಿರ್ವಹಿಸುವುದು ಅತ್ಯವಶ್ಯಕ. ಇದನ್ನು ಸಾಧಿಸಿ ಯಶಸ್ವಿಗೊಳಿಸಲು ನಮ್ಮ ಇಸ್ರೋದ ವಿಜ್ಞಾನಿಗಳು, ತಂತ್ರಜ್ಞರು, ಇಂಜಿನಿಯರಗಳು ಹಗಲು ರಾತ್ರಿ ಎನ್ನದೇ ಪಡುವ ಶ್ರಮ ಅಗಣಿತ.ಇದಕ್ಕೆ ಅನ್ನುವುದು 'ಕೈ ಕೆಸರಾದರೆ ಬಾಯಿ ಮೊಸರು' ಎಂದು.

ಇಂದು, PUC ಪೂರೈಸಿದ ನಮ್ಮ ವಿದ್ಯಾರ್ಥಿಗಳು ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಬರೆದು ತಮ್ಮ ಬಯಕೆಯ ಡಿಗ್ರಿ ಕೋರ್ಸುಗಳನ್ನು ಆಯ್ಕೆ ಮಾಡಿಕೊಂಡು ಮೂರ್ನಾಲ್ಕು ವರ್ಷದ ಪದವೀ ಶಿಕ್ಷಣ ಪ್ರಾರಂಭಿಸುವ ಹಂತದಲ್ಲಿರುವರು. ತಮ್ಮ ಈ ಹಂತದ ಶಿಕ್ಷಣ, ಮುಂದೆ ತಾವು ಸಾಧಿಸ ಬಯಸುವ ವೃತ್ತಿ, ಅದು ನೌಕರಿಯೋ, ಇಲ್ಲವೇ ಸ್ವಂತ ಉದ್ಯೋಗ-ವ್ಯಾಪಾರವೋ ಅಥವಾ ಸಂಸ್ಥೆ ಸ್ಥಾಪಿಸಿ ಉದ್ಯೋಗ ದಾತಾ ಆಗುವುದು ಯಾವುದೇ ಆಗಿರಲಿ, ಆ ಮಹತ್ವದ ವೃತ್ತಿಯ ಉದ್ದೇಶವನ್ನು ಪೂರೈಸುವ ಒಂದು ರಾಕೆಟ್ ಲಾಂಚಿಂಗ್ ಮಿಷನ್ ತರಹದ್ದು ಎಂಬುದನ್ನು ಮರೆಯಬಾರದು.

ಸಾಮಾನ್ಯವಾಗಿ, ಈ ಪದವೀ ಕೋರ್ಸುಗಳ ಅಧ್ಯಯನವನ್ನು ನಮ್ಮ ರಾಕೆಟ್ ಉಡಾವಣೆಯ ವಿವಿಧ ಹಂತಗಳಿಗೆ ಸಮಾನವಾಗಿ ನೋಡಬಹುದು. ಪ್ರಥಮ ವರ್ಷದ ಹಂತದಲ್ಲಿ, ವಿದ್ಯಾರ್ಥಿಗಳು ತಮ್ಮ ಶಾಲಾ ಬಾಲಿಶ ಬುಧ್ಧಿಯನ್ನು ಬಿಟ್ಟು, ಸ್ವಂತ ಜವಾಬ್ದಾರಿಯ ಜ್ಞಾನಾರ್ಜನೆ ಪ್ರಾರಂಭಿಸುವ ಹಂತ. ಇದು ತಾವು ಸೇರಿರುವ ಕೋರ್ಸಿನ ಮೂಲಭೂತ ವಿಷಯಗಳ ಜ್ಞಾನಾರ್ಜನೆ (fundamental or basic subject knowledge of the course) ಪೂರೈಸುವ ಬಹಳ ಮಹತ್ವದ ವರ್ಷ. ಇದನ್ನು ರಾಕೆಟ ಉಡಾವಣೆಯ ಪ್ರಥಮ ಹಂತಕ್ಕೆ ಹೋಲಿಸಬಹುದು. ಇಲ್ಲಿ, ವಿದ್ಯಾರ್ಥಿಗಳು ಅಧ್ಯಯನದಕಡೆಗೆ ಅಸಡ್ಡೆ ಮಾಡಿದರೆ ಅಥವಾ ಹಾದಿ ತಪ್ಪಿದರೆ ಮುಂದೆ ತಮ್ಮ ಜೀವನದ ಉದ್ದೇಶಿತ ಗುರಿ ಸಾಧನೆ ತಪ್ಪುವುದು ಬಹುತೇಕ ಖಚಿತ. 

ಇನ್ನು, ಮುಂದಿನ ಎರಡು ವರ್ಷ, ಅಧ್ಯಯನ ಮಾಡಿದ ವಿವಿಧ ವಿಷಯಗಳನ್ನು ಹೇಗೆ ನಿತ್ಯ ಜೀವನದಲ್ಲಿ ಅಳವಡಿಸಬಹುದು ಎಂಬ ಪ್ರಾಯೋಗಿಕ (Application knowledge) ಜ್ಞಾನವನ್ನು ಆದಷ್ಟು ಜಾಸ್ತಿ ಸಂಪಾದನೆ ಮಾಡುವ ಹಂತ. ಇದನ್ನು ರಾಕೆಟ್ ಉಡಾವಣೆಯ ಎರಡನೇಯ ಹಂತಕ್ಕೆ ಹೋಲಿಸಬಹುದು.

ಕೊನೆಯ ವರ್ಷದ ಮೂರನೇಯ ಹಂತದಲ್ಲಿ, ವಿದ್ಯಾರ್ಥಿಗಳು ಅರಿತು ಕಲಿಯಬೇಕಾದದ್ದು, ವ್ಯವಹಾರ ಕೌಶಲತೆಯ ಸೂಕ್ಷ್ಮ ಜ್ಞಾನ(soft kills). ನಮ್ಮ ಮುಂದಿನ ವೃತ್ತಿ ಜೀವನಲ್ಲಿ ತಾವು ಕೆಲಸ ಮಾಡುವ ಸರ್ಕಾರಿ/ಖಾಸಗಿ ಸಂಸ್ಥೆಗಳ ವ್ಯವಸ್ಥೆಯಲ್ಲಿ ಸಹೋದ್ಯೋಗಿ ಮತ್ತು ಮೇಲಾಧಿಕಾರಿ ಅಥವಾ ಗ್ರಾಹಕರೊಟ್ಟಿಗಿನ ವ್ಯವಹಾರಗಳ ನಿರ್ವಹಣೆ ಹಾಗು ಒಬ್ಬ ಜವಾಬ್ದಾರಿ ನಾಗರೀಕನಾಗಿ ಸಮಾಜದಲ್ಲಿ ಒಂದಾಗಿ ಬೆರೆತು ದೇಶಕ್ಕಾಗಿ ಮಾಡಬೇಕಾದ ನಮ್ಮ ಕರ್ತವ್ಯ, ತ್ಯಾಗ ಇತ್ಯಾದಿಗಳ ಅರಿವು ಮತ್ತು ಅನುರೂಪ ವ್ಯವಹಾರ ಚತುರತೆಯನ್ನು ಪಡೆಯುವುದು. ವಿದ್ಯಾರ್ಥಿಗಳು ಎಲ್ಲಾ ವಿಷಯ, ವಿಜ್ಞಾನ, ತಂತ್ರಜ್ಞಾನ ಕಲಿತು ವ್ಯವಹಾರ ಜ್ಞಾನ ಪಡೆಯದಿದ್ದರೆ ಮುಂದೆ ತಮ್ಮ ವೃತ್ತಿ ಜೀವನದಲ್ಲಿ ಅಥವಾ ವೈಯಕ್ತಿಕ ಜೀವನದಲ್ಲಿ ಯಶಸ್ಸನ್ನು ಸಾಧಿಸುವುದು ಅಸಾಧ್ಯ.ಇದು ಉಪಗ್ರಹವನ್ನು ಸರಿಯಾದ ಕಕ್ಷೆಯಲ್ಲಿ ಸ್ಥಾಪಿಸುವ ರಾಕೆಟನ ಮೂರನೆಯ ಕ್ರಯೋಜೆನಿಕ್ ಹಂತದ ಸೂಕ್ಷ್ಮ ಕಾರ್ಯಕ್ಕೆ ಸಮಾನ.

ನಮಗೆಲ್ಲ ನೆನಪಿರುವ ಹಾಗೆ, ಇಸ್ರೋದ ಚಂದ್ರಯಾನ-೨ ಮಿಷನ್, ಕೊನೆಯ ಕ್ಷಣಗಳಲ್ಲಿ ಚಂದ್ರನ ದಕ್ಷಿಣ ಧೃವವನ್ನು ನಿಧಾನವಾಗಿ ಸ್ಪರ್ಶಿಸಿ ಸ್ಥಾಪನೆಹೊಂದುವ ಹಂತದಲ್ಲಿ ವಿಫಲವಾಗಿತ್ತು. ಆ ವಿಫಲತೆಯ ಕಾರಣಗಳನ್ನು ಪತ್ತೆಹಚ್ಚಿ ಸರಿಪಡಿಸಿಕೊಂಡ ಇಸ್ರೋ, ಮುಂದಿನ ಚಂದ್ರಯಾನ -೩ ಮಿಷನ್ ಯಶಸ್ವಿಯಾಗಿ ಪೂರೈಸಿ ತನ್ನ ಸಾಮರ್ಥ್ಯವನ್ನು ಜಗತ್ತಿಗೇ ಸಾಬೀತು ಪಡಿಸಿತು. ಅದೇ ರೀತಿ, ಮೊನ್ನೆ ಹಾರಿಸಿದ ೧೦೧ನೇ ರಾಕೆಟ್ ಉಡಾವಣೆಯ ವಿಫಲತೆಗೆ ಕಾರಣಗಳನ್ನು ಪತ್ತೆಹಚ್ಚಿ ಮುಂದಿನ ಉಡಾವಣೆಯನ್ನು ಯಶಸ್ವಿಗೊಳಿಸಿ ದೇಶದ ಭರವಸೆಯನ್ನು ಇಸ್ರೋ ಉಳಿಸಿಕೊಳ್ಳುವಲ್ಲಿ ಯಾವುದೇ ಸಂದೇಹವಿಲ್ಲ. ಇಲ್ಲಿ, ನಮಗಿರುವ ಪಾಠವೆಂದರೆ, ನಮ್ಮ ಶಿಕ್ಷಣ ಅಥವಾ ವೃತ್ತಿಗಳಲ್ಲಿ ಅಕಸ್ಮಾತಾಗಿ ಮುಗ್ಗರಿಸಿದಾಗ, ಇದು ತಾತ್ಕಾಲಿಕ ಹಿನ್ನಡತೆಯೇ ಹೊರತು ನಮ್ಮ ಜೀವನದ ವೈಫಲ್ಯವಲ್ಲ ಎಂದು ತಿಳಿದು, ಧೈರ್ಯಕಳೆದುಕೊಳ್ಳದೇ, ಆದ ತಪ್ಪುಗಳಿಗೆ ಕಾರಣಗಳನ್ನು ಅರಿತು ಅವನ್ನು ಸರಿಪಡಿಸಿಕೊಂಡು, ಮರು ಪ್ರಯತ್ನಮಾಡಿದಲ್ಲಿ ನಮ್ಮ ಕಾರ್ಯದಲ್ಲಿ ಯಶಸ್ಸು ಸಿಗುವುದರಲ್ಲಿ ಸಂಶಯವಿಲ್ಲ ಅಲ್ಲವೇ?

-ಡಾ. ಜಯಂತ ಕಿತ್ತೂರ 

ಕಾಮೆಂಟ್‌ಗಳು

  1. ಜಯಂತ, ಬರಹ ಅಧ್ಬುತವಾಗಿದೆ

    ಪ್ರತ್ಯುತ್ತರಅಳಿಸಿ
  2. ಬರವಣಿಗೆ ತುಂಬಾ ಅರ್ಥಪೂರ್ಣವಾಗಿದೆ.

    ಪ್ರತ್ಯುತ್ತರಅಳಿಸಿ
  3. Good one sir .. fantastic analogy and great pession for students. I am sure ISRO will use this as an opportunity to build more robust satellite launch Vehicles

    ಪ್ರತ್ಯುತ್ತರಅಳಿಸಿ
  4. ಚೆನ್ನಾಗಿದೆ ಲೇಖನ, ಭಾಗವತದ ಹೋಲಿಕೆ ಸರಿಯಾಗಿದೆ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  5. ರಾಕೆಟ್ ಲಾಂಚಿನಲ್ಲಿ ಬರುವ ವಿವಿಧ ಮಜಲುಗಳನ್ನು ಜನ ಸಾಮಾನ್ಯರಿಗೆ ಸರಳವಾಗಿ ತಿಳಿಯುವಂತೆ ಬರೆದಿದ್ದೀರಿ. ತಮಗೆ ಅಭಿನಂದನೆಗಳು ಮತ್ತು ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  6. "ಇದು ತಾತ್ಕಾಲಿಕ ಹಿನ್ನಡತೆಯೇ ಹೊರತು ನಮ್ಮ ಜೀವನದ ವೈಫಲ್ಯವಲ್ಲ ಎಂದು ತಿಳಿದು, ಧೈರ್ಯಕಳೆದುಕೊಳ್ಳದೇ, ಆದ ತಪ್ಪುಗಳಿಗೆ ಕಾರಣಗಳನ್ನು ಅರಿತು ಅವನ್ನು ಸರಿಪಡಿಸಿಕೊಂಡು, ಮರು ಪ್ರಯತ್ನಮಾಡಿದಲ್ಲಿ ನಮ್ಮ ಕಾರ್ಯದಲ್ಲಿ ಯಶಸ್ಸು ಸಿಗುವುದರಲ್ಲಿ ಸಂಶಯವಿಲ್ಲ ಅಲ್ಲವೇ?" ....Very much true in so many aspects of our lives! Failures are the stepping stones for success! Well compiled article Sir, as always.

    ಪ್ರತ್ಯುತ್ತರಅಳಿಸಿ
  7. Sir , Namaskara . Your article has come out very nicely analysing all the relevant aspects . Congratulations sir for bringing out such a wonderful writing in nutshell . Thank you sir

    ಪ್ರತ್ಯುತ್ತರಅಳಿಸಿ
  8. ಅತೀ ಉತ್ತಮ ಲೇಖನ, ಎಂತಹ ಜ್ಞಾನ ಈ ವಿಷಯ ಬಗ್ಗೆ ಊಹಿಸಲು ಸಾಧ್ಯವಿಲ್ಲ ಜ್ಞಾನವನ್ನು ಈ ಲೇಖನ ದಲ್ಲಿ ವ್ಯಕ್ತ ಪಡಿಸಿರುವುದು ನಿಮ್ಮ ಜ್ಞಾನ ಉನ್ನತ ಮಟ್ಟದ್ದು.

    ಪ್ರತ್ಯುತ್ತರಅಳಿಸಿ
  9. ತುಂಬ ಪಕ್ವವಾದ ಲೇಖನ. ರಾಕೆಟನ ಮೂರು ಹಂತಗಳನ್ನು ನಮ್ಮ ದಿನನಿತ್ಯದ ಜೀವನದ ಪಯಣಕ್ಕೆ ತುಂಬಾ ಚೆನ್ನಾಗಿ ಅನ್ವಯಿಸಿರುವುದು ತುಂಬ ಪ್ರಯೋಜನಕಾರಿಯಾಗಿದೆ. ರಾಕೆಟನ ತಾಂತ್ರಿಕತೆಯನ್ನೂ ಜನಸಾಮಾನ್ಯರಿಗೆ ಸುಲಭದಲ್ಲಿ ಅರ್ಥವಾಗುವಂತೆ ತಿಳಿಸಿರುವುದೂ ಪ್ರಶಂಸನೀಯವಾಗಿದೆ.
    ನೀವು ಹೀಗೆಯೇ ಕಾಲಕಾಲಕ್ಕೆ ಅಭ್ಯಾಸ ಪೂರ್ಣವಾದ ಮತ್ತು ಉಪಯುಕ್ವವಾದ ಲೇಖನಗಳನ್ನು ಬರೆಯುತ್ತಿರಿ ಎಂದು ವಿನಂತಿಸುತ್ತಾ , ನಿಮ್ಮ ಈ ಅನನ್ಯವಾದ ಸಾಹಿತ್ಯಸೇವೆ ಮುಂದುವರೆಯಲಿ, ಯಶಸ್ವಿಯಾಗುತ್ತಿರಿ ಎಂದು ಶುಭಹಾರೈಸಲು ನನಗೆ ಸಂತಸ ಮತ್ತು ಅಭಿಮಾನವೆನಿಸುತ್ತದೆ.
    ಶುಭಂ ಅಸ್ತು.

    ಪ್ರತ್ಯುತ್ತರಅಳಿಸಿ
  10. ಅತ್ಯುತ್ತಮ ಬರಹ ಸರ್‌ ಮನುಷ್ಯ ರೇ ನಿಮಿ೯ಸಿದ್ದು ಲೋಪದೋಷ ಸಹಜ ಪ್ರಯತ್ನಕ್ಕೆ ಫಲವಿದೆ

    ಪ್ರತ್ಯುತ್ತರಅಳಿಸಿ
  11. ಇದೊಂದು ಅತೀ ಉತ್ತಮವಾದ ಲೇಖನ ಜಯಂತ, a guidance article to younger generation, not to give up when they fail. ಒಂದು ಸ್ಫೂರ್ತಿದಾಯಕವಾದ ಬರವಣಿಗೆ 👍

    ಪ್ರತ್ಯುತ್ತರಅಳಿಸಿ
  12. Great article and lot of information.. please keep writing. It is a common behavior of the people where they forget 100 successes happened before and just talk about 101st failure!

    ಪ್ರತ್ಯುತ್ತರಅಳಿಸಿ
  13. ಸರ್, ಸೋಲುಗಳಿಂದ ಹತಾಶರಾಗದೆ ಪ್ರಯತ್ನಶೀಲರಾಗಬೇಕೆಂಬ ಸಂದೇಶವುಳ್ಳ ಬರಹ ಅದ್ಭುತವಾಗಿದೆ. ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  14. ಲೇಖನ ಪ್ರತೀ ಹಂತದಲ್ಲೂ ಚೆನ್ನಾಗಿದೆ. ವ್ಯಕ್ತಿಯು ಪ್ರಥಮ ದ್ವಿತೀಯ ಹಾಗೂ ಕೊನೆಯದಾದ ತೃತೀಯ ಹಂತದಲ್ಲಿ ಶಿಕ್ಷಣ ಹಾಗೂ ವೃತ್ತಿಯಲ್ಲಿ ಸಾವರಿಸಿಕೊಂಡು ಎಚ್ಚೆತ್ತು ಯಶಸ್ವಿಯಾದ ಮೇಲೆ ಯಾವ ರೀತಿ ಉಪಗ್ರಹವು ಭೂಮಿಯತ್ತ ತಿರುಗಿ ತನಗೆ ಕೊಟ್ಟ ಕೆಲಸವನ್ನು ನೆರವೇರಿಸುತ್ತ ತನ್ನನ್ನು ಸೃಷ್ಟಿಸಿದವರಿಗೆ ಹಾಗೂ ಸಮಾಜಕ್ಕೆ ಉಪಕಾರ ಮಾಡುತ್ತದೆಯೋ ಹಾಗೆಯೇ ವೃತ್ತಿಯಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾದ ವ್ಯಕ್ತಿಯು ಕೂಡ ತಾಯಿ ತಂದೆ ಹಾಗೂ ಸಮಾಜದ ಕಡೆ ಮುಖ ಮಾಡಿ ಸಾರ್ಥಕತೆಯನ್ನು ಕೊಡುವ ಹಾಗೆ ಸೇವೆ ಮಾಡಬೇಕು ಎಂದು ನನ್ನ ಸ್ವಂತ ಅಭಿಪ್ರಾಯ, ತಪ್ಪಾಗಿದ್ದರೆ ಕ್ಷಮಿಸಿರಿ.

    ಪ್ರತ್ಯುತ್ತರಅಳಿಸಿ
  15. ನಮಸ್ಕಾರಗಳು, ಲೇಖನ ಚೆನ್ನಾಗಿದೆ.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನನ್ನ ಬಿಳಿ ತಲೆಯ ಬಣ್ಣಗಳು ...(ಭಾಗ-೧)

ದಿಖಾವೇಪೆ ಮತ್ ಜಾವೋ ಅಕಲ್ ಲಗಾವೋ...

ಇವಾ ಯಾವೂರವಾ...