ಪೂರಕ ವಾತಾವರಣ

ಹಿಂದಿಯ ಸಾರ್ವಕಾಲಿಕ ಜನಪ್ರೀಯ ಸಿನೆಮಾ "ಶೋಲೆ" ತೆರೆಕಂಡು ಇಂದಿಗೆ ೫೦ ವರ್ಷಗಳಾದರೂ, ಅದರಲ್ಲಿಯ ವಿವಿಧ ಸನ್ನಿವೇಶಗಳು , ಡೈಲಾಗುಗಳು, ಹಾಡುಗಳು ಜನರ ಮನದಲ್ಲಿ ಇನ್ನೂ ಅಷ್ಟೇ ತಾಜಾ ಆಗಿವೆ. ಅದರಲ್ಲಿಯ ಒಂದು ಸನ್ನಿವೇಶ... ವೀರುವನ್ನು ಹಿಡಿದು ಕಟ್ಟಿಹಾಕಿದ ಗಬ್ಬರ್ ಸಿಂಗ್ , ವೀರುನ ಪ್ರೇಯಸಿ ಬಸಂತಿಗೆ ಹೇಳುತ್ತಾನೆ ನೀನು ಎಲ್ಲಿಯವರೆಗೆ ಹಾಡು ಹಾಡಿ ನೃತ್ಯ ಮಾಡುವಿಯೋ ಅಲ್ಲಿಯವರೆಗೆ ವೀರುಗೆ ಗುಂಡು ಹಾರಿಸುವುದಿಲ್ಲ ಎಂದು. "ಜಬತಕ್ ಹೈ ಜಾನ್s ಜಾನೇಜಹಾs ಮೈ ನಾಚುಂಗೀs"ಎಂಬ ಹಾಡು ಹಾಡುತ್ತ ಬಸಂತಿ ನೃತ್ಯಮಾಡುವಳು. ಅಸಹಾಯಕಳಾದ ಅವಳು, ಆ ಇಕ್ಕಟ್ಟಿನ ಸನ್ನಿವೇಶಕ್ಕೆ ಅನಿವಾರ್ಯವಾಗಿ ಹಾಗೆ ಮಾಡುವಳು. ಅದೇನೂ ಅವಳು ಖುಶಿಯಿಂದ ಹಾಡಿದ ಹಾಡಲ್ಲ ಮತ್ತು ಮಾಡಿದ ನೃತ್ಯವಲ್ಲ. ಒಂದು ವೇಳೆ ಬಸಂತಿಯಿಂದ ಒಳ್ಳೆಯ ಹಾಡು ಕೇಳುವ ಅಥವಾ ನೃತ್ಯ ನೋಡುವ ಇಚ್ಛೆ ಗಬ್ಬರ್ ಸಿಂಗ್ ಗೆ ಇದ್ದರೆ, ಅವನು ಅದಕ್ಕೆ ಅನುಗುಣವಾಗಿ ಪೂರಕ ವಾತಾವರಣ ಕಲ್ಪಿಸಿರುತ್ತಿದ್ದ. ಆದರೆ, ಅಲ್ಲಿ ಅವನ ಉದ್ದೇಶವೇ ಬೇರೆ ಆಗಿತ್ತು.ಅಲ್ಲವೇ?

ತಾನು ಮತ್ತೊಮ್ಮೆ ಅಮೇರಿಕಾದ ಅಧ್ಯಕ್ಷನಾದರೆ, ರಷ್ಯ-ಯುಕ್ರೇನ್ ಯುದ್ಧವನ್ನು ಒಂದೇ ದಿನದಲ್ಲಿ ನಿಲ್ಲಿಸುತ್ತೇನೆ, ಅಮೇರಿಕಾವನ್ನು ಮತ್ತೊಮ್ಮೆ ಮಹಾನ್ ದೇಶವನ್ನಾಗಿ ಮಾಡುತ್ತೇನೆ ಎಂದೆಲ್ಲಾ ಹೇಳಿ ಎರಡನೇ ಬಾರಿ ಅಮೇರಿಕಾದ ಅಧ್ಯಕ್ಷರಾದ ಟ್ರಂಪ ಮಹಾಶಯ, ಯಾವ ಯುಧ್ಧವನ್ನೂ ನಿಲ್ಲಿಸಲಿಲ್ಲ. ಬದಲಾಗಿ ಜಾಗತಿಕ ಮಟ್ಟದಲ್ಲಿ ವಿವಿಧ ದೇಶಗಳ ವಸ್ತುಗಳ ಮೇಲೆ  ಮನಬಂದಂತೆ ಸುಂಕ(tariff) ಹೇರಿ ಆರ್ಥಿಕ ಯುದ್ಧವನ್ನು ಸಾರಿ, ಜಗತ್ತಿನಾದ್ಯಂತ ಆರ್ಥಿಕ, ಕೈಗಾರಿಕಾ, ಜಾಗತಿಕ ವ್ಯಾಪಾರ ವ್ಯವಹಾರ ವ್ಯವಸ್ಥೆಯಲ್ಲಿ ಅಂಧಾ ಧುಂದ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವುದಂತೂ ನಿಜ. ಕೈಲಾಗದವ ಮೈಯೆಲ್ಲಾ ಪರಚಿಕೊಂಡನಂತೆ!!!. ಮೊನ್ನೆ ಆಪಲ್ ಐಫೋನ್, ಇಂದು ಸ್ಯಾಮ್ಸಂಗ್ ಕಂಪನಿಗಳಿಗೆ ಅಮೇರಿಕಾದಲ್ಲಿಯೇ ಸೆಲ್ ಫೋನ್ ಉತ್ಪಾದನೆ ಮಾಡುವಂತೆ ಅಧ್ಯಕ್ಷ ಟ್ರಂಪರು ಧಮ್ಕಿ ನೀಡಿರುವುದನ್ನು ನೋಡಿ ಶೋಲೆ ಸಿನಿಮಾದ ಈ ಮೇಲಿನ ಸನ್ನಿವೇಶ ನೆನಪಾಯಿತು.

ಈ ಅತ್ಯಾಧುನಿಕ ಮತ್ತು ಕ್ಲಿಷ್ಟಕರ ತಂತ್ರಜ್ಞಾನದ ಸೆಲ್ ಫೋನ್ ವಿನ್ಯಾಸ ಮಾಡುವುದು ಎಷ್ಟು ಕಷ್ಟಕರವೋ ಅಷ್ಟೇ ಅಥವಾ ಅದಕ್ಕೂ ಕಷ್ಟಕರ ಕೆಲಸವೆಂದರೆ ಅದರ ನೂರಾರು ವಿವಿಧ ಬಿಡಿ ಭಾಗಗಳ‌ ಉತ್ಪಾದನೆ ಮತ್ತು ಜೋಡಣೆ ಮಾಡಿ ತಯಾರು ಮಾಡುವುದು. ಇವುಗಳನ್ನು ಅಗ್ಗದ ಬೆಲೆಯಲ್ಲಿ ತಯಾರು ಮಾಡಲು ಬೇಕಾದ ಕಚ್ಚಾವಸ್ತುಗಳು, ನೆಲ, ಜಲ, ವಿವಿಧ ಪ್ರಕಾರದ ಯಂತ್ರೋಪಕರಣಗಳು,  ವಿದ್ಯುತ್ ಶಕ್ತಿ, ಕಡಿಮೆ ವೇತನ ಪಡೆದು ಹೆಚ್ಚು ವೇಳೆ ಕೆಲಸಮಾಡುವ ಕುಶಲಕರ್ಮಿಗಳು, ಇನ್ನು ಅವರ ವಸತಿ, ಆಹಾರ, ಆರೋಗ್ಯ, ಸಾರಿಗೆ ಇತ್ಯಾದಿಗಳ ಪೂರೈಕೆ ಹೀಗೆ ನೂರಾರು ಬಗೆಯ ಸುಸಜ್ಜಿತ ವ್ಯವಸ್ಥೆಗಳ ಲಭ್ಯತೆ ಅಥವಾ ಪೂರೈಕೆ ಆಗಬೇಕು. ಅಷ್ಟೇ ಅಲ್ಲದೇ, ನೂರಾರು ಸೂಕ್ಷ್ಮ ಬಿಡಿ ಭಾಗಗಳ‌ನ್ನು ಬಹಳ ಶೃದ್ಧೆಯಿಂದ ಹತ್ತಾರು ಗಂಟೆಗಳವರೆಗೆ ಕರಾರುವಕ್ಕಾಗಿ ಕೈಯಿಂದ ಜೋಡಣೆ ಮಾಡಬೇಕಾದ ಕುಶಲಕರ್ಮಿಗಳ ಅಗತ್ಯ ಇರುತ್ತದೆ. ಚೀನಾ, ಭಾರತ ಮತ್ತು ಇತರ ಕೆಲವು ಪೂರ್ವ ಏಶಿಯಾದ ದೇಶಗಳು ಈ ಸೆಲ್ ಫೋನ್ ಉತ್ಪಾದನೆಗೆ ಪೂರಕ ಔದ್ಯೋಗಿಕ ಘಟಕಗಳ ವಸಾಹತುಗಳನ್ನು ಮತ್ತು ಕಡಿಮೆ ವೇತನದ ಕುಶಲಕರ್ಮಿಗಳ ಪಡೆ ಕಲ್ಪಿಸಿರುವ ಕಾರಣ ಈ ಫೋನುಗಳು ಅತ್ಯಂತ ಕಡಿಮೆ ಖರ್ಚಿನಲ್ಲಿ ಉತ್ಪಾದನೆಯಾಗಿ, ಜಾಗತಿಕ ಮಾರುಕಟ್ಟೆಯಲ್ಲಿ ಸುಲಭದ ದರದಲ್ಲಿ ಸಮರ್ಪಕವಾಗಿ ಲಭ್ಯವಾಗಿರುವುದು. ಈ ತರಹದ, ಸೆಲ್ ಫೋನ್ ಉತ್ಪಾದನೆಗೆ ಪೂರಕ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಯಾವ ಕೆಲಸ ಮಾಡದೇ, ಧಿಡೀರನೆ, ನಿಮ್ಮ ಎಲ್ಲಾ ಫೋನ್ ಉತ್ಪಾದನಾ ಕೈಗಾರಿಕಾ ಘಟಕಗಳನ್ನು ಅಮೇರಿಕಾದಲ್ಲಿ ಸ್ಥಳಾಂತರಿಸಿ ಉತ್ಪಾದನೆ ಮಾಡಿರಿ ಇಲ್ಲವೆ ನಮ್ಮ ಮನಬಂದ ಟಾರಿಫ್ ಸುಂಕ ಹೇರುವದಾಗಿ ರಂಪಾಟ ಮಾಡುವುದು ಎಷ್ಟು ಸಮಂಜಸ.

ಜಾಗತಿಕ ಹಿರಿಯಣ್ಣನ ಸುದ್ದಿ ನಮಗೇಕೆ  ಎನ್ನುವಿರಾ...ಬಿಡಿ, ನಮ್ಮ ದೇಶದ ಉದಾಹರಣೆಯನ್ನೇ ತೆಗೆದುಕೊಳ್ಳಿ. ಎಂಬತ್ತರ ದಶಕದಿಂದೀಚೆಗೆ ನಮ್ಮ ಬೆಂಗಳೂರನ್ನು 'ಭಾರತದ ಸಿಲಿಕಾನ್ ವ್ಯಾಲಿ'ಎಂದು ಕರೆಯಲಾಗುತ್ತಿತ್ತು. ಇದಕ್ಕೆ ಕಾರಣ, ನೂರಾರು ದೊಡ್ಡ ಸಣ್ಣ  ಸಾಫ್ಟವೇರ್ ಸರ್ವಿಸ್ ಕಂಪನಿಗಳು ಬೆಂಗಳೂರಿನಲ್ಲಿ ಸ್ಥಾಪನೆಯಾಗಿದ್ದು. ಬೆಂಗಳೂರಿನಿಂದ ಜಾಗತಿಕ ಮಾರುಕಟ್ಟೆಗೆ ಅನುರೂಪವಾದ ಸೇವೆ ನೀಡಲು ಪೂರಕವಾದ ವಾತಾವರಣ ಅಂದರೆ, ಸಾಫ್ಟವೇರ್ ಕೋಡಿಂಗ್ ಕೆಲಸಮಾಡಲು ನೂರಾರು ಇಂಜಿನಿಯರಿಂಗ್ ಕಾಲೇಜುಗಳಿಂದ ಸಾವಿರಾರು ಇಂಜಿನಿಯರಿಂಗ್ ಪದವೀಧರರ ಲಭ್ಯತೆ, ಒಳ್ಳೆಯ ತಂಪಾದ ಹವಾಮಾನ, ಹಚ್ಚ ಹಸಿರು ಪರಿಸರ, ಅಗಲವಾದ ರಸ್ತೆಗಳು, ಒಳ್ಳೆಯ ಸಾರ್ವಜನಿಕ ಸಂಚಾರ ವ್ಯವಸ್ಥೆ, ಕೈಗೆಟುಕುವ ಬೆಲೆಗೆ ರಿಯಲ್ ಎಸ್ಟೇಟ್, ನಿರಂತರ ವಿದ್ಯುತ್ ಶಕ್ತಿಯ ಲಭ್ಯತೆ ಮುಂತಾದ ಅಗತ್ಯವಾದ ಅನುಕೂಲತೆಗಳನ್ನು ಒದಗಿಸುವಲ್ಲಿ ಅಂದಿನ ರಾಜ್ಯ ಸರ್ಕಾರ ತೋರಿದ ಉತ್ಸುಕತೆ ಹಾಗೂ ಸಹಕಾರದಿಂದಾಗಿ ಅನೇಕ ಸಾಫ್ಟವೇರ್ ಉದ್ಯಮಗಳ ಸ್ಥಾಪನೆ, ನಿರ್ವಹಣೆಗೆ ಪೂರಕ ವಾತಾವರಣದ ನಿರ್ಮಾಣವಾಗಿತ್ತು. ಆದರೆ, 'ಬರಬರುತ್ತಾ ರಾಯರ ಕುದುರೆ ಕತ್ತೆ ಆಯಿತಂತೆ' ಎಂಬಂತೆ ಸಿಲಿಕಾನ್ ವ್ಯಾಲಿ ಎಂದ ಖ್ಯಾತಿಯ ಬೆಂಗಳೂರು ಒದಗಿಸಿದ್ದ ಸೌಲತ್ತುಗಳಿಂದ ನಿಧಾನವಾಗಿ ವಂಚಿತಗೊಳ್ಳುತ್ತಿದ್ದ ಸಮಯದಲ್ಲಿ ಸಾಫ್ಟವೇರ್ ಕಂಪನಿಗಳಿಗೆ ಅಗತ್ಯವಾದ ಪೂರಕ ವಾತಾವರಣ ಒದಗಿಸಿ ನಮ್ಮ ಬೆಂಗಳೂರಿಗೆ ಟಕ್ಕರ್ ಕೊಡಲು ಹೈದರಾಬಾದ್, ಪುಣೆಗಳಂಥಾ ನೆರೆ ರಾಜ್ಯಗಳ ನಗರಗಳು ಸಫಲವಾದವು. ಇದೇ ರೀತಿ, ಟಾಟಾ ನ್ಯಾನೋ ಕಾರು ಉತ್ಪಾದನಾ ಘಟಕ ಕೋಲ್ಕತ್ತಾದ ಸಿಂಗೂರಿನಿಂದ ಸ್ಥಳಾಂತರ ಹೊಂದಲು ಪೂರಕ ವಾತಾವರಣವನ್ನು ಅಂದು ವಿರೋಧಪಕ್ಷದ ನಾಯಕಿ ನಮ್ಮ ದೀದೀ ನಿರ್ಮಾಣ ಮಾಡಿದಾಗ, ಕೂಡಲೆ ಟಾಟಾ ನ್ಯಾನೋ ಕಾರು ಉತ್ಪಾದನಾ ಘಟಕ ಸ್ಥಾಪನೆಗೆ ಬೇಕಾದ ಸವಲತ್ತುಗಳನ್ನು ನಿರೀಕ್ಷೆಗೂ ಮೀರಿದ ಗತಿಯಲ್ಲಿ ಒದಗಿಸಿ ಕಾರು ತಯಾರಿಕಾ ಘಟಕ ಸ್ಥಳಾಂತರಕ್ಕೆ ಪೂರಕ ವಾತಾವರಣ ಒದಗಿಸುವಲ್ಲಿ ಅಂದಿನ ಗುಜರಾತಿನ ಸರ್ಕಾರ ಯಶಸ್ವಿಯಾದ ಕಾರಣ ಟಾಟಾ ಕಂಪನಿಯು ತನ್ನ ನ್ಯಾನೋ ಕಾರು ಉತ್ಪಾದನಾ ಘಟಕವನ್ನು ಗುಜರಾತ್ ರಾಜ್ಯಕ್ಕೆ ಸ್ಥಳಾಂತರಿಸಿದ ವಿಷಯ ತಮಗೂ ನೆನಪಿರಬಹುದು.

ಬಿಡಿ, ಅವೆಲ್ಲಾ ಹಳೆಯ ವಿಚಾರಗಳೆಂದು ಮೂಗು ಮುರಿಯುವಿರಾ? ಹಾಗಾದರೆ, ಇತ್ತೀಚಿನ ಕೆಲವು ಉದಾಹರಣೆಯನ್ನೇ ನೋಡಿ. ಸ್ವಾತಂತ್ರ್ಯಾನಂತರದಿಂದಲೂ ನಮ್ಮ ರಕ್ಷಣಾ ಪಡೆಯ ಮೂರು ಅಂಗಗಳಿಗೆ ಬೇಕಾದ ಮುದ್ದು ಗುಂಡು, ಫಿರಂಗಿಗಳು, ಯುದ್ಧ ನೌಕೆಗಳು, ಯುದ್ಧ ವಿಮಾನಗಳು ಮತ್ತು ಅವುಗಳಿಗೆ ಬೇಕಾದ ಇತರ ಎಲ್ಲ ಉಪಕರಣಗಳನ್ನು ವಿದೇಶದಿಂದಲೇ ಆಮದು ಮಾಡಿಕೊಳ್ಳುತ್ತಿದ್ದೆವು. ಅವನ್ನೆಲ್ಲಾ ನಮ್ಮ ದೇಶದಲ್ಲೇ ಅಭಿವೃದ್ಧಿಪಡಿಸಿ ಉತ್ಪಾದನೆ ಮಾಡುವ ಸಾಮರ್ಥ್ಯವನ್ನು ಹೊಂದುಲು ಪೂರಕ ವಾತಾವರಣ ನಿರ್ಮಾಣ ಮಾಡುವಲ್ಲಿ‌ ವಿಫಲರಾಗಿದ್ದೆವು. ಆದರೆ ಕಳೆದ ಒಂದು ದಶಕದಲ್ಲಿ ಚಿತ್ರಣವೇ ಬದಲಾಗಿದೆ. ಸರ್ಕಾರ ನಿರ್ಮಿಸಿದ ಪೂರಕ ವಾತಾವರಣದ ಫಲವಾಗಿ ನಮ್ಮ ಸರ್ಕಾರೀ ಸ್ವಾಮ್ಯದ ಮತ್ತು ದೇಶಿಯ ಖಾಸಗಿ ಕೈಗಾರಿಕಾ ಸಂಸ್ಥೆಗಳು ಅಭೂತಪೂರ್ವ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗಿ ಇಂದು ನಾವು ಜಗತ್ತಿನ ಇತರ ರಾಷ್ಟ್ರಗಳಿಗೆ ಶಸ್ತ್ರಾಸ್ತ್ರಗಳನ್ನು ರಫ್ತುದಾರರಾಗಿ ಬೆಳೆದಿದ್ದೇವೆ. ಅದರಂತೆಯೇ, ದೇಶದಾದ್ಯಂತ ಪೂರಕ ವಾತಾವರಣ ನಿರ್ಮಾಣದ ಫಲವಾಗಿ ಭಾರತ ಇಂದು ಡಿಜಿಟಲೀಕರಣ ಮತ್ತು ದೂರಸಂಪರ್ಕ ಕ್ಷೇತ್ರದಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿದೆ.ಜಗತ್ತಿನ ಹಿರಿಯಣ್ಣನ ದೇಶದಲ್ಲಿ ಇಲ್ಲದ UPI ವ್ಯವಸ್ಥೆ ನಮ್ಮ ದೇಶದ ಬಡವ- ಶ್ರೀಮಂತ, ಹಳ್ಳಿಗ-ನಗರವಾಸಿ ಎಂಬ ಭೇದವಿಲ್ಲದೇ ಎಲ್ಲ ನಾಗರೀಕರು ಸುಲಭದಲ್ಲಿ ಕೋತಂಬರಿ ಇಂದ ಹಿಡಿದು ಕಂಪ್ಯೂಟರ್ ತನಕ ಎಲ್ಲಾ ವಸ್ತು ಮತ್ತು ಸೇವೆಗಳ ವ್ಯಾಪಾರ ವ್ಯವಹಾರಗಳನ್ನು ಕ್ಷಣಾರ್ಧದಲ್ಲಿ ಕುಳಿತಲ್ಲಿಂದಲೇ ಮಾಡುವ ಅನುಕೂಲತೆ ಲಭ್ಯವಾಗಿದೆ.ಇದಕ್ಕೆ ಬೇಕಾದ ಅಗ್ಗದ ಬೆಲೆಯ ಇಂಟರ್ನೆಟ್ ಡೇಟಾ ದೇಶಾದ್ಯಂತ ಲಭ್ಯತೆ ಮತ್ತು ಎಲ್ಲಾ ಜನರ ಹೆಸರಿನಲ್ಲಿ ಬ್ಯಾಂಕ್ ಖಾತೆ ಮತ್ತೂ ಸಾಫ್ಟವೇರ್ ತಂತ್ರಜ್ಞಾನ ಇತ್ಯಾದಿಗಳ ಲಭ್ಯತೆ.ಈ ರೀತಿಯ ಪೂರಕ ವಾತಾವರಣದ ಫಲವಾಗಿ ನಮ್ಮ ದೇಶದ ಯುವಕರು ಸ್ವಂತ ಉದ್ಯೋಗದ ಸ್ಟಾರ್ಟಪ್ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ನಿರ್ಮಿಸಿದ್ದಾರೆ ಎಂಬ ವಿಷಯವನ್ನು ಅಲ್ಲಗಳೆಯುವಂತಿಲ್ಲ.

ದೇಶದ ಆರ್ಥಿಕಸ್ಥಿತಿ ಹತ್ತು ಹನ್ನೆರಡು ವರ್ಷಗಳ ಹಿಂದೆ ಜಾಗತಿಕ ಮಟ್ಟದಲ್ಲಿ ಹತ್ತನೇ ಸ್ಥಾನದಲ್ಲಿತ್ತು. ೨೦೧೩ ರಲ್ಲಿ ಭಾರತವನ್ನು ಆರ್ಥಿಕ ದೃಷ್ಟಿಯಿಂದ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿಯ "ಫ್ರಜಾಯಿಲ್ ಫಾಯು" ದೇಶಗಳಲ್ಲೊಂದು ಎಂದು ಕರೆಯಲಾಗಿತ್ತು.(ಬ್ರಾಜಿಲ್, ಇಂಡೋನೇಷ್ಯಾ, ದಕ್ಷಿಣ ಆಫ್ರಿಕಾ ಮತ್ತು ತುರ್ಕಿ ಆ ಪಟ್ಟಿಯಲ್ಲಿದ್ದ ಇತರ ನಾಲ್ಕು ಅಭಿವೃದ್ಧಿಶೀಲ ದೇಶಗಳು). ಅಂದು ನಮ್ಮ ಆರ್ಥಿಕತೆ ವಿದೇಶಿ ಬಂಡವಾಳ ಹೂಡಿಕೆಗೆ ಪೂರಕವಾದ ವಾತಾವರಣ ಹೊಂದಿರಲಿಲ್ಲ. ನಮ್ಮ ಶೇರು ಮಾರುಕಟ್ಟೆಯಲ್ಲಿ ಸ್ಥಿರತೆ ಇರಲಿಲ್ಲ. ಅಷ್ಟೇಅಲ್ಲ, ನಮ್ಮ ಭಾರತಿಯ ರುಪಾಯಿಯ ಅಪಮೌಲ್ಯ ಜಾಸ್ತಿ ಇದ್ದಿತು. ಕೈಗಾರಿಕೆ, ವ್ಯಾಪಾರ ವ್ಯವಹಾರಗಳ ಆರ್ಥಿಕ ಅಭಿವೃದ್ಧಿ ಮಂದಗತಿಯಲ್ಲಿತ್ತು ಮತ್ತು ದೇಶ ವಿದೇಶೀ ಸಾಲದಲ್ಲಿ ಮುಳುಗಿತ್ತು. ಆದರೆ, ಇಂದು ನಾವು ಆರ್ಥಿಕತೆಗಳಲ್ಲಿ ಜಗತ್ತಿನ ನಾಲ್ಕನೇಯ ಸ್ಥಾನಕ್ಕೇರಿದ್ದೇವೆ. ಈ ರೀತಿಯ ಆರ್ಥಿಕ ಅಭಿವೃದ್ಧಿ ತನ್ನಷ್ಟಕ್ಕೆ ತಾನೇ ಆದುದಲ್ಲ. ಸರ್ಕಾರ, ದೇಶದ ಆರ್ಥಿಕ ಸ್ಥಿತಿ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣ ಮಾಡುವಲ್ಲಿ‌ ಹಣಕಾಸು, ಬ್ಯಾಂಕಿಂಗ್, ತೆರಿಗೆ, ಕೈಗಾರಿಕೆ, ವಾಣಿಜ್ಯ, ವ್ಯಾಪಾರ, ಉದ್ಯೋಗ, ಮೂಲಭೂತ ಸೌಕರ್ಯ ನಿರ್ಮಾಣ, ಶಿಕ್ಷಣ, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ ಇತ್ಯಾದಿ ಅನೇಕ ಕ್ಷೇತ್ರಗಳಲ್ಲಿ ತ್ವರಿತಗತಿಯಲ್ಲಿ ಮಾಡಿದ ಸೂಕ್ತ ಮತ್ತು ಸರ್ವಾಂಗೀಣ ಪ್ರಯತ್ನ ಮತ್ತು ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಪ್ರತಿಯೊಬ್ಬ ಭಾರತೀಯರ ಪ್ರಯತ್ನದ ಪರಿಣಾಮ ಎಂಬುದನ್ನು ಅಲ್ಲಗಳೆಯಲಾದೀತೇ? 'ಒಲ್ಲದ ಗಂಡಗೆ ಮೊಸರಿನಲ್ಲಿ ಕಲ್ಲು' ಎಂಬಂತೆ ಈ ಪ್ರಗತಿಯನ್ನು ಟೀಕೆ ಮಾಡುವವರು ಇರುವುದು ಆಶ್ಚರ್ಯವೇನಿಲ್ಲ ಬಿಡಿ !!!

ಇತ್ತೀಚಿನ ವರ್ಷಗಳಲ್ಲಿ, ದೆಹಲಿಯ ನಿರ್ಭಯಾ ಘಟನೆ ಅಥವಾ ಕೊಲಕೊತ್ತಾದ‌ ಆರಜೀಕರ ವೈದ್ಯಕೀಯ ಕಾಲೇಜಿನ ಅಮಾನುಷ, ಅಹಿತಕರ ಘಟನೆಗಳು ಸುದ್ದಿಗಳಾಗಿವೆ. ಆದರೆ ಈ ತರಹದ ಅಥವಾ ಇದಕ್ಕೂ ಬರ್ಬರ ಅನೇಕ ಘಟನೆಗಳು ದೇಶದ ನಾನಾ ಕಡೆ ನಡೆಯುತ್ತಿರಬಹುದು ಆದರೆ ಅವೆಲ್ಲ ವರದಿಯಾಗಿರಲಿಕ್ಕಿಲ್ಲ ಅಷ್ಟೇ. ಈ ರೀತಿ ವಿಕ್ರತ ಮನೋಸ್ಥಿತಿಯು ಉಲ್ಬಣವಾಗಲು ಸಮಾಜದಲ್ಲಿ ನೈತಿಕತೆಯ ಅಧಃಪತನಕ್ಕೆ ಪೂರಕ ವಾತಾವರಣದ ನಿರ್ಮಾಣವಾಗಿರುವುದೇ ಕಾರಣ. ಸಮಾಜದ ಎಲ್ಲ ಜನರ ರಕ್ಷಣೆಯ ಜವಾಬ್ದಾರಿ ಪೋಲೀಸ್ ಇಲಾಖೆಯದ್ದು ನಿಜ, ಆದರೆ ಬೇಲಿಯೇ ಎದ್ದು ಹೊಲ ಮೇಯುವುದಕ್ಕೆ ಪೂರಕ ವಾತಾವರಣ ನಿರ್ಮಾಣ ಮಾಡುವಲ್ಲಿ ನಾಗರಿಕರ ಪಾತ್ರವನ್ನು ಅಲ್ಲಗಳೆಯುವಂತಿಲ್ಲ ಅಲ್ಲವೇ? 

ನಮ್ಮ ಸುತ್ತಲಿನ ಪರಿಸರದ ಉದಾಹರಣೆಯನ್ನೇ ತೆಗೆದುಕೊಳ್ಳಿ. ನಮ್ಮ ಕಾಲೊನಿ, ಓಣಿ, ಮನೆಯ ಸುತ್ತಲೂ ಕಸ, ಕೊಳಚೆ, ನೀರು ನಿಂತ ಪರಿಸರ ಸೊಳ್ಳೆಗಳು ಹುಟ್ಟಿ ಬೆಳೆದು ನಮ್ಮನ್ನು ನಮ್ಮ ಮನೆಯಲ್ಲೇ ಕಚ್ಚಿ ಡೇಂಗು, ಚಿಕನ್ ಗುನ್ಯಾ, ಮಲೇರಿಯಾದಂತಹ ರೊಗ ರುಜಿನಗಳು ಹೆಚ್ಚಲು ಹೇಳಿ ಮಾಡಿಸಿದ ಪೂರಕ ವಾತಾವರಣವಲ್ಲವೇ? ಅರೆ, ನಮ್ಮ ನಗರದ ಸ್ವಚ್ಚತೆ ನಗರಪಾಲಿಕೆಯ ಆದ್ಯ ಕೆಲಸವಲ್ಲವೇ? ನಾವು ತೆರಿಗೆ ಕೊಡುವುದು ಯಾತಕ್ಕೆ? ಎಂಬುದು ನಮ್ಮ ತರ್ಕವಾಗಬಹುದು. ಹೌದು, ಇದು ನಿಶ್ಟಿತವಾಗಿ ನಗರಪಾಲಿಕೆಯ ಕರ್ತವ್ಯವೇ.ಇಲ್ಲಾ ಅಂದವರಾರು. ಆದರೆ ನಿರುಪಯುಕ್ತ ನಗರ ಸೇವಕರನ್ನು ( ಕಾರ್ಪೋರೇಟರ) ಓಟು ಹಾಕಿ/ಹಾಕದೇ ಆರಿಸಿ ಕಳಿಸಿ ನಗರಪಾಲಿಕೆಯ ಈ ದಿವ್ಯ ನಿರ್ಲಕ್ಷ್ಯಕ್ಕೆ ಪೂರಕ ವಾತಾವರಣವನ್ನು ನಿರ್ಮಾಣ ಮಾಡಿದವರಾರು? 

ದೇಶ, ಊರು, ಕೇರಿಯ ವಿಷಯವೇಕೆ, ನಮ್ಮ ನಮ್ಮ ಮನೆಯ ವಾತಾವರಣವನ್ನೇ ತೆಗೆದುಕೊಂಡರೆ, ಇಂದಿನ ಮನೆ ಹಾಗು ಮನಗಳ ಮೇಲೆ ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನದ ಮತ್ತು ಅದಕ್ಕೆ ತಕ್ಕ ಸಾಮಾನು ಸರಂಜಾಮುಗಳ ಪ್ರಭಾವ ಈ ಪರಿಯದಾಗಿದೆ ಎಂದರೆ ನಾವಿಂದು ಮಾನವೀಯ ಸಂಬಂಧಗಳ ಮೌಲ್ಯವನ್ನು ಮರೆತುಹೋಗಲು ಪೂರಕವಾದ ವಾತಾವರಣ ನಿರ್ಮಾಣವಾಗಿರುವುದು ಒಮ್ಮೆ ಸಮಾಧಾನದಿಂದ ಕೂತು ಅವಲೋಕನ ಮಾಡಿದರೆ ಅನುಭವಕ್ಕೂ ಬರಬಹುದು.

ನಾವೆಲ್ಲ ಬಾಲ್ಯದಲ್ಲಿ ಸಾಧುವಿನ ಮನೆಯ ಗಿಳಿ ಹಾಗೂ ಕಟುಕನ ಮನೆಯ ಗಿಳಿಯ ಮಾತುಗಳ ಕಥೆಯನ್ನು ಕೇಳಿ ಬೆಳೆದವರೇ.ಆ ಕಥೆಯ ಮರ್ಮವೇ ಪೂರಕ ವಾತಾವರಣ ನಿರ್ಮಾಣದ ಮಹತ್ವ ಸಾರುವುದಾಗಿದೆ.

ಜಗತ್ತಿನ, ದೇಶದ, ಸಮಾಜದ ಅಥವಾ ಮನೆಯ ಪರಿಸ್ಥಿತಿಯಿಂದ ನಮ್ಮ ಸುಖ, ಶಾಂತಿ, ಸಮಾಧಾನಗಳು ಭಂಗವಾಗಿದ್ದರೆ ಅದಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗುವುದರಲ್ಲಿ ನಮ್ಮ ಪಾತ್ರವನ್ನು ಅರಿತು ಇತರರನ್ನು ದೂಷಿಸುವುದಕ್ಕು ಮುನ್ನ, ನಮ್ಮ ವಿಚಾರ-ವ್ಯವಹಾರಗಳನ್ನು ಸುಧಾರಿಸಿಕೊಳ್ಳುವ ಪ್ರಯತ್ನ ಮಾಡಬಹುದಲ್ಲವೇ?


-ಡಾ.ಜಯಂತ ಕಿತ್ತೂರ 

ಕಾಮೆಂಟ್‌ಗಳು

  1. ನಿಮ್ಮ ಪ್ರಕಾರ ಟ್ರಂಪ್, ನಮ್ಮ್ ಶೋಲೇ ಆತ್ಮೀಯ ನಾದ ಗಬ್ಬರ್ ಗೆ ಸಮ್ಮಾನ?? 😛😛😛😛 ಟ್ರಂಪ್ ನ ಇಬ್ಬಗೆಯ ನೀತಿಗಳು ದುಷ್ಟತನದ ಪರಮಾವಧಿ ಅನಿಸುತಿದೆ... ಅತ್ತ್ಯುತ್ತಮ ಲೇಖನ

    ಪ್ರತ್ಯುತ್ತರಅಳಿಸಿ
  2. Charity begins at home. Your article has aptly focuses on how an individual can help bring about the change by changing his thinking pattern and behaviour

    ಪ್ರತ್ಯುತ್ತರಅಳಿಸಿ
  3. ಗೋನವಾರ ಕಿಶನ್ ರಾವ್ಜೂನ್ 14, 2025 ರಂದು 11:59 AM ಸಮಯಕ್ಕೆ

    ಪೂರಕಾಂಶಗಳು ಅದ್ಭುತ ಬರಹ ಏನನ್ನೂ ನೇರವಾಗಿ ಹೇಳದೆ ಏಳು ದಶಕಗಳ ವರೆಗೆ ಹಿಂದಿನ ಸರಕಾರ ಸಾಧಿಸದನ್ನು,ಇಂದಿನ ಸರಕಾರ ಒಂದು ದಶಕದ ದಲ್ಲಿ ಸಾಧಿಸಿರುವದನ್ನು ಹೇಳುವ ಅಂಕಣ ವಿಸ್ಮಯ ತಾರದೇ ಇದ್ದೀತೆ !!ಅಭಿನಂದನೆಗಳು.

    ಪ್ರತ್ಯುತ್ತರಅಳಿಸಿ
  4. ಯಾವ ಕೆಲಸವೂ ಯಶಸ್ವಿ ಆಗಬೇಕಾದರೆ ಅದರ ಆರಂಭ ಚೆನ್ನಾಗಿರಬೇಕು. Well begun is half done ಅಂದಹಾಗೆ.‌ ಆರಂಭ ಚೆನ್ನಾಗಿರಬೇಕು ಅಂದರೆ preperation ಚೆನ್ನಾಗಿರಬೇಕು.‌ ಇದುವೇ ಪೂರಕ ವಾತಾವರಣ. ಇದರ ಸುತ್ತಲೂ ಹೆಣೆದ ಲೇಖನ ಮಾರ್ಮಿಕವಾಗಿದೆ.

    ಪ್ರತ್ಯುತ್ತರಅಳಿಸಿ
  5. ಪರಿಪೂರ್ಣ ಉದಾಹರಣೆಗಳ ಬರವಣಿಗೆಯೊಂದಿಗೆ ಪ್ರಸ್ತುತ ವಿಷಯಗಳ ಉತ್ತಮ ಕವರೇಜ್.

    ಪ್ರತ್ಯುತ್ತರಅಳಿಸಿ
  6. ಹಳೆಯ ಕಾಲದ ಶೈಲಿ ಮತ್ತು ಈಗಿನ ಕಾಲದ ಶೈಲಿಯ ಹೋಲಿಕೆ ಕಂಡುಬಂದ ಸುಂದರ ಲೇಖನ.ಧನ್ಯವಾದಗಳು🙏🙏💐

    ಪ್ರತ್ಯುತ್ತರಅಳಿಸಿ
  7. The article has very nice, comparison of old and new moral values that have been written wonderfully.

    ಪ್ರತ್ಯುತ್ತರಅಳಿಸಿ
  8. Jayant, liked this POV.
    For any seed to germinate , disease to spread, social evil to prosper , the ‘conditions’ we create, are basis.

    ಪ್ರತ್ಯುತ್ತರಅಳಿಸಿ
  9. ಲೇಖನ ಸಮಗ್ರವಾಗಿದೆ. ಹಂತ ಹಂತವಾಗಿ ಅಂಶಗಳ ಚರ್ಚೆ ನಡೆದು ಒಂದು ಸಮೀಕರಣೋಪಾದಿಯಲ್ಲಿ ವಿಷಯ ಮಂಡಿಸಲಾಗಿದ್ದು ಪ್ರಭಾವಶಾಲಿಯಾಗಿದೆ. ಲೇಖನದ ಗತಿ ಸಹ ಸರಾಗವಾಗಿದೆ. ಅಭಿನಂದನೆ.

    ಪ್ರತ್ಯುತ್ತರಅಳಿಸಿ
  10. Very thought provoking article with apt illustrations. It's a reflection on your concern for building a better society. I am very proud that you are making the best use of your time after retirement.

    ಪ್ರತ್ಯುತ್ತರಅಳಿಸಿ
  11. Very well compiled and narrated with enough examples.... Kudos to you for not only the style of writing but also the broad knowledge of the different subjects you have. Keep writing ! Keep en lighting...

    ಪ್ರತ್ಯುತ್ತರಅಳಿಸಿ
  12. ವಿಚಾರ ಮಾಡುವಂಥ ವಿಷಯಗಳನ್ನು ತೊಗೊಂಡು ಜ್ವಲಂತ ಸಮಸ್ಯೆ ಗಳ ಬಗ್ಗೆ ತಮ್ಮ ಅಭಿಪ್ರಾಯ ಗಳನ್ನಾಗಿ ತುಂಬಾ ಚೆನ್ನಾಗಿ ವ್ಯಕ್ತ ಪಡಿಸಿದ್ದೀರಿ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನನ್ನ ಬಿಳಿ ತಲೆಯ ಬಣ್ಣಗಳು ...(ಭಾಗ-೧)

ದಿಖಾವೇಪೆ ಮತ್ ಜಾವೋ ಅಕಲ್ ಲಗಾವೋ...

ಇವಾ ಯಾವೂರವಾ...