ಪರಾವಲಂಬಿ
ಮೊನ್ನೆ ಶ್ರೀ ವಾದಿರಾಜರು ಶ್ರೀಮದ್ ವ್ಯಾಸಮಹರ್ಷಿಗಳನ್ನು ಭಜಿಸಲು ರಚಿಸಿದ
ಮಧ್ವಾಂತರ್ಗತ ವೇದವ್ಯಾಸ ಕಾಯೊ ಶುದ್ಧ ಮೂರುತಿಯೆ ಸರ್ವೇಶ ...
ಎಂಬ ಪದ ಕೇಳುತ್ತಿದ್ದೆ. ಅದರಲ್ಲಿ ಮುಂದೆ ಬರುವ ಒಂದು ಸಾಲು
.... ಕ್ರಿಮಿಯಿಂದ ರಾಜ್ಯವಾಳಿಸಿದೆ ಜಗತ್‍ಸ್ವಾಮಿ ನೀನೆಂದು ತೋರಿಸಿದೆ... ಎಂದು ಬರುತ್ತದೆ. ಇಂದಿನ ಆಧುನಿಕತೆಯ ದಿನಗಳಲ್ಲಿ ಈ ಭಾಗದಲ್ಲಿ ಬರುವ ಕ್ರಿಮಿಯಿಂದ ರಾಜ್ಯವಾಳಿಸಿದೆ ಎಂಬುದನ್ನು ಈ ಕೋವಿಡ್ ಬರುವುದಕ್ಕೂ ಮುನ್ನ ಮನವರಿಕೆ ಮಾಡಿಕೊಳ್ಳುವುದು ಸ್ವಲ್ಪ ಕಷ್ಟದ ಕೆಲಸವಾಗಿತ್ತು.
ಆದರೆ, ಈ ಶತಮಾನದ ಮಹಾಮಾರಿ ಕೋವಿಡ್ ನಿಂದಾಗಿ ಇಡೀ ಭೂಮಂಡಲವೇ ತಲ್ಲಣಿಸಿ ಹೋಯಿತು. ಇತ್ತೀಚಿನ ತಲೆಮಾರುಗಳು ಕಂಡೂ ಕೇಳರಿಯದ ಸಾವು-ನೋವು, ಕಷ್ಟ-ನಷ್ಟ, ದುಃಖ-ದುಮ್ಮಾನ, ಮಾನಸಿಕ ಖಿನ್ನತೆ-ಹತಾಶೆ, ವ್ಯಾಪಾರ-ವ್ಯವಹಾರಗಳ ಮಂದಗತಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಲಾಕ್ ಡೌನ್ ಮುಂತಾದ ಅನೇಕ ಋಣಾತ್ಮಕ ಪರಿಣಾಮಗಳನ್ನು ಜನ ಸಾಮಾನ್ಯರು ಅನುಭವಿಸಿದರು. ಜಾಗತಿಕವಾಗಿ ಆರ್ಥಿಕ ಪ್ರಗತಿಯಲ್ಲಿ ಕುಂಠಿತವಾಯಿತು. ಜಗತ್ತಿನ ಹಿಂದುಳಿದ-ಮುಂದುವರಿದ, ಬಡವ-ಶ್ರೀಮಂತ, ಹೀಗೆ ಭೇದವಿಲ್ಲದೇ ಎಲ್ಲ ಖಂಡಗಳ ಎಲ್ಲ ದೇಶಗಳ ಜನರು ಸಾವು ಬದುಕಿನೊಂದಿಗೆ ಹೋರಾಡುವಾಗ ಅವರನ್ನು ಹೇಗೆ ರಕ್ಷಿಸಬೇಕು ಎಂದು ತಿಳಿಯದೇ ದೇಶಗಳನ್ನು ಆಳುವವರು ಹತಾಶರಾದರು. ಇದೇ ನೋಡಿ ಆ ಕ್ರಿಮಿಯಿಂದ ರಾಜ್ಯವಾಳಿಸಿದೆ ಎಂಬ ಸಾಲುಗಳ ಅರ್ಥ ಎಂದು ಮನವರಿಕೆ ಆಯಿತು. ಇರಲಿ.
ಈ ಮಹಾಮಾರಿ ಕೋವಿಡ್ ನಿಂದಾಗಿ ಕೆಲವೊಂದು ಅನಿರೀಕ್ಷಿತ ಲಾಭಗಳು ಅಥವಾ ಉತ್ತಮ ಬದಲಾವಣೆಗಳೂ ಸಾರ್ವಜನಿಕ ಜೀವನದಲ್ಲಿ ಕಂಡುಬಂದವು. ಉದಾಹರಣೆಗೆ, ಸಾರ್ವಜನಿಕ ಆರೋಗ್ಯದ ಬಗ್ಗೆ ಜಾಗ್ರತಿ ಮೂಡಿತು, ಬಹುತೇಕ ಕಂಪನಿಗಳು ದೂರದಿಂದ ಕೆಲಸ ಮಾಡುವ ವ್ಯವಸ್ಥೆ ರೂಪಿಸಿಕೊಂಡ ಪರಿಣಾಮವಾಗಿ ಕೆಲಸ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ ಸಾಧ್ಯವಾಯಿತು. ಇದರಿಂದ ದೈನಂದಿನ ದಿನಚರಿ ಬದಲಾಯಿತು ಮತ್ತು ಸಂಚಾರ ಕಡಿಮೆಯಾಯಿತು, ಸಮಯ ಮತ್ತು ಹಣ ಎರಡರ ಉಳಿತಾಯವಾಯಿತು. ಡಿಜಿಟಲ್ ತಂತ್ರಜ್ಞಾನದ ಅಳವಡಿಕೆ ಶಿಕ್ಷಣ, ಆರೋಗ್ಯ (ಟೆಲೆಮೆಡಿಸಿನ್), ಮತ್ತು ವ್ಯಾಪಾರ ವ್ಯವಹಾರ ಕ್ಷೇತ್ರಗಳನ್ನು ವೇಗವಾಗಿ ರೂಪಾಂತರ ಗೊಳಿಸಿತು. ಜನಸಾಮಾನ್ಯರು ವಿಡಿಯೋ ಕಾಲ್, ಡಿಜಿಟಲ್ ಪಾವತಿ ಮತ್ತು ಆನ್‌ಲೈನ್ ಸೇವೆಗಳಿಗೆ ಹೆಚ್ಚು ಪರಿಚಿತರಾದರು. ಲಾಕ್‌ಡೌನ್ ಸಂದರ್ಭದಲ್ಲಿ ವಾಹನಗಳಿಂದಾದ ಮಾಲಿನ್ಯ ಮತ್ತು ಕೈಗಾರಿಕಾ ಮಸಿವಾಯು ಎಮೀಷನ್ ಕಡಿಮೆಯಾಯಿತು. ಸ್ವಸಹಾಯ ಸಮಿತಿಗಳು, ಆಹಾರ ಬ್ಯಾಂಕುಗಳು ಮತ್ತು ಸ್ಥಳೀಯ ಸಮುದಾಯ ಸೇವೆಗಳು ಬಲವತ್ತಾದವು. ತಾತ್ಕಾಲಿಕವಾದರೂ ನೆರೆಹೊರೆಯವರು, ಹಿರಿಯರನ್ನು ವಿಚಾರಿಸುವ ಪದ್ಧತಿ ಹೆಚ್ಚಾಯಿತು. ಹಲವರು ತಮ್ಮ ಜೀವನಶೈಲಿಯನ್ನು ಮರುಪರಿಶೀಲಿಸಿದರು. ಆರೋಗ್ಯ,ಕುಟುಂಬ ಮತ್ತು ವೈಯಕ್ತಿಕ ಸುಖಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡಲು ಪ್ರಾರಂಭಿಸಿದರು. ಈ ಲಾಕ್ ಡೌನ್ ಸಮಯದಲ್ಲಿ ವಿವಿಧ ಡಿಜಿಟಲ್ ಸಂಪರ್ಕ ಮಾಧ್ಯಗಳ ಸಹಾಯದಿಂದ ಬೇರೆ ಬೇರೆ ಸ್ಥಳಗಳಲ್ಲಿ, ಮನೆಗಳಲ್ಲಿ ಬಂಧಿತವಾದ ಮಿತ್ರ ಬಾಂಧವರು, ಸಮಾನ ಮನಸ್ಕರು ವಿವಿಧ ತೆರನಾದ ಸಾಮಾಜಿಕ ಅಥವಾ ಸಾಂಸ್ಕೃತಿಕ ಗುಂಪುಗಳನ್ನು ಹುಟ್ಟುಹಾಕಿ ಬಾರಂಬಾರಿ ಕೂತಲ್ಲಿಂದಲೇ ಸಂಪರ್ಕ ಸಾಧಿಸಿ ಸಾಮಾಜಿಕ/ಮಾನಸಿಕ ಪ್ರತ್ಯೇಕತೆ (isolation) ಯಿಂದ ಹೊರಬಂದರಷ್ಟೇ ಅಲ್ಲ ಜೊತೆಗೆ ತಮ್ಮಲ್ಲಿ ಹುದುಗಿದ್ದ ವಿವಿಧ ಕಲೆ, ಸಾಹಿತ್ಯ, ಸಂಗೀತ ಪ್ರತಿಭೆಗಳ ಪ್ರಕಟಣೆಗೆ ಅವಕಾಶಗಳನ್ನು ಕಲ್ಪಿಸಿಕೊಂಡರು. ಈ ರೀತಿ ಹುಟ್ಟಿಕೊಂಡ ಅನೇಕ ಸಂಗೀತ, ಸಾಹಿತ್ಯದ ವಾಟ್ಸ್ಯಾಪ್ ಗುಂಪುಗಳ ಸದಸ್ಯತ್ವದ ಲಾಭ ಪಡೆದವರಲ್ಲಿ ನಾನೂ ಒಬ್ಬ. ಕೋವಿಡ್ ಮಹಾಮಾರಿ, ಲಾಕ್ ಡೌನ್ ಎಲ್ಲಾ ಮಾಯವಾದ ಬಳಿಕವೂ ಆ ಗುಂಪುಗಳ ಚಟುವಟಿಕೆಗಳು ಅಬಾಧಿತವಾಗಿ ಮುಂದುವರೆದಿವೆ. ಇತ್ತೀಚಿಗೆ ನಿವೃತ್ತಿಯ ನಂತರದ ದಿನಗಳಲ್ಲಿ ನನ್ನ ದಿನದ ಸಮಯವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಸಹಕಾರಿಯಾಗಿದೆ.
ಕೆಲದಿನಗಳ ಹಿಂದೆ ಕನ್ನಡ ಸಾಹಿತ್ಯಾಸಕ್ತರ ಸಾಹಿತ್ಯದ ಚರ್ಚಾ ವಾಟ್ಸ್ಯಾಪ್ ವೇದಿಕೆಯಲ್ಲಿ ಮೇಲಿನ ಚಿತ್ರ೧ ರಲ್ಲಿಯ ಕಾಗೆ ಮತ್ತೂ ವೃಷಭಗಳು ರಸ್ತೆಯಲ್ಲಿ ಭೇಟಿಯಾದಂತೆ ನಿಂತ ಫೋಟೊದಿಂದ ಪ್ರೇರಿತವಾಗಿ ಸ್ವರಚಿತ ಕವನಗಳನ್ನು ಗುಂಪಿನಲ್ಲಿ ಹಂಚಿಕೊಳ್ಳುವ ಕೋರಿಕೆಯ ಮೇರೆಗೆ ವಿವಿಧ ಬಗೆಯ ಕಲ್ಪನೆಗಳು ಮತ್ತೂ ಅದಕ್ಕೆ ತಕ್ಕಂಥಾ ಕವನಗಳ ಸಿಂಚನ ಮತ್ತೂ ಅವುಗಳ ವಿಶ್ಲೇಷಣೆ/ವಿಮರ್ಶೆಗಳ ಸರಮಾಲೆಗಳು ನಡೆದವು. ಆದರೆ, ಇಂಜಿನಿಯರಿಂಗ್ ಪ್ರಾಧ್ಯಾಪಕನಾಗಿ ನಿವೃತ್ತನಾದ ನನಗೆ ಅನಿಸಿದ್ದೇನೆಂದರೆ, ಅಕಸ್ಮಾತಾಗಿ ರಸ್ತೆಯಲ್ಲಿ ಸಿಕ್ಕ ತನ್ನ ಹಳೇಯ ಮಿತ್ರ ಕಾಗೆಗೆ ತನ್ನ ಮೂಗಿನಲ್ಲಿ ಬೀಡು ಬಿಟ್ಟು ತುರುಕೆ ಉಂಟು ಮಾಡುವ ಆ ಪರಾವಲಂಬಿ ಕ್ರಿಮಿಗಳನ್ನು ಆಸ್ವಾದಿಸಲು ರಸದೌತಣ ನೀಡಿ ಆ ಗೂಳಿ ತನ್ನ ಕತ್ತನ್ನು ಬಗ್ಗಿಸಿ ತನ್ನ ಮೂಗಿನ ಹೊಳ್ಳೆಯನ್ನು ಹಸಿದ ಕಾಗೆಯ ಚುಂಚಿನ ನೇರಕ್ಕೆ ಬರುವಂತೆ ಬಾಗಿ ನಿಂತಿದೆ ಎಂದು.
ತಾವೂ ಹಳ್ಳಿಗಳ ಹೊಲಗದ್ದೆಗಳಲ್ಲಿ ಹುಲ್ಲು ಮೇಯುವ ಆಕಳು/ಎಮ್ಮೆ/ಎತ್ತುಗಳ ಬೆನ್ನಿನ ಮೇಲೆ ಕೂತಿರುವ ಕಾಗೆ/ಗುಬ್ಬಿಯನ್ನು ಅಥವಾ ಪಕ್ಕದಲ್ಲಿ ಓಡಾಡುವ ಕೊಕ್ಕರೆಗಳನ್ನು ನೋಡಿರಬಹುದು. ರಾಸುಗಳ ಜೊತೆಯಲ್ಲಿ ಈ ಕಾಗೆ, ಗುಬ್ಬಿ ಅಥವಾ ಕೊಕ್ಕರೆಗಳು ಹೊಲ ಗದ್ದೆಗಳಲ್ಲಿ ಕಾಣಿಸಲು ಕಾರಣ ರಾಸುಗಳು ಹುಲ್ಲು , ಹಸಿರು ಗಿಡಗಂಟಿಗಳನ್ನು ಕೀಳಿ ಮೇಯುವಾಗ ಅಲ್ಲಿ ಅಡಗಿ ಕುಳಿತಿರುವ ಕ್ರಿಮಿಕೀಟಗಳನ್ನು ತಿನ್ನಲು ಎನ್ನುವುದು. ಇದಲ್ಲದೇ, ಹುಲ್ಲು ಮೇಯುವಾಗ ರಾಸುಗಳ ಮೂಗು, ಬಾಯಿ ಅಥವಾ ಕಿವಿಗಳಲ್ಲಿ ಅನೇಕ ಬಗೆಯ ಪರಾವಲಂಬಿ ಕ್ರಿಮಿಕೀಟಗಳು ಹೊಕ್ಕು ಅಲ್ಲೇ ತಮ್ಮ ಸಂಸಾರ ಹೂಡಿ ರಾಸುಗಳ ಆಯಾ ಅವಯವಗಲ್ಲಿ ತುರುಕೆ ಮತ್ತು ಚರ್ಮದ ಗಾಯಗಳನ್ನು ಮಾಡುತ್ತವೆ. ಅಲ್ಲದೇ ರಾಸುಗಳ ಬೆನ್ನಿನ ಭಾಗದಲ್ಲೂ ಅನೇಕ ತರಹದ ಸಣ್ಣ ಕ್ರಿಮಿಕೀಟಗಳು ಮನೆ ಮಾಡಿಕೊಂಡಿರುತ್ತವೆ. ಅಂತಹ ಕ್ರಿಮಿಕೀಟಗಳನ್ನು ತಿನ್ನಲು ಕಾಗೆ, ಗುಬ್ಬಿಗಳು ಈ ರಾಸುಗಳ ಮೇಲೆ ಬಂದು ಕೂಡುವುದುಂಟು. ಇದರಿಂದ ಆ ದನಕರುಗಳಿಗೆ ತುರಿಕೆ, ಗಾಯ ಮುಂತಾದವು ಕಡಿಮೆಯಾಗಲು ಸಹಕಾರಿ. ಹಾಗಾಗಿ ಅವೂ ಈ ಪಕ್ಷಿಗಳ ಸಾಮಿಪ್ಯ ಬಯಸುವದುಂಟು. ಹೀಗೆ ಒಂದು ರೀತಿಯಲ್ಲಿ ಆ ಪ್ರಾಣಿ ಪಕ್ಷಿಗಳಲ್ಲಿಯ ಸಮನ್ವಯತೆಯ ಸಂಬಂಧವನ್ನು ನಾವು ನೋಡಬಹುದು. ಈ ಮಾತಿಗೆ ಪುಷ್ಟಿ ಕೊಡುವ ಕೆಲವು ಫೋಟೋಗಳ ಸಂಗ್ರಹ ಚಿತ್ರ ೨ ನೋಡಬಹುದು.
ಆಕಳು, ಎತ್ತುಗಳೆಂಬ ರಾಸುಗಳಷ್ಟೇ ಅಲ್ಲ ಮಾನವನ ದೇಹದಲ್ಲಿಯೂ ಅನೇಕ ತರಹದ ಪರಾವಲಂಬಿ ಬ್ಯಾಕ್ಟೀರಿಯಾ ಮುಂತಾದ ಸುಕ್ಷ್ಮಾಣುಜೀವಿಗಳ ಕಾಲೊನಿಗಳು ತಲೆತಲಾಂತರದಿಂದ ಜೀವಿಸುತ್ತಾ ಬಂದಿವೆ. ಆತ್ಮ ಎಂಬ ಜೀವಿಯು ಈ ಮನುಷ್ಯ ದೇಹದಲ್ಲಿ ತಾನು ಒಬ್ಬಂಟಿಯಾಗಿರದೇ ಅಸಂಖ್ಯಾತ ಸೂಕ್ಷ್ಮ ಜೀವಿಗಳೊಂದಿಗೆ ಸಮನ್ವಯತೆಯಲ್ಲಿ ಬಾಳುತ್ತಿದ್ದಾನೆ. ನಾವು ಈ ದೇಹ ನನ್ನದು ಅಥವಾ ಈ ದೇಹವೇ ನಾನು ಎಂದು ತಿಳಿದಿರಲು, ಈ ದೇಹ ನಮ್ಮ ಜೊತೆಗೆ ಅಸಂಖ್ಯಾತ ಸೂಕ್ಷ್ಮ ಜೀವಿಗಳಿಗೂ ಆಶ್ರಯ ತಾಣವಾಗಿದೆ. ಅಷ್ಟೇ ಅಲ್ಲ, ಒಂದು ರೀತಿಯಲ್ಲಿ ಆ ಸೂಕ್ಷ್ಮಾಣುಜೀವಿಗಳು ನಮ್ಮ ತನು ಮನವನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಿವೆ ಎಂದೆನಿಸುವಂತೆ ಭಾಸವಾಗುತ್ತದೆ ಎಂಬುದು ಬಲ್ಲ ವೈದ್ಯರ ಅಭಿಪ್ರಾಯವಾಗಿದೆ.
ವೈದ್ಯಕೀಯ ಶಾಸ್ತ್ರದ ಒಂದು ಅಂದಾಜು/ ಅಭಿಪ್ರಾಯದ ಪ್ರಕಾರ ಈ ಅಸಂಖ್ಯಾತ ಸೂಕ್ಷ್ಮಜೀವಿಗಳು ತಾಯಿಯ ಗರ್ಭಾಶಯದಲ್ಲಿದ್ದಾಗಿನಿಂದಲೇ ಮಗುವಿನೊಂದಿಗೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಮುಂದೆ ಮಗು ತಾಯಿಯ ಗರ್ಭದಿಂದ ಹೊರಬರುವಾಗ ತಾಯಿಯ ಯೋನಿಯಲ್ಲಿಯ ಇತರ ಅನೇಕ ಸೂಕ್ಷ್ಮಾಣುಜೀವಿಗಳು ಮಗುವಿನ ದೇಹವನ್ನು ಸೇರುತ್ತವೆಯಂತೆ.
ಮಗು ಹುಟ್ಟಿನಿಂದ ಹರೆಯದ ತನಕ ತನ್ನ ತಂದೆ ,ತಾಯಿ, ಬಂಧು ಬಳಗದವರ ಸಂಪರ್ಕದಿಂದ ಮತ್ತು ತಾನು ಉಂಡು, ಆಡಿ, ಬೆಳೆದ ಪರಿಸರದಿಂದ ಅನೇಕ ಸೂಕ್ಷ್ಮಾಣುಜೀವಿಗಳನ್ನು ತನ್ನಲ್ಲಿ ಸ್ವಿಕರಿಸುತ್ತಾ, ಅವುಗಳೊಂದಿಗೆ ಸಮನ್ವಯತೆ ಮತ್ತು ರೋಗ ಪ್ರತಿರೋಧ ಶಕ್ತಿಯನ್ನು ವೃದ್ಧಿಗೊಳಿಸುತ್ತಾ ಹೋಗಿ ಮುಂದೆ ತನ್ನ ಜೀವಿತಾವಧಿಯಲ್ಲಿ ಗಾಳಿ , ನೀರು, ಆಹಾರ ಮುಂತಾದವುಗಳಿಂದಾಗಿ ಇತರ ಸೂಕ್ಷ್ಮಾಣುಜೀವಿಗಳು ತನ್ನ ದೇಹವನ್ನು ಸೇರಿದಾಗ ಅವನ್ನು ಪರಕೀಯ ದಾಳಿಕೋರರೆಂದು ತಿಳಿದು ಅವನ್ನು ಸಕ್ಷಮವಾಗಿ ಎದುರಿಸಲು ಸೂಕ್ತ ಪ್ರತಿರೋಧಕಗಳನ್ನು (anti bodies) ಹುಟ್ಟುಹಾಕಿಕೊಳ್ಳುತ್ತಾನೆ.
ವೈದ್ಯಕೀಯ ಅಧ್ಯಯನಗಳ ಪ್ರಕಾರ ಅನೇಕಾನೇಕ ಸೂಕ್ಷ್ಮಾಣುಜೀವಿಗಳು ನಮ್ಮ ಬಾಯಿಯಿಂದ ಪ್ರಾರಂಭವಾಗಿ ಮಲಮೂತ್ರ ವಿಸರ್ಜನೆಯ ಗುದದ್ವಾರ, ಮೂತ್ರನಾಳದ ತನಕ ತಮಗೆ ಅನುಕೂಲವಾದ ಅನೇಕ ಸ್ಥಳಗಳಲ್ಲಿ ಕಾಲನಿಗಳನ್ನು ಕಟ್ಟಿಕೊಂಡು ಜೀವಿಸುತ್ತವೆ. ಅಷ್ಟೇ ಅಲ್ಲದೇ ಮೂಗಿನಿಂದ ಗಂಟಲಿನ ತನಕ ವಿವಿಧ ಸ್ಥಳಗಳಲ್ಲಿ ಕಾಯಂ ಠಿಕಾಣಿ ಹೂಡಿರುತ್ತವೆ.ಇನ್ನು ನಮ್ಮ ತಲೆಗೂದಲು, ಚರ್ಮಸಂದುಗಳಲ್ಲೂ ವಿವಿಧ ಪ್ರಕಾರದ ಸೂಕ್ಷ್ಮಜೀವಿಗಳು ವಾಸವಾಗಿರುತ್ತವೆ. ವಿವಿಧ ಮನುಷ್ಯರ ಬೆವರಿನ ವಾಸನೆ ವಿವಿಧ ರೀತಿಯಾಗಿರುವಲ್ಲಿ ಈ ಸೂಕ್ಷ್ಮಾಣುಗಳ ಪಾತ್ರ ಮುಖ್ಯವಾಗಿದೆಯಂತೆ. ಅದಕ್ಕೇ ಏನೋ ಇಂಗ್ಲಿಷಿನಲ್ಲಿ ಹೇಳುವುದು You are known by the company that you keep ಎಂದು. ಈ ರೀತಿ ಮಾನವನ ದೇಹದಲ್ಲಿರುವ ಅಸಂಖ್ಯಾತ ಪರಾವಲಂಬಿ ಸೂಕ್ಷ್ಮಜೀವಿಗಳಲ್ಲಿ ಅನೇಕ ಜೀವಿಗಳು ಮಾನವನ ದೇಹದ ಆರೋಗ್ಯಕ್ಕೆ ಅಗತ್ಯ/ಉಪಯುಕ್ತವೂ ಆಗಿವೆ. ಡಾಕ್ಟರು ರೋಗಿಗೆ ದೀರ್ಘಕಾಲದ ಎಂಟಿಬಯೋಟಿಕ ಔಷದಿ ನೀಡಿದಾಗ ರೋಗಿಯ ಕರುಳಿನಲ್ಲಿರುವ ಆಹಾರ ಜೀರ್ಣಕ್ರಿಯೆಗೆ ಉಪಯುಕ್ತವಾದ ಪರಾವಲಂಬಿ ಬ್ಯಾಕ್ಟೀರಿಯಾಗಳ ಕಾಲೊನಿಗಳು ಹಾನಿಗೊಳಗಾದಾಗ, ವೈದ್ಯರು ಆ ಬ್ಯಾಕ್ಟೀರಿಯಾಗಳ ಕಾಲೊನಿಗಳ ಮರು ಬೆಳವಣಿಗೆಗೆ ಪ್ರತ್ತೇಕವಾಗಿ ಆ ಬ್ಯಾಕ್ಟೀರಿಯಾಗಳನ್ನು ಔಷಧದ ರೂಪದಲ್ಲಿ ರೋಗಿಗೆ ನೀಡುವುದುಂಟು.
ಇದೆಲ್ಲಾ ದೇಹದ ಒಳಗಿರುವ ಪರಾವಲಂಬಿ ಜೀವಿಗಳ ವಿಚಾರವಾದರೆ ಇನ್ನು ಮನುಷ್ಯನ ದೇಹದ ಮೇಲೆ ಇರುವ ಪರಾವಲಂಬಿ ಜೀವಿಗಳಲ್ಲಿ ನಮ್ಮ ತಲೆಯಲ್ಲಿರುವ ಹೇನು ಒಂದು ಸಾಮಾನ್ಯ ಉದಾಹರಣೆ. ನಾವು ಚಿಕ್ಕವರಿದ್ದಾಗ ತಲೆಯಲ್ಲಿ ಹೇನು ಆಗುವುದು ಸರ್ವೇಸಾಮಾನ್ಯವಾಗಿತ್ತು. ಅದೂ ಗಂಡು ಹುಡುಗರಿಗಿಂತಾ ಹೆಣ್ಣುಮಕ್ಕಳ ಉದ್ದನೆಯ ಜಡೆಯ ತಲೆಯಲ್ಲಿ ಹೇನು ಆಗುವುದು ಜಾಸ್ತಿ ಇದ್ದಿತು.ಇತರರ ತಲೆಯೆಲ್ಲಾದ ಹೇನು ಹುಡುಕಿ ಹೆಕ್ಕಿ ತೆಗೆದು ಕೊಲ್ಲುವುದರಲ್ಲೂ ಹೆಣ್ಣುಮಕ್ಕಳದ್ದೇ ಮೇಲುಗೈ. ಈ ಪ್ರವೃತ್ತಿ ಮಾನವರಷ್ಟೇ ಅಲ್ಲದೇ ಮಂಗ, ಚಿಂಪಾಂಜಿಗಳಲ್ಲೂ ಕಾಣಬಹುದು. ತಲೆಯಲ್ಲಿ ಕೂದಲು ದಟ್ಟವಾಗಿದ್ದು ತಲೆಯ ಭಾಗದಲ್ಲಿ ಜಾಸ್ತಿ ಬೆವರು ಬಿಡುವ ಪ್ರವ್ರತ್ತಿ ಇದ್ದು ನಿಯಮಿತವಾಗಿ ಸ್ವಚ್ಚವಾಗಿ ತಲೆಸ್ನಾನ ಮಾಡದವರ ತಲೆಗಳಲ್ಲಿ ಹೇನುಗಳು ಇರುವುದು ಸರ್ವೇಸಾಮಾನ್ಯವಾಗಿತ್ತು. ಶಾಲೆಯಲ್ಲಿ ಈ ತಲೆತುಂಬಾ ಹೇನಾಗಿ ತಲೆ ತುರಿಸುವವರ ಪಕ್ಕ ನಾವೇನಾದರು ಒಂದು ದಿನ ಕೂತರೂ ಮರುದಿವಸ ನಾವೂ ನಮ್ಮ ತಲೆ ತುರಿಸುವುದು ಕಟ್ಟಿಟ್ಟ ಬುತ್ತಿ. ಇಂದಿನ ಡಿಜಲೀಕರಣದ ದಿನಗಳಲ್ಲಿ ಪೆನ್ ಡ್ರೈವ ಮುಖಾಂತರ ಒಂದು ಕಂಪ್ಯೂಟರ್ ನಿಂದ ಇನ್ನೊಂದು ಕಂಪ್ಯೂಟರ್ ಗೆ ಅಥವಾ ಇಂಟರ್ನೆಟ್ ಮುಖಾಂತರ ಹರಡುವ ಸಾಫ್ಟವೇರ್ ವೈರಸ್ ತರಹ.
ಆದರೆ ಇತ್ತೀಚಿಗೆ ಈ ಪರಾವಲಂಬಿ ಹೇನು ಹುಳುಗಳ ಪ್ರಮಾಣ ಗಂಡು ಹೆಣ್ಣಿನ್ನದೇ ಎಲ್ಲರ ತಲೆಗಳಲ್ಲಿ ಕಡಿಮೆಯಾಗಿವೆ. ಪ್ರಾಯಶಃ ಇಂದಿನ ಬಹಳಷ್ಟು ಮಕ್ಕಳು ಹೇನುಗಳನ್ನು ಕಂಡಿರಲಿಕ್ಕೂ ಇಲ್ಲ. ಇದಕ್ಕೆ ಮುಖ್ಯ ಕಾರಣಗಳೆಂದರೆ ಇಂದಿನ ಮಕ್ಕಳು ಮನೆ ಬಿಟ್ಟು ಬಯಲಿನಲ್ಲಿ ನಾಲ್ಕು ಮಕ್ಕಳ ಜೊತೆ ಬೆರೆತು ಹೆಚ್ಚಾಗಿ ಬೆವರು ಬರುವಂತೆ ಓಡಾಡಿ ಆಟ ಆಡುವುದು ತೀರಾ ಕಡಿಮೆ ಆಗಿದೆ. ಹೆಚ್ಚಿನ ಸಮಯ ಮಕ್ಕಳು ಡಿಜಿಟಲ್ ಆಟಗಳನ್ನು ಮನೆಯೊಳಗೆ ಒಬ್ಬರೇ ಕೂತು ಆಟ ಆಡುವುದರಿಂದ ತಲೆಯ ತಲೆಗೆ ಸಂಪರ್ಕ ಸಾಮಾನ್ಯವಾಗಿ ಕಡಿಮೆ ಆಗಿದೆ. ಅಲ್ಲದೇ ನಾಗರೀಕರಲ್ಲಿ ಹೆಚ್ಚಾದ ವೈಯಕ್ತಿಕತೆಯ/ಪ್ರತ್ಯೇಕತೆಯ ಮನೋಭಾವ. ಮನೆಗಳಲ್ಲಿ ಯಾರು ಒಬ್ಬರು ಬಳಸಿದ ಹಣಿಗೆ, ಹೇರ್ ಪಿನ್, ಸಾಬೂನು ಮುಂತಾದ ವಸ್ತುಗಳನ್ನು ಇನ್ನೊಬ್ಬರು ಬಳಸುವದಿಲ್ಲ. ಮನೆಯಲ್ಲಿ ಮತ್ತೂ ಇತರೆಡೆ ಎಲ್ಲರೂ ವೈಯಕ್ತಿಕ ಸ್ವಚ್ಛತೆಗೆ (Personal Hygiene) ಕೊಡುತ್ತಿರುವ ಆದ್ಯತೆ ಹೆಚ್ಚಾಗುತ್ತಿದೆ. ಹೇನು ನಿವಾರಕ ಔಷಧೀಯ ಶಾಂಪೂಗಳು ಸುಲಭವಾಗಿ ಲಭ್ಯವಿರುವಿಕೆ ಮತ್ತು ಆವಶ್ಯಕತೆ ಇರಲಿ ಬಿಡಲಿ ಅತಿಯಾದ ಔಷಧೀಯ ಶಾಂಪೂಗಳ ಬಳಕೆಯೂ ಹೆಚ್ಚಾಗಿದೆ. ಇದರಿಂದ ಹೇನುಗಳು ಉತ್ಪತ್ತಿ ಮತ್ತು ಹರಡುವಿಕೆ ಕಡಿಮೆಯಾಗುತ್ತದೆ. ಒಮ್ಮೆ ತಲೆಹುಳು ಕಂಡುಬಂದರೆ ತಕ್ಷಣವೇ ತಾಯಿ-ತಂದೆ ಚಿಕಿತ್ಸೆ ಕೊಡಿಸುತ್ತಾರೆ. ಹೀಗಾಗಿ ಅದು ಬೇರೆಯವರಿಗೂ ಹರಡುವ ಮುನ್ನವೇ ನಿಯಂತ್ರಣವಾಗುತ್ತದೆ. ಹಾಗೆ ನೋಡಿದರೆ ಈ ತಲೆ ಹೇನುಗಳ ಪ್ರಮಾಣ ಕಡಿಮೆ ಆಗುತ್ತಿರುವುದು ನಮ್ಮ ದೇಶ ಹೆಚ್ಚೆಚ್ಚು ಅಭಿವೃದ್ಧಿಶೀಲ ದೇಶ ಆಗುತ್ತಿರುವುದರ ದ್ಯೊತಕದಂತಾಗಿದೆ ಅಲ್ಲವೇ?
ಒಂದು ರೀತಿಯಲ್ಲಿ ಭೂಮಿಯಲ್ಲಿಯ ಎಲ್ಲ ಜೀವರಾಶಿಗಳು ಒಂದರಮೇಲೊಂದು ಅವಲಂಬಿತವಾಗಿ ಜೀವಿಸುವ ಒಂದು ಸಂಕೀರ್ಣ ಪರಾವಲಂಬಿ ಜಗತ್ತಾಗಿದೆ. ಆದರೆ, ಆಧುನಿಕ ಮಾನವ ಈ ಜಗತ್ತಿನಲ್ಲಿ ತಾನೂ ಒಬ್ಬ ಪರಾವಲಂಬಿ ಜೀವ ಮತ್ತು ಭೂಮಿಯ ಸಂಕೀರ್ಣ ಆಹಾರ ಸರಪಳಿಯ ಭಾಗ ಎಂದು ಅರಿಯದೇ, ಈ ಭೂಮಿ ಕೇವಲ ತನ್ನ ಭೋಗಕ್ಕೆ ಸೃಷ್ಟಿಯಾಗಿದೆ ಎಂದು ತಿಳಿದು ಕೇವಲ ಹೇನು ಮುಂತಾದ ಬಾಹ್ಯ ಪರಾವಲಂಬಿ ಜೀವಗಳಷ್ಟನ್ನೇ ಅಲ್ಲದೇ ಭೂಮಿಯ ಮೇಲಿನ ಅನೇಕಾನೇಕ ಜೀವ ಜಂತುಗಳನ್ನು ನೀರು, ನೆಲ, ಗಾಳಿ ಎನ್ನದೇ ಎಲ್ಲೆಡೆಗಳಲ್ಲಿ ತನ್ನ ಸ್ವಾರ್ಥಕ್ಕಾಗಿ ಮನ ಬಂದಂತೆ ನಿರ್ನಾಮ ಮಾಡುತ್ತಿರುವನು. ಆದರೆ, ಮಧ್ವಮತ ಪ್ರತಿಪಾದಿಸುವಂತೆ ಜಗತ್ತಿನ ಸೃಷ್ಟಿಕರ್ತನಾದ ಆ ಭಗವಂತ ಮಾತ್ರ ಸ್ವತಂತ್ರ, ಉಳಿದೆಲ್ಲ ಜೀವರುಗಳು ಅಸ್ವತಂತ್ರರು ಅಂದರೆ ಪರಾವಲಂಬಿಗಳು ಎಂದು ಅರಿತು, 'ವಸುಧೈವ ಕುಟುಂಬಕಮ್' ಎಂಬ ಉಪನಿಷತ್ತಿನ ವಾಕ್ಯದ ಅರ್ಥದ ವೈಶಾಲ್ಯತೆಯನ್ನು ಅರಿತ ಮಾನವ, ಸಕಲ ಜೀವಾತ್ಮರಿಗೆ ಒಳ್ಳೆಯದನ್ನು ಬಯಸಲಿ ಎಂದು ಆಶಿಸುವಾ.
-ಡಾ. ಜಯಂತ ಕಿತ್ತೂರ
An excellent article highlighting , Symbiotic life. There are many instances of sympathetic life both in flora and fauna. One best example among animal kingdom child be cleaning of crocodile teeth by a particular bird which benefits both. Likewise, you've many other examples as well.
ಪ್ರತ್ಯುತ್ತರಅಳಿಸಿAs usual, the article is nicely compiled, edited, reviewed and publisher here as a blog.
Nice article indeed!
ಲೇಖನ ವಿವರಣಾತ್ಮಕವಾಗಿ, ಆತ್ಮೀಯವೆನಿಸುತ್ತದೆ....! ಜೀವನ ಪರಿವೀಕ್ಷಣೆಗಳಿಂದ ಅನುಭವಪೂರಿತವಾಗಿದೆ....! ಸಹಜ ಸರಳ ಸುಂದರ ಶೈಲಿಯ ಬರವಣಿಗೆ ಮತ್ತೊಂದು ಧನಾತ್ಮಕ ಅಂಶ...! ತಮ್ಮ ಲೇಖನ ವ್ಯವಸಾಯ ಹೀಗೆಯೇ ಮುಂದುವರೆಯಲಿ.....!
ಪ್ರತ್ಯುತ್ತರಅಳಿಸಿಕುರಾಜನ್.
Good perspective to think and act towards. Thanks
ಪ್ರತ್ಯುತ್ತರಅಳಿಸಿನೀವು ಹೇಳಿದಂತೆ ಕರೋನಾ ಬಂದು ಮನುಷ್ಯ ಜಾತಿಗೆ ತುಂಬಾ ಉಪಯುಕ್ತವಾದ ವಿಷಯಗಳನ್ನು ಕಲಿಸಿತು. ಆಗ ಆರಂಭಗೊಂಡ ಹೈದರಾಬಾದಿನ ಕನ್ನಡ ಸಾಹಿತ್ಯ ಪರರ ಗುಂಪು ಇಂದಿಗೂ ಚುರುಕಾಗಿ ನಡೆಯುತ್ತಿದ್ದು, ಅದರ ವತಿಯಿಂದಲೇ ನಿಮ್ಮಪರಿಚಯ, ಈ ಲೇಖನದ ಪಠನ ಸಾಧ್ಯವಾಗಿದೆ. ಪರಾವಲಂಬಿತನದ ಅನೇಕ ಆಯಾಮಗಳನ್ನ ವಿವರಿಸಿದ್ದೀರಿ. ಸರಳ ಲೇಖನ.
ಪ್ರತ್ಯುತ್ತರಅಳಿಸಿReally thought provoking and very informative
ಪ್ರತ್ಯುತ್ತರಅಳಿಸಿಉತ್ತಮ ಲೇಖನ, ವಾಸ್ತವಿಕತೆಗೆ ಹತ್ತಿರವಾಗಿದೆ. ಅಭಿನಂದನೆಗಳು.
ಪ್ರತ್ಯುತ್ತರಅಳಿಸಿಪ್ರಸ್ತುತ ಪರಿಸ್ಥಿತಿಯ ಜೀವನ ಹೋಲಿಕೆಯ ಸರಳ ಬರಹ.
ಪ್ರತ್ಯುತ್ತರಅಳಿಸಿ"ಜಗತ್ತಿನ ಸೃಷ್ಟಿಕರ್ತನಾದ ಆ ಭಗವಂತ ಮಾತ್ರ ಸ್ವತಂತ್ರ, ಉಳಿದೆಲ್ಲ ಜೀವರುಗಳು ಅಸ್ವತಂತ್ರರು" ನೂರಕ್ಕೆ ನೂರರಷ್ಟು ಸತ್ಯ ! ಜೀವನದಲ್ಲಿ ಇದರ ಅರಿವು ಎಷ್ಟು ಬೆಗನೋ ಅಷ್ಟೇ ಒಳ್ಳೆಯದು ..ಲೇಖನ ಉತ್ತಮ ವಾಗಿದೆ . ಧನ್ಯವಾದಗಳು
ಪ್ರತ್ಯುತ್ತರಅಳಿಸಿವಾಸ್ತವತೆಗೆ ಹತ್ತಿರವಾದ.ಅತ್ಯುತ್ತಮ ಲೇಖನ.
ಪ್ರತ್ಯುತ್ತರಅಳಿಸಿನೀವು ಹೇಳಿದ ಮಾತು ಕೇಳಿ ನಮಗೂ ಆ ಮಹಾಮಾರಿ ರೋಗದ ಅನುಭವಗಳು ನೆನಪಾದವು. ಅದು ನಮಗೂ ಒಳ್ಳೆಯದನ್ನು ಹಾಗೂ ಕೆಟ್ಟ ಅನುಭವಗಳನು ಕಲಿಸಿದೆ. ಸುಂದರ ಲೇಖನ ಕ್ಕೆ ಧನ್ಯವಾದಗಳು 🙏💐
ಪ್ರತ್ಯುತ್ತರಅಳಿಸಿಜಗತ್ತಿನಲ್ಲಿರುವ ಎಲ್ಲಾ ಪ್ರಾಣಿ ಸಂಕುಲಗಳು ಒಂದರಾಮೇಲೊಂದು ಅವಲಂಬಿಸಿದ್ದು ಸಂಘ ಜೀವಿಗಳಾಗಿವೆ, ಇದರಿಂದ ಒಂದು ಪೂರ್ತಿಯಾದ ಏಕೋಸಿಸ್ಟಮ್ ರೂಪಗೊಂಡಿದೆ.
ಪ್ರತ್ಯುತ್ತರಅಳಿಸಿನಿನ್ನ ಲೇಖನ ಸರಳ ಭಾಶ್ಯೆ ಯಲ್ಲಿ ಕೆಲವು ಉದಾಹರಣೆಗಳೊಂದಿಗೆ ಇದನ್ನು ಸರಿಯಾಗಿ ವಿಶ್ಲೇಷಸಿದ್ದೀಯ. ಅಭಿನಂದನೆಗಳು ಮಿತ್ರ
ಸುಂದರ ಲೇಖನ COVID has changed our lives.
ಪ್ರತ್ಯುತ್ತರಅಳಿಸಿTrue sir, human beings hav forgotten that other living beings are also as important as we are and respecting each other's space and existence is very much necessary. All living beings including humans need to coexist with each other to save ourselves from getting extinct. Respecting the existence of every living creature and living and letting them live must be the mantra for a peaceful environment
ಪ್ರತ್ಯುತ್ತರಅಳಿಸಿ