ಖಂಡೇ ನವಮಿಯ ಆಯುಧ ಪೂಜೆ
ನವರಾತ್ರಿಯ ಖಂಡೆ ನವಮಿ ಆಯುಧ ಪೂಜೆಯ ದಿನ. ಇಂದಿನ ದಿನ ಎಲ್ಲರೂ ತಮ್ಮ ತಮ್ಮ ಕಸುಬು, ಉದ್ಯೋಗದಲ್ಲಿ ಬಳಸುವ ವಿವಿಧ ಆಯುಧಗಳ ಪೂಜೆ ಮಾಡಿ ಅವುಗಳಿಗೆ ಗೌರವ ತೋರಿಸುವುದು ಒಂದು ಧಾರ್ಮಿಕ ವಾಡಿಕೆ. ನಮ್ಮ ಮನೆತನದ ಕಸುಬು ಶಿಕ್ಷಣ ಅಂದರೆ ಅಧ್ಯಯನ ಮತ್ತು ಅಧ್ಯಾಪನ. ನಮ್ಮ ತಂದೆಯವರು ಅಷ್ಟೇನು ಸಂಪ್ರದಾಯಸ್ಥರಲ್ಲ ಆದರೆ ನಮ್ಮ ತಾಯಿ ಧಾರ್ಮಿಕ ಸ್ವಭಾವದವಳು. ಹೀಗಾಗಿ ನಮ್ಮ ಮನೆಯಲ್ಲಿ ಯಾವುದೇ ಹಬ್ಬದ ದಿನದಂದು ತಂದೆಯವರಿಂದ ದೇವರ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತಿರಲಿಲ್ಲ ಆದರೆ ಅಮ್ಮ ಮಾತ್ರ ಚೆನ್ನಾಗಿ ವಿವಿಧ ಬಗೆಯ ಭಕ್ಷ್ಯಗಳನ್ನು ಮಾಡುತ್ತಿದ್ದರು. ಮಕ್ಕಳಲ್ಲಿ ಯಾರೋ ಒಬ್ಬರಿಂದ ಊಟಕ್ಕೂ ಮೊದಲು ದೇವರಿಗೆ ನೈವೇದ್ಯ ಮಾಡಿಸುತ್ತಿದ್ದರು ಮತ್ತು ಸಂದರ್ಭೋಚಿತ ಹಲವು ದಾಸರ ಪದಗಳನ್ನು ಹಾಡುತ್ತಿದ್ದರು. ಎಲ್ಲೆಡೆಯಂತೆ ನಮ್ಮ ಶಾಲೆಗೂ ವರ್ಷದಲ್ಲಿ ಎರಡು ಬಾರಿ ರಜಾದಿನಗಳು. ವರ್ಷವಿಡೀ ಓದಿ ವಾರ್ಷಿಕ ಪರೀಕ್ಷೆ ಬರೆದ ನಂತರ ಬೇಸಿಗೆಯ ರಜೆ. ಆ ಸಮಯದಲ್ಲಿ ನಮ್ಮ ಗೆಳೆಯರಲ್ಲಿ ಅನೇಕರು ಪ್ರವಾಸಕ್ಕೆಂದು ಬೇರೆ ಊರಿಗೆ ಹೋಗುವವರು ಇಲ್ಲ ದಿನವಿಡೀ ಮನೆಯ ಒಳಗೆ ಹೊರಗೆ ಆಟದಲ್ಲಿ ಸಮಯ ಕಳೆಯುತ್ತಿದ್ದರು. ನಮ್ಮದು ಐದು ಮಕ್ಕಳ ದೊಡ್ಡ ಕುಟುಂಬವಾದಕಾರಣ ಒಬ್ಬರಿಗೆ ರಜೆ ಇದ್ದರೆ ಇನ್ನೊಬ್ಬರಿಗೆ ಪರೀಕ್ಷೆಯ ಸಮಯ ಅಥವಾ ತಂದೆಯವರಿಗೆ ವಿಶ್ವವಿದ್ಯಾಲಯದ ಪರೀಕ್ಷೆ ನಡೆಸುವ ಜವಾಬ್ದಾರಿ. ಹೀಗಾಗಿ ಮನೆಯ ಎಲ್ಲರೂ ಬೇಸಿಗೆಯ ಪ್ರವಾಸ ಹೋದ ನೆನಪಿಲ್ಲ. ಹಾಗಂತ ಇತರರ ಮಕ್ಕಳ...