ಸತ್ತ ಗುರು !!!
ನಮ್ಮ ಜಾತ್ಯಾತೀತ ದೂರದರ್ಶನದ ಚಂದನ ವಾಹಿನಿಯನ್ನು ನೋಡುತ್ತಿದ್ದವರಿಗೆ 1994 ರಲ್ಲಿ ಉದಯಾ ಟಿವಿ ಖಾಸಗಿ ಕೇಬಲ್ ವಾಹಿನಿ ಪ್ರಾರಂಭವಾದದ್ದು BSNL ನ ಲ್ಯಾಂಡಲೈನ ಫೋನಿನಿಂದ ಏಕ್ದಂ Jio ದ ಸಿಮ್ ಗೆ ಜಿಗಿದ ಅನುಭವವಾಗಿತ್ತು. ಉದಯಾ ಟಿವಿಯಲ್ಲಿ ಬಿತ್ತರವಾಗುತ್ತಿದ್ದ ಬಹುತೇಕ ಕಾರ್ಯಕ್ರಮಗಳು ವೀಕ್ಷಕರ ಮನಗೆದ್ದಿದ್ದವು. ರವಿವಾರ ಬೆಳಗ್ಗೆ ಪ್ರಸಾರವಾಗುತ್ತಿದ್ದ S K ಜೈನ ಅವರ ವಾರದ ಭವಿಷ್ಯ ಕಾರ್ಯಕ್ರಮ ಬಹಳೇ ಪ್ರಸಿದ್ಧಿ ಪಡೆದಿತ್ತು. ಮುಂದಿನ ವಾರದ ಗೋಚಾರದಲ್ಲಿ ಯಾವ ಗ್ರಹಗಳು ಯಾವ ರಾಶಿಯಲ್ಲಿ ಇರುತ್ತವೆ ಮತ್ತು ಅವುಗಳ ಪ್ರಭಾವ ಯಾವ ರಾಶಿಯವರಿಗೆ ಹೇಗಿರುತ್ತದೆ, ಯಾವ ರಾಶಿಯವರಿಗೆ ಶನಿಯ ಸಾಡೇಸಾತಿ ನಡೆದಿದೆ, ಮುಗಿದಿದೆ ಅಥವಾ ಸಾಡೆಸಾತಿ ಹಿಡಿಯುವುದಿದೆ, ಅದರಂತೆಯೇ ಗುರುವಿನ ಚಲನೆ ಹೇಗಿದೆ, ಯಾವ ರಾಶಿಯವರಿಗೆ ಗುರು ಉಚ್ಚವಾಗಿದೆ, ನೀಚವಾಗಿದೆ ಮತ್ತು ಯಾವ ರಾಶಿಯವರಿಗೆ ಗುರು ಅಸ್ತವಾಗಿದೆ ಇತ್ಯಾದಿಗಳನ್ನು ವಿವರಿಸುತ್ತಿದ್ದರು. ಆದರೆ, ನಾವು ಯಾರೂ ಆ ಉದಯಾ ಟಿವಿಯಲ್ಲಿಯ S K ಜೈನರ ವಾರದ ಭವಿಷ್ಯ ಕಾರ್ಯಕ್ರಮದಲ್ಲಿ ಗುರು ಸತ್ತ ವಿಚಾರ ಎಂದೂ ಕೇಳಿರಲಿಕ್ಕಿಲ್ಲ ಅಲ್ಲವೇ.
ಆದರೆ ಹೋದ ವರ್ಷ(೦೧.೦೪.೨೦೨೪) ಏಕಾಏಕಿ ವಾಟ್ಸ್ಯಾಪ ಗುಂಪುಗಳನ್ನೂ ಮೊದಲು ಮಾಡಿಕೊಂಡು ಅನೇಕ ಸಾಮಾಜಿಕ ಮಾಧ್ಯಮಗಳಲ್ಲಿ ನಮ್ಮ ಗಡಿನಾಡು, ಕುಂದಾನಗರಿ ಬೆಳಗಾವಿಯ ಒಂದು ಅಂಗಡಿಯ 'ಸತ್ತಗುರು' ಎಂಬ ಬೋರ್ಡಿನ ಚಿತ್ರ ವೈರಲ್ ಆಗಿ ಹರಿದಾಡಿ ಸದ್ದು ಮಾಡಿದ್ದು ತಮ್ಮ ಗಮನಕ್ಕೆ ಬಂದಿರಲು ಸಾಕು.
ಈ ತರಹದ ಯಡವಟ್ಟಿನ ಬೋರ್ಡಗಳನ್ನು ಸಾಧಾರಣವಾಗಿ ರಾಜ್ಯದ ಎಲ್ಲ ಊರುಗಳಲ್ಲಿಯೂ ಕಾಣಬಹುದು. ಆದರೆ ಈ ಬೋರ್ಡ್ ವಿಶೇಷವಾಗಿ ವೈರಲ್ ಆಗಲು ಕಾರಣ ಯಾವ ಸಮಯ/ಸಂದರ್ಭದಲ್ಲಿ ಮತ್ತು ಯಾವ ಊರಿನಲ್ಲಿ ಈ ಯಡವಟ್ಟಾಯಿತು ಎಂಬುದು.
ಪ್ರತೀ ವರ್ಷ ತಪ್ಪದೇ ನವೆಂಬರ್ ಒಂದನೇ ತಾರೀಖಿನ ರಾಜ್ಯೋತ್ಸವದ ಆಸುಪಾಸಿನಲ್ಲಿ ನಗರದ ಎಲ್ಲ ಅಂಗಡಿ ಮುಂಗಟ್ಟುಗಳು ಕನ್ನಡದ ಬೋರ್ಡ್ ಹಾಕುವಂತೆ ನಮ್ಮ ಕನ್ನಡಪರ ಸಂಘಟನೆಗಳು ಹೋರಾಟ ಮಾಡುತ್ತಾ ಬಂದಿವೆ. ಅವರ ಹೋರಾಟದ ಪರಿಣಾಮವೋ ಅಥವಾ ಇನ್ನಾವ ಕಾರಣವೋ ಏನೋ ಗೊತ್ತಿಲ್ಲ, ಅಂತು ಮಾರ್ಚ್ ೨೦೨೪ ರ ಆಸುಪಾಸಿನಲ್ಲಿ ಈ ವಿಷಯದ ಒಂದು ಸರ್ಕಾರಿ ಆದೇಶ ಹೊರಬಿದ್ದಿತು. ಕುವೆಂಪು ಅವರ ಕನ್ನಡ ಡಿಂಡಿಮ ಕಾವ್ಯದಲ್ಲಿ ಬರುವ 'ಸತ್ತಂತಿಹರನು ಬಡಿದೆಚ್ಚರಿಸು' ಎಂಬ ಪಂಕ್ತಿಯಂತೆ ಆ ಸರ್ಕಾರೀ ಆದೇಶ ನಮ್ಮ ಕನ್ನಡಪರ ಹೋರಾಟದ ಸಂಘಟನೆಗಳನ್ನು ಬಡಿದೆಚ್ಚರಿಸಿತು. ಅವು ಕನ್ನಡಾಂಬೆಯ ಮೇಲಿನ ತಮ್ಮ ಭಕ್ತಿಯನ್ನು ಊರತುಂಬೆಲ್ಲಾ ಮತ್ತೆ ಪ್ರದರ್ಶಿಸಲು ಪ್ರಯತ್ನವನ್ನೂ ಮಾಡಿದವು. ಆದರೆ, ನವೆಂಬರ್ ಒಂದನೇ ತಾರೀಖು ಬಂದು ಹೋಗಿ ಬಹಳ ದಿನಗಳಾದ ಕಾರಣ ಅವರ ಭಕ್ತಿ (ಶಕ್ತಿ) ಪ್ರದರ್ಶನದಲ್ಲಿ ದಮ್ಮು ಉಳಿದಿರಲಿಲ್ಲ. ಹಾಗೆ ನೋಡಿದರೆ, ನಮ್ಮ ಸರ್ಕಾರಗಳು ದಿನಕ್ಕೊಂದು ಆದೇಶಗಳನ್ನು ಹೊರಡಿಸಿ ತಾನು ಕಾರ್ಯಭಾರ ಮಾಡುವುದರ ಪ್ರಮಾಣವನ್ನು ಸಾಬೀತು ಪಡಿಸುವ ಪ್ರಯತ್ನ ಮಾಡುತ್ತಾ ಇರುತ್ತವೆ. ಆದರೆ, ದಿನಾಲೂ ಸಾಯುವ ಮನೆಯಲ್ಲಿ ಅಳುವವರು ಯಾರು ಎಂಬಂತೆ ಬಹುತೇಕ ಸಂಘ ಸಂಸ್ಥೆಗಳಾಗಲಿ, ಅಂಗಡಿ ಮುಂಗಟ್ಟುಗಳಾಗಲಿ ಕನ್ನಡದ ಬೋರ್ಡ್ ಸಂಬಂಧದ ಆ ಸರ್ಕಾರೀ ಆದೇಶವನ್ನು ಪಾಲಿಸುವ ವಿಚಾರವಾಗಿ ತಲೆ ಕೆಡಿಸಿಕೊಳ್ಳದೆ ಎಂದಿನಂತೆ ತಮ್ಮ ವ್ಯಾಪಾರ ವಹಿವಾಟಿನಲ್ಲಿ ಮಗ್ನವಾಗಿದ್ದವು.
ಪಂಚ ಭಾಗ್ಯಗಳನ್ನು ಕೊಟ್ಟು ನುಡಿದಂತೆ ನಡೆದ ಸರ್ಕಾರ, ತನ್ನ ಆದೇಶದ ಪಾಲನೆಯ ಗಡುವು ಮುಗಿದರೂ ಯಾರೂ ಕಟ್ಟುನಿಟ್ಟಾಗಿ ಪಾಲಿಸದ ಪರಿಣಾಮವಾಗಿಯೋ ಅಥವಾ ಕನ್ನಡ ಪರ ಸಂಘಟನೆಗಳ ಒತ್ತಡದ ಪರಿಣಾಮವಾಗಿಯೋ ಅಂತೂ ಒಂದು ಸುತ್ತು ಗಡುವನ್ನು ವಿಸ್ತರಿಸಿ ಮರು ಆದೇಶ ಹೊರಡಿಸಿತು. ಆ ಹೊತ್ತಿಗೆ ಸರಿಯಾಗಿ ದೇಶದ ಮಹಾ ಚುನಾವಣೆಯ ನೀತಿ ಸಂಹಿತೆ ಜಾರಿಗೆ ಬರುವ ಸಮಯ ಕೂಡಿಬಂದಿತು.
ನಿರಂತರ ರಾಜಕಾರಣಿಗಳ/ಮಂತ್ರಿಗಳ ಜೀತದಾಳುಗಳಂತೆ ದುಡಿಯುವ ಸರ್ಕಾರೀ ಅಧಿಕಾರಿ ವರ್ಗಕ್ಕೆ ಚುನಾವಣೆಯ ನೀತಿ ಸಂಹಿತೆಯ ಸಮಯ ಒಂದು ತರಹ ತಾವು ವರ್ಷಗಟ್ಟಲೇ ರಾಜಕಾರಣಿಗಳಿಂದ ಹೀಯಾಳಿಸಿಗೊಂಡ ಸಿಟ್ಟನ್ನು ನಾಗರಿಕರ ಮೇಲೆ ತೀರಿಸಿಕೊಳ್ಳಲು ಸುಗ್ಗಿಯ ಕಾಲ. ಅಲ್ಲದೇ, ಚುನಾವಣಾ ಸಮಯ ಕನ್ನಡಪರ ಹೋರಾಟಗಾರರಿಗೂ ತಮ್ಮ ಶಕ್ತಿ ಪ್ರದರ್ಶಿಸುವ ಸುಸಂಧಿ. ಈ ಎಲ್ಲ ವಿಷಯಗಳ ಅರಿವಿರುವ ರಾಜ್ಯದ ಪ್ರಜ್ಞಾವಂತ ನಾಗರಿಕರು ತಮ್ಮ ತಮ್ಮ ವ್ಯಾಪಾರ, ವಹಿವಾಟು ನಡೆಸುವ ಅಂಗಡಿ ಮುಂಗಟ್ಟುಗಳ, ಸಂಘ ಸಂಸ್ಥೆಗಳ ಬೋರ್ಡಗಳಲ್ಲಿ ಶೇಕಡಾ ಅರವತ್ತು ಭಾಗ ಕನ್ನಡದಲ್ಲಿ ಬದಲಿಸಲು ತರಾತುರಿಯಲ್ಲಿ ಮುಂದಾದರು.
ನಮ್ಮ ಪಕ್ಕದ ಮಹಾರಾಷ್ಟ್ರದ ಕೆಲವರು ತಮಗೇ ಸೇರಬೇಕೆಂದು ಯಾವಾಗಲೂ ಕ್ಯಾತೆ ತೆಗೆಯುವ ನಮ್ಮ ಬೆಳಗಾವಿ ನಗರದಲ್ಲಿ ಕನ್ನಡದ ಓದು-ಬರಹ ಮೇಲಾಗಿ ವ್ಯವಹಾರದಲ್ಲಿ ಕನ್ನಡದ ಬಳಕೆ ಮೊದಲಿನಿಂದಲೂ ಅಷ್ಟಕಷ್ಟೇ. ಅಚ್ಚ ಕನ್ನಡ ಮೂಲದ ಮಂತ್ರಿಗಳು ಕನ್ನಡದ ಬರಹವನ್ನು ತಡವರಿಸುತ್ತಾ ಓದಿದ್ದನ್ನು ನೋಡಿದರೆ ನಮ್ಮ ಗಡಿನಾಡು ಬೆಳಗಾವಿಯ ಶಾಲಾ ಕಾಲೇಜುಗಳಲ್ಲಿ ಕನ್ನಡ ಕಲಿಕೆಯ, ಲಿಪಿಯ ಬಳಕೆಯ ಪ್ರಮಾಣದ ಬಗ್ಗೆ ಅಂದಾಜು ಮಾಡಲು ಸಾಕು.ಇಲ್ಲಿನ ಅನೇಕ ಕಾಲೇಜು ವಿದ್ಯಾರ್ಥಿಗಳು ಕರ್ನಾಟಕದಲ್ಲಿ SSLC ಪರೀಕ್ಷೆ ತೇರ್ಗಡೆಯಾಗಿ ಕನ್ನಡವನ್ನು ಕನಿಷ್ಠ ಪಕ್ಷ ಮೂರನೇಯ ಭಾಷೆಯಾಗಿ ಕಲಿತರೂ, ತಮಗೆ ಕನ್ನಡ ಓದಲು ಬರೆಯಲು ಮತ್ತು ಕನ್ನಡದಲ್ಲಿ ವ್ಯವಹರಿಸಲು ಬರುವುದಿಲ್ಲ ಎಂದು ಗರ್ವದಿಂದ ಹೇಳುವುದನ್ನು ಕಾಣಬಹುದು. ಅಲ್ಲದೇ, ಆಂಗ್ಲರ ಕಾಲದಿಂದಲೂ ಬೆಳಗಾವಿ ಮರಾಠಾ ಲಘು ಪದಾತಿದಳ ಮತ್ತು ವಾಯುಪಡೆಯ ನೆಲೆಯಾಗಿದೆ. ಹಾಗಾಗಿ ದೇಶದ ವಿವಿಧ ರಾಜ್ಯಗಳಿಂದ ಬಂದು ನೆಲೆಸಿದ ಜನರಿಂದಾಗಿ ದಿನನಿತ್ಯದ ವ್ಯವಹಾರದಲ್ಲಿ ಮರಾಠಿಯ ಜೊತೆಗೆ ಹಿಂದೀಯ ಬಳಕೆಯೂ ಇದೆ. ಅದರಂತೆಯೇ, ಆಂಗ್ಲರ ಕಾಲದಿಂದಲೂ ಇಲ್ಲಿ ಅನೇಕ ಪ್ರತಿಷ್ಠಿತ ಇಂಗ್ಲಿಷ್ ಕಾನ್ವೆಂಟ್ ಶಾಲೆಗಳೂ ತಮ್ಮ ಪ್ರಭಾವವನ್ನು ಜನರಲ್ಲಿ ಬೀರುತ್ತಿವೆ. ಹಾಗಾಗಿ ಇಲ್ಲಿಯ ಜನ ಮರಾಠಿ, ಹಿಂದಿ ಅಥವಾ ಆಂಗ್ಲಭಾಷೆಯಲ್ಲಿ ವ್ಯವಹರಿಸುವುದನ್ನು ಪ್ರತಿಷ್ಠೆಯ ಸಂಕೇತವೆಂದು ತಿಳಿದು, ಕನ್ನಡದಲ್ಲಿ ವ್ಯವಹರಿಸಲು ಹಿಂಜರಿಯುತ್ತಾರೆ. ಬಹುಶಃ ಅದಕ್ಕೇ ಇರಬೇಕು ಇಲ್ಲಿನ ಬಹಳಷ್ಟು ಅಂಗಡಿ ಮುಂಗಟ್ಟುಗಳು ಸಾಮಾನ್ಯವಾಗಿ ಇಂಗ್ಲೀಷ್ ಬೋರ್ಡಗಳನ್ನು ಅಳವಡಿಸಿಕೊಂಡಿರುದನ್ನು ಕಾಣಬಹುದು.
ಇನ್ನು, ಐದು ವರ್ಷಗಳಿಗೊಮ್ಮೆ ಬರುವ ಸಾರ್ವತ್ರಿಕ ಚುನಾವಣಾ ಸಮಯವೆಂದರೆ ಬಿಲ್ಬೋರ್ಡ್, ಬ್ಯಾನರ್, ಹೋರ್ಡಿಂಗ್, ಫ್ಲೆಕ್ಸ್ ಬರೆಯುವ ವ್ಯವಹಾರದವರಿಗೆ ಎಲ್ಲಿಲ್ಲದ ಡಿಮ್ಯಾಂಡೋ ಡಿಮ್ಯಾಂಡು ಮತ್ತು ಕೈ ತುಂಬಾ ಕೆಲಸ. ಇಂಥಾ ಸಂದರ್ಭದಲ್ಲಿ, ಧಿಡೀರಾಗಿ ಎಲ್ಲ ಅಂಗಡಿ ಮುಂಗಟ್ಟುಗಳ ಬೋರ್ಡಗಳನ್ನು ಕನ್ನಡಕ್ಕೆ ಬದಲಾಯಿಸುವ ಕೆಲಸ ಕೈಗೊದಗಿ ಬಂದಾಗ ಯಾವ ಮೂರ್ಖತಾನೆ ಆರ್ಡರ್ ಬಿಟ್ಟುಕೊಟ್ಟಾನು. ಏಕಾಏಕಿ ಬಹಳ ಗಿರಾಕಿಗಳು ಖಾನಾವಳಿಗೆ ಲಗ್ಗೆ ಇಟ್ಟಾಗ ಹಸಿ ಬಿಸಿ ಬೆಂದ ಚಪಾತಿ ಬಡಿಸಿದಂತೆ ಅಥವಾ ನಮ್ಮ ಸಾಫ್ಟವೇರ್ ಕಂಪನಿಗಳು ಅನೇಕ ಕ್ಲಯಂಟ ಆರ್ಡರ್ ಪಡೆದು ಅಂತಿಮ ವರ್ಷದ ಇಂಜಿನಿಯರಿಂಗ್ ಪರೀಕ್ಷೆ ಮುಗಿಸಿದವರನ್ನು ಯಾವ ತರಹದ ಟ್ರೇನಿಂಗ್ ನೀಡದೇ ನೇರವಾಗಿ ಆನ್ ಬೋರ್ಡಿಂಗ್ ಮಾಡಿಕೊಂಡು ಕ್ಲೆಯಂಟ್ ಸೈಟಿಗೆ ಕೆಲಸಕ್ಕೆ ಕಳುಹಿಸಿದಂತೆ ನಮ್ಮ ಅನೇಕ ಬೋರ್ಡ್ ಬರೆಯುವ ವ್ಯವಹಾರದವರು ಡಿಗ್ರಿ ಮುಗಿಸಿ ಅಥವಾ ಮುಗಿಸದೇ ಕೆಲಸಕ್ಕೆ ಅಲೆದಾಡಿ ಎಲ್ಲಿಯೂ ಯಾವ ಕೆಲಸವೂ ಸಿಗದೇ ಯಾವುದೋ ಒಂದು ಡಿಟಿಪಿ ಕೋರ್ಸಿಗೆ ಹೆಸರು ನೊಂದಾಯಿಸಿದವರಿಂದ ಡಿಟಿಪಿ ಮಾಡಿಸಿಕೊಂಡು ತರಾತುರಿಯಲ್ಲಿ ಹಳೆಯ ಇಂಗ್ಲೀಷ್ ಬೋರ್ಡ್ ಮೇಲೆ ಕನ್ನಡದ ತೇಪೆ ಹಾಕಲು ಮುಂದಾಗಿರಬಹುದು. ಪಾಪ ಆ ಡಿಟಿಪಿ ಮಾಡಿಕೊಟ್ಟವನು ಗೂಗಲ್ ಗುರುವನ್ನು ನಂಬಿ ಆಂಗ್ಲಭಾಷೆಯಿಂದ ಕನ್ನಡಕ್ಕೆ ತರ್ಜುಮೆ ಮಾಡಿದುದರ ಪರಿಣಾಮವಾಗಿ ಸದ್ಗುರು ಎಂಬುದು 'ಸತ್ತ ಗುರು' ಆಗಿರಬಹುದೆಂಬುದು ನನ್ನ ಬಲವಾದ ನಂಬಿಕೆ.
ಕಾಕತಾಳೀಯವೋ ಅಥವಾ ನಮ್ಮ ದೇಶದ ದುರ್ದೈವವೂ ಅಂತೂ ಯುರೋಪಿನ ಕೈಗಾರಿಕಾ ಕ್ರಾಂತಿಯ ಸಮಯದಲ್ಲಿ ನಾವುಗಳು ಆಂಗ್ಲರ ವಸಾಹತುಶಾಹಿ ಆಳ್ವಿಕೆಯಲ್ಲಿದ್ದೆವು. ಹೀಗಾಗಿ ನಮ್ಮ ಸನಾತನ ಗುರುಕುಲ ಶಿಕ್ಷಣ ಪದ್ಧತಿ ಬಿಟ್ಟು ಮೆಕಾಲೆಯ ಶಾಲಾ ತರಗತಿಗಳ ಶಿಕ್ಷಣ ಪದ್ಧತಿಗೆ ಒಳಪಟ್ಟೆವು. ಶಿಷ್ಯನ ಸರ್ವಾಂಗೀಣ ಅಭಿವೃದ್ಧಿಯ ಕಾರಣಕರ್ತರಾದ ಗುರುಗಳು ಕೇವಲ ಪಠ್ಯ ಕಲಿಸುವ ಮತ್ತು ವಿದ್ಯಾರ್ಥಿಗಳು ನೆನಪಿಟ್ಟುಕೊಂಡು ಕೇಳಿದ ಪ್ರಶ್ನೆಗೆ ಬರೆದ (ವಾಂತಿ ಮಾಡಿಕೊಂಡ) ಉತ್ತರ ಪತ್ರಿಕೆಯ ಮೌಲ್ಯಮಾಪನ ಮಾಡಿ ಮಾರ್ಕ್ಸ್ ಕೊಡುವ ಶಿಕ್ಷಕರಾದರು. ದಿನಗಳು ಕಳೆದಂತೆ, ಶಿಕ್ಷಕನ ಪ್ರಾಥಮಿಕ ಕೆಲಸ ವಿದ್ಯಾರ್ಥಿಗಳಿಗೆ ಕಲಿಸುವುದಕ್ಕಿಂತಲೂ ಇತರ ಕೆಲಸಗಳಾದ ಮಧ್ಯಾಹ್ನದ ಬಿಸಿಯೂಟದ ತಯಾರಿ, ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ, ಜಾತಿ-ಜನ-ದನ-ಕುರಿ ಗಣತಿ ಇತ್ಯಾದಿಗಳನ್ನು ಪೂರೈಸುವುದು ಮತ್ತು ದಿನಕ್ಕೊಂದು ಆ ಜಯಂತಿ, ಈ ಉತ್ಸವ, ವಿವಿಧ ರಾಷ್ಟೀಯ , ಅಂತಾರಾಷ್ಟ್ರೀಯ ದಿನಾಚರಣೆ ಮತ್ತು ತಾನು ಮಾಡಿದ ಆ ಎಲ್ಲ ಕೆಲಸಗಳ ರಿಪೋರ್ಟ್ ತಯಾರಿಸಿ ಅಂದೇ ವೆಬ್ ಸೈಟನಲ್ಲಿ ಅಪ್ ಲೋಡ್ ಮಾಡುವುದೇ ಮಹತ್ವದ ಕೆಲಸವಾಗಿ ಹೋಗಿದೆ. "Record for everything and everything for record sake" ಎಂಬುದು ಈಗ ಶಿಕ್ಷಕರ ಕೆಲಸದ ಸಾಮಾನ್ಯ ಲಕ್ಷಣವಾಗಿದೆ. ಇನ್ನು ಮಕ್ಕಳನ್ನು ಒಂಬತ್ತನೇಯ ತರಗತಿಯವರೆಗೆ ನಪಾಸು ಮಾಡುವಂತಿಲ್ಲ ಎಂದಾದ ಮೇಲೇ ವಿದ್ಯಾರ್ಥಿಗಳಿಗೆ ವಿಷಯ ಕಲಿಯುವ ಆಸಕ್ತಿ ಮತ್ತು ಶಿಕ್ಷಕರಲ್ಲಿ ಭಯ ಭಕ್ತಿ ಕರಗುತ್ತಾ ಬಂದಿದೆ.
ಇಂದಿನ ದಿನಮಾನಗಳಲ್ಲಿ ಪಾಲಕರು, ಶಾಲಾ ಆಡಳಿತ ಮಂಡಳಿಗಳು ಮತ್ತು ಸರ್ಕಾರಗಳು ಶಿಕ್ಷಕರನ್ನು ನಡೆಸಿಕೊಳ್ಳುವ ಪರಿ ನೋಡಿದರೆ ಇಂದಿನ ಸಮಾಜದಲ್ಲಿ ಶಿಕ್ಷಕರ ಮೇಲಿನ ಭರವಸೆ, ವಿಶ್ವಾಸ ಮತ್ತು ಗೌರವ ಕಡಿಮೆ ಆಗುತ್ತಾ ಸಾಗಿದೆ ಎಂಬುದರಲ್ಲಿ ಸಂಶಯವಿಲ್ಲ. ಆ ಬೋರ್ಡ ಬರೆಯುವಲ್ಲಿನ ಯಡವಟ್ಟಿನ ಘಟನೆ ಕರ್ನಾಟಕದ ಬೆಳಗಾವಿಯಲ್ಲಿ ನಡೆದಿದ್ದು ಕನ್ನಡ ಕಲಿಯುವಲ್ಲಿಯ ಹಾಗು ಬಳಸುವಲ್ಲಿಯ ಉದಾಸೀನತೆಯೋ ಅಥವಾ ಇಂಗ್ಲೀಷ ಭಾಷೆಯ ಮೇಲಿನ ಅತೀ ಮೋಹವೋ, ಇಲ್ಲವೆ ಗೂಗಲ್ ಗುರುವಿನ ಮೇಲಿನ ಅಂಧಾವಲಂಭನೆಯೋ ಗೊತ್ತಿಲ್ಲ, ಆದರೆ ಸದ್ಗುರು ಅಲ್ಲಿ ಸತ್ತ ಗುರು ಆಗಿದ್ದಂತೂ ನಿಜ. ನಂತರ ಆ ಅಂಗಡಿಯವರು ಬೋರ್ಡಿನಲ್ಲಿ ತಿದ್ದುಪಡಿ ಮಾಡಿ ಸುಧಾರಿಸಿಕೊಂಡಂತೆ, ನಮ್ಮ ಈಗಿನ ಶಿಕ್ಷಕರ ಸ್ಥಿತಿಯಲ್ಲೂ ಸುಧಾರಣೆಕಂಡು ಅವರು ಹಿಂದಿನಂತೆ ಗುರುಗಳಾಗುವರೆಂದು ಆಶಿಸೋಣ.
- ಡಾ. ಜಯಂತ ಕಿತ್ತೂರ
Excellent article, as always! There are many such working Kannada movie boards, not just in Belagavi but on many cities of Karnataka. However, as per my observation, boards displayed in Shimoga and Mysore seem too be almost accurate. Another blunder committed in Kannada boards is use of " 's", English board contrasting 's gets EXACTLY translated in to Kannada with 's which is so embarrassing and meaningless!. Wherever possible I try to inform the shop owner about the mistake in the Kansas boards. Few have responded positively and got their boards corrected but many others ignored my suggestion.
ಪ್ರತ್ಯುತ್ತರಅಳಿಸಿOnce again, a very good article indeed!
ಶುಭೋದಯ ಗುರುಗಳೇ ನಿಮ್ಮ ಲೇಖನ ತುಂಬಾನೇ ಚೆನ್ನಾಗಿದೆ.. ಇದನ್ನು ನನ್ನ ಬಾಲ್ಯ ಸ್ನೇಹಿತರೊಂದಿಗೆ ಹಂಚಿ ಕೊಂಡಿದ್ದೇನೆ.. ಓದಿ ತುಂಬಾ ಖುಷಿ ಯಾಗಿದೆ ಇದೆ ರೀತಿ ಬರೆಯುತ್ತಾ ಇರಿ ಸರ್ ಮತ್ತು ನಮಗೆ ಶೇರ್ ಮಾಡಿರಿ. ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು ಸರ್
ಪ್ರತ್ಯುತ್ತರಅಳಿಸಿಅರ್ಥಪೂರ್ಣ ಬರಹ ಗುರುಗಳೇ
ಪ್ರತ್ಯುತ್ತರಅಳಿಸಿಕನ್ನಡದ ಕೊಲೆ ಮಾಡುವ ಕನ್ನಡದ ಪತ್ರಕರ್ತರು, ಸುದ್ದಿ ವಾಚಕರು, ಟಿವಿ, ರೇಡಿಯೋ ನಿರೂಪಕರನ್ನು ನೋಡಿ, ಕೇಳಿದಾಗ ಆಗುವ ಮಾನಸಿಕ ಹಿಂಸೆ, ಇಂತಹ ಬಿಲ್ಬೋರ್ಡ್ ನೋಡಿದಾಗ ಒಳ್ಳೆ ನಗು ತರಿಸುತ್ತೆ.
ಪ್ರತ್ಯುತ್ತರಅಳಿಸಿಕನ್ನಡ ಮತ್ತು ಬೇರೆ ಭಾಷೆಗಳನ್ನು ಮತ್ತು ನಮ್ಮ ಶಾಲೆ, ಕಾಲೇಜುಗಳಲ್ಲಿ ಸರಿಯಾಗಿ ಪಾಠ ಮಾಡುವ ಗುರುಗಳು ಕಡಿಮೆ ಆಗ್ತಾ ಇದ್ದಾರೆ. ಕಾರಣ, ಶಿಕ್ಷಕರ ಆಯ್ಕೆ ಪ್ರಕ್ರಿಯೆ ಸಹ ತುಂಬಾ ಸಡಿಲ ಆಗಿದೆ. ಪಠ್ಯ ಪುಸ್ತಕಗಳು ಸಹ ತುಂಬ ತಪ್ಪಿನಿಂದ ಕೂಡಿವೆ. ಇನ್ನೂ, ಪಾಸ್ ಆಗಲು 30 ಸಾಕು, ಹೆಚ್ಚು ಕಷ್ಟ ಯಾಕೆ ಪಡಬೇಕು?
ಚೆನ್ನಾಗಿ ಮೂಡಿ ಬಂದಿದೆ, ಕನ್ನಡದ ಬಗ್ಗೆ ಇದ್ದ ಅಭಿಮಾನ, ಗೌರವ, ಪ್ರೀತಿಯ ಲೇಖನ ಖುಷಿ ಕೊಡುತ್ತೆ .ಧನ್ಯವಾದಗಳು🙏🙏💐ನಿಮ್ಮೆಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು. ಜೈ ಕರ್ನಾಟಕ ಮಾತೆ 🙏
ಪ್ರತ್ಯುತ್ತರಅಳಿಸಿಪೂರಕ ಸಂಗತಿಗಳಿಗೆ ನಿಖರವಾದ ಬರವಣಿಗೆ. ಓದುವಾಗ ಸಂತೋಷವಾಯಿತು.
ಪ್ರತ್ಯುತ್ತರಅಳಿಸಿVery nice article.
ಪ್ರತ್ಯುತ್ತರಅಳಿಸಿKannad Rajyostav sandharbhadalli auchitya poorna.Jai karnataka.
Dear Jayant,
ಪ್ರತ್ಯುತ್ತರಅಳಿಸಿHeartiest greetings on the articles published by you till date...
This article is eye catching in particular the Kannada script.
Surprising with few words like 'Bata' as ಬಾಟ,, Kalpana as' ಕಲ್ಪನ್'.
Bangalore Kannada more of English words than Kannada...
Nice Article sir.
ಪ್ರತ್ಯುತ್ತರಅಳಿಸಿWell written Sir.
ಪ್ರತ್ಯುತ್ತರಅಳಿಸಿಧೀರೇಂದ್ರ ತೆಂಗಳಿಕರ
ಪ್ರತ್ಯುತ್ತರಅಳಿಸಿನಮ್ಮ ಈಗಿನ ಶಿಕ್ಷಕರ ಸ್ಥಿತಿಯಲ್ಲೂ ಸುಧಾರಣೆಕಂಡು ಅವರು ಹಿಂದಿನಂತೆ ಗುರುಗಳಾಗುವುದು ತುಂಬಾ ಅವಶ್ಯಕತೆ ಇದೆ ಸರ್...ಬರಹ ಇಷ್ಟವಾಯಿತು
ಪ್ರತ್ಯುತ್ತರಅಳಿಸಿ