ತುಪ್ಪ ಉಪ್ಪಿನ ಲೆಕ್ಕ
ಈಗ್ಗೆ ಇಪ್ಪತ್ತು ವರ್ಷಗಳ ಹಿಂದೆ ನಮ್ಮ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೈಕ್ರೋಸಾಫ್ಟ್ ಆಫೀಸ್ ನ ಪಾವರ್ ಪಾಯಿಂಟ್ ಪ್ರೆಸೆಂಟೇಷನ್ ನಲ್ಲಿ ನಾವು ಕಲಿಸುವ ವಿಷಯದ ಸ್ಲೈಡ ತಯಾರಿಸಿ ಎಲ್ಸಿಡಿ ಪ್ರೊಜೆಕ್ಟರ್ ಉಪಯೋಗಿಸಿ ವಿದ್ಯಾರ್ಥಿಗಳಿಗೆ ಪಾಠ ಮಾಡುವುದೆಂದರೆ ನಮಗೆಲ್ಲ ಬಹಳ ಕೌತುಕದ ವಿಷಯವಾಗಿತ್ತು. ಒಂದು ದಿನ ಸಂಜೆ ಮರುದಿನದ ಕ್ಲಾಸಿನ ಸ್ಲೈಡ ತಯಾರಿಯಲ್ಲಿ ನಾನು ತಲ್ಲೀನನಾಗಿದ್ದೆ. ಆಗ ಪ್ರೈಮರಿ ಶಾಲೆಗೆ ಹೋಗುತ್ತಿದ್ದ ಮುದ್ದಿನ ಮಗಳು ಕುತೂಹಲದಿಂದ ಅಪ್ಪ ಏನು ಮಾಡುತ್ತಿರುವಿ ಎಂದು ವಿಚಾರಿಸಿದಳು. ನಿನ್ನಹಾಗೆ ನಾನೂ ಹೋಮವರ್ಕ್ ಮಾಡುತ್ತಿರುವೆ ಎಂದಾಗ ಅವಳು ನೀನು ಹೋಮವರ್ಕ್ ಮಾಡದೇ ಇದ್ದರೆ ನಿಮ್ಮ ಪ್ರಿನ್ಸಿಪಾಲ್ ನಿನಗೆ ಪನಿಶ್ಮೆಂಟ್ ಕೊಡುವರೇ ಎಂದು ಕುತೂಹಲದಿಂದ ಕೇಳಿದಳು. ಹೌದು, ನಮ್ಮ ಪ್ರಿನ್ಸಿಪಾಲ್ ನಿಮ್ಮ ಮಿಸ್ಸಗಿಂತಲೂ ಬಹಳ ಸ್ಟ್ರಿಕ್ಟ್ ಎಂದು ಹೇಳಿದೆ. ಹೌದಾ, ಹಾಗಾದರೆ ಚೆನ್ನಾಗಿ ಹೋಮವರ್ಕ್ ಮಾಡು ಎಂದು ನಾನು ತಯಾರುಮಾಡುತ್ತಿದ್ದ ಸ್ಲೈಡನ ತಲೆಬರಹ ಓದಿದಳು. ಅದು 'ABC Analysis' (ವಿಶ್ಲೇಷಣೆ) ಎಂದಾಗಿತ್ತು. ತಕ್ಷಣವೇ ನನ್ನ ಮಗಳು ಅಡುಗೆ ಮನೆಗೆ ಓಡಿ ಹೋಗಿ 'ಅಪ್ಪ ಇಷ್ಟು ವರ್ಷವಾದರೂ ಇನೂ ನನ್ನಂತೆ ABC ಕಲೀತಿದ್ದಾರೆ' ಎಂದು ತಮ್ಮ ಅಮ್ಮನಿಗೆ ತಿಳಿಸಿದಳು. ನನ್ನಾಕೆ ಹೌದೇನರೀs, ನಿಮ್ಮ ಮಗಳು ಹೇಳುವುದು ನಿಜವಾ ಎಂದು ಕೇಳಿದಳು. ಹೌದು ಈಗ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ABC ವಿಶ್ಲೇಷಣೆ ವಿಷಯ ಕುರಿತ...