ಮುದ್ದಣ್ಣನ ಖೋಲಿ...

ಸುಮಾರು ಮೂರು ದಶಕಗಳ ಹಿಂದಿನ ಮಾತು, ನನ್ನ ಡಾಕ್ಟರ್ ಅಣ್ಣನ ಮಗನ ಚೌಲ ಕರ್ಮ (ಜಾವಳ)ವನ್ನು ಆಚರಿಸಲು ನಿರ್ಧರಿಸಲಾಗಿದ್ದ ಮುನ್ನಾದಿನ ಪುಟ್ಟ ಮಗು ಅದೇಕೋ ಜ್ವರ ಬಂದು ಒಂದೇ ಸಮನೆ ಬಹಳ ಅಳುತ್ತಿತ್ತು. ಅಣ್ಣ ಅಲೋಪತಿ ಔಷಧಿಯ ಸಿರಪ್ ಎರಡು ಮೂರು ಸಲ ಹಾಕಿದರೂ ಮಗುವಿನ ಜ್ವರ ಹಾಗೂ ಅಳು ಎರಡೂ ಕಡಿಮೆಯಾಗುವ ಯಾವ ಲಕ್ಷಣಗಳು ಕಾಣಲಿಲ್ಲ.

ವಿಶ್ವವಿದ್ಯಾಲಯದಿಂದ ನಿವೃತ್ತಿಯ ನಂತರ ಹೋಮಿಯೋಪಥಿ ಡಾಕ್ಟರ್ ಎಂದೇ ಪ್ರಸಿದ್ಧರಾಗಿದ್ದ ನಮ್ಮ ತಂದೆಯವರು ಇನ್ನೂ ಮಾತಾಡಲು ಬರದ ಮಗುವಿನ ಅಳುವ ರೀತಿಯನ್ನು (ದಯನೀಯ/ಕರುಣೆ ಬರುವ ಅಥವಾ ಕಿರಿಕಿರಿ ಉಂಟು ಮಾಡುವ/ ಸಿಟ್ಟಿಗೆಬ್ಬಿಸುವ) ಗಮನಿಸಿ ಅದಕ್ಕೆ ಅನುಗುಣವಾಗಿ ಎರಡು ಸಾಬುದಾಣಿ ಗಾತ್ರದ ಸಿಹಿ ಹೋಮಿಯೋಪಥಿ ಗುಳುಗೆಗಳನ್ನು ಮಗುವಿನ ನಾಲಿಗೆಯ ಮೇಲೆ ಇಟ್ಟರು. ಏನಾಶ್ಚರ್ಯ ದಿನವಿಡೀ ಜ್ವರದಿಂದ ಬಳಲುತ್ತಿದ್ದ ಕೂಸು ಅರ್ಧ ತಾಸಿನಲ್ಲಿ ಜ್ವರ ಇಳಿದು ಕುಲು ಕುಲು ನಗಲಾರಂಭಿಸಿತ್ತು. ಇಡೀ ದಿನ ಜ್ವರದಿಂದ ಬಳಲಿ ಅಳುತ್ತಿದ್ದ ಮಗುವಿನ ಚೌಲಕರ್ಮವನ್ನು ಮರುದಿನ ಹೇಗೆ ನೆರವೇರಿಸುವದೋ ಎಂದು ಚಿಂತೆಯಲ್ಲಿದ್ದ ನಮ್ಮ ಅತ್ತಿಗೆ ನಿಟ್ಟುಸಿರು ಬಿಟ್ಟರು. ಆದರೆ ಇತ್ತ ಮನೆಯಲ್ಲಿ ಸೇರಿದ ಇತರ ಮಮ್ಮಕ್ಕಳಲ್ಲಿ ಒಬ್ಬ ಮೊಮ್ಮಗಳು ಹಠಮಾರಿತನ ದಿಂದ ಸುಖಾಸುಮ್ಮನೆ ಅಳಲಾರಂಭಿಸಿದ್ದಳು. ಅವಳ ತಾಯಿ ಬೇಕಾದಷ್ಟು ಸಮಾಧಾನ ಪಡಿಸಲು ಪ್ರಯತ್ನಿಸಿರೂ ಪ್ರಯೋಜನವಾಗಿರಲಿಲ್ಲ. ನಮ್ಮ ಅತ್ತಿಗೆಯವರು ಹಠಮಾಡಿ ಅಳುತ್ತಿರುವ ಈ ಮಗುವಿಗೆ ಯಾವ ಹೋಮಿಯೋಪಥಿ ಔಷಧಿ ಗುಳಿಗೆ ಕೊಡುವಿರೆಂದು ನಮ್ಮ ತಂದೆಯವರಿಗೆ ಕೇಳಿದಾಗ, ನಮ್ಮ ತಾಯಿ ಹೋಮಿಯೋಪಥಿ ಗುಳಿಗೆ ಏನೂ ಬೇಕಾಗಿಲ್ಲ ಈ ಹಠಮಾರಿ ಹೆಣ್ಣಿಗೆ ಒಂದು ಡೋಜ್ ಮುದ್ದಣ್ಣನ ಖೋಲಿ ಕಥೆ ಸಾಕೆಂದು ಹೇಳಿದರು.

ಎತ್ತಣ ಮಾಮರ ಎತ್ತಣ ಕೋಗಿಲೆ, ಎತ್ತಣಿಂದೆತ್ತ ಸಂಬಂಧವಯ್ಯಾ ಎಂಬಂತೆ ಹಠಮಾಡುತ್ತಿರುವ ಮಗುವಿಗೂ ಕನ್ನಡದ ಕವಿ ಮುದ್ದಣನಿಗೂ ಎಲ್ಲಿಯ ಸಂಬಂಧ ಎಂದಿರೇನು?

ಹೌದು...ಕನ್ನಡ ಮಾಧ್ಯಮದಲ್ಲಿ ಶಾಲೆ ಕಲಿತ‌, ೫೦ ಕ್ಕೂ ಮೇಲ್ಪಟ್ಟ ವಯಸ್ಸಿನವರು ಮುದ್ದಣ-ಮನೋರಮೆಯರ ಜಗದ್ವಿಖ್ಯಾತ ಸರಸಸಲ್ಲಾಪದ ಸಂಭಾಷಣೆಯ ಹಳಗನ್ನಡದಲ್ಲಿರುವಂಥ ಗದ್ಯ ಪಾಠವನ್ನು  ಪಠ್ಯಪುಸ್ತಕದಲ್ಲಿ ಓದದವರಾರು.ಇದರಲ್ಲಿ ಬರುವ ಕೆಲವು ವಾಕ್ಯಗಳಾದ"ಪದ್ಯಂ ವಧ್ಯಂ ಗದ್ಯಂ ಹೃದ್ಯಂ", "ನೀರಿೞಯದ ಗಂಟಲೊಳ್ ಕಡುಬಂ ತುಱುಕಿದಂತಾಯ್ತು", ಮುಂತಾದವನ್ನು ಇಂದಿಗೂ ಮರೆತಿರುವಂತಿಲ್ಲ.ಆದರೆ, ನಮ್ಮಮ್ಮ ಹೇಳಿದ್ದು ಮುದ್ದಣ್ಣನ ಖೋಲಿಯ ಬಗ್ಗೆ ಹೊರತೂ ಕನ್ನಡದ ಕವಿ ಮುದ್ದಣನ ಬಗ್ಗೆ ಅಲ್ಲ.

ನಮ್ಮ ಮನೆಯಲ್ಲಿ ಇಂದಿಗೂ ಚಾಲ್ತಿಯಲ್ಲಿರುವ ಮುದ್ದಣ್ಣನ ಖೋಲಿ ಕಥೆ, ಪೆಟೆಂಟ ಪಡೆಯದ ಮತ್ತೂ ಕಾಲಕ್ಕೆ ತಕ್ಕಂತೆ ಮಾರ್ಪಾಡು ಮಾಡಲು ಬರುವ ಓಪನ್ ಸೋರ್ಸ್ ಸಾಫ್ಟವೇರ್ ತರಹದ್ದು. ಅದರ ರಚಿತರಾದ ನಮ್ಮ ಪಾಲಕರು, ನನ್ನನ್ನೂ ಸೇರಿ, ಐದು ಮಕ್ಕಳು ಚಿಕ್ಕವರಿದ್ದಾಗ ತಮ್ಮ ಹಠಮಾರಿತನವನ್ನು ಕಡಿಮೆಮಾಡಲು ಉಪಯೋಗಿಸಿದರೆ, ಕಾಲಾಂತರದಲ್ಲಿ ನಾವುಗಳು, ನಮ್ಮ ಪಾಲಕರ ಎಂಟು ಜನ ಮೊಮ್ಮಕ್ಕಳಿಗೆ ಅವರ ಬಾಲ್ಯದ ದಿನಗಳಲ್ಲಿ ಉಪಯೋಗಿಸಿದೆವು.ಇನ್ನು ಈಗ, ನಮ್ಮ ಮಕ್ಕಳು ತಮ್ಮ ಮಕ್ಕಳಿಗೆ ಹೇಳು(ಉಪಯೋಗಿಸು)ತ್ತಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಇಂಗ್ಲೆಂಡಿನಲ್ಲಿ ನೆಲೆಸಿರುವ ನನ್ನ ಅಕ್ಕನ ಮಗಳು ಅಲ್ಲೇ ಹುಟ್ಟಿ ಬೆಳೆಯುತ್ತಿರುವ ತನ್ನ ಮಗನ ಮೇಲೆ ಇಂಗ್ಲೀಷ್ ನಲ್ಲಿ ಪ್ರಥಮ ಬಾರಿ ಕಥೆಯ ಪ್ರಯೋಗ ಮಾಡಿದಳಂತೆ. ನಮ್ಮ ಮುದ್ದಣ್ಣನ ಖೋಲಿಯ ಕಥೆ ಅಲ್ಲೂ ಒಳ್ಳೆಯ ಪರಿಣಾಮ ಬೀರಿದೆಯಂತೆ. ಅಂದರೆ, ನಮ್ಮ ಮುದ್ದಣ್ಣನ ಖೋಲಿಯ ಕಥೆ ಮರ್ಮ ಮತ್ತೂ ಉಪಯುಕ್ತತೆಯಲ್ಲಿ ದೇಶ ಕಾಲಗಳನ್ನು ಮೀರಿದ್ದಾಗಿದೆ. ಹಾಗಾದರೆ, ಬನ್ನಿ ನಮ್ಮ ಮುದ್ದಣ್ಣನ ಖೋಲಿಯ ಮೂಲ ಕಥೆಯ ಸಂಕ್ಷಿಪ್ತ ಪರಿಚಯವನ್ನು ಸ್ವಲ್ಪ ಮಾಡಿಕೊಳ್ಳೋಣ.

ಒಂದೂರಿನಲ್ಲಿ ಒಬ್ಬ ಪಾಲಕರ ಮನೆಯಲ್ಲಿ ಮುದ್ದಣ್ಣ ಎಂಬ ಹಠಮಾರಿ ಮಗ ಮತ್ತು ಇತರ ಮೂರು/ನಾಲ್ಕು, ಗಂಡು/ಹೆಣ್ಣು ಮಕ್ಕಳಿದ್ದರು. ಒಂದು ದಿನ ಈ ಮೊಂಡು ಹಠಮಾರೀ ಮುದ್ದಣ್ಣ ವಿನಾಃ ಕಾರಣ ಬಹಳ ಹಟ ಮಾಡಹತ್ತಿದ. ಪಾಲಕರು ಸಮಾಧಾನ ಮಾಡಲು ಸಾಕಷ್ಟು ಪ್ರಯತ್ನಿಸಿದರೂ ಅವನು ತನ್ನ ಹಠ ಕಡಿಮೆ ಮಾಡದಿದ್ದಾಗ ಪಾಲಕರು ಬೇಸತ್ತು ಆ ಮೊಂಡು ಹಠಮಾರಿ ಮುದ್ದಣ್ಣ ನನ್ನು ದರ ದರ ಎಂದು ಎಳೆದು ಮನೆಯ ಒಂದು ಕತ್ತಲು ಕೋಣೆ/ಖೋಲಿಯಲ್ಲಿ ತಳ್ಳಿ ಬಾಗಿಲಿಗೆ ಕೊಂಡಿ ಜಡೆದು ಇತರ ಮಕ್ಕಳನ್ನು ಜಾತ್ರೆಗೆ ಕರೆದುಕೊಂಡು ಹೋಗುತ್ತಾರೆ.ಇತ್ತ ಕತ್ತಲು ಕೋಣೆಯಲ್ಲಿ ಅಳುತ್ತಾ ಕುಳಿತಿದ್ದ ಹಠಮಾರಿ ಮುದ್ದಣ್ಣನಿಗೆ ಮೇಲಿನಿಂದ ಬಂದ ಒಂದು ಚೇಳು ಕಚ್ಚಿದರೆ ಅತ್ತ ಉಳಿದ ಒಳ್ಳೆಯ ಮಕ್ಕಳು ಜಾತ್ರೆಯಲ್ಲಿ ಬಲೂನು, ಚೆಂಡುಗಳನ್ನು ಪಾಲಕರಿಂದ ಕೊಡಿಸಿ ಕೊಂಡು, ಬೆಂಡು-ಬತ್ತಾಸ ಖರೀದಿಸಿ ಸಂಜೆ ಮನೆಗೆ ನಗುನಗುತ್ತಾ ಮರಳುತ್ತಾರೆ. ಮನೆಯ ಕತ್ತಲು ಕೋಣೆಯಲ್ಲಿ ಹಠಮಾರಿ ಮುದ್ದಣ್ಣನ ಅಳುವ ಧ್ವನಿ ಚೇಳಿನ ಕಡಿತದಿಂದ ತುಂಬಾ ಜೋರಾಗಿರುದನ್ನು ಕಂಡು ಪಾಲಕರು ಆ ಕತ್ತಲು ಕೋಣೆಯ ಬಾಗಿಲನ್ನು ತೆಗೆದು ಸುಂಬಳ ಸುರಿಯುತ್ತ ಅಳುತ್ತಿರುವ ಹಠಮಾರಿ ಮುದ್ದಣ್ಣನನ್ನು ಹೊರಕ್ಕೆ ಕರೆತಂದು ವಿಚಾರಿಸಿದಾಗ ಮುದ್ದಣ್ಣ ತನಗಾದ ಪರಿಸ್ಥಿತಿಯನ್ನು ಬಿಕ್ಕುತ್ತಾ ಹೇಳುತ್ತಾನೆ. ಅವನ ಮುಖ ಕೈಕಾಲು ತೊಳೆದು, ಈ ರೀತಿಯ ಸುಖಾಸುಮ್ಮನೆ ಹಠಮಾರಿತನ ಮಾಡಿದರೆ ತನ್ನ ಪರಿಸ್ಥಿತಿ ಎನಾಗುವದೆಂಬ ಅರಿವನ್ನು/ಮನವರಿಕೆಯನ್ನು ಮುದ್ದಣ್ಣನಿಗೆ ಚನ್ನಾಗಿ ಮಾಡಿಸಿ ಉಳಿದ ಮಕ್ಕಳು ಜಾತ್ರೆಯಲ್ಲಿ ತಂದ ಆಟಿಗೆಯ ವಸ್ತುಗಳನ್ನು ಮುದ್ದಣ್ಣನೊಂದಿಗೆ ಹಂಚಿಕೊಳ್ಳಲು ಹೇಳುತ್ತಾರೆ. ಅಂದಿನಿಂದ ಆ ಮುದ್ದಣ್ಣ ತನ್ನ ಮೊಂಡು ಹಠಮಾರಿತನವನ್ನು ಬಿಟ್ಟು ಒಳ್ಳೆಯ ಹುಡುಗನಾಗುತ್ತಾನೆ....

ಈ ರೀತಿ ನಮ್ಮೆಲ್ಲರ ಮೆಚ್ಚಿನ ನಮ್ಮ ಮುದ್ದಣ್ಣ ನ ಖೋಲಿಯ ಕಥೆ ತಲೆತಲಾಂತರದಿಂದ ನಮ್ಮ ಮನೆತನದಲ್ಲಿ ಚಿಕ್ಕಮಕ್ಕಳ ಮೇಲೆ ಒಳ್ಳೆಯ ಪರಿಣಾಮ ಬೀರುವ ಒಂದು ಉತ್ತಮ ಕಥಾ ಸಾಧನವಾಗಿ ಇಂದಿಗೂ ಮುಂದುವರೆದಿದ್ದು, ದೇಶ,ಕಾಲ ಮತ್ತು ಸನ್ನಿವೇಶಕ್ಕೆ ತಕ್ಕಂತೆ ಕಥೆ ಸ್ವಲ್ಪ ರೂಪಾಂತರ ಹೊಂದುತ್ತಿದೆ.ಇಂದಿನ ಚಿಕ್ಕಮಕ್ಕಳ ಹಟಕ್ಕೆ ಕಾರಣಗಳು ಬದಲಾಗುತ್ತಿವೆ.ಒಳ್ಳೆಯ ಮಕ್ಕಳು ಇಂದು ಜಾತ್ರೆಯಿಂದ ಅಪ್ ಗ್ರೇಡಾಗಿ ಮಾಲ್, ಗೇಮ್ ಝೋನ್ ಗಳಿಗೆ ಹೋದರೆ, ಬಲೂನು, ಚೆಂಡುಗಳ ಬದಲು ವಿವಿಧ ಇಲೆಕ್ಟ್ರಾನಿಕ್ ಗೇಮಿನ ಆಟಿಗೆಗಳನ್ನು ಖರೀದಿಸುತ್ತಾರೆ. ಇನ್ನು ಬೆಂಡು-ಬತ್ತಾಸದ ಬದಲೀ ಪಿಝಾ-ಬರ್ಗರ್ ತಿಂದು ಬರುತ್ತಾರೆ.ಆದರೆ ಮುದ್ದಣ್ಣನನ್ನು ದರದರ ಎಳೆದು ತಂದು ಕೂಡಿಹಾಕಿದ ನಮ್ಮ ಮನೆಯ ಅಂದಿನ ಆ ಕಾಲ್ಪನಿಕ ಕತ್ತಲ ಕೋಣೆ/ಖೋಲಿ ಇಂದಿಗೂ ಮುದ್ದಣ್ಣನ ಖೋಲಿ ಎಂದೇ ಪ್ರಸಿದ್ದವಾಗಿದೆ. ಇಂದಿನ ನಮ್ಮ ಮೊಮ್ಮಕ್ಕಳು ಊಟ ಮಾಡದೇ, ಮೋಬೈಲ್ ಕೈಯಿಂದ ಬಿಡದೇ ಹಟ ಮಾಡಿದಾಗ ಅವರ ತಾಯಂದಿರು ಒಂದು ಡೋಜ್ ಮುದ್ದಣ್ಣನ ಖೋಲಿಯ ನೆನಪು ಮಾಡುವ ಔಷಧಿಯನ್ನು ಪ್ರಯೋಗಿಸಿ ಪರಿಸ್ಥಿತಿ ಹತೋಟಿಗೆ ತರುವುದುಂಟು. ಒಂದು ರೀತಿ ನಮ್ಮ ಮನೆಯ ಮುದ್ದಣ್ಣನ ಖೋಲಿ ಜಾಗ್ರತವಾಗಿದ್ದು, ಇಂದಿಗೂ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿದೆ.

ನಮ್ಮ ಮನೆಯ ಮುದ್ದಣ್ಣನ ಖೋಲಿ ಕಥೆ ಒಂದು ರೀತಿಯ ಎಕ್ಸ್ ಪೈರೀ ಡೇಟ ಇಲ್ಲದ ಮತ್ತೂ ಸೈಡ್ ಎಫೆಕ್ಟ್ ಇಲ್ಲದ ವ್ಯಾಕ್ಸೀನ್ ತರಹದ ಔಷಧಿ. ಮೊದಲ ಬಾರಿ ಪೂರ್ತಿ ಕಥೆಯನ್ನು ಪ್ರಯೋಗಿಸಿದರೆ ಅದರ ಪರಿಣಾಮ ಹಲವು ತಿಂಗಳುಗಳ ಮಟ್ಟಿಗೆ ಇರುತ್ತದೆ. ಅನಂತರದ ದಿನಗಳಲ್ಲಿ ಕೇವಲ ಕಥೆಯ ಸ್ವಲ್ಪ ನೆನಪಿನ ಬುಸ್ಟರ್ ಡೋಜ ಕೊಟ್ಟರೂ ಸಾಕು ಅದು ಮತ್ತೇ ಅನೇಕ ತಿಂಗಳುಗಳ ವರೆಗೆ ಪರಿಣಾಮವನ್ನು ಬೀರುತ್ತದೆ. ಹಾಗಂತ ಇದನ್ನು ಹಠಮಾರಿ ಗಂಡ/ಹೆಂಡತಿಯ ಮೇಲೆ ಪ್ರಯೋಗಿಸಿದರೆ ಆಗುವ ಅಡ್ಡ ಪರಿಣಾಮಗಳಿಗೆ ನಾನು ಜವಾಬ್ದಾರನಲ್ಲ!!!. ಏನಿದ್ದರೂ ಇದನ್ನು ಕೇವಲ ನಿಮ್ಮ ಮನೆಯ ಹಠಮಾರಿ ಚಿಕ್ಕ ಮಕ್ಕಳು ಅಥವಾ ಚಿಕ್ಕ ಮೊಮ್ಮಗಳ ಮೇಲೆ ಮಾತ್ರ ಉಪಯೋಗಿಸಬಹುದು.


-ಜಯಂತ ಕಿತ್ತೂರ 

ಕಾಮೆಂಟ್‌ಗಳು

  1. ಈ ಡೋಸು ಗೊತ್ತಿರಲಿಲ್ಲ.....ನಮ್ಮಮ್ಮ ಬವ್ವಾ ಕರೀತೀನಿ ನೋಡು ಅಂತ ಅಂಜಸ್ತಿದ್ದುದು ನೆನಪಿದೆ. ಮುದ್ದಣ್ಣನ ಖೋಲಿ ಐಡಿಯಾ ಮಸ್ತ್ ಸಿಕ್ತು

    ಪ್ರತ್ಯುತ್ತರಅಳಿಸಿ
  2. ಒಳ್ಳೆಯ ಲೇಖನ ಅಭಿನಂದನೆಗಳು.

    ಪ್ರತ್ಯುತ್ತರಅಳಿಸಿ
  3. ನಿಮ್ಮ ಲೇಖನ ಓದಿ ಹಳೆಯ ನೆನಪುಗಳು ಮರುಕಳಿಸಿದವು ಸರ್. ನಮ್ಮ ಸೋದರತ್ತೆ ಅವರಿಗೀಗ ಭರ್ತಿ ೮೬ವರ್ಷ. ನಾವು ಆರು ಜನ ಮಕ್ಕಳು(ಐದು ಜನ ಅಕ್ಕಂದಿರು, ಕೊನೆಯವನಾಗಿ ನಾನು). ನಮ್ಮದು ಬಾಗಲಕೋಟೆಯಲ್ಲಿ ವಾಡೆಯಂತಹ ಸುಮಾರು ೧೬-೧೭ ಕೋಲಿಗಳಿರುವ ಮನೆ. ನಾವೂ ಅತೀ ಮೊಂಡತನ ಮಾಡಿದಾಗ ನಮ್ಮ ಸೋದರತ್ತೆ ದರದರ ಎಳೆದುಕೊಂಡು ಕತ್ತಲ ಕೋಲಿ ಒಳಗ ಹಾಕಿ ಬಿಡತಿದ್ರು. ಏನ್ ಅತ್ರೂ ಬಾಗಿಲು ತಗಿತಿರಲಿಲ್ಲ. ಆರು ಜನ ಇದ್ವಿ ಹಾಗಾಗಿ ವಾರದಾಗ ೩-೪ ಜನ ಆ ಕೋಲಿ ಖಾಯಂ ಅತಿಥಿ ಆಗ್ತಿದ್ವಿ ಸರ್. ಆಗಿನ ಕಾಲದ ಭಯಕ್ಕೂ ಈಗಿನ ಕಾಲದ ಭಯಕ್ಕೂ ಇರುವ ವ್ಯತ್ಯಾಸವನ್ನ ಸೂಕ್ಷ್ಮ ಸಂವೇದನೆಯೊಂದಿಗೆ ಗುರತಿಸಿ ಬರೆದ ನಿಮ್ಮ ಕಾರ್ಯ ಸ್ತುತ್ಯಾರ್ಹ.
    ಶರಣು ಶರಣಾರ್ಥಿಗಳೊಂದಿಗೆ,
    ಹರ್ಷವರ್ಧನ ಬಸವರಾಜ ಇಂಡಿ,
    ಬಾಗಲಕೋಟೆ.

    ಪ್ರತ್ಯುತ್ತರಅಳಿಸಿ
  4. ಈ ಲೇಖನ ನಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿದೆ ಸರ.

    ಪ್ರತ್ಯುತ್ತರಅಳಿಸಿ
  5. Another interesting story.. we use ‘time out’ to send kids in the basement or isolate them in a room.
    This story reminded me about your Father giving homeopathic medicine to my daughter who was hardly 2 year old for stomach pain and it worked like magic.. my wife remembers it every time I talk about your family

    ಪ್ರತ್ಯುತ್ತರಅಳಿಸಿ
  6. ಮಕ್ಕಳಿಗೆ ಹೇಳುವ ಮನದಲ್ಲಿ ಅಂಜಿಕೆ ಮೂಡಿಸಿದ ಕಥೆ ಸೊಗಸಾಗಿದೆ🌹👌👌🙏
    ಶ್ರೀಪಾದ ಆಲಗೂಡಕರ
    ಪುಣೆ

    ಪ್ರತ್ಯುತ್ತರಅಳಿಸಿ
  7. Sir really nice ನಾನು ಕೂಡಾ ಈ ಮುದ್ದಣ್ಣ ಕೋಣೆ ಅನುಭವ ಉಂಡಿದೇನೆ.

    ಪ್ರತ್ಯುತ್ತರಅಳಿಸಿ
  8. We can easily relate and recollect those days. Excellently put it. "Kattalu khali kholi adaru Muddannana kholi sogasagide oduvarige" !! Keep writing...

    ಪ್ರತ್ಯುತ್ತರಅಳಿಸಿ
  9. ಜಯಂತ, ಬರಹ ಓದಿದೆ. ನಮ್ಮವೂ ಕೂಡ ಅಂಥವೇ ಅನುಭವಗಳು.

    ಪ್ರತ್ಯುತ್ತರಅಳಿಸಿ
  10. ಸರ್ ಈ ಬರಹ ತುಂಬಾ ಚೆನ್ನಾಗಿದೆ

    ಪ್ರತ್ಯುತ್ತರಅಳಿಸಿ
  11. ಈ ಸಲವಂತೂ ನಿಮ್ಮ ಲೇಖನ ಡೋಸ್ (ಹೊರಗೆ ನಿಲ್ಲುವ) outstanding ಹಾಗೆ ಇದೆ. ನಮ್ಮ ಸೂಕ್ಷ್ಮ ಮನಸ್ಸಿನ ಜೊತೆ ಆಟ ಆಡಿ ಆನಂದ ಪಡುತ್ತೀರಿ ಅಂತ ನಿಮ್ಮ ಮೇಲೆ ದೇವರಿಗೆ ಕಂಪ್ಲೇಂಟ್ ಕೊಡಲು ನಿರ್ಧರಿಸಿದೆ. ನಮಗೆ ಕತ್ತಲು ಕೋಣೆ ಅಂತ ಪ್ರತ್ಯೇಕವಾಗಿ ಇರಲಿಲ್ಲ. ಎದುರಿಗಿನವರು ಕಣ್ಣು ತೆಗೆದರೆ ಸಾಕು ಇಡೀ ಮನೆ ಕತ್ತಲೆಯಾಗುತ್ತಿತ್ತು. ಈ ಸಲ ನಿಮ್ಮ ಲೇಖನ ತುಂಬಾ ಚೆನ್ನಾಗಿದೆ.

    ಪ್ರತ್ಯುತ್ತರಅಳಿಸಿ
  12. ನಿಮ್ಮ ಮುದ್ದಣ್ಣನ ಗೋಲಿ ನಮ್ಮ ಮನಿಯೊಳಗೂ ಇತ್ತು. ಆದರೆ ಅದಕ್ಕ ಹಟಮಾರಿ ಮುದ್ದಣ್ಣ ಅಂತ ಹೆಸರಿತ್ತು.
    ನಿಮ್ಮ ಕತೆಗಳು ನಮ್ಮ ಬಾಲ್ಯದ ದಿನಗಳ ನೆನಪು ತರುತ್ತವೆ.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನನ್ನ ಬಿಳಿ ತಲೆಯ ಬಣ್ಣಗಳು ...(ಭಾಗ-೧)

ದಿಖಾವೇಪೆ ಮತ್ ಜಾವೋ ಅಕಲ್ ಲಗಾವೋ...

ಇವಾ ಯಾವೂರವಾ...