ನನ್ನ ಬಿಳಿ ತಲೆಯ ಬಣ್ಣಗಳು (ಭಾಗ-೨).
ಭಾಗ...೨ (ಕೊನೆಯದಕ್ಕೂ ಮೊದಲಿನ ಭಾಗ)
ನಮ್ಮ ಮಗಳನ್ನು ಮನೆ ಸನಿಹದ ಪ್ರಾಥಮಿಕ ಶಾಲೆಗೆ (ನಡೆದುಕೊಂಡು ಹೋಗಿ) ಬಿಟ್ಟುಬರುವ ಮತ್ತೂ ಮನೆಗೆ ಕರೆದುಕೊಂಡು ಬರುವ ಕೆಲಸ ನನ್ನ ಶ್ರೀಮತಿಯದಾಗಿತ್ತು. ಅದೇನೋ ಒಂದು ದಿನ, ಮಗಳನ್ನು ಶಾಲೆಯಿಂದ ಕರೆತರಲು ನಾನು ನನ್ನ ಬೈಕ್ ಮೇಲೆ ತೆರಳಿದೆ. ಮನೆ ಸೇರಿದ ಮೇಲೆ ನನ್ನ ಮಗಳು, ಇನ್ನು ಮೇಲೆ ಅಪ್ಪ ನನ್ನನ್ನು ಶಾಲೆಗೆ ಬಿಡಲು ಅಥವಾ ಕರೆಯಲು ಬರುವಂತಿಲ್ಲ ಎಂದು ಫರ್ಮಾನು ಹೊರಡಿಸಿದಳು. ನಾನು ಮಗಳನ್ನು ಸರಿಯಾಗಿ ಕೂಡಿಸಿಕೊಂಡು ನಿಧಾನವಾಗಿ ಬೈಕ್ ಓಡಿಸಿಕೊಂಡು ಬಂದರೂ,ನನ್ನ ಮಗಳು ಹೀಗೇಕೆ ಕಾಯ್ದೆಮಾಡಲು ಹಟ ಹಿಡಿದಿದ್ದಾಳೆಂದು ಕಾರಣ ತಿಳಿದುಬರಲಿಲ್ಲ. ನಂತರ ಶ್ರೀಮತಿಯಿಂದ ತಿಳಿದಿದ್ದೇನೆಂದರೆ, ನಾನು ಮಗಳ ಕ್ಲಾಸಿನ ಟೀಚರ್ ಹತ್ತಿರ ನಮ್ಮ ಮಗಳನ್ನು ಕರೆದುಕೊಂಡು ಹೋಗಲು ಬಂದಿರುವುದಾಗಿ ತಿಳಿಸಿದಾಗ, ನನ್ನ ಮಗಳ ಗೆಳೆತಿಯರು ನನ್ನ ಕರಿಮಿಶ್ರಿತ ಬಿಳಿ ತಲೆಯನ್ನು ಗಮನಿಸಿ ನಿಮ್ಮ 'ಅಜೋಬಾ' ನಿನ್ನನ್ನು ಕರೆದುಕೊಂಡು ಹೋಗಲು ಬಂದಿರುವರು ಎಂದಿದ್ದರಂತೆ.!!! ಅಂತೂ, ಅಂದಿನಿಂದ ಮುಂದೆಂದೂ ನಾನು ಅವಳ ಪ್ರಾಥಮಿಕ ಶಾಲೆಗೆ ಹೋಗಲಿಲ್ಲ.
ಇನ್ನು ಅವಳು ಹೈಸ್ಕೂಲಿಗೆ ಬರುವಷ್ಟರಲ್ಲಿ ನಾನೂ ನಮ್ಮ ಕಾಲೇಜಿನ ಪ್ಲೇಸ್ಮೆಂಟ್ ಆಫೀಸರ್ ಆಗಿ ಬಡ್ತಿ ಹೊಂದಿದ್ದೆ.ಅದನ್ನರಿತ ಅವರ ಶಾಲೆಯ ಆಡಳಿತ ಮಂಡಳಿ, ಕರಿಯರ್ ಪ್ಲಾನಿಂಗ್ ವಿಷಯದಲ್ಲಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಲು ನನ್ನನ್ನು ತಮ್ಮ ಶಾಲೆಗೆ ಆವ್ಹಾನಿಸಿದರಷ್ಟೇ ಅಲ್ಲ, ನನಗೆ ಶಾಲೆಯ ಬೆಟರಮೆಂಟ್ ಕಮೀಟಿಯ ಸದಸ್ಯನಾಗಲು ಆವ್ಹಾನಿಸಿತ್ತು. ಆ ವೇಳೆಗಾಗಲೇ ನನ್ನ ಮಗಳು ನನ್ನ ಕರಿಬಿಳಿ ತಲೆಯ ಮಹತ್ವವನ್ನು ಅರಿತಿದ್ದು, ನಾನು ಅವಳ ತಂದೆಯಂದು ಅಭಿಮಾನದಿಂದ ತನ್ನ ಶಾಲೆಯಲ್ಲಿ ಬೀಗಿದ್ದಳಂತೆ. ಆದರೆ ಮನೆಯಲ್ಲಿ ನನ್ನೊಂದಿಗೆ ಜಗಳವಾಡಿದಾಗ ಮಾತ್ರ ನನ್ನ ಮುದ್ದಿನ ಮಗಳು "ಅಪ್ಪss ನೀನು ಮಲಗಿದಾಗ ನಾನು ನಿನ್ನ ತಲೆಗೆ ಹೇರ್ ಡೈ ಬಳಿದು ಬಿಡುವೆ ಜೋಕೆ" ಎಂದು ನನ್ನ ಮೇಲೆ ಬ್ರಹ್ಮಾಸ್ತ್ರ ಉಪಯೋಗಿಸುತ್ತಿದ್ದಳು.
ನಮ್ಮ ಕಾಲೇಜಿನಲ್ಲಿ ಪ್ರಥಮ ವರ್ಷದ ವಿಷಯಗಳನ್ನು ಆಯಾ ವಿಭಾಗದ ಹಿರಿಯ ಪ್ರಾಧ್ಯಾಪಕರೇ ಕಲಿಸಲು ಮುಂದಾಗಬೇಕೆಂಬ ಅಲಿಖಿತ ಆದೇಶ ವಿದ್ದಿತು. ನಾನು ವಯಸ್ಸು ಮತ್ತೂ ಸೇವಾ ಹಿರಿತನದಲ್ಲಿ ಚಿಕ್ಕವನಾದರೂ, ನನ್ನ ಕರಿಬಿಳಿ ತಲೆಗೂದಲಿನಿಂದಾಗಿ, ನನಗೂ Elements of Mechanical Engineer ವಿಷಯವನ್ನು ಇತರ ಹಿರಿಯ ಸಹೋದ್ಯೋಗಿಗಳ ಜೊತೆ ಪ್ರಥಮ ವರ್ಷದ ಒಂದು ವರ್ಗಕ್ಕೆ ಕಲಿಸುವ ಭಾಗ್ಯ ನಿರಂತರವಾಗಿ ದಕ್ಕಿತು. ಅದರ ಫಲವೇ ಎಂಬಂತೆ ಮುಂದೆ ಆ ವಿಷಯದ ಒಂದು ಪಠ್ಯ ಪುಸ್ತಕವನ್ನು ನಾನು ಬರೆಯಲು ಸಹಕಾರಿಯಾಯಿತು. ಅಲ್ಲದೇ, ನಾನು ವಾರಿಗೆಯ ಸಹೋದ್ಯೋಗಿಗಳ ಜೊತೆ ಕಾಲೇಜಿನ ಹೊರಗೆ ಪಕ್ಕದ ಬ್ಯಾಂಕ್,ಪೋಸ್ಟ ಆಫೀಸ ಅಥವಾ ಚಹಾದ ಗೂಡಂಗಡಿಗೆ ಹೋದಾಗ ನನ್ನ ಕರಿಬಿಳಿ ತಲೆಗೂದಲಿನ ಪ್ರಭಾವದಿಂದಾಗಿ ನನಗೆ ಪ್ರಥಮ ಆದ್ಯತೆಯ ಸೇವಾ ಪ್ರಾಶಸ್ಥ ದೊರಕುತ್ತಿತ್ತು.
ನಮ್ಮ ಕಾಲೇಜು ಬೆಳಗಾವಿ-ಗೋವಾ ಹೈವೇಯ ಪಕ್ಕದಲ್ಲೇ ಇರುವುದರಿಂದ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚು. ಒಂದು ದಿವಸ ಒಬ್ಬ ಯುವ ಆಟೋ ಚಾಲಕ ರಾಂಗ್ ಸೈಡದಿಂದ ಬಂದು ನೋಡನೋಡುವುದರಲ್ಲಿ ಢಮಾರೆಂದು ನನ್ನ ಬೈಕಿಗೆ ಗುದ್ದಿಯೇ ಬಿಟ್ಟ. ಕೂಡಲೆ ಜನ ಸೇರಿದರು. ಕೆಲವರು ನನ್ನ ಪಕ್ಷವಹಿಸಿ ಆ ಆಟೋದವನನ್ನು ಉಗಿಯಲು ಪ್ರಾರಂಭಿಸಿದರು.ಇತರರು ಕ್ಷಣಾರ್ಧದಲ್ಲಿ ಘಟಿಸಿದ ಅಪಘಾತದಲ್ಲಿ ಯಾರದು ಸರಿ ಯಾರು ತಪ್ಪು ಎಂದು ವಿಶ್ಲೇಷಿಸಲು ಮುಂದಾದರು. ಅಷ್ಟರಲ್ಲಿ ಅಲ್ಲಿಗೆ ಬಂದ ಪೋಲಿಸನು "ಸಾಹೇಬರೇ ಅವನಿನ್ನೂ ಯುವಕ, ನಿಮ್ಮ ತಲೆ ಬಿಳಿಯಾದರೂ ಅದೇನು ಅವಸರ ನಿಮಗೆ, ನೀವಾದರೂ ನಿಧಾನವಾಗಿ ಗಾಡಿ ನಡೆಸಬಾರದೇ. ಈಗ ಎರಡೂ ಗಾಡಿಗಳಿಗೆ ಜಾಸ್ತಿ ಜಖಂ ಆಗಿಲ್ಲ ಆದ್ದರಿಂದ ನಿಮ್ಮ ನಿಮ್ಮ ಗಾಡಿ ರಿಪೇರಿ ನೀವೇ ಮಾಡಿಸಿಕೊಳ್ಳಿರಿ" ಎಂದು ತೀರ್ಪು ನೀಡಿ ನೆರೆದ ಜನರನ್ನು ಚದುರಿಸಲು ತೊಡಗಿದ.
ನಮ್ಮ ಇಂಜಿನಿಯರಿಂಗ್ ಕಾಲೇಜಿನ ಕೆಲವು ಪ್ರೊಫೆಸರ್ ಗಳ ತಲೆಗೂದಲು ನನ್ನಂತೆ ಕರಿಯಿಂದ ನಿಧಾನವಾಗಿ ಬಿಳಿಗೆ ತಿರುಗಲಾರಂಭಿಸಿದಾಗ, ಅದರಲ್ಲಿರುವ ರಾಸಾಯನಿಕ ಪದಾರ್ಥಗಳು ಆರೋಗ್ಯಕ್ಕೆ ಹಾನಿಕಾರಕ ಎಂದು ಗೊತ್ತಿದ್ದರೂ, ಮನೆಯೊಡತಿಯರ ಒತ್ತಾಯಕ್ಕೆ ತಲೆಬಾಗಿಯೋ ಅಥವಾ ಕಾಲೇಜಿನ ಹುಡುಗಿರ ಮೇಲೆ ಇಂಪ್ರೇಷನ್ ಹೊಡೆಯಲೋ ಗೊತ್ತಿಲ್ಲ, ಅಂತೂ ತಲೆ ಕೂದಲ ಡೈಯಿಂಗ್ ಗೆ ಅವರು ಮುಂದಾದರು.
ಅಂದಹಾಗೆ, ನಾವು ತಿಳಿದಂತೆ ಕೂದಲು ಡೈಯಿಂಗ್ ಆಗ ಅಷ್ಟೆನೂ ಸುಲಭದ ಕೆಲಸವಾಗಿರಲಿಲ್ಲ.ಅದು ಒಂದು ರೀತಿಯಲ್ಲಿ ಧಾರ್ಮಿಕ ವೃತಾಚರಣೆಯ ತರಹದ್ದಾಗಿತ್ತು. ಇದನ್ನು ಪ್ರಾರಂಭಿಸುವದಕ್ಕೂ ಮೊದಲು ಹಲವು ಬಾರಿ ವಿಚಾರಮಾಡಿ ಪ್ರಾರಂಭಿಸಿದರೆ ಒಳಿತು ಎಂಬುದು ಅನುಭವಿಕರ ಮಾತು. ಯಾಕೆಂದರೆ, ಈ ಬಿಳಿ ತಲೆಗೂದಲ ಕರಿ ಲೇಪನ ವೃತದ ಆಚರಣೆಯ ನಿಯಮಗಳು ಬಹಳ ಕಟ್ಟುನಿಟ್ಟು.ಈ ನಿಯಮಗಳ ಸರಿಯಾದ ಪಾಲನೆ ಆಗದಿದ್ದರೆ ನೀವು ಅಂದುಕೊಂಡ ಫಲಪ್ರಾಪ್ತಿ ಆಗಲಿಕ್ಕಿಲ್ಲ. ಹ಼ಾ,ಇದು ಜಾತ್ಯಾತೀತವಾದ ವೃತ. ಅಷ್ಟೇ ಅಲ್ಲ ಈ ವೃತವನ್ನು ಲಿಂಗ ಭೇದವಿಲ್ಲದೆ ಹೆಂಗಸರು ಅಥವಾ ಗಂಡಸರು ಯಾರು ಬೇಕಾದರೂ ಪಾಲಿಸಬಹುದು. ಆದರೆ, ಒಮ್ಮೆ ಈ ವೃತಾಚರಣೆಯ ಸಂಕಲ್ಪ ಮಾಡಿ ಪ್ರಾರಂಭಿಸಿದರೆ ದಶಕಗಳ ತನಕ ಬಿಡಲು ಬರುವದಿಲ್ಲ.
ಈ ಕಾರ್ಯಕ್ರಮಕ್ಕೆ ಪಂಚಾಂಗ ನೋಡಿ ರವಿವಾರ ಇಲ್ಲಾ ಇತರ ರಜಾ ದಿನಗಳ ತಿಥಿಯೇ ಆಗಬೇಕು. ಬೆಳಗಿನ ಜಾವ ಮನೆ ಮಂದಿ ಹೇಳುವುದಕ್ಕೂ ಕನಿಷ್ಟಪಕ್ಷ ಒಂದೆರಡು ತಾಸು ಮೊದಲು ಇಲ್ಲವೇ ರಾತ್ರಿ ಮನೆಯಲ್ಲಿ ಎಲ್ಲರೂ ಮಲಗಿದ ಮೇಲೆಯೇ ಆಗಬೇಕು. ಇನ್ನು ಈ ಕರ್ಮಕ್ಕೆ ಮೊದಲೇ ನಿಗದಿಪಡಿಸಿದ ಬಟ್ಟೆ ಬರೆಯನ್ನೇ ಧರಿಸ ಬೇಕು. ಜೊತೆಗೆ ಉಪ್ಪರಣಿಯಂತಹ ಒಂದು ಚಿಕ್ಕ ಮೆತ್ತನೆಯ ಹತ್ತಿ ಬಟ್ಟೆ ಇರಲೇ ತಕ್ಕದ್ದು. ಈ ಕಾರ್ಯಕ್ರಮಕ್ಕೆ ಉಪಯೇಗಿಸುವ ಮಡೀ ಬಟ್ಟೆಯನ್ನು ಮತ್ತೂ ತಾಬಾಣ, ಥಾಲಿಗಳನ್ನು ಇತರ ಕಾರ್ಯಗಳಿಗೆ ಬಳಸುವಂತಿಲ್ಲ. ಗೋದ್ರೆಜ್ ಕಂಪನಿಯ ಹೇರ್ ಡೈಯಿಂಗ್ ಪೌಡರಗೆ ನೀರನ್ನು ಬೆರೆಸಿ ಕಂಪನಿಯವರು ಕೊಟ್ಟ ಬ್ರಶ್ ನಿಂದ ಕೂದಲ ಬುಡದಿಂದ ತುದಿಯವರೆಗೆ ಕನ್ನಡಿಯಲ್ಲಿ ನೋಡುತ್ತಾ ನಿಧಾನವಾಗಿ ತದೇಕಚಿತ್ತದಿಂದ ಹಚ್ಚಿಕೊಳ್ಳಬೇಕು. ಇಲ್ಲಿ ಒಂದು ಫಜೀತಿಯಂದರೆ ನೀರಿನ ಪ್ರಮಾಣ ಸ್ವಲ್ಪವೇ ಜಾಸ್ತಿ ಆದರೂ ಕರಿಬಣ್ಣ ಹರಿದು ಕಪಾಳಕ್ಕೆ ಬರುವುದನ್ನು ತಕ್ಷಣ ತುಂಡು ಬಟ್ಟೆಯಿಂದ ಚೆನ್ನಾಗಿ ಒರೆಸಿಕೊಳ್ಳಬೇಕು.ಇಲ್ಲದಿದ್ದರೆ ಮುಖದ ನಾನಾ ಭಾಗಗಳಲ್ಲಿ ಕಪ್ಪುನಾಮಗಳು ಉಳಿದುಬಿಡುವುದುಂಟು. ಇನ್ನು ಒದ್ದಾಡಿ ಕೈಗಳನ್ನು ತಿದ್ದಿ ತೀಡಿ ಹಚ್ಚಿಕೊಂಡ ಬಣ್ಣ ಒಣಗುವತನಕ ಸುಮಾರು ಹೊತ್ತು ಕಾದು ನಂತರ ತಲೆಸ್ನಾನ ಮಾಡಬೇಕು. ಅದಕ್ಕಾಗಿಯೇ ಈ ವೃತವನ್ನು ಆಚರಿಸಿ ತಲೆಗೆ ಬಣ್ಣ ಹಚ್ಚಿಕೊಂಡು ನವಯುವಕರಂತೆ ಕಾಣಲು ನಮ್ಮ ಸಹೋದ್ಯೋಗಿಗಳು ರವಿವಾರ ಇಲ್ಲಾ ಇತರ ರಜಾ ದಿನಗಳ ಇದಿರು ನೋಡುತ್ತಿದ್ದರು. ಮಜಾ ಅಂದರೆ, ಮರುದಿನ ಈ ಪ್ರೊಫೆಸರ್ ಅವರ ಕ್ಲಾಸಿನ ವಿದ್ಯಾರ್ಥಿಗಳ ಲಕ್ಷವೆಲ್ಲ ಧಿಡೀರನೆ ಖರ್ರಗೆ ಕಪ್ಪಾದ ಇವರ ತಲೆಯಕಡೆಗೆನೇ. ಅಂದು ಅವರು ಮಾಡಿದ ಪಾಠ ವಿದ್ಯಾರ್ಥಿಗಳ ತಲೆಯಲ್ಲಿ ಎಷ್ಟು ಹೋಗುತ್ತಿತ್ತೋ ಆ ದೇವರೇ ಬಲ್ಲ.
ಈ ಹೇರ್ ಡೈಯಿಂಗ್ ವೃತವನ್ನು ಪ್ರತಿ ಹದಿನೈದು ದಿನಕ್ಕೊಮ್ಮೆ ಬರುವ ಏಕಾದಶಿಯಂತೆ ಕೆಲವರು ಅಥವಾ ತಿಂಗಳಿಗೊಮ್ಮೆ ಬರುವ ಸಂಕಷ್ಟಚತುರ್ತಿ ಯಂತೆ ಕೆಲವರು ಆಚರಿಸುವದುಂಟು. ಇನ್ನೂ ಕೆಲವರು ಪ್ರತಿ ಋತುವಿನಲ್ಲಿ ಒಂದು ಬಾರಿಯಾದರೂ ಆಚರಿಸುವದುಂಟು. ಇದು ಅವರವರ ಭಾವಕ್ಕೆ ಅವರವರ ಭಕುತಿಗೆ ಸಂಬಂಧಿಸಿದ ವಿಷಯ. ಅಂದರೆ, ಅವರವರ ತಲೆಗೂದಲಿನ ಸಾಂದ್ರತೆ, ತಲೆಗೂದಲಿಗೆ ಎಣ್ಣೆ ಹಚ್ಚಿ/ಹಚ್ಚದೇ ಬಾಚುವ ಪದ್ಧತಿ ಮತ್ತೂ ತಲೆಗೂದಲು ಬೆಳೆಯುವ ವೇಗವನ್ನು ಅವಲಂಭಿಸಿರುತ್ತದೆ. ಎಷ್ಟೋ ಸಲ ಕೆಲಸದ ಒತ್ತಡ ಅಥವಾ ಸಂಸಾರದ ತಾಪತ್ರಯಗಳ ಮಧ್ಯೆ ಈ ಹೇರ್ ಡೈಯಿಂಗ್ ಕ್ಲಬ್ಬಿನ ಕೆಲವು ಸದಸ್ಯರು ನಿಯಮಿತವಾಗಿ ಕೂದಲು ಬಣ್ಣ ಬಳಿದುಕೊಳ್ಳುವ ವೃತ ನಿಯಮಿತವಾಗಿ ಆಚರಿಸದಿದ್ದಲ್ಲಿ ಕರ್ರಗಿದ್ದ ಅವರ ತಲೆಗೂದಲು ನಿಧಾನವಾಗಿ ಯಾವಾಗ ಕಂದು ಬಣ್ಣಕ್ಕೆ ತಿರುಗಿ ತಾಮ್ರದ ತಲೆಗೂದಲಾಗಿ ಬದಲಾಗಿದ್ದು ತಿಳಿಯುತ್ತಿರಲಿಲ್ಲ.
ಮಜಾ ಅಂದರೆ, ನಮ್ಮಲ್ಲಿ ಕೆಲವು ಸಹೋದ್ಯೋಗಿಗಳು ಈ ಹೇರ್ ಡೈಯಿಂಗ್ ಪ್ರಾರಂಭಿಸಿದ ಕೆಲವು ವರ್ಷಗಳ ನಂತರದ ದಿನಗಳಲ್ಲಿ ನಿಧಾನವಾಗಿ ಮೀಸೆಯ ಬಣ್ಣವೂ ಬದಲಾಗಲಾರಂಭಿಸಿದಾಗ ಅವರು ಮೀಸೆಗೂ ಬಣ್ಣ ಹಚ್ಚಲು ಮುಂದಾದರು. ಆದರೆ ಇದು ತುಂಬಾ ಸೂಕ್ಷ್ಮವಾದ ಕೌಶಲ್ಯದಿಂದ ಕೂಡಿದ ಕೆಲಸ. ಹಾಗಾಗಿ ಎಲ್ಲರಿಗೂ ಜಮಾಸೋ ಕೆಲಸವಲ್ಲ. ಇದನ್ನರಿತ ಕೆಲವರು ಮೀಸೆಯನ್ನೇ ತೆಗೆದು ಬಿಟ್ಟರು. ಇನ್ನೂ ಕೆಲವರು ಚೌಲದಾಗ ಡೌಲ ಎಂಬಂತೆ ತಲೆಗೂದಲನ್ನು ಖರ್ರಗೆ ಮಾಡಿಕೊಂಡು ಐ.ಕೆ.ಗುಜ್ರಾಲ್ ತರಹದ ಬಿಳಿಯ ದಾಡಿ-ಮೀಸೆ ಹೊತ್ತುಕೊಂಡರು. ಮತ್ತೆ ಕೆಲವರು ನಮ್ಮ ಕಾಂಗ್ರೆಸ್ ನ ಅಂಕಲ್ ಸ್ಯಾಮ (ಸ್ಯಾಯ ಪಿತ್ರೋಡಾ) ತರಹ ಇದರ ಕಾಂಟ್ರಾಸ್ಟ್ ಡಿಜೈನ್ ಗೆ ಮೊರೆ ಹೋದರು.
ಈಗ್ಗೆ ಇಪ್ಪತ್ತು ಮುವ್ವತ್ತು ವರ್ಷಗಳ ಹಿಂದೆ ಬೆಳಗ್ಗೆ ಕಾಲೇಜಿಗೆ ಬಂದು ಒಮ್ಮೆ ಹಾಜರೀ ಪುಸ್ತಕದಲ್ಲಿ ಸಿಹಿ ಮಾಡಿ ತಮ್ಮ ಕ್ಲಾಸು ಮತ್ತು ಲ್ಯಾಬಗಳನ್ನು ಸರಿಯಾದ ಸಮಯಕ್ಕೆ ತೆಗೆದುಕೊಂಡರೆ ಆಯಿತು, ಯಾರು ಯಾವಾಗ ಊಟಕ್ಕೆಂದು ಮನೆಗೆ ಹೋದರೆಂದು ಯಾರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ದಿನಕಳೆದಂತೆ/೬ನೇ ವೇತನ ಆಯೋಗದ ಪಗಾರ ಕೊಡಲು ಆರಂಭವಾದ ನಂತರ/ತಂತ್ರಜ್ಞಾನದ ಅಭಿವೃದ್ಧಿ ಆದನಂತರ ದಿನಗಳಲ್ಲಿ ಎರಡು ಬಾರಿ ಸಹಿ ನಂತರ ಎರಡು ಸಲ ಹಾಜರಾತಿಯ RFID ಪಂಚ ಮಾಡುವ ಪದ್ಧತಿಯೂ ಜಾರಿಗೆ ಬಂದವು. ಒಬ್ಬರು ಚಾಪೆ ಕೆಳಗೆ ನುಸುಳಿದರೆ ಮತ್ತೊಬ್ಬರು ರಂಗೋಲಿ ಕೆಳಗೆ ನುಸುಳಿದರಂತೆ ಎಂಬಂತೆ ನಮ್ಮಲ್ಲಿ ಕೆಲವರು ತಮ್ಮ ID ಕಾರ್ಡನ್ನು ಇತರರಿಗೆ ಪಂಚ ಮಾಡಲು ಕೊಡಹತ್ತಿದರು. ಆಮೇಲೆ ಇದನ್ನು ತಡೆಯಲು image analysis ತಂತ್ರಜ್ಞಾನದ ಅಭಿವೃದ್ಧಿಯ ನಂತರ contact less face recognition ಹಾಜರಾತಿಯ ಯಂತ್ರ ಮತ್ತೂ ತಂತ್ರಜ್ಞಾನದ ಅಳವಡಿಕೆಯ ಪ್ರಾಯೋಗಿಕ ಪ್ರಯತ್ನಗಳಾದರೂ ಅವು ನೂರು ಪ್ರತಿಶತ ಫಲಕಾರಿಯಾಗದ ಕಾರಣ ಅದು ಜಾರಿಗೆ ಬರಲಿಲ್ಲವಂತೆ. ಅದಕ್ಕೆ ಮುಖ್ಯ ಕಾರಣ ತಿಂಗಳೊಪ್ಪತ್ತಿನಲ್ಲಿ ಕೆಲವರ ತಲೆಗೂದಲಿನ ಮತ್ತೂ ದಾಡಿ-ಮೀಸೆಯ ಬಣ್ಣದ ಬದಲಾವಣೆಯನ್ನು ಗುರುತಿಸುವಲ್ಲಿನ ದತ್ತಾಂಶದ ವಿಫಲತೆಯಂತೆ. ಇದು ನಮ್ಮಲ್ಲಿ ಕೆಲವರು ಆಚರಿಸುವ ಹೇರ್ ಡೈಯಿಂಗ್ ವೃತಾಚರಣೆಯ ಪುಣ್ಯದ ಫಲವಲ್ಲದೇ ಇನ್ನೇನು. ಅದಕ್ಕೇ ಅನ್ನುವುದು 'ಪರೋಪಕಾರಾರ್ಥಂ ಇದಂ ಶರೀರಂ'ಎಂದು.
ಇನ್ನು ಬಿಳಿ ತಲೆಗೂದಲ ಕರಿ ಲೇಪನ ವೃತದ ಸಮಾಪ್ತಿಯ ಉದ್ಯಾಪನಿಯನ್ನು ಹೆಂಗಸರಾದರೆ ಕನಿಷ್ಟಪಕ್ಷ ಋಷಿ ಪಂಚಮಿ ವೃತಾಚರಣೆಯ ನಂತರ ಮಾಡಬಹುದು ಇಲ್ಲವೇ ಅಖಂಡ ಜೀವನ ಪರ್ಯಂತವೂ ಆಚರಿಸಬಹುದು. ಮತ್ತೆ, ಗಂಡಸರಾದರೆ ವೃತದ ಸಮಾಪ್ತಿಯ ಉದ್ಯಾಪನಿಯನ್ನು ಮಾಡಲು ಯಾವುದೇ ಕಾಲದ ನಿಬಂಧನೆಗಳು ಇಲ್ಲ. ಆದರೂ ಯಾವುದಕ್ಕೂ ತಮ್ಮ ಶ್ರೀಮತಿಯ ಅಭಿಪ್ರಾಯ/ಪರವಾನಗಿ ಪಡೆಯತಕ್ಕದ್ದು ಒಳ್ಳೆಯದು ಎಂಬುದು ಈ ವೃತಾಚರಣೆ ಮಾಡುತ್ತಿರುವ ನನ್ನ ಖಾಸ್ ಸಹೋದ್ಯೋಗಿಯ ಅಭಿಪ್ರಾಯ.
ಮೊನ್ನೆ ದೂರದರ್ಶನದಲ್ಲಿ ನೋಡಿದ ವಿದ್ಯಾಪನೆಯ ಪ್ರಕಾರ, ಈಗ ಕೇವಲ ಕೆಲವು ಹನಿ ಗ್ಲಿಸರಿನ್ ತರಹದ ಎಣ್ಣೆಯನ್ನು ಬರೀ ಕೈಯಲ್ಲಿ ತಲೆಯ ಎಲ್ಲ ಭಾಗಕ್ಕೆ ಮಾಲಿಶ್ ಮಾಡಿದ ಕೆಲವೇ ನಿಮಿಷಗಳಲ್ಲಿ ಕೂದಲು ತನ್ನ ಬಣ್ಣವನ್ನು ಬದಲಿಸುವದಂತೆ.ಈಗೆಲ್ಲಾ ಬಿಡಿ ಪ್ರತೀ ಸಲೂನ್ ನಲ್ಲಿ ಈ ತರಹದ ಸೇವೆ ಲಭ್ಯವಿದೆ ಆದರೆ ದರ ಮಾತ್ರ ನನಗೆ ಗೊತ್ತಿಲ್ಲ.
ಹಾಗೆ ನೋಡಿದರೆ ನನ್ನಾಕೆ ಬಹಳ ಸಂಪ್ರದಾಯಸ್ಥ ಮನೆತನದವಳಾದರೂ ಸಧ್ಯಕ್ಕೆ, ನನಗೆ ಈ ಬಿಳಿ ತಲೆಗೂದಲ ಕರಿ ಲೇಪನ (ಹೇರ್ ಡೈಯಿಂಗ್ ) ವೃತದ ಆಚರಣೆಯ ಯಾವ ಒತ್ತಡವೂ ನನ್ನಾಕೆಯಿಂದ ಬರಲಿಲ್ಲ ಎಂಬುದು ನನಗೆ ಸಮಾಧಾನಕರ ಸಂಗತಿ.
- ಜಯಂತ ಕಿತ್ತೂರ
ಜಯಂತ ನಿನ್ನ ಹಾಗೇ ನಾನೂ ಬಿಳಿ ತಲೆಗೂದಲಿನವ ಆದರೆ ತಲೆ ಈಗ ಖಲ್ವಾಟ. ಕೂದಲು ಉದುರಲು 10 ವರ್ಷಗಳ ಹಿಂದೆ ಕರಿ ತಲೆಗೂದಲು ಕಾಣಿಸಲು ಪ್ರಯತ್ನಿಸಿದ ಕೃತಕ ಬಣ್ಣ ಲೇಪನ ಅಂತ ನನ್ನ ಶ್ರೀಮತಿಯ ಉಹೆ. ಈಗ ಕರಿಯಿರಲಿ ಬಿಳಿಯಿರಲಿ ಕೂದಲಿರಲಿ ಅನ್ನುವ ಧೃಡ ನಿರ್ಧಾರ.
ಪ್ರತ್ಯುತ್ತರಅಳಿಸಿನಿಮ್ಮ ಬರಹ ಅತಿ ಸ್ವಾರಸ್ಯಕರ .... ಸಹಜ ಅಷ್ಟೇ ಮಾರ್ಮಿಕ ಕೂಡ
ಪ್ರತ್ಯುತ್ತರಅಳಿಸಿSame experience for me as well Sir! Stopped dying since two years now almost... Don't know it's after effects !(regarding opinion from others)
ಪ್ರತ್ಯುತ್ತರಅಳಿಸಿಮಹಾತ್ಮಾ ಗಾಂಧಿಯವರೇ ಹೇಳಿದ್ದರು "DO OR DYE" ಅಂತ.
ಪ್ರತ್ಯುತ್ತರಅಳಿಸಿಬಹಳ ವಿನೋದಮಯವಾಗಿದೆ 😅👌☺️ಧನ್ಯವಾದಗಳು 🙏
ಪ್ರತ್ಯುತ್ತರಅಳಿಸಿಜಯಂತ್ ಅವರೇ
ಪ್ರತ್ಯುತ್ತರಅಳಿಸಿನಿಮ್ಮ ಬಿಳಿ ತಲೆಯ ಅನುಭವ ಸಾಮಾನ್ಯವಾಗಿ ಈಗಿನ ಕಾಲಘಟ್ಟದಲ್ಲಿ ಸರ್ವೇಸಾಮಾನ್ಯ. ನಿಮ್ಮ ಅನುಭವಗಳನ್ನು ಅತ್ಯಂತ ಅರ್ಥಗರ್ಭಿತವಾಗಿ, ಗಾಂಭೀರ್ಯದಿಂದ ಬರೆದಿದ್ದೀರಿ.
ಬರಹಕ್ಕೆ ಶುಭಕಾಮನೆಗಳು.
ನಿಮಗೆ ನನ್ನದೊಂದು ಸಲಹೆ.
ನಿಮ್ಮ ಬರವಣಿಗೆಯ ಶೈಲಿಯನ್ನು, ನಮ್ಮ ಉತ್ತರ ಕರ್ನಾಟಕದ ಆಡು ಭಾಷೆಯಲ್ಲಿ ಬರೆದರೆ ಇನ್ನೂ ಸೊಗಸಾಗಿರುತ್ತದೆ ಎಂದು ನನ್ನ ಅಭಿಪ್ರಾಯ.
ಶುಭವಾಗಲಿ.
ಜಯಂತ್ ಅವರೇ
ಪ್ರತ್ಯುತ್ತರಅಳಿಸಿನಿಮ್ಮ ಬಿಳಿ ತಲೆಯ ಅನುಭವ ಸಾಮಾನ್ಯವಾಗಿ ಎಲ್ಲಾ ಗಂಡಸರ ಅನುಭವ ಆಗಿರುತ್ತದೆ.
ನಿಮ್ಮ ಅನುಭಗಳನ್ನು ಅತ್ಯಂತ ಸೊಗಸಾಗಿ ಮೂಡಿಬಂದಿದೆ.
ಬರವಣಿಗೆಗೆ ಅಭಿನಂದನೆಗಳು.
ನಿಮ್ಮ ಬರವಣಿಗೆಯ ಶೈಲಿಯನ್ನು, ಉತ್ತರ ಕರ್ನಾಟಕದ ಆಡು ಭಾಷೆಯಲ್ಲಿ ಬರೆದರೆ ಇನ್ನೂ ಸೊಗಸಾಗಿರುತ್ತದೆ ಎಂದು ನನ್ನ ಅಭಿಪ್ರಾಯ.
ಶುಭವಾಗಲಿ.
ಉತ್ತಮವಾಗಿ ಮುಂದುವರೆದಿದೆ ಎರಡನೆಯ ಭಾಗ..., ಅಲ್ಲಲ್ಲಿ ಸ್ವಾರಸ್ಯಕರವಾದ ಪ್ರಸಂಗಗಳನ್ನು ಹನಿಹನಿಯಾಗಿ ಜೋಡಿಸುತ್ತಾ, ಕೆಲವು ಜೀವನ ಪಾಠಗಳನ್ನು ಕಲಿಸುತ್ತಾ..., ಮುಂದಿನ ಭಾಗವನ್ನು ನಿರೀಕ್ಷಿಸುವಂತೆ ಮಾಡಿದೆ...!
ಪ್ರತ್ಯುತ್ತರಅಳಿಸಿಕುರಾಜನ್.
ಸರ್ ತುಂಬಾ ಖುಷಿಯಾಯಿತು ಓದಿ ನಮ್ಮ ಉತ್ತರ ಕರ್ನಟಕ ಭಾಷೆ ನಿಮ್ಮ ಸ್ಟೈಲ್ ನಲ್ಲಿ ಓದಲು ಭಾಳ ಖುಷಿ ಆತು
ಪ್ರತ್ಯುತ್ತರಅಳಿಸಿಹೇರ್ ಡ್ರಾಯಿಂಗ್ ಗೆ ಸಂಬಂಧಿಸಿದ ವಿ ನೋದ ಪ್ರಸಂಗ ಗಳನ್ನು ಓದಿ ಬಹಳ ಖುಷಿಯಾಯಿತು..
ಪ್ರತ್ಯುತ್ತರಅಳಿಸಿಸಹಜವಾಗಿ ಸೊಗಸಾಗಿ ಬರೆದಿದ್ದೀರಿ...
ಪ್ರತ್ಯುತ್ತರಅಳಿಸಿSir🙏🙏
ಪ್ರತ್ಯುತ್ತರಅಳಿಸಿತುಂಬಾ ಚೆನ್ನಾಗಿ ಬಂದಿದೆ. ಮುಖದಲ್ಲಿ ಕಿರುನಗೆ ಇಟ್ ಕೊಂಡು ಓದಿದೆ.
ಪ್ರತ್ಯುತ್ತರಅಳಿಸಿಈ ಬಿಳಿ ತಲೆಯ ಬಣ್ಣದ ಉದ್ಯಾಪನೆಗೆ ಕಾಯುತ್ತೇವೆ.,😁
ಜಯಂತ ಸೊಗಸಾಗಿ ಬರೆದಿದ್ದೀಯ, ಒಮ್ಮೆಯೂ ಬಣ್ಣ ಹಚ್ಚದಿದ್ರು, ಬಣ್ಣ ಹಚ್ಚಿ ಪರಿಪಟಾಳು ಪಟ್ಟವರ ಅನುಭವದಂತೆ ಸವಿಸ್ತಾರವಾಗಿ ಬರೆದಿರುವ ಪರಿ ಮೆಚ್ಚುವಂತಹದ್ದು.
ಪ್ರತ್ಯುತ್ತರಅಳಿಸಿನಾನು ಎಷ್ಟೋ ಸಲ ಇಂತಹ ಪ್ರಸಂಗಗಳನ್ನು ಅನುಭವಿಸಿದ್ದೇನೆ.
ಬಣ್ಣ ಹಚ್ಚುವದು ಒಂದು ತರಹ ಬಿಸಿ ತುಪ್ಪ ಬಾಯಲ್ಲಿ ಇದ್ದಹಾಗೆ.
ಸಹಜ , ಸುಂದರ ,ಮಾರ್ಮಿಕ , ಅರ್ಥಗರ್ಭಿತ ,ಅನುಭವ್ಯದ್ಯೋತ .. ಬಿಳಿತಲೆಯ ಅನುಭವದ ಮುಂದಿನ ಕಂತಿಗೆ ಕಾತುರನಾಗಿರುವೆ .. Excellent writing ..
ಪ್ರತ್ಯುತ್ತರಅಳಿಸಿGood writeup all about hairdye. Really interesting article. For long I have continued with golden hair. And feel proud to be so. Keep sending your articles
ಪ್ರತ್ಯುತ್ತರಅಳಿಸಿNimma kannad barah attuttam ide sir
ಪ್ರತ್ಯುತ್ತರಅಳಿಸಿDear Sir,
ಪ್ರತ್ಯುತ್ತರಅಳಿಸಿApologies for my late response. I read your article immediately and really enjoyed it! I forgot to send my feedback earlier.
It was very well-written, and you covered the topic nicely with great explanations. I’m looking forward to your next article! When can we expect it?
ಲೇಖನ ತುಂಬಾ ಚೆನ್ನಾಗಿದೆ. ಓದುತ್ತಾ ಓದುತ್ತಾ ಓದುಗರ ತಲೆಗೂದಲು ಬೆಳ್ಳಿ ಬಣ್ಣಕ್ಕೆ ತಿರುಗಿದರೂ ಓದುವುದನ್ನು ಬಿಡಲು ಮನಸ್ಸಾಗುವುದಿಲ್ಲ. ತಲೆಗೂದಲ ಬಗ್ಗೆ ನಾವೂ ಮಂಡೆ ಬಿಸಿ ಮಾಡಿಕೊಂಡಿದ್ದೇವೆ. ಉಷ್ಣ ಪ್ರಕೃತಿಗೆ ಹಾಗಾಗುತ್ತದೆ ಎಂದು ಹೇಳುತ್ತಾರೆ. ಕೇಶೋಪಾಖ್ಯಾನ ಇಲ್ಲಿಗೇ ಮುಗಿಯುವುದಿಲ್ಲ. ಸ್ತ್ರೀಯರಿಗೆ ಈ ಸಮಸ್ಯೆ ತುಂಬಾ ಕಡಿಮೆ. ಏನು ಕಾರಣವೋ. ನಿಮ್ಮ ಸತ್ಯಕೇಶ ವೃತವೂ ಚೆನ್ನಾಗಿದೆ. ಈ ಕಥೆಯನ್ನು ಕೇಳಿದವರಿಗೂ ಹೇಳಿದವರಿಗೂ ನಖಶಿಖಾಂತ ಕೇಶ ಕಪ್ಪಾಗುವುದರಲ್ಲಿ (ಇದ್ದರೆ) ಸಂಶಯವಿಲ್ಲ. ಆದರೆ ಅವರು ಸ್ತ್ರೀಯರ ಕೇಶ ಸ್ಪರ್ಶಿಸಿರಬಾರದು ಎಂಬಲ್ಲಿಗೆ ಕಂದ ಪುರಾಣದ ಭೃಂಗರಾಜ ಖಂಡದ ಕೇಶೋಪಾಖ್ಯಾನ ಪ್ರಥಮ ಅಧ್ಯಾಯ ಸಂಪೂರ್ಣಂ ಶ್ರೀ ಕೇಶವಾರ್ಪಣಮಸ್ತು
ಪ್ರತ್ಯುತ್ತರಅಳಿಸಿ