ಲೊಕೇಶನ್ ಕಳಿಸಿರಿ...
ಇಂದು ನನ್ನ ಬಾಲ್ಯದ ಗೆಳೆಯನೊಬ್ಬ ತನ್ನ ಮಗಳ ಮದುವೆಯ ಕರೆಯೋಲೆಯನ್ನು ವಾಟ್ಸ್ಆ್ಯಪನಲ್ಲಿ ಹಂಚಿಕೊಂಡು, ಮದುವೆ ಬೆಂಗಳೂರಿನಲ್ಲಿದ್ದು ಛತ್ರದ ಲೊಕೇಶನ್ ಕ್ಯುಆರ್ ಕೋಡನ್ನು ಡಿಜಿಟಲ್ ಕರೆಯೋಲೆ ಯಲ್ಲಿ ನಮೂದಿಸಿದೆ, ಮದುವೆಗೆ ತಪ್ಪದೇ ಬಂದು ವಧುವರರನ್ನು ಆಶೀರ್ವಾದಿಸಬೇಕೆಂದು ಆಗ್ರಹ ಪೂರ್ವಕವಾಗಿ ಫೋನಿನಲ್ಲಿ ಕರೆದ. ನನಗೆ, ಇಂದಿಗೆ ಮೂವತ್ತು ಮೂವತ್ತೈದು ವರ್ಷಗಳ ಹಿಂದಿನ ಮಾತೊಂದು ನೆನಪಾಯಿತು.
ಬಾಲ್ಯದ ಗೆಳೆಯರೆಲ್ಲ ಒಟ್ಟಿಗೆ ಓದಿ ಆಡಿ ಬೆಳೆದು ವಿವಿಧ ಉದ್ಯೋಗ/ವ್ಯವಸಾಯ ಅರಸಿ ಬೇರೆ ಬೇರೆ ಸ್ಥಳಗಳಲ್ಲಿ ನೆಲೆಸಿ ಒಬ್ಬೊಬ್ಬರೇ ಮದುವೆ ಆಗುತ್ತಿದ್ದ ಸಮಯವದು. ಆದರೆ ಈ ಮಿತ್ರನಿಗೆ ಸ್ವಂತ ಊರಿನಲ್ಲಿಯೇ ಸರ್ಕಾರೀ ನೌಕರಿಸಿಕ್ಕು ಸಂಬಳದ ಜೊತೆಗೆ ಕೈತುಂಬಾ ಗಿಂಬಳವೂ ಬರುತ್ತಿದ್ದರೂ ಯಾಕೋ ಲಗ್ನದ ಯೋಗ ಮೂರ್ನಾಲ್ಕಾ ವರ್ಷವಾದರೂ ಬಂದಂತೆ ಕಾಣಲಿಲ್ಲ. ಈ ವಿಷಯವನ್ನು ಅರಿತ ನನ್ನ ಶ್ರೀಮತಿ, ತನ್ನ ಗೆಳತಿಯರಲ್ಲಿ ಒಬ್ಬಳಿಗೆ ಎಲ್ಲಿಯೂ ಯೋಗ್ಯ ವರ ಸಿಗದೇ ಅವಳ ತಂದೆ ಒದ್ದಾಡುತ್ತಿದ್ದ ವಿಚಾರ ತಿಳಿಸಿದಳು. ನಾನು ಉತ್ಸಾಹದಿಂದ ಧಾರವಾಡದ ಆ ಕಪಿ(ಕನ್ಯಾ ಪಿತೃ)ಗೆ ನನ್ನ ವರ ಮಿತ್ರನ ವಿಷಯ ತಿಳಿಸಿ ನಮ್ಮೂರಿನಲ್ಲಿನ ಅವನ ಮನೆಯ ಫೋನ್ (ಆಗಿನ್ನೂ ಲ್ಯಾಂಡ್ ಲೈನ್ ಜಮಾನಾ) ನಂಬರ್ ನೀಡಿದೆ. ಮರುದಿನ ನನ್ನ ಶ್ರೀಮತಿ, ತನ್ನ ಗೆಳೆತಿಗೆ ಎಂಥಾ ವರ ಹೇಳಿದಿರಿ, ಅವಳ ತಂದೆಯವರು ಬಹಳ ಬೇಸರ ಮಾಡಿಕೊಂಡಿರುವದಾಗಿ ತಿಳಿಸಿದಳು. ನನ್ನ ಮಿತ್ರ ಸರ್ಕಾರೀ ನೌಕರಯಲ್ಲಿರುವ ಒಳ್ಳೆಯ ವರ, ಯಾಕೇ ಏನಾಯಿತು ಎಂದು ಹುಡುಗಿಯ ತಂದೆಯನ್ನು ವಿಚಾರಿಸಿದೆ. ಆ ಕನ್ಯಾ ಪಿತೃವಿನ ಮಾತು ಕೇಳಿ ದಂಗಾದೆ. ನಾವು ಅಷ್ಟೆನೂ ಸ್ಥಿತಿವಂತರಿರಲಿಕ್ಕಿಲ್ಲ, ಹಾಗಂತ ದೂರದ ಊರಿನ ಕುಡುಕನಿಗೆ ನಮ್ಮ ಮಗಳನ್ನು ಸುತಾರಾಂ ಕೊಡುವುದಿಲ್ಲ, ನಿಮ್ಮ ಗೆಳೆಯ ನಿಮ್ಮಂತೆ ಯಾವ ದುಶ್ಚಟಗಳಿಲ್ಲದವರು ಎಂದು ತಿಳಿದಿದ್ದೆ ಎಂದರು. ನಾನು ಅಲ್ಲಾ ರಾಯರೇ, ನನ್ನ ಮಿತ್ರ ಕುಡುಕ ಅಂತ ಯಾರು ಹೇಳಿದರು? ಎಂದು ವಿಚಾರಿಸಿದೆ. ನಿನ್ನೆ ನೀವು ಕೊಟ್ಟ ನಂಬರಿಗೆ ಫೋನ್ ಮಾಡಿದಾಗ ನಿಮ್ಮ ಮಿತ್ರನೇ ಮಾತನಾಡಿದರು. ಗುಲ್ಬರ್ಗಾದಲ್ಲಿ ನಿಮ್ಮ ಮನೆ ಎಲ್ಲಿ ಬರುತ್ತದೆ ಎಂದು ವಿಚಾರಿಸಿದ್ದಕ್ಕೆ, ನಿಮ್ಮ ಮಿತ್ರ, ಮೊದಲು ಹೇಳಿದರು... ನಮ್ಮ ಮನೆ ಎಲ್ಲಿಯೂ ಬರುವದಿಲ್ಲ ಇದ್ದಲ್ಲಿಯೇ ಇರುತ್ತದೆ ಎಂದು. ನಾನು ಹಾಗಲ್ಲ, ನಿಮ್ಮ ಮನೆಯ ಲೊಕೇಶನ್ ಲ್ಯಾಂಡ್ ಮಾರ್ಕ್ ಹೇಳಿ ಎಂದಿದ್ದಕ್ಕೆ ಅವರ ಉತ್ತರ ಕೇಳಿ ನಾನು ಬೆಚ್ಚಿಬಿದ್ದೆ. ಅಷ್ಟಕ್ಕೇ ತಿಳಿಯಿತು ನಿಮ್ಮ ಗೆಳೆಯನ ಯೋಗ್ಯತೆ ಏನೆಂದು ಎಂದರು. ಹಾಗೆ ಒಗಟಾಗಿ ಹೇಳಿದರೆ ನನಗೆ ಹೇಗೆ ತಿಳಿಯಬೇಕು, ನನ್ನ ಗೆಳೆಯ ಏನೆಂದು ಹೇಳಿದ ಬಿಡಿಸಿ ಹೇಳಿರಿ ಎಂದೆ. ಅಲ್ಲರೀs, ಗುಲ್ಬರ್ಗಾದಲ್ಲಿ ಅವರ ಮನೆ ಜಗತ್ತಿನಲ್ಲಿ ಇದೆಯಂತೆ, ಅವರ ಮನೆಯ ಎದಿರು ನೋಡಿದರೆ ಪ್ರೀತಂ ಬಾರ್ ಇದೆಯಂತೆ ಮತ್ತು ಬಲಕ್ಕೆ ನೋಡಿದರೆ ಮೈಖಾನಾ ಬಾರ್ ಇದೆಯಂತೆ, ಇನ್ನು ದಕ್ಷಿಣಕ್ಕೆ ಅಪ್ಪನ ಕೆರೆ ಇದೆಯಂತೆ. ಅಬ್ಬಬ್ಬಾ ಸಂಜೆಯ ೬ ಗಂಟೆಗೇ ನಿಮ್ಮ ಗೆಳೆಯ ಜಗತ್ತಿನಲ್ಲಿ ಮನೆ, ಅಪ್ಪನ ಕೆರೆ, ವಿವಿಧ ಬಾರುಗಳ ಲ್ಯಾಂಡ್ ಮಾರ್ಕ್ ನ ಮಾತು ಇತ್ಯಾದಿ ಆದರೆ, ಇನ್ನು ರಾತ್ರಿ ೯,೧೦ ಗಂಟೆಗೆ ಹೇಗಿರಬ್ಯಾಡ ಎಂದರು. ತಮ್ಮ ಮನೆಯ ಲೊಕೇಶನ್ ಹೇಳುವಲ್ಲಿ ನನ್ನ ಮಿತ್ರ ಎಬ್ಬಿಸಿದ ಗೊಂದಲವನ್ನು ಅರಿತ ನಾನು, ನಮ್ಮ ಗೆಳೆಯ ಮಾತಾಡುವುದರಲ್ಲಿ ಸ್ವಲ್ಪ ಯಡವಟ್ಟು ಮಾಡಿಕೊಂಡಿದ್ದಾನೆ ಅಷ್ಟೇ ಹೊರತು, ಅವನಿಗೆ ಯಾವ ದುಶ್ಚಟಗಳಿಲ್ಲ. ಹುಬ್ಬಳ್ಳಿಯ ಉಣಕಲ್ ಕೆರೆಯ ತರಹ ಕಲಬುರ್ಗಿಯಲ್ಲಿ ಶರಣಬಸವೇಶ್ವರ ದೇವಸ್ಥಾನದ ಎದುರಿಗೆ ಊರಿನ ಮಧ್ಯ ಭಾಗದಲ್ಲಿ ವಿಶಾಲವಾದ ಕೆರೆ ಇದೆ, ಅದರ ಹೆಸರು ಶರಣಬಸಪ್ಪನ ಕೆರೆ ಅಂತ. ಜನರು ಶಾರ್ಟಾಗಿ 'ಅಪ್ಪನ ಕೆರೆ' ಎಂದು ಕರೆಯುವುದುಂಟು ಮತ್ತು ಆ ಅಪ್ಪನ ಕೆರೆಯ ಪೂರ್ವಕ್ಕೆ, ಹುಬ್ಬಳ್ಳಿಯ ಟ್ರಾಫಿಕ್ ಐಲ್ಯಾಂಡ್ ತರಹ ನಾಲ್ಕಾರು ರಸ್ತೆಗಳು ಸೇರುವ ದೊಡ್ಡ ಸರ್ಕಲ್ ಇದೆ. ಅದು 'ಜಗತ್ ಸರ್ಕಲ್' ಎಂದು ಕಲ್ಬುರ್ಗಿಯಲ್ಲಿಯೇ ವರ್ಡ ಫೇಮಸ್ಸು. ಅದರ ಪಕ್ಕ ಇರುವ ಬಡಾವಣೆಗೆ 'ಜಗತ್' ಎಂದು ಹೆಸರು ಮತ್ತೂ ನಮ್ಮ ಗೆಳೆಯನ ಮನೆ ಆ ಪ್ರದೇಶದಲ್ಲಿ ಇದೆ. ಇನ್ನು, ಅವರ ಮನೆ ಸುಲಭವಾಗಿ ಗುರುತಿಸಲು ಲೊಕೇಶನ್ ಲ್ಯಾಂಡ್ ಮಾರ್ಕಾಗಿ ಮನೆಯ ಹತ್ತಿರ ಇರುವ ವಿವಿಧ ಬಾರಗಳ ಹೆಸರುಗಳನ್ನು ಹೇಳಿರಬಹುದಷ್ಟೇ ಹೊರತೂ ಅವನಿಗೆ ಯಾವ ದುಶ್ಚಟಗಳಿಲ್ಲ ಎಂದು ವಿವರಣೆ ನೀಡಿದೆ. ಅಂತೂ, ತನ್ನ ಮನೆಯ ಲೊಕೇಶನ್ ಹೇಳುವಲ್ಲಿ ಯಡವಟ್ಟು ಮಾಡಿಕೊಂಡಿದ್ದ ಕಲಬುರ್ಗಿಯ ಈ ಮಿತ್ರನಿಗೆ ಧಾರವಾಡದ ಆ ಕಪಿಗಳು ನನ್ನ ಸ್ಪಷ್ಟೀಕರಣದ ಮಾತುಗಳಿಂದ ಮನವರಿಕೆ ಆಗಿ ನನ್ನಲ್ಲಿ ವಿಶ್ವಾಸವಿಟ್ಟು ತಮ್ಮ ಮಗಳನ್ನು ಧಾರೆಯೆರೆದು ನೀಡಿದ್ದರು.
ಇಲ್ಲಿ ನನಗೆ ೧೯೬೦ ರ ದಶಕದಲ್ಲಿ ನಡೆದ ಒಂದು ಘಟನೆ ನೆನಪಾಗುತ್ತಿದೆ. ನನ್ನ ಸೋದರಮಾವ ಕುಟುಂಬ ಸಮೇತ ಪುಣೆಯಿಂದ ಮಂತ್ರಾಲಯದ ಪ್ರಯಾಣ ಹೊರಟಿದ್ದರಂತೆ. ಮಾರ್ಗದ ಮಧ್ಯೆ ಉಗಿಬಂಡಿ ಗಾಡಿ ಕೆಟ್ಟ ಕಾರಣ ಅನಿವಾರ್ಯವಾಗಿ ರಾಯಚೂರಿನಲ್ಲಿ ನಡುರಾತ್ರಿಯಲ್ಲಿ ತಂಗುವ ಪ್ರಸಂಗ ಬಂದಾಗ ಅವನಿಗೆ ನೆನಪಿಗೆ ಬಂದದ್ದು ತನ್ನ ಬಾಲ್ಯದ ಮಿತ್ರ ಅರವಿಂದ ಗಂಭೀರ ರಾಯಚೂರಿನಲ್ಲಿ ಇರುವ ವಿಚಾರ. ಆದರೆ ವಿಳಾಸ, ಲೊಕೇಶನ್, ಲ್ಯಾಂಡ್ ಮಾರ್ಕ್ ಯಾವುದೂ ನೆನಪಿರಲಿಲ್ಲ. ಫೋನುಗಳು ಇಲ್ಲದ ದಿನಗಳು ಅವು. ಆಗ ನನ್ನ ಸೋದರಮಾವ ಕುಟುಂಬ ಮತ್ತು ಸಾಮಾನು ಸರಂಜಾಮು ಸಮೇತ ಮಧ್ಯರಾತ್ರಿಯಲ್ಲಿ ರಾಯಚೂರಿನ ವಿವಿಧ ಓಣಿಗಳಲ್ಲಿ 'ಗಂಭೀರs...' ಎಂದು ಕೂಗುತ್ತಾ ಹೊರಟನಂತೆ. ಬೇಸಿಗೆಯ ದಿನಗಳಾಗಿದ್ದರಿಂದ ಬಹಳಷ್ಟು ಜನ ಮನೆಗಳ ಮುಂದೆ ಹಾಸಿಗೆ ಹಾಸಿ ಮಲಗಿದ್ದರಂತೆ. ಈ ಕೂಗನ್ನು ಕೇಳಿ ನಿದ್ದೆಯಿಂದ ಎದ್ದು ವಿಷಯವೇನೆಂದು ವಿಚಾರಿಸಿ ಯಾವುದೊ ಒಬ್ಬ ಪುಣ್ಯಾತ್ಮ ನನ್ನ ಸೋದರಮಾವ ಮತ್ತೂ ಅವನ ಕುಟುಂಬವನ್ನು ಅರವಿಂದ ಗಂಭೀರ ಅವರ ಮನೆಗೆ ಮುಟ್ಟಿಸಿದ್ದರಂತೆ. ಇನ್ನು, ನಡುರಾತ್ರಿ ಆರೆಂಟು ಜನ ಅತಿಥಿಗಳು ಧುತ್ತೆಂದು ಮನೆಗೆ ಬಂದಾಗ ಅವರ ಊಟ ಹಾಸಿಗೆಯ ಆದರ ಆತಿಥ್ಯ ಮಾಡುವಲ್ಲಿ ಅರವಿಂದ ಗಂಭೀರ ದಂಪತಿಗಳ ಗತಿ ನಿಜಕ್ಕೂ ಗಂಭೀರವಾಗಿರಬೇಕು.!!!
ಎಪ್ಪತ್ತರ ದಶಕದಲ್ಲಿ ಬೆಳಗಾವಿಯಲ್ಲಿದ್ದ ನಮ್ಮಜ್ಜಿಯ ಆರೋಗ್ಯ ಅಕಸ್ಮಾತಾಗಿ ತೀವ್ರವಾಗಿ ಹದಗೆಟ್ಟಾಗ, ಕಲಬುರ್ಗಿಯ ನಮ್ಮ ಮನೆಯನ್ನು ಹುಡುಕುತ್ತಾ ಟೆಲಿಗ್ರಾಂ ನಲ್ಲಿರುವ ಚಿಕ್ಕ ಅಡ್ರೆಸ್ ನ ಲೊಕೆಶನ್ ಹುಡುಕುತ್ತಾ ಟೆಲಿಗ್ರಾಂ ಸೇವೆಯ ನೌಕರ ನಡುರಾತ್ರಿಯಲ್ಲಿ ನಮ್ಮ ಓಣಿಗೆ ಬಂದು ಕಿತ್ತೂರs...ಕಿತ್ತೂರs... ಎಂದು ಕೂಗಿದ ಘಟನೆ ನನಗೆ ಇನ್ನೂ ನೆನಪಿದೆ. ಆ ದಿನಗಳಲ್ಲಿ ಅಪರಾತ್ರಿ ಟೆಲಿಗ್ರಾಂ ಬಂತೆಂದರೆ ಅದು ಆಘಾತಕಾರಿ ವಿಷಯವನ್ನೇ ತಂದಿರುವುದು ಎಂದರ್ಥ. ಮರುದಿನ ಬೆಳ್ಳಂ ಬೆಳಿಗ್ಗೆ ಓಣಿಯಲ್ಲಿ ಗುಜು ಗುಜು ಮಾತುಗಳು ಕೇಳಿಬರುತ್ತಿದ್ದವು ಮತ್ತು ಓಣಿಯ ಹಿರಿಯರು ಟೆಲಿಗ್ರಾಂ ಬಂದವರ ಮನೆಗೆ ಬಂದು ಸಾಂತ್ವನ ಹೇಳುವುದು ಒಂಥರಾ ಸಂಪ್ರದಾಯವಾಗಿತ್ತು. ಆದರೆ, ಇಂದಿನ ದಿನಗಳಲ್ಲಿಯ ವಿಪರ್ಯಾಸವೆಂದರೆ ಕಾರ್ಪೊರೇಶನ್ ಶವ ವಾಹನದ ಡ್ರೈವರ ಅಪಾರ್ಟ್ಮೆಂಟ್ ಹತ್ತಿರ ಬಂದು ಲೊಕೇಶನ್ ಲ್ಯಾಂಡ್ ಮಾರ್ಕ್ ವಿಚಾರಿಸಿದಾಗಲೇ ನಮ್ಮ ಪಕ್ಕದ ಫ್ಲ್ಯಾಟನ ಮನೆಯಲ್ಲಿ ಯಾರೋ ಕೈಲಾಸವಾಸಿಯಾಗಿರುವ ವಿಷಯ ತಿಳಿಯುತ್ತದೆ.ಇರಲಿ.
ನಮ್ಮ ಮನೆಯ ಪಕ್ಕ ಇತ್ತೀಚಿಗೆ ಬಾಡಿಗೆಗೆ ಬಂದ ಖಾಸಗೀ ಬ್ಯಾಂಕನ ತರುಣ ಮ್ಯಾನೇಜರ್ ಮೊನ್ನೆ ಸಾಯಂಕಾಲ ಸಿಕ್ಕಾಗ, ತಾನು ಸಾಲ ವಸೂಲಾತಿಗೆ ದೂರದ ಹಳ್ಳಿಗೆ ಹೋದಾಗಿನ ಪ್ರಸಂಗ ಒಂದನ್ನು ನನ್ನೊಂದಿಗೆ ಹಂಚಿಕೊಂಡರು. ಈ ಮ್ಯಾನೇಜರ್ ಕುಗ್ರಾಮ ತಲುಪಿ ಸಾಲಗಾರ ರೈತನ ಮನೆಯ ಲೊಕೇಶನ್ ಎಲ್ಲಿ ಎಂದು ಯಾರನ್ನೇ ಕೇಳಿದರೂ ಎಲ್ಲರಿಂದಲೂ 'ನನಗೆ ಗೊತ್ತಿಲ್ಲ' ಎಂಬ ಉತ್ತರ ಬಂತಂತೆ. ಇದಕ್ಕೆ ಕಾರಣ, ಬಹುಶಃ ಇತ್ತೀಚಿನ ಮೈಕ್ರೋ ಫೈನಾನ್ಸ್ ನವರು ಸಾಲ ವಸೂಲಾತಿಯಲ್ಲಿ ತೋರಿದ ದರ್ಪ ಮತ್ತು ಅದರಿಂದಾದ ಯಡವಟ್ಟಿನ ಪ್ರಸಂಗಗಳಿಂದ ಹಳ್ಳಿಯ ಜನ ಈ ರೀತಿ ಹೇಳಿರಬೇಕೆಂಬುದು ಭಾವಿಸಿ, ಈ ಬ್ಯಾಂಕ್ ಮ್ಯಾನೇಜರ್ ಕೊನೆಗೆ ಅನಿವಾರ್ಯವಾಗಿ ಸಾಲಗಾರ ರೈತನಿಗೆ ಫೋನ್ ಮಾಡಿ ನಾನು ನಿಮ್ಮೂರ ಬಸ್ ಸ್ಟ್ಯಾಂಡ್ ಗೆ ಬಂದಿದ್ದು ಪಕ್ಕದ ಚಹಾದ ಗೂಡಂಗಡಿಯಲ್ಲಿದ್ದು ನಿಮ್ಮ ಮನೆ ಹುಡುಕುವುದು ಕಷ್ಟವಾಗುತ್ತಿದೆ ಅದಕ್ಕೆ ದಯವಿಟ್ಟು ನಿಮ್ಮ ಮನೆಯ 'ಲೊಕೇಶನ್' ಕಳುಹಿಸಿಕೊಡಿ ಅಂದರಂತೆ. ಆ ಕಡೆಯಿಂದ, ನನ್ನ ಹಿರಿಯ ಮಗ ಲೋಕೇಶ ಗದ್ದೆಯಿಂದ ಆಕಳುಗಳನ್ನು ಮನೆಗೆ ಹೊಡೆದುಕೊಂಡು ಬರಲು ಹೋಗಿರುವನು. ಅವನು ಬರಲು ತಡವಾಗುತ್ತದೆ ಆದ್ದರಿಂದ ಲೋಕೇಶನ ಬದಲಿಗೆ ರಮೇಶನನ್ನು ಬಸ್ ಸ್ಟ್ಯಾಂಡ್ ಗೆ ಕಳುಹಿಸುವುದಾಗಿ ತಿಳಿಸಿದನಂತೆ ಬಡಪಾಯಿ ಮುಗ್ಧ ರೈತ.
ನಮ್ಮ ದಿವಂಗತ ತಂದೆಯವರ ಸಾಹಿತ್ಯಾಭಿಮಾನಿ ಮೈಸೂರಿನ ಹಿರಿಯ ಮಹನೀಯರು ಕೆಲವು ದಿನಗಳ ಹಿಂದೆ ಯಾವುದೋ ಕೆಲಸದ ನಿಮಿತ್ತ ಬೆಳಗಾವಿಗೆ ಬಂದಿದ್ದರು. ಇತ್ತೀಚಿಗೆ ಮರು ಪ್ರಕಟಣೆಗೊಂಡ ನಮ್ಮ ತಂದೆಯವರ ಎಪ್ಪತ್ತರ ದಶಕದ ಕನ್ನಡದ PhD ಮಹಾ ಪ್ರಬಂಧದ ಪ್ರತಿಯನ್ನು ನನ್ನಿಂದ ಪಡೆಯುವ ಸಲುವಾಗಿ ನನ್ನ ಮನೆಗೆ ಬರುವ ತಮ್ಮ ಬಯಕೆಯನ್ನು ಫೋನಿನಲ್ಲಿ ವ್ಯಕ್ತಪಡಿಸಿದರು. ನಾನು ನಮ್ಮ ಮನೆಯ ಲೊಕೇಶನ್ ಐಡಿ ವಾಟ್ಸ್ ಆ್ಯಪ್ ಮಾಡುವುದಾಗಿ ತಿಳಿಸಿದಾಗ ಆ ಹಿರಿಯರು, ಅದೆಲ್ಲಾ ನನಗೆ ಉಪಯೋಗಿಸಲು ಬರುವುದಿಲ್ಲ. ನೀವು ಏನಿದ್ದರೂ ವಿಳಾಸ ಮತ್ತೂ ಲೊಕೇಶನ್ ಲ್ಯಾಂಡ್ ಮಾರ್ಕ್ ತಿಳಿಸಿರಿ ನಾನು ಆಟೋದಲ್ಲಿ ಬರುವೆ ಎಂದರು. ಹಾಗೇ ಆಗಲಿ ಎಂದು ಬೆಳಗಾವಿಯ ನನ್ನ ಮನೆಯ ವಿಳಾಸ ಮತ್ತು ಲೊಕೇಶನ್ ಲ್ಯಾಂಡ್ ಮಾರ್ಕ್ ಆಗಿ 'Besides Radha Govind Park' ಎಂದು ಕಳಿಸಿದೆ. ಅರ್ಧ ತಾಸಿನ ನಂತರ ಆಟೋದಿಂದ ಇಳಿದ ಮಹನೀಯರು, ಏನು ಸ್ವಾಮಿ ನಿಮ್ಮ ಮನೆಯ ಪಕ್ಕ ಯಾವುದೇ ಪಾರ್ಕ್ ಕಾಣಿಸುತ್ತಿಲ್ಲ, ಎಂಥಹ ಲೊಕೇಶನ್ ಲ್ಯಾಂಡ್ ಮಾರ್ಕ್ ಕಳಿಸಿದಿರಿ, ನಾನು ಸುಮ್ಮನೇ ಆಟೋದಲ್ಲಿ ಎಷ್ಟೆಲ್ಲಾ ಸುತ್ತಾಡಿದೆ ಎಂದರು. ನಾನು, ಸರ್ Radha Govind Park ಎಂಬುದು ನಮ್ಮ ಮನೆಯ ಪಕ್ಕದ ದೊಡ್ಡ ಅಪಾರ್ಟ್ಮೆಂಟ ಕಾಂಪ್ಲೆಕ್ಸ್ ನ ಹೆಸರು ಅಂದೆ. ಮೈಸೂರಿನ ಆ ಹಿರಿಯರು ಅಂತೂ ಡಿಜಿಟಲ್ ಲೊಕೇಶನ್ ಐಡಿ ಇಲ್ಲದೇ ಬೆಳಗಾವಿಯ ನನ್ನ ಮನೆಯನ್ನು ಹುಡುಕಿಕೊಂಡು ಬಂದರು ಎಂಬುದು ಸಮಾಧಾನದ ಸಂಗತಿ.
ನಮ್ಮ ರಾಜ್ಯದ ರಾಜಧಾನಿ ಬೃಹತ್ ಬೆಂಗಳೂರಿನಲ್ಲಿ ನಾವು ತಲುಪಬೇಕಾದ ಸ್ಥಳ ನಗರದ ಎಷ್ಟನೇ ಬ್ಲಾಕು, ಎಷ್ಟನೇ ಮೇನು, ಎಷ್ಟಗಲದ ರೋಡು, ಯಾವ ಕ್ರಾಸು ಇತ್ಯಾದಿ ವಿವರಗಳ ಕಂಪ್ಯೂಟರ್ ಪ್ರೋಗ್ರಾಂ ತರಹದ ಸುಮಾರು ಲೈನುಗಳ ಉದ್ದನೆಯ ನಿಖರ ವಿಳಾಸ ಹೇಳಿದರೂ ಆಟೋದವರು ನಮ್ಮನ್ನು ಸುಮಾರು ಹೊತ್ತು ಸುತ್ತಾಡಿಸಿ ಐದಾರು ನೂರು ರೂಪಾಯಿ ಮೀಟರ್ ಬಾಡಿಗೆ ವಸೂಲಿ ಮಾಡುತ್ತಿದ್ದ ದಿನಗಳು ಈಗ ಮಾಯವಾಗಿವೆ. ಓಲಾ ,ಉಬರ್ ಅಥವಾ ನಮ್ಮಯಾತ್ರಿ ಮುಂತಾದ ಡಿಜಿಟಲ್ ಅಪ್ಲಿಕೇಶನ್ ಗಳಲ್ಲಿ ನಾವು ಸಧ್ಯ ಇರುವ ಸ್ಥಳ ಮತ್ತು ತಲುಪಬೇಕಾದ ಲೊಕೇಶನ್ ಐಡಿ ಹಾಕಿದರೆ ಆಟೋ ಅಥವಾ ಕ್ಯಾಬದವರು ಮಾತಿಲ್ಲದೇ ಮುಕಾಟಾಗಿ ನಮ್ಮ ಗಮ್ಯ ಸ್ಥಾನವನ್ನು ತಲುಪಿಸುತ್ತಾರೆ. ನಾವು ಬೇಕಾದರೆ ಗೂಗಲ್ ಮ್ಯಾಪ್ ನಲ್ಲಿ ಲೈವ್ ಲೊಕೇಶನ್ ಚಾಲು ಮಾಡಿ, ಡ್ರೈವರ್ ನಮ್ಮನ್ನು ಸರಿಯಾದ ದಾರಿಯಲ್ಲಿ ಕರೆದೊಯ್ಯುತ್ತಿರುವುದರ ಖಾತ್ರಿಯನ್ನೂ ಮಾಡಿಕೊಳ್ಳಲೂಬಹುದು. ಇದೆಲ್ಲವೂ ಸಾಧ್ಯವಾದದ್ದು ಭಾರತವು ಇತ್ತಿಚಿನ ವರ್ಷಗಳಲ್ಲಿ ಕಂಡ GPS (Global Positioning System) ಸೆಟಲೈಟ್ ವ್ಯವಸ್ಥೆ, ಡಿಜಿಟಲ್ ಸಂಪರ್ಕ ಸಾಧನೆ ಮತ್ತೂ ಅತೀ ಕಡಿಮೆ ಖರ್ಚಿನಲ್ಲಿ ಸಮರ್ಪಕವಾಗಿ ಲಭ್ಯವಿರುವ 4G/5G ಡೇಟಾ ಹಾಗೂ ಸ್ಟಾರ್ಟಪ್ ಕ್ರಾಂತಿಯ ಫಲ ಅಲ್ಲವೇ.
ಮೊನ್ನೆ ಸುದ್ದಿ ಮಾಧ್ಯಮಗಳ ಮುಖಾಂತರ ಅರಿತಿದ್ದೇನೆಂದರೆ, ಭಾರತೀಯ ಅಂಚೆ ಇಲಾಖೆಯು ಹೈದರಾಬಾದ್ ಐಐಟಿ, ಎನ್‌ಆರ್‌ಎಸ್‌ಸಿ ಮತ್ತು ಇಸ್ರೋ ಸಹಯೋಗದೊಂದಿಗೆ ಡಿಜಿಪಿನ್ ಅನ್ನು ಅಭಿವೃದ್ಧಿಪಡಿಸಿದ್ದು ಇದು ರಾಷ್ಟ್ರೀಯ ಮಟ್ಟದ ವಿಳಾಸ ಗ್ರಿಡ್ ಆಗಿದೆಯಂತೆ. ಇದು ವಿಶಿಷ್ಟವಾದ 10-ಅಕ್ಷರಗಳ ಆಲ್ಫಾನ್ಯೂಮರಿಕ್ ಕೋಡ್ ಮೂಲಕ ನಿಖರವಾದ ಸ್ಥಳ ಗುರುತಿಸುವಿಕೆಯನ್ನು ಒದಗಿಸುತ್ತದೆಯಂತೆ. ಡಿಜಿಪಿನ್ ಉಪಕ್ರಮದೊಂದಿಗೆ, ಇಂಡಿಯಾ ಪೋಸ್ಟ್ ದೇಶದ ಪ್ರಮಾಣೀಕೃತ, ಜಿಯೋ-ಕೋಡೆಡ್ ವಿಳಾಸ ವ್ಯವಸ್ಥೆಗಾಗಿ ಡಿಪಿಐ (ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ) ಸ್ಥಾಪಿಸುವ ಗುರಿಯನ್ನು ಹೊಂದಿದ್ದು DIGIPIN ಎಂಬುದು ನಿಖರವಾದ ಸ್ಥಳ ಗುರುತಿಸುವಿಕೆಯನ್ನು ನೀಡುವ ಡಿಜಿಟಲ್ ವಿಳಾಸ ವ್ಯವಸ್ಥೆಯಾಗಿದ್ದು, ಹಳೆಯ ಪಿನ್ ಕೋಡ್‌ಗಳ ವ್ಯವಸ್ಥೆಯನ್ನು ಸುಧಾರಿಸುತ್ತದೆಯಂತೆ. ನಗರದೊಳಗಿನ ದೊಡ್ಡ ಪ್ರದೇಶವನ್ನು ಒಳಗೊಂಡಿರುವ ಸಾಂಪ್ರದಾಯಿಕ ಪಿನ್ ಕೋಡ್‌ಗಳ ವ್ಯವಸ್ಥೆಗಿಂತ ಭಿನ್ನವಾಗಿ, DIGIPIN ಸ್ಥಳದ ನಿಖರವಾದ ನಿರ್ದೇಶಾಂಕಗಳನ್ನು ಗುರುತಿಸುತ್ತದೆ ಎಂದು ಸಮಾಚಾರ ಪತ್ರಿಕೆಗಳಲ್ಲಿ ನೀವೂ ಓದಿ ತಿಳಿದಿರಬಹುದು.
ಇತ್ತೀಚಿನ ವ್ಯಾಪಕ ಡಿಜಲೀಕರಣದ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ಮಾತೆತ್ತಿದರೆ ಕಣ್ಣು ಮಿಟಕುವದರಲ್ಲಿ ಮನೆಯ ಬಾಗಿಲಿಗೆ ಬರುವ ಸ್ವಿಗ್ಗೀ, ಝೊಮ್ಯಾಟೋ, ಬ್ಲಿಂಕಿಟ್ ದಂತಹ Quick Commerce ಬಿಜಿನೆಸ್ ವ್ಯಾಪಕವಾಗಿ ಬೆಳೆಯುವಲ್ಲಿ ಲೋಕೆಷನ್ ಐಡಿ, ಲ್ಯಾಂಡ್ ಮಾರ್ಕಗಳ ಕೊಡುಗೆ ಅಪಾರ. ಇನ್ನು ಬರುವ ದಿನಗಳಲ್ಲಿ DIGIPIN ನ ಸದ್ಬಳಕೆಯಿಂದಾಗಿ Quick Commerce ಬಿಜಿನೆಸು, Courier service ಮತ್ತೂ ವಿಪತ್ತಿನ ಕಾಲದಲ್ಲಿ NDRF ನವರ ಸಹಾಯ ಹೆಚ್ಚೆಚ್ಚು ವ್ಯಾಪಕವಾಗಿ ಮತ್ತು ತ್ವರಿತಗತಿಯಲ್ಲಿ ನಾಗರಿಕರಿಗೆ ಲಭಿಸಬಹುದು ಎಂಬುದು ನಿರೀಕ್ಷೆ.ಇರಲಿ.
ಗತ ವೈಭವಪೂರಿತ ವಿಜಯನಗರದ ನವಕೋಟಿ ನಾರಾಯಣರಾಗಿದ್ದ ಶ್ರೀನಿವಾಸ ನಾಯಕ ತನ್ನದೆನ್ನುವದೆಲ್ಲವನ್ನು ದಾನ ಮಾಡಿ ಕೊರಳಲ್ಲಿ ತುಳಸಿ ಮಾಲೆ ಧರಿಸಿ ಒಂದು ಕೈಯಲ್ಲಿ ದಂಡಿಗೆ ಬೆತ್ತ ಇನ್ನೊಂದು ಕೈಯಲ್ಲಿ ಗೋಪಾಳ ಬುಟ್ಟಿ ಹಿಡಿದು ಪುರಂದರದಾಸರಾಗಿ,
"ಅಲ್ಲಿದೆ ನಮ್ಮನೆ ಇಲ್ಲಿರುವುದು ಸುಮ್ಮನೆ
ಕದ ಬಾಗಿಲಿರಿಸಿಹ ಕಳ್ಳ ಮನೆ ಇದು
ಮುದದಿಂದ ಲೋಲ್ಯಾಡೋ ಸುಳ್ಳು ಮನೆ
ಇದಿರಾಗಿ ವೈಕುಂಠ ವಾಸ ಮಾಡುವಂತ
ಪದುಮನಾಭನ ದಿವ್ಯ ಬದುಕು ಮನೆ..."
ಎಂದು ಹಾಡಿರುವರು. ಅರವತ್ತರ ಅರಳು ಮರಳು ಸಮೀಪಿಸುತ್ತಿರುವ ನನಗೆ, ಇನ್ನು ಏನಿದ್ದರೂ ಈ ಸುಮ್ಮನೆಯ ಲೊಕೇಶನ್ ನ ಮಾತು ಬಿಟ್ಟು ಆ ನಮ್ಮನೆಯ ಲೋಕೆಶನ್ ಐಡಿ,ಲ್ಯಾಂಡ್ ಮಾರ್ಕ್ ಹುಡುಕುವುದೊಂದೇ ಜೀವನದಲ್ಲಿ ಬಾಕಿಯಿರುವ ಕೆಲಸ. ಅಕಸ್ಮಾತಾಗಿ, ನಿಮಗೇನಾದರೂ ಗೊತ್ತಿದ್ದರೆ ಆ ನಮ್ಮನೆಯ ಲೋಕೆಶನ್ ಕಳಿಸಿರಿ ಪ್ಲೀಸ್.
- ಡಾ. ಜಯಂತ ಕಿತ್ತೂರ
compiles Nice article as always Sir!
ಪ್ರತ್ಯುತ್ತರಅಳಿಸಿAn incident regarding location mentioned in your article reminds of a similar incident happened years ago with us. One of our known contacts wanted to visit us and searched for Ganesh Park in entire area, as the address mentioned was "Ganesh Park", only to get disappointed that there is no "Park" by naar Ganesh in our area! Of course, finally he could reach our building by calling me. So, now, I make sure to mention the address as "Ganesh Park Apartments"!😂
Your article is well compiled and presented. Thanks for sharing.
ತುಂಬಾ ಚೆನ್ನಾಗಿದೆ ಸರ್ ತಮ್ ಬಾಲ್ಯ ಗೆಳೆಯನ ಮದುವೆ ಕಥೆ
ಪ್ರತ್ಯುತ್ತರಅಳಿಸಿAnother hilarious article . Nicely written sir . Kudos
ಪ್ರತ್ಯುತ್ತರಅಳಿಸಿನಮಸ್ಕಾರ, ಹತ್ತು ನಿಮಿಷ ನನಗೆ ಕಲಬುರ್ಗಿ ಯಲ್ಲಿ ಇದ್ದಂತೆ ಅನಿಸಿತು ಒಳ್ಳೆಯ ಲೇಖನ ಚೆನ್ನಾಗಿದೆ .
ಪ್ರತ್ಯುತ್ತರಅಳಿಸಿಲೇಖನ ಚೆನ್ನಾಗಿದೆ sir
ಪ್ರತ್ಯುತ್ತರಅಳಿಸಿಹಳೆಯ ಅನುಭಗಳು, ಹೊಸ ಸವಲತ್ತುಗಳನ್ನ ವಿವರಿಸುತ್ತ, ಹಾಸ್ಯ ಮೇಳವಿಸಿ ಬರೆದಿದ್ದೀರಿ. ನಮ್ಮ ನೆನಪುಗಳನ್ನು ಸಹ ಕೆದಕುತ್ತದೆ ನಿಮ್ಮ ಲೇಖನ.
ಪ್ರತ್ಯುತ್ತರಅಳಿಸಿಪ್ರಿಯ ಡಾ.ಜಯಂತ ಕೃಷ್ಣಮೂರ್ತಿ ಕಿತ್ತೂರ ಅವರೆ,
ಪ್ರತ್ಯುತ್ತರಅಳಿಸಿಲೌಕಿಕ ಪ್ರಪಂಚದಲ್ಲಿನ ಮನೆಯ ಲೊಕೇಶನ್ ಗುರುತಿಸುವದರಲ್ಲಿ ಅನಿವಾರ್ಯವಾಗಿ ಸಿಲುಕಿ, ಸುಸ್ತಾಗಿ , ವಯೋವೃದ್ಧರಾದಂತೆಲ್ಲಾ , ಕೆಲವರಾದರೂ ಜ್ಞಾನವೃದ್ಧರಾಗಿ 'ಅಲ್ಲಿರುವ' ನೆಮ್ಮದಿಯ 'ನಮ್ಮನೆ'ಯ ಕಡೆಗೆ ತಮ್ಮ ಮನ , ಗಮನ, ಸಮಯ ಹರಿಸುವ ಕಡೆಗೆ , ತಮ್ಮ ಇತಿಮಿತಿಯಲ್ಲಿ ಆಧ್ಯಾತ್ಮಿಕ ಚಿಂತನೆ, ಸಾಧನೆ ಮಾಡುವುದರ ಕಡೆಗೆ ಓದುಗರ ಗಮನವನ್ನು ಸೂಕ್ಷ್ಮವಾಗಿ ಸೆಳೆದಿರುವಿರಿ.
ತುಂಬಾ ನೈಜ ಮತ್ತು ಪರಿಪಕ್ವವಾದ ನಿಮ್ಮ ಲೇಖನವನ್ನು ಓದಿ, ನಿಮ್ಮ ಸಾತ್ವಿಕ ಸಾಹಿತ್ಯಾಸಕ್ತಿಯ ಮತ್ತು ರಚನಾತ್ಮಕ ಲೇಖನ ಸಾಮರ್ಥ್ಯದ ಸ್ಯಾಂಪಲ್ ಓದುಗರಿಗೆ ವಿನಯಪೂರ್ವಕವಾಗಿ ಉಣಬಡಿಸಿರುವಿರಿ.
ತುಂಬ ಸಂತಸವಾಯಿತು.
ದೇವರ ಮತ್ತು ನಿಮ್ಮ ತಾಯಿತಂದೆಯವರ ಆಶೀರ್ವಾದ ಸದಾ ನಿಮ್ಮೆಲ್ಲರ ಮೇಲಿರಲಿ. ನಿಮ್ಮ ಕನ್ನಡ ಸಾಹಿತ್ಯದ ಸೇವೆಯು ಎತ್ತರಕ್ಕೇರುತ್ತಾ ಸಾಗುತ್ತಿರಲೆಂದು ಅಭಿಮಾನ ಮತ್ತು ಹೆಮ್ಮಯಿಂದ ಶುಭಹಾರೈಸುವ ಸಂತಸ ನನ್ನದು.
ನಿಮಗೆ ಅಭಿವಂದನೆಗಳು ಮತ್ತು ಧನ್ಯವಾದಗಳು.
ಶುಭಂ ಅಸ್ತು .
ಲಘು ಹಾಸ್ಯ ಸನ್ನಿವೇಶಗಳು ಮತ್ತು ಸುಂದರವಾಗಿ ವಿವರಿಸಿದ ಲೇಖನ. ಸಂತೋಷದಿಂದ ಓದಿದೆ.
ಪ್ರತ್ಯುತ್ತರಅಳಿಸಿGood morning sir. Very nice article.
ಪ್ರತ್ಯುತ್ತರಅಳಿಸಿJayant, ತುಂಬಾ ಮಜವಾದ ಬರಹ, ಓದಿ ಬಹಳ ಖುಷಿ ಆಯಿತು, ಗಣೇಶ ಪಾರ್ಕ್, ನಾನು ಮೊದಲು ಪಾರ್ಕು ಅಂದು ಕೊಂಡ್ಡಿದೆ , ಮತ್ತೆ ಮುಂದ ಓದಿದಮೇಲೆ ಗೊತ್ತಾಯಿತು ಇದು ಅಪಾರ್ಟ್ಮೆಂಟ್ ಅಂತ.ಹಾ. .ಹಾ ಹಾ
ಪ್ರತ್ಯುತ್ತರಅಳಿಸಿಲೇಖನ ವಿನೋದವಾಗಿದೆ😂 ಇದರಲ್ಲಿ ನಿಮ್ಮ ಮನೆಯ ಲೊಕೇಶ ನ ನಮಗೂ ಗೊತ್ತಾಯಿತು ಧನ್ಯವಾದಗಳು.🙏😊
ಪ್ರತ್ಯುತ್ತರಅಳಿಸಿಗೆಳೆಯ ಜಯಂತ, ಬರಹ ಅದ್ಭುತವಾಗಿದೆ. ಲೋಕೇಶನ ಬದಲು ರಮೇಶ ತುಂಬ ಸೊಗಸಾಗಿವೆ.
ಪ್ರತ್ಯುತ್ತರಅಳಿಸಿVery nice article.. amazing humor in every incident.. digital map and location have made our life easy .. we may see new types of funny experiences.. keep writing ✍️ 🙏
ಪ್ರತ್ಯುತ್ತರಅಳಿಸಿGood evening sir very nice article with humour. It has refreshed all old memories it was so difficult to find a location. Thank you to digitalisation which has made our life easy.
ಪ್ರತ್ಯುತ್ತರಅಳಿಸಿ