ಕಿರಿ ಹಿರಿಯ ನಾಗರಿಕ
೧೯೮೦-೯೦ ರ ದಶಕದಲ್ಲಿ ದೂರದರ್ಶನದಲ್ಲಿ ಬರುತ್ತಿದ್ದ ಅಮೂಲ್ ಚಾಕೊಲೇಟ್ ನ ಹಿಂದಿ ಭಾಷೆಯ ಜಾಹೀರಾತೊಂದರಲ್ಲಿ ಮೋಪೆಡ್ ಮೇಲೆ ಕಾಲೇಜಿಗೆ ಹೋಗುತ್ತಿರುವ ಹುಡುಗ ಮತ್ತು ಹುಡುಗಿಯ ದೃಶ್ಯ ಸಂಭಾಷಣೆ ವಕ್ಕಣೆ ಹೀಗಿತ್ತು.
ಹುಡುಗ:"ಬೀತಗಯೆ ದಿನ್ ಸೈಕಲ್ ಕೇ ಅಭಿ ಆಯೇ ನಹಿ ದಿನ್ ಮೋಟರ್ ಕೇ"
ಹುಡುಗಿ: "ತೋ ಫಿರ್ ಕ್ಯುಂವ್ ನಾ ಖಾಯೆ ಅಮೂಲ್ ಚಾಕ್ಲೇಟ್"
ಟ್ಯಾಗ ಲೈನ್:" ಅಮೂಲ್ ಚಾಕ್ಲೇಟ್ ಪ್ಯಾರ್ ಕಿ ಮಿಠಿ ಭೇಟ"
ಕಂಪನಿಯ ಅದೇ ತರಹದ ಇನ್ನೊಂದು ಜಾಹೀರಾತಿನಲ್ಲಿ ಒಬ್ಬ ಹುಡುಗಿ, ನಾನು ಬಲೂನ್ ಆಟ ಆಡುವುದಕ್ಕಿಂತ ದೊಡ್ಡವಳು ಆದರೆ ಕಾರ್ಟೂನ್ ನೋಡುವುದಕ್ಕಿನ್ನು ಚಿಕ್ಕವಳು ಎಂದು ಹೇಳಿದರೆ ಪಕ್ಕದಲ್ಲಿದ್ದ ಅವಳ ಅಣ್ಣ, ಆದರೆ ನೀನು ಅಮೂಲ್ ಚಾಕೊಲೇಟ್ ತಿನ್ನಲು ಸರಿ ವಯಸ್ಸಿನವಳು ಎಂದು ಹೇಳುವನು.
ಅಮೂಲ್ ಕಂಪನಿಯು ದೇಶದ ದಿನನಿತ್ಯದ ಬದುಕಿನಲ್ಲಿನ ಆಗು ಹೋಗುಗಳನ್ನು ಆಧರಿಸಿ ಗ್ರಾಹಕರ ಮನಸ್ಸಿಗೆ ಸ್ಪಂದಿಸುವ ಜಾಹೀರಾತುಗಳನ್ನು ಸೃಷ್ಟಿಸುವ ಸೃಜನಶೀಲ ತಂಡ ಹೊಂದಿದೆ. ಅಮೂಲ್ ಕಂಪನಿಯವರೇನಾದರೂ ಹುಳಿ-ಸಿಹಿ ಮಿಶ್ರಿತ ಚಾಕೋಲೇಟ್ ತಯಾರಿಸುತ್ತಿದ್ದರೆ, ಅದರ ಜಾಹೀರಾತಿಗೆ ನನ್ನಂಥವರ ಪರಿಸ್ಥಿತಿಯನ್ನು ಉಪಯೋಗಿಸಿಕೊಂಡು ಒಂದು ಒಳ್ಳೆಯ ಟ್ಯಾಗ್ ಲೈನ್ ರಚಿಸಬಹುದು ಎಂಬುದು ಚಾಕೊಲೇಟ್ ನ ವ್ಯಾಪಾರ ಮತ್ತು ಜಾಹೀರಾತು ವಿಭಾಗಕ್ಕೆ ನನ್ನ ಒಂದು ಪುಕ್ಕಟೆ ಸಲಹೆ. ಹಾ಼, ನಾನೀಗ ಪುಕ್ಕಟೆ ಸಲಹೆ ನೀಡಲು ಪ್ರಾರಂಭಿಸಿರುವುದು ನನ್ನ ಪರಿಸ್ಥಿತಿಯ ದ್ಯೋತಕ. ಅರ್ಥವಾಗಲಿಲ್ಲವೇ? ಅದೇ, ಐವತ್ತೆಂಟನೆ ವರ್ಷಕ್ಕೇ ವೃತ್ತಿಯಿಂದ ನಿವೃತ್ತಿ ಹೊಂದಿ ವಿಶ್ರಾಂತ ಜೀವನವನ್ನು ಪ್ರಾರಂಭಿಸಿರುವ ಯುವಕರಲ್ಲಿ ಮುದುಕ ಮತ್ತೂ ಮುದುಕರಲ್ಲಿ ಯುವಕನ ಪರಿಸ್ಥಿತಿ ಅಷ್ಟೇ ಹೊರತು ಅನ್ಯಥಾ ಭಾವಿಸಬಾರದು.!!!
ಅದೇನಾಯಿತೆಂದರೆ, ನಮ್ಮ ಕಾಲೇಜಿನರು ತಮ್ಮ ನಿಯಮದ ಪ್ರಕಾರ ಕಳೆದವರ್ಷ ನನಗೆ ೫೮ ವರ್ಷ ತುಂಬುವುದಕ್ಕೆ ಒಂದೆರಡು ತಿಂಗಳು ಮೊದಲು ಇನ್ನೂ ಒಂದೆರಡು ವರ್ಷ ಅಂದರೆ ೬೦ನೇ ವರ್ಷದ ತನಕ ಕೆಲಸ ಮಾಡುವ ಇಚ್ಛೆಇದ್ದರೆ ಇಂತಹ ದಿನದೊಳಗೆ ಒಂದು ಅರ್ಜಿ ಕೊಡಿರಿ, ನಾವು ಪರಿಶೀಲಿಸಿ ನಮ್ಮ ನಿರ್ಧಾರ ಪ್ರಕಟಿಸುವದಾಗಿ ಒಂದು ಈ ಮೇಲ್ ಕಳಿಸಿದರು. ನಾನು ಅರ್ಜಿ ಕೊಡುವ ಗೋಜಿಗೆ ಹೋಗಲಿಲ್ಲ. ನನ್ನ ಅಭಿಪ್ರಾಯದಲ್ಲಿ, ಸುದೀರ್ಘ ಅನುಭವದ ಮೌಲ್ಯಯುತ ಶಿಕ್ಷಕನ ಸೇವೆಯ ಅವಶ್ಯಕತೆ ಕಾಲೇಜಿಗೆ ಇರಬೇಕಾದುದು ಮುಖ್ಯ ಮತ್ತು ಅವರೇ ಅದನ್ನು ವ್ಯಕ್ತಪಡಿಸುವುದು ಸೂಕ್ತ, ವಿನಃ ನಿವೃತ್ತಿಯ ಅಂಚಿನಲ್ಲಿರುವ ಶಿಕ್ಷಕ ನೌಕರಿಯಲ್ಲಿ ಮುಂದುವರಿಯುವ ಬಯಕೆಯ ಅರ್ಜಿ ಬರೆಯುವುದು. ಎಲ್ಲರೂ ನನ್ನಂತೆಯೇ ವಿಚಾರ ಹೊಂದಿರುವುದಿಲ್ಲವಲ್ಲ. ಅಂದರೆ ಕಾಲೇಜಿನವರ ಮತ್ತು ನಿವೃತ್ತಿಯ ಅಂಚಿನಲ್ಲಿರುವ ವಿವಿಧ ಶಿಕ್ಷಕರ ಅವಶ್ಯಕತೆಗಳು ವಿಭಿನ್ನ ಮತ್ತು ಅದಕ್ಕೆ ಅನುಗುಣವಾಗಿ ಅವರವರ ವ್ಯವಹಾರಗಳು ಅಲ್ಲವೇ?, ಅಂತೂ ನನ್ನ ಸುದೀರ್ಘ ೩೫ ವರ್ಷಗಳ ಸೇವೆಯ ನಂತರ ನನ್ನ ೫೮ ನೇ ವರ್ಷಕ್ಕೆ ಇಂಜಿನಿಯರಿಂಗ್ ಕಾಲೇಜು ಪ್ರಾಧ್ಯಾಪಕನ ವೃತ್ತಿಯಿಂದ ನಿವೃತ್ತಿ ಹೊಂದಿದೆ. ನನ್ನ ನಿವೃತ್ತಿಯ ದಿನ ನನ್ನ ಬಾಲ್ಯದ ಅನೇಕ ಮಿತ್ರರು ಫೋನ್ ಮಾಡಿ ಅಭಿನಂದನೆಗಳನ್ನು ವ್ಯಕ್ತಪಡಿಸಿದರು. ನನ್ನ ಸಮವಯಸ್ಕ ಮಿತ್ರರಲ್ಲಿ ಕೆಲವರು ಮೊಮ್ಮಕ್ಕಳನ್ನು ಹೊಂದಿ ಅಜ್ಜರಾದರೂ ಇನ್ನೂ ನೌಕರಿಯಲ್ಲಿರುವಾಗ ನಾನು ಎಲ್ಲರಿಗಿಂತಲೂ ಮುಂಚಿತವಾಗಿ ನಿವೃತ್ತಿ ಹೊಂದಿದ್ದಕ್ಕೆ ಕೆಲವು ಮಿತ್ರರು ನನ್ನನ್ನು ಹಿರಿಯ ನಾಗರಿಕ ಪಟ್ಟಕ್ಕೇರಿಸಿದರು. ಹಾಗೆ ನೋಡಿದರೆ ತಲೆಗೂದಲು ಬಿಳಿಯಾದದ್ದರಿಂದ ನನ್ನ ೪೦ನೇ ವಯಸ್ಸಿಗೆ ಆಗಲೇ ಅನೇಕ ಮಕ್ಕಳು ನನ್ನನ್ನು ಅಜ್ಜ ಎಂದು ಸಂಬೋಧಿಸುತ್ತಿದ್ದರೂ ಅದು ನನಗೆ ಎಂದೂ ಮುಜುಗರ ಉಂಟುಮಾಡಿರಲಿಲ್ಲ. ಆ ಪ್ರಸಂಗಗಳ ಬಗ್ಗೆ ಆಗಲೇ ನಾನು "ನನ್ನ ಬಿಳಿಯ ತಲೆಯ ಬಣ್ಣಗಳು" ಎಂಬ ಲೇಖನವನ್ನೂ ಬರೆದಿರುವೆ. ಆದರೇ, ೫೫ ವರ್ಷದ ರಾಜಕಾರಣಿಗಳು ಬಿಳಿಯ ಟಿ ಶರ್ಟ ಧರಿಸಿ ಯುತ್ ಐಕಾನ್ ಆಗಿ ರಾರಾಜಿಸುತ್ತಿರುವಾಗ ನನಗೆ ೫೮ನೇ ವರ್ಷಕ್ಕೇ ಹಿರಿಯ ನಾಗರಿಕನ ಪಟ್ಟ ಎಷ್ಟು ಸಮಂಜಸ. ಮೇಲಾಗಿ, ಒಬ್ಬ ಹಿರಿಯ ನಾಗರಿಕನಿಗೆ ಸಿಗಬೇಕಾದ ಎಲ್ಲಾ ಅನುಕೂಲತೆಗಳು/ಸೌಲಭ್ಯಗಳಿಂದ ಇನ್ನೂ ಎರಡು ವರ್ಷ ವಂಚಿತರಾಗಿರುವುದು ಎಂದರೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಅಲ್ಲವೇ.
ನಮ್ಮ ತಂದೆ, ಡಾ.ಕೃಷ್ಣಮೂರ್ತಿ ಕಿತ್ತೂರ ಅವರು ತಮ್ಮ 'ಜೀವನ ಸಂಧ್ಯಾ' ಎಂಬ ಲಲಿತ ಪ್ರಬಂಧದಲ್ಲಿ ಹಿರಿಯ ನಾಗರಿಕರ ಜೀವನ ಮಧುರ ಎಂದು ಹೇಳುವಲ್ಲಿ ಮಾವಿನ ಮೂರು ಹಂತಗಳಾದ ಮಿಡಿಗಾಯಿಯ ಒಗರು, ಬಾಯಲ್ಲಿ ನೀರೂರಿಸುವ ಬಲಿತ ಮಾವಿನಕಾಯಿಯ ಹುಳಿ ಮತ್ತೂ ಕಳಿತು ಹಣ್ಣಾದ ಮಾವಿನ ಮಾಧುರ್ಯದ ರುಚಿಗಳ ಬಗ್ಗೆ ವಿವರಿಸಿರುವರು. ಆದರೆ, ಈಗ ನನ್ನದು ಅತ್ತ ಹುಳಿ ಪೂರ್ಣ ಕಳೆದಿಲ್ಲದ, ಇತ್ತ ಮಾಗಿ ಪೂರ್ಣ ಸಿಹಿಯಾಗಿಲ್ಲದ ಮಾವಿನ ಪಾಡುಗಾಯಿಯ ಪರಿಸ್ಥಿತಿ.
ಕೈಗಾರಿಕೆಗಳಲ್ಲಿ ಉದ್ಯೋಗದ ಅನೇಕ ಅವಕಾಶಗಳಿದ್ದರೂ ನಾನು ಬಯಸಿ ಸೇರಿದ್ದು ನಮ್ಮ ಮನೆತನದ ಶಿಕ್ಷಕ ವೃತ್ತಿಯನ್ನು. ಹಿಂದೆ ಖಾಸಗಿ ಮತ್ತು ಸರ್ಕಾರೀ ಇಂಜಿನಿಯರಿಂಗ್ ಕಾಲೇಜಿನಲ್ಲಿಯ ಪ್ರಾಧ್ಯಾಪಕರ ಪಗಾರಗಳಲ್ಲಿ ವ್ಯತ್ಯಾಸ ಇರಲಿಲ್ಲ. ಆದರೆ ಇತ್ತೀಚೆಗೆ ಪರಿಸ್ಥಿತಿ ಹಾಗೆ ಉಳಿದಿಲ್ಲ. ಹಾಗಿದ್ದರೂ ನಿವೃತ್ತಿಯ ತನಕ ನನಗೆ ವೃತ್ತಿ ಕರ್ತವ್ಯದಲ್ಲಿನ ಉತ್ಸಾಹ ಎಳ್ಳಷ್ಟು ಕಡಿಮೆ ಆಗಿರಲಿಲ್ಲ. ಇದನ್ನು ಕಂಡು ನನ್ನ ಹಿತೈಷಿ ಯುವ ಸಹೋದ್ಯೊಗಿಯೊಬ್ಬರು, ಸರ್ ಇಂದಿನ ದಿನಗಳಲ್ಲಿ ಕಡಿದಷ್ಟು ತುರಿಸಿಕೊಳ್ಳುವಂತೆ ಕೆಲಸ ಮಾಡಬೇಕು. ಅದೂ ಇಂಚುಗಳಲ್ಲಿ ಕಡಿದರೆ ಮಿಲಿಮೀಟರನಲ್ಲಿ ತುರಿಸಿಕೊಳ್ಳಬೇಕು. ನೀವು ಪಠ್ಯಕ್ಕಿಂತ ಹೆಚ್ಚಿನದನ್ನು, ನಾಳೆ ವಿದ್ಯಾರ್ಥಿಗಳು ಮಾಡುವ ವೃತ್ತಿಗೆ ಸಂಬಂಧಿಸಿದ ವಿಷಯಗಳನ್ನೂ ಹೇಳಿದರೆ ಇಂದಿನ ಝೆನ್ ಝೀ ವಿದ್ಯಾರ್ಥಿಗಳಿಗೆ ಅದು ಬೇಕಿಲ್ಲ. ಏಕೆಂದರೆ ಅದರಿಂದ ಅವರಿಗೆ ಮಾರ್ಕ್ಸ್ ಬರುವುದಿಲ್ಲ. ನಮ್ಮನ್ನು ನೋಡಿ, ನಾವು ನಿಮ್ಮಂಥೆ ವಿಷಯದ ತಂತ್ರಜ್ಞಾನದ ಹೊಸ ಬೆಳವಣಿಗೆಗಳ ಬಗ್ಗೆ ಓದಿಕೊಂಡು ಪಾಠ ಮಾಡುವಲ್ಲಿ ಸಮಯವನ್ನು ಸುತಾರಾಂ ಹಾಳುಮಾಡದೇ ವಿದ್ಯಾರ್ಥಿಗಳು ಮಾರ್ಕ್ಸ್ ಪಡೆಯಲು ಏನು ಬೇಕೋ ಅಷ್ಟೇ ಪಾಠಮಾಡುವುದು ಮತ್ತು ನಮ್ಮ ಉಳಿದ ಸಮಯವನ್ನು ಶೇರು ಮಾರುಕಟ್ಟೆಯ ಅಧ್ಯಯನದಲ್ಲಿ ತೊಡಗಿಸಿ ಅದರಂತೆ ಹಣ ಹೂಡಿಕೆ ಮಾಡುತ್ತೇವೆ ಮತ್ತೂ ಈ ಪಗಾರಕ್ಕಿಂತಲೂ ಜಾಸ್ತಿ ಆದಾಯ ಪಡೆಯುತ್ತೇವೆ. ನೀವಾದರೋ ಇಂದಿಗೂ ನಿಮ್ಮ ಉಳಿತಾಯದ ಹಣವನ್ನು ಬ್ಯಾಂಕ್ ಎಫ್ ಡಿ ಗಳಲ್ಲಿಟ್ಟು ಕೊಳೆಯಿಸುತ್ತಿರುವಿರಿ ಎಂದು ಹೇಳುತ್ತಾ, ನಾನು 'ಗಳಿಸಿದ ಹಣಕ್ಕಿಂತಲೂ ಉಳಿಸಿದ ಹಣ ಮೇಲು' ಎನ್ನುವ ಹಿರಿಯ ನಾಗರಿಕರ ಜಾಯಮಾನದವನು ಎಂಬುದನ್ನು ಸಾಬೀತು ಪಡಿಸಿದ. ನಮ್ಮ ಉತ್ತರ ಕರ್ನಾಟಕದಲ್ಲಿ ಪ್ರಚಲಿತ "ಮುದಕೀ ನಿನ್ನಾಟ ಮುಂದೈತಿ" ಎಂಬ ಮಾತಿನಂತೆ ಪಾಪ ಆ ಯುವಕ ಸಹೋದ್ಯೋಗಿಗೆ ಏನು ಗೊತ್ತು ನಿವೃತ್ತಿ ವೇತನ ಇಲ್ಲದ ಖಾಸಗಿ ಕಾಲೇಜು ಪ್ರಾಧ್ಯಾಪಕರ ನಿವೃತ್ತಿ ಜೀವನದ ಗೋಳು. ಇರಲಿ.
ಈಗ ನಾನಂತೂ ದಿನದಲ್ಲಿ ಕನಿಷ್ಠ ಮೂರು ಪತ್ರಿಕೆಗಳನ್ನು ತಿರುವಿ ಹಾಕುವುದು. ಅಂದಹಾಗೆ, ಇತ್ತೀಚಿಗೆ ವರ್ತಮಾನ ಪತ್ರಿಕೆಯಲ್ಲಿ ಬಂದ ಒಂದು ಮಾಹಿತಿಯನ್ನು ನೀವೂ ಓದಿರಬಹುದು. ಅದರ ಪ್ರಕಾರ, ಮೈಸೂರಿನ ಪ್ರಾಣಿ ಸಂಗ್ರಹಾಲಯದ ಹತ್ತಿರದ ಒಂದು ಹೊಟೇಲ್ ನ ಮಾಲೀಕರು ತಮ್ಮ ಹೊಟೇಲಿನ ರಜತ ಮಹೋತ್ಸವದ ಪ್ರಯುಕ್ತ ಹಿರಿಯ ನಾಗರಿಕರಿಗೆ ಚಹಾ ಮತ್ತು ಕಾಫಿಯನ್ನು ಉಚಿತವಾಗಿ ನೀಡುವುದಾಗಿ ಬರೆದಿರುವರಂತೆ. ಮುಂದಿನ ತಿಂಗಳು ಮೈಸೂರಿಗೆ ಹೋಗುವ ವಿಚಾರ ಇದೆ. ಆಗ ಮೃಗಾಲಯ ನೋಡುವ ನೆಪದಲ್ಲಿ ಆ ಹೊಟೇಲಿಗೆ ಹೋಗಿ ಜರೂರ್ ಹಿರಿಯ ನಾಗರೀಕರಿಗೆ ನೀಡುವ ಉಚಿತ ಚಹಾ ಕುಡಿಯಲು ಪ್ರಯತ್ನ ಮಾಡುವೆ. ಹ಼ಾ, ಆ ಹೊಟೇಲಿನವರು ನನ್ನ ಸಂಪೂರ್ಣ ಬಿಳಿಯಾದ ತಲೆಗೂದಲನ್ನು ನೋಡಿ ಆಧಾರ್ ಕಾರ್ಡ್ ಅಥವಾ ಜನನ ಪ್ರಮಾಣ ಪತ್ರ ಕೇಳಲಿಕ್ಕಿಲ್ಲ ಎಂಬುದು ನನ್ನ ಮೊಂಡು ಧೈರ್ಯ. ಇನ್ನು ಮೈಸೂರಿಗೆ ಬಸ್ಸಿನಲ್ಲಿ ಹೋಗುವ ವಿಚಾರ ಇತ್ತು ಆದರೆ, ನಮ್ಮ ಘನ ಸರ್ಕಾರ ಹಿರಿಯ ನಾಗರಿಕರರಿಗೆ ಬಸ್ಸಿನ ಟಿಕೆಟ್ ದರದಲ್ಲಿ ಶೇಕಡಾ ಇಪ್ಪತ್ತೈದು ಕಡಿತ ನೀಡುವಾಗ ವಯಸ್ಸಿನ ಪ್ರಮಾಣಪತ್ರ ಕೇಳುವರು. ಹೀಗಾಗಿ ನಿವೃತ್ತಿಯ ನಂತರವೂ ನಾನು ಆ ಸೌಲಭ್ಯದಿಂದ ಇನ್ನೂ ಒಂದೆರಡು ವರ್ಷ ವಂಚಿತನಾಗಿರುವದೇನೋ ನಿಜ. ಆದರೆ, ನುಡಿದಂತೆ ನಡೆಯುವ ನಮ್ಮ ಸರ್ಕಾರದ "ಸ್ತ್ರೀ ಶಕ್ತಿ" ಯೋಜನೆಯಿಂದಾಗಿ ನಮ್ಮಂಥಾ ಕಿರಿಯ ನಿವೃತ್ತ ಗಂಡಸರಿಗೆ ಸರ್ಕಾರೀ ಬಸ್ಸುಗಳನ್ನು ಹತ್ತಲು ಧೈರ್ಯ ಸಾಲುತ್ತಿಲ್ಲ ಎಂಬುದೂ ಅಷ್ಟೇ ಸತ್ಯ. ಅಂದಹಾಗೆ, ಇತ್ತೀಚಿಗೆ ನನ್ನ ನಿವೃತ್ತಿಯ ನಂತರ ನಮ್ಮ ಗಡಿನಾಡು ಬೆಳಗಾವಿಯನ್ನು ಸರ್ಕಾರ ಹೇಗೆ ನಿರ್ಲಕ್ಷ್ಯ ಮಾಡಿದೆ ಎಂದು ಪತ್ರಿಕೆಗಳ ಓದುಗರ ಓಲೆಗೆ ನಿರಂತರವಾಗಿ ಬರೆಯುತ್ತಿರುವೆ. ಆ ಸರಣಿಯಲ್ಲಿ ರೈಲ್ವೆ ಇಲಾಖೆಯವರು ಹೇಗೆ ಬೆಳಗಾವಿಯನ್ನು ಕಡೆಗಣಿಸಿದ್ದಾರೆ, ಹುಬ್ಬಳ್ಳಿಯನ್ನು ಹೋಲಿಸಿದರೆ ಹೇಗೆ ಬೆಳಗಾವಿಯ ನಾಗರಿಕರು ಅನೇಕ ರೈಲು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂಬಿತ್ಯಾದಿ ವಿಷಯಗಳ ಪತ್ರಗಳನ್ನು ಸಂಬಂಧಪಟ್ಟವರಿಗೆ ನಿರಂತರವಾಗಿ ರವಾನಿಸುತ್ತಿರುವೆ. ಅದರ ಪರಿಣಾಮವಾಗಿಯೇ ಇರಬೇಕು ಮೊನ್ನೆ ರೈಲ್ವೆ ಇಲಾಖೆಯವರು ನಮ್ಮ ಬೆಳಗಾವಿಯಿಂದ ಮೈಸೂರಿಗೆ ನೇರ ರೈಲನ್ನೇನೋ ಓಡಿಸಲು ಪ್ರಾರಂಭಿಸಿದ್ದಾರೆ, ಜೊತೆಗೆ ಏಕಾಏಕಿ ಈ ಮನುಷ್ಯ ಇಷ್ಟು ತಕರಾರು/ಹಕ್ಕೊತ್ತಾಯ ಮಾಡಲು ಪ್ರಾರಂಭಿಸಿದರ ಕಾರಣವನ್ನೂ ಹುಡುಕಿರಬೇಕು ಎಂಬುದು ನನ್ನ ಅನುಮಾನ. ಇಲ್ಲದಿದ್ದರೆ, ಅನೇಕ ವರ್ಷಗಳಿಂದ ಜಾರಿಯಲ್ಲಿದ್ದ ಹಿರಿಯ ನಾಗರಿಕರಿಗೆ ನೀಡುವ ದರ ಕಡಿತದ ಸೌಲಭ್ಯವನ್ನು ಇತ್ತೀಚೆಗೆ ಏಕಾಏಕಿ ರೈಲ್ವೆ ಇಲಾಖೆ ಹಿಂದೆ ಪಡೆಯಲು ಕಾರಣವೇನು? ಇನ್ನೊಂದೆರಡು ವರ್ಷದಲ್ಲಿ ಹಿರಿಯ ನಾಗರಿಕರನಾಗುವ ನಾನು ಆ ಸೌಲಭ್ಯದ ಲಾಭ ಪಡೆಯುವುದನ್ನು ತಪ್ಪಿಸಲು ತರಾತುರಿಯಲ್ಲಿ ಆ ಸೌಲಭ್ಯವನ್ನು ರೈಲ್ವೆ ಇಲಾಖೆಯವರು ಹಿಂದೆ ಪಡೆದಿದ್ದಾರೆ ಎಂಬುದು ನನ್ನ ಬಲವಾದ ನಂಬಿಕೆ. ಪಾಪ, ನನ್ನಿಂದಾಗಿ ಇತರ ಎಲ್ಲ ಹಿರಿಯ ನಾಗರಿಕರೂ ಆ ಸೌಲಭ್ಯದಿಂದ ವಂಚಿತರಾದರು ಎಂಬ ಅಪರಾಧೀಭಾವ ಈಗ ನನ್ನನ್ನು ಕಾಡತೊಡಗಿದೆ.!!!
ಹೌದು, ನೌಕರಿಯಿಂದ ನಾನು ಬೇಗ ನಿವೃತ್ತನಾದ ಒಂದು ಲಾಭವೆಂದರೆ ದಿನಾಲೂ ನನ್ನ ವಯಸ್ಸಿನ ಇತರರು ಆಫೀಸಿನಿಂದ ಹಿಂತಿರುಗುವ ವೇಳೆಗೆ ನಾನು ಮನೆಯಲ್ಲಿ ಆರಾಮವಾಗಿ ನಾನೇ ತಯಾರಿಸಿದ ಬಿಸಿ ಬಿಸಿ ಚಹಾ ಕುಡಿದು ಶ್ರೀಮತಿಯೊಂದಿಗೆ ಸಂಜೆಯ ವಾಯುವಿಹಾರಕ್ಕೆ ತೆರಳುವುದು. ಇಂದು ಸಂಜೆ 'ವೃಧ್ಧಾಪ್ಯದಲ್ಲಿ ಹಾಸ್ಯ' ಎಂಬ ವಿಶೇಷ ಕಾರ್ಯಕ್ರಮವಿದೆ, ಅದರಲ್ಲಿ ಭಾಗವಹಿಸಲು ಆಗ್ರಹ ಪೂರ್ವಕ ಆಮಂತ್ರಣ ಇದೆ ಹಾಗಾಗಿ ನಿನ್ನೊಂದಿಗೆ ಇಂದು ಸಂಜೆಯ ವಾಯು ವಿಹಾರಕ್ಕೆ ಬರುವುದಿಲ್ಲ, ಬದಲಿಗೆ ನೀನೂ ಆ ಕಾರ್ಯಕ್ರಮಕ್ಕೆ ನನ್ನ ಜೊತೆ ಬರುವೆಯಾ ಎಂದು ನನ್ನ ಶ್ರೀಮತಿಯನ್ನು ಮೊನ್ನೆ ಚಹಾ ಸೇವಿಸುತ್ತಾ ವಿಚಾರಿಸಿದೆ. ನಾನಂತು ಸರ್ವಥಾ ಬರುವುದಿಲ್ಲ, ನಿಮ್ಮ ಕಾಲೇಜಿನವರು ನಿಮ್ಮನ್ನು ೫೮ಕ್ಕೆ ನಿವೃತ್ತಿ ಮಾಡಿದ್ದಾರೆ ಅಷ್ಟೇ, ನೀವಿನ್ನೂ ಹಿರಿಯ ನಾಗರಿಕರಾಗಿಲ್ಲ ಹಾಗಾಗಿ ನೀವೂ ಹೋಗುವ ಅವಶ್ಯಕತೆಯಿಲ್ಲ ಎಂದು ಕಡ್ಡಿ ಮುರಿದಂತೆ ನನ್ನ ಶ್ರೀಮತಿ ಹೇಳಿದಳು. ಆದರೆ, ಅನೇಕ ವರ್ಷಗಳಿಂದ ಬೆಳಗಾವಿಯ ಹಾಸ್ಯ ಸಾಹಿತಿ ಮಿತ್ರರು ಪ್ರತೀ ತಿಂಗಳು ನಡೆಸುವ ಹಾಸ್ಯ ಕೂಟದ ಕಾರ್ಯಕ್ರಮದ ಆಮಂತ್ರಣ ಸಂದೇಶ ರವಾನಿಸುತ್ತಿದ್ದರು. ನಾನು ನೌಕರಿಯ ಜಂಜಾಟಗಳಿಂದ ಮುಕ್ತನಾದಮೇಲೆ ಬರುವೆ ಎಂದು ಹೇಳುತ್ತಿದ್ದೆ. ಈಗ ನಿವೃತ್ತನಾದ ನಾನು ಅವರ ಈ ತಿಂಗಳ ವಿಶೇಷ ವಿಷಯದ ಒತ್ತಾಯದ ಆಮಂತ್ರಣ ನಿರಾಕರಿಸಲಾಗದೇ ಕಾರ್ಯಕ್ರಮಕ್ಕೆ ಹಾಜರಾದೆ. ಸಭಾಂಗಣ ಗಿಚ್ಚಾಗಿ ತುಂಬಿತ್ತು. ಎಲ್ಲಿ ನೋಡಿದರಲ್ಲಿ ವಯೋವೃದ್ದರೇ ತುಂಬಿದ್ದರು. ಒಂದು ಕ್ಷಣ ನನಗೆ odd man out ಎಂದು ಅನಿಸಿತು. ಒಬ್ಬ ವೃದ್ಧ ಯಜಮಾನರು ತಮ್ಮ ಮೊಮ್ಮಗನೊಂದಿಗೆ ಆಸೀನರಾಗಿದ್ದರು. ನಿಧಾನವಾಗಿ ಸಾವರಿಸಿಕೊಂಡು ಮಿಡಿಗಾಯಿ ಮತ್ತು ಮಾಗಿದ ಹಣ್ಣಿನ ಜೊತೆ ಪಾಡುಕಾಯಿಯಂತೆ ಆ ಹುಡುಗನ ಪಕ್ಕದ ಕುರ್ಚಿಯಲ್ಲಿ ಆಸೀನನಾದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಕೆಲವು ಹಿರಿಯರು ತಮ್ಮ ಅಳಲುಗಳನ್ನು ತೋಡಿಕೊಂಡರೆ,ಇತರರು ಮಕ್ಕಳು- ಸೊಸೆಯಂದಿರೊಂದಿಗೆ ಹೇಗೆ ಜಾಣ್ಮೆಯಿಂದ ತಾವು ವ್ಯವಹರಿಸಿ ತಮ್ಮ ಮರ್ಯಾದೆ ಕಾಯ್ದುಕೊಳ್ಳುವೆವು ಎಂಬುದನ್ನು ವಿವರಿಸಿದರು. ಒಬ್ಬ ವಕ್ತಾರರು ವೃಧ್ಧಾಪ್ಯದಲ್ಲಿನ (ಅಪ)ಹಾಸ್ಯದ ಪ್ರಸಂಗಗಳನ್ನು ಪ್ರಸ್ತುತ ಪಡಿಸಿದರು. ಇನ್ನೊಬ್ಬ ವಯೋವೃದ್ಧರು ತಾವು ಹೇಗೆ ಮನೆಯ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವ ವಿಚಾರಗಳನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮ ಮುಗಿದು ಹೊರಬಂದಾಗ, ಶ್ರೀಮತಿಯ ವಿಚಾರ ಒಪ್ಪಿ ಅವಳೊಂದಿಗೆ ನಾನೂ ಸಾಯಂಕಾಲದ ವಾಯು ವಿಹಾರಕ್ಕೆ ಹೋಗಿದ್ದರೇ ಒಳ್ಳೆಯದಿತ್ತು ಎಂದು ಅನಿಸಿತು.
ಹೀಗೆಯೇ ಇನ್ನೊಂದು ಸಂಜೆ ನಾವಿಬ್ಬರೂ ವಾಯುವಿಹಾರಕ್ಕೆ ಹೋದಾಗ, ತಮ್ಮ ೬೫ ವರ್ಷಕ್ಕೆ ಐ ಐ ಟಿ ಇಂದ ನಿವೃತ್ತಿ ಹೊಂದಿ ತಮ್ಮೂರಾದ ಬೆಳಗಾವಿಯಲ್ಲಿ ಬಂದು ನೆಲೆಸಿದ ಮಹಿಳಾ ಪ್ರೊಫೆಸರ್ ಮಿತ್ರರೊಬ್ಬರು ಸಿಕ್ಕರು. ನಾನು ೬೫ ಕ್ಕೆ ನಿವೃತ್ತಿ ಹೊಂದಿದರೂ ಏನೋ ಕಳೆದುಕೊಂಡಂತೆ ಅನಿಸುತ್ತದೆ, ನೀವು ಕೇವಲ ೫೮ ಕ್ಕೇ ನಿವೃತ್ತಿ ಹೊಂದಿರುವಿರಿ ನಿಮಗೆ ಹೇಗೆ ಅನಿಸುತ್ತದೆ ಎಂದು ನನ್ನ ನಿವೃತ್ತಿಯ ವಯಸ್ಸಿನ ಗಾಯದ ಮೇಲೆ ಉಪ್ಪು ಎರಚಿದರು. ಮೇಡಂ, ಕೆಲವು ಹೆಂಗಸರು ನಲವತ್ತನೇ ವಯಸ್ಸಿಗೆ ಮೆನೊಪಾಸ್ ಅನುಭವಿಸಿದರೆ ಇನ್ನೂ ಕೆಲವರಿಗೆ ಅರವತ್ತಾದರೂ ಅದು ಬಿಡದು. ಎರಡೂ ಪರಿಸ್ಥಿತಿಗಳಲ್ಲಿಯ ತ್ರಾಸನ್ನು ಅನುಭವಿಸುವವರೇ ಬಲ್ಲರು ಎಂದಾಕ್ಷಣ ಅವರು ಅಲ್ಲಿಂದ ಮರುಮಾತಾಡದೇ ಜಾಗ ಖಾಲಿ ಮಾಡಿದರು. ನನ್ನ ಶ್ರೀಮತಿ ಮಾತ್ರ ಕಣ್ಣು ಕೆಂಪಗೆ ಮಾಡಿ ಇದೇನು ನೀವು ಹೀಗೆ ಮಾತಾಡುವುದು ಎಂದಳು. ನಾನು ಕೇವಲ ಹೋಮಿಯೋಪತಿ ವೈದ್ಯಕೀಯ ಶಾಸ್ತ್ರದ ಮೂಲ ಸಿದ್ಧಾಂತವಾದ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬುದನ್ನು ಸಾಬೀತು ಪಡಿಸುವ ಪ್ರಯತ್ನ ಮಾಡಿದೆ ಎಂದು ಸಮಜಾಯಿಷಿ ನೀಡಲು ಪ್ರಯತ್ನಿಸಿದೆ.
ಅಂದಹಾಗೆ, ಮೊನ್ನೆ ಸಾಹಿತ್ಯ ಬಳಗದ ವಾಟ್ಸಾಪ್ ಗುಂಪಿನಲ್ಲಿ ಹಿರಿಯ ನಾಗರಿಕರೊಬ್ಬರು ಈ ಕೆಳಗಿನ ಸಂದೇಶವನ್ನು ಹಂಚಿಕೊಂಡರು: ಹಿರಿಯ ನಾಗರಿಕರಾದವರಿಗೆ ಬರುವ ಆಲ್ಝೈಮರ್ ಎನ್ನುವ ಸ್ಮರಣಶಕ್ತಿಯ ನಷ್ಟವನ್ನುಂಟು ಮಾಡುವ ರೋಗವನ್ನು ತಡೆಗಟ್ಟುವ ಏಕೈಕ ಮಾರ್ಗವೆಂದರೆ ಸಾಧ್ಯವಾದಷ್ಟು ಜನರೊಂದಿಗೆ ಮಾತನಾಡುವುದು ಮತ್ತು ಸಕ್ರಿಯವಾಗಿ ಸಂವಹನ ನಡೆಸುವುದು. ಆದ್ದರಿಂದ, ಹಿರಿಯ ನಾಗರೀಕರು ಹೆಚ್ಚು ಮಾತನಾಡುತ್ತಿದ್ದರೆ ಬೇಸರಗೊಳ್ಳಬೇಡಿ. ವಯಸ್ಸಾದವರು ಹೆಚ್ಚು ಮಾತನಾಡಿದಾಗ ಅವರನ್ನು ಅಪಹಾಸ್ಯ ಮಾಡಬೇಡಿ. ನಿವೃತ್ತರು (ಹಿರಿಯ ನಾಗರಿಕರು) ಹೆಚ್ಚೆಚ್ಚು ಮಾತನಾಡಬೇಕು ಎಂದು ವೈದ್ಯರು ಹೇಳುತ್ತಾರೆ. ನೀವು ಹಿರಿಯ ನಾಗರಿಕರಿಗೆ ಮಾಡುವ ಒಂದು ಉಪಕಾರವೆಂದರೆ ಈ ಮೆಸೇಜನ್ನು 10 ಹಿರಿಯ ನಾಗರಿಕರಿಗೆ ಕಳುಹಿಸುವುದು ಎಂದಿತ್ತು. ಆ ಸಂದೇಶಕ್ಕೆ ಸ್ಪಂದಿಸುತ್ತಾ 'ನಾನು ಈಗ ಮಾತನಾಡದೇ ಮುಕಾಟಾಗಿ ಹತ್ತಾರು ಹಿರಿಯ ನಾಗರಿಕರಿಗೆ ಕೂಡಲೇ ಕಳಿಸುತ್ತೇನೆ, ಏಕೆಂದರೆ ಮುಂದಿನ ವರ್ಷ ನಾನೂ ಹಿರಿಯ ನಾಗರಿಕನಾಗುವೆ' ಎಂದು ಗುಂಪಿನಲ್ಲಿ ನಾನು ಬರೆದದ್ದಕ್ಕೆ ಗುಂಪಿನ ಅನೇಕ ಸದಸ್ಯರು ಖೊಳ್ಳೆಂದು ನಗುವ ಇಮೋಜಿ ಹಾಕಿದರು. ಪಾಪ ಆ ಸಂದೇಶವನ್ನು ಹಂಚಿಕೊಂಡು ಹಿರಿಯರು ಏನೆಂದುಕೊಂಡರೋ ನಾಕಾಣೆ.
ಅಂದಹಾಗೆ, ನಮ್ಮ ಮದುವೆಯಾದಾಗಿನಿಂದ ಮೊನ್ನೆ ನಿವೃತ್ತಿಯ ತನಕ ಮನೆಗೆ ಬೇಕಾದ ತಿಂಗಳ ಕಿರಾಣಿ, ನಿತ್ಯದ ತರಕಾರಿ ಎಲ್ಲವನ್ನು ನನ್ನಾಕೆಯೇ ನೋಡಿಕೊಂಡಳು. ನನ್ನ ಸಹೋದ್ಯೋಗಿಗಳು ಎಷ್ಟೋಸಲ ಯಾವ ಕಿರಾಣಿ ಸಾಮಾನುಗಳು ಬಹಳ ತುಟ್ಟಿಯಾದವು ಎಂತೆಲ್ಲ ಕ್ಯಾಂಟೀನ್ ನಲ್ಲಿ ಮಾತನಾಡುವಾಗ ಆ ವಿಷಯದ ನನ್ನ ಅಜ್ಞಾನ ಪ್ರದರ್ಶನಮಾಡದೇ ಆ ಚರ್ಚೆಯಲ್ಲಿ ಭಾಗವಹಿಸದೇ ಜಾಣನಾಗಿದ್ದೆ. ಆದರೆ,ಈಗ ನಿವೃತ್ತಿಯ ನಂತರ ಅವಳ ಆ ಜವಾಬ್ದಾರಿ ಕಡಿಮೆಮಾಡಿ ಅವಳಿಗೂ ಸ್ವಲ್ಪ ಆರಾಮ ಒದಗಿಸಲೆಂದು ನಾನು ಮನೆ ಹತ್ತಿರದ ಕಿರಾಣಿ ಅಂಗಡಿಗೆ ಹೋಗಲು ಪ್ರಾರಂಭಿಸಿದೆ. ಹೀಗೆಯೇ ಮೊನ್ನೆ ಕಿರಾಣಿ ಅಂಗಡಿಗೆ ಹೋದಾಗ ಕಾಲೊನಿಯ ಎಂಬತ್ತರ ಗಡಿ ದಾಟಿದ ಹಿರಿಯ ಯಜಮಾನರು ನನ್ನನ್ನು ಮಾತಿಗೆ ಎಳೆಯುತ್ತಾ ಬಹಳ ದಿನಗಳ ನಂತರ ಸಿಕ್ಕಿರಿ, ಇನ್ನೂ ಯಂಗ್ ಕಾಣುತ್ತೀರಿ, ಕೇವಲ ತಲೆಗೂದಲು ಬೆಳ್ಳಗಾಗಿದೆ ಅಷ್ಟೇ ಎಂದು ಒಂದು ಕಾಂಪ್ಲಿಮೆಂಟ್ ನೀಡಿದರು. ನಾನು ಮುಖ ಅರಳಿಸಿ ಧನ್ಯವಾದಗಳು ಯಜಮಾನರೇ ಎಂದೆ. ಆ ಹಿರಿಯರು ಮುಂದುವರೆದು, ಏನು ಇಂದು ಕಿರಾಣಿ ಅಂಗಡಿ ಕಡೆಗೆ ಬಂದಿರಿ? ರಿಟೈರ್ಮೆಂಟ್ ಆಯಿತೇನು ಎಂದು ವಿಚಾರಿಸಿದರು. ಹೌದು ನಮ್ಮ ಕಾಲೇಜಿನಲ್ಲಿ ನಿವೃತ್ತಿಯ ವಯಸ್ಸು ೫೮, ಹಾಗಾಗಿ ಮೊನ್ನೆ ರಿಟೈರ್ಮೆಂಟ್ ಆಯಿತು ಎಂದೆ. ಅಯ್ಯೋ ನನ್ನ ಶಿವನೇs, ನಿಮ್ಮ ಕಾಲೇಜಿನವರು ಯಾವ ಜಮಾನಾದಲ್ಲಿದ್ದಾರೆ... ಕೋರ್ಟಿನಲ್ಲಿ ಅವರ ಮೇಲೊಂದು ಕೇಸು ಜಡಿಯೋಣವಾ ಎಂದು ವಿಚಾರಿಸಿದರು. ನಾನು, ರಾಯರೇ ಅದು ಬಿಡಿ, ನೀವು ಹೇಗಿದ್ದೀರೀ, ಎಲ್ಲಾ ಆರಾಮವೇ ಎಂದು ಮಾತು ಮರೆಸಲು ಪ್ರಯತ್ನಿಸಿ ಬಹಳ ತಪ್ಪು ಮಾಡಿದೆ. ಸರಿಯಾಗಿ ಒಂದು ತಾಸು, ಎಲ್ಲಿಯ ಆರಾಮು ಅನ್ನುತ್ತಾ, ತಮ್ಮ ಸಹೋದರರಲ್ಲಿ ಐವತ್ತು ವರ್ಷದಿಂದ ನಡೆದಿರುವ ಪಿತ್ರಾರ್ಜಿತ ಆಸ್ತಿ ವಿಲೇವಾರಿಯಲ್ಲಿಯ ವ್ಯಾಜ್ಯಗಳು, ಅದರ ಸಂಬಂಧ ಮೊದಲು ಕೆಳಗಿನ ಕೋರ್ಟು, ನಂತರ ಮೇಲಿನ ಕೋರ್ಟು ಕಚೇರಿಗಳ ಅಲೆದಾಟ, ಜೊತೆಗೆ ತಮ್ಮ ಹೆಂಡತಿಗೆ ತೌರು ಮನೆಯಿಂದ ಬರಬೇಕಾದ ಹೊಲದ ಪಾಲು ಕೊಡಲು ಕಿರಿಕಿರಿ ಮಾಡುತ್ತಿರುವ ಭಾವ ಮೈದುನ, ಇತ್ತ ಮನೆಯ ಬಾಡಿಗೆಯನ್ನು ಸರಿಯಾಗಿ ಪ್ರತಿ ತಿಂಗಳೂ ಕೊಡದೇ ಇರುವ ಬಾಡಿಗೆಯವರು, ಮಗನಿಗಿಂತಲೂ ಹೆಚ್ಚು ಪಗಾರ ತರುವ ಸೊಸೆಯ ಕೊಂಕು ಮಾತುಗಳು, ಮೂವತ್ತೈದಾದ ಮೊಮ್ಮಗನಿಗಾಗಿ ಇನ್ನೂ ನಡೆದಿರುವ ಕನ್ಯಾನ್ವೇಷಣೆ, ಹದಿನೈದು ದಿನಕ್ಕೊಮ್ಮೆ ರಿಪೇರಿ ಎಂದು ಕಾರನ್ನು ಗ್ಯಾರೇಜ್ ಗೆ ಬಿಡುವ ಡ್ರೈವರ್ ನ ಲಪುಟಗಿರಿ, ಇತ್ತ ಮರಿಮಗನ ನರ್ಸರಿ ಸೀಟಿಗೆ ಹಣ ಹೊಂದಿಸಲು ಆದ ತ್ರಾಸು, ತಮ್ಮ ಶ್ರೀಮತಿಯ ವಿವಿಧ ಜಡ್ಡುಗಳ ಗುಳಿಗೆ ಔಷಧದ ಖರ್ಚುವೆಚ್ಚ, ತಮಗೆ ಉಂಡ ಊಟ ಪಚನವಾಗದೇ ಇರುವುದು, ಜೊತೆಗೆ ರಾತ್ರಿ ನಿದ್ದೆ ಬಾರದೇ ಪದೇ ಪದೇ ಎಬ್ಬಿಸುವ ಮೂತ್ರದ ಗಡಿಬಿಡಿ ಮುಂತಾದ ತ್ರಾಸಗಳ ಸರಮಾಲೆಯನ್ನೇ ಬಿಚ್ಚಿಟ್ಟು ತಾವು ಆರಾಮವಿಲ್ಲವೆಂದು ವಿವರಿಸುವುದರ ಜೊತೆಗೆ ನನ್ನ ಆರಾಮವನ್ನು ವಿಚಾರಿಸಿದರು...ನಾನು ನಿಮ್ಮನ್ನು ಭೇಟಿ ಆಗೋದಕ್ಕೂ ಮುನ್ನ ಆರಾಮವಾಗಿದ್ದೆ ಎಂದು ಸ್ವಗತದಲ್ಲಿ ಹೇಳಿಕೊಂಡು ಅಲ್ಲಿಂದ ಕಾಲ್ಕಿತ್ತಲು ಪ್ರಯತ್ನಿಸಿದೆ. ಆದರೆ ಅವರು ಬಿಡದೇ, ಹೇಗೂ ರಿಟೈರ್ಮೆಂಟ್ ಆಗಿದೆ ಸಂಜೆ ಕಾಲೊನಿಯ ಗಾರ್ಡನ್ ಗೆ ಬನ್ನಿ, ನಮ್ಮ ಹಿರಿಯ ನಾಗರಿಕರ ಗುಂಪಿನ ಸದಸ್ಯರನ್ನು ಪರಿಚಯಿಸುವೆ ಎಂದು ಆಹ್ವಾನ ನೀಡಿದರು. ಅಲ್ಲಿಯೇ ಪಕ್ಕದಲ್ಲಿದ್ದ ಇನ್ನೊಬ್ಬ ಯಜಮಾನರು ಅಲ್ಲಿ ಹೋಗಿ ಏನು ಪ್ರಯೋಜನವಿಲ್ಲ ಎಲ್ಲಾ ಗೊಳ್ಳು ವಿಷಯ ಚರ್ಚೆ ಮಾಡುತ್ತಾ ಕಾಲಹರಣ ಮಾಡುತ್ತಾರೆ, ಬದಲಿಗೆ ಚಿದಂಬರ ಗುಡಿಗೆ ಬನ್ನಿರಿ, ರುದ್ರದ ಪಾಠ ಕಲಿಯಿರಿ, ಭಾಗವತ ಪುರಾಣದ ಶ್ರವಣಮಾಡಿ ಪುಣ್ಯ ಕಟ್ಟಿಕೊಳ್ಳಿ ಎಂದು ಆಮಂತ್ರಿಸಿದರು. ನನಗೆ ಅತ್ತ ದರಿ, ಇತ್ತ ಪುಲಿ ಎಂದೆನಿಸಿತು. ಅಂದಿನಿಂದ ನನ್ನ ಕಿರಾಣಿ ಅಂಗಡಿಗೆ ಹೋಗುವ ಕೆಲಸಕ್ಕೆ ತಿಲಾಂಜಲಿ ಇಟ್ಟು ಮನೆಯಲ್ಲಿ ಹಾಯಾಗಿ ಸಾಹಿತ್ಯದ ಕೃಷಿಯಲ್ಲಿ ತೊಡಗಿರುವೆ.
ಡಾ. ಜಯಂತ ಕಿತ್ತೂರ
ನಿವೃತ್ತಿಗೆ ಒಂದು ವರ್ಷ
ಪ್ರತ್ಯುತ್ತರಅಳಿಸಿSoooooper you have explained your journey in your career nicely and keep yourself busy 👌
ಪ್ರತ್ಯುತ್ತರಅಳಿಸಿV nice. You have explained your young heart but old looks due to grey hair situation v beautifully 👏👍
ಪ್ರತ್ಯುತ್ತರಅಳಿಸಿಲೇಖನ ಬಹಳ ಚೆನ್ನಾಗಿದೆ. ಸಂಜೆ ಗುಡಿಯೋ,ಪಾರ್ಕೋ ಆಯ್ಕೆ ನಿಮ್ಮದಾಗಿರಲಿ.ಪ್ರವೃತ್ತಿಳು ನಿವೃತ್ತಿಯನ್ನು ಕಾಡುವದಿಲ್ಲ.
ಪ್ರತ್ಯುತ್ತರಅಳಿಸಿDear sir, very nicely articulated article sir. Good to know your routine fun filled activities.
ಪ್ರತ್ಯುತ್ತರಅಳಿಸಿಶ್ರೀಮತಿ ಅವರ್ ಜೊತೆಗೆ ವಾಯು ವಿಹಾರಕ್ಕೆ ಹೋಗುವುದು ಒಳ್ಳೆಯದು ಎಂದು ನನ್ನ ಅಭಪ್ರಾಯ. Good to hear about after retirement experiences.
ಪ್ರತ್ಯುತ್ತರಅಳಿಸಿಲೇಖನ ಚೆನ್ನಾಗಿದೆ ಸರ್
ಪ್ರತ್ಯುತ್ತರಅಳಿಸಿಸರ್ ನಿಮ್ಮೆಲ್ಲ ಲೇಖನಗಳು ತುಂಬಾನೇ ಚೆನ್ನಾಗಿವೆ.. ಸಮಯ ತೆಗೆದು ಎಲ್ಲವನ್ನೂ ಓದುತ್ತೇನೆ. ನಿಮ್ಮೆಲ್ಲ ಅನುಭವಗಳು ನಮ್ಮಂಥವರಿಗೆ ಹೊಸ ಅನುಭವ ಗಳನ್ನು ಕೊಡುತ್ತವೆ.. ಹೀಗೇ ನಿಮ್ಮೆಲ್ಲ ಲೇಖನಗಳನ್ನು ನಮ್ಮೊಂದಿಗೆ ಶೇರ್ ಮಾಡುತ್ತ ಇರಿ. ಧನ್ಯವಾದಗಳು ಸರ್ ಶುಭ ದಿನ. ನಿಮ್ಮ ಮುಂದಿನ ಲೇಖನ ಓದಲು ಉತ್ಸುಕ ನಾಗಿದ್ದೇನೆ.
ಪ್ರತ್ಯುತ್ತರಅಳಿಸಿಅನುಭವ ಇರುವಲ್ಲಿ ಅಮೃತತ್ವ ಇರುತ್ತದೆ. ಬಹಳ ಸುಂದರವಾಗಿ ನಿಮ್ಮ ಬರವಣಿಗೆಯಲ್ಲಿ ಇರುವದು ಕಂಡು ಬರುತ್ತದೆ 🙏💐ಧನ್ಯವಾದಗಳು☺️
ಪ್ರತ್ಯುತ್ತರಅಳಿಸಿಲೇಖನ ತುಂಬ ಚೆನ್ನಾಗಿ ಮೂಡಿ ಬಂದಿದೆ. ಓದಿ ತುಂಬ ಖುಷಿಪಟ್ಟೆ. ಹೋಮಿಯೋಪತಿ ಔಷಧಿ ಮೂಲ 'ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು' ಘಟನೆ ತುಂಬ ಮಾರ್ಮಿಕ. ಮನಸ್ಸಿನಲ್ಲಿ ಉಳಿಯಿತು. ಎಲ್ಲ ಲೇಖನಗಳ ಸಂಕಲನ ಪುಸ್ತಕ ರೂಪದಲ್ಲಿ ಬರಲೇಬೇಕು. ಓದುಗರಿಗೆ ಎಲ್ಲ ಲೇಖನಗಳು ಒಂದೆಡೆ ಸಿಗುವಂತಾಗಲಿ
ಪ್ರತ್ಯುತ್ತರಅಳಿಸಿಲೇಖನ ನೋಡಿ ಸಂತೋಷವಾಯಿತು. ಲೇಖನದಲ್ಲಿಯ ಸ್ವಾರಸ್ಯಕರ ಅನುಭವಗಳನ್ನು ಓದಿದಾಗ ನೀವು ಇನ್ನೂ ಯುವಕರೆಂದೆನಿಸುತ್ತದೆ. ಬಿಳಿಕೂದಲಿನ ಬಗ್ಗೆ ಅಷ್ಟೇಕೆ ಚಿಂತಿಸುತ್ತೀರಿ ಡೈ ಹಚ್ಚಿಕೊಳ್ಳಿ..ಸುಂದರವಾಗಿ ಕಾಣುವಿರಿ.
ಪ್ರತ್ಯುತ್ತರಅಳಿಸಿನನ್ನ ಬಿಳಿ ತಲೆಯ ಬಣ್ಣಗಳು (ಭಾಗ ೧,೨,೩) ಓದಿರಿ
ಅಳಿಸಿAnother great article.. along with humor this one presents some of your experiences seriously. I am not retired yet but agree with spending more time with wife in walking, traveling, or any other activity. I believe she is the best friend we got!
ಪ್ರತ್ಯುತ್ತರಅಳಿಸಿಜಯಂತ ಬರಹ ಚೆನ್ನಾಗಿದೆ. ಕಡಿದಷ್ಟು ತುರಿಸುಕೋಳುವ ಯುವ ಸಹೋದ್ಯೋಗಿಗಳ ಪ್ರವರ್ತೀಯ ಬದಲು ವಿಷಯಕ್ಕೆ ಸಂಬಂಧಿಸಿದ ಸುದೀರ್ಘ ವಿವರಣೆ ಬಹಳ ಮಹತ್ವದಾಗಿದೆ.
ಪ್ರತ್ಯುತ್ತರಅಳಿಸಿAgain an excellent writeup Jayant ! The way you put your life experiences and share with a sprinkle of humor, thought and educate the society in some way, is commendable!! Continue your ಸಾಹಿತ್ಯ ಕೃಷಿ !!!
ಪ್ರತ್ಯುತ್ತರಅಳಿಸಿ