ಅಲ್ಲಿದೆ ನಮ್ಮನೆ...

ಈ ಭೂಮಿಯ ಮೇಲೆ ಇಂದು ಇರುವವರಾರೂ ಸ್ವರ್ಗವನ್ನು, ಅಲ್ಲಿಯ ಸುಖ, ಸಮೃದ್ಧಿ, ಸಂತೋಷ, ಸಂಭ್ರಮ, ಸೌಲಭ್ಯ ಇತ್ಯಾದಿಗಳನ್ನು ಅಥವಾ ೫೬ ಸಖಿಯರ ಸ್ವಛಂದ ಸೇವಾಸುಖವನ್ನು ಆನಂದಿಸಿ ವಾಪಸ್ ಬಂದು ವಿವರಿಸಿದವರಿಲ್ಲ. ಆದರೂ, ಸ್ವರ್ಗದ ಬದುಕಿನ ಬಗ್ಗೆ ತಮ್ಮದೇ ಆದ ಕಲ್ಪನೆಗಳನ್ನು ವಿವಿಧ ಧಾರ್ಮಿಕ ಗ್ರಂಥಗಳನ್ನು ಓದಿ ಅಥವಾ ಕೇಳಿ ಅರಿಯದವರು ತೀರಾ ವಿರಳ.  ಅಂತಹದರಲ್ಲಿ ಪುಟಾಣಿ ಏಜೆಂಟ್ 123 ಸಿನಿಮಾದಲ್ಲಿ  'ಇಲ್ಲೇ ಸ್ವರ್ಗ ಇಲ್ಲೇ ನರಕಾ ಮೇಲೇನಿಲ್ಲ ಸುಳ್ಳು...'ಎಂದು ನಮ್ಮ ರೆಬೆಲ್ ಸ್ಟಾರ್ ಅಂಬರೀಷ್ ಅವರು ಹಾಡಿನ ಮುಖಾಂತರ ಹೇಳಿರುವರು. ಅವರ ಮಾತುಗಳನ್ನು ಒಪ್ಪುವುದಾದರೆ, ಭೂಮಿಯ ಮೇಲಿನ ಸ್ವರ್ಗ ಎಂದು ನಮ್ಮಲ್ಲಿ ಬಹುತೇಕರು ಒಪ್ಪುವ ಸ್ಥಳ ಅಮೇರಿಕಾ ಎನ್ನುವುದರಲ್ಲಿ ದೂಸ್ರಾ ಮಾತಿಲ್ಲ ಅಲ್ಲವೇ?. ಮತ್ತೆ, ನಮ್ಮ ಶ್ರೀರಾಮಚಂದ್ರ 'ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ' ಎಂದು ಹೇಳಿದ್ದಾನಲ್ಲ ಎಂದರೆ, ಅಯ್ಯೋ ಬಿಡಿ ಅದು ತ್ರೇತಾಯುಗದಲ್ಲಿಯ ಮಾತು ಎಂದು ನೀವು ಮೂಗು ಮುರಿಯಬಹುದು, ಇಲ್ಲವೇ ಪ್ರಗತಿಪರ ಬುದ್ದಿ ಜೀವಿಗಳಾಗಿದ್ದರೆ ಶ್ರೀರಾಮ ಒಂದು ಕಾಲ್ಪನಿಕ ಪಾತ್ರವಷ್ಟೇ, ಅಲ್ಲದೇ ಅವನ ಮಾತಿಗೆ ಬೆಲೆ ಕೊಡುವುದು ನಮ್ಮ ಜಾತ್ಯಾತೀತ ಸಿದ್ಧಾಂತಕ್ಕೆ ವಿರುದ್ಧ ಎಂದೂ ಪ್ರತಿಪಾದಿಸಬಹುದು. ಅದು ಬಿಡಿ, ಅಂತರೀಕ್ಷದಿಂದ ಭಾರತ ಹೇಗೆ ಕಾಣಿಸುತ್ತದೆ ಎಂದು ನಾಲ್ಕು ದಶಕಗಳ ಹಿಂದೆ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಪ್ರಶ್ನೆಗೆ ಉತ್ತರಿಸಿದ ಭಾರತದ ಪ್ರಥಮ ಗಗನಯಾತ್ರಿ ರಾಕೇಶ್ ಶರ್ಮಾ 'ಸಾರೇ ಜಹಾಸೆ ಅಚ್ಛಾ ಹಿಂದೋಸತಾ ಹಮಾರಾ' ಎಂದು ಉದ್ಗರಿಸಿದ್ದನ್ನು ಮತ್ತು ಮೊನ್ನೆ ತಾನೆ ಅಂತರ್ರಾಷ್ಟ್ರೀಯ ಅಂತರಿಕ್ಷ ನಿಲ್ದಾಣ ದಿಂದ ನಮ್ಮ ಶುಭಾಂಶು ಶುಕ್ಲಾ ಅದೇ ಮಾತನ್ನು ಮತ್ತೆ ಹೇಳಿದ್ದನ್ನು ಕೇಳಿದರೂ ಅದೆಷ್ಟೋ ಜನ ಇಂದಿಗೂ ಏನಕೇನ ಪ್ರಕಾರೇಣ ಅಮೇರಿಕಾಗೆ ಹೋಗಿ ನೆಲೆಸಬೇಕು ಎಂದು ಹಪಾಪಿ ಪಡಲು ಕಾರಣ ಅದು ಭೂಮಿಯ ಮೇಲಿನ ಸ್ವರ್ಗವಲ್ಲದೇ ಮತ್ತೇನು? ಅಲ್ಲವೇ.

ಈ ಭೂಮಿಯ ಮೇಲಿನ ಸ್ವರ್ಗ ಅಮೇರಿಕಾದ ಬಗ್ಗೆ ಹೇಳುವುದಕ್ಕೂ ಮುನ್ನ ಒಂದು ಮಾತನ್ನು ಹೇಳಿಬಿಡುತ್ತೇನೆ. ಅದೇ, ನಮ್ಮ ಕಡೆ ಅದೇನೋ ಅಂತಾರಲ್ಲ 'ಹುಟ್ಟಾ ಸತ್ತಿಲ್ಲ ಕುಣಿ ಕಂಡಿಲ್ಲ' ಎಂದು, ನನ್ನದು ಅದೇ ಪಾಡು. ಅಥವಾ ಕೈಗೆಟುಕದ ದ್ರಾಕ್ಷಿ ಹುಳಿ ಎಂದ ನರಿಯ ಪಾಡು ನನ್ನದು ಎಂದೂ ನೀವನ್ನಬಹುದು. ಏನೇ ಇರಲಿ, ನಾನು ಇಂಜಿನಿಯರಿಂಗ್ ಡಿಗ್ರಿ ಪಡೆದು ನೌಕರಿ ಸೇರುವುದಕ್ಕೂ ಮುನ್ನ, ಹತ್ತು ಜನ ಒಟ್ಟಿಗೆ ಅರ್ಜಿಗಳನ್ನು ಕೊಟ್ಟರೆ ಡಿಸ್ಕೌಂಟನಲ್ಲಿ ತೆಗೆದು ಕೊಡುವುದಾಗಿ ಏಜೆಂಟ್ ಹೇಳಿದಾಗ, ನನ್ನ ಮಿತ್ರರ ಒತ್ತಾಯಕ್ಕೆ ಮಣಿದು ಹತ್ತರಲ್ಲಿ ಒಂದಾಗಿ ನಾನೂ ಒಂದು ಪಾಸ್ಪೋರ್ಟ್ ಪಡೆದೆ. ಆದರೆ, ಆ ನನ್ನ ಪಾಸ್ಪೋರ್ಟ್ ಅನ್ನು ದೂರದ ಅಮೇರಿಕಾ ಬಿಡಿ, ಪಕ್ಕದ ಶ್ರೀಲಂಕಾಕ್ಕೂ ಹೋಗಲು ಬಳಸಲಿಲ್ಲ ಅಥವಾ ಅವಕಾಶ ಒದಗಿಬರಲಿಲ್ಲ. ಪಾಪ, ಅದು ಇಂದಿಗೂ ಕಾಯಂಆಗಿ ನನ್ನ ಡಿಗ್ರೀ ಸರ್ಟಿಫಿಕೇಟಗಳ ಫೈಲಿನಲ್ಲಿಯೇ ನೆಲೆಯೂರಿದೆ. ಅದರ ಜೀವಿತಾವಧಿ ಯಾವಾಗ ಮುಗಿದಿದೆಯೋ ಗೊತ್ತಿಲ್ಲ. ಅದಕ್ಕೆ ಮತ್ತೆ ಮರು ಜೀವ ನೀಡುವ ವಿಚಾರ ನನಗಿರಲಿಲ್ಲ. ಇನ್ನು, ಮೊನ್ನೆ IIT ಮದ್ರಾಸಿನ ನಿರ್ದೇಶಕರು ತಾವು ಎಂದೂ ಪಾಸ್ಪೋರ್ಟ್ಅನ್ನು ಹೊಂದೇಇಲ್ಲ ಎಂದು ಹೇಳಿದ್ದನ್ನು ಕೇಳಿದಮೇಲಂತೂ ನನ್ನ ಹಳೆಯ ಪಾಸ್ಪೋರ್ಟ್ ಗೆ ಮರುಜೀವ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಹಾಗಿದ್ದಾಗ, ನಾನಂತೂ ಅಮೇರಿಕಾಕ್ಕೆ ಹೋಗಿ ಭೂಮಿಯ ಮೇಲಿನ ಆ ಸ್ವರ್ಗ ಸುಖವನ್ನು ಅನುಭವಿಸಿಲ್ಲವಾದರೂ ಅಲ್ಲಿ ನೆಲೆಸಿದ ಅಥವಾ ಅಲ್ಲಿಗೆ ಹೋಗಿಬಂದ ನನ್ನ ಮಿತ್ರರ, ಸಹೋದ್ಯೋಗಿಗಳ,ನನ್ನ ವಿದ್ಯಾರ್ಥಿಗಳ ಮತ್ತು ಬಂಧು ಬಾಂಧವರ ವಿವಿಧ ಅನುಭವವನ್ನು ಸವಿಸ್ತಾರ ಅವರ ಬಾಯಿಯಿಂದ ಇಲ್ಲವೆ ಇತರರು ಆಡಿಕೊಳ್ಳುವುದನ್ನು ಕೇಳಿ, ಓದಿ ತಿಳಿದು ಬಲ್ಲೆ. ಒಂದು ಮಾತಂತು ಸತ್ಯ, ಅವರಲ್ಲಿ ಎಡ-ಬಲ ಪಂಥೀಯರು, ಉತ್ತರ-ದಕ್ಷಿಣ ಭಾರತದವರು, ಹೆಂಗಸರು-ಗಂಡಸರು, ಯುವಕರು-ಹಿರಿಯರು ಎಂಬ ಯಾವ ಭೇದ ಭಾವವಿಲ್ಲದೇ ಎಲ್ಲರೂ ಹೇಳುವುದು  ಒಂದೇ ಮಾತು. ಭೂಮಿಯ ಮೇಲಿನ ಸ್ವರ್ಗವೆಂದರೆ ಅದು ಅಮೇರಿಕಾ. 

ಮೇಲಿರುವ ಸ್ವರ್ಗಕ್ಕೆ ಯಾರು ಹೋಗಬಹುದು ಎಂದು ಗುರುಗಳು ಕೇಳಿದಾಗ 'ನಾನು ಹೋದರೆ ಹೋದೇನು' ಎಂದು ಮಾರ್ಮಿಕವಾಗಿ ಉತ್ತರಿಸಿದ ಕನಕದಾಸರ ಮಾತು ಹಾಗಿರಲಿ, ಈ ಭೂಮಿಯ ಮೇಲಿನ ಸ್ವರ್ಗಕ್ಕೆ ಹೋಗಲು ಯಾರು ಅರ್ಹರು ಎಂದು ನಿರ್ಧರಿಸುವುದು ಮಾತ್ರ ಅಮೇರಿಕಾದ ವಿಸಾ ಆಫೀಸಿನ ಅಧಿಕಾರಿಗಳು. ಅವರು ಒಪ್ಪಲಿ ಇಲ್ಲವೇ ಬಿಡಲಿ, ವಿಸಾರ್ಥಿಗಳಿಗೆ ಅವರು ಕೇಳುವ ಪ್ರಶ್ನೆಗಳು ಮಾತ್ರ ನಮ್ಮ ಮಹಾಭಾರತದಲ್ಲಿ ವನವಾಸದ ಸಮಯದಲ್ಲಿ ಬಾಯಾರಿ ನೀರು ಕುಡಿಯಲು ಕೊಳದ ಹತ್ತಿರ ಹೋದ ಪಾಂಡವರಿಗೆ ಕೇಳಿದ ಯಕ್ಷಪ್ರಶ್ನೆಗಳಿಂದ ಪ್ರೇರಿತವಾದವುಗಳು ಎಂಬುದರಲ್ಲಿ ನನಗೆ ಎಳ್ಳಷ್ಟು ಅನುಮಾನವಿಲ್ಲ. 

ಇನ್ನು ,ಇಲ್ಲಿದ್ದ ತಮ್ಮವರೆಲ್ಲರನ್ನು ಬಿಟ್ಟು ಗಂಟುಮೂಟೆ ಕಟ್ಟಿಕೊಂಡು ಎರಡೆರಡು ವಿಮಾನಗಳನ್ನು ಬದಲಿಸಿ, ಗಗನ ಸಖಿಯರು ನೀಡಿದ ಅದಾವುದೋ ಪೊಟ್ಟಣದ ಆಹಾರವನ್ನು ತಿಂದು, ದಿನಗಟ್ಟಲೇ ಪ್ರಾಥರ್ವಿಧಿಗಳನ್ನು ಸಮರ್ಪಕವಾಗಿ ಪೂರೈಸದೇ ನರಕಯಾತನೆಯ ಪ್ರವಾಸಮಾಡಿದ ನಂತರ ಆ ಭೂಮಿಯ ಮೇಲಿನ ಸ್ವರ್ಗ ಅಮೇರಿಕಾಕ್ಕೆ ಬಂದಿಳಿಯಬೇಕಂತೆ. ಹೌದು, ಧರ್ಮರಾಜ ಯುಧಿಷ್ಠಿರನೇ ಸ್ವರ್ಗ ಸೇರುವುದಕ್ಕೆ ಮುನ್ನ ತನ್ನ ಕರ್ಮ ಫಲವಾಗಿ ಮೊದಲು ನರಕದ ದರ್ಶನ ಮಾಡಿಯೇ ಸಾಗಿರುವಾಗ ಅನಂತ ಅಪರಾಧ ಮಾಡಿದ ನಾವು ಅನುಭವಿಸುವ ಆ ವಿಮಾನ ಪ್ರವಾಸದ ಅಷ್ಟು ನರಕಯಾತನೆ ಯಾವ ಲೆಕ್ಕ ಎಂದು ಸಮಾಧಾನ ಪಡಬಹುದು. ಇನ್ನು ಭೂಮಿಯ ಮೇಲಿನ ಸ್ವರ್ಗಕ್ಕೆ ಬಂದಿಳಿದಾದ ಮೇಲೆ, ಯಮರಾಜನ ಲೋಕದ ಬಾಗಿಲಲ್ಲಿ ನಚಿಕೇತ ದಿನಗಟ್ಟಲೆ ಕಾದಂತೆ ಈ ಭೂಲೋಕದ ಸ್ವರ್ಗದ ಬಾಗಿಲು ಕಾಯುವ ಇಮಿಗ್ರೇಷನ್ ಅಧಿಕಾರಿಗಳು ನಮ್ಮ ಸ್ವರ್ಗಾರ್ಥಿಗಳನ್ನು ತಾಸುಗಟ್ಟಲೇ ಕಾಯಿಸುತ್ತಾರಂತೆ. ನಂತರ ನೀವು ಹೊತ್ತು ತಂದ ಗಂಟುಮೂಟೆ ಬಿಚ್ಚಿ ವಸ್ತುಗಳ ಪರಿಶೀಲನೆ ಎಂದು ಪೀಡಿಸುವ ಪರಿ ನಮ್ಮ ಹಂಪಿಯ ಮಂಗಗಳು ತಿಂಡಿ ತಿನಿಸುಗಳಿಗಾಗಿ ಲಪಟಾಯಿಸಿ ನಮ್ಮ ಬಗಲಚೀಲದ ವಸ್ತುಗಳನ್ನು ಚೆಲ್ಲಾಪಿಲ್ಲಿ ಹರಡಿದ ನೆನಪು ಮಾಡುತ್ತದೆಯಂತೆ. ಅದಲ್ಲದೇ, ಆ ಇಮಿಗ್ರೇಷನ್ ಅಧಿಕಾರಿಗಳು ಕೆಲವು ಸ್ವರ್ಗಾರ್ಥಿಗಳಿಗೆ ವೈಯಕ್ತಿಕ ಪರಿಶೀಲನೆಗೆ ಒಡ್ಡುವ ಪರಿ ಆ ಮಹಾಭಾರತದ ಯುದ್ಧಕ್ಕೂ ಮೊದಲು ದುರ್ಯೋಧನ ತನ್ನ ತಾಯಿ ಗಾಂಧಾರಿಯಿಂದ ವಜ್ರಕಾಯದ ವರ ಪಡೆಯಲು ಹೋದ ಸನ್ನಿವೇಶದ ನೆನಪು ತರಿಸುತ್ತದೆ.

ಇಷ್ಟೆಲ್ಲಾ ಪ್ರಹಸನಗಳ ನಂತರ ಆ ಭೂಮಿಯ ಮೇಲಿನ ಸ್ವರ್ಗಕ್ಕೆ ಬಂದಿಳಿಯುವವರ ಸಂಖ್ಯೆಯಲ್ಲಿ ಸಿಂಹಪಾಲು ಉನ್ನತ ಶಿಕ್ಷಣದ ವಿದ್ಯಾರ್ಥಿಗಳದ್ದಂತೆ. ಅವರಿಗೆ ಮೊದಲಿಗೆ ಆಕರ್ಷಕವೆನಿಸುವುದು ಆರಕ್ಷಣೆ ಇಲ್ಲದ ವಿಶ್ವವಿದ್ಯಾಲಯ ಪ್ರವೇಶ ಪ್ರಕ್ರಿಯೆ ಮತ್ತು ಅಲ್ಲಿಯ ವಿಶ್ವವಿದ್ಯಾಲಯದ ಭವ್ಯ ಕಟ್ಟಡಗಳು, ಹಚ್ಚು ಹಸಿರು ಪರಿಸರ,ಸ್ವಚ್ಛ ಹಾಗೂ ಗುಂಡಿಗಳಿಲ್ಲದ ರಸ್ತೆಗಳು, ಶುದ್ಧ ಗಾಳಿ, ದೊಡ್ಡ ದೊಡ್ಡ ಕಾರುಗಳು ಹಾಗೂ ಸ್ವತಂತ್ರ ಸ್ವಚ್ಛಂದ ಜೀವನ ಶೈಲಿ ಇತ್ಯಾದಿ. ನಂತರ, ನಾಲ್ಕಾರು ದಿನಗಳಲ್ಲಿ ನಿಧಾನವಾಗಿ ತಿಳಿಯುವುದೇನೆಂದರೆ ತಮ್ಮ ಮನೆಯ ಎಲ್ಲಾ ಕೆಲಸಗಳನ್ನು ಅಂದರೆ ಕಸಗುಡಿಸುವದು, ಪಾತ್ರೆ ಪಗಡೆ ತೊಳೆಯುವುದು, ಬಟ್ಟೆ ಒಗೆಯುವುದು, ತಾವೇ ಮಾಡಿದ ಅಡಿಗೆಯ ಊಟ ಮಾಡಿ ಮಾಡಿದ್ದುಣ್ಣೋ ಮಹರಾಯನ ಅನಿವಾರ್ಯತೆ. ನಮ್ಮೂರಲ್ಲಿ ಭವ್ಯ ಬಂಗಲೆ, ಕಾರು, ಆಳು ಕಾಳುಗಳಿದ್ದು ಎಂದೂ ಮನೆಯ ಯಾವ ಕೆಲಸ ಮಾಡಲು ಅರಿಯದ ನಮ್ಮ ಆಪ್ತೇಷ್ಟರ ಮಗನೊಬ್ಬ ಉನ್ನತ ಶಿಕ್ಷಣಕ್ಕೆ ಅಮೆರಿಕಕ್ಕೆ ಹೋಗಿ ಒಂದು ವರ್ಷದ ನಂತರ ವಾರ್ಷಿಕ ರಜೆಗೆಂದು ಮರಳಿದ್ದ. ನಾನು ಕುತೂಹಲದಿಂದ ಅಲ್ಲಿಯ ಉನ್ನತ ಶಿಕ್ಷಣ ವ್ಯವಸ್ಥೆಯ ಬಗ್ಗೆ ವಿಚಾರಿಸಿದಾಗ ಅವನು ಮೊದಲು ಹೇಳಿದ್ದೆಂದರೆ ತಾನು ಅಡಿಗೆ ಮಾಡಲು ಕಲಿತದ್ದು ಮತ್ತು ಪಾತ್ರೆ ತೊಳೆಯಲು ತೊಡಗಿದ್ದರ ಬಗ್ಗೆ. ನಾನು ಈ ವಿಷಯವನ್ನು ನನಗೆ ಏಕೆ ಹೇಳುತ್ತಿರುವಿ ಎಂದಿದ್ದಕ್ಕೆ ಆ ಹುಡುಗ ಹೇಳಿದ, ಅಂಕಲ್ ಅಮೇರಿಕಾದಿಂದ ಬಂದಾಗಿನಿಂದ ಎಲ್ಲರೂ ಕುತೂಹಲದಿಂದ ನನಗೆ ಮೊದಲು ಕೇಳುವುದು ಇದರಬಗ್ಗೆಯೇ ಎಂದೆನಬೇಕೇ. ನಿಜ, ಭಾರತದಲ್ಲಿ ಪಾಲಕರು ತಮಗಿರುವ ಒಬ್ಬಿಬ್ಬ ಮಕ್ಕಳನ್ನು ರಾಜಕುಮಾರರಂತೆ ಮುದ್ದು ಮಾಡಿ ಬೆಳೆಸುವುದು ಮತ್ತು ಮಕ್ಕಳ ಎಲ್ಲ ಬೇಕುಬೇಡಗಳನ್ನು ಕೂಡಲೇ ಪೂರೈಸುವುದು ಸಾಮಾನ್ಯ. ಇದರಿಂದಾಗಿ ತಮಗರಿವಿಲ್ಲದೇ ಆ ಮಕ್ಕಳು ವಿವಿಧ ಮನೆಗೆಲಸಗಳ ಜ್ಞಾನವಿಲ್ಲದೇ ಪರಾವಲಂಬಿಗಳಾಗಿ ಬೆಳೆಯುವದು. ಝೊಮ್ಯಾಟೊ, ಸ್ವಿಗ್ಗಿ, ಬ್ಲಿಂಕಿಟ್ ಗಳ ಜಮಾನಾದ ಭಾರತದ ಮಕ್ಕಳು ಊಟ, ತಿಂಡಿ ತಿನಿಸುಗಳು ಯಾವಾಗ ಬೇಕೆಂದಾಗ ಕ್ಷಣಾರ್ಧದಲ್ಲಿ ಆರ್ಡರ್ ಮಾಡಿ ತಿಂದು ಬೆಳೆದಿರುವುದು ಸಹಜ. ಅಪ್ಪನ ಹಣವನ್ನು ಬೇಕೆಂದಾಗ ದಿನದ ೨೪ ತಾಸೂ UPI ಮುಖಾಂತರ ಪೂರೈಸಿಕೊಂಡು ಹಣದ ಬೆಲೆಯನ್ನು ಅರಿತೇ ಇಲ್ಲ ಎನ್ನಬಹುದು. ಈ ತರಹದ ಯಾವ ಸೌಲಭ್ಯಗಳೂ ಇಲ್ಲದ ಆ ಭುಸ್ವರ್ಗದ ದುಬಾರೀ ಖರ್ಚು ವೆಚ್ಚಗಳನ್ನು ನಿಭಾಯಿಸಲು ಅನಿವಾರ್ಯವಾಗಿ ಈ ಮಕ್ಕಳು ಪೆಟ್ರೋಲ್ ಬಂಕ್ ಇಲ್ಲವೆ ರೆಸ್ಟೋರೆಂಟ್ ಮುಂತಾದವುಗಳಲ್ಲಿ ಪಾರ್ಟೈಮ್ ಕೆಲಸ ಮಾಡಬೇಕಾಗಿ ಬರಬಹುದು. ಇವುಗಳನ್ನು ಸ್ವರ್ಗ ಸುಖದ ಆರಂಭಿಕ ಹಂತಗಳೆಂದು ಅಥವಾ ಆತ್ಮ ಗೌರವದ ಸಂಕೇತವೆಂದು ಅನ್ನುಕೊಳ್ಳುವ ಅನಿವಾರ್ಯತೆಯೋ ಗೊತ್ತಿಲ್ಲ. ಅವೆಲ್ಲ ತಮ್ಮವರಾರೂ ತಮ್ಮನ್ನು ನೋಡದ ದೂರದ ಬೇರೆ ದೇಶದಲ್ಲಿಯ ಸಂಗತಿಗಳು ಎಂಬುದೊಂದು ಆ ಸ್ವರ್ಗಾರ್ಥಿಗಳಿಗಿರುವ ಸಮಾಧಾನದ ಸಂಗತಿ. ಇನ್ನು, ಅಲ್ಲಿನ ವಿಶ್ವವಿದ್ಯಾಲಯದ ಪ್ರೊಫೆಸರಗಳು ದಿನ ಬೆಳಗಾದರೆ ಕೊಡುವ ಮಣಗಟ್ಟಲೆ ಅಸೈನ್ಮೆಂಟಗಳು, ಸರ್ಪ್ರೈಸ್ ಟೆಸ್ಟು, ಪ್ರಾಜೆಕ್ಟಗಳು ಮತ್ತು ತಡವಾಗಿ ಅವನ್ನು ಒಪ್ಪಿಸಿದಾಗ ನಿರ್ದಾಕ್ಷಿಣ್ಯವಾಗಿ ಅತೀ ಕಡಿಮೆ ಅಂಕ ನೀಡುವ ಪರಿ ಮತ್ತು ಕ್ಲಾಸಿನಲ್ಲಿನ ಕೆಂಪು ಮೊಗದವರ ಜನಾಂಗೀಯ ಭೇದ ಮತ್ತು ಅಂತರ್ರಾಷ್ಟ್ರೀಯ ವಿದ್ಯಾರ್ಥಿಗಳ ತೀವ್ರ ಸ್ಪರ್ಧಾತ್ಮಕ ಮನೋಭಾವ ಇತ್ಯಾದಿಗಳನ್ನು ಅನುಭವಿಸಿದಾಗ ಭಾರತದಲ್ಲಿನ ತಮ್ಮ ಕಾಲೇಜು ವಿದ್ಯಾರ್ಥಿ ಜೀವನವೇ ಸ್ವರ್ಗಸಮಾನವಾಗಿತ್ತು ಎಂದೆನಿಸಿದರೆ ಆಶ್ಚರ್ಯವೇನಿಲ್ಲ,ಇರಲಿ.

ಈ ಭೂಮಿಯ ಮೇಲಿನ ಸ್ವರ್ಗಕ್ಕೆ ಬಂದಿಳಿಯುವವರು ಕೈ ತುಂಬಾ ಡಾಲರ್ ಗಳಿಸಲು ಅರಸಿ ಬಂದ H1B ವಿಸಾಧಾರಕ ಹೈಟೆಕ್ ಕೂಲಿಗಳಾಗಿದ್ದರೆ, ಅವರ ಪರಿಸ್ಥಿತಿ ಒಂಥರಾ 'ಉಪ್ಪರ್ ಶೆರವಾನಿ ಅಂದರ್ ಪರೇಶಾನಿ' ತರಹದ್ದು. ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉನ್ನತ ಸ್ಥಾನ, ಕೈ ತುಂಬಾ ಡಾಲರದಲ್ಲಿನ ಸಂಬಳ ಬರುವುದೇನೋ ನಿಜ ಆದರೆ, ಭಾರತದ ಸಮಾಜವಾದಿ ಜಾತ್ಯಾತೀತ ಪರಿಸರ ಮತ್ತು ಸತ್ಯಮೇವ ಜಯತೆ ಎಂಬ ಸನಾತನ ನಂಬಿಕೆಯಲ್ಲಿ ಬೆಳೆದವರು ಕೂಡಲೇ ಏನಕೇನ ಪ್ರಕಾರೇಣ ಹಣ ಗಳಿಸುವುದೊಂದೇ ಜೀವನದ ಉದ್ದೇಶ ಎಂಬ ಮನೋಧರ್ಮದ ಮುಕ್ತ ಆರ್ಥಿಕತೆಯ ಸಮಾಜದ ಸಹೋದ್ಯೋಗಿಗಳು ಒಡ್ಡುವ ಪೈಪೋಟಿಗೆ ಹೊಂದಿಕೊಳ್ಳಲು ಮೊದಲು ಕಷ್ಟವಾಗಬಹುದು. ಈ ನಡುವೆ, ವಯಸ್ಸಾದ ತಂದೆತಾಯಿ, ಹೆಂಡತಿ ಮಕ್ಕಳಿಂದ ದೂರವಿರುವ ಅನಿವಾರ್ಯತೆ ಒಂದೆಡೆಯಾದರೆ, ಹೆಂಡತಿ ಮಕ್ಕಳನ್ನು ಅಲ್ಲಿಗೆ ಕರಿಸಿಕೊಂಡರೆ ಆಗಬಹುದಾದ ಅನೇಕ ಖರ್ಚುವೆಚ್ಚಗಳಿಂದಾಗಿ ಕಷ್ಟಪಟ್ಟು ಡಾಲರನಲ್ಲಿ ಗಳಿಸಿದ-ಉಳಿಸಿದ ಹಣ ಕರಗುವ ದುವಿಧಾ ಮತ್ತೊಂದೆಡೆ. ಜೊತೆಗೆ ಮಕ್ಕಳು ಅಲ್ಲಿಯ ಸ್ವಚ್ಛಂದ ಜೀವನಕ್ಕೆ ಹೊಂದಿಕೊಂಡು ಬೆಳೆದು ನಂತರ ತಿರುಗಿ ಸ್ವದೇಶಕ್ಕೆ ವಾಪಸ್ಸಾಗಲು ಒಪ್ಪದಿದ್ದರೆ ಅಥವಾ ವಾಪಸ್ಸಾದ ಬಳಿಕ ಇಲ್ಲಿಯ ಜೀವನ ಶೈಲಿಗೆ ಹೊಂದುಕೊಳ್ಳಲು ಬಳಲಿದರೆ ಎಂಬ ಅವ್ಯಕ್ತ ಭೀತಿ ಬೇರೆ. ಅದಲ್ಲದೇ, ಯಾವಾಗಲೂ ಕಾಡುವ ವಿಸಾ ಅವಧಿಯ ವಿಸ್ತರಣೆಯ ಅನಿಶ್ಚಿತತೆ, ಇಲ್ಲವೆ ಗ್ರೀನ್ ಕಾರ್ಡ್ ಪಡೆಯುವಲ್ಲಿನ ಸಂಭಾವ್ಯ ವಿಳಂಬಗಳು ಮಧ್ಯವಯಸ್ಕ ವ್ಯಕ್ತಿಯ ಮನಸ್ಸನ್ನು ಆ ಭೂಮಿಯ ಮೇಲಿನ ಸ್ವರ್ಗದಲ್ಲೂ ಒಳಗೊಳಗೇ ಕೊರೆಯದೇ ಬಿಡದು.

ಈ ನಡುವೆ, ವಾನಪ್ರಸ್ಥದ ತಯಾರಿಯಲ್ಲಿರುವ ಹಿರಿಯ ನಾಗರಿಕರು ತಮ್ಮ ಮಗಳು ಅಥವಾ ಸೊಸೆಯ ಬಾಣಂತನ ಮಾಡಲು,ಇಲ್ಲವೆ ಮಕ್ಕಳು ಮೊಮ್ಮಕ್ಕಳನ್ನು ಕಂಡು ಕೆಲ ತಿಂಗಳುಗಳ ಭೂಸ್ವರ್ಗದ ಪರಿಭ್ರಮಣಕ್ಕೆಂದು ಬರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಅವರ ಈ ಭೂಲೋಕದ ಸ್ವರ್ಗದ ಅನುಭವಗಳನ್ನು ವಿವರಿಸಲು ಪ್ರತ್ಯೇಕವಾಗಿಯೇ ಇನ್ನೊಮ್ಮೆ ಬರೆಯುವ ಪ್ರಯತ್ನಮಾಡೋಣ.

ಈ ಮಧ್ಯೆ ಅದೇಕೋ ಇತ್ತೀಚಿಗೆ ನಾಲ್ಕಾರು ತಿಂಗಳುಗಳಲ್ಲಿ ಭುಲೋಕದ ಸ್ವರ್ಗದ ಇಂದಿನ ಅಧಿಪತಿ, ಇಂದ್ರ ಅಂದರೆ, ಅಮೇರಿಕಾದ ಈಗಿನ ಅಧ್ಯಕ್ಷ ಟ್ರಂಪ ಮಹಾಶಯ ಮತ್ತು ಅವನ ಜನಾಂಗೀಯ ಮಾಗಾ (MAGA- Make America Great Again) ಟೋಳಿ ಪ್ರಾರಂಭಿಸಿದ ಮಾಟ, ಇಲ್ಲದ ಕಾಟ-ರಂಪಾಟ ಮತ್ತು ದಿನಕ್ಕೊಂದರಂತೆ ಹೊರಡಿಸುವ ಆ ಇಂದ್ರನ ಫರ್ಮಾನುಗಳಿಂದಾಗಿ ಅಮೇರಿಕಾದಲ್ಲಿರುವ ಭಾರತೀಯರಿಗೆ ಈ ಭೂಮಿಯ ಮೇಲಿನ ಸ್ವರ್ಗದಲ್ಲಿ ಇರುವುದೋ ಅಥವಾ ಮರಳಿ ತಾಯಿನಾಡು ಭಾರತಕ್ಕೆ ಬರುವುದೋ ಎಂಬ ಯಕ್ಷ ಪ್ರಶ್ನೆ ಕಾಡುತ್ತಿದೆಯಂತೆ. ಅಷ್ಟೆ ಅಲ್ಲ, ಜೊತೆಗೆ ಪುರಂದರ ದಾಸರ ಪದವೊಂದು ಮತ್ತೆ ಮತ್ತೆ ನೆನಪಾಗುತ್ತಿದೆಯಂತೆ. ಅದೇ, 'ಅಲ್ಲಿದೆ ನಮ್ಮನೆ ಇಲ್ಲಿರುವುದು ಸುಮ್ಮನೆ...' ಎಂಬುದು. ಅದೇರೀತಿ,ಇಲ್ಲೇ ಹುಟ್ಟಿ ಬೆಳೆದು ದೇಶದ ಎಲ್ಲ ನಾಗರಿಕ ಸೌಕರ್ಯ ಸೌಲಭ್ಯವನ್ನು ಭರ್ತಿ ಉಪಯೋಗಿಸಿಕೊಳ್ಳುತ್ತಾ ಇಲ್ಲಿದ್ದು ನಮ್ಮ ಪಕ್ಕಕ್ಕೆ ಇರುವ ನರಕದ ಅಂಧ ಮೋಹ ಹೊಂದಿದ ಕೆಲವು ಜನರೂ ಹಾಡುವುದು ಇದೇ ದಾಸರ ಪದ 'ಅಲ್ಲಿದೆ ನಮ್ಮನೆ ಇಲ್ಲಿರುವುದು ಸುಮ್ಮನೆ...'.


ಡಾ. ಜಯಂತ ಕಿತ್ತೂರ 

ಕಾಮೆಂಟ್‌ಗಳು

  1. Well studied article on contemporary topic .
    Congratulations .Thanks for sharing .
    Best wishes .

    ಪ್ರತ್ಯುತ್ತರಅಳಿಸಿ
  2. ತಮ್ಮ ಅದ್ಬುತ ಹೋಲಿಕೆ ಬರಹ ಓದಿ ಪ್ರಸ್ತುತ ನಡೆದಿರುವ ಸನ್ನಿವೇಶದ ಮತ್ತೊಮ್ಮೆ ಮೆಲಕು ಹಾಕಿದಂತೆ ಆಯ್ತು. ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  3. ಲೇಖನದಲ್ಲಿ ಹೇಳಿರುವ ಪ್ರತಿ ಅಂಶವು ನೈಜತೆಯನ್ನು ಪ್ರತಿಬಿಂಬಿಸಿವೆ.

    ಪ್ರತ್ಯುತ್ತರಅಳಿಸಿ
  4. ಸರ್ ಭೂಲೋಕದಲ್ಲಿ ಸ್ವರ್ಗದ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರಿ.
    ಅಮೇರಿಕಾದ ವ್ಯಾಮೋಹದ ಬಗ್ಗೆ ಮಹಾಭಾರತ ಮತ್ತು ರಾಮಾಯಣ ದಿನಗಳಲ್ಲಿಯ ಹೋಲಿಕೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ.ಈ ಲೇಖನವನ್ನು ಮೇನ್ ಸ್ಟ್ರೀಮ್ ಮಾದ್ಯಮಕ್ಕೆ ಕಳಿಸಿದರೆ ಇನ್ನೂ ಹೆಚ್ಚಿನ ಜನರಿಗೆ ತಲುಪಿಸಬಹುದು.
    ಧನ್ಯವಾದಗಳು ಸರ್ ಇನ್ನೂ ಹೆಚ್ಚಿನ ಬರಹಗಳು ಬರಲಿ💐💐👌👌👏👏🙏🙏

    ಪ್ರತ್ಯುತ್ತರಅಳಿಸಿ
  5. Some people may see this but some see a glass full. They have adapted well and accepted US as their country.

    ಪ್ರತ್ಯುತ್ತರಅಳಿಸಿ
  6. Wonderful correlation to different perspective's, point of reintrospection in one’s life at every moment

    ಪ್ರತ್ಯುತ್ತರಅಳಿಸಿ
  7. ಸರ್ ಈಭೂಲೋಕದ ಸ್ವರ್ಗ ಸುಖವನ್ನು(ಅನಿವರ್ಯತೆಯನ್ನು)ಅನುಭವಿಸಿಯೂ ಮತ್ತೆ ಮತ್ತೆ ದೀಪದಹುಳ ಸುತ್ತಿ ಸುತ್ತಿ ಸಾಯುವಂತೆ ಬಸವಣ್ಣನ ಮೂಗಿನಲ್ಲ ಬ

    ಪ್ರತ್ಯುತ್ತರಅಳಿಸಿ
  8. Awesome article, well written. Since I have experienced both worlds, I can say Sara jahan se achha Hindustan hamara , minus Reservation

    ಪ್ರತ್ಯುತ್ತರಅಳಿಸಿ
  9. Great article! With out visiting USA you have captured most of the things as they happen..awesome! After spending last 25 years in USA I believe you can create Swarga wherever u are. Both countries have their advantages and disadvantages. I remember Sarvajnana Vachana ‘Bechchana Maneyaagi Vechchakke Honnagi…Swargakke Kichchu Hachchchenda Sarvajna’
    So, Swarga is not a physical place.. we have to make the place Swarga wherever we are.
    Keep writing ✍️

    ಪ್ರತ್ಯುತ್ತರಅಳಿಸಿ
  10. Adbhut satya ಕಥೆ ,people are still very crazy to reach America,more than that parents are very eager to send their children to America to get Mukti as Parents feel very proud their children are staying there.

    ಪ್ರತ್ಯುತ್ತರಅಳಿಸಿ
  11. ಜಯಂತ ಬರಹ ಬಹಳ ಅದ್ಭುತವಾಗಿದೆ. ಸ್ವರ್ಗದ ವರ್ಣನೆ ತುಂಬಾ ಸೊಗಸಾಗಿದೆ. ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅಮೇರಿಕಾಕೆ ತೆರಳುವ ನಮ್ಮ ವಿದ್ಯಾರ್ಥಿಗಳು ಅನುಭವಿಸುವ ಪಾಡು ಅದರಿಂದ ಹೊರ ಬರಲು ಮಾಡುವ ಪಾರ್ಟ ಟೈಮ ಉದ್ಯೋಗ ಗಳ ವಿವರಣೆ ತುಂಬಾ ಚೆನ್ನಾಗಿ ಮೂಡಿದೆ.

    ಪ್ರತ್ಯುತ್ತರಅಳಿಸಿ
  12. ಸಮೀರ ರಾಮಚಂದ್ರ ಪಾಂಡುರಂಗಿಅಕ್ಟೋಬರ್ 8, 2025 ರಂದು 11:36 AM ಸಮಯಕ್ಕೆ

    ಓದಿದೆ..... ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ... ಹಾಗಾದರೆ ಬರೆದುಕೊಟ್ಟು ಬಿಡಿ ನನ್ನ ಹೆಸರಿಗೆ ನಿಮ್ಮನೆ... ಎಂದು ನಾನು ಅನ್ನಬಹುದೇ.... ಲೇಖನವೇನೋ ವಿಷಯಗಳನ್ನು ಹೇಳುತ್ತದೆ...‌ ಆದರೆ ಲೇಖಕರು ಒಮ್ಮೆ ಹಿಂತಿರುಗಿ ತಮ್ಮ ಕುಟುಂಬಸ್ಥರಿಗೆ ವಿಶೇಷವಾಗಿ ತಮ್ಮ ಮಕ್ಕಳಿಗೆ ಇದನ್ನು ಓದಿ ಹೇಳಿ ಬರುವ ಪ್ರತಿಕ್ರಿಯೆ ನೋಡಿಕೊಂಡು, ನಂತರ ನಮ್ಮ ಕಡೆ ತಿರುಗಿ ಹೇಳಿದರೆ ಉತ್ತಮ ಎಂದು ನಮ್ಮ ಸ್ನೇಹಿತರೆಲ್ಲರ ಅಭಿಪ್ರಾಯ. ಆದರೆ ಆನೋ ಭದ್ರ ಕೃತವೋಸಂತು ವಿಶ್ವತಃ ಎನ್ನುವ ಹಾಗೆ ಒಳ್ಳೆಯ ವಿಚಾರ ಕೆಲಸ ಮಾತು ಎಂದು ಎಲ್ಲಿಂದಲೇ ಬಂದರೂ ಸ್ವೀಕಾರ ಎಂದು ನನ್ನ ಸ್ವಂತ ಅಭಿಪ್ರಾಯ. ನ ಮೇ ರೋಚತು ಜಯಂತ ಮಾಮಾ. ಅಮೇರಿಕಾಗೆ ಅಮರಿಕೊಳ್ಳುವುದು ಬೇಡ

    ಪ್ರತ್ಯುತ್ತರಅಳಿಸಿ
  13. Sir.
    It’s a very well-written article — every point you’ve mentioned is absolutely true. I could relate to each and every line and found myself smiling while reading it.
    Hats off to you, Sir, for so beautifully capturing every aspect with such clarity and insight! 👏

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ದಿಖಾವೇಪೆ ಮತ್ ಜಾವೋ ಅಕಲ್ ಲಗಾವೋ...

ಸತ್ತ ಗುರು !!!

ನನ್ನ ಇಂಜಿನಿಯರಿಂಗ್ ಬ್ರ್ಯಾಂಚ...