ಗಳಗನಾಥರು...ಕನ್ನಡ ಕಾದಂಬರಿಯ ಯುಗಪುರುಷ


ಇಪ್ಪತ್ತೊಂದನೆಯ ಶತಮಾನದ ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಡಿಜಿಟಲ್ ಮತ್ತು ಇತರ ತಂತ್ರಜ್ಞಾನಗಳ ಅವಿಷ್ಕಾರ ಹಾಗು ನಾವೀನ್ಯತೆಯ ತೀವ್ರಗತಿಯ ಸದ್ಬಳಕೆಯ ಇಂದಿನ ದಿನಗಳಲ್ಲಿ ಒಬ್ಬ ವ್ಯಕ್ತಿ ಏಕಕಾಲಕ್ಕೆ ಕನ್ನಡದಲ್ಲಿ ಕಥೆ-ಕಾದಂಬರಿಗಳು, ಪ್ರಬಂಧಗಳು, ಪೌರಾಣಿಕ ಗ್ರಂಥಗಳು, ಸತ್ಪುರುಷರ ಜೀವನ ಚರಿತ್ರೆಗಳು ಇತ್ಯಾದಿಗಳ ಲೇಖನ ಮತ್ತು ಮಾಸಪತ್ರಿಕೆಯ ಸಂಪಾದಕತ್ವ, ಮುದ್ರಣ ಮತ್ತು ಪ್ರಕಾಶನವಲ್ಲದೇ ಆ ಪುಸ್ತಕಗಳ ಮಾರಾಟದಂತಹ ಕನ್ನಡದ ತ್ರಿವಿಧ ಸೇವೆಯನ್ನು ಸ್ವಾರ್ಥರಹಿತವಾಗಿ ಮಾಡುತ್ತಿದ್ದರೆ ದಿನ ಬೆಳಗಾಗುವುದರಲ್ಲಿ ಸರ್ಕಾರ, ಮಠ ಮಾನ್ಯಗಳು, ವಿವಿಧ ಸಾಂಸ್ಕೃತಿಕ ಸಂಘ ಸಂಸ್ಥೆಗಳು, ಸುದ್ದಿ ಮಾಧ್ಯಮಗಳು ಮತ್ತು ಡಿಜಿಟಲ್ ಸಾಮಾಜಿಕ ಮಾಧ್ಯಮಗಳಲ್ಲಿ ಸಂದುವ ಪ್ರಚಾರ, ಪ್ರಶಸ್ತಿಗಳು, ಮಾನ್ಯತೆ ಮತ್ತು ಹಣ ಸಂಪಾದನೆ ಅಷ್ಟಿಷ್ಟಲ್ಲ. ಆದರೆ, ಈ ತರಹದ ಯಾವುದೇ ಸಾಧನಗಳು, ಸವಲತ್ತು ಮತ್ತು ಸಹಕಾರ ಪ್ರೋತ್ಸಾಹಗಳಿಲ್ಲದೇ, ಕನ್ನಡ ನಾಡು ನುಡಿಗಳಿಗೆ ಹೇಳಿಕೊಳ್ಳುವ ಯಾವ ಮಾನ್ಯತೆ, ರಾಜಾಶ್ರಯಗಳಿಲ್ಲದ, ಪೇಶ್ವೆಗಳ ಕಾಲದ ಮರಾಠಿ ಭಾಷೆಯ ಪ್ರಭಾವ ಬ್ರಿಟಿಷರ ಕಾಲದಲ್ಲೂ ಮುಂದುವರೆದ ಹತ್ತೊಂಬತ್ತನೇಯ ಶತಮಾನದ ಕೊನೆಯ ದಶಕ ಮತ್ತು ಇಪ್ಪತ್ತನೆಯ ಶತಮಾನದ ಪ್ರಾರಂಭದ ಎರಡು ದಶಕಗಳ ಕಾಲಘಟ್ಟದಲ್ಲಿ ಉತ್ತರ ಕರ್ನಾಟಕದ ಹಳ್ಳಿಗಾಡಿನಲ್ಲಿ ಕೇವಲ ಮುಲ್ಕಿ ಶಿಕ್ಷಣ ಹೊಂದಿದ ಶಾಲಾ ಶಿಕ್ಷಕನೊಬ್ಬ ಕನ್ನಡ ಸಾರಸ್ವತ ಲೋಕಕ್ಕೆ ಮಾಡಿದ ತಳಮಟ್ಟದ ಸೇವೆ, ಸಾಧನೆ ಸಮಸ್ತ ಕನ್ನಡಿಗರು ನಿಬ್ಬೆರಗಾಗುವಂತೆ ಮಾಡಿದವುಗಳು ಅಥವಾ ನಂಬಲಸಾಧ್ಯವಾದುದು ಎಂದರೆ ಉತ್ಪ್ರೇಕ್ಷೆಯಾಗಲಿಕ್ಕಿಲ್ಲ. ಹೌದು, ಈ ಸಾಧನೆಯನ್ನು ಮಾಡಿದವರು ಮತ್ತಾರೂ ಅಲ್ಲ, ಕನ್ನಡಿಗರ ಪ್ರಾತಃಸ್ಮರಣೀಯರು ಮತ್ತು ಕನ್ನಡ ಕಾದಂಬರಿ ಪಿತಾಮಹ, 'ಗಳಗನಾಥರು' ಎಂದು ಹೆಸರುವಾಸಿಯಾದ ಶ್ರೀ ವೆಂಕಟೇಶ ತಿರಕೊ (ತ್ರಿವಿಕ್ರಮ) ಕುಲಕರ್ಣಿಯವರು (ಜನನ:೦೫.೦೧.೧೮೬೯, ಮರಣ:೨೨.೦೪.೧೯೪೨).

ಬೇಲೂರಿನ ಚೆನ್ನಕೇಶವ ದೇವಾಲಯದಂತಹ ಕಲಾಕೃತಿಗಳನ್ನು ಕಂಡಾಗ ನಾವು ಅದರ ಸೌಂದರ್ಯವನ್ನು, ಭವ್ಯತೆಯನ್ನು ಅನುಭವಿಸಿ ಆನಂದಿಸಿ ಆಶ್ಚರ್ಯವನ್ನು ಪಡೆಯುವುದು ಸಾಮಾನ್ಯ. ಆದರೆ, ಅದೇ ಕಾಲಕ್ಕೆ ಆ ದೇವಾಲಯದ ತಳಪಾಯದ ವಿಚಾರ ನಮಗೆ ಬರುವುದು ತೀರ ಅಪರೂಪ. ಒಂದು ವೇಳೆ ಆ ವಿಚಾರ ಬಂದರೂ ಅದರ ಮಹತ್ವವನ್ನು ಮನವರಿಕೆ ಮಾಡಿಕೊಳ್ಳುವವರು ಇನ್ನೂ ಅಪರೂಪ. ಆದರೆ ಅದನ್ನು ಅರಿತುಕೊಳ್ಳುವುದು ಅವಶ್ಯಕ. ಆ ಭವ್ಯ ಕಲಾಕೃತಿಯ ದೇವಾಲಯ ಇಂದಿಗೂ ಸ್ಥಿರವಾಗಿ ನಿಂತಿರಲು ಪ್ರಮುಖ ಕಾರಣ ಅದರ ಭದ್ರ ಬುನಾದಿ ಎಂಬುದನ್ನು ಮರೆಯುವಂತಿಲ್ಲ. ಕನ್ನಡ ಕಾದಂಬರಿ ಸಾಹಿತ್ಯಕ್ಕೆ ಭದ್ರ ಬುನಾದಿ ಹಾಕಿ 'ಆಧುನಿಕ ಕನ್ನಡ ಗದ್ಯದ ಆದ್ಯ ಕರ್ತೃ' ಎಂಬ ಹೆಗ್ಗಳಿಕೆಗೆ ಪಾತ್ರರಾದರು ನಮ್ಮ  ಗಳಗನಾಥರು. ಸಾಹಿತಿ ಪರಿಸರದ ಕೂಸು. ಆತ ಜನಿಸಿದ ದೇಶ-ಪರಿಸರ, ಬಾಳಿದ ಕಾಲಘಟ್ಟ ಇವು ಆತನ ಸಾಹಿತ್ಯದ ವಸ್ತು ಮತ್ತು ಅದರ ಸ್ವರೂಪವನ್ನು ನಿರ್ಧರಿಸುವಲ್ಲಿ ಮುಖ್ಯ ಕಾರಣಗಳಾಗುತ್ತವೆ. ಟಾಲ್ ಸ್ಟಾಯ್ ರಶಿಯಾದಲ್ಲಿ ಹುಟ್ಟಿ ಬೆಳೆಯದೇ ಭಾರತ ಅಥವಾ ಅಮೇರಿಕಾದಲ್ಲಿ ಬಾಳಿದ್ದರೆ ಅವರ ಕೃತಿಗಳು ವಿಭಿನ್ನವಾಗಿರುತ್ತಿದ್ದವು. ಅದರಂತೆ ಕಾಳಿದಾಸ ಇಂದಿನ ದಿನಗಳಲ್ಲಿ ಜೀವಿಸಿದ್ದರೆ ಶಾಕುಂತಲೆಯ ರಚನೆ ಆಗುತ್ತಿರಲಿಲ್ಲ. ಗಳಗನಾಥರು ತಾವು ಜೀವಿಸಿದ್ದ ದೇಶ-ಕಾಲ ಪರಿಸರದಲ್ಲಿ ಈ ಮೇಲೆ ಉಲ್ಲೇಖಿಸಿದ ಮಹನೀಯರಿಗೆ ಸಮಾನವಾದ ಕನ್ನಡ ಸಾಹಿತ್ಯದ ಸೇವೆಯನ್ನು ಮಾಡಿದ ಮಹನಿಯರು.

ಗಾಂಧಿಜೀಯವರ ಸಮಕಾಲೀನರಾದ ಗಳಗನಾಥರು ಅಂದಿನ ಧಾರವಾಡ ಜಿಲ್ಲೆಯ ಹಾವೇರಿ ತಾಲೂಕು ಗಳಗನಾಥ ಎಂಬ ಹಳ್ಳಿಯ ಕುಲಕರ್ಣಿ ಮನೆತನದಲ್ಲಿ ಜನಿಸಿದರು. ವಯಸ್ಸಿನ ೨೯ ನೇ ವರ್ಷ ಗಳಗನಾಥರ ಮೊದಲ ಸಾಹಿತ್ಯ ಕೃತಿ,'ಪದ್ಮನಯನಾ' ೧೮೯೮ ರಲ್ಲಿ ಪ್ರಕಟವಾಯಿತು. ಆಗ ಕಾದಂಬರಿ ಸಾಹಿತ್ಯವನ್ನು ಕನ್ನಡದಲ್ಲಿ ರಚಿಸಿದ ಮುಂಬೈ ಕರ್ನಾಟಕದ ಮೊದಲಿಗರಲ್ಲಿ ಗಳಗನಾಥರು ಒಬ್ಬರಾಗಿದ್ದರೆಂಬುದು ಐತಿಹಾಸಿಕ ಸತ್ಯವಾಗಿದೆ. ಮುಂದೆ ಅವರು ಕಾಲವಶವಾಗುವವರೆಗೆ ಅಂದರೆ ೧೯೪೨ ರ ವರೆಗೆ ಗಳಗನಾಥರು ಬರೆಯುತ್ತಲೇ ಇದ್ದರು. ಅವರ ಕೊನೆಯ ಕೃತಿ, 'ದುರ್ಗದ ಬಿಚ್ಚುಗತ್ತಿ'೧೯೩೮ ರಲ್ಲಿ ಪ್ರಕಟವಾಯಿತು.

ಗಳಗನಾಥರು ತಮ್ಮ ಮುಲ್ಕಿಯವರೆಗಿನ ಶಾಲಾ ಶಿಕ್ಷಣವನ್ನು ಪೂರೈಸಿ ಮುಂದೆ ಶಾಲಾ ಶಿಕ್ಷಕರಾಗುವ ಉದ್ದೇಶದಿಂದ ೧೮೮೬ ರಿಂದ ೧೮೮೯ ತನಕ ಧಾರವಾಡದ ಗಂಡು ಮಕ್ಕಳ ಟ್ರೇನಿಂಗ್ ಕಾಲೇಜಿನಲ್ಲಿ ಮೂರು ವರ್ಷ ಶಿಕ್ಷಕ ತರಬೇತಿ ಪಡೆದರು. ಟ್ರೇನಿಂಗ್ ಕಾಲೇಜಿನ ಅಂದಿನ ಪ್ರಾಂಶುಪಾಲರಾದ ಶ್ರೀ ಕರಂದಿಕರ ಮತ್ತು ಇತಿಹಾಸದ ಶಿಕ್ಷಕರಾದ ಶ್ರೀ ರಾ.ಹ. ದೇಶಪಾಂಡೆ ಅವರು ಗಳಗನಾಥರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದ ಮಹನೀಯರು. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಏರ್ಪಡಿಸುತ್ತಿದ್ದ ವಿವಿಧ ಲೇಖನ, ಭಾಷಣ ಸ್ಪರ್ಧೆಗಳಲ್ಲಿ ಗಳಗನಾಥರು ಯಾವಾಗಲೂ ಬಹುಮಾನ ಪಡೆಯುತ್ತಿದ್ದರು. ಗಳಗನಾಥರಿಂದ ರಚಿತವಾದ ಪ್ರಥಮ ಕಾದಂಬರಿ 'ಪದ್ಮನಯನ' ೧೮೯೭ ರಲ್ಲಿ ಕ.ವಿ.ವ. ಸಂಘ ದಿಂದ ಪುರಸ್ಕೃತಗೊಂಡಿತ್ತು. ತಮ್ಮ ಶಿಕ್ಷಕ ವೃತ್ತಿಗೆ ಬೇಕಾದ ಟ್ರೇನಿಂಗ್ ಪಡೆದ ನಂತರ ೧೮೮೯ ರಲ್ಲಿ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿದ ಗಳಗನಾಥರು ಧಾರವಾಡ ಜಿಲ್ಲೆಯ ವಿವಿಧ ಗ್ರಾಮಗಳ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸಿದರು. ಗುತ್ತಲ ಗ್ರಾಮದಲ್ಲಿ ಶಾಲೆಯ ಮುಖ್ಯಾಧ್ಯಾಪಕರಾಗಿದ್ದಾಗ ಗ್ರಾಮದ ಕುಡಿಯುವ ನೀರಿನ ಬವಣೆಯನ್ನು ಬಗೆಹರಿಸಲು ತಮ್ಮ ಸ್ವಂತ ಖರ್ಚಿನಲ್ಲಿ ಸಿಹಿ ನೀರಿನ ಬಾವಿಯನ್ನು ತೋಡಿಸಲು ಮುಂದಾಗುವರು. ಹಲವು ಗ್ರಾಮಸ್ಥರೂ ಮುಂದೆ ಬಂದು ಸಹಕಾರ ನೀಡಿದರೆ, ಕೆಲವರು ಇವರು ತಮ್ಮ ಪ್ರಾಥಮಿಕ ಕರ್ತವ್ಯವಾದ ಶಿಕ್ಷಕ ಕೆಲಸ ಬಿಟ್ಟು ಇಲ್ಲದ ಉಸಾಬರಿ ಮಾಡುತ್ತಿರುವರೆಂದು ಮೇಲಾಧಿಕಾರಿಗಳಿಗೆ ದೂರು ನೀಡುವರು. ಅನಿರೀಕ್ಷಿತವಾಗಿ ಶಾಲೆಗೆ ಭೇಟಿಯಿತ್ತ ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳು ಗಳಗನಾಥರು ವಿದ್ಯಾರ್ಥಿಗಳಿಗೆ ಪಾಠಮಾಡುವಲ್ಲಿ ತಲ್ಲೀನರಾಗಿರುವದನ್ನು ಮತ್ತು ಶಾಲೆಯಲ್ಲಿ ಗಳಗನಾಥರು ಪ್ರಾರಂಭಿಸಿದ ಸಂಪ್ರದಾಯವಾದ ಶಾಲೆಗೆ ಭೇಟಿಯಿತ್ತ ಅತಿಥಿಗಳು, ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಶಾಲೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ದಾಖಲಿಸುವ ವಿಸಿಟರ್ಸ್ ಪುಸ್ತಕದಲ್ಲಿ ಮುಖ್ಯಾಧ್ಯಾಪಕರಾದ ಗಳಗನಾಥರು ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಕಾರಾತ್ಮಕ ಮತ್ತು ಶಿಕ್ಷಣಕ್ಕೆ ಪೂರಕವಾದ ವಿವಿಧ ಬಗೆಯ ಕಾರ್ಯಕ್ರಮಗಳ ವರದಿ ಮತ್ತು ಟಿಪ್ಪಣಿಗಳನ್ನು ಓದಿ ದಿಗ್ಭ್ರಮೆ ಹೊಂದುವರು. ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳ ವರದಿಯನ್ನು ಆಧರಿಸಿ ಗಳಗನಾಥರಿಗೆ ಧಾರವಾಡದ ಟ್ರೇನಿಂಗ್ ಕಾಲೇಜಿನಲ್ಲಿ ಸೇವೆ ಮಾಡುವ ಅವಕಾಶ ದೊರಕುವದು.ಇದಕ್ಕೂ ಮೊದಲು ಕನ್ನಡ ಶಾಲೆಯ ಯಾವ ಶಿಕ್ಷಕರಿಗೂ ಇಂಥಹ ಗೌರವ ದೊರೆತಿರುವುದಿಲ್ಲ ಎಂಬುದು ಗಮನಾರ್ಹ ಸಂಗತಿ. ಇದು ಟ್ರೇನಿಂಗ್ ಕಾಲೇಜಿನ ಕೆಲವು ಪದವಿಧರ ಸಹೋದ್ಯೋಗಿಗಳ ಈರ್ಷೆಗೂ ಕಾರಣವಾಗುವುದು.

ಈ ನಡುವೆ, ಗಳಗನಾಥರಿಗೆ ತಾವು ಶಾಲಾ ಶಿಕ್ಷಕರಿದ್ದಾಗ ಸಂಪರ್ಕಕ್ಕೆ ಬಂದ ಅಗಡಿಯ ಆನಂದವನ ಮಠದ ಶ್ರೀ ಶೇಷಾಚಲ ಸದ್ಗುರುಗಳ ಭಕ್ತಿಯ ಆಕರ್ಷಣೆ ಅಧಿಕವಾಗಿ ೧೯೧೪ ರಲ್ಲಿ ತಮ್ಮ ನೌಕರಿಗೆ ಇನ್ನು ಹತ್ತು ವರ್ಷ ಮುದ್ದತ್ತು ಇರುವಾಗಲೇ ರಾಜಿನಾಮೆ ನೀಡಿ ಕೇವಲ ೧೯ ರುಪಾಯಿಗಳ ಪೆನಶನ್ ಮೇಲೆ ನಿವೃತ್ತಿ ಪಡೆದು ಅಗಡಿಯ ಆನಂದವನ ಮಠ ಸೇರಿ ತಮ್ಮ ಬಹುದಿನದ ಕನಸಾದ ಗುರುಕುಲ ಮಾದರಿಯ ಸಂಸ್ಕೃತ ಪಾಠಶಾಲೆಯನ್ನು ಪ್ರಾರಂಭಿಸುವರು. ಪಾಠಶಾಲೆಯ ವಿದ್ಯಾರ್ಥಿಗಳಿಗೆ ಯತೇಚ್ಛ ಹಾಲು ತುಪ್ಪದ ಪೌಷ್ಟಿಕ ಆಹಾರ ಒದಗಿಸುವ ಸಲುವಾಗಿ ಒಂದು ಗೋಶಾಲೆಯನ್ನೂ ಮಠದಲ್ಲಿ ಪ್ರಾರಂಭಿಸುವರು. ಇವೆರಡರ ಖರ್ಚು ವೆಚ್ಚಗಳನ್ನು ಭರಿಸಲು ವಾರ್ಷಿಕ ಚಂದಾ ಆಧಾರದ ಮೇಲೆ 'ಸದ್ಬೋಧ ಚಂದ್ರಿಕೆ ' ಎಂಬ ಮಾಸ ಪತ್ರಿಕೆಯನ್ನು ಪ್ರಾರಂಭಿಸುವರು. ಆರಂಭಿಕ ದಿನಗಳಲ್ಲಿ ಸದ್ಬೋಧ ಚಂದ್ರಿಕೆ ಕೇವಲ ಧಾರ್ಮಿಕ ವಿಚಾರಗಳು ಮತ್ತು ಮಠದ ವಿವಿಧ ಕಾರ್ಯಕ್ರಮಗಳ ವಿಷಯಕ್ಕೆ ಸೀಮಿತವಾಗಿದ್ದು ಹೆಚ್ಚಿನ ಚಂದಾದಾರರು ಇರುವುದಿಲ್ಲ. ಇದನ್ನು ಮನಗಂಡು ಹೆಚ್ಚಿನ ಚಂದಾದಾರರನ್ನು ಆಕರ್ಷಿಸಲು ಗಳಗನಾಥರು ಪೌರಾಣಿಕ ಮತ್ತು ನೈತಿಕ ಮೌಲ್ಯಗಳ ಕಥೆ, ಸತ್ಪುರುಷರ ಜೀವನ ಚರಿತ್ರೆಗಳು, ಐತಿಹಾಸಿಕ ಕಾದಂಬರಿಗಳನ್ನು ಬರೆದು ಪ್ರಕಟಿಸಲು ಮುಂದಾಗುವರು. ಜೊತೆಗೆ ಇತರರಿಗೂ ಪತ್ರಿಕೆಯಲ್ಲಿ ಬರೆಯಲು ಪ್ರೋತ್ಸಾಹಿಸಿ ಆ ಕಾಲದಲ್ಲಿ ಅನೇಕ ಲೇಖಕರು ಈ ಭಾಗದಲ್ಲಿ ಹುಟ್ಟಿ ಬೆಳೆಯಲು ಅನುವು ಮಾಡಿದ ಮಹದೋಪಕಾರದ ಕೀರ್ತಿ ಗಳಗನಾಥರಿಗೆ ಸೇರಬೇಕು. ಇದರ ಪರಿಣಾಮವಾಗಿ ಕೆಲವೇ ವರ್ಷಗಳಲ್ಲಿ  ಸದ್ಬೋಧ ಚಂದ್ರಿಕೆಯ ವಾರ್ಷಿಕ ಚಂದಾದಾರರ ಸಂಖ್ಯೆ ೭೦೦೦ ಕ್ಕೆ ಹೆಚ್ಚುತ್ತದೆ. ಸದ್ಬೋಧ ಚಂದ್ರಿಕೆಯು ಉತ್ತರ ಭಾರತದ ಕಾಶಿಯಿಂದ ದಕ್ಷಿಣದ ಕನ್ಯಾಕುಮಾರಿಯ ತನಕ ಚಂದಾದಾರರ ಓದುಗರನ್ನು ಹೊಂದಿರುತ್ತದೆ. ಆರಂಭಿಕ ದಿನಗಳಲ್ಲಿ ಪತ್ರಿಕೆಯ ಮುದ್ರಣವನ್ನು ಹುಬ್ಬಳ್ಳಿಯ ಖಾಸಗಿ ಪ್ರೆಸ್ ನಲ್ಲಿ ಕೈಗೊಂಡರೆ, ವಾರ್ಷಿಕ ಚಂದಾದಾರರ ಸಂಖ್ಯೆ ಹೆಚ್ಚಿದಂತೆ ಪತ್ರಿಕೆಯ ಮುದ್ರಣದ ಖರ್ಚು ಕಡಿಮೆ ಮಾಡುವ ಉದ್ದೇಶದಿಂದ ಗಳಗನಾಥರು ಮಠದಲ್ಲಿಯೇ ಒಂದು ಪ್ರಿಂಟಿಂಗ್ ಪ್ರೆಸ್ ಹಾಕಿ ಮುದ್ರಣದ ಜವಾಬ್ದಾರಿಯನ್ನು ತಮ್ಮ ಹೆಗಲಮೇಲೆ ಹೊರುವರು. ಹೀಗೆ ಗಳಗನಾಥರು ಅಗಡಿ ಆನಂದವನದಲ್ಲಿ ಏಕಕಾಲಕ್ಕೆ ಗುರುಕುಲ ಮಾದರಿಯ ಸಂಸ್ಕೃತ ಪಾಠಶಾಲೆ, ಗೋಶಾಲೆ, ಸದ್ಬೋಧ ಚಂದ್ರಿಕೆ ಎಂಬ ಮಾಸ ಪತ್ರಿಕೆಯ ಪ್ರಕಟಣೆ, ಕಥೆ, ಕಾದಂಬರಿ ಮತ್ತು ಇತರ ಲೇಖನಗಳ ಬರಹ, ಪತ್ರಿಕೆಯಲ್ಲಿ ಬರೆಯಲು ಇತರ ಲೇಖಕರನ್ನು ತಯಾರುಮಾಡಿ ಪ್ರೋತ್ಸಾಹಿಸುವ, ಮಾರ್ಗದರ್ಶನಮಾಡುವ ಹಾಗು ಪತ್ರಿಕೆಯ ಸಂಪಾದಕ ಮತ್ತು ಮುದ್ರಣದ ಪ್ರೆಸ್ ನಡೆಸುವ ಮತ್ತು ಪತ್ರಿಕೆಯನ್ನು ವಿವಿಧ ಊರುಗಳಲ್ಲಿನ ಚಂದಾದಾರರಿಗೆ ಸಕಾಲದಲ್ಲಿ ಸಮರ್ಪಕವಾಗಿ ವಿತರಣೆಮಾಡುವ ಜವಾಬ್ದಾರಿಗಳನ್ನು ಸ್ವಾರ್ಥರಹಿತವಾಗಿ ಮತ್ತು ಯಶಸ್ವಿಯಾಗಿ ನಿರ್ವಹಿಸುವರು. ಧಾರ್ಮಿಕ, ಶೈಕ್ಷಣಿಕ, ಮುದ್ರಣ ಮತ್ತು ಪತ್ರಿಕಾ ರಂಗದ ವಿವಿಧ ಸಂಸ್ಥೆಗಳು ಮಾಡುವ ಕೆಲಸಗಳನು ಏಕಕಾಲಕ್ಕೆ ಉತ್ತರ ಕರ್ನಾಟಕದ ಅಗಡಿಯಂತಹ ಗ್ರಾಮೀಣ ಭಾಗದಲ್ಲಿ ಅಂದಿನ ದಿನಗಳಲ್ಲಿ ಗಳಗನಾಥರು ಯಶಸ್ವಿಯಾಗಿ ನಿರ್ವಹಿಸಿದರು ಎಂದರೆ ಇಂದಿನ ದಿನಗಳಲ್ಲಿ ನಂಬಲಸಾಧ್ಯದ ಮಾತಾದೀತು.

ಶೇಷಾಚಲ ಸದ್ಗುರುಗಳು ದೈವಾಧಿನರಾದ ನಂತರದ ದಿನಗಳಲ್ಲಿ ಅನಿವಾರ್ಯವಾಗಿ ಗಳಗನಾಥರು ೧೯೧೮ ರಲ್ಲಿ ಅಗಡಿಯ ಆನಂದವನ ಮಠ ತೊರೆದು ಹಾವೇರಿಯಲ್ಲಿ ನೆಲೆಯೂರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹಾವೇರಿಯಲ್ಲಿ ಮತ್ತೊಮ್ಮೆ ಅಗಡಿಯಲ್ಲಿ ಸಮರ್ಪಕವಾಗಿ ಸ್ಥಾಪಿಸಿದ ಗುರುಕುಲ ಮಾದರಿಯ ಸಂಸ್ಕೃತ ಪಾಠಶಾಲೆಯನ್ನು, ಗೋಶಾಲೆ, ಪ್ರಿಂಟಿಂಗ್ ಪ್ರೆಸ್ ಸ್ಥಾಪಿಸುವರಲ್ಲದೇ ತಮ್ಮ ಪ್ರೀತಿಯ ಸದ್ಬೋಧ ಚಂದ್ರಿಕೆ ಯ ಮಾದರಿಯ 'ಸದ್ಗುರು' ಎಂಬ ಮಾಸ ಪತ್ರಿಕೆಯನ್ನು ಹುಟ್ಟುಹಾಕುವರು. ಈ ಎಲ್ಲಾ ಕಾರ್ಯಗಳಿಗಾಗಿ ಸಂಪನ್ಮೂಲದ ಕೊರತೆ ಉಂಟಾದಾಗ ಅಂದಿನ ಕಾಲದಲ್ಲಿ ಅನೇಕ ಸಾವಿರ ರುಪಾಯಿಗಳ ಸಾಲದ ಭಾರವನ್ನು ಹೊರುವರು. ಆ ಆರ್ಥಿಕ ಋಣಭಾರ ಕಡಿಮೆ ಮಾಡಲು ದಿನಗಳಲ್ಲಿ ಪತ್ರಿಕೆಯ ಸಂಪಾದಕ ಕೆಲಸ, ಮುದ್ರಣಾಲಯ ಮತ್ತು ತಾವು ಬರೆದು ಪ್ರಕಟಿಸಿದ ಪುಸ್ತಕಗಳ ಮಾರಾಟದ ಕಾರ್ಯಗಳಲ್ಲಿ ವ್ಯಸ್ತವಾದರೆ ರಾತ್ರಿಯಲ್ಲಿ ನಿರಂತರ ಕಾದಂಬರಿ ಸಾಹಿತ್ಯದ ಸೃಷ್ಟಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರಂತೆ. 

ಲಭ್ಯವಿರುವ ಮಾಹಿತಿಯ ಪ್ರಕಾರ ಗಳಗನಾಥರು ೫೦ ಪುಸ್ತಕಗಳನ್ನು ಬರೆದಿದ್ದಾರೆ. ಅವರು ಬರೆದ ೨೨ ಕಾದಂಬರಿಗಳಲ್ಲಿ ೧೬ ಅನುವಾದಿತ ಕೃತಿಗಳು. ಹರಿ ನಾರಾಯಣ ಆಪಟೆ ಅವರ ೦೮ ಹಾಗು ಇತರರ ೦೪ ಸೇರಿ ಒಟ್ಟು ೧೨ ಮರಾಠಿ ಅನುವಾದಗಳು, ಬಂಕಿಮಚಂದ್ರರ ೦೧  ಸೇರಿ ಒಟ್ಟು ೦೪ ಬಂಗಾಳಿ ಕೃತಿಗಳು. ಉಳಿದ ೦೬ ಸ್ವತಂತ್ರ ಕಾದಂಬರಿಗಳು.  ಪದ್ಮನಯನಾ(೧೮೯೮) ಗಳಗನಾಥರ ಪ್ರಥಮ ಕಾದಂಬರಿ, ಕಮಲಕುಮಾರಿ(೧೯೧೦) ಆಪಟೆಯವರ ಮೊದಲ ಮರಾಠಿಯ ಅನುವಾದಿತ ಕಾದಂಬರಿ, ಮೃಣಾಲಿನಿ(೧೯೧೧) ಬಂಕಿಂಚಂದ್ರರ ಬಂಗಾಳಿ ಕಾದಂಬರಿಯ ಅನುವಾದ, ಮಾಧವ ಕರುಣಾವಿಲಾಸ (೧೯೨೩) ಗಳಗನಾಥರು ರಚಿಸಿದ ಬ್ರಹತ್ ಕಾದಂಬರಿ. ಕನ್ನಡಿಗರ ಕರ್ಮಕಥೆ (೧೯೧೬) ಇದು ವಿಜಯನಗರದ ಪತನದ ಕಥೆಯಾದರೆ ದುರ್ಗದ ಬಿಚ್ಚುಗತ್ತಿ (೧೯೩೮) ಚಿತ್ರದುರ್ಗದ ಇತಿಹಾಸದ ಕಾದಂಬರಿ. ಗಳಗನಾಥರ ಇತರ ೨೮ ಕೃತಿಗಳಲ್ಲಿ ೦೯ ಪೌರಾಣಿಕ ಗ್ರಂಥಗಳು,೦೫ ಸತ್ಪುರುಷರ ಚರಿತ್ರೆಗಳು,೧೩ ನಿಬಂದ-ಪ್ರಬಂಧಗಳು, ಐತಿಹಾಸಿಕ ಕಥೆಗಳು,ಜೀವನ ಚರಿತ್ರೆಗಳು, ಕಾದಂಬರಿಯ ವಿಮರ್ಶೆ ಇತ್ಯಾದಿಗಳು. ಅದಲ್ಲದೇ ಮಾಸಪತ್ರಿಕೆಯ ಸಂಪಾದಕೀಯ ಲೇಖನಗಳು ಹಾಗೂ ಬಿಡಿ ಲೇಖನಗಳಿಗೆ ಲೆಕ್ಕವಿಲ್ಲ. 

ತಾವು ರಚಿಸಿದ ಕೃತಿಗಳ ಮುದ್ರಣ ಪ್ರಕಟಣೆ ಮಾಡಿ ತಲೆಯಮೇಲೆ ಪುಸ್ತಕಗಳ ಮಣಭಾರ ಹೊತ್ತು ಪುಣೆ, ಹೈದರಾಬಾದ್ ದಿಂದ ಬೆಂಗಳೂರು, ಮೈಸೂರಿನ ತನಕದ ಕನ್ನಡಿಗ ಓದುಗರು ನೆಲೆಸಿರುವ ಎಲ್ಲಾ ಹಳ್ಳಿ ಗ್ರಾಮ, ನಗರಗಳಲ್ಲಿ ಮನೆ ಮನೆಗೆ ಸಂಚರಿಸಿ ಪುಸ್ತಕ ಮಾರಾಟ ಮಾಡಿ ತಾವು ಹುಟ್ಟುಹಾಕಿದ ಸಂಸ್ಕೃತ ಪಾಠಶಾಲೆ, ಗೋಶಾಲೆ ಮತ್ತು ಪತ್ರಿಕೆಗಳ ಖರ್ಚು ವೆಚ್ಚಗಳ ಸಲುವಾಗಿ ಮಾಡಿದ ಸಾಲವನ್ನು ತೀರಿಸಲು ಹಗಲಿರುಳು ನಿರಂತರ ನಿಸ್ವಾರ್ಥವಾಗಿ ದುಡಿದರು. ಹೈದ್ರಾಬಾದದಲ್ಲಿ ನೆಲೆಸಿದ ಕನ್ನಡಿಗ ವೈದ್ಯರೊಬ್ಬರು, ಧಾರವಾಡದ ಶ್ರೀಮಂತ ವ್ಯಾಪಾರಿ ಅಲ್ಲದೇ ಹಳ್ಳಿಯೊಂದರ ರೈತಾಪಿ ಗ್ರಹಸ್ತರು ಗಳಗನಾಥರ ಕನ್ನಡ ಪುಸ್ತಕಗಳನ್ನು ಖರೀದಿಸಲು ಹಿಂದೇಟು ಹಾಕಿದರಲ್ಲದೇ ತಲೆಯಮೇಲೆ ತಂದು ಮಾರುವ ವೃದ್ಧ ಲೇಖಕರಿಗೆ ಅಪಮಾನಕರ ಮಾತಾಡಿದರಂತೆ, ನಂತರ ಅವರುಗಳ ಶ್ರೀಮತಿಯಯರು ಗಳಗನಾಥರ ಕನ್ನಡ ಪುಸ್ತಕಗಳ ಅಭಿಮಾನಿ ಓದುಗರು ಎಂದು ಅರಿತು ಗಳಗನಾಥರಲ್ಲಿ ಕ್ಷಮೆಯಾಚಿಸಿ ಪುಸ್ತಕಗಳನ್ನು ಖರೀದಿಸಿದ ಪ್ರಸಂಗಗಳು ದಾಖಲಾಗಿವೆ. ಹಾ.ಮಾ.ನಾಯಕರು ತಾವು ಶಾಲಾ ಬಾಲಕರಿದ್ದಾಗ ಬಸ್ಸಿನಿಂದ ಇಳಿದು ತಲೆಯಮೇಲೆ ಪುಸ್ತಕಗಳ ಗಂಟನ್ನು ಹೊತ್ತು ತಮ್ಮ ಮನೆಯ ಓಣಿಯಲ್ಲಿ ಬಂದ ಗಳಗನಾಥರನ್ನು ಯಾವುದೋ ಬಟ್ಟೆ ವ್ಯಾಪಾರಿ ವೃದ್ಧ ಬ್ರಾಹ್ಮಣ ಎಂದು ತಿಳಿದಿದ್ದರೆಂದು ಗಳಗನಾಥರ ಬಗ್ಗೆ ಬರೆಯುವಾಗ ಉಲ್ಲೇಖಿಸಿರುವರು.

ಗಳಗನಾಥರು ತಮಗೆ ವಾಚನದ ಹುಚ್ಚನ್ನು ಹೇಗೆ ಹಿಡಿಸಿದರೆಂದು ಶ್ರೀರಂಗರು ತಮ್ಮ ಲೇಖನಗಳಲ್ಲಿ ನೆನೆದಿರುವರು. ಅದರಂತೆ ಬಿ.ಎಂ.ಶ್ರೀ ಅವರು, ಮಾಸ್ತಿಯವರು, ಬೇಂದ್ರೆಯವರು, ಬೆಟಗೇರಿ ಕೃಷ್ಣಶರ್ಮ, ಶ್ರೀನಿವಾಸ ಹಾವನೂರು, ಬೀಚೀ, ಹಾ.ಮಾ.ನಾಯಕ ಮುಂತಾದ ಅನೇಕ ಹಿರಿಯ ತಲೆಮಾರಿನ ಸಾಹಿತಿಗಳು ಗಳಗನಾಥರ ಕಾದಂಬರಿಗಳನ್ನು ಮೆಚ್ಚಿ ಅನೇಕ ಲೇಖನಗಳನ್ನು ಬರೆದಿರುವರು. ಗಳಗನಾಥರು ಇಪ್ಪತ್ತನೇಯ ಶತಮಾನದ ಮೊದಲೆರಡು ದಶಕ (೧೯೦೯ ರಿಂದ ೧೯೨೮ ರ ವರೆಗೆ) ಕನ್ನಡ ಕಾದಂಬರೀ ಕ್ಷೇತ್ರದ ಸಾಮ್ರಾಟರಾಗಿ ಬಾಳಿದರು ಜೊತೆಗೆ ಕನ್ನಡಿಗರಲ್ಲಿ ಕಾದಂಬರಿ ವಾಚನಾಭಿರುಚಿಯನ್ನು ವ್ಯಾಪಕವಾಗಿ ಹೆಚ್ಚಿಸಿ ಮುಂದಿನ ಕಾದಂಬರಿಕಾರರಿಗೆ ಮತ್ತು ಇತರ ಲೇಖಕರಿಗೆ ಆ ಮಾರ್ಗವನ್ನು ಸುಗಮಗೊಳಿಸಿದರು. ಗಳಗನಾಥರು ಪ್ರೋತ್ಸಾಹ ಮತ್ತು ಮಾರ್ಗದರ್ಶನಮಾಡಿ ಅನೇಕ ಕಾದಂಬರಿಕಾರರಿಗೆ ಸದ್ಬೋಧ ಚಂದ್ರಿಕೆ ಹಾಗು ಸದ್ಗುರು ಮಾಸಪತ್ರಿಕೆಗಳು ಮತ್ತು ಶೇಷಾಚಲ ಗ್ರಂಥಮಾಲೆ ಹಾಗು ಗಳಗನಾಥ ಸುರಸ ಗ್ರಂಥಮಾಲೆಗಳಲ್ಲಿ ಅವರಿಂದ ರಚಿತವಾದ ಸಾಹಿತ್ಯವನ್ನು ಪ್ರಕಟಿಸಿದರು. ಈ ರೀತಿ ಕಾದಂಬರಿ ಸಾಹಿತ್ಯ ಪ್ರಕಾರವನ್ನು ನಿರ್ದುಷ್ಟವಾಗಿ ಜನಪ್ರಿಯಗೊಳಿಸಿದ ಶ್ರೇಯಸ್ಸು ಗಳಗನಾಥರಿಗೆ ಸಲ್ಲುತ್ತದೆ.

ಗಳಗನಾಥರು ಎಕಕಾಲಕ್ಕೆ ಲೇಖಕ,ಮುದ್ರಕ, ಪ್ರಕಾಶಕರಾಗುವುದಲ್ಲದೇ ಸಂಚಾರಿ ಮಾರಾಟಗಾರರಾದರು. ಇವಿಷ್ಟೇ ಅಲ್ಲದೇ ಧರ್ಮಜಾಗೃತಿಗಾಗಿ, ಸಂಸ್ಕೃತಿ ಪ್ರಸಾರಕ್ಕಾಗಿ ಉಪನ್ಯಾಸಗಳನ್ನು ಮಾಡಿದರು ಮತ್ತು ಅಷ್ಟೇ ಶ್ರದ್ದೆಯಿಂದ ಗೋಸೇವೆ ಮಾಡಿದರು, ಆತ್ಮತೃಪ್ತಿಗಾಗಿ ಸಂಸ್ಕೃತ ವೇದಪಾಠ ಶಾಲೆಯನ್ನು ನಡೆಸಿದರು. ಅದಕ್ಕಾಗಿ ಸಾಲ ಮಾಡಿದರು ಮತ್ತು ಸಾಲ ತೀರಿಸಲು ಗ್ರಂಥಗಳನ್ನು ರಚಿಸಿದರು.

ಗಳಗನಾಥರು ಮಾಡಿದ ಬಹುಮುಖ ಕಾರ್ಯಗಳ ಜೊತೆಗೆ ಅವರು ಅನೇಕ ವಿಷಯಗಳಲ್ಲಿ ಪ್ರಥಮರೂ ಆಗಿದ್ದಾರೆ ಎಂಬುದನ್ನು ನಾವಿಲ್ಲಿ ಗಮನಿಸಬಹುದು.

೧. ಉತ್ತರ ಕರ್ನಾಟಕದ ಪ್ರಥಮ ಪ್ರಖ್ಯಾತ ಮತ್ತು ಜನಪ್ರಿಯ ಕಾದಂಬರಿಕಾರು

೨. ಏಳೆಂಟು ಸಾವಿರ ಚಂದಾದಾರರುಳ್ಳ ಕನ್ನಡ ಮಾಸಪತ್ರಿಕೆಯೊಂದನ್ನು ಸ್ಥಾಪಿಸಿ ನಡೆಸಿದ ಪ್ರಥಮರೂ ಗಳಗನಾಥರೇ

೩. ಕನ್ನಡದ ಸ್ವತಂತ್ರ ಐತಿಹಾಸಿಕ ಕಾದಂಬರಿಯನ್ನು ಬರೆದ ಹೆಗ್ಗಳಿಕೆ

೪. ಗಳಗನಾಥರ 'ಮಾಧವ ಕರುಣಾವಿಲಾಸ'ವೇ ಕನ್ನಡದ ಪ್ರಥಮ ಬೃಹತ್ ಕಾದಂಬರಿಯಾಗಿದೆ

೫. ಗ್ರಂಥಲೇಖನದಿಂದಲೇ ಉಪಜೀವನವನ್ನು ಸಾಗಿಸಿದ ಪ್ರಥಮ ಕನ್ನಡ ಲೇಖಕರೆಂದರೆ ಗಳಗನಾಥರೇ

೬. ಲೇಖನ, ಪತ್ರಿಕಾ ಸಂಪಾದಕ , ಗ್ರಂಥಮಾಲಾ ಸಂಪಾದಕ, ಮುದ್ರಕ, ಪ್ರಕಾಶಕ, ಮಾರಾಟಗಾರ...ಹೀಗೆ ವೈವಿಧ್ಯಮಯ ಕಾರ್ಯಗಳನ್ನು ಏಕಕಾಲಕ್ಕೆ ಸಾಧಿಸಿದ ಮೊದಲಿಗರು ಗಳಗನಾಥರೇ ಆಗಿದ್ದಾರೆ

೭. ಅದೇ ತಾನೆ ತಲೆಯತ್ತುತ್ತಿದ್ದ ಅಪಕ್ವ, ಪ್ರಯೋಗಾವಸ್ಥೆಯಲ್ಲಿದ್ದ ಹೊಸಗನ್ನಡ ಗದ್ಯಕ್ಕೆ ಒಂದು ರೂಪವನ್ನು ಕೊಟ್ಟು ಕನ್ನಡದ ಗದ್ಯ ಪ್ರವರ್ತಕರು ಎಂದೆನಿಸಿಕೊಂಡ ಪ್ರಥಮರೂ ಗಳಗನಾಥರೇ

ಒಟ್ಟಿನಲ್ಲಿ ಗಳಗನಾಥರು ಕನ್ನಡ ಕಾದಂಬರಿ ಸೌಧದ ಗಟ್ಟಿಮುಟ್ಟಾದ ತಳಪಾಯವನ್ನು ಹಾಕಿ ಕನ್ನಡ ಕಾದಂಬರಿ ಪಿತಾಮಹರಾದರು. ಅವರು ಕನ್ನಡ ಕಾದಂಬರಿ ಇತಿಹಾಸದಲ್ಲಿ 'ಗಳಗನಾಥ ಯುಗ'ವನ್ನೇ ಪ್ರಾರಂಭಿಸಿದ ಯುಗಪುರುಷರು!.


ಡಾ. ಜಯಂತ ಕಿತ್ತೂರ 


PS:  ಬೆಳಗಾವಿಯ ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಮತ್ತು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತುಗಳ ಒಂದು ಹೊಸ ಕಾರ್ಯಕ್ರಮ "ಮರೆಯಬಾರದ ಮಹನೀಯರು" ಮಾಲಿಕೆಯ ಮೊದಲ ತಿಂಗಳ ಕಾರ್ಯಕ್ರಮಕ್ಕಾಗಿ ಕನ್ನಡ ಸಾಹಿತ್ಯದ ಆದ್ಯಪುರುಷ ಗಳಗನಾಥರ ಕುರಿತಾದ ಭಾಷಣಕ್ಕಾಗಿ ಬರೆದ ಲೇಖನ.

ಕಾಮೆಂಟ್‌ಗಳು

  1. ನಿಜಕ್ಕೂ ಮರೆಯಬಾರದ ಮತ್ತು ಮರೆಯಲಾಗದ ಮಹನೀಯರಿವರು. ನಾನೊಮ್ಮೆ ಅಗಡಿಗೆ ಹೋದಾಗ ಅಂದಿನ ಅಗಡಿಯ ಗುರುಗಳು ಸಂಚಿಕೆ ಮುದ್ರಣದ ತೊಂದರೆಗಳ ಬಗ್ಗೆ ಚರ್ಚಿಸುವಾಗ ಗಳಗನಾಥರ ಪ್ರಸ್ತಾಪವಾಗಿತ್ತು. ತಮ್ಮ ಲೇಖನ/ಉಪನ್ಯಾಸ ಶ್ಲಾಘನೀಯ.🙏

    ಪ್ರತ್ಯುತ್ತರಅಳಿಸಿ
  2. ಕಾದಂಬರಿಯ ಮಹಾಪುರುಷ ಈಗ ಎಲ್ಲಿ ಸಿಗುತ್ತವೆ ತಿಳಿಸಿರಿ daivagnaum@gmail.com

    ಪ್ರತ್ಯುತ್ತರಅಳಿಸಿ
  3. Excellent tribute to am amazing forefather of the Kannada novel! Pranaams

    ಪ್ರತ್ಯುತ್ತರಅಳಿಸಿ
  4. Great article.. serious one.
    I did not know any of this .. Thank you for making aware of me about his vast contribution🙏

    ಪ್ರತ್ಯುತ್ತರಅಳಿಸಿ
  5. ಡಿ ಬಿ ರಾಘವೇಂದ್ರ ರಾವ್ಫೆಬ್ರವರಿ 5, 2026 ರಂದು 06:20 AM ಸಮಯಕ್ಕೆ

    ಗಳಗನಾಥರು ಕನ್ನಡಕ್ಕಾಗಿ ಮಾಡಿದ ಸೇವೆ ಅಮೋಘ. ತಂತ್ರಜ್ಞಾನ ಇಲ್ಲದಿರುವ ಆ ಕಾಲದಲ್ಲಿ, ಮೇರು ಪರ್ವತ ಸದೃಶ ಮಾಡಿದ ಕಾರ್ಯ ಮಹೋನ್ನತ. ಅವರ ಹೆಸರು ಅಜರಾಮರ.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ದಿಖಾವೇಪೆ ಮತ್ ಜಾವೋ ಅಕಲ್ ಲಗಾವೋ...

ಸತ್ತ ಗುರು !!!

ನನ್ನ ಇಂಜಿನಿಯರಿಂಗ್ ಬ್ರ್ಯಾಂಚ...