ಸಮಸ್ಯೆಯ ಸಮಸ್ಯೆ
ಒಬ್ಬ ತಾಯಿ ತನ್ನ ಸತ್ತ ಮಗುವನ್ನು ಬದುಕಿಸಿಕೊಡಲು ಬೇಡಿಕೊಂಡಾಗ, ಭಗವಾನ್ ಬುದ್ಧ 'ಸಾವಿಲ್ಲದ ಮನೆಯ ಸಾಸಿವೆ ತಾ' ಎಂದು ಹೇಳಿದ ಕಥೆ ನಾವೆಲ್ಲಾ ಕೇಳಿರಲು ಸಾಕು. ಆ ಕಥೆಯ ತಾತ್ಪರ್ಯವಿಷ್ಟೇ, ಹುಟ್ಟಿದವರೆಲ್ಲರೂ ಸಾಯುವುದು ನಿಶ್ಚಿತ. ಅದಕ್ಕಾಗಿ ದುಃಖ ಪಡುವ ಅಗತ್ಯವಿಲ್ಲ ಎಂದು. ಈಗ ಯಾರು ಮೃತಪಟ್ಟರು ಅಥವಾ ಸಾಯಲು ಹೊರಟಿದ್ದಾರೆ ? ಇದೇನು ಈಗ ನಾನು ಸಾವಿನ ವಿಷಯದ ಬಗ್ಗೆ ಮಾತನಾಡುತ್ತಿರುವೆ ಅಂತ ಅಂದುಕೊಂಡಿರಾ... ಇದೇ ನೋಡಿ ಸಮಸ್ಯೆ. ನಾವು ಸಾಮಾನ್ಯವಾಗಿ ವಾಸ್ತವವನ್ನು ಅಥವಾ ಸತ್ಯವನ್ನು ಎದುರಿಸುವುದರಿಂದ ವಿಮುಖರಾಗುವುದು ಅಥವಾ ಪಲಾಯನ ಮಾಡುವುದು ಅಲ್ಲವೇ? ಇರಲಿ, ಆ ಮೇಲಿನ ಗೌತಮ ಬುದ್ಧನ ಕಥೆಯನ್ನು ಇಂದಿನ ದಿನಮಾನಗಳಿಗನುಸಾರವಾಗಿ ಹೇಳುವುದಾದರೆ... ತನ್ನ ಮಕ್ಕಳು ಯಾವಾಗಲೂ ಮೊಬೈಲನಲ್ಲೇ ಕಾಲ ಕಳೆಯುತ್ತಾರೆ. ಇದೊಂದು ಸಮಸ್ಯೆಯಾಗಿದೆ. ಹೇಗಾದರೂ ಮಾಡಿ ಈ ಸಮಸ್ಯೆಯಿಂದ ಮಕ್ಕಳನ್ನು ಹೊರತರುವ ಉಪಾಯವನ್ನು ಹೇಳು ಎಂದು ಒಬ್ಬ ತಾಯಿ ಇಂದಿನ ಬುದ್ಧು ಗೂಗಲ್ ಗುರುವಿಗೋ ಅಥವಾ ಏಐಗೋ ಕೇಳಿದರೆ, ಅದರಿಂದ ಥಟ್ಟನೇ ಬರುವ ಉತ್ತರ 'ಸಮಸ್ಯೆ ಇಲ್ಲದ ಮನೆಯ ಸಾಮಾನು ತಾ' ಎಂದು.!!!
ಎಲ್ಲರ ಮನೆಯ ದೋಸೆಗೂ ತೂತು ಎಂಬಂತೆ ಎಲ್ಲರ ಮನೆಯಲ್ಲಿ ಸಮಸ್ಯೆಗಳೇ ಸಮಸ್ಯೆಗಳು. ಹಾಗೆ ನೋಡಿದರೆ, ನಾವು ಸಮಸ್ಯೆಗಳಲ್ಲಿಯೇ ಹುಟ್ಟಿ, ಸಮಸ್ಯೆಗಳಲ್ಲಿಯೇ ಜೀವಿಸಿ, ಕೊನೆಗೆ ಸಮಸ್ಯೆಗಳೊಟ್ಟಿಗೇ ಸಾಯುವುದು. ಅಲ್ಲಲ್ಲಾ... ಬಹುಶಃ ನಾವು ಹುಟ್ಟುತ್ತೇವೆ ಎಂಬ ವಿಷಯವೇ ತಂದೆ ತಾಯಿಗೆ ವಿವಿಧ ಬಗೆಯ ಹೇಳಿಕೊಳ್ಳಲು ಬರುವ ಅಥವಾ ಬಾರದ ಸಮಸ್ಯೆಗಳನ್ನು ನೀಡಿರಬಹುದಲ್ಲವೇ? ಇನ್ನು, ನಾವು ತಾಯಿಯ ಗರ್ಭದಲ್ಲಿದ್ದಾಗ ಅವಳಿಗೂ ಮತ್ತು ನಮಗೂ ವಿವಿಧ ಬಗೆಯ ಸಮಸ್ಯೆಗಳು ಉದ್ಭವವಾಗಿರಬಹುದು. ಎಷ್ಟೋ ಜನರಿಗೆ ಗೊತ್ತಿರಲಿಕ್ಕಿಲ್ಲ, ಒಂಬತ್ತು ತಿಂಗಳ ನಂತರ ಅಥವಾ ಅದಕ್ಕೂ ಮೊದಲೇ ತಾವು ತಾಯಿಯ ಗರ್ಭದಿಂದ ಹೊರಬರುವುದೇ ಒಂದು ಸಮಸ್ಯೆ ಆಗಿರಬಹುದೆಂದು. ಹುಟ್ಟಿದ ಮಗು ಕೂಡಲೆ ಅಳದಿದ್ದರೆ ಒಂದು ಸಮಸ್ಯೆ, ಇನ್ನು ಅತಿಯಾಗಿ ಒಂದೇ ಸಮನೇ ಅತ್ತರೆ ಇನ್ನೊಂದು ಸಮಸ್ಯೆ!!!.
ನಾವು ಶಾಲೆಗೆ ಹೋಗಿ, ಓದಿ, ಬರೆದು, ಬೆಳೆದು ದೊಡ್ಡವರಾಗುವಾಗಿನ ಸಮಸ್ಯೆಗಳು ಅಗಣಿತ. ಅದೇ ರೀತಿ ನೌಕರಿ, ವ್ಯಾಪಾರ, ವ್ಯವಹಾರ, ಮದುವೆ ಮತ್ತೆ ನಮಗೆ ಮಕ್ಕಳು, ಮತ್ತೆ ಅವರು ಶಾಲೆಗೆ ಹೋಗಿ ಓದಿ ಬರೆದು ಬೆಳೆದು ದೊಡ್ಡವರಾಗುವಾಗಿನ, ನಂತರ ಅವರ ಉದ್ಯೋಗ, ಅವರ ಮದುವೆಯ ಸಮಸ್ಯೆ...ಹೀಗೆ ಸಮಸ್ಯೆಗಳೇ ಸಮಸ್ಯೆಗಳು. ಕೊನೆಗೆ ನಮ್ಮ ಇಹಲೋಕ ಯಾತ್ರೆ ಮುಗಿಸಿದಾಗಲೂ ಸಮಸ್ಯೆಗಳು ಮುಗಿಯುತ್ತವೆ ಎಂಬ ಗ್ಯಾರಂಟಿ ಇಲ್ಲ. ಅಂತ್ಯಕ್ರಿಯೆಯ ಮೊದಲಿನ ಸಮಸ್ಯೆಗಳು ಒಂದೆಡೆಯಾದರೆ ಅಂತ್ಯಕ್ರಿಯೆಯ ನಂತರದ ಮನೆಮಂದಿಯ/ಅವಲಂಬಿತರ ಸಮಸ್ಯೆಗಳು ಬೇರೆ. ಆಸ್ತಿ, ಹಣ, ಹೇರಳವಾಗಿ ಸಂಗ್ರಹಿಸಿಟ್ಟು ವಿಲ್ಲು ಗಿಲ್ಲು ಏನೂ ಮಾಡಿಡದೇ ಹೋಗಿದ್ದರೆ ಆ ಆಸ್ತಿ, ಕೂಡಿಟ್ಟ ಸಂಪತ್ತಿನ ಹಂಚಿಕೆಯ ಸಮಸ್ಯೆ. ಇನ್ನು ಆಸ್ತಿ, ಹಣ,ಬಂಗಾರ ಏನನ್ನೂ ಕೂಡಿಡದೇ ನೆಗೆದಿದ್ದರೆ ಹಿಂದೆ ಉಳಿದವರಿಗೆ ತಮ್ಮ ಮುಂದಿನ ಉಪಜೀವನದ ಸಮಸ್ಯೆ. ಅಲ್ಲವೇ?
ಹಾಗೆ ನೋಡಿದರೆ, ನಮ್ಮಲ್ಲಿ ಕೆಲವರಿಗೆ ಬೆಳಿಗ್ಗೆ ಹಾಸಿಗೆಯಿಂದ ಏಳುವುದೇ ಒಂದು ರೀತಿಯಲ್ಲಿ ಸಮಸ್ಯೆ. ಇನ್ನು ಎದ್ದಾದಮೇಲೇ ಅನಿವಾರ್ಯವಾಗಿ ಮಾಡಬೇಕಾದ ಪ್ರಾಥರ್ವಿಧಿ ಪ್ರತಿದಿನ ಸರಾಗವಾಗಿ ಆಗಲಾರದ ಸಮಸ್ಯೆಗಳಿಂದ ಪ್ರಾರಂಭಗೊಂಡು ರಾತ್ರಿ ಉಂಡು ಮಲಗುವ ತನಕ ಸಮಸ್ಯೆಗಳೇ ಸಮಸ್ಯೆಗಳು ಎದುರಾಗುತ್ತವೆ. ಮೇಲಾಗಿ ಗಾಢ ನಿದ್ರೆಯಲ್ಲಿದ್ದಾಗ ಮಾತ್ರ ನಮ್ಮ ಸಮಸ್ಯೆಯ ಅರಿವು ನಮಗೆ ಇರುವುದಿಲ್ಲ. ಹಾ಼, ನಾವು ಹೊಡೆಯುವ ಜೋರಾದ ಗೊರಕೆ ಪ್ರಾಯಶಃ ಇತರರಿಗೆ ಸಮಸ್ಯೆಯಾಗಬಹುದೇನೋ. ಇನ್ನು, ರಾತ್ರಿ ಹಾಸಿಗೆಯಲ್ಲಿ ಮಲಗಿದಾಗ ನಿದ್ದೆಯೇ ಬಾರದಿದ್ದರೆ? ಆ ಸಮಸ್ಯೆಯ ಕಥೆ 'ಬಲ್ಲವನೇ ಬಲ್ಲ ಬೆಲ್ಲದ ರುಚಿಯ' ಎಂಬಂತಹದ್ದು. ಅದಕ್ಕೇ ಅಂದಿದ್ದು, 'ಸಮಸ್ಯೆ ಇಲ್ಲದ ಮನೆಯ ಸಾಮಾನು ತಾ' ಎಂದು.
ಹೌದು ಸ್ವಾಮಿ, ಸಮಸ್ಯೆಗಳು ಯಾರಿಗೆ ಇರುವುದಿಲ್ಲ/ಬರುವುದಿಲ್ಲ? ಸಮಸ್ಯೆಗಳು ಮನುಷ್ಯನಲ್ಲದೇ ಕಲ್ಲಿಗಾ ಬರುತ್ತೆ?...ಮನುಷ್ಯ ಎಂದಮೇಲೆ ಸಮಸ್ಯೆಗಳು ಬಂದೇ ಬರುತ್ತವೆ. ಸ್ವಲ್ಪ ಹೊಂದಿಕೊಂಡು ಹೋಗಬೇಕು ಎಂಬುದು ಪಲಾಯನದ ಮಾತಾದೀತು. ಈ ಸಮಸ್ಯೆಗೆ ಹೊಂದಿಕೊಂಡು ಹೋಗುವುದು ಎಂದರೇನು? ಸಮಸ್ಯೆ ಉದ್ಭವಿಸಿದ್ದು/ಎದುರಾದದ್ದು/ಬಂದಿದ್ದು ಕಂಡರೂ ಕಾಣದಂತೆ ಇರುವುದೇ? ನಾವು ಎದುರಿಸುವ ಸಮಸ್ಯೆಯನ್ನು ಸಮಸ್ಯೆಯೇ ಅಲ್ಲ ಎಂದು ಜಾಣ ಕುರುಡುತನ ವ್ಯಕ್ತಪಡಿಸುವುದೇ? ಅಥವಾ ಬಂದ ದಾರಿಗೆ ಸುಂಕವಿಲ್ಲ ಎಂದು ಸಮಸ್ಯೆಯು ಬಂದ ದಾರಿಯಲ್ಲಿ ತನ್ನಷ್ಟಕ್ಕೆ ತಾನೇ ವಾಪಸ್ಸು ಹೋಗುವುದೆಂದು (ಬಗೆ ಹರಿಯುವುದೆಂದು) ತಿಳಿದು ಸುಮ್ಮನಿದ್ದು ಬಿಡುವುದೇ?
ನಮ್ಮ ತೈತ್ತಿರೀಯ ಉಪನಿಷತ್ತು ಹೇಳುತ್ತದೆ 'ಅತಿಥಿ ದೆವೋ ಭವ' ಎಂದು. ಹಾಗಿದ್ದಮೇಲೆ, ಸಣ್ಣದೋ ಅಥವಾ ದೊಡ್ಡದೋ ಸಮಸ್ಯೆಯೊಂದು ನಮಗೆ ಎದುರಾದರೆ ಅದನ್ನು 'ಅತಿಥಿ' ಎಂದು ಅರಿಯಬೇಕು. ಅ-ತಿಥಿ ಅಂದರೆ, ತಿಥಿ ಇಲ್ಲದೇ, ಕರೆಯದೇ ಅನಿರೀಕ್ಷಿತವಾಗಿ ಬರುವವರು ಎಂದರ್ಥ. ನಮ್ಮ ಸಮಸ್ಯೆಗಳೂ ಅದೇರೀತಿ ಕರೆಯದೇ ಅನಿರೀಕ್ಷಿತವಾಗಿ ಬರುವವು ಅಲ್ಲವೇ? ಹಾಗೆ ಬಂದ ಸಮಸ್ಯೆ ಎಂಬ ಅತಿಥಿಗೆ ಅದರ ಯೋಗ್ಯತೆಗೆ ಅನುಗುಣವಾಗಿ ಆದರಾತಿಥ್ಯ/ಉಪಚಾರ ಮಾಡಬೇಡವೇ? ಇಲ್ಲದಿದ್ದರೆ ಬಂದ ಅತಿಥಿಗೆ ಅವಮಾನ ಮಾಡಿದಂತಲ್ಲವೇ? ಹಾಗೆಯೇ, ಬಂದ ಎಲ್ಲಾ ಸಮಸ್ಯೆ ಎಂಬ ಅತಿಥಿಗಳು ತನಗೆ ಯಜಮಾನರು ಸರಿಯಾದ ಆತಿಥ್ಯ ನೀಡದೇ ಅಂದರೆ ಪರಿಹಾರ ನೀಡದೇ ಕಡೆಗಣಿಸಿದರೆಂದು ಸಿಟ್ಟಿಗೆದ್ದು ನಮ್ಮಲ್ಲಿಯೇ ಠಿಕಾಣಿ ಊರಿದರೆ ಮುಂದೇನು ಗತಿ!!!.
ನಮ್ಮ ಸಮಸ್ಯೆ ಏನೆಂದರೆ, ನಾವು ಎದುರಿಸುವ ಸಮಸ್ಯೆಯನ್ನು ಸಮಸ್ಯೆ ಎಂದು ಪರಿಗಣಿಸದೇ ಇರುವುದು. ಉದಾಹರಣೆಗೆ ವಸ್ತು ಒಂದು ಮನೆಯಲ್ಲಿದ್ದು ಅದರ ಅವಶ್ಯಕತೆ ಇದ್ದಾಗ ನಮಗೆ ಸಿಗದೇ ಹೋಗುವುದು, ಮನೆಯ ಮಗು ಹೋಮ ವರ್ಕ್ ಮಾಡದೇ ಇರುವುದು, ಬೆಳೆದು ನಿಂತ ಮಗ/ಮಗಳು ಪಾಲಕರ ಮಾತು ಕೇಳದೇ ಇರುವುದು ಅಥವಾ ಅತಿಯಾದ ಆನ್ ಲೈನ್ ಗೇಮುಗಳಲ್ಲಿ ನಿರತವಾಗಿರುವುದು, ದುಶ್ಚಟಗಳಿಗೆ ಒಳಗಾಗಿರುವುದು, ಯಜಮಾನ ತನ್ನ ಮನೆಯ ಜವಾಬ್ದಾರಿ ನಿರ್ವಹಿಸದೇ ಇರುವುದು, ಮನೆಯಲ್ಲಿದ್ದ ಅನೇಕ ವಸ್ತು ಸಾಮಾನುಗಳು ಕೆಟ್ಟಿದ್ದರೂ ರಿಪೇರಿ ಮಾಡಿಸದೇ ಇರುವುದು, ದಿನವೆಲ್ಲ ಕುಡಿತದಲ್ಲೇ ಕಳೆಯುವುದು, ಮನೆಯಲ್ಲಿ ಪತ್ನಿ ಇದ್ದರೂ ಇತರರ ಸಂಗದ ಚಪಲ, ಗ್ರಹಿಣಿಯರ ಅತಿಯಾದ ಆನ್ ಲೈನ್ ವಸ್ತುಗಳ ಖರೀದಿ (ಕೊಳ್ಳುಬಾಕತನ), ಗಂಡನ ನಡತೆಯನ್ನು ಸಂಶಯದಿಂದ ಕಾಣುವುದು, ಯಾವಾಗಲೂ ತವರು ಮನೆಯಲ್ಲಿಯೇ ಇರಲು ಬಯಸುವುದು ಅಥವಾ ಯಾವಾಗಲೂ ಹೊರಗೇ ತಿರುಗಲು ಬಯಸುವುದು, ಮನೆಯ ಜವಾಬ್ದಾರಿ ನಿರ್ವಹಿಸಲು ನಿರಾಕರಿಸುವುದು, ಪತಿಯ ಬಗ್ಗೆ ಕೀಳರಿಮೆ ಮುಂತಾದವನ್ನು ನಾವು ಸಮಸ್ಯೆಗಳೇ ಅಲ್ಲ ಎಂದು ಅಂದುಕೊಳ್ಳುವುದು.
ನಮ್ಮ ಸಮಸ್ಯೆಗಳನ್ನು ಪರಿಹರಿಸಲು ನಾವು ಮಾಡಬೇಕಾದ ಮೊದಲ ಕೆಲಸವೆಂದರೆ, ಬಂದ ಸಮಸ್ಯೆಯನ್ನು ಸಮಸ್ಯೆ ಎಂದು ಅರಿತು ಒಪ್ಪಿಕೊಳ್ಳುವುದು. ಅರಿವೇ ಗುರು ಅಲ್ಲವೇ?
ನಾವು ಒಂದು ಸಮಸ್ಯೆಯನ್ನು ಸಮಸ್ಯೆ ಎಂದು ಒಪ್ಪಿಕೊಂಡ ನಂತರ ಆ ಸಮಸ್ಯೆಯ ಮೂಲವನ್ನು ಅರಿಯುವುದು/ಹುಡುಕುವುದು ನಾವು ಮಾಡಬೇಕಾದ ಎರಡನೇಯ ಕೆಲಸ. ಎಷ್ಟೋಸಲ, ನಮಗೆ ಕಾಣುವ ಸಮಸ್ಯೆ ಒಂದಾದರೆ ಅದರ ಮೂಲ ಬೇರೇನೇ ಆಗಿರುತ್ತದೆ. ಆ ಮೂಲ ಸಮಸ್ಯೆಯನ್ನು ಪತ್ತೆಹಚ್ಚಿ ಅದರ ಉಪಾಯವನ್ನು ಮಾಡದೇ ಕೇವಲ ಮೇಲೆ ಕಂಡ ಸಮಸ್ಯೆಯ ಉಪಾಯ ಮಾಡುವುದು ಒಂದು ರೀತಿಯಲ್ಲಿ ಕೇವಲ ಗಿಡದ ರೆಂಬೆ ಕೊಂಬೆ ಮುರಿದಂತೆ, ಅದು ಒಂದು ತಾತ್ಕಾಲಿಕ ಪರಿಹಾರ. ಗಿಡ ಮತ್ತೆ ಚಿಗುರುತ್ತದೆ. ಆ ಸಮಸ್ಯೆಎಂಬ ಗಿಡವನ್ನು ಬೇರು ಸಮೇತ ಕೀಳದೆ ಹೋದರೆ ಆ ತರಹದ ಸಮಸ್ಯೆಗಳು ಮೇಲಿಂದ ಮೇಲೆ ಎದುರಿಸಬೇಕಾಗುತ್ತದೆ. ಸಮಸ್ಯೆಯ ಶಾಶ್ವತ ಉಪಾಯಕ್ಕೆ ನಾವು ಮಾಡಬೇಕಾದ ಕೆಲಸವೆಂದರೆ, ಅದರ ಮೂಲವನ್ನು ಹುಡುಕಿ ಪತ್ತೆ ಹಚ್ಚಿ ಆ ಮೂಲ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುವುದು. ಉದಾಹರಣೆಗೆ ಹೇಳುವುದಾದರೆ, ಒಬ್ಬ ವ್ಯಕ್ತಿಗೆ ಮೇಲಿಂದ ಮೇಲೆ ತಲೆ ಶೂಲೆ ಬರುತ್ತಿದ್ದರೆ, ಪ್ರತಿಸಲ ನೋವು ನಿವಾರಕ ಮಾತ್ರೆ ಸೇವಿಸುವುದು ತಾತ್ಕಾಲಿಕ ಪರಿಹಾರವೇ ಹೊರತು ಸಮಸ್ಯೆಯ ಶಾಶ್ವತ ನಿವಾರಣೆ ಆಗಲಾರದು. ಈ ತಲೆ ಶೂಲೆಗೆ ಮೂಲ ಕಾರಣ ಹೊಟ್ಟೆಯ ಅಜೀರ್ಣ, ಕಣ್ಣಿನ ದೃಷ್ಟಿ ದೋಷ, ರಕ್ತದೊತ್ತಡದ ಏರುಪೇರು, ಮನಸ್ಸಿನ ವಿವಿಧ ಸಮಸ್ಯೆಗಳು ಅಥವಾ ಸ್ತ್ರೀಯರಲ್ಲಿಯ ಮಾಸಿಕದ ಸಮಸ್ಯೆ ಹೀಗೆ ಅನೇಕ ಕಾರಣಗಳಲ್ಲಿ ಯಾವುದೋ ಒಂದಿರಬಹುದು. ಆ ಮೂಲ ಕಾರಣ ಅಥವಾ ಸಮಸ್ಯೆಯನ್ನು ಪತ್ತೆ ಹಚ್ಚಿ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿದರೆ ಆ ವ್ಯಕ್ತಿಯ ತಲೆ ಶೂಲೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ನಮ್ಮ ಹೋಮಿಯೋಪಥಿ ವೈದ್ಯಕೀಯ ಶಾಸ್ತ್ರ ಪ್ರತಿಪಾದಿಸುತ್ತದೆ.
ನಡೆದು ಹೋಗುವಾಗ ಹಾದಿಯಲ್ಲಿ ಕಾಲಿಗೆ ಚುಚ್ಚಿದ ಮುಳ್ಳಿನಿಂದ ಆ ಸಮಸ್ಯೆಗೆ ಮೂಲಕಾರಣ ಅಂದಿನ ಭ್ರಷ್ಟ ಮತ್ತು ದುರಾಡಳಿತಗಾರ ಮಗಧದ ರಾಜ ಧನನಂದ ಎಂದು ಅರಿತು ಆಮೂಲಾಗ್ರ ಪರಿಹಾರ ಕಂಡುಕೊಂಡ ಆಚಾರ್ಯ ಚಾಣಕ್ಯನ ಉದಾಹರಣೆಯನ್ನು ನಮ್ಮ ಇತಿಹಾಸದಿಂದ ನಾವು ತಿಳಿದುಕೊಳ್ಳಬಹುದು.
ಮೇಲ್ಮೈ ಮೇಲೆ ಕಂಡ ಒಂದು ಸಮಸ್ಯೆಯ ಮೂಲಕಾರಣ ಹುಡುಕಲು ನಮ್ಮ ಇಂದಿನ ತಾಂತ್ರಿಕ ಸಾಧನ Why-Why Analysis ಎಂಬುದು ಸಹಕಾರಿ. ನಮಗೆ ಯಾವುದೇ ಸಮಸ್ಯೆ ಎದುರಾದಲ್ಲಿ, ಆ ಸಮಸ್ಯೆ ಏಕೆ ಎದುರಾಯಿತು ಎಂದು ವಿಚಾರಿಸುತ್ತಾ ಅಥವಾ ಪ್ರಶ್ನಿಸುತ್ತಾ ಹೋಗುವುದು. ಹೀಗೆ ನಾವು ನಾಲ್ಕಾರು ಬಾರಿ ಮಾಡುವುದರಲ್ಲಿ ನಮ್ಮ ಸಮಸ್ಯೆಯ ಮೂಲವನ್ನು ಹುಡುಕಿ ಪತ್ತೆಹಚ್ಚಬಹುದು. ಉದಾಹರಣೆಗೆ, ಒಬ್ಬ ವ್ಯಕ್ತಿ ರಸ್ತೆ ನಿಯಮ ಮುರಿದು ಕೆಂಪು ದೀಪ ಇದ್ದಾಗಲೂ ಗಾಡಿ ನಿಲ್ಲಿಸದೇ ಓಡಿಸಿ ಪೋಲಿಸರ ಕೈಯಲ್ಲಿ ಸಿಕ್ಕುಬಿದ್ದಾಗ, ನೀನು ಕೆಂಪು ದೀಪ ಇದ್ದಾಗಲೂ ಗಾಡಿ ಏಕೆ ಓಡಿಸಿದೆ ಎಂಬ ಪ್ರಶ್ನೆಗೆ ಅವನ ಉತ್ತರ ನೌಕರಿಗೆ ತಡವಾಗಿದೆ ಎಂಬುದು. ನೌಕರಿಗೆ ತಡ ಏಕೆ ಆಯಿತು ಎಂದರೆ, ಬೆಳಗ್ಗೆ ಏಳಲು ತಡವಾಯಿತು. ಬೆಳಗ್ಗೆ ಏಳಲು ಏಕೆ ತಡವಾಯಿತು ಎಂದರೆ, ಗಡಿಯಾರ ಅಲಾರಾಂ ಹೊಡೆಯಲಿಲ್ಲ. ಗಡಿಯಾರ ಅಲಾರಾಂ ಏಕೆ ಹೊಡೆಯಲಿಲ್ಲ ಎಂದರೆ, ಗಡಿಯಾರದ ಬ್ಯಾಟರಿ ಸೆಲ್ ತೀರಿದ್ದರೂ ಹೊಸ ಸೆಲ್ ಹಾಕಿಲ್ಲ ಎಂಬುದು. ಹೊಸ ಸೆಲ್ ಏಕೆ ಹಾಕಿಲ್ಲ ಎಂಬ ಪ್ರಶ್ನೆಗೆ ಉತ್ತರ ನಾನು ಮರೆತೆ ಎಂಬುದು. ಅಂದರೇ, ಆ ವ್ಯಕ್ತಿ ರಸ್ತೆ ನಿಯಮ ಪಾಲನೆ ಮಾಡದೇ ಇರುವುದಕ್ಕೆ ಮೂಲ ಕಾರಣ ಅವನ ಮರೆಗೂಳಿತನ ಎಂಬುದು.
ಒಂದೊಮ್ಮೆ ನಾವು ಎದುರಿಸುತ್ತಿರುವ ಸಮಸ್ಯೆಯ ಮೂಲವನ್ನು ಅರಿತಾದಮೇಲೆ ಅದನ್ನು ಪರಿಹರಿಸಲು ಮಾಡಬೇಕಾದ ಕೆಲಸವೆಂದರೆ ಈ ಸಮಸ್ಯೆಯ ನಿವಾರಣೆಗೆ ಇರುವ ಎಲ್ಲ ಸಂಭಾವ್ಯ ಪರಿಹಾರಗಳನ್ನು ವಿಚಾರಮಾಡಿ ಪಟ್ಟಿ ಮಾಡುವುದು. ಮುಂದೆ, ಆ ಎಲ್ಲಾ ಪರಿಹಾರಗಳಲ್ಲಿ ಯಾವುದು ಅನುಷ್ಠಾನಕ್ಕೆ ಉತ್ತಮ ಉಪಾಯ ಎಂದು ಅರಿತು ಅದನ್ನು ಅಳವಡಿಸಿಕೊಳ್ಳುವುದು. ಹೀಗೆ ಉತ್ತಮ ಉಪಾಯವನ್ನು ಅಳವಡಿಸಿಕೊಂಡಾಗ ನಮ್ಮ ಸಮಸ್ಯೆಗೆ ಪೂರ್ಣ ಪರಿಹಾರ ಸಿಗದೇ ಇರುವ ಸಾಧ್ಯತೆ ಇರಬಹುದು. ಆಗ, ನಾವು ಯೋಚಿಸಿದ ಉಪಾಯವನ್ನು ಪೂರ್ಣ ಅನುಷ್ಠಾನಮಾಡುವಲ್ಲಿನ ತೊಂದರೆಗಳು/ಕಡಿಮೆಗಳನ್ನು ಅರಿತು ಅವನ್ನು ಸರಿಪಡಿಸಿದಲ್ಲಿ ನಮ್ಮ ಸಮಸ್ಯೆಗೆ ಪೂರ್ಣ ಪರಿಹಾರ ಕಂಡುಕೊಳ್ಳುವಲ್ಲಿ ಸಂಶಯವಿಲ್ಲ. ಇದನ್ನು ಇಂಜಿನಿಯರಿಂಗ್ ಭಾಷೆಯಲ್ಲಿ PDCA (Plan Do Check and Act) ಎಂದು ಹೇಳುವರು. ನಮ್ಮ ಕೈಗಾರಿಕೆಗಳು ಎದುರಿಸುವ ತಮ್ಮ ವಿವಿಧ ಬಗೆಯ ಸಮಸ್ಯೆಗಳನ್ನು ಪರಿಹರಿಸಲು ಉಪಯೋಗಿಸುವ ತಂತ್ರ ಇದೇ ರೀತಿಯದು.
ಅದೆಲ್ಲ ಸರೀ ಆದರೇ... ನಮ್ಮ ಸಮಸ್ಯೆ ಎಂದರೆ ನಾವು ಎದುರಿಸುವ ಸಮಸ್ಯೆಯನ್ನು ಸಮಸ್ಯೆ ಎಂದು ತಿಳಿಯದೇ ಇರುವುದಾಗಿದೆ. ಅಲ್ಲವೇ?
-ಡಾ. ಜಯಂತ ಕಿತ್ತೂರ
ಸಮತೋಲನ
ಪ್ರತ್ಯುತ್ತರಅಳಿಸಿFine
ಅಳಿಸಿGreat article with amazing humor .. nice to see the solution too!
ಪ್ರತ್ಯುತ್ತರಅಳಿಸಿVery insightful. One needs to Focus on solution and just on problems.. as pointed out well after root cause analysis
ಪ್ರತ್ಯುತ್ತರಅಳಿಸಿಸಮಸ್ಯೆಗೆ ಸಮಸ್ಯೆಯೇ ಪರಿಹಾರ ಅಲ್ಲವೇ ಸರ್ 😄😄
ಪ್ರತ್ಯುತ್ತರಅಳಿಸಿNice Article sir, good correlation with Atithi devo bhava.
ಪ್ರತ್ಯುತ್ತರಅಳಿಸಿJayant, very nice , eloborate and humorous article on samasya, real thing is the last sentence of your article you mentioned which is punching and true
ಪ್ರತ್ಯುತ್ತರಅಳಿಸಿಒಳ್ಳೆಯ ಲೇಖನ. ಸಮಸ್ಯೆಯ ಸಮಸ್ಯೆ, ಮೂಲ? ಸಮಸ್ಯೆಗೆ ಪರಿಹಾರ?
ಪ್ರತ್ಯುತ್ತರಅಳಿಸಿ