ಚಾಳೀಸ್ ದೇತೊ
ಬೆಳಗಾವಿಯ ಪ್ರತಿಷ್ಠಿತ ಜಿ.ಐ.ಟಿ. ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲನ ಪಾತ್ರದಲ್ಲಿ, ಶತಮಾನದ ಮಹಾಮಾರಿ ಕೋವಿಡ್ ನಂತರದ ದಿನಗಳಲ್ಲಿ, ಕಾರ್ಯನಿಮಿತ್ತ ಅನೇಕ ಸಲ ಬೆಂಗಳೂರು ಮತ್ತೂ ಇತರೆಡೆ ಪ್ರವಾಸಮಾಡುವ ಅನಿವಾರ್ಯತೆ ಇರುತಿತ್ತು. ಪ್ರತೀಸಲವೂ ನಮ್ಮ ಕಾಲೇಜಿನ ಕಾರಿನ ನಿಗದಿತ ಡ್ರೈವರ್ ನಮ್ಮ ಮನೆಯಿಂದ ರೈಲು/ವಿಮಾನ ನಿಲ್ದಾಣಕ್ಕೆ ಬಿಡುವ ಮತ್ತೂ ನಿಲ್ದಾಣದಿಂದ ಮನೆಗೆ ತಲುಪಿಸುವ ಕಾರ್ಯ ತಪ್ಪದೇ ವಿಧೇಯತೆಯಿಂದ ನಿರ್ವಹಿಸುತ್ತಿದ್ದ. ಅಂದು ರಾತ್ರಿ ೯ ಘಂಟೆಗೆ, ಹೊಸದಾಗಿ ಪ್ರಾರಂಭವಾದ ಬೆಳಗಾವಿ - ಬೆಂಗಳೂರು ಎಕ್ಸಪ್ರೆಸ್ ರೈಲುಗಾಡಿ ಹಿಡಿಯಲು ರೈಲ್ವೆ ಸ್ಟೇಶನ್ ಗೆ ಹೋಗುವದಿತ್ತು ಆದರೆ ಪ್ರತಿಸಾರಿ ಸ್ಟೇಶನ್ ಗೆ ಬಿಟ್ಟುಬರಲು ಬರುತ್ತಿದ್ದ ಕಾರಿನ ಡ್ರೈವರ್ ಸಂಜೆ ೮ ಘಂಟೆಗೆ ಫೋನ್ ಮಾಡಿ ತನ್ನ ಮಗನು ಸಂಜೆ ಆಟವಾಡುವಾಗ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದು ಅವನನ್ನು ಕರೆದುಕೊಂಡು ಆಸ್ಪತ್ರೆಗೆ ತೆರಳಿರುವದಾಗಿ ಹಾಗೂ ತನ್ನ ಬದಲು ಬೇರೆ ಡ್ರೈವರ್ ನ ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತಿರುವದಾಗಿ ತಿಳಿಸಿದನು. ಬದಲಿ ಡ್ರೈವರ್ ನ ವ್ಯವಸ್ಥೆ ಮಾಡುವುದನ್ನು ನಿಲ್ಲಿಸಿ ಮಗನ ಆರೈಕೆಯ ಕಡೆಗೆ ಗಮನಕೊಡೆಂದು ಹೇಳಿ ಫೋನ್ ಕೆಳಗಿಟ್ಟೆ. ನನ್ನ ಫೋನ್ ಸಂಭಾಷಣೆಯನ್ನು ಆಲಿಸಿದ ಮುದ್ದಿನ ಮಗಳು ಅದೇ ತಾನೆ ನಾವು ಖರೀದಿಸಿದ ಹೊಸ SUV ಕಾರಿನಲ್ಲಿ ನನ್ನನ್ನು ರೈಲು ನಿಲ್ದಾಣಕ್ಕೆ ಬಿಟ್ಟು ಬರಲು ತಯಾರಾದಳು. ನನ್ನ ಶ್ರೀಮತಿಯಾದರೋ ರಾತ್ರಿ ಹೊತ್ತು ಹೆಣ್ಣು...