ಖಂಡೇ ನವಮಿಯ ಆಯುಧ ಪೂಜೆ



ನವರಾತ್ರಿಯ ಖಂಡೆ ನವಮಿ ಆಯುಧ ಪೂಜೆಯ ದಿನ.
ಇಂದಿನ ದಿನ ಎಲ್ಲರೂ ತಮ್ಮ ತಮ್ಮ ಕಸುಬು, ಉದ್ಯೋಗದಲ್ಲಿ ಬಳಸುವ ವಿವಿಧ ಆಯುಧಗಳ ಪೂಜೆ ಮಾಡಿ ಅವುಗಳಿಗೆ ಗೌರವ ತೋರಿಸುವುದು ಒಂದು ಧಾರ್ಮಿಕ ವಾಡಿಕೆ.

ನಮ್ಮ ಮನೆತನದ ಕಸುಬು ಶಿಕ್ಷಣ ಅಂದರೆ ಅಧ್ಯಯನ ಮತ್ತು ಅಧ್ಯಾಪನ. ನಮ್ಮ ತಂದೆಯವರು ಅಷ್ಟೇನು ಸಂಪ್ರದಾಯಸ್ಥರಲ್ಲ ಆದರೆ ನಮ್ಮ ತಾಯಿ ಧಾರ್ಮಿಕ ಸ್ವಭಾವದವಳು. ಹೀಗಾಗಿ ನಮ್ಮ ಮನೆಯಲ್ಲಿ ಯಾವುದೇ ಹಬ್ಬದ ದಿನದಂದು ತಂದೆಯವರಿಂದ ದೇವರ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತಿರಲಿಲ್ಲ ಆದರೆ ಅಮ್ಮ ಮಾತ್ರ ಚೆನ್ನಾಗಿ ವಿವಿಧ ಬಗೆಯ ಭಕ್ಷ್ಯಗಳನ್ನು ಮಾಡುತ್ತಿದ್ದರು. ಮಕ್ಕಳಲ್ಲಿ ಯಾರೋ ಒಬ್ಬರಿಂದ ಊಟಕ್ಕೂ ಮೊದಲು ದೇವರಿಗೆ ನೈವೇದ್ಯ ಮಾಡಿಸುತ್ತಿದ್ದರು ಮತ್ತು ಸಂದರ್ಭೋಚಿತ ಹಲವು ದಾಸರ ಪದಗಳನ್ನು ಹಾಡುತ್ತಿದ್ದರು.

ಎಲ್ಲೆಡೆಯಂತೆ ನಮ್ಮ ಶಾಲೆಗೂ ವರ್ಷದಲ್ಲಿ ಎರಡು ಬಾರಿ ರಜಾದಿನಗಳು. ವರ್ಷವಿಡೀ ಓದಿ ವಾರ್ಷಿಕ ಪರೀಕ್ಷೆ ಬರೆದ ನಂತರ ಬೇಸಿಗೆಯ ರಜೆ. ಆ ಸಮಯದಲ್ಲಿ ನಮ್ಮ ಗೆಳೆಯರಲ್ಲಿ ಅನೇಕರು ಪ್ರವಾಸಕ್ಕೆಂದು ಬೇರೆ ಊರಿಗೆ ಹೋಗುವವರು ಇಲ್ಲ ದಿನವಿಡೀ ಮನೆಯ ಒಳಗೆ ಹೊರಗೆ ಆಟದಲ್ಲಿ ಸಮಯ ಕಳೆಯುತ್ತಿದ್ದರು.

ನಮ್ಮದು ಐದು ಮಕ್ಕಳ ದೊಡ್ಡ ಕುಟುಂಬವಾದಕಾರಣ ಒಬ್ಬರಿಗೆ ರಜೆ ಇದ್ದರೆ ಇನ್ನೊಬ್ಬರಿಗೆ ಪರೀಕ್ಷೆಯ ಸಮಯ ಅಥವಾ ತಂದೆಯವರಿಗೆ ವಿಶ್ವವಿದ್ಯಾಲಯದ ಪರೀಕ್ಷೆ ನಡೆಸುವ ಜವಾಬ್ದಾರಿ. ಹೀಗಾಗಿ ಮನೆಯ ಎಲ್ಲರೂ ಬೇಸಿಗೆಯ ಪ್ರವಾಸ ಹೋದ ನೆನಪಿಲ್ಲ. ಹಾಗಂತ ಇತರರ ಮಕ್ಕಳಂತೆ ದಿನವಿಡೀ ಆಟದ ಭಾಗ್ಯ ನಮ್ಮ ಮನೆಯ ಸಂಪ್ರದಾಯವಾಗಿರಲಿಲ್ಲ.

ವಾರ್ಷಿಕ ಪರೀಕ್ಷೆ ಮುಗಿದ ಮರುದಿನದಿಂದ ಕೆಲವು ದಿನ ಮುಂದಿನ ತರಗತಿಯ ಪಠ್ಯ ಪುಸ್ತಕಗಳ ಸಂಗ್ರಹಿಸುವ ಕಾರ್ಯ. ಅದಾದ ನಂತರ ಅವುಗಳ ಅಧ್ಯಯನ ಪ್ರಾರಂಭ. ಯಾವುದೇ ವಿಷಯ ತಿಳಿಯದಿದ್ದರೆ ಅಕ್ಕ ಅಣ್ಣಂದಿರ ಸಹಾಯ ಪಡೆಯುವುದು.ಅದೂ ಅಸಮರ್ಪಕ ಎನಿಸಿದರೆ ತಾಯಿಯ ಮಾರ್ಗದರ್ಶನ. ಒಟ್ಟಾರೆ ಬೇಸಿಗೆಯ ರಜೆಯಲ್ಲಿ ಕನಿಷ್ಠ ಅರ್ಧ ಪಠ್ಯವನ್ನು ಓದಿ ಮುಗಿಸುವುದು ಜೊತೆಗೆ ಯಾವುದಾದರೂ ಒಂದು ಹವ್ಯಾಸದ ಚಟುವಟಿಕೆಯಲ್ಲಿ ತೊಡಗಿರುವುದು ಮತ್ತು ಕೇವಲ ಸಂಜೆ ಬೇಸಿಗೆಯ ಸೂರ್ಯನ ತಾಪ ಇಳಿದ ಮೇಲೆ ಆಟಕ್ಕೆ ಹೊರಗೆ ಹೊಗುವದು. ಇದು ನಮ್ಮ ಮನೆಯ ಪಧ್ಧತಿ.ನನ್ನ ಅಣ್ಣಂದಿರು, ಅಕ್ಕಂದಿರು ಬಹಳ ವಿಧೇಯತೆಯಿಂದ ಮನೆಯ ನಿಯಮದಂತೆ ಕೇವಲ ಸಂಜೆ ಮಾತ್ರ ಆಟಕ್ಕೆ ಹೋಗುವವರು. ಹೀಗಾಗಿ ನಮ್ಮ ಮನೆಯಲ್ಲಿ ಬೇಸಿಗೆಯ ರಜಾ ದಿನಗಳಲ್ಲೂ ಒಂದು ತರಹದ ಅಧ್ಯಯನದ ವಾತಾವರಣ. ಹಾಗಾಗಿ ನನ್ನ ಯಾವ ಗೆಳೆಯರೂ ನಮ್ಮ ಮನೆಗೆ ಆಟವಾಡಲು ಬರಲು ಧೈರ್ಯ ಮಾಡುತ್ತಿರಲಿಲ್ಲ. 

ನನಗೋ ಗೆಳೆಯ ರೊಂದಿಗೆ ದಿನವಿಡೀ ಆಟವಾಡುವ ಹವ್ಯಾಸ.ಮನೆಯಲ್ಲಿ ನನ್ನ ಕಾಲುಗಳು ನಿಲ್ಲುತ್ತಿರಲಿಲ್ಲ.ತಂದೆಯವರು ಬೆಳಗ್ಗೆ ವಿಶ್ವವಿದ್ಯಾಲಯಕ್ಕೆ ತೆರಳಿದರೆಂದರೆ ನಾನೂ ಗೆಳೆಯರ ಮನೆಗೆ ಹಾರುತ್ತಿದ್ದೆ.ಆಟ ಊಟಗಳೆಲ್ಲ ಗೆಳೆಯರು ಮನೆಯಲ್ಲೇ ಮತ್ತೆ ಮನೆ ಸೇರುವುದು ಸಂಜೆ ಮನೆಗಳಲ್ಲಿ ಲೈಟುಗಳನ್ನು ಹಚ್ಚಿದಾಗಲೇ.

ಮನೆಯಲ್ಲಿ ಚಿಕ್ಕ ಮಗನಾದ ಕಾರಣ  ನನ್ನ ಎಲ್ಲ ತುಂಟಾಟಗಳಿಗೆ ನಮ್ಮ ತಾಯಿಯ ಮೌನ ಸಮ್ಮತಿ ಇರುತ್ತಿತ್ತು.

ನನ್ನ ಅಣ್ಣಂದಿರು ಅಕ್ಕಂದಿರುಗಳಿಗೂ ನನ್ನಂತೆ ದಿನವಿಡೀ ಆಟವಾಡುವ ಬಯಕೆಗಳಿದ್ದವೋ ಇಲ್ಲವೋ ಗೊತ್ತಿಲ್ಲ ಅಥವಾ ನನ್ನಂಥ ನಿರ್ಲಜ್ಯತೆ ಕಡಿಮೆ ಇತ್ತೋ, ಇಲ್ಲ ವಿಧೇಯತೆ ಜಾಸ್ತಿ ಇತ್ತೋ ಗೊತ್ತಿಲ್ಲ.ಅಂತೂ ಅವರಾರೂ ನನ್ನಂತೆ ಬೇಸಿಗೆಯ ರಜಾ ದಿನಗಳಲ್ಲಿ ದಿನವಿಡೀ ಹೋರಗೇ ಆಟವಾಡಿದವರಲ್ಲ.
ಹಾಗಂತ ಸಂಜೆ ತಂದೆಯವರು ಮನೆಗೆ ಬಂದಾಗ ಅವರಾರೂ ನನ್ನ ಬಗ್ಗೆ ಎಂದೂ ಒಂಚೂರು ದೂರು ನೀಡಿದವರಲ್ಲ. ಹೊರತಾಗಿ ತಂದೆಯವರು ನನ್ನ ಬಗ್ಗೆ ವಿಚಾರಿಸಿದಾಗ ಒಬ್ಬರು ಒಂದು ನೆಪ ಹೇಳಿ ಇನ್ನೊಬ್ಬರು ನನ್ನನ್ನು ಹುಡುಕಲು ಗೆಳೆಯರ ಮನೆಗಳಿಗೆ ಅಲೆದಾಡುತ್ತಿದ್ದರು.

ಬೇಸಿಗೆಯ ರಜೆಯ ಕಥೆ ಹೀಗಾದರೆ ಇನ್ನು ದಸರಾ ರಜೆ ಬರುವುದು ಅರ್ಥ ವಾರ್ಷಿಕ ಪರೀಕ್ಷೆ ಯ ನಂತರ.ಆಗಂತೂ ನಮ್ಮ ಮನೆಯಲ್ಲಿನ ಅಧ್ಯಯನದ ವಾತಾವರಣ ಇನ್ನೂ ತೀವ್ರವಾಗಿರುತ್ತಿತ್ತು.ಇನ್ನೇನು ವಾರ್ಷಿಕ ಪರೀಕ್ಷೆ ಕೆಲವೇ ತಿಂಗಳುಗಳಲ್ಲಿ ಪ್ರಾರಂಭ ವಾಗುವುದು ಎಂದು ಎಲ್ಲರೂ ದಿನವಿಡೀ ಅಭ್ಯಾಸದಲ್ಲಿಯೇ ಮುಳುಗಿರುತ್ತಿದ್ದರು.ಹಾಗಿರುವಾಗ ನಾನಾದರೋ ಒಲ್ಲದ ಮನಸ್ಸಿನಿಂದ  ಮನೆಯಲ್ಲಿ ಪಠ್ಯಪುಸ್ತಕಗಳೊಂದಿಗೆ ಕಾಲ ಕಳೆಯುತ್ತಿದ್ದೆ.ಇದಕ್ಕೆ ಮುಖ್ಯ ಕಾರಣ ಒಂದುವೇಳೆ ಅರ್ಧ ವಾರ್ಷಿಕ ಪರೀಕ್ಷೆಯಲ್ಲಿ ಮನೆಯ ಎಲ್ಲ ಮಕ್ಕಳ ಸರಾಸರಿಗಿಂತ  ನನ್ನ ಫಲಿತಾಂಶ ಕಡಿಮೆ ಬಂದರೆ ತಂದೆಯವರಿಂದ ಆಗುವ ಮಂತ್ರ ಪುಷ್ಪ ಸ್ವಲ್ಪವಾದರೂ ಕಡಿಮೆ ಮಾಡುವಲ್ಲಿ ತಾಯಿಗೆ ಅನುಕೂಲವಾಗಲಿ ಎಂಬ ಅವ್ಯಕ್ತ ಬಯಕೆ.

ಇಂತಹ ಸಂದರ್ಭದಲ್ಲಿ
ನವರಾತ್ರಿಯ ಖಂಡೆ ನವಮಿ ಆಯುಧ ಪೂಜೆಯ ದಿನ ಬಂತೆಂದರೆ ನನಗೆ ಎಲ್ಲಿಲ್ಲದ ಸಂಭ್ರಮ.ಅಂದು ತಾಯಿಯ ಮಾರ್ಗದರ್ಶನದಲ್ಲಿ ನಮ್ಮ ಮನೆತನದ ಆಯುಧಗಳಾದ ಪುಸ್ತಕಗಳನ್ನು ದೇವರ ಮುಂದಿಟ್ಟು ಅವುಗಳ ಸಂಕ್ಷಿಪ್ತ ಪೂಜೆ ಮಾಡುವ ಮುತುವರ್ಜಿಯನ್ನು ನಾನೇ ವಹಿಸಿಕೊಳ್ಳುತ್ತಿದ್ದೆ.ಇದಕ್ಕೆ ನನ್ನ ಧಾರ್ಮಿಕ ಪ್ರವೃತ್ತಿ ಸ್ವಲ್ಪವಾದರೆ ಮುಖ್ಯ ಕಾರಣ ಬೇರೆಯೇ. ಆಯುಧ ಪೂಜೆಗೆ ಇತರರ ಒಂದೊಂದು ಪುಸ್ತಕಗಳನ್ನು ಇಟ್ಟರೆ ನನ್ನ ಎಲ್ಲ ಪಠ್ಯ ಪುಸ್ತಕಗಳನ್ನು ಇಡುತ್ತಿದ್ದೆ.ಯಾಕೆಂದರೆ ನನ್ನ ಎಲ್ಲ ಪಠ್ಯವು ನಾನು ಜಾಸ್ತಿಯಾಗಿ ಓದದೇ ನನ್ನ ತಲೆಯಲ್ಲಿ ತುಂಬಿಕೊಳ್ಳಲಿ ಎಂಬ ಪೂಜೆಯಲ್ಲಿಯ ಶೃದ್ಧೆ ಒಂದಾದರೆ, ಇನ್ನೊಂದು ಮುಖ್ಯಕಾರಣ ಪೂಜೆ ಮಾಡಿದ ಪುಸ್ತಕಗಳನ್ನು ಮರುದಿನ ಉತ್ತರ ಪೂಜೆಯ ನಂತರ ಹೊರಗೆ ತೆಗೆಯುವುದು.ಅಂದರೆ ಖಂಡೇ ನವಮಿಯ ದಿನವಾದರೂ ನನ್ನ ಪಠ್ಯಪುಸ್ತಕ ಓದಿಗೆ ಪೂರ್ಣ ವಿರಾಮ.!!!

ಜಯಂತ ಕಿತ್ತೂರ

ಕಾಮೆಂಟ್‌ಗಳು

  1. Nice write up...expressed unmasked words directly from the heart. Congratulations and keep on penning.

    ಪ್ರತ್ಯುತ್ತರಅಳಿಸಿ
  2. ತಮ್ಮ ಬರಹ ಚೆನ್ನಾಗಿದೆ. ಬಾಲ್ಯವನ್ನು ಓದಿನಲ್ಲಿ ಕಳೆದಿರುತ್ತೀರಿ. ಸಂತೋಷ. ಆಟೋಟಗಳಲ್ಲಿ ತಂದೆಯ ಪ್ರೋತ್ಸಾಹ ಇಲ್ಲದಿರುವುದು ಸ್ವಲ್ಪ ಬೇಸರ. ಆದರೇ ಸಂಸ್ಕಾರ ಇರುವುದು ಒಂದು ಸಮಾಧಾನದ ಸಂಗತಿ. ನಮಸ್ಕಾರಗಳು

    ಪ್ರತ್ಯುತ್ತರಅಳಿಸಿ
  3. ನಿಮ್ಮ ಹಾಗೆ ಓದುವ ಹವ್ಯಾಸ ನಮಗೆ ಬರೆದಿರುವುದು ಒಂದು ದುಃಖ

    ಪ್ರತ್ಯುತ್ತರಅಳಿಸಿ
  4. ನಿಮ್ಮ ಹವ್ಯಾಸ ತುಂಬ ಇಷ್ಟವಾಯಿತು ಮತ್ತು ಸಂತೋಷವಾಯಿತು.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನನ್ನ ಬಿಳಿ ತಲೆಯ ಬಣ್ಣಗಳು ...(ಭಾಗ-೧)

ದಿಖಾವೇಪೆ ಮತ್ ಜಾವೋ ಅಕಲ್ ಲಗಾವೋ...

ಇವಾ ಯಾವೂರವಾ...