ಶ್ವಾನ ಮೋಹ
ಒಂದು ಸಾಕು ನಾಯಿಯನ್ನು ಬೈದುದ್ದಕ್ಕೆ ನಾಯಿಯ ಮಾಲೀಕ ಜರಿದವನ ಮೂಗು ಕತ್ತರಿಸಿದ ಸುದ್ದಿ ಮೊನ್ನೆ ಪತ್ರಿಕೆಯಲ್ಲಿ ಪ್ರಕಟವಾದದ್ದನ್ನು ಓದಿ ತ್ರೇತಾಯುಗದ ಶ್ರೀರಾಮಚಂದ್ರನ ವನವಾಸದ ಸಮಯದಲ್ಲಿ ಲಕ್ಷ್ಮಣನು ರಾವಣನ ತಂಗಿ ಶೂರ್ಪನಖಾಳ ಮೂಗು ಮತ್ತು ಕಿವಿ ಕತ್ತರಿಸಿದ ಪ್ರಸಂಗ ನೆನಪಿಗೆ ಬಂದಿತು. ಆದರೆ, ಅಂದು ಏಕಪತ್ನಿವ್ರತನಾದ ಮರ್ಯಾದಾ ಪುರುಷೋತ್ತಮ ಶ್ರೀರಾಮ, ಶೂರ್ಪನಖಾಳ ಎರಡನೆ ಮದುವೆಯ ಪ್ರಸ್ತಾವನೆಯನ್ನು ತಿರಸ್ಕರಿಸಿದಾಗ ಅವಳು ಸೀತಾಮಾತೆಯನ್ನು ಕೊಲ್ಲಲು ಮುಂದಾದಾಗ ಲಕ್ಷ್ಮಣ ಕೂಡಲೇ ಕಾರ್ಯತತ್ಪರನಾಗಿ ಶೂರ್ಪನಖಾಳ ಮೂಗು ಕತ್ತರಿಸಿದ್ದು ಸಮಂಜಸವಾದ ವಿಚಾರ. ಶೂರ್ಪನಖಾಳ ಮೂಗು ಕತ್ತರಿಸಿದ ಆ ವಿಷಯ ಬೆಳೆದು ಮುಂದೆ ರಾವಣನಿಂದ ಸೀತಾಮಾತೆಯ ಅಪಹರಣ, ನಂತರ ಅವನ ಸಂಹಾರಕ್ಕೆ ಕಾರಣವಾಯಿತು. ಆದರೆ, ಇಂದಿನ ಕಲಿಯುಗದಲ್ಲಿ ಮನುಷ್ಯರನ್ನಲ್ಲ ಕೇವಲ ಒಂದು ಸಾಕು ನಾಯಿಯನ್ನು ಮೂದಲಿಸದಕ್ಕೆ ಮೂಗು ಕತ್ತರಿಸಿಕೊಂಡ ವಿಚಾರ ಇನ್ನಾವ ರಾದ್ಧಾಂತಕ್ಕೆ ನಾಂದಿ ಹಾಡುವುದೋ ಆ ಭಗವಂತನೇ ಬಲ್ಲ. ಗಣೇಶನ ಮದುವೆ ಸಿನೇಮಾದಲ್ಲಿ ವಠಾರದಲ್ಲಿ ಬಾಡಿಗೆದಾರನಾದ ಅನಂತನಾಗ್, ಮಾಲೀಕನ ಕಾಟ ತಾಳಲಾರದೇ ಒಂದು ಕಂತ್ರಿ ನಾಯಿಯನ್ನು ತಂದು ಕಟ್ಟಿ ಆ ನಾಯಿಗೆ 'ರಮಣ ಮೂರ್ತಿ' ಎಂದು ಮನೆ ಮಾಲಿಕನ ಹೆಸರಿಟ್ಟು ಅದಕ್ಕೆ ಬೈಯುವ ನೆಪದಲ್ಲಿ ಮನೆಮಾಲಿಕನಾದ ಮುಖ್ಯಮಂತ್ರಿ ಚಂದ್ರುಗೆ ಯದ್ವಾತದ್ವಾ ಬೈಯುವ ಪ್ರಸಂಗ ನಿಮಗೂ ನೆನಪಿರಬಹುದು. ಅದು ಕೇವಲ ಚಲನಚಿತ್ರದ ...