ಶ್ವಾನ ಮೋಹ


ಒಂದು ಸಾಕು ನಾಯಿಯನ್ನು ಬೈದುದ್ದಕ್ಕೆ ನಾಯಿಯ ಮಾಲೀಕ ಜರಿದವನ ಮೂಗು ಕತ್ತರಿಸಿದ ಸುದ್ದಿ ಮೊನ್ನೆ ಪತ್ರಿಕೆಯಲ್ಲಿ ಪ್ರಕಟವಾದದ್ದನ್ನು ಓದಿ ತ್ರೇತಾಯುಗದ ಶ್ರೀರಾಮಚಂದ್ರನ ವನವಾಸದ ಸಮಯದಲ್ಲಿ ಲಕ್ಷ್ಮಣನು ರಾವಣನ ತಂಗಿ ಶೂರ್ಪನಖಾಳ ಮೂಗು ಮತ್ತು ಕಿವಿ ಕತ್ತರಿಸಿದ ಪ್ರಸಂಗ ನೆನಪಿಗೆ ಬಂದಿತು. ಆದರೆ, ಅಂದು ಏಕಪತ್ನಿವ್ರತನಾದ ಮರ್ಯಾದಾ ಪುರುಷೋತ್ತಮ ಶ್ರೀರಾಮ, ಶೂರ್ಪನಖಾಳ ಎರಡನೆ ಮದುವೆಯ ಪ್ರಸ್ತಾವನೆಯನ್ನು ತಿರಸ್ಕರಿಸಿದಾಗ ಅವಳು ಸೀತಾಮಾತೆಯನ್ನು ಕೊಲ್ಲಲು ಮುಂದಾದಾಗ ಲಕ್ಷ್ಮಣ ಕೂಡಲೇ ಕಾರ್ಯತತ್ಪರನಾಗಿ ಶೂರ್ಪನಖಾಳ ಮೂಗು ಕತ್ತರಿಸಿದ್ದು ಸಮಂಜಸವಾದ ವಿಚಾರ. ಶೂರ್ಪನಖಾಳ ಮೂಗು ಕತ್ತರಿಸಿದ ಆ ವಿಷಯ ಬೆಳೆದು ಮುಂದೆ ರಾವಣನಿಂದ ಸೀತಾಮಾತೆಯ ಅಪಹರಣ, ನಂತರ ಅವನ ಸಂಹಾರಕ್ಕೆ ಕಾರಣವಾಯಿತು. ಆದರೆ, ಇಂದಿನ ಕಲಿಯುಗದಲ್ಲಿ ಮನುಷ್ಯರನ್ನಲ್ಲ ಕೇವಲ ಒಂದು ಸಾಕು ನಾಯಿಯನ್ನು ಮೂದಲಿಸದಕ್ಕೆ ಮೂಗು ಕತ್ತರಿಸಿಕೊಂಡ ವಿಚಾರ ಇನ್ನಾವ ರಾದ್ಧಾಂತಕ್ಕೆ ನಾಂದಿ ಹಾಡುವುದೋ ಆ ಭಗವಂತನೇ ಬಲ್ಲ. 

ಗಣೇಶನ ಮದುವೆ ಸಿನೇಮಾದಲ್ಲಿ ವಠಾರದಲ್ಲಿ ಬಾಡಿಗೆದಾರನಾದ ಅನಂತನಾಗ್, ಮಾಲೀಕನ ಕಾಟ ತಾಳಲಾರದೇ ಒಂದು ಕಂತ್ರಿ ನಾಯಿಯನ್ನು ತಂದು ಕಟ್ಟಿ ಆ ನಾಯಿಗೆ  'ರಮಣ ಮೂರ್ತಿ' ಎಂದು ಮನೆ ಮಾಲಿಕನ ಹೆಸರಿಟ್ಟು ಅದಕ್ಕೆ ಬೈಯುವ ನೆಪದಲ್ಲಿ ಮನೆಮಾಲಿಕನಾದ ಮುಖ್ಯಮಂತ್ರಿ ಚಂದ್ರುಗೆ ಯದ್ವಾತದ್ವಾ ಬೈಯುವ ಪ್ರಸಂಗ ನಿಮಗೂ ನೆನಪಿರಬಹುದು. ಅದು ಕೇವಲ ಚಲನಚಿತ್ರದ ಒಂದು ಹಾಸ್ಯ ಪ್ರಸಂಗ. ಆದರೆ  ಈ ಮೇಲಿನ ಘಟನೆಯಲ್ಲಿ ನಿಜವಾಗಿಯೂ ಕೇವಲ ಬೊಗಳುವ ಆ ಸಾಕು ನಾಯಿಗೇ ಬೈಯುವ ವಿಚಾರವೋ ಅಥವಾ ಅದರ ಹಿನ್ನೆಲೆಯಲ್ಲಿ ಇನ್ನಾರನ್ನು ಮೂದಲಿಸುವದಾಗಿತ್ತೋ ಎಂಬುದನ್ನು ಪೋಲಿಸರ ತನಿಖೆಯೇ ಖುಲಾಸೆ ಮಾಡಬೇಕು. 

'ಬೊಗಳುವ ನಾಯಿ ಕಚ್ಚುವುದಿಲ್ಲ' ಎಂಬುದು ಹಳೆಯ ಗಾದೆ ಮಾತು. ಇಂದು ನಾವು ಕಲಿಯಬೇಕಾದ ಪಾಠವೆಂದರೆ ಬೊಗಳುವ ನಾಯಿ ಕಚ್ಚುವುದಿಲ್ಲ ಬದಲಾಗಿ ಮೂಗು ಕತ್ತರಿಸಲು ಕಾರಣೀಕರ್ತವಾಗಲೂಬಹುದು ಎಂದು. ಆದುದರಿಂದ, ನಾಯಿ ಬೊಗಳಿದಾಗ ಬೊಗಳುವ ನಾಯಿ ಕಚ್ಚುವುದಿಲ್ಲ ಅಂತ ಅಂದುಕೊಂಡು ಯಾವುದಕ್ಕೂ ತಲೆಕೆಡಿಸಿಕೊಳ್ಳದೇ  ಸುಮ್ಮನಿರಬೇಕು ಇಲ್ಲದಿದ್ದರೆ ಮೂಗು ಕತ್ತರಿಸಿಕೊಳ್ಳುವ ಪ್ರಸಂಗ ಬರಬಹುದು. ಇಲ್ಲಿ ಬೊಗಳುವ ನಾಯಿ ಎಂದು ನಿಜವಾದ ನಾಯಿ ಅಥವಾ ನಿಮ್ಮ ಎಲ್ಲ ವಿಷಯಗಳಲ್ಲಿ ಅವಶ್ಯಕತೆ ಇಲ್ಲದೇ ಯಾವಾಗಲೂ ಕಮೆಂಟು ಮಾಡುವ ನಿಮ್ಮ ಸುತ್ತಮುತ್ತಲಿನವರನ್ನೂ ಉದ್ದೇಶಿಸಿಯೂ ಹೇಳಬಹುದು ಅಲ್ಲವೇ. ನಮ್ಮಲ್ಲಿ ಕೆಲವರ ಸ್ವಭಾವ ಬಹಳ ಸೂಕ್ಷ್ಮವಾಗಿರುತ್ತದೆ. ಯಾರೇ ಒಂದು ಕ್ಷುಲ್ಲಕ ಕಾಮೆಂಟ್ ಮಾಡಿದರೂ ದಿನವೆಲ್ಲ ಮನಸ್ಸು ಕೆಡಿಸಿಕೊಂಡು ತಮ್ಮ ಮತ್ತು ತಮ್ಮವರ ಇಡೀ ದಿನವನ್ನು ಹಾಳು ಮಾಡುವುದುಂಟು. ನಾನು ಚಿಕ್ಕವನಿದ್ದಾಗ 'ಆನೆ ಪೋಗುತಂ ಶ್ವಾನ ಬೊಗಳುತಂ' ಎಂದು  ನಮ್ಮಮ್ಮ ಹೇಳುತ್ತಿದ್ದದ್ದು ಮುಂದೆ ನನ್ನ ವ್ಯಕ್ತಿತ್ವ ನಿರ್ಮಾಣದಲ್ಲಿ ಬಹಳ ಸಹಾಯ ಮಾಡಿತು. ಅದೂ ನನ್ನ ಉದ್ಯೋಗದ ದಿನಗಳಲ್ಲಿ ನನಗೆ  ಬಹಳೇ ಉಪಯುಕ್ತವಾಗಿತ್ತು. ನನ್ನ ನೇರ ನುಡಿ ಸ್ಪಷ್ಟ ಮಾತು ನಮ್ಮ ವಿಭಾಗದ ಒಬ್ಬ ಹಿರಿಯ ಸಹೋದ್ಯೋಗಿಗೆ ಹಿಡಿಸುತ್ತಿರಲಿಲ್ಲ. ಮುಂದೆ ಅವರು ನಮ್ಮ ವಿಭಾಗದ ಮುಖ್ಯಸ್ಥರಾದಾಗ ಯಾವುದೋ ಒಂದು ವಿಷಯದ ಚರ್ಚೆಯಲ್ಲಿ ನನ್ನ ಮಾತುಗಳಿಂದ ಮಂಡೆ ಬಿಸಿ ಮಾಡಿಕೊಂಡರು. ನಾನು ಮಾತು ಮುಂದುವರಿಸುವುದು ಸರಿಯಲ್ಲವೆಂದು ಅಲ್ಲಿಂದ ಜಾಗ ಖಾಲಿ ಮಾಡಿದೆ. ಆದರೆ ಅವರು ವಿಭಾಗದ ಕಾರಿಡಾರಿನಲ್ಲಿ ನಿಂತು ದೊಡ್ಡ ಧ್ವನಿಯಲ್ಲಿ ನನಗೆ ಯದ್ವಾತದ್ವಾ ಬೈಯಲು ಪ್ರಾರಂಭಿಸಿದರು. ನಾನು ಅವರ ಮಾತಿಗೆ ಸ್ವಲ್ಪವೂ ಕಿವಿಗೊಡದೇ ನನ್ನ ಚೇಂಬರ್ ಕಡೆಗೆ ನಡೆದೆ. ಮುಂದೆ ನಾಲ್ಕಾರು ದಿನಗಳ ನಂತರ ವಿಭಾಗದ ಮುಖ್ಯಸ್ಥರು ನನ್ನಲ್ಲಿ ಬಂದು ಇಲ್ಲಾ ಅಂದು ಬೇರೇ ಯಾವುದೋ ವಿಷಯದ ಒತ್ತಡದಲ್ಲಿದ್ದೆ, ಹಾಗಾಗಿ ನಿನ್ನೊಂದಿಗೆ ಅನುಚಿತವಾಗಿ ವರ್ತಿಸಿದೆ ಎಂದು ಹೇಳಿ ನನ್ನನ್ನು ಚಹಾ ಕುಡಿಯಲು ಕ್ಯಾಂಟೀನಗೆ ಕರೆದೊಯ್ದರು,ಇರಲಿ. 

ನಾವು ಚಿಕ್ಕವರಿದ್ದಾಗ ಸಾಮಾನ್ಯವಾಗಿ ಮಧ್ಯಮವರ್ಗದ ಮನೆಗಳಲ್ಲಿ ನಾಯಿ ಸಾಕುವುದು ತೀರಾ ಕಡಿಮೆ. ಆಗ ಮಧ್ಯಮವರ್ಗದ ಕೂಡುಕುಟುಂಬಗಳಲ್ಲಿ ಯಜಮಾನನ ಒಂದು ಪಗಾರದಲ್ಲಿ ಮನೆಯ ಮಕ್ಕಳಿಗೆಲ್ಲ ರಾತ್ರಿ ಊಟಕ್ಕೆ ಹೇಗೋ ಕೊರತೆಯಾಗದಂತೆ ನೋಡಿಕೊಳ್ಳುವಲ್ಲಿ ಸಾಕಾಗುತ್ತಿತ್ತು ಅಂತಹದುದರಲ್ಲಿ ನಾಯಿ ಸಾಕುವ ಶೌಕಿ ಮಾಡಲು ಅವಕಾಶಗಳು ತೀರಾ ಕಡಿಮೆ. ಆಗ ಏನಿದ್ದರೂ ಆರೆಂಟು ಆಕಳು ಎತ್ತುಗಳ ಕಮತ ಇರುವ ಊರ ಗೌಡರು ಇಲ್ಲವೆ ಕುರಿ ಕಾಯುವವರು ತಮ್ಮ ಕಸುಬಿಗೆ ಸಹಕಾರಿ ಎಂದು ನಾಯಿಗಳನ್ನು ಸಾಕುತ್ತಿದ್ದರು. ಆದರೆ, ಇಂದಿನ ವೇಗದ ಆಧುನಿಕತೆಯ ನಗರ ಪ್ರದೇಶಗಳಲ್ಲಿನ ಮಾಧ್ಯಮವರ್ಗದ ಕುಟುಂಬಗಳಲ್ಲಿ ನಾಯಿ ಸಾಕುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಕಾರಣ ನಾವಿಬ್ಬರು ನಮಗೊಬ್ಬ ತಪ್ಪಿದರೆ ಎರಡು ಮಕ್ಕಳಿರುವ ವಿಭಕ್ತ ಕುಟುಂಬಗಳ ಆದಾಯ ಹೆಚ್ಚಾಗಿದೆ. ಜೊತೆಗೆ ಬಹುತೇಕ ಮಕ್ಕಳು ಪಾಲಕರ ಮಾತನ್ನು ಕೇಳುವುದಿಲ್ಲ. ಅದರಂತೆ ಗಂಡ ಹೆಂಡತಿಯ ಮಾತು ಅಥವಾ ಹೆಂಡತಿ ಗಂಡನ ಮಾತನ್ನು ಕೇಳುವುದೂ ಕಡಿಮೆಯೇ. ಹಾಗಾಗಿ ಮನೆಯಲ್ಲಿ ಮಾತು ಕೇಳುವ ಒಂದು ಪ್ರಾಣಿಯ ಅವಶ್ಯಕತೆಯನ್ನು ಈ ಸಾಕು ನಾಯಿಗಳು ಪೂರೈಸುತ್ತಿವೆ.

ಹ಼ಾ, ಪತ್ರಿಕೆಯಲ್ಲಿ ಪ್ರಕಟವಾದ ಆ ವಿಚಾರಕ್ಕೆ ಬಂದರೆ, ಬಹುಶಃ ರಾತ್ರಿಯೆಲ್ಲಾ ಆ ಸಾಕು ನಾಯಿಯ ಬೊಗಳುವಿಕೆಯಿಂದ ನಿದ್ದೆಗೆಟ್ಟು ಸಿಟ್ಟಿಗೆದ್ದು ಬೆಳಿಗ್ಗೆ ಪಕ್ಕದ ಮನೆಯವ ನಾಯಿಯ ಜೊತೆಗೆ ಮಾಲೀಕನಿಗೂ ಬೈದಿರಲೂಬಹುದು. ಪಾಪ ಆ ಪಕ್ಕದ ಮನೆಯವನಿಗೇನು ಗೊತ್ತು ಮಾಲೀಕ ಆ ಸಾಕು ನಾಯಿಯನ್ನು ಹೆಂಡತಿಗಿಂತಲೂ ಹೆಚ್ಚು ಪ್ರೀತಿಸುವನೆಂದು ಮತ್ತು ಏಕೆ ಹಾಗೆ ಮಾಡುವನೆಂದು. ರಾತ್ರಿಯ ಆ ನಾಯಿಯ ಬೊಗಳುವಿಕೆ ಮಾಲೀಕನ ಮುದ್ದಿನ ಹೆಂಡತಿಯ ಬೈಗುಳ ತಿವಿತಗಳಿಗಿಂತ ಹಿತಕರ ಎಂಬುದು ಬಹುಶಃ ಆ ಪಕ್ಕದ ಮನೆಯವನಿಗೆ ಅರಿವು ಇರಲಿಕ್ಕಿಲ್ಲ. ಮತ್ತೂ ಸೂಕ್ಷ್ಮ ಸ್ವಭಾವದ ಆ ಸಾಕು ನಾಯಿ ಪಕ್ಕದ ಮನೆಯವನು ಅದಕ್ಕೆ ಬೈದದ್ದರಿಂದ ಎಲ್ಲಿ ಮರುದಿನ ರಾತ್ರಿ ಬೊಗಳುವುದನ್ನು ನಿಲ್ಲಿಸಿದರೆ ಏನು ಮಾಡುವುದೆಂದು ನಾಯಿಯ ಮಾಲೀಕ ಚಿಂತಾಕ್ರಾಂತನಾಗಿ ಪಕ್ಕದಮನೆಯವನ ಮೂಗನ್ನು ಕತ್ತರಿಸಿದ ಯಡವಟ್ಟಿನ ಪ್ರಸಂಗ ನಡೆದಿರಬಹುದಲ್ಲವೇ?

ಹಾಗೆ ನೋಡಿದರೆ, ಸಾಮಾನ್ಯವಾಗಿ ನಾಯಿಗಳು ದಿನಕ್ಕಿಂತಲೂ ರಾತ್ರಿಯಲ್ಲಿ ಬೊಗಳುವುದೇ ಜಾಸ್ತಿ. ಪ್ರಾಯಶಃ ದಿನದ ಸಮಯದಲ್ಲಿ ಜನರೇ ಸಾಕಷ್ಟು ಬೊಗಳುವುದನ್ನು, ಕ್ಷಮಿಸಿ ಮಾತನಾಡುವುದನ್ನು ಗಮನಿಸಿ ಆ ಸಮಯದಲ್ಲಿ ತಮಗೆ ಜಾಸ್ತಿ TRP ಸಿಗಲಿಕ್ಕಿಲ್ಲ ಎಂದು ನಾಯಿಗಳು ತಿಳಿದಿರಲು ಸಾಕು. 

ಸುಮಾರು ವರ್ಷಗಳ ಹಿಂದೆ ಒಂದು ದಿನ ಸಾಯಂಕಾಲ,  ಒಂದೆರಡು ಪುಟ್ಟ ನಾಯಿ ಮರಿಗಳು ಅದೆಲ್ಲಿಂದಲೋ ನಮ್ಮ ಮನೆಯ ಹತ್ತಿರ ಬಂದವು. ಆ ಮುದ್ದು ನಾಯಿಗಳನ್ನು ಕಂಡ ನನ್ನ ಮಗಳ ಒತ್ತಾಯಕ್ಕೆ ಮಣಿದು ನಾನು ಅವಕ್ಕೆ ತಿನ್ನಲು ಪಾರ್ಲೇ ಜಿ ಬಿಸ್ಕೀಟು ಹಾಕಿದೆ. ರಾತ್ರಿ ಆದಂತೆ ಆ ನಾಯಿ ಮರಿಗಳು ಕುಯ್ಯಗುಟ್ಟಲು ಪ್ರಾರಂಭಿಸಿದವು. ನಾವುಂಡು ಉಳಿದ ಅನ್ನ ಸಾರು ಚಪಾತಿ ಕಲಿಸಿ ಹಾಕಿದೆವು. ಮರುದಿನ ಬೆಳಗ್ಗೆ ಎಂದಿನಂತೆ ನಾನು ಹಾಲು ತರಲು ಮನೆಯ ಹತ್ತಿರದ ನಂದಿನಿ ಹಾಲಿನ ಎಜನ್ಸಿ ನಡೆಸುವವರ ಮನೆಯ ಕಡೆಗೆ ನಡೆದಾಗ ಆ ನಾಯಿ ಮರಿಗಳು ಎಲ್ಲಿಂದಲೋ ಓಡಿಬಂದು ಬಾಲವನ್ನು ಅಳ್ಳಾಡಿಸುತ್ತಾ ನನ್ನನ್ನು ಹಿಂಬಾಲಿಸಿ ನಡೆದವು. ಅವುಗಳ ಉತ್ಸಾಹ ಮತ್ತು ವಿಧೇಯತೆಯನ್ನು ಕಂಡು ಮನಸ್ಸು ಕರಗಿ ಮನೆಗೆ ಹಾಲು ತಂದ ನಂತರ ಮತ್ತೊಂದು ಪಾಕೀಟು ಪಾರ್ಲೇ ಜಿ ಬಿಸ್ಕೀಟನ್ನು ಅವುಗಳಿಗೆ ಹಾಕಿದೆ. ನನ್ನ ಶ್ರೀಮತಿಗೆ ನಾಯಿಗಳನ್ನು ಕಂಡರೆ ಅಷ್ಟಕಷ್ಟೇ. ಅದಕ್ಕೇ ಬಿಸ್ಕೀಟು ತಿಂದ ನಂತರ ನನ್ನ ಶ್ರೀಮತಿ ನೋಡುವುದಕ್ಕೂ ಮುನ್ನ ಅವನ್ನು ನಮ್ಮ ಮನೆಯಿಂದ ಓಡಿಸಿದೆ. ಅಂದಿನಿಂದ ಅವು ನಮ್ಮ ಮನೆಯ ಅತಿಥಿಗಳಾದವು. ದಿನಾಲೂ ಬೆಳಗ್ಗೆ ನಾನು ಹಾಲು ತರಲು ಹೋಗುವಾಗ ಅವು ನನ್ನನ್ನು ಹಿಂಬಾಲಿಸಿಕೊಂಡು ಬರುವುದು ಮತ್ತು ಹಾಲು ಮನೆಗೆ ತಂದ ಮೇಲೆ ನಾನು ಅವಕ್ಕೆ ಪಾರ್ಲೇ ಜಿ ಬಿಸ್ಕೀಟು ಹಾಕುವುದು ನಂತರ ಅವು ಅಲ್ಲಿಂದ ಜಾಗ ಖಾಲಿ ಮಾಡುವುದು ಒಂದು ರೂಢಿ ಆಯಿತು. ಕೆಲವೇ ದಿನಗಳಲ್ಲಿ ನಮ್ಮ ಓಣಿಯ ಅನೇಕರು ಬೆಳಿಗ್ಗೆ ನಾನು ಹಾಲು ತರಲು ಹೋಗುವಾಗ ನನ್ನ ಜೊತೆಗೆ ಬೆಂಗಾವಲಿನಂತೆ ಬರುತ್ತಿದ್ದ ಆ ನಾಯಿಗಳನ್ನು ಕಂಡು ಏನು ರಾಯರೇ ನಿಮ್ಮ ಸೈನಿಕರೊಂದಿಗೆ ಹೊರಟಿರಾ ಎಂದು ಕೇಳಹತ್ತಿದರು. ಅವರ ಮಾತು ನನಗೆ ಒಳಗೊಳಗೆ ಒಂದು ರೀತಿ ಅವ್ಯಕ್ತ ಅಭಿಮಾನವನ್ನು ಮೂಡಿಸುತ್ತಿತ್ತು. ಎಂದಾದರೂ ಒಂದು ದಿನ ಆ ಬೀದಿ ನಾಯಿಗಳು ನನ್ನೊಂದಿಗೆ ಬರೆದಿದ್ದನ್ನು ಕಂಡು ಏನು ಇಂದು ನಿಮ್ಮ ಸೈನಿಕರು ಕಾಣುವುದಿಲ್ಲವಲ್ಲ ಎಂದಾಗ ನಾನು ಇಂದು ಅವು ರಜಾ ಹಾಕಿವೆ ಎಂದು ಹೇಳುತ್ತಿದ್ದೆ. ಹೀಗೆಯೇ ಕೆಲವು ತಿಂಗಳುಗಳಲ್ಲಿ ನಮಗರಿಯದಂತೆ ಅವು ನಮ್ಮ ಮನೆಯನ್ನು ತಮ್ಮ ವಿಳಾಸವನ್ನಾಗಿ ಮಾಡಿಕೊಂಡವು. ಒಂದು ದಿನ ಬೆಳಿಗ್ಗೆ ಎಂದಿನಂತೆ ನಾನು ನಾಯಿಗಳೊಂದಿಗೆ ಹಾಲು ತಂದು ಆ ಬೀದಿ ನಾಯಿಗಳಿಗೆ ಬಿಸ್ಕೀಟು ಹಾಕಿದ ನಂತರ ನಮ್ಮ ಪಕ್ಕದ ಮನೆಯ ಹಿರಿಯರು ನೀವು ಅವಕ್ಕೆ ಹೀಗೆ ದಿನಾಲೂ ಬಿಸ್ಕತ್ತು ಹಾಕಿ ಅಛ್ಘಾ ಮಾಡುವುದರಿಂದ ಅವು ಇಲ್ಲೇ ಠಿಕಾಣಿಯೂರಿವೆ. ರಾತ್ರಿಯೆಲ್ಲಾ ನಿಮ್ಮ ನಾಯಿಗಳು ಬಹಳ ಬೊಗಳುತ್ತಾನೇ ಇರುತ್ತವೆ, ಅದರಿಂದ ನನ್ನ ನಿದ್ದೆಗೆ ಬಹಳ ತೊಂದರೆಯಾಗುತ್ತಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು. ದಿನವೆಲ್ಲ ಕೆಲಸದಲ್ಲಿರುವ ನನಗೆ ರಾತ್ರಿ ಚೆನ್ನಾಗಿ ನಿದ್ದೆ ಬರುತ್ತಿದ್ದ ಕಾರಣ, ರಾತ್ರಿ ಆ ನಾಯಿಗಳ ಬೋಗಳುವಿಕೆಯ ಅರಿವು ಇರಲಿಲ್ಲ. ಆದರೆ ಪಾಪ ವಯಸ್ಸಾದಂತೆ ನಿದ್ದೆ ಕಡಿಮೆಯಾದವರಿಗೆ ತಮ್ಮ ಸಮಸ್ಯೆಗೆ ಆ ನಾಯಿಗಳ ಬೊಗಳುವಿಕೆಯೇ ಕಾರಣ ಎಂದು ಅನಿಸಿರಬೇಕು. ಅವು ಬೀದೀ ನಾಯಿಗಳು ಮತ್ತು ನಾನು ಕೇವಲ ಬೆಳಿಗ್ಗೆ ಮಾತ್ರ ಬಿಸ್ಕೀಟು ಹಾಕುವುದು ಅಷ್ಟೇ ಹಾಗಾಗಿ ಅವು ನನ್ನ ಅಂದರೆ ನಾನು ಸಾಕಿದ ನಾಯಿಗಳಲ್ಲ ಹಾಗಾಗಿ ಅವುಗಳು ರಾತ್ರಿ ಬೊಗಳುವುದಕ್ಕೂ ನನಗೂ ಸಂಬಂಧವಿಲ್ಲ ಎಂದು ಹೇಳಿ ಜಾರಿಕೊಂಡೆ.

ಮುಂದೊಂದು ದಿನ ಯಥಾಪ್ರಕಾರ ಆ ನಾಯಿಗಳ ಜೊತೆ ಹೋಗಿ ಹಾಲು ತಂದು ಅವುಗಳಿಗೆ ಬಿಸ್ಕೀಟು ಹಾಕಿದ ಒಂದು ಗಂಟೆಯ ನಂತರ ಎಂದಿನಂತೆ ನಾನು ನನ್ನ ಕಾಲೇಜಿಗೆ ಹೋಗಲು ಕಾರು ಹೊರತೆಗೆಯುತ್ತಿದ್ದೆ. ನಮ್ಮ ಮನೆಯ ಕಂಪೌಂಡನ ಬಳಿ ಮಧ್ಯವಯಸ್ಕನೊಬ್ಬ ಸೈಕಲನಲ್ಲಿ ಬಂದು ಈ ನಾಯಿಗಳಿಗೆ ಏನೋ ತಿನ್ನಲು ಹಾಕಿದ. ನೀವು ಯಾರು, ಈ ನಾಯಿಗಳಿಗೆ ನಮ್ಮ ಮನೆಯ ಕಂಪೌಂಡನ ಹತ್ತಿರ ಏನು ತಂದು ತಿನ್ನಲು ಹಾಕುತ್ತಿರುವಿರಿ ಎಂದು ವಿಚಾರಿಸಿದಾಗ ಆ ಮನುಷ್ಯ ಇಲ್ಲಾ ಮೊನ್ನೆ ನಾನು ದತ್ತನ ದರ್ಶನಕ್ಕೆ ಗಾಣಗಾಪುರಕ್ಕೆ ಹೋಗಿದ್ದೆ ಅಲ್ಲಿಯ ಪ್ರಸಾದವನ್ನು ತಂದಿರುವೆ ಅದನ್ನು ನಾಯಿಗಳಿಗೆ ತಿನಿಸುತ್ತಿರುವೆ ಎಂದ. ನಾನು ಕಾಲೇಜಿಗೆ ಹೋದೆ. ಒಂದು ತಾಸಿನಲ್ಲಿ ನನ್ನ ಶ್ರೀಮತಿಯ SMS ಬಂದಿತು. ನಿಮ್ಮ ಕ್ಲಾಸಿದ್ದರೆ ಯಾರಿಗಾದರೂ ತೆಗೆದುಕೊಳ್ಳಲು ಹೇಳಿ ಬೇಗನೆ ಮನೆಗೆ ಬನ್ನಿರಿ ಎಂದು ಬರೆದಿದ್ದಳು. ಕಾಲೇಜಿನಿಂದ ನಮ್ಮ ಮನೆ ಕೇವಲ ೧೦ ನಿಮಿಷದ ಹಾದಿ. ನಾನು ಮನೆಯಕಡೆಗೆ ಬರುವುದರಲ್ಲಿ ದೂರದಿಂದ ನೋಡಿದಾಗ ಓಣಿಯ ಕೆಲವು ಜನರು ನಮ್ಮ ಮನೆಯ ಹತ್ತಿರ ಸೇರಿದ್ದನ್ನು ಕಂಡು ನನಗೆ ಸ್ವಲ್ಪ ಗಾಬರಿಯಾಯಿತು. ಕಾರನ್ನು ಸ್ವಲ್ಪ ದೂರವೇ ನಿಲ್ಲಿಸಿ ಓಡಿ ಬಂದು ನೋಡುವುದರಲ್ಲಿ ನಮ್ಮ ಮನೆಯ ಕಾಂಪೌಂಡ್ ಹತ್ತಿರ ಆ ನಾಯಿಗಳು ಸತ್ತು ಬಿದ್ದಿದ್ದು ಕಾಣಿಸಿತು. ಸಾಯುವುದಕ್ಕೂ ಮುನ್ನ ಆ ನಾಯಿಗಳು ವಿಲಿವಿಲಿ ಒದ್ಡಾಡಿದವು, ನಿಮ್ಮ ಶ್ರೀಮತಿಯವರು ಅವಕ್ಕೆ ನೀರು ಕುಡಿಸಲು ಪ್ರಯತ್ನಿಸಿದರು. ಆದರೆ ಪ್ರಯೋಜನವಾಗಲಿಲ್ಲ, ಯಾರೋ ನಗರಸಭೆಗೆ ದೂರು ಕೊಟ್ಟಿದ್ದರಂತೆ ಎಂದು ಓಣಿಯ ಜನ ಹೇಳಿದರು. ನನಗೆ ಕರುಳು ಕಿತ್ತಿ ಬಂದಂತಾಗಿ ಅತೀವ ದುಃಖವಾಯಿತು. ನನ್ನ ಶ್ರೀಮತಿ ಒಳಗಿನಿಂದ ನನ್ನ ಒಂದು ಬಿಳಿ ಲುಂಗಿಯನ್ನು ಹರಿದು ಎರಡು ತುಂಡುಗಳನ್ನು ತಂದು ಕೊಟ್ಟು ಆ ನಾಯಿಗಳ ಮೇಲೆ ಹೊದಿಸಲು ಹೇಳಿದಳು. ನಾನು ಹಾಗೇ ಮಾಡಿ ಒಳಬಂದು ಸ್ನಾನ ಮಾಡಲು ತೆರಳಿದೆ. ಸ್ವಲ್ಪ ಹೊತ್ತಿನ ನಂತರ ನಗರ ಸಭೆಯ ವಾಹನ ಬಂದು ಆ ನಾಯಿಗಳ ಕಳೇಬರಹಗಳನ್ನು ಹೇರಿಕೊಂಡು ಹೋಯಿತು. ನಾವೆಲ್ಲ ಊಟ ನೀರು ಇಲ್ಲದೇ ಕುಳಿತೆವು. ಸಂಜೆಯಾದರೂ ನಮ್ಮಿಬ್ಬರಿಗೂ ಸಮಾಧಾನವಾಗಲಿಲ್ಲ. ನನ್ನ ಶ್ರೀಮತಿಯ ಸಲಹೆಯ ಮೇರೆಗೆ ನಾವು ಹತ್ತಿರದ ಕೃಷ್ಣ ಮಠಕ್ಕೆ ಹೋದೆವು. ಅಲ್ಲಿ ಆಚಾರ್ಯರು ಭಾಗವತದ ೫ ನೇ ಸ್ಕಂದದಲ್ಲಿ ಬರುವ ಭರತ ಚಕ್ರವರ್ತಿ ಸರ್ವಸಂಗ ಪರಿತ್ಯಾಗಮಾಡಿ ವಾನಪ್ರಸ್ಥಾಶ್ರಮ ಪಡೆದು ತಪಸ್ಸಿನಲ್ಲಿ ನಿರತನಾದವನು ಹೇಗೆ ಒಂದು ಜಿಂಕೆ ಮರಿಯ ಮೋಹಕ್ಕೆ ಸಿಲುಕಿ ಮೋಕ್ಷ ಪ್ರಾಪ್ತಿಯಿಂದ ವಂಚಿತನಾಗಿ ಮುಂದೆ ಒಂದು ಜಿಂಕೆಯ ಜನ್ಮ ಪಡೆದು ನಂತರದ ಜನ್ಮದಲ್ಲಿ ಜಡಭರತನಾಗಿ ಜನಿಸಿ ತನ್ನ ಮೊದಲಿನ ಜನ್ಮದ ತಪ್ಪಿನ ನೆನಪಿದ್ದು ಈ ಜನ್ಮದಲ್ಲಿ ಯಾವ ಮೋಹಕ್ಕೂ ಬೀಳದೇ ಅಂತರ್ಮುಖಿಯಾಗಿ ಸದಾ ಭಗವಂತನ ಧ್ಯಾನದಲ್ಲಿದ್ದು ಮುಕ್ತಿ ಹೊಂದಿದ ಎಂಬ ಭಾಗದ ಪ್ರವಚನ ಮಾಡುತ್ತಿದ್ದರು.


ಡಾ. ಜಯಂತ ಕಿತ್ತೂರ 


ಕಾಮೆಂಟ್‌ಗಳು

  1. 🙏🙏🙏 ಅಂದರೆ ನಿಮಗೆ ನಿಮ್ಮ ಮುಂದಿನ ಜನ್ಮ ಯಾವದು ಎಂಬುದು ಖಾತ್ರಿಯಾಯಿತು ಅನ್ರಿ !!!

    ಪ್ರತ್ಯುತ್ತರಅಳಿಸಿ
  2. ಇತ್ತಿಚಿನ ದಿನಗಳಲ್ಲಿ ಶ್ವಾನ ಪ್ರೇಮ ಅತಿಯಾಗಿದೆ. ತಮ್ಮ ಮಕ್ಕಳಿಗಿಂತಲೂ ಅವಕ್ಕೆ ಜಾಸ್ತಿ ಪ್ರೀತಿ ತೊರಿಸುವದನ್ನು ಕಂಡಿರುವೆ.

    ಪ್ರಾಣಿ ಪ್ರೇಮ ಇರಬೇಕು... ಆದರೆ ಅತಿಯಾಗಬಾರದು.

    ಪ್ರತ್ಯುತ್ತರಅಳಿಸಿ
  3. ನಾನು ಸಹ ಚಿಕ್ಕವನಿದ್ದಾಗಿನಿಂದ ನಾಯಿಗಳ ಬಗ್ಗೆ ಪ್ರೀತಿ ಜಾಸ್ತಿ, ಆದರೆ ಮನೆಯಲ್ಲಿ ಸಾಕಲಿಕ್ಕೆ ಅವಕಾಶವಿರಲಿಲ್ಲ. ಹಾಗಾಗಿ ನಮ್ಮ ಓಣಿಯ ನಾಯಿಗಳನ್ನೇ ಮುದ್ದಿಸುತ್ತಿದೆ.ಬಾಗಲಕೋಟೆ ಬಿಟ್ಟು ಬಂದ ಮೇಲೆ ಗೊತ್ತಾಗಿದ್ದು ಎರಡು ನಾಯಿಗಳು ವಾಹನ ಅಪಘಾತಗಳಲ್ಲಿ ಸತ್ತು ಹೋದವು ಅಂತ. ಬೇರೆಯವರ ಮನೆಯಲ್ಲಿ ಹಳಸಿದ ಕಟು ರೊಟ್ಟಿ ತಿನ್ನುತ್ತಿದ ಆ ನಾಯಿಗಳು ನಮ್ಮ ಮನೆಯಲ್ಲಿ ಮೆತ್ತನೆಯ ಬಿಸಿಯಾದ ರೊಟ್ಟಿ ಚಪಾತಿ ಮಾತ್ರ ಸೇವಿಸುತ್ತಿದ್ದಿದ್ದು ನನಗೆ ಇಂದಿಗೂ ಸೋಜಿಗದ ಸಂಗತಿ. ನಿಮ್ಮ ಬರಹ ಕೊನೆಯಲ್ಲಿ ವಾಸ್ತವಿಕ ಜಗತ್ತಿನ ಪರಿಚಯಿಸಿತು. ಶರಣು ಶರಣಾರ್ಥಿಗಳು. ‌

    ಪ್ರತ್ಯುತ್ತರಅಳಿಸಿ
  4. ಧೀರೇಂದ್ರ ತೆಂಗಳಿಕರಜುಲೈ 28, 2025 ರಂದು 10:48 PM ಸಮಯಕ್ಕೆ

    ಬರಹ ಅತ್ಯುತ್ತಮವಾಗಿದೆ, ಯಾವುದೆ ವಿಷಯವಾಗಿರಲಿ, ಅದಕ್ಕೆ ತರ್ಕ ಬದ್ಧವಾದ ಲೇಖನ ಮಂಡಿಸುವ ಕಲೆ ಬದ್ಧ ಅದ್ಭುತವಾಗಿದೆ ಗೆಳೆಯ ಜಯಂತ

    ಪ್ರತ್ಯುತ್ತರಅಳಿಸಿ
  5. Another great article.. humorous and thought provoking! As u know I grew up with dogs at my house.. best possible companion of humans. But, there should be a balance in showing your love for your dog.. don’t over do it.
    Here is USA people can do crazy things for dogs.. I say that it’s better to be born as a Pet Dog is USA than being born as middle or lower class human being 😀

    ಪ್ರತ್ಯುತ್ತರಅಳಿಸಿ
  6. ಒಳ್ಳೆಯ ಲೇಖನ. ರಸವತ್ತಾಗಿ ಮೂಡಿ ಬಂದಿದೆ

    ಪ್ರತ್ಯುತ್ತರಅಳಿಸಿ
  7. M.M.Nadakatti: Very well written article! Issue of street dogs in India is a sensitive one. Two sides of a coin. For few it's a passion to love these dogs and feed them. For others, they are a menace. Then you've animal rights activists as well, who will present themselves all of a sudden when some issue connected with street dogs erupts. They are not seen anywhere when someone is bitten by these street dogs or meets with serious accidents when they chase him/her. There are cases of children's gory death due to stray dog bites. Anyway, article is well balanced one.

    ಪ್ರತ್ಯುತ್ತರಅಳಿಸಿ
  8. ಗುಂಡೇನಟ್ಟಿ ಮಧುಕರಜುಲೈ 29, 2025 ರಂದು 08:39 AM ಸಮಯಕ್ಕೆ

    ತುಂಬ ಚೆನ್ನಾಗಿ ಮೂಡಿಬಂದಿದೆ ಬರವಣಿಗೆ ನನಗೆ ತುಂಬ ಇಷ್ಟವಾಯಿತು. ದಿ ಕೃಷ್ಣಮೂರ್ತಿ ಕಿತ್ತೂರ ಅವರ ಲಲ ತ ಪ್ರಬಂಧ ಓದಿದ ಅನುಭವವಾಯಿತು. ಓದಿ ತುಂಬ ಖುಷಿಯಾಯಿತು. ಒಳ್ಳೆಯ ಲೇಖನ ಓದಿಸಿದ ತಮಗೆ ಅಭಿನಂದನೆಗಳು.

    ಪ್ರತ್ಯುತ್ತರಅಳಿಸಿ
  9. Ondu ghataneyind, ee lekhanadalli bahu ghataneagale ullekavagiddu nanage tumbha eestavayitu

    ಪ್ರತ್ಯುತ್ತರಅಳಿಸಿ
  10. ಬಹಳ ಒಳ್ಳೆಯ ಲೇಖನ.
    ನಮ್ಮ ಸೊಸೈಟಿಯಲ್ಲಿ ಕೂಡಾ ಶ್ವಾನ ಪ್ರೇಮಿಗಳು ಬಹಳ ಜನ ಇದ್ದಾರೆ.
    ಆದರೆ ಈ ಶ್ವಾನಗಳು ಹಗಲೂ ರಾತ್ರಿ ಬರುವ ಎಲ್ಲಾ ಡೆಲಿವರಿ ಬಾಯ್ ಗಳಿಗೆ ತುಂಬಾ ತೊಂದರೆ ಆಗ್ತಾ ಇರೋದು ಅಷ್ಟೇ ಸತ್ಯ.
    ಪೋಲಿಸ್ ಸ್ಟೇಶನ್ ಹೋಗಿ ಆಯಿತು.

    ಪ್ರತ್ಯುತ್ತರಅಳಿಸಿ
  11. Very nicely and humorously crafted sir. Everything in excess is poison..,🙏🙏

    ಪ್ರತ್ಯುತ್ತರಅಳಿಸಿ
  12. ನಿಜವಾದ ಸಂಗತಿಗಳೊಂದಿಗೆ ಮತ್ತೊಂದು ಅದ್ಭುತ ಬರಹ. ಸಂತೋಷದಿಂದ ಓದಿದೆ.

    ಪ್ರತ್ಯುತ್ತರಅಳಿಸಿ
  13. Very well written article.Liked and enjoyed the article while reading. Last paragraph of the article is really heart touching

    ಪ್ರತ್ಯುತ್ತರಅಳಿಸಿ
  14. Yes dear Jayant, Dogs reciprocate love more than us. That's why Syndicate Bank's LOGO was DOG. Gradual change in attitude of your life partner speaks of her flexibility towards better. Muddana- Manorame Sallapadalli ಓದಿ ದಂತೆ ,ಹಾಸ್ಯ ,ಕರಿಮನಿಯ ಸರದಲ್ಲಿ ಕೆಂಪು ಹವಳ ಪೋಣಿಸಿದಂತೆ ಮೂಡಿಬಂದಿದೆ. ಭಾಗವತ ದಲ್ಲಿ ವ್ಯಾಸ ಮಹರ್ಷಿಗಳು ಹೇಳಿದಂತೆ ಜ್ಞಾನ ಹಂಚಿ ಕೊಳ್ಳುವುದು ಪುಣ್ಯದ ಕೆಲಸ. ಬರೆಯುತ್ತೀರಿ. ಅಭಿನಂದನೆಗಳು. From : GS KULKARNI, Kalaburagi

    ಪ್ರತ್ಯುತ್ತರಅಳಿಸಿ
  15. ಬಹಳ ಚೆನ್ನಾಗಿದೆ ಲೇಖನ, ಆ ನಾಯಿಗಳ ಸಾವು ಮನ ಮಿಡಿಯಿತು🙏

    ಪ್ರತ್ಯುತ್ತರಅಳಿಸಿ
  16. ಶ್ವಾನ ಪ್ರೇಮ ಪ್ರಬಂಧ ಚೆನ್ನಾಗಿದೆ.

    ಪ್ರತ್ಯುತ್ತರಅಳಿಸಿ
  17. Very well written Jayant again. Though personally, I am not very fond of dogs, I have read heart touching stories of pet dogs and their owners. But the way you have shared your story with dogs is very interesting and mix of all emotions! Another great one ! Keep writing...

    ಪ್ರತ್ಯುತ್ತರಅಳಿಸಿ
  18. ಲೇಖನ ಚೆನ್ನಾಗಿ ಮೂಡಿ ಬಂದಿದೆ.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ದಿಖಾವೇಪೆ ಮತ್ ಜಾವೋ ಅಕಲ್ ಲಗಾವೋ...

ಸತ್ತ ಗುರು !!!

ನನ್ನ ಇಂಜಿನಿಯರಿಂಗ್ ಬ್ರ್ಯಾಂಚ...