ಸ್ಮಶಾನ ವೈರಾಗ್ಯ


ಸಮಾಜದಲ್ಲಿನ ಮೂಢನಂಬಿಕೆಗಳನ್ನು ಹೋಗಲಾಡಿಸಲು ಸ್ಮಶಾನದಲ್ಲಿ ಊಟ, ಭಜನೆ, ವಾಸ್ತವ್ಯ ಮುಂತಾದ ಹೆಜ್ಜೆಗಳನ್ನು ಇಟ್ಟು, ಮೂಢನಂಬಿಕೆಯ ವಿರುದ್ಧ ಜನಜಾಗೃತಿ ಮಾಡಿಸುವ ಕೆಲಸವನ್ನು ಮಾಡಿದ ಮಂತ್ರಿ/ರಾಜಕಿಯ ಮುಖಂಡರ ಸುದ್ದಿಯನ್ನು ಕಳೆದ ಕೆಲವು ವರ್ಷಗಳ ಹಿಂದೆ ಪತ್ರಿಕೆಗಳಲ್ಲಿ ತಾವೂ ಓದಿರಬಹುದು. ಅದು ಸಮಾಜದಲ್ಲಿನ ಮೂಡನಂಬಿಕೆಯನ್ನು ಎಷ್ಟು ಕಡಿಮೆ ಮಾಡಿತೋ ಗೊತ್ತಿಲ್ಲ, ಆದರೆ ಆ ಚಟುವಟಿಕೆ ಅಬಾಲವೃದ್ಧ, ಸ್ತ್ರೀ ಪುರುಷರೆನ್ನದೇ ಅನೇಕರಲ್ಲಿ ಸ್ಮಶಾನದ ಬಗ್ಗೆ ಇರುವ ಅವ್ಯಕ್ತ ಭಯವನ್ನು ನಿವಾರಿಸಲು ಸಹಕಾರಿ ಆಗಿರಲು ಸಾಕು.

ನಮ್ಮ ಮನೆಯಿರವ ದೊಡ್ಡ ಬಡಾವಣೆಯ ದಕ್ಷಿಣ ಭಾಗದಲ್ಲಿ ಒಂದು ಸ್ಮಶಾನವಿದೆ. ಅನೇಕ ದಶಕಗಳ ಹಿಂದೆ ಆ ಸ್ಮಶಾನದ ಜಾಗ ಬಹಳ ವಿಸ್ತಾರವಿತ್ತಂತೆ. ಇಂದು ಅದು ನಮ್ಮ ಬಡಾವಣೆಯ ಒಂದು ಸಣ್ಣ ಭಾಗವಾಗಿದೆ. ಅದರ ಸುತ್ತಲೂ ಕಾಂಪೌಂಡ ಕಟ್ಟಲಾಗಿದ್ದು ಅದರ ಒಳಗೆ ಒಂದು ಬೋರವೆಲ್ ಹಾಕಿದ್ದು ನೀರಿನ ವ್ಯವಸ್ಥೆ ಮಾಡಲಾಗಿದೆ. ವಿವಿಧ ಬಗೆಯ ಮರಗಳು ಮತ್ತು ಹೂವಿನ ಗಿಡಗಳನ್ನು ಬೆಳೆಸಲಾಗಿದೆ. ಕಳೆಬರಹವನ್ನು ಸುಡಲು ನಾಲ್ಕಾರು ವಿಶಾಲ ಕಟ್ಟೆಗಳು ಮತ್ತು ಅವುಗಳ ಮೇಲೆ ವ್ಯವಸ್ಥಿತ ಚಿತಾಗಾರ ಸ್ಟಾಂಡಗಳನ್ನು ಮತ್ತು ಮಳೆಗಾಲದ ಅನುಕೂಲಕ್ಕೆಂದು ಎತ್ತರದ ತಗಡಿನ ಮೇಲ್ಚಾವಣಿಯ ವ್ಯವಸ್ಥೆಮಾಡಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅಲ್ಲಿ ಒಂದು ಮಹಾದೇವನ ಗುಡಿಯನ್ನೂ ಕಟ್ಟಲಾಗಿದೆ ಮತ್ತು ಸ್ಮಶಾನದ ಕಾಂಪೌಂಡಿನ ಸುತ್ತಲೂ ಬಡಾವಣೆಯ ರಸ್ತೆಗಳು,ಮನೆಗಳು ಬಂದಿವೆ. ಈಗ ಒಂದೆರಡು ದಶಕಗಳಲ್ಲಿ ಬಡಾವಣೆಯ ಮುಖ್ಯ ರಸ್ತೆಗಳಿಗೆ ಹೆಸರಿನ ಬೋರ್ಡಗಳನ್ನು ಹಾಕಲಾಗಿದೆ ಮತ್ತು ಅಡ್ಡ ರಸ್ತೆಯಲ್ಲಿ ಇರುವ ಮನೆಗಳ ಸಂಖ್ಯೆಗಳನ್ನೂ ಬೋರ್ಡಗಳಲ್ಲಿ ನಮೂದಿಸಲಾಗಿದೆ. ಇದರಿಂದಾಗಿ ಹೊಸಬರು ಅಥವಾ ಆಟೋರಿಕ್ಷಾದವರಿಗೆ ನಮ್ಮ ಬಡಾವಣೆಯಲ್ಲಿ ಮನೆಗಳನ್ನು ಹುಡುಕುವುದು ಸರಳವಾಗಿದೆ. ಈ ವ್ಯವಸ್ಥೆ ಆಗುವುದಕ್ಕೂ ಮುಂಚೆ ನಮ್ಮ ಒಬ್ಬ ಗೃಹಸ್ಥರು ಸ್ಮಶಾನದ ಪಕ್ಕ ಎರಡನೇ ಮನೆ ಎಂದು ತಮ್ಮ ಮನೆಯ ಲ್ಯಾಂಡ್ ಮಾರ್ಕ್ ಹೇಳುತ್ತಿದ್ದರಂತೆ. ಹಾಗಾಗಿ ಅವರ ಮನೆಗೆ ಬರುವ ಅನೇಕ ಅಥಿತಿಗಳು ತಡರಾತ್ರಿ ಬರದೇ ಬೆಳಕಿರುವಾಗಲೇ ಬಂದು ಹೋಗುತ್ತಿದ್ದರಂತೆ!!!. ಇತ್ತೀಚಿಗೆ ಬಡಾವಣೆಯ ಒಬ್ಬ ಗ್ರಹಸ್ಥರ ವಯೋವೃದ್ಧ ತಂದೆಯವರು  ಅಲ್ಝೈಮರ್ಸ್ (Alzheimer's) ಎನ್ನುವ ವಯಸ್ಸಾದಂತೆ ಹೆಚ್ಚಾಗುವ ಪ್ರಗತಿಶೀಲ ಮೆದುಳಿನ ಕಾಯಿಲೆಯಿಂದ ಬಳಲುತ್ತಿದ್ದರು. ಈ ಕಾಯಿಲೆಯಿಂದ ಬಳಲುವವರು ಸ್ಮರಣೆ, ​​ಚಿಂತನಾ ಕೌಶಲಗಳು ಮತ್ತು ದೈನಂದಿನ ಕೆಲಸಗಳನ್ನು ಮಾಡುವ ಸಾಮರ್ಥ್ಯವನ್ನು ಕ್ರಮೇಣವಾಗಿ ಕಳೆದುಕೊಳ್ಳುತ್ತಾರೆ. ಹಾಗಾಗಿ ಆ ಗೃಹಸ್ಥರು ತಮ್ಮ ತಂದೆಯನ್ನು ಒಬ್ಬರೇ ಎಲ್ಲಿಯೂ ಹೊರಗೆ ಹೋಗಲು ಬಿಡುತ್ತಿರಲಿಲ್ಲ. ಒಂದು ದಿನ ಬೆಳಗ್ಗೆ, ಆ ವಯೋವೃದ್ಧರು ಮನೆಯಿಂದ ಕಾಣೆಯಾದರು. ಮನೆಯವರು ಗಾಬರಿಯಾಗಿ ಇಡೀ ಬಡಾವಣೆಯ ಮತ್ತು ಪಕ್ಕದ ಕಾಲೊನಿಯ ಎಲ್ಲಾ ಪ್ರಮುಖ ರಸ್ತೆ, ಆಟದ ಮೈದಾನ, ಬಸ್ಸು ನಿಲ್ದಾಣಗಳನ್ನು ಸುತ್ತು ಮುತ್ತಲಿನ ಗುಡಿ ಗುಂಡಾರಗಳನ್ನು ಹುಡುಕಾಡಿ ವಿಚಾರಿಸಿದರೂ ಎಲ್ಲೂ ಆ ವೃದ್ಧರ ಸುಳಿವಿಲ್ಲ.ಕೊನೆಗೆ ಪೋಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದೂ ಆಯಿತು ಆದರೆ ಏನೂ ಪ್ರಯೋಜನವಾಗಲಿಲ್ಲ. ನಂತರ ಗಾರೆ ಕೆಲಸದ ಕೂಲಿ ಆಳುಗಳು ಮಧ್ಯಾನ್ಹ ಊಟಮಾಡಿ ಕೈ ತೊಳೆಯಲು ಸ್ಮಶಾನದಲ್ಲಿನ ಬೋರವೆಲನ ನಳದ ಕಡೆಗೆ ಹೋದಾಗ ಅಲ್ಲಿನ ಶಿವಾಲಯದ ಪ್ರಾಂಗಣದಲ್ಲಿ ಆ ವಯೋವೃದ್ಧರನ್ನು ಕಂಡರಂತೆ. ಆ ಸುದ್ದಿಯನ್ನು ತಿಳಿದ ಗ್ರಹಸ್ಥರಿಗೆ ಹೋದ ಜೀವ ಮರಳಿ ಬಂದಂತಾಗಿ ಕೂಡಲೇ ಸ್ಮಶಾನಕ್ಕೆ ಹೋಗಿ ತಮ್ಮ ತಂದೆಯನ್ನು ಮನೆಗೆ ಕರೆತಂದು ಅಲ್ಲಿ ಏಕೆ ಹೋದಿರಿ ಎಂದು ವಿಚಾರಿಸಿದಾಗ ಪಾಪ ಆ ವೃದ್ಧರು, ಮನೆಯಲ್ಲೇ ಕೂತು ಬಹಳ ಬೇಸರವಾಗಿತ್ತು ಅದಕ್ಕೆ ಹೊರಬಂದು ನಡೆದೆ ಹಾದಿಯಲ್ಲಿ ಆ ಕಾಂಪೌಂಡಿನಲ್ಲಿಯ (ಸ್ಮಶಾನದ) ಗಿಡ ಮರಗಳು ಮತ್ತು ಪಕ್ಷಿಗಳ ಕಲರವ ಆಲ್ಹಾದಕರವೆನಿಸಿತು. ಅಲ್ಲಿನ ಗುಡಿಯ ವಾತಾವರಣ ಬಹಳ ಪ್ರಶಾಂತವೆನಿಸಿತು ಅದಕ್ಕೆ ಅಲ್ಲೇ ಸ್ವಲ್ಪಹೊತ್ತು ಕೂತೆ. ಆಮೇಲೆ  ನಮ್ಮ ಮನೆ ಎಲ್ಲಿದೆ ಎಂದು ನೆನಪಾಗಲಿಲ್ಲ. ಹಾಗಾಗಿ ಅಲ್ಲಿಯೇ ರುದ್ರಭೂಮಿಯಲ್ಲಿ ಕೂಳಿತುಕೊಂಡು ಬಿಟ್ಟಿದ್ದೇ ಎಂದಿದ್ದರಂತೆ.ಇದೆಲ್ಲ ಇತ್ತೀಚಿನ ವಿಷಯವಾದರೆ, ನಾನು ಪ್ರಾಥಮಿಕ ಶಾಲಾಬಾಲಕನಾಗಿದ್ದ ಎಪ್ಪತ್ತರ ದಶಕದಲ್ಲಿನ ಪ್ರಸಂಗವನ್ನು ಹೇಳುವೆ. ಆಗ ಹಾಲಿನ ಬರವಿದ್ದು ದಿನಾಲು ಸಂಜೆ ಖಾಲಿ ಹಾಲಿನ ಬಾಟಲಿ ಮತ್ತು ಹಣವನ್ನು ನಮ್ಮ ಮನೆಯ ಹತ್ತಿರವಿದ್ದ ಒಂದು ರೆಸಿಡೆನ್ಸಿಯಲ್ ಶಾಲೆಯ ಹಾಸ್ಟೆಲ್ ವಾರ್ಡನಗೆ ಕೊಟ್ಟು ಮರುದಿನ ಬೆಳಿಗ್ಗೆ ಹಾಲಿನ ಡೈರಿಯಿಂದ ಬಂದ ಹಾಲುತುಂಬಿದ ಬಾಟಲಿಗಳನ್ನು ಮನೆಗೆ ತರುವುದು ನನ್ನ ನಿತ್ಯದ ಕರ್ತವ್ಯವಾಗಿತ್ತು. ನಮ್ಮ ಮನೆಯಿದ್ದ ಕಾಲೊನಿಯಿಂದ ಆ ಹಾಸ್ಟೆಲಗೆ ಹೋಗುವ ಹಾದಿಯಲ್ಲಿ ಒಂದು ದೊಡ್ಡ ಬಯಲು ಪ್ರದೇಶ ಮತ್ತು ಅದರ ಅನತಿ ದೂರದಲ್ಲಿ ಒಂದು ಬಯಲು ಸ್ಮಶಾನ ಇತ್ತು. ನಾನು ಖಾಲಿ ಹಾಲಿನ ಬಾಟಲಿ ಇಟ್ಟುಬರಲು ಸಂಜೆಯ ಬೆಳಕಿರುವಾಗಲೇ ನನ್ನ ಒಬಿಬ್ಬ ಗೆಳೆಯರೊಂದಿಗೆ ಹೋಗುತ್ತಿದ್ದೆ ಮತ್ತು ಆ ವೇಳೆ ತಪ್ಪಿಯೂ ಆ ಸ್ಮಶಾನದ ಕಡೆಗೆ ನೋಡುತ್ತಿರಲಿಲ್ಲ. ಕೆಲವೊಮ್ಮೆ ಶಾಲೆಯಿಂದ ಬಂದು ಗೆಳೆಯರೊಂದಿಗೆ ಆಟವಾಡುತ್ತಾ ಕತ್ತಲಾಗಿಬಿಡುತ್ತಿತ್ತು. ಆಗ ನನ್ನ ಗೆಳೆಯರು ನನ್ನ ಜೊತೆ ಹಾಸ್ಟೇಲನಲ್ಲಿ ಹಾಲಿನ ಬಾಟಲಿ ಇಟ್ಟುಬರಲು ಹಿಂದೇಟು ಹಾಕುತ್ತಿದ್ದರು. ಅನಿವಾರ್ಯವಾಗಿ ನಾನೊಬ್ಬನೇ ಹೋಗುವ ಪ್ರಸಂಗಗಳು ಬರುತ್ತಿದ್ದವು. ಕಾಕತಾಳೀಯ ಎಂಬಂತೆ ಅದೇ ಸಮಯದಲ್ಲಿ ಯಾವುದೋ ಹೆಣಸುಡುತ್ತಿದ್ದು ಅದರ ಬೆಂಕಿಯು ಭುಗಿಲೇಳುವುದು ನಡೆದಿರುತ್ತಿತ್ತು. ಮನಸ್ಸಿನಲ್ಲಿ ಎಷ್ಟು ಬೇಡವೆಂದು ಅಂದುಕೊಂಡರೂ ನನ್ನ ದೃಷ್ಟಿ ಆಕಡೆಗೆ ಹರಿಯುತ್ತಿತ್ತು. ನಸುಕತ್ತಲೆಯಲ್ಲಿ ಆ ದೃಶ್ಯ ನನ್ನಲ್ಲಿ ಏನೋ ಒಂದು ಅವ್ಯಕ್ತ ಭಯವನ್ನು ಹುಟ್ಟುಸುತ್ತಿತ್ತು. ಶ್ರೀ ರಾಮರಕ್ಷಾ ಸ್ತೋತ್ರವನ್ನು ಗಟ್ಟಿ ಧ್ವನಿಯಲ್ಲಿ ಹೇಳುತ್ತಾ ಧಾಪುಗಾಲಿಡುತ್ತಾ ಹೇಗೋ ಮನೆಗೆ ಬಂದು ಸೇರುತ್ತಿದ್ದೆ. 

ನಾನು ಹೈಸ್ಕೂಲಿನಲ್ಲಿದ್ದಾಗ ಒಂದು ರವಿವಾರದಂದು ನಮ್ಮ ಶಾಲೆಯ ಧಾಡಸಿ ಮಾಸ್ತರ ಒಬ್ಬರು ನಮ್ಮನ್ನೆಲ್ಲ ಸ್ಮಶಾನದ ಸ್ವಚ್ಛತಾ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಿದ್ದರು. ಸ್ಮಶಾನ, ಇದು ರುದ್ರ ದೇವರ (ಶಿವನ) ವಾಸಸ್ಥಾನ. ರುದ್ರದೇವರು ಭೂತಗಣದ ಅಭಿಮಾನಿ ದೇವತೆ ಮತ್ತು ನಮ್ಮ ಮನಸ್ಸನ್ನು ನಿಯಂತ್ರಿಸುವ ದೇವರು. ಹಾಗಾಗಿ ರುದ್ರ ಭೂಮಿಯ ಸ್ವಚ್ಛತೆ ಮಾಡುವುದು ವೈರಾಗ್ಯ ಮೂರ್ತಿಯಾದ ಆ ಪರಶಿವನ ಸೇವೆ ಮಾಡಿದಂತೆ ಅದರಿಂದ ನಮ್ಮ ಮನೋಬಲ ಹೆಚ್ಚುತ್ತದೆ ಎಂದು ವಿವರಿಸಿದ್ದರು. ಬಹುಶಃ ಅಂದಿನಿಂದ ಸ್ಮಶಾನದ ಬಗ್ಗೆ ನನ್ನ ಮನಸ್ಸಿನಲ್ಲಿದ್ದ ಅವ್ಯಕ್ತ ಭಯ ಹೋಗಿರಬಹುದು.ಅದೇ ಕಾಲಘಟ್ಟದಲ್ಲಿ ತೆರೆಕಂಡ ಶೋಲೆ ಚಲನಚಿತ್ರದ ಕಡೆಯ ಹಂತದಲ್ಲಿ ಗುಂಡಿನ ಕಾಳಗದಲ್ಲಿ ಮೃತನಾದ ಜಯ (ಅಮಿತಾಬ್ ಬಚ್ಚನ್) ನ ಅಂತ್ಯಸಂಸ್ಕಾರದ ಚಿತೆಯ ಜ್ವಾಲೆಗಳ ದೃಶ್ಯಾವಳಿಯನ್ನು ಧೈರ್ಯದಿಂದ ಥಿಯೇಟರನಲ್ಲಿ ನೋಡಿದೆ. ಮುಂದೆ ಪ್ರಧಾನಿ ಇಂದಿರಾ ಗಾಂಧಿ ಅವರ ಅಂತ್ಯಕ್ರಿಯೆಯನ್ನೂ ಟಿವಿಯಲ್ಲಿ ನೋಡಿದೆ.

ನಮ್ಮಜ್ಜಿ ಬೆಳಗಾವಿಯಲ್ಲಿ ತೀರಿಕೊಂಡಾಗ ನಾನಿನ್ನೂ ಬಾಲಕ. ನಾವು ಗುಲ್ಬರ್ಗಾದಲ್ಲಿ ಇದ್ದುದರಿಂದ ಅವಳ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗಲಿಲ್ಲ, ಇರಲಿ. ಬಹುಷಃ ಪಾಲಕರಿಬ್ಬರೂ ಬದುಕಿರುವಾಗ ಮಕ್ಕಳು ಇತರರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸ್ಮಶಾನಕ್ಕೆ ಹೋಗಬಾರದು ಎಂಬ ಸಂಪ್ರದಾಯವೋ ಏನೋ ಗೊತ್ತಿಲ್ಲಾ, ಒಟ್ಟಿನಲ್ಲಿ ನಾನು ಕಾಲೇಜು ಶಿಕ್ಷಣ ಮುಗಿಸುವ ತನಕ ಯಾವುದೇ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ರುದ್ರಭೂಮಿಗೆ ಹೋಗುವ ಪ್ರಸಂಗ ಬಂದಿರಲಿಲ್ಲ. ಮುಂದೆ ನೌಕರಿಯ ಪ್ರಾರಂಭಿಕ ದಿನಗಳಲ್ಲಿ ನನ್ನ ಆತ್ಮೀಯ ಮಿತ್ರನ ತಾಯಿ ತೀರಿಕೊಂಡಾಗ ನನ್ನ ಮಿತ್ರ ಮುಂಬೈನಲ್ಲಿದ್ದ ಕಾರಣ ತಾಯಿಯ ಅಂತ್ಯಕ್ರಿಯೆಯಲ್ಲಿ ಆತನಿಗೆ ಪಾಲ್ಗೊಳ್ಳಲು ಬರಲಾಗಲಿಲ್ಲ. ಆದರೆ ಅವನ ಸೋದರಮಾವ ಹುಡುಗನೊಬ್ಬನನ್ನು ನಮ್ಮ ಮನೆಗೆ ಕೊಟ್ಟುಕಳಿಸಿ ನನ್ನ ಮಿತ್ರನ ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಬರಹೇಳಿ ಕಳಿಸಿದರು. ಅಂದು ನಾನು ನನ್ನ ಮಿತ್ರನ ಪ್ರತಿನಿಧಿಯಾಗಿ ಸ್ಮಶಾನಕ್ಕೆ ಹೋಗಿ ಮೃತರ ಆತ್ಮಕ್ಕೆ ಶಾಂತಿ ಕೋರಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡೆ. ಮುಂದೆ ಕೆಲವೇ ವರ್ಷಗಳಲ್ಲಿ ನಮ್ಮ ತಾಯಿ ಗುಲ್ಬರ್ಗಾದಲ್ಲಿ ತೀರಿಕೊಂಡಾಗ ನಾನು ಬೆಳಗಾವಿಯಲ್ಲಿದ್ದ ಕಾರಣ ಅವಳ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ನನಗೆ ಆಗಲೇ ಇಲ್ಲ.

ಇತ್ತೀಚಿನ ೩೦ ವರ್ಷಗಳಲ್ಲಿ ನಮ್ಮ ತಂದೆ, ಬಂಧುಬಳಗ, ನೆರೆಹೊರೆ, ಮಿತ್ರ, ಸಹೋದ್ಯೋಗಿ ಮತ್ತು ಅವರ ಪಾಲಕರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಅನೇಕಸಲ ರುದ್ರಭೂಮಿಗೆ ಹೋಗಿ ಬಂದಿರುವೆ.ಇತರರಂತೆ ನನಗೂ ಪ್ರತೀಸಲ ಮೃತರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೋದಾಗ ಸ್ಮಶಾನ ವೈರಾಗ್ಯದ ಅನುಭವ ಆಗಿದೆ ಮತ್ತು ಅನೇಕಸಲ ಇತರರಂತೆ ಮನೆ ಸೇರಿದ ಕೆಲಹೊತ್ತಿನಲ್ಲಿ ಅದು ಮಾಯವಾಗಿ ಮತ್ತೆ ಸಂಸಾರದ ಜಂಜಾಟದಲ್ಲಿ ಮುಳುಗಿದ್ದುಂಟು.

ಇತ್ತೀಚೆಗೆ ನಮ್ಮ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಹಿರಿಯ ಸಹೋದ್ಯೋಗಿಯೊಬ್ಬರು ವಯೋಸಹಜ ಆರೋಗ್ಯದ ಏರುಪೇರಾಗಿ ಆಸ್ಪತ್ರೆಗೆ ದಾಖಲಾದ ಒಂದೇ ದಿನದಲ್ಲಿ ದೈವಾಧೀನರಾದರು. ಸುದ್ದಿ ತಿಳಿದ ತಕ್ಷಣ ತಡ ರಾತ್ರಿಯಾದರೂ ನಾನು ಮತ್ತು ನನ್ನಂತೆ ನಿವೃತ್ತ ಆತ್ಮೀಯ ಸಹೋದ್ಯೋಗಿ ಮಿತ್ರ ಇಬ್ಬರೂ ಆ ಹಿರಿಯರ ಅಂತ್ಯಕ್ರಿಯೆಯಯಲ್ಲಿ ಪಾಲ್ಗೊಳ್ಳಲು ಸ್ಮಶಾನಕ್ಕೆ ತೆರಳಿದೆವು. ಕಳೆಬರಕ್ಕೆ ಅಗ್ನಿ ಸ್ಪರ್ಶವಾದನಂತರ ಹಿರಿಯರೊಬ್ಬರು ಯಾರಾದರೂ ವಿಷ್ಣುಸಹಸ್ರನಾಮ ಪಠಿಸಿ ಎಂದು ಹೇಳಿದರು. ತಕ್ಷಣ ನನ್ನ ಸಹೋದ್ಯೋಗಿ ಮಿತ್ರ ವಿಷ್ಣುಸಹಸ್ರನಾಮ ಪಠಿಸಲು ಪ್ರಾರಂಭಿಸಿದರು. ನಾನೂ ಅವರನ್ನು ಅನುಸರಿಸಿ ಅವರೊಂದಿಗೆ ವಿಷ್ಣುಸಹಸ್ರನಾಮ ಪಠಿಸಿದೆ. ಸುಮಾರು ಇಪ್ಪತ್ತು ನಿಮಿಷಗಳಲ್ಲಿ ಪಠಣ ಮುಗಿಸಿದೆವು. ನನ್ನ ಮನಸ್ಸಿನಲ್ಲಿ ಏನೋ ಒಂದು ವಿಚಿತ್ರ ರೋಮಾಂಚಕ ಅನುಭವವಾಯಿತು. ಇದೇ ಮೊದಲ ಸಲ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆಯ ಸಂದರ್ಭದಲ್ಲಿ ವಿಷ್ಣುಸಹಸ್ರನಾಮವನ್ನು ಪಠಿಸುವ ಸಂಪ್ರದಾಯದ ಪರಿಚಯ ನನಗಾಗಿತ್ತು. ನಾವಿಬ್ಬರೂ ಕಾಲು ತೊಳೆದುಕೊಂಡು ಮನೆಗೆ ಬರುವ ಹಾದಿಯಲ್ಲಿ ಬಹಳ ಧಾರ್ಮಿಕ ಶ್ರದ್ಧೆಯ ಸಾತ್ವಿಕ ಸ್ವಭಾವದ ನನ್ನ ಮಿತ್ರರು ರುದ್ರಭೂಮಿಯಲ್ಲಿ ವಿಷ್ಣುಸಹಸ್ರನಾಮವನ್ನು ಪಠಿಸುವ ಸಂಪ್ರದಾಯ ಮತ್ತು ಅದರ ಮಹತ್ವದ ಹಿನ್ನೆಲೆಯನ್ನು ಸಂಕ್ಷಿಪ್ತವಾಗಿ ತಿಳಿಸಿದರು, ಇರಲಿ.

ನಾನು ಹೈಸ್ಕೂಲಿನಲ್ಲಿದ್ದಾಗ ದಿನಾಲೂ ಶಾಲೆಯಿಂದ ಬಂದನಂತರ ನಮ್ಮ ಕಾಲೊನಿಯಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಯಲ್ಲಿ ಆಟವಾಡಲು ಗೆಳೆಯರೊಂದಿಗೆ ಹೋಗುತ್ತಿದ್ದೆ. ಹಾದಿಯಲ್ಲಿ ಬ್ಯಾಂಕಿನ ನಿವೃತ್ತ ಮಹನೀಯರೊಬ್ಬರ ಮನೆಯಲ್ಲಿ ದಿನಾಲೂ ಸಂಜೆಯ ಅದೇ ಸಮಯಕ್ಕೆ ತಪ್ಪದೇ ಸುಬ್ಬುಲಕ್ಷ್ಮಿಯವರು ಪಠಿಸಿದ ವಿಷ್ಣುಸಹಸ್ರನಾಮವನ್ನು ರೆಕಾರ್ಡ್ ಪ್ಲೇಯರನಲ್ಲಿ ಜೋರಾಗಿ ಹಚ್ಚಿರುತ್ತಿದ್ದರು. ಮುಂದೆ ಕೆಲವರ್ಷಗಳ ನಂತರ ನಮ್ಮ ಮನೆಯಲ್ಲಿ ಟೇಪ್ ರೆಕಾರ್ಡರ್ ಬಂದಾಗ ನಮ್ಮಮ್ಮನಿಗಾಗಿ ನಮ್ಮ ತಂದೆ  ಸುಬ್ಬುಲಕ್ಷ್ಮಿಯವರು ಪಠಿಸಿದ ವೆಂಕಟೇಶ್ವರ ಸುಪ್ರಭಾತ, ವಿಷ್ಣುಸಹಸ್ರನಾಮ, ಭಜಗೋವಿಂದಂ ಮುಂತಾದವುಗಳಿದ್ದ ಒಂದು ಕ್ಯಾಸೆಟ್ ತಂದಿದ್ದರು. ಆಗ ದಿನಾಲೂ ನಮ್ಮ ಮನೆಯಲ್ಲಿ ಆ ಕ್ಯಾಸೆಟ್ ಪ್ಲೇ ಆಗುತ್ತಿತ್ತು. ಮುಂದೆ ಡಿಜಿಟಲ್ ರೆಕಾರ್ಡರ್ ಬಂದಾದ ಮೇಲೆ ನಮ್ಮ ಕಾಲೇಜಿನ ಪ್ರಾಂಶುಪಾಲರು ತಮ್ಮ ಚೇಂಬರನ ಲ್ಯಾಪ್ಟಾಪನಲ್ಲಿ ನಿರಂತರವಾಗಿ ವಿಷ್ಣುಸಹಸ್ರನಾಮ ಪ್ಲೇ ಮಾಡುತ್ತಿದ್ದರು. ಕಳೆದ ಕೆಲವೊಂದು ವರ್ಷಗಳಿಂದ ನನ್ನ ಅಣ್ಣಂದಿರು ಮತ್ತು ಅಕ್ಕಂದಿರು ತಮ್ಮ ಮನೆಯಲ್ಲಿ ನಿತ್ಯವೂ ವಿಷ್ಣುಸಹಸ್ರನಾಮ ಪಠಿಸುವುದನ್ನು ಕಂಡು ನಮ್ಮ ಮನೆಯಲ್ಲಿ ನಾನು ಮತ್ತು ನನ್ನ ಶ್ರೀಮತಿ ಜೊತೆಯಾಗಿ ವಿಷ್ಣುಸಹಸ್ರನಾಮದ ಪಠಣಮಾಡುತ್ತಿರುವೆವು, ಇರಲಿ.

ಇತ್ತ, ನಮ್ಮನ್ನಗಲಿದ ಆ ಹಿರಿಯ ಪ್ರಾಧ್ಯಾಪಕರ ವೈಕುಂಠ ಸಮಾರಾಧನೆಯ ದಿನದಂದು ಬಾಯಿ ಸಿಹಿ ಮಾಡಿಕೊಳ್ಳಲೆಂದು ನಾನು ಮತ್ತು ನನ್ನ ಮಿತ್ರ ಇಬ್ಬರೂ ಒಂದೇ ಸ್ಕೂಟರನಲ್ಲಿ ಹೊರಡಲು ನಿರ್ಧರಿಸಿದ್ದೆವು. ನನ್ನ ಮಿತ್ರರಿಗೆ ನಮ್ಮ ಮನೆಗೆ ನಿಗದಿತ ಸಮಯಕ್ಕೆ ಬರಲು ಸ್ವಲ್ಪ ತಡವಾಯಿತು. ಈ ಸಲದ ಅಧಿಕಮಾಸ ಮೇ ತಿಂಗಳಲ್ಲಿ ಬರುವುದರಿಂದ ಬೇಸಿಗೆಯ ಬಿಸಿಲು ಜಾಸ್ತಿ ಇರುತ್ತದೆ. ಅಧಿಕಮಾಸದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ದೇವಸ್ಥಾನದಲ್ಲಿ ಜರುಗುವಾಗ ವಿದ್ಯುತ್ತಿನ ವ್ಯತ್ಯಯವಾದರೆ ಎಲ್ಲರಿಗೂ ಕಷ್ಟವಾಗುತ್ತದೆ, ಯಾವುದೋ ಭಕ್ತರ ಸಹಾಯದಿಂದ ನಮ್ಮ ಕಾಲೊನಿಯ ದೇವಸ್ಥಾನದಲ್ಲಿ ಒಂದು ಒಳ್ಳೆಯ ಇನ್ವರ್ಟರ ವ್ಯವಸ್ಥೆ ಮಾಡಿಸುತ್ತಿದ್ದೆ ಹಾಗಾಗಿ ಬರಲು ತಡವಾಯಿತೆಂದು‌ ನನ್ನ ಮಿತ್ರರು ತಿಳಿಸಿದರು ಮತ್ತು ಮರುದಿನದಿಂದ ಪ್ರಾರಂಭವಾಗುವ ಈ ಸಲದ ಅಧಿಕಮಾಸದಲ್ಲಿ ತಾವು ದೇವಸ್ಥಾನದಲ್ಲಿ ಹಮ್ಮಿಕೊಂಡಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಅವರು ವಿವರಿಸುವಷ್ಟರಲ್ಲಿ ವೈಕುಂಠ ಸಮಾರಾಧನೆಯ ವ್ಯವಸ್ಥೆಯಾದ ಸಮರ್ಥಮಂದಿರ ಮುಟ್ಟಿದೆವು. ನಮ್ಮನ್ನು ಅಗಲಿದ ಆ ಹಿರಿಯ ಆತ್ಮಕ್ಕೆ ನಮಿಸಿ ಬಾಯಿ ಸಿಹಿ ಮಾಡಿಕೊಳ್ಳುವ ವಾಡಿಕೆಯನ್ನು ಮುಗಿಸಿ ವಾಪಸ್ ಬರುವಾಗ ನನ್ನ ಮಿತ್ರರು ಆ ಸಮರ್ಥಮಂದಿರದಲ್ಲಿ ಇತ್ತೀಚಿಗೆ ಮಾಡಿದ ವಿವಿಧ ಅಭಿವೃದ್ಧಿ ಮಾರ್ಪಾಡುಗಳು ಮತ್ತು ಬೆಳೆಸಿದ ವಿವಿಧ ಬಗೆಯ ಗಿಡ ಮರಗಳು ಮತ್ತು ಈ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಲು ಆಡಳಿತಗಾರರು ಪಟ್ಟ ಪರಿಶ್ರಮ ಇತ್ಯಾದಿಯನ್ನು ವಿವರಿಸಿ ತಾನೂ ನಿವೃತ್ತಿಯ ನಂತರದ ಈ ಎರಡು ವರ್ಷಗಳಿಂದ ಇದೇ ತೆರನಾದ ಅಭಿವೃದ್ಧಿ ಕಾರ್ಯಗಳನ್ನು ನಮ್ಮ ಕಾಲೊನಿಯ ದೇವಸ್ಥಾನದಲ್ಲಿ ಮಾಡುತ್ತಿರುವ ಬಗ್ಗೆ ತಿಳಿಸಿದರು. 

ಮರುದಿನ ಅಧಿಕ ಮಾಸದ ಮೊದಲ ದಿವಸದ ಆಚರಣೆಯನ್ನು ಗುಡಿಯಲ್ಲಿ ವಿದ್ಯುಕ್ತವಾಗಿ ಸಾಂಪ್ರದಾಯಿಕ ಪೂಜೆ, ರುದ್ರಾಭಿಷೇಕ, ಸತ್ಯನಾರಾಯಣ ಪೂಜೆ, ಗುರು ಚರಿತ್ರೆಯ ಪಾರಾಯಣದ ಜೊತೆಗೆ ಹೊಸದಾಗಿ ಹಾಕಿಸಿದ ಇನ್ವರ್ಟರನ ಪೂಜೆಯನ್ನು ನೆರವೇರಿಸಿ ಭಕ್ತಾದಿಗಳ ಪ್ರಸಾದದ ವ್ಯವಸ್ಥೆಯ ಮೇಲುಸ್ತುವಾರಿಯನ್ನು ನೋಡಿಕೊಂಡು ಅಧಿಕ ಮಾಸದ ಪ್ರಾರಂಭದ ದಿನದ ವಿವಿಧ ಕೈಂಕರ್ಯಗಳನ್ನು ನನ್ನ ಮಿತ್ರರು ಪೂರ್ಣಗೊಳಿಸಿದರು. ಸಂಜೆ ತಮ್ಮ ಮನೆಯಲ್ಲಿ ಸತ್ಸಂಗ ಕಾರ್ಯಕ್ರಮ ನಡೆಸಿ ಆರತಿ ನೈವೇದ್ಯ ಮಾಡಿದರು. ಸತ್ಸಂಗಕ್ಕೆ ಬಂದ ಅಥಿತಿ ಬಾಂಧವರಿಗೆ ಪ್ರಸಾದ ನೀಡಲು ದೇವರ ಕೋಣೆಯಲ್ಲಿ ಹೋದವರು ಕೂಡಲೇ ಕುಸಿದು ಬಿದ್ದರು. ಬಿದ್ದ ಕ್ಷಣಾರ್ಧದಲ್ಲಿ ಇಹಲೋಕ ಯಾತ್ರೆಯನ್ನು ಮುಗಿಸಿಯೇಬಿಟ್ಟರು. ಆ ರಾತ್ರಿ ಗುಡುಗು ಮಳೆಗಳನ್ನು ಲೆಕ್ಕಿಸದೇ ಅವರ ಅಂತ್ಯಕ್ರಿಯೆಯಯಲ್ಲಿ ನೂರಾರು ಜನರು ಪಾಲ್ಗೊಂಡರು. ರುದ್ರ ಭೂಮಿಯಲ್ಲಿ, ದುಖಃದ ಪ್ರಸಂಗದಲ್ಲಿಯೂ ಅವರ ಚಿರಂಜೀವಿಯು ತಮ್ಮ ತಂದೆಗೆ ವಿಷ್ಣುಸಹಸ್ರನಾಮ ಎಂದರೆ ಬಹಳ ಇಷ್ಟ ಹಾಗಾಗಿ ತಂದೆಯ ಆತ್ಮದ ಶಾಂತಿಗಾಗಿ ಯಾರಿಗೆ ಅನ್ನಲು ಬರುತ್ತದೆಯೋ ಅವರೆಲ್ಲರೂ ವಿಷ್ಣುಸಹಸ್ರನಾಮ ಪಠಿಸಿ ಎಂದು ವಿನಂತಿದ. ನನ್ನ ಮಿತ್ರರರಿಂದಲೇ ವಿಷ್ಣುಸಹಸ್ರನಾಮದ ಮತ್ತೂ ಇತರ ಅನೇಕ ಮಂತ್ರಗಳ ಪಠಣವನ್ನು ಕಲಿತ ನಮ್ಮ ಕಾಲೊನಿಯ ಅನೇಕರ ಜೊತೆಗೆ ನಾನೂ ವಿಷ್ಣುಸಹಸ್ರನಾಮದ ಪಠಣವನ್ನು ಮಾಡಿ ನನ್ನ ಆತ್ಮೀಯ ಮಿತ್ರರಿಗೆ ಗೌರವ ನಮನ ಸಲ್ಲಿಸಿ ಮನೆಗೆ ಹಿಂತಿರುಗಿದೆ. ಅಂದಿನಿಂದ ನಮ್ಮ ಬಡಾವಣೆಯಲ್ಲಿ ಅಧಿಕ ಮಾಸದ ಎಲ್ಲಾ ಕಾರ್ಯಕ್ರಮಗಳು ನಿಂತುಹೋಗಿ ನಮ್ಮ ನಗರ ಅಘೋಷಿತ ಸೂತಕದ ವಾತಾವರಣದಲ್ಲಿ ಮುಳುಗಿತು. 

ಹದಿನೈದು ದಿನಗಳ ನಂತರದಲ್ಲಿ ಧಿಡೀರನೆ ಒಬ್ಬರ ನಂತರ ಒಬ್ಬರಂತೆ ಇಬ್ಬರು ನಿವೃತ್ತ ಸಹೋದ್ಯೋಗಿಗಳನ್ನು ಕಳೆದುಕೊಂಡು ಅವರ ಅಂತ್ಯಕ್ರಿಯೆಯಲ್ಲಿ ರುದ್ರಭೂಮಿಯಲ್ಲಿ ವಿಷ್ಣು ಸಹಸ್ರನಾಮ ಪಠಿಸಿ ಬಂದ ನನಗೆ ಮರುದಿನದಿಂದ ಮನೆಯಲ್ಲಿ ನಿತ್ಯದ ವಿಷ್ಣುಸಹಸ್ರನಾಮದ ಪಠಣವನ್ನು ಮಾಡುವಾಗ ಮನಸ್ಸು ಶೂನ್ಯಭಾವದತ್ತ ವಾಲುತ್ತಿದೆ. ಈ ಸಲ ಅಧಿಕಮಾಸದಲ್ಲಿ ಮೂಡಿದ ಸ್ಮಶಾನ ವೈರಾಗ್ಯದಿಂದ ಹೊರಬರಲು ಆಗುತ್ತಿಲ್ಲ....


ಡಾ . ಜಯಂತ ಕಿತ್ತೂರ 

ಕಾಮೆಂಟ್‌ಗಳು

  1. ತಮ್ಮ ಲೇಖನಗಳನ್ನ ಓದಿದಾಗ ಪ್ರತಿ ಸಲ ಆ ಶಬ್ದಗಳು ಆ ಸನ್ನಿವೇಶದ ಚಿತ್ರಣ ಕಟ್ಟಿಕೊಡತಾವ್ ಸರ್. ಆ ವೇಗ, ತೀವ್ರತೆ ಸಹಜತೆ ಓದಿಸಿಕೊಂಡು ಹೋಗುತ್ತ ಗುರುಜೀ. ಒಂದು ವಿನಂತಿ ಸರ್ ಎಲ್ಲಿಯೂ "ಇರಲಿ" ಅನ್ನುವದಕ್ಕಿಂತ ಆ ಸನ್ನಿವೇಶವನ್ನೂ ದಯವಿಟ್ಟು ವಿವರಿಸಿ. ನಿಮ್ಮ ಬರಹ ಎಲ್ಲಿಯೂ ಬೋರಾಗುವುದಿಲ್ಲ. ನೈಜತೆ ಮತ್ತು ಕನ್ನಡದ ಮೇಲಿರುವ ತಮ್ಮ ಹಿಡಿತಕ್ಕೆ ಶರಣು. ಸಾಹಿತ್ಯ ಕ್ರಷಿ ಹೀಗೇಯೇ ಸಾಗಲಿ ಸರ್🙏

    ಪ್ರತ್ಯುತ್ತರಅಳಿಸಿ
  2. In BG, Lord Krishna say's " jaatsya maranam druvam", one has to die who takes the birth. So birth and deaths are natural phenomenon. One should develop the mindset of Sthita Prajnata. ಹೆರಿಗೆ ಮತ್ತು ಸ್ಮಶಾನ ವೈರಾಗ್ಯ ಇವು ಕ್ಷಣಿಕ ಎಂದು ಗಾದೆ ಮಾತು ಇದೆ. ಧೈರ್ಯ ವಾಗಿರಿ. ಉತ್ತಮ ಮನದಾಳದ ಮಾತುಗಳು.

    ಪ್ರತ್ಯುತ್ತರಅಳಿಸಿ
  3. Sir,

    This is yet another event article. It's lengthy but am engaging one.

    Also I could connect with one incident about the recent death of a senior colleague. I couldn't attend to his funeral because of my present location being so far away from Belagavi.

    All in all, a nicely compiled article.

    ಪ್ರತ್ಯುತ್ತರಅಳಿಸಿ
  4. ಈ ನಿಮ್ಮ ಲೇಖನ ಓದಿದಾಗ ಇದು ನಿಮ್ಮ ಆ ಮಿತ್ರರಿಗೆ ನೀವು ಬರೆದ ಶ್ರದ್ಧಾಂಜಲಿ ಅಂತ ಅನ್ನಿಸಿತು. ಕಣ್ಣಲ್ಲಿ ನೀರು ಜಿನುಗಿತು. ಅವರು ಅಷ್ಟು ಜನರಿಗೆ ಸ್ತೋತ್ರಗಳನ್ನೆಲ್ಲ ಹೇಳಿಕೊಟ್ಟಿದ್ದು ಧಾರ್ಮಿಕ ಸ್ವಭಾವದವರಾಗಿದ್ದ ಕಾರಣ ಅವರ ವಿಷಯದಲ್ಲಿ ನಿಮ್ಮ ಮನಸ್ಸು ಮಿಡಿಯುತ್ತಿದೆ.
    ಇದನ್ನು ಸ್ಮಶಾನ ವೈರಾಗ್ಯ ಅಂದುಕೊಳ್ಳದೆ ಅವರ ಕಾರ್ಯವನ್ನು ಮುಂದುವರೆಸಿಕೊಂಡು ಹೋಗಿ ಅವರಿಗೆ ನಿಜವಾದ ಶ್ರದ್ಧಾಂಜಲಿ ಕೊಡಬಹುದು.
    ನನ್ನ ಮನದಾಳದ ಭಾವನೆ🙏
    ಲೇಖನ ತುಂಬ ಚೆನ್ನಾಗಿ ಬಂದಿದೆ 👌

    ಪ್ರತ್ಯುತ್ತರಅಳಿಸಿ
  5. ನಿಮ್ಮ ಹಿರಿಯ ಸಹಪಾಠಿ ಮತ್ತು ನಮ್ಮ ನಗರದ ಗುರುಗಳಿಗೆ ಶ್ರದ್ಧಾಂಜಲಿಯ ಅರ್ಪಣೆ ಅವಿಸ್ಮರಣೀಯ.

    ಪ್ರತ್ಯುತ್ತರಅಳಿಸಿ
  6. ತುಂಬಾ ದಿನಗಳ ನಂತರ ಬರೆದಿದ್ದೀರಿ. ಓದಿಸಿಕೊಂಡು ಹೋದ ಅನುಭವಗಳು. ದಿಢೀರ್ ಮರಣ ಹತ್ತಿರದವರನ್ನ ದಿಕ್ಕೆಡಿಸುತ್ತದೆ. ಕುಶವಂತ್ ಸಿಂಗ್ ಹೇಳುತ್ತಾರೆ, ಮರಣದ ಬಗ್ಗೆ ಭಯ ಹೋಗಬೇಕಾದರೆ ಮರಣದ ಹತ್ತಿರ ಹೋಗುತ್ತಿದ್ದೆ ಅಂತ. ನಿಮ್ಮ ಅನುಭವಗಳೂ ಹಾಗೇ ಇವೆ.

    ಪ್ರತ್ಯುತ್ತರಅಳಿಸಿ
  7. Wonderful narration sir to connect to reality of life. Happened to visit very huge grave yards, sprawled over many many acres nurtured with scenic ambience of natured and every one booking their burial place with names scripted in advance in Sweden. Every one spending hours as if to walk and enjoy garden. That is sanctity of graveyard to realize what is your life…… when we told our relation we were walking hours in grave yard almost every day…. Remarks were different…
    Sir your article is to ponder over life in different perspective…

    ಪ್ರತ್ಯುತ್ತರಅಳಿಸಿ
  8. Between birth and death, death is certain. If everyone is aware of the certainty, then why to worry. Perform the duty and accept the end and live in the present!

    ಪ್ರತ್ಯುತ್ತರಅಳಿಸಿ
  9. ಸರ್ ಬಹಳ ಅರ್ಥ ಘರ್ಬಿತವಾಗಿದೆ . ಇದು ನಿಜವಾಗಿಯೂ ನಮ್ಮ ಪೂಜ್ಯ ಗುರುಗಳಾದ ಪಾರ್ವತಿಕರ ಮತ್ತು ಕುಲಕರ್ಣಿ ಸರ್ ಅವರಿಗೆ ಅರ್ಪಿಸಿದ ನಿಜವಾದ ಶ್ರದ್ಧಾಂಜಲಿ.🙏🙏

    ಪ್ರತ್ಯುತ್ತರಅಳಿಸಿ
  10. ಧೀರೇಂದ್ರ ತೆoಗಳಿಕರ್ಜೂನ್ 14, 2026 ರಂದು 09:28 PM ಸಮಯಕ್ಕೆ

    ಸ್ಮಶಾನ ವೈರಾಗ್ಯ ಲೇಖನ ಚೆನ್ನಾಗಿ ಬಂದಿದೆ. ಮಿತ್ರರ ಅಕಾಲಿಕ ನಿಧನ ಹಾಗೂ ಅವರ ಚಿರಂಜಿವಿ ಸ್ಮಶಾನದಲ್ಲಿ ವಿಷ್ಣು ಸಹಸ್ರ ನಾಮ ಹೇಳಲು ಬೇಡಿಕೊಂಡಿದ್ದು ಹೃದಯಸ್ಪರ್ಶಿ ಆಗಿದೆ.
    ಜಯಂತ ಇನ್ನಷ್ಟು ಬರಹಗಳು ಮೂಡಿಬರಲಿ ಎಂದು ಆಶಿಸುತ್ತೇನೆ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸತ್ತ ಗುರು !!!

ನನ್ನ ಇಂಜಿನಿಯರಿಂಗ್ ಬ್ರ್ಯಾಂಚ...

ಸಮಸ್ಯೆಯ ಸಮಸ್ಯೆ