ನನ್ನ ಬಿಳಿ ತಲೆಯ ಬಣ್ಣಗಳು...ಭಾಗ- ೩ (ಕೊನೆಯ ಭಾಗ)

ಭಾಗ....೩ (ಕೊನೆಯ ಭಾಗ)


ಈಗ್ಗೆ ಇಪ್ಪತ್ತೈದು ವರ್ಷಗಳ ಹಿಂದೆ ನನ್ನ ಸಮವಯಸ್ಕ ಸಹೋದ್ಯೋಗಿಯ ಒತ್ತಾಯಕ್ಕೆ ಮಣಿದು ಕೇಂದ್ರ ಸರ್ಕಾರ ಬ್ಯಾಂಕ್ ಗಳ ಮುಖಾಂತರ ಅತೀ ಕಡಿಮೆ ಬಡ್ಡಿದರದಲ್ಲಿ ನೀಡುವ ಗೃಹ ನಿರ್ಮಾಣದ ಸಾಲ ಮೇಳಕ್ಕೆ ತೆರಳಿದೆ. ಆ ಸಂದರ್ಭದಲ್ಲಿ ಕೇವಲ ನಮ್ಮ ಎರಡು ಭಾವಚಿತ್ರಗಳು ಮತ್ತು ಸ್ಯಾಲರೀ ಸರ್ಟಿಫಿಕೇಟ್ ಹಾಜರುಪಡಿಸಿದರೆ ಅಲ್ಲಿದ್ದ ಬ್ಯಾಂಕ್ ಅಧಿಕಾರಿ ನಮಗೆ ಎಷ್ಟು ಮೊತ್ತದ ಗೃಹ ಸಾಲ ಮಂಜೂರು ಮಾಡಲಾಗುವುದು ಎಂಬುದರ ಪತ್ರವನ್ನು ಸ್ಥಳದಲ್ಲಿಯೇ ನೀಡುತ್ತಿದ್ದರು. ನನ್ನ ಸಹೋದ್ಯೋಗಿಗೆ ಎಂಟು ಲಕ್ಷ ಸಾಲ ಮತ್ತು ನನಗೆ ಅವರಿಗಿಂತ ಎರಡು ಲಕ್ಷ ಕಡಿಮೆ ಮಂಜೂರು ಮಾಡುವುದಾಗಿ ಅಲ್ಲಿದ್ದ ಅಧಿಕಾರಿಯು ತಿಳಿಸಿದರು. ನನಗೇಕೆ ನನ್ನ ಸಹೋದ್ಯೋಗಿಗಿಂತಲೂ ಕಡಿಮೆ ಸಾಲ ಮಂಜೂರು ಮಾಡಲಾಗುವುದು ಎಂದು ವಿಚಾರಿಸಿದಾಗ ಆ ಬ್ಯಾಂಕ್ ಅಧಿಕಾರಿ ಒಮ್ಮೆ ನನ್ನ ಬಿಳಿ ತಲೆಗೂದಲನ್ನು ನೋಡಿ ನಿಮ್ಮ ವಯಸ್ಸಿಗೆ ಇಷ್ಟೇ ಕೊಡಲು ಸಾಧ್ಯ ಎನ್ನಬೇಕೇ!!. ನಾನು ಲಗುಬಗೆಯಿಂದ ಮನೆಗೆ ತೆರಳಿ ನನ್ನ SSLC ಮಾರ್ಕ್ಸ್ ಕಾರ್ಡನ್ನು ತಂದು ತೋರಿಸಿ ನನ್ನ ವಯಸ್ಸನ್ನೂ, ಅದರಂತೆ ನನ್ನ ನಿವೃತ್ತಿಗೆ ಬಾಕಿ ಇರುವ ವರ್ಷಗಳ ಲೆಖ್ಖ ಕೊಟ್ಟಾದ ಮೇಲೆ ಆ ಅಧಿಕಾರಿ ಕ್ಷಮೆಯಾಚಿಸಿ ನನಗೆ ಹೆಚ್ಚಿನ ಸಾಲ ಮಂಜೂರಾತಿಯ ಪತ್ರವನ್ನು ಸ್ಥಳದಲ್ಲಿಯೇ ನೀಡಿದರು. ಹೀಗೆ ಬ್ಯಾಂಕ್ ಸಾಲ ಪಡೆದು ಮನೆ ಕಟ್ಟಿಸಿದ ಹೊಸದರಲ್ಲಿ ನಮ್ಮ ಪಕ್ಕದ ಮನೆಯ ರಾಯರ ಮಗಳು ಮತ್ತು ಅಳಿಯ ದೂರದ ಊರಿಂದ ಅವರ ಮನೆಗೆ ಆಗಮಿಸಿದ್ದರು. ರಾಯರ ಮಗಳು ಅಳಿಯರ ವಯಸ್ಸು ನಮ್ಮ ವಯಸ್ಸಿಗಿಂತ ಸುಮಾರು ನಾಲ್ಕೈದು ವರ್ಷ ಜಾಸ್ತಿಯೇ ಇರಬೇಕು. ರಾಯರ ಮೊಮ್ಮಗಳು ನನ್ನ ಮಗಳ ವಾರಿಗೆಯದೇ ಇದ್ದ ಕಾರಣ ನಮ್ಮ ಮನೆಗೆ ಆಡಲು ಬಂದಿತ್ತು. ವಾಪಸ್ ಮನೆಗೆ ಕರೆಯಲು ಬಂದ ಆ ಹುಡುಗಿಯ ತಾಯಿ ನನ್ನನ್ನು 'ಅಂಕಲ್' ಎಂದಾಗ ನನ್ನಾಕೆಗೆ ಎಲ್ಲಿಲ್ಲದ ಮುಜುಗರವಾಗಿ, ನನ್ನ ಗಂಡನ ತಲೆಕೂದಲು ಸ್ವಲ್ಪ ಬೆಳ್ಳಗಾಗಿದ್ದಕ್ಕೆ ನೀನು ಅವರನ್ನು ಅಂಕಲ್ ಎಂದು ಕರೆಯುವೆ, ನಿನಗೆ ಅವರು ಅಂಕಲ್ ಆಗಲು ನಿನೇನು ನನ್ನ ಮಗಳ ವಯಸ್ಸಿನವಳೇ ಎಂಬ ಲಾಯರೀ ಪಾಯಿಂಟ್ ಅನ್ನು ನನ್ನಾಕೆ ಆ ಹುಡುಗಿಯ ತಾಯಿಯ ಮುಂದಿಟ್ಟಳು. ಆಗ ಮಧ್ಯೆ ಪ್ರವೇಶಿಸಿದ ನಾನು, ಇಲ್ಲಾss ಆ ತಾಯಿ ನನಗೆ ಮರ್ಯಾದೆ ಕೊಟ್ಟು ನನ್ನನ್ನು ತನ್ನ ತಂದೆಯ ಸಮ ಸ್ಥಾನದಲ್ಲಿ ಕಂಡು ಹಾಗೆಂದಿರಲು ಸಾಕೆಂದು ವಾತಾವರಣವನ್ನು ತಿಳಿಗೊಳಿಸಲು (ಮಾತಿಗೆ ಪೂರ್ಣವಿರಾಮ ಇಡಲು) ಪ್ರಯತ್ನಿಸಿದಾಗ, ನಮ್ಮ ಮನೆಯಲ್ಲಿ ಆಟಕ್ಕೆಂದು ಬಂದ ಆ ಕಂದಮ್ಮ, "ತಾತಾ ನಿಮ್ಮ ಮಗಳನ್ನು ನಮ್ಮೂರಿಗೆ ಕಳುಸುವಿರಾ" ಎಂದಾಗ ನನ್ನಿಂದ ನಗು ತಡೆಯಲಾಗಲಿಲ್ಲ. 

ನಮ್ಮ ಬೆಳಗಾವಿ ಸುಸಂಸ್ಕೃತ ಜನರ ನಾಡು. ನಾವು ಬಂದು ನೆಲೆಸಿದ ಹೊಸದರಲ್ಲಿ ಇಲ್ಲಿಯ ತಾಜಾ ತರಕಾರಿ ಮಾರುವ ರೈತಾಪಿ ಜನ ನನ್ನ ಕರಿಬಿಳಿ ತಲೆಯನ್ನು ನೋಡಿ ಗೌರವದಿಂದ ನನ್ನನ್ನು 'ಕಾಕಾ' ಎಂದು ಸಂಭೋದಿಸಿದರೆ ನನ್ನ ಶ್ರೀಮತಿಗೆ 'ವೈನೀ' ಅನ್ನುತ್ತಿದ್ದರು. ಆಗ, "ಒಂದು ವೇಳೆ ನಾನು ಅವರಿಗೆ ವೈನಿ ಆದರೆ ನೀವು ಅಣ್ಣಾ ಆಗಬೇಕಲ್ಲವೇ, ಅವರೇಕೆ ನಿಮಗೆ ಕಾಕಾ ಅನ್ನುವರು?" ಎಂಬುದು ನನ್ನ ಶ್ರೀಮತಿಯ ತಕರಾರಾಗಿತ್ತು. ಆದರೆ ಈಗ, ನನ್ನ ತಲೆ ಸಂಪೂರ್ಣ ಬಿಳಿಯಾದ ಮೇಲೆ ನನ್ನ ದರ್ಜೆಯನ್ನು ಏರಿಸಿ ಅದೇ ಜನ ನನ್ನನ್ನು'ಅಜೋಬಾ' ಎಂದು ಕರೆದರೆ, ಅವರ ಬಾಯಲ್ಲಿ ನನ್ನ ಶ್ರೀಮತಿ ಮಾತ್ರ ಇಂದಿಗೂ 'ವೈನೀ'ಯೇ ಆಗಿ ಉಳಿದಿರುವಳು!!! 

ತಿಂಗಳಿಗೊಮ್ಮೆ ನಾನು ಹೋಗುವ ಕ್ಷೌರಿಕದ ಅಂಗಡಿಯಲ್ಲಿ ಮಾಲೀಕನಲ್ಲದೇ ಇತರ ಇಬ್ಬರು ಕ್ಷೌರಿಕರಿದ್ದು ನನ್ನ ಬಿಳಿ ತಲೆ ನಿಯಮಿತವಾಗಿ ಯಾವಾಗಲೂ ಮಾಲೀಕನಿಗೇ ಮುಡಿಪು. ಕಾರಣವಿಷ್ಟೇ, ನನಗೆ ಯಾವ ರೀತಿಯ ಕಟಿಂಗ್ ಇಷ್ಟ ಎಂದು ಮಾಲೀಕ ಅರಿತಿರುವ. ಅಲ್ಲದೇ ಅವನು ನನ್ನ ಸರತಿ ಬಂದಾಗಲೆಲ್ಲ ಕುರ್ಚಿಯ ಸುತ್ತಲೂ ನೆಲದಮೇಲೆ ಬಿದ್ದ ಕೂದಲಿನ ರಾಶಿಯನ್ನು ನೀಟಾಗಿ ಗುಡಿಸಿ ಪರಿಸರವನ್ನು ಸ್ವಚ್ಛಗೊಳಿಸಿ ಕಾಲೇಜಿನ ಪ್ರೊಫೆಸರ್ ಆದ ನನಗೆ ಗೌರವ ನೀಡುವನೆಂಬುದು ಇನ್ನೊಂದು ಕಾರಣ. ಒಂದು ಸಾರಿ ನಾನು ಸಲೂನಿಗೆ ಹೋದಾಗ ಮಾಲೀಕ ಇರಲಿಲ್ಲ. ಅನಿವಾರ್ಯವಾಗಿ ಇನ್ನೊಬ್ಬ ಕ್ಷೌರಿಕನ ಬಳಿ ನನ್ನ ಸ್ಪೆಸಿಫಿಕೇಷನ್ ಹೇಳಿ ಕೆಲಸ ಮಾಡಿಸಿಕೊಳ್ಳುತ್ತಿರಲು ಮಾಲೀಕ ಅಂಗಡಿಯಲ್ಲಿ ದಾಖಲಾಗಿ ನನ್ನ ಕಟಿಂಗ್ ಪ್ರಾರಂಭಿಸುವದಕ್ಕೂ ಮೊದಲು ನೌಕರ ನೆಲದಲ್ಲಿ ಬಿದ್ದ ಕೂದಲನ್ನು ಗುಡಿಸದೇ ಇದ್ದದ್ದಕ್ಕೆ ನೌಕರನಿಗೆ ಚೆನ್ನಾಗಿ ಉಗಿದ. ನಂತರ ನನಗೆ ತಿಳಿಯಿತು, ನನ್ನ ಬಿಳಿ ಕೂದಲು ಇತರ ಕರೀ ಕೂದಲಿನಲ್ಲಿ ಸೇರಿದರೆ, ಅದಕ್ಕೆ ದಕ್ಕುವ ರೇಟು ಕಡಿಮೆ ಆಗುವುದೆಂದು. ಕಾರಣ ಏನೇ ಇರಲಿ , ಪ್ರತೀಸಲ ನನ್ನ ಕ್ಷೌರಕ್ಕೂ ಮೊದಲು ಕುರ್ಚಿಯ ಸುತ್ತಲಿನ ಪರಿಸರ ಸ್ವಚ್ಛವಾಗುವದು ನನಗೆ ಸಮಾಧಾನದ ಸಂಗತಿ, ಅಲ್ಲವೇ ಮತ್ತೇ.

ನನ್ನ ತಲೆಗೂದಲಿನಲ್ಲಿ ಬಿಳಿ ಕೂದಲಿನ ಪ್ರಮಾಣ ಸಾಧಾರಣ ೪೦ ಪ್ರತಿಶತ ಮೀರಿದಾಗಿನಿಂದ ಪ್ರತಿ ವರ್ಷ ಶಿವರಾತ್ರಿಯ ನಂತರ ಬರುವ ಬಣ್ಣದ ಕಾಮಣ್ಣನ ಹೋಳಿ ಹುಣ್ಣಿಮೆಗೆ ಒಂದು ದಿನ ಮೊದಲು ನಾನು ಸಲೂನ್ ದರ್ಶನ ಮಾಡಿ ಕೇಶ ಮುಂಡನದ ಸೇವೆ ತಪ್ಪದೇ ಪಾಲಿಸುತ್ತಾ ಬಂದಿದ್ದೇನೆ. ಆಗ ಮಾತ್ರ ಏನಿದ್ದರೂ ಮಿಲ್ಟ್ರೀ ಕಟ್ಟೇ ಆಗಬೇಕು.ಇನ್ನು ಹೋಳಿ ಬಣ್ಣ ಆಡುವ ದಿನ ಬೆಳಿಗ್ಗೆ  ಶನಿಶಿಂಗಣಾಪುರದ ಶನಿ ದೇವರಿಗೆ ತಿಲತೈಲ ಎರೆದಂತೆ ಯಥೇಚ್ಛವಾಗಿ ಕೊಬ್ಬರಿ ಎಣ್ಣೆಯನ್ನು ನನ್ನ ತಲೆಗೆ ಹಾಕಿಕೊಂಡೇ ಬಣ್ಣವಾಡಲು ಮನೆಯಿಂದ ಹೊರಬೀಳುತ್ತೇನೆ. ಇಲ್ಲದಿದ್ದರೆ, ಬಣ್ಣ ಆಡಿ ಬಂದು ಮಧ್ಯಾಹ್ನ ಮನೆಯಲ್ಲಿಯ ಎಲ್ಲಾ ತರಹದ ಶಾಂಪೂ,ಶೀಗಿಕಾಯಿ ಪುಡಿ ಹಾಕಿಕೊಂಡು ತಲೆಯನ್ನು ತೊಳೆದುಕೊಂಡು ಇಡೀಯ ಓವರ್ ಹೆಡ್ಡ ಟ್ಯಾಂಕಿನ ನೀರನ್ನು ಖಾಲಿಮಾಡಿದರೂ ನನ್ನ ತಲೆಯ ಬಣ್ಣ ಮಾತ್ರ ಕಾಮನ ಬಿಲ್ಲಿನ ಏಳು ಬಣ್ಣಗಳನ್ನು ಹರಡಿದಂತೆಯೇ ಉಳಿದಿರುತ್ತಿತ್ತು. ಮತ್ತೆ ಮರುದಿನ ಕಾಲೇಜಿನಲ್ಲಿ ನನ್ನ ಸಹೋದ್ಯೋಗಿಗಳು ಈ ಶ್ಯಾಂಪು ಮತ್ತೂ ಆ ಕಂಡೀಷನರ್ ನ ಕಾಂಬಿನೇಷನ್ ಇಲ್ಲವೇ ಕಡಲೇ ಹಿಟ್ಟು ಮತ್ತೂ ನಿಂಬೆರಸದ ಮಿಶ್ರಣ ಬಳಸಬೇಕಿತ್ತು ಎಂಬಿತ್ಯಾದಿ ಪುಗಸಟ್ಟೆ ಸಲಹೆಗಳನ್ನು ಕೊಟ್ಟು ನನ್ನ ಬಿಳಿ ಕೂದಲಿನ ಬಗ್ಗೆ ತಮ್ಮ ಕಾಳಜಿಯನ್ನು ವ್ಯಕ್ತಪಡಿಸುತ್ತಿದ್ದರು. ಆದರೆ, ಅವೆಲ್ಲವನ್ನು ಉಪಯೋಗಿಸಿ ತಲೆ ತೊಳೆದುಕೊಂಡರೆ ನನ್ನ ಹೆಮ್ಮೆಯ ಹುಲುಸಾಗಿ ಬೆಳೆದ ಶುಭ್ರ ಬಿಳಿ ಕೂದಲಿನ ಕೆಳಗಿನ ತಲೆಯ ಚರ್ಮದ ಗತಿ ಏನಾಗಬೇಡ ಎಂಬುದು ಪಾಪ ಅವರಿಗೇನು ಗೊತ್ತು, ಇರಲಿ.

ಅಂದ ಹಾಗೆ, ಇತ್ತೀಚಿನ ವರ್ಷಗಳಲ್ಲಿ, ಅನೇಕಸಲ ನನಗೆ ಬೆಂಗಳೂರಿನ 'ನಮ್ಮ ಮೆಟ್ರೋ' ದಲ್ಲಿ ಪ್ರಯಾಣ ಮಾಡುವ ಪ್ರಸಂಗಗಳು ಬರುತ್ತಿವೆ. ದಿನದಿಂದ ದಿನಕ್ಕೆ ಅಲ್ಲಿಯೂ ಜನನಿಬಿಡತೆ ಜಾಸ್ತಿಯೇ ಆಗುತ್ತಿದೆ. ನಾನಿನ್ನೂ ಹಿರಿಯ ನಾಗರೀಕನ ಪಟ್ಟಕ್ಕೆ ಅರ್ಹನಾಗಿಲ್ಲದಿದ್ದರೂ ನನ್ನ ಬಿಳಿ ತಲೆಗೂದಲಿನ ಪ್ರಭಾವದಿಂದ ಅನೇಕ ಸಲ ಹಿರಿಯ ನಾಗರೀಕರಿಗಾಗಿ ಮೀಸಲಾಗಿದ್ದ ಸೀಟುಗಳನ್ನು ಅಲ್ಲಿ ಕೂತ ಯುವಕರು ನಾನು ಕೇಳದೇ ಖಾಲಿ ಮಾಡಿ ಎದ್ದುನಿಂತು ನನಗೆ ಕೂಡುವ ಅವಕಾಶ ಮಾಡಿ ಕೊಡುವುದುಂಟು. ನಾನೂ ಈ ಅಪರೂಪದ ಸೌಜನ್ಯದ ಸೌಲಭ್ಯವನ್ನು ಸಂಕೋಚವಿಲ್ಲದೇ ಅನುಭವಿಸುವೆ.

ಅಂತೂ ಈ ಮೂರು ದಶಕಗಳಲ್ಲಿ ನಿಧಾನವಾಗಿ ಕರಿಯಿಂದ ಕರೀಮಿಶ್ರಿತ ಬಿಳಿಗೆ ತಿರುಗುತ್ತಾ ಬಂದು ಇಂದಿನ ನನ್ನ ಸಂಪೂರ್ಣ ಬಿಳಿ ತಲೆ, ಅಲ್ಲಲ್ಲಿ ಚದುರಿದಂತೆ ಭಾರೀ ಕಹಿ-ಸಿಹಿ ಮಿಶ್ರಿತ ಅನುಭವಗಳನ್ನು ನೀಡುತ್ತಾ ಮುಂಗಾರಿನ ಕಾಮನ ಬಿಲ್ಲಿನ ಅನುಭವಗಳನ್ನು ನೀಡಿದೆ.


-ಜಯಂತ ಕಿತ್ತೂರ 

ಕಾಮೆಂಟ್‌ಗಳು

  1. ನಿಮ್ಮ ಕೂದಲಿನ ಪ್ರಸಂಗಗಳು ಅನೇಕರ (. Young White Master's ) ಮನಸ್ಸಿನಲ್ಲಿ ಹೊಸ ಹುಮ್ಮಸ್ಸನ್ನು ತುಂಬಿದೆ. ತುಂಬಾ ರೋಚಕತೆಯ ಬೀಡಿನಲ್ಲಿ ನಿಮ್ಮ ಪ್ರಸಂಗಗಳ ಚಿತ್ತಾರ.

    ಪ್ರತ್ಯುತ್ತರಅಳಿಸಿ
  2. ಎಲ್ಲ ಕೂದಲಿನ ಪ್ರಸಂಗಗಳು ಹಾಸ್ಯಗಳ ಹೊಳೆ ಹರಿಸಿವೆ.ಅಭಿನಂದನೆಗಳು ಹಾಗೂ ಧನ್ಯವಾದಗಳು😃☺️🙏💐

    ಪ್ರತ್ಯುತ್ತರಅಳಿಸಿ
  3. Correlates to most of our lives…vividly reflects realities of life…sorry for English comments

    ಪ್ರತ್ಯುತ್ತರಅಳಿಸಿ
  4. ರಂಗು ರಂಗಿನ ಅನುಭವದ ಪ್ರಸಂಗಗಳು , ಅಂದ ಚೆಂದದ ಬರವಣಿಗೆಯ ಶೈಲಿ ..ಸೊಗಸಾಗಿದೆ, ತುಂಬಾ ಸೊಗಸಾಗಿದೆ . ಬಿಳಿತಲೆಯಿಂದ ಇನ್ನೂ ಸಾಕಷ್ಟು ಬರಹಗಳ ನೀರಿಕ್ಷೆ..

    ಪ್ರತ್ಯುತ್ತರಅಳಿಸಿ
  5. ನನ್ನ ಬಿಳಿ ತಲೆ ಬಣ್ಣಗಳು ಮೂರೂ ಭಾಗಗಳು ಓದಿ ತುಂಬಾ enjoy ಮಾಡಿದೆ.. ಇನ್ನು ಯಾವ ವಿಷಯದ ಮೇಲೆ ಹಾಸ್ಯ ಲೇಖನ ಬರೆಯುವಿರಿ ಎಂಬ ಕುತೂಹಲ ಕಾಯುತ್ತಿದೆ

    ಪ್ರತ್ಯುತ್ತರಅಳಿಸಿ
  6. Awesome and humorous.. I have enjoyed lot of benefits having white hair
    My wife has faced similar situations where they call her as my daughter.. she color’s her hair though..
    Doesn’t matter.. we have very little control over what type of hair you have .. have fun with what u have

    ಪ್ರತ್ಯುತ್ತರಅಳಿಸಿ
  7. ಸುಂದರ ಅನುಭವಗಳ ಅಮೋಘ ವಿವರಣೆ ಸರ್. ಶುಭವಾಗಲಿ.

    ಪ್ರತ್ಯುತ್ತರಅಳಿಸಿ
  8. ಸರ್
    ಚೆನ್ನಾಗಿ ಮೂಡಿ ಬಂದಿದೆ.
    ಕಪ್ಪಗಿರಲಿ ಅಥವಾ ಬೆಳ್ಳ ಗಿರಲಿ, ತಲೆ ಮೇಲೆ ಕೂದಲಿರಲಿ.

    ಪ್ರತ್ಯುತ್ತರಅಳಿಸಿ
  9. As usual, absolutely well written article tinged with light light humour

    ಪ್ರತ್ಯುತ್ತರಅಳಿಸಿ
  10. Nice article regarding white hairs and benefits 😀 👌

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನನ್ನ ಬಿಳಿ ತಲೆಯ ಬಣ್ಣಗಳು ...(ಭಾಗ-೧)

ದಿಖಾವೇಪೆ ಮತ್ ಜಾವೋ ಅಕಲ್ ಲಗಾವೋ...

ಇವಾ ಯಾವೂರವಾ...