ಸ್ವಚ್ಛತೆಯವರು...
ನಾವು ಮಾಡುವ ಊಟ ಒಂದು ಯಜ್ಞವಿದ್ದಂತೆ, ಊಟ ಮಾಡುವಾಗ ಮಾತನಾಡಬಾರದು, ಮಾತು ಬೆಳೆದು ಕಲಹಕ್ಕೆ ಕಾರಣವಾದೀತು ಎಂದು ನಮ್ಮಮ್ಮ ಯಾವಾಗಲೂ ಹೇಳುತ್ತಿದ್ದರು. ಆ ಮಾತು ಇಷ್ಟು ವರ್ಷಗಳ ನಂತರ ಈಗ ಅಂದರೆ, ನನ್ನ ನಿವೃತ್ತಿಯ ನಂತರ ಬಹಳ ನೆನಪಾಗುತ್ತಿದೆ. ಅದಕ್ಕೆ ಇತ್ತೀಚೆಗೆ ನಿವಾಂತವಾಗಿ ಮನೆಯಲ್ಲಿ ಮಾತಾಡದೇ ಆದರೆ ರೇಡಿಯೋ ಹಚ್ಚಿ ಸಂಗಿತ ಕೇಳುತ್ತಾ ಊಟ ಮಾಡುವುದನ್ನು ಪ್ರಾರಂಭಿಸಿರುವುದು. ಈಗ ನನಗೆನೋ ಊಟ ರುಚಿಸುತ್ತಿದೆ ಆದರೆ, ಏಕೋ ನನ್ನ ಶ್ರೀಮತಿಗೆ ಅಷ್ಟು ರುಚಿಸುತ್ತಿಲ್ಲವಂತೆ. ನೀವು ಇದಕ್ಕೆ ಬೇರೆ ಅರ್ಥವನ್ನು ಕಲ್ಪಿಸುವುದಕ್ಕೂ ಮುನ್ನ ನಾನೇ ಹೇಳಿಬಿಡುತ್ತೇನೆ. ನಿಜ, ನೂರು ಪ್ರತಿಶತ ನಿಜ, ನಿವೃತ್ತಿಯ ನಂತರ ನಿಮ್ಮಂತೆ ನಾನೂ ನಳಪಾಕನಾಗಿರುವುದೇ ನನ್ನಾಕೆಗೆ ಊಟ ರುಚಿಸದೇ ಇರಲು ಕಾರಣವೇ ಹೊರತು ನೀವು ಊಹಿಸಿದಂತಲ್ಲ!!. ಈ ಮಾತನ್ನು ಅವಳ ಅನುಮತಿ ಪಡೆದೇ ನಿಮ್ಮೊಂದಿಗೆ ಹೇಳುತ್ತಿರುವುದು, ಇರಲಿ.
ಇತ್ತೀಚೆಗೆ ನಮ್ಮ ಆಕಾಶವಾಣಿಯಲ್ಲಿ ಒಂದು ಮಹತ್ವದ ಜಾಹೀರಾತು ಮತ್ತೆ ಮತ್ತೆ ಬಿತ್ತರವಾಗುತ್ತಿದೆ. ಅಷ್ಟು ಮಹತ್ವದ ಜಾಹೀರಾತು ಯಾವುದೆಂದಿರಾ, ನಿಮಗೂ ಗೊತ್ತಿರುವ ವಿಷಯವೇ, ಅದೇ ಮನೆಯ ಸೆಪ್ಟಿಕ್ ಟ್ಯಾಂಕನಲ್ಲಿ ಶೇಖರವಾದ ಸ್ಲಜ್ಜನ್ನು ತಪ್ಪದೇ ಪ್ರತಿ ಮೂರು ವರ್ಷಕ್ಕೊಮ್ಮೆ ಖಾಲಿಮಾಡಿಸುವ ಅಗತ್ಯತೆಗಳನ್ನು ಹೇಳುವ ವಿಷಯ. ಇಲ್ಲದಿದ್ದರೆ ನಿಮ್ಮ ಮನೆಯ ಪೈಖಾನೆಯ(ಸಂಡಾಸದ) ಸೆಪ್ಟಿಕ್ ಟ್ಯಾಂಕ ತುಂಬಿ ಅಲ್ಲಿನ ಮಲಿನ ನೀರು ಹೊರಬಂದು ಮನೆಯ ಸುತ್ತ ಗಬ್ಬು ವಾಸನೆ ಹರಡುವುದಲ್ಲದೇ ನೆಲದಲ್ಲಿ ಇಂಗಿ ಅಂತರ್ಜಲವನ್ನು ಮಲಿನಗೊಳಿಸಿ ವಿವಿಧ ರೋಗ ರುಜಿನೆಗಳು ಹರಡಲು ಕಾರಣವಾಗುತ್ತದೆ ಎಂಬುದು. ಈ ಜಾಹೀರಾತು ನಮಗೆಲ್ಲರಿಗೂ ಅವಶ್ಯಕ ಮತ್ತು ಅತ್ಯಗತ್ಯ ಸಂದೇಶವನ್ನು ನೀಡುತ್ತಿರುವುದು ಸಮಾಧಾನಕರ ವಿಷಯವೇ. ಯಾರೇ ಒಪ್ಪಲಿ ಅಥವಾ ಬಿಡಲಿ, ಇತ್ತೀಚಿಗೆ ಈ ಜಾಹೀರಾತು ನಮ್ಮ ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿರುವುದರಿಂದ ಸ್ವಚ್ಛ ಭಾರತ ಅಭಿಯಾನ ಯೋಜನೆ ರಾಜ್ಯದಲ್ಲಿ ಯಶಸ್ವಿಯಾಗಿ ಜಾರಿಯಾಗಿ, ಅದರಡಿಯಲ್ಲಿ ಪ್ರತಿ ಹಳ್ಳಿ, ಊರುಗಳ ಮನೆ ಮನೆಗಳಲ್ಲಿ ಕಟ್ಟಿಸಿದ ಪಾಯಿಖಾನೆಗಳು ಸದ್ಬಳಕೆ ಆಗುತ್ತಿರುವುದು ಸಮಾಧಾನಕರ ವಿಷಯವಂತೂ ನಿಜ. ಆದರೆ, ಆಕಾಶವಾಣಿಯಲ್ಲಿ ಈ ಜಾಹೀರಾತು ನನ್ನ ಊಟದ ಸಮಯ ಪ್ರಸಾರವಾಗುವುದರಿಂದ ನನ್ನ ಊಟದ ಸ್ವಾದ ಸ್ವಲ್ಪ ಭಗ್ನವಾಗುತ್ತಿದೆ ಎಂದು ನಾನು ಅಂದದ್ದಕ್ಕೆ ನನ್ನಾಕೆಯ ಒರಸೆಯೇ ಭಿನ್ನವಾಗಿತ್ತು. ನೀವು ಊಟಕ್ಕೆ ಕುಳಿತಾಗ ಸ್ವಚ್ಛತೆಯ ಜಾಗೃತಿ ಮೂಡಿಸುವ ಕೇವಲ ಒಂದು ಜಾಹಿರಾತು ಆಕಾಶವಾಣಿಯಲ್ಲಿ ಪ್ರಸಾರವಾದರೆ ನಿಮ್ಮ ಊಟದ ಸ್ವಾದ ಕಡಿಮೆಯಾಯಿತು ಎಂದು ಗೊಣಗುವಿರಿ, ಮೊನ್ನೆ ನೋಡಲಿಲ್ಲವೇ ಆ ಪೌರ ಕಾರ್ಮಿಕನ ಮಾತಿನ ವಿಡಿಯೋ ತುಣುಕನ್ನು ಎಂದು ನೆನಪಿಸಿದಳು.
ನೀವೂ ನೋಡಿರಬಹುದು, ಅದೇ ಆ ವಿಡಿಯೋ ತುಣುಕಿನಲ್ಲಿ ಒಬ್ಬ ಪೌರ ಕಾರ್ಮಿಕ ಹಿಂದಿ ಭಾಷೆಯಲ್ಲಿ ನಗರದ ಒಬ್ಬ ಯುವಕನನ್ನು ಝಾಡಿಸುವುದನ್ನು. ಅಲ್ಲಿ ಆ ಪೌರ ಕಾರ್ಮಿಕ, ನಾಗರಿಕರು ಒಣ ಮತ್ತು ಹಸಿ ಕಸವನ್ನು ವಿಂಗಡಿಸಿ ಸರಿಯಾದ ತೊಟ್ಟಿಗೆ ಹಾಕದಿದ್ದರೆ ಮುಂದೆ ತಾವು ಅದನ್ನು ವಿಲೇವಾರಿ ಮಾಡುವಾಗ ಹೇಗೆ ಅದು ಗಬ್ಬು ನಾರುತ್ತದೆ ಮತ್ತು ಅದು ತಮಗೂ ವಾಕರಿಕೆಯನ್ನು ಉಂಟುಮಾಡುತ್ತದೆ, ಅಲ್ಲದೆ ಅದು ತಮಗೆ ಮತ್ತು ತಮ್ಮ ಮನೆಯ ಜನಕ್ಕೆ ವಿವಿಧ ಆರೋಗ್ಯದ ಸಮಸ್ಯೆಗಳನ್ನು ತಂದೊಡ್ಡುತ್ತದೆ ಎಂದು ಆ ಕಾರ್ಮಿಕ ವಿವರಿಸಿದ. ಅವನ ಇನ್ನೊಂದು ಮಾತು ಬಹಳ ಸಮಂಜಸವೆನಿಸಿತು. ಅದೆಂದರೆ, ನಾಗರಿಕರು ಮನೆ, ಮಠ, ಆಫೀಸು, ಸಾರ್ವಜನಿಕ ಸ್ಥಳ ಎಲ್ಲೆಂದರಲ್ಲಿ ಕಸವನ್ನು ಉತ್ಪಾದನೆ ಮಾಡುವವರು ಹೀಗಾಗಿ ಅವರನ್ನು 'ಕಸದವರು' ಎಂದೂ ಮತ್ತು ಪೌರ ಕಾರ್ಮಿಕರು ಆ ಕಸವನ್ನು ತೆಗೆದು ನಿರ್ವಹಣೆ ಮಾಡುವುದರಿಂದ ಅವರನ್ನು 'ಸ್ವಚ್ಛತೆಯವರು'ಎಂದು ಸಂಬೋಧಿಸಬೇಕೆಂದು ಒತ್ತಾಯಿಸುತ್ತಿರುವುದು ಬಹಳ ಮಾರ್ಮಿಕವಾಗಿತ್ತು.
ಅಂದಹಾಗೆ, ಇತ್ತಿಚೆಗೆ ಒಬ್ಬ ಮಹಿಳಾ ಸಾಮಾಜಿಕ ಕಾರ್ಯಕರ್ತೆಯೊಬ್ಬಳು ಬಸ್ಸಿನ ಕಂಡಕ್ಟರ್ ಕೊಡುವ ಟಿಕೆಟನ್ನು ಅಥವಾ ತಾವು ತಿಂದ ಗುಟ್ಕಾ ಚೀಟಿ ಇಲ್ಲವೇ ಚಾಕೊಲೇಟನ ಕವರನ್ನು ಪ್ರಯಾಣಿಕರು ಬಸ್ಸಿನಿಂದ ಇಳಿಯುವಾಗ ಎಸೆಯಬಾರದು ಬದಲಿಗೆ ಅದನ್ನು ರಸ್ತೆಬದಿಯ ಒಣ ಕಸದ ತೊಟ್ಟಿ ಅಥವಾ ಮನೆಯಲ್ಲಿಯ ಕಸದ ಬುಟ್ಟಿಗೇ ಹಾಕಬೇಕು ಎಂದು ಸಿಟಿ ಬಸ್ಸಿನಲ್ಲಿ ಕನ್ನಡ ಭಾಷೆಯಲ್ಲಿ ಧ್ವನಿವರ್ಧಕದ ಮೂಲಕ ಒತ್ತಾಯಿಸುವ ವಾಟ್ಸಾಪ್ ವಿಡಿಯೋ ತುಣುಕು ನೋಡಿದೆ. ಬಸ್ಸಿನ ಕಂಡಕ್ಟರ್ ಕೊಡುವ ಟಿಕೆಟ ಎಂದಾಕ್ಷಣ ನೆನಪಾಯಿತು. ಮೊದಲೆಲ್ಲ ಒಂದು ಟಿಕೆಟ್ ಮೊತ್ತಕ್ಕೆ ಮುರ್ನಾಲ್ಕು ಬಣ್ಣ ಬಣ್ಣದ ಟಿಕೆಟ್ ಚೀಟಿಗಳನ್ನು ಕಂಡಕ್ಟರ್ ವಿತರಣೆ ಮಾಡುತ್ತಿದ್ದರು. ನಮ್ಮ ಪಕ್ಕದ ಮನೆಯ ಹಿರಿಯರು ಆ ಚೀಟಿಗಳನ್ನು ಪ್ರಯಾಣದ ನಂತರ ಬಸ್ಸು ಇಳಿಯುವಾಗ ಹರಿದು ಬಿಸಾಡದೇ ಅಥವಾ ಕಸದ ಬುಟ್ಟಿಗೂ ಹಾಕದೇ ಅವುಗಳ ಹಿಂಬದಿಯಲ್ಲಿ ತಾವು ಬಝಾರದಿಂದ ಯಾವೆಲ್ಲ ಕಿರಾಣಿ ಸಾಮಾನು, ಕಾಯಿಪಲ್ಯಾ ತರಬೇಕಿದೆ ಎಂದು ಟಿಪ್ಪಣಿ ಮಾಡಲು ಉಪಯೋಗಿಸುತ್ತಿದ್ದರು. ದಶಕಗಳ ಹಿಂದೆ, ನಮ್ಮ ತಂದೆಯ ಹಿರಿಯ ಮಿತ್ರರೊಬ್ಬರು ಅನೇಕ ವರ್ಷಗಳ ನಂತರ ನಮ್ಮ ಮನೆಗೆ ಭೇಟಿಗೆ ಬಂದಾಗ ನಮ್ಮ ಮನೆಯ ಎಲ್ಲ ಮಕ್ಕಳು, ಮೊಮ್ಮಕ್ಕಳನ್ನು ಹೆಸರು ಹಿಡಿದು ಕರೆದು ವಿಚಾರಿಸಿದ್ದು ನಮಗೆಲ್ಲ ಆಶ್ಚರ್ಯ ಮೂಡಿಸಿತ್ತು. ನಂತರ ಊಟ ಮಾಡುವಾಗ ಅವರಿಂದ ಅರಿತಿದ್ದೇನೆಂದರೆ ಅವರು ಯಾರ ಮನೆಗೆ ಹೋಗುವುದಿದೆಯೋ ಆ ಮನೆಯ ಎಲ್ಲಾ ಸದಸ್ಯರ ಹೆಸರುಗಳನ್ನು ಬಸ್ಸ್ ಟಿಕೆಟನ ಹಿಂಬದಿಯಲ್ಲಿ ಬರೆದಿಟ್ಟುಕೊಂಡು ಬರುತ್ತಿದ್ದರಂತೆ. ಇಂದಿನ ದಿನಮಾನಗಳಲ್ಲಿ ಎಷ್ಟೇ ದೂರದ ಪ್ರಯಾಣವಾದರೂ ಕೇವಲ ಒಂದೇ ಒಂದು ಚಿಕ್ಕ ಟಿಕೆಟ್ ಚೀಟಿಯನ್ನು ಕಂಡಕ್ಟರ್ ನೀಡುತ್ತಾರೆಯಾದರೂ, ಅದರ ಸರಿಯಾದ ವಿಲೇವಾರಿ ನಮ್ಮಿಂದ ಆಗುತ್ತಿಲ್ಲ ಎಂಬುದು ವಿಪರ್ಯಾಸ. ಹಿಂದೆ ಇದ್ದ ಮಟ್ಕಾ ಚೀಟಿಯ ಗ್ಯಾಂಬ್ಲಿಂಗ ಇಂದು ಆನ್ ಲೈನ್ ನಲ್ಲಿ ರೂಪಾಂತರ ಹೊಂದಿದೆ.ಈಗಂತೂ ಎಲ್ಲರ ಕೈಯಲ್ಲಿ ಸ್ಮಾರ್ಟ್ ಫೋನ್ ಇರುವುದರಿಂದ ನಾಳೆ ಈ ಬಸ್ ಟಿಕೆಟಗಳನ್ನು ಡಿಜಿಟಲ್ ರೂಪದಲ್ಲಿಯೇ ಕಂಡಕ್ಟರ್ ಬಸ್ಸಿನಲ್ಲಿ ವಿತರಿಸಿದರೆ ಆಶ್ಚರ್ಯವಿಲ್ಲ. ಆದರೆ ಎಲ್ಲೆಂದರಲ್ಲಿ ತಿಂದುಗುಳುವ ಈ ಗುಟ್ಕಾ ಚೀಟಿಗೆ ಏನು ಮಾಡುವುದು?
ಒಂದು ನಗರ, ಊರು, ಕಾಲೊನಿ ಮೊಹೊಲ್ಲಾ ಅಥವಾ ಹಳ್ಳಿ ಸ್ವಲ್ಪ ಸ್ವಚ್ಛ ಮತ್ತು ಸುಂದರವಾಗಿದ್ದು ಹಾಗೆಯೇ ಮುಂದುವರಿದಿರಲು ಕೇವಲ ಸರ್ಕಾರದ ಸ್ವಚ್ಛ ಭಾರತ ಅಭಿಯಾನ ಅಥವಾ ಸ್ಮಾರ್ಟ್ ಸಿಟಿ ಯೋಜನೆಗಳಿಂದ ಸಾಧ್ಯವಾಯಿತು ಎಂದು ಹೇಳುವುದು ಒಂದು ಉತ್ಪ್ರೇಕ್ಷೆಯ ಮಾತಾದೀತು. ಸುಸ್ಥಿರ ಸ್ವಚ್ಛತೆಗೆ ನಾಗರಿಕರ ಸ್ವಭಾವವೂ ಸೇರಿ ಅನೇಕ ಕಾರಣಗಳಿರುವುದನ್ನು ನಾವು ಪಟ್ಟಿ ಮಾಡಬಹುದು.
ಪ್ರಜ್ಞಾವಂತ ನಾಗರಿಕರಾದ ನಾವುಗಳೆಲ್ಲಾ ಎಲ್ಲೆಂದರೆಲ್ಲಾ ಕಸ ಹರಡದೇ, ಮನೆಯಲ್ಲಿ ಉತ್ಪಾದನೆಯಾದ ಒಣ ಮತ್ತು ಹಸಿ ಕಸವನ್ನು ವಿಂಗಡಿಸಿ ಕಸದ ತೊಟ್ಟಿಗೆ ಹಾಕಿ ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡರೆ ಮತ್ತು ಅದೇ ತರಹ ನಮ್ಮ ಮನೆಯ ಸಂಡಾಸದ ಸೆಪ್ಟಿಕ ಟ್ಯಾಂಕನ್ನು ಕಾಲ ಕಾಲಕ್ಕೆ ಸ್ವಚ್ಛ ಮಾಡಿಸುತ್ತಿದ್ದರೆ, ಸರ್ಕಾರ ಆಕಾಶವಾಣಿಯಲ್ಲಿ ಈ ರೀತಿ ಜಾಹಿರಾತು ಬಿತ್ತರ ಮಾಡುವ ಅಥವಾ ಸಾಮಾಜಿಕ ಕಾರ್ಯಕರ್ತೆಯಿಂದ ಬಸ್ಸಿನಲ್ಲಿ ಬುದ್ಧಿ ಹೇಳಿಸಿಕೊಳ್ಳುವ, ಇಲ್ಲವೇ ಆ ಪೌರ ಕಾರ್ಮಿಕನಿಂದ ಯದ್ವಾತದ್ವಾ ಉಗಿಸಿಕೊಳ್ಳುವ ಅನಿವಾರ್ಯತೆ ಅಥವಾ ಅವಶ್ಯಕತೆ ಉದ್ಭವಿಸುತ್ತಿರಲಿಲ್ಲ ಅಲ್ಲವೇ?
ದಿನದಿಂದ ದಿನಕ್ಕೆ ಹೆಚ್ಚೆಚ್ಚು ಸುಕ್ಷ್ಮ ಸ್ವಭಾವದವರಾಗುತ್ತಿರುವ, ಮಾತೆತ್ತಿದರೆ ನಮ್ಮ ವ್ಯಕ್ತಿ ಸ್ವಾತಂತ್ರ್ಯ ಅಥವಾ ವಾಕ್ ಸ್ವಾತಂತ್ರ್ಯ ಹರಣವಾಯಿತೆಂದು ಕೋರ್ಟ್ ಮೆಟ್ಟಿಲು ಹತ್ತುವ ನಾವು ನಮ್ಮ ನಾಗರಿಕ ಕರ್ತವ್ಯದ ಬಗ್ಗೆ ಏಕೆ ಅಷ್ಟು ದಪ್ಪ ಚರ್ಮದವರಾಗುತ್ತಿದ್ದೇವೆಯೋ ನಾನರಿಯೆ.
ಅಂದಹಾಗೆ, ತಾನು ಚುನಾವಣೆಯಲ್ಲಿ ಗೆದ್ದರೆ ಒಂದೇ ದಿನದಲ್ಲಿ ಯುಕ್ರೇನ್ ಯುದ್ಧವನ್ನು ನಿಲ್ಲಿಸುವುದಾಗಿ ಬಡಾಯಿ ಕೊಚ್ಚಿಕೊಂಡ ಅಮೇರಿಕಾದ ಅಧ್ಯಕ್ಷ ಟ್ರಂಪ ಮಹಾಶಯ ಶತಾಯಗತಾಯ ಕೆಲ ವಾರಗಳ ಹಿಂದೆ ರಷ್ಯಾದ ಮುಖಂಡ ಪುಟಿನ್ ನನ್ನು ಅಮೇರಿಕಾದ ಅಲಾಸ್ಕಾದಲ್ಲಿ ಸಂಧಿಸಿದ ವಿಷಯ ಎಲ್ಲರಿಗೂ ಗೊತ್ತಿರುವ ವಿಚಾರ. ಅಲ್ಲಿಗೆ ಬಂದು ಇಳಿದಾಗಿನಿಂದ ವಿಮಾನ ಹತ್ತಿ ವಾಪಸ್ ಹೋಗುವ ತನಕ ಪುಟಿನ್ ನಿಂದ ಉತ್ಪತ್ತಿಯಾದ ಎಲ್ಲಾ ಬಗೆಯ ಒಣ ಮತ್ತು ಹಸಿ ಕಸ ಹಾಗೂ ಜೈವಿಕ ತ್ಯಾಜ್ಯಗಳನ್ನು ಒಂಚೂರೂ ಬಿಡದಂತೆ ಅವರ ಸಿಬ್ಬಂದಿ ರಷ್ಯಾಕ್ಕೆ ಬಳೆದುಕೊಂಡು ಹೋದರಂತೆ. ಇದು ರಷ್ಯಾದವರು ಸ್ವಚ್ಛತೆಗೆ ಕೊಡುವ ಮಹತ್ವ ಎಂದು ತರ್ಕಿಸುವುದು ನಮ್ಮ ಮೂರ್ಖತನವಾದೀತು. ಈ ಸ್ವಚ್ಛತಾ ಕಾರ್ಯದ ಹಿಂದಿನ ಉದ್ದೇಶವೇ ಬೇರೆ ಎಂದು ತಮಗೂ ಗೊತ್ತು ಅಲ್ಲವೇ? ಅದೇ ಆ ತ್ಯಾಜ್ಯದ ರುಚಿಯನ್ನು ಅಥವಾ ಗಬ್ಬು ವಾಸನೆಯನ್ನು ಅಮೇರಿಕಾದ CIA ನ ಶ್ವಾನಗಳು ಪರಿಶೀಲಿಸಿ ಪುಟಿನ್ ಬಗ್ಗೆ ಈತನಕಾ ತಮಗರಿವಿಲ್ಲದ ಯಾವುದಾದರೂ ವಿಷಯವನ್ನು ಗ್ರಹಿಸುವ ತವಕವನ್ನು ಫಲಪ್ರದ ಮಾಡಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂಬುದಾಗಿದೆ. ಕಾರಣ ಏನೇ ಆದರೂ ಅಲಸ್ಕಾದ ಆ ಭೂಮಿಯ ಭಾಗ ತನ್ನ ಸ್ವಚ್ಛತೆಯನ್ನು ಉಳಿಸಿಕೊಂಡಿತು ಎಂಬುದು ಮಹತ್ವದ ಸಂಗತಿ.
ಇವೆಲ್ಲ ಭೌತಿಕ ಪರಿಸರ ಸ್ವಚ್ಛತೆಯ ಮತ್ತು ಕಸ ವಿಲೇವಾರಿಯ ವಿಚಾರಗಳಾದರೆ, ಇಂದು ನಮ್ಮೆಲ್ಲರ ಕೈಯಲ್ಲಿರುವ ಸೆಲ್ ಫೋನ್ ಒಂದು ಮಹಾ ಡಿಜಿಟಲ್ ಕಸದ ತೊಟ್ಟಿ. ದಿನದ ಇಪ್ಪತ್ನಾಲ್ಕು ಗಂಟೆಯೂ ಇದರಲ್ಲಿ ಸುದ್ದಿ, ವಿಷಯ, ಚಿತ್ರ, ವಿಡಿಯೋ ಎಂಬ ವಿವಿಧ ಬಗೆಯ ಕಸ ಹೊರಗಿನಿಂದ ರಾಶಿ ರಾಶಿ ಬಂದು ಬೀಳುತ್ತದೆ. ಇದೆಲ್ಲವೂ ನಮ್ಮ ಒಪ್ಪಿಗೆಯ ಮೇರೆಗೆಯೇ ಬಂದು ಬೀಳುತ್ತದೆ ಎಂಬುದು ಮರೆಯುವಂತಿಲ್ಲ. ಅಷ್ಟೇ ಅಲ್ಲ, ಈ ಸೆಲ್ ಫೋನ್ ನಮ್ಮ ಕೈಯಲ್ಲಿ ಇರುವಷ್ಟು ಸಮಯವೂ ನಾವು ಡಿಜಿಟಲ್ ಕಸ ಕಡ್ಡಿ ಉತ್ಪತ್ತಿಮಾಡಿ ಇಲ್ಲವೆ ಇತರರಿಂದ ನಮ್ಮಲ್ಲಿಗೆ ಬಂದ ಕಸವನ್ನು ಲೈಕ್, ಶೇರ್, ಕಮೆಂಟ ಅಥವಾ ಫಾರ್ವರ್ಡ್ ಮಾಡಿ ಎಲ್ಲೆಡೆ ಹರಡುತ್ತಾ ಇರುತ್ತೇವೆ. ಕೆಲವೇ ದಿನಗಳಲ್ಲಿ ನಮಗರಿವಿಲ್ಲದಂತೆ ಎಷ್ಟೋ ಜಿ. ಬಿ. (Giga Bite) ಡಿಜಿಟಲ್ ಕಸ ನಮ್ಮ ಮತ್ತು ಇತರರ ಫೋನಿನ ಮೆಮೊರಿ ಎಂಬ ಮಹಾ ತೊಟ್ಟಿಯನ್ನು ಆಕ್ರಮಿಸಿ ಫೋನಿನ ಕಾರ್ಯಕ್ಷಮತೆಯನ್ನು ತಗ್ಗಿಸಿ ಬಿಡುತ್ತದೆ. ಅಷ್ಟೇ ಅಲ್ಲ, ಅದು ನಮಗರಿವಿಲ್ಲದಂತೆ ನಮ್ಮ ತಲೆಯನ್ನು ಸೇರಿ ವಿಕೃತ ವಿಚಾರಗಳೆಂಬ ಕೆಟ್ಟಗಬ್ಬು ವಾಸನೆಯನ್ನು ನಮ್ಮ ಮತ್ತು ನಮ್ಮವರ ತಲೆಯಲ್ಲೂ ಹರಡುತ್ತದೆ ಮತ್ತು ಸಮಾಜದ ಅಂತರಾತ್ಮವನ್ನು ಮಲಿನ ಗೊಳಿಸುವ ಸಾಧ್ಯತೆ ದಟ್ಟವಾಗಿದೆ.
ನಾವು ಉತ್ಪಾದನೆ ಮಾಡುವ ಅಥವಾ ನಮ್ಮ ಮುಖಾಂತರ ಪ್ರಸಾರಗೊಳ್ಳುವ ಡಿಜಿಟಲ್ ಕಸವನ್ನು ಶೇಖರಿಸಿ ವಿಂಗಡಿಸಿ ಬೇಕಾದ ಮಾಹಿತಿಯನ್ನು ಸಂಗ್ರಹಿಸಿ ನಂತರ ನಮ್ಮ ಆ ಕಸದಿಂದ ರಸ ತಗೆದು ನಮಗೇ ಕುಡಿಸಿ ತಾವು ಲಾಭಗಳಿಸಲು ಅನೇಕ ಬಹುರಾಷ್ಟ್ರೀಯ ಸಾಫ್ಟವೇರ್ ಕಂಪನಿಗಳು ಹುನ್ನಾರು ನಡೆಸಿವೆ. ಈ ಸಂದರ್ಭದಲ್ಲಿ ಆಕಾಶವಾಣಿಯಲ್ಲಿ ಪ್ರಸಾರವಾಗುವ ಸೆಪ್ಟಿಕ್ ಟ್ಯಾಂಕನ ಸ್ಲೆಝನ್ನು ಖಾಲಿ ಮಾಡುವ ಜಾಹೀರಾತಿನಂತೆ ನಮ್ಮ ಫೋನ್ ನಲ್ಲಿ ಶೇಖರಣೆ ಆಗುವ ಡಿಜಿಟಲ್ ಸ್ಲೆಝನ್ನು ನಾವೇ ಆಗಾಗ ಖಾಲಿಮಾಡಿ 'ಸ್ವಚ್ಛತೆಯವರು' ಆಗುವ ಅಗತ್ಯತೆ ಇದೆ.
ಹ಼ಾ, ಅಂದಹಾಗೆ ಈ ಲೇಖನ ನಿಮಗೆ ಇಷ್ಟವಾದರೆ ಲೈಕ, ಶೇರ್, ಕಾಮೆಂಟ್ ಮತ್ತು ಫಾರ್ವರ್ಡ್ ಮಾಡಲು ಮರೆಯಬೇಡಿರಿ. ಅಕಸ್ಮಾತ್ತಾಗಿ ನಿರುಉಪಯುಕ್ತವೆನಿಸಿದರೆ ಇದನ್ನು ಡಿಜಿಟಲ್ ಕಸವೆಂದು ತಿಳಿದು ಎತ್ತಿ ಟ್ರ್ಯಾಷ್ ಬುಟ್ಟಿಗೆ ಹಾಕಿ ಸ್ವಚ್ಛತೆಯವರಾಗಿರಿ.
ಡಾ. ಜಯಂತ ಕಿತ್ತೂರ
ಬಹಳ ಚೆನ್ನಾಗಿ ಬರೆದಿದ್ದೀರಿ. ಓದಿ ಸಂತೋಷವಾಯಿತು.
ಪ್ರತ್ಯುತ್ತರಅಳಿಸಿಮನೆ, ಮನ, ಮಠ, ಮಂದಿರ, ಮಸೀದಿ, ಮೊಬೈಲ್ ಹಾಗು ರಾಜಕೀಯದಲ್ಲಿ ಇರಬಹುದಾದ ಕಸ ವಿಲೇವಾರಿ ಮಾಡುವದರಿಂದ ಸ್ವಚ್ಛ ಸಮಾಜದ ನಿರ್ಮಾಣ ಸಾಧ್ಯ ಎನ್ನುವುದನ್ನು ತುಂಬಾ ಚನ್ನಾಗಿ ವಿವರಿಸಿದ್ದೀರಿ. ಅಭಿನಂದನೆಗಳು
ಪ್ರತ್ಯುತ್ತರಅಳಿಸಿತುಂಬಾ ಚೆನ್ನಾಗಿದೆ ಸರ್
ಪ್ರತ್ಯುತ್ತರಅಳಿಸಿvery well written. i enjoyed the flow of the article , especially on how you related physical waste to the ever-increasing digital waste being generated everywhere
ಪ್ರತ್ಯುತ್ತರಅಳಿಸಿGreat article!
ಪ್ರತ್ಯುತ್ತರಅಳಿಸಿI would like to comment on Digital Waste.. I completely agree that we are creating lot of digital waste without knowing its effects on Storage, Energy used to maintain it etc.
Having said that, I work for a storage company, and people creating/buying more digital storage helps me keep my job!
Excellent article! Loved it! Thanks for sharing.
ಪ್ರತ್ಯುತ್ತರಅಳಿಸಿನಿಮ್ಮ ಕಸದ ಬಗೆ ಬರೆದ ಲೇಖನ ತುಂಬ ರಸವತ್ತಾಗಿದೆ.
ಪ್ರತ್ಯುತ್ತರಅಳಿಸಿಕಸದ ಬಗ್ಗೆ ಜಾಗೃತಿ ಮೂಡಿಸುವ ಲೇಖನ ತುಂಬಾ ಚನ್ನಾಗಿದೆ ಸರ್
ಪ್ರತ್ಯುತ್ತರಅಳಿಸಿಶುಚಿತ್ವದ ಅನುಕೂಲಗಳು ಉದಾಹರಣೆಗಳೊಂದಿಗೆ ಸೂಕ್ತವಾಗಿವೆ. ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲು ನಿಮ್ಮ ಗಮನಾರ್ಹ ಪ್ರತಿಭೆಯನ್ನು ಬಳಸಿದ್ದಕ್ಕಾಗಿ ಧನ್ಯವಾದಗಳು.
ಪ್ರತ್ಯುತ್ತರಅಳಿಸಿಕಸದ ಬುಟ್ಟಿಗೆ ಹಾಕುವ ಪ್ರಯತ್ನ ಮಾಡಿದರೆ ತಪ್ಪಾಗುವುದು, ಕಾರಣ ನೀವು ಇರುವ ಸತ್ಯವನ್ನು ಸೂಕ್ತ ಎಂಬುದನ್ನು ತಿಳಿಸಿದ್ದೀರಿ. ಲೇಖನ ಓದಿ ಸಂತೋಷವಾಗಿದೆ. ಧನ್ಯವಾದಗಳು 🙏💐😊
ಪ್ರತ್ಯುತ್ತರಅಳಿಸಿಧ್ವನಿ ಪೂರ್ಣ ಬರಹ
ಪ್ರತ್ಯುತ್ತರಅಳಿಸಿ