ತುಪ್ಪ ಉಪ್ಪಿನ ಲೆಕ್ಕ
ಒಂದು ದಿನ ಸಂಜೆ ಮರುದಿನದ ಕ್ಲಾಸಿನ ಸ್ಲೈಡ ತಯಾರಿಯಲ್ಲಿ ನಾನು ತಲ್ಲೀನನಾಗಿದ್ದೆ. ಆಗ ಪ್ರೈಮರಿ ಶಾಲೆಗೆ ಹೋಗುತ್ತಿದ್ದ ಮುದ್ದಿನ ಮಗಳು ಕುತೂಹಲದಿಂದ ಅಪ್ಪ ಏನು ಮಾಡುತ್ತಿರುವಿ ಎಂದು ವಿಚಾರಿಸಿದಳು. ನಿನ್ನಹಾಗೆ ನಾನೂ ಹೋಮವರ್ಕ್ ಮಾಡುತ್ತಿರುವೆ ಎಂದಾಗ ಅವಳು ನೀನು ಹೋಮವರ್ಕ್ ಮಾಡದೇ ಇದ್ದರೆ ನಿಮ್ಮ ಪ್ರಿನ್ಸಿಪಾಲ್ ನಿನಗೆ ಪನಿಶ್ಮೆಂಟ್ ಕೊಡುವರೇ ಎಂದು ಕುತೂಹಲದಿಂದ ಕೇಳಿದಳು. ಹೌದು, ನಮ್ಮ ಪ್ರಿನ್ಸಿಪಾಲ್ ನಿಮ್ಮ ಮಿಸ್ಸಗಿಂತಲೂ ಬಹಳ ಸ್ಟ್ರಿಕ್ಟ್ ಎಂದು ಹೇಳಿದೆ. ಹೌದಾ, ಹಾಗಾದರೆ ಚೆನ್ನಾಗಿ ಹೋಮವರ್ಕ್ ಮಾಡು ಎಂದು ನಾನು ತಯಾರುಮಾಡುತ್ತಿದ್ದ ಸ್ಲೈಡನ ತಲೆಬರಹ ಓದಿದಳು. ಅದು 'ABC Analysis' (ವಿಶ್ಲೇಷಣೆ) ಎಂದಾಗಿತ್ತು. ತಕ್ಷಣವೇ ನನ್ನ ಮಗಳು ಅಡುಗೆ ಮನೆಗೆ ಓಡಿ ಹೋಗಿ 'ಅಪ್ಪ ಇಷ್ಟು ವರ್ಷವಾದರೂ ಇನೂ ನನ್ನಂತೆ ABC ಕಲೀತಿದ್ದಾರೆ' ಎಂದು ತಮ್ಮ ಅಮ್ಮನಿಗೆ ತಿಳಿಸಿದಳು. ನನ್ನಾಕೆ ಹೌದೇನರೀs, ನಿಮ್ಮ ಮಗಳು ಹೇಳುವುದು ನಿಜವಾ ಎಂದು ಕೇಳಿದಳು. ಹೌದು ಈಗ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ABC ವಿಶ್ಲೇಷಣೆ ವಿಷಯ ಕುರಿತು ಕಲಿಸುತ್ತಿರುವುದು ಎಂದು ನಾನೆಂದೆ. ಏನು ಈಗ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮತ್ತೆ ABC ವಿಶ್ಲೇಷಣೆ ಅಂತ ಕಲಿಸುವುದು? ಎಂದು ನಾನು ಕಲಿಸುವ ಇಂಜಿನಿಯರಿಂಗ್ ವಿಷಯದಲ್ಲಿ ನನ್ನಾಕೆ ಮೊದಲಬಾರಿ ಆಸಕ್ತಿ ತೋರಿದಳು.
ಮನೆಯೇ ಮೊದಲ ಪಾಠಶಾಲೆ ಹೆಂಡತಿಯೇ ನನ್ನ ಮೊದಲ ವಿದ್ಯಾರ್ಥಿ ಎಂದು ಆಕೆಗೆ ಪಾಠ ಮಾಡಲು ಪ್ರಾರಂಭಿಸಿದೆ. ನಾವು ಸಾಮಾನ್ಯವಾಗಿ ಮನೆಯಲ್ಲಿ ಉಪಯೋಗಿಸುವ ಕಡ್ಡಿಪೆಟ್ಟಿಗೆ (ಮ್ಯಾಚ್ ಸ್ಟಿಕ್ ಬಾಕ್ಸ್) ಯ ತಯಾರಿಯಲ್ಲಿ ಕನಿಷ್ಠವೆಂದರೂ ಐದಾರು ವಿವಿಧ ಬಗೆಯ ಕಚ್ಚಾ ವಸ್ತುಗಳು ಬೇಕಾಗುತ್ತವೆ. ಅದೇ ರೀತಿ ಬರೆಯಲು ಉಪಯೋಗಿಸುವ ಬಾಲ್ ಪೆನ್ನಿನ ತಯಾರಿಗೆ ಎಂಟರಿಂದ ಹತ್ತು ವಿವಿಧ ಬಗೆಯ ಬಿಡಿ ಭಾಗಗಳು ಇರುತ್ತವೆ ಎಂದು ನಾನು ವಿವರಿಸುತ್ತಿದ್ದೆ. ಅದೇನು ಮಹಾ, ನಾನು ತಯಾರಿಸುವ ಸಾರಿನ ಮಸಾಲೆಯಲ್ಲಿ ಅಷ್ಟು ವಿವಿಧ ಪದಾರ್ಥಗಳು ಬೇಕಾಗುತ್ತವೆ ಎಂದು ಅವಳೆಂದಳು. ಹೌದಾ, ಇರಬಹುದು ಎಂದು ನನ್ನ ಲೆಕ್ಚರ್ ಮುಂದುವರೆಸಿ, ಇನ್ನು ಬೈಸಿಕಲ್, ವಾಶಿಂಗ್ ಮಶೀನ್, ಟಿವಿ, ಕಾರು, ವಿಮಾನದಂತಹ ಯಂತ್ರ ವಾಹನಗಳನ್ನು ತಯಾರಿಸುವಲ್ಲಿ ಸಾವಿರದಿಂದ ಲಕ್ಷಗಟ್ಟಲೆ ಬಿಡಿಭಾಗಗಳು ಬೇಕಾಗುತ್ತವೆ. ಅವುಗಳಲ್ಲಿ ಯಾವುದೇ ಒಂದು ಭಾಗ ಅಥವಾ ವಸ್ತು ಸಮಯಕ್ಕೆ ಸರಿಯಾಗಿ ಬೇಕಾದ ಸಂಖ್ಯೆಯಲ್ಲಿ ಲಭ್ಯವಿರದಿದ್ದರೆ ಕೈಗಾರಿಕಾ ಉತ್ಪಾದನೆ ನಿಂತುಬಿಡುತ್ತದೆ. ಹಾಗಂತ ಬೇಕಾದ ಎಲ್ಲಾ ಕಚ್ಚಾವಸ್ತು ಅಥವಾ ಬಿಡಿ ಭಾಗಗಳನ್ನು ಬಹಳ ಸಂಖ್ಯೆಯಲ್ಲಿ ಶೇಖರಿಸಿ ಇಡುವುದಕ್ಕೆ ಬಂಡವಾಳ ಮತ್ತು ಸ್ಥಳ ಬಹಳ ಬೇಕಾಗುತ್ತದೆ. ಹಾಗಾಗಿ ಒಂದು ಕೈಗಾರಿಕಾ ಸಿದ್ಧವಸ್ತುವನ್ನು ಉತ್ಪಾದನೆ ಮಾಡುವಲ್ಲಿ ಬಳಕೆಯಾಗುವ ಎಲ್ಲಾ ವಸ್ತು ಅಥವಾ ಬಿಡಿಭಾಗಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಲ್ಲಿ ಈ ABC Analysis (ವಿಶ್ಲೇಷಣೆ) ಒಂದು ಮಹತ್ವದ ಪಾತ್ರ ವಹಿಸುತ್ತದೆ. ಸ್ವಲ್ಪ ತಾಂತ್ರಿಕ ಭಾಷೆಯಲ್ಲಿ ಹೇಳುವುದಾದರೆ, ABC ವಿಶ್ಲೇಷಣೆಯು ದಾಸ್ತಾನು ನಿರ್ವಹಣಾ ವಿಧಾನವಾಗಿದ್ದು, ಇದು ವಸ್ತುಗಳನ್ನು ಅವುಗಳ ಮೌಲ್ಯ ಮತ್ತು ಪ್ರಾಮುಖ್ಯತೆಯ ಆಧಾರದ ಮೇಲೆ ಮೂರು ವರ್ಗಗಳಾಗಿ (A,B&C) ವರ್ಗೀಕರಿಸುತ್ತದೆ. ಇದು ವ್ಯವಹಾರಗಳಿಗೆ ಸಂಪನ್ಮೂಲಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿಯೋಜಿಸಲು ಅನುವು ಮಾಡಿಕೊಡುತ್ತದೆ. A ವಸ್ತುಗಳು ಬಿಗಿಯಾದ ನಿಯಂತ್ರಣದ ಅಗತ್ಯವಿರುವ ಹೆಚ್ಚಿನ ಮೌಲ್ಯದ, ಕಡಿಮೆ-ಪ್ರಮಾಣದ ವಸ್ತುಗಳು. ಆದರೆ, C ವಸ್ತುಗಳು ಕಡಿಮೆ-ಮೌಲ್ಯದ, ಹೆಚ್ಚಿನ-ಪ್ರಮಾಣದ ವಸ್ತುಗಳು, ಇವುಗಳಿಗೆ ಸರಳ ನಿಯಂತ್ರಣಗಳು ಮಾತ್ರ ಬೇಕಾಗುತ್ತವೆ. ಇನ್ನು B ವಸ್ತುಗಳು ಇವೆರಡರ ನಡುವೆ ಬರುತ್ತವೆ. ಇವಕ್ಕೆ ಮಧ್ಯಮ ನಿಯಂತ್ರಣದ ಅಗತ್ಯವಿರುತ್ತದೆ ಎಂದು ವಿವರಿಸಲು ಪ್ರಯತ್ನಿಸಿದೆ.
ಈ ತಾಂತ್ರಿಕ ವಿಷಯವನ್ನು ಅರ್ಥಮಾಡಿಕೊಳ್ಳುವುದು ಕಷ್ಟ, ಸುಲಭವಾಗಿ ಒಂದು ಉದಾಹರಣೆಯೊಂದಿಗೆ ಹೇಳಿರಿ ಎಂದು ಅವಳೆಂದಳು. ನಾನು ಆಗಬಹುದೆಂದು ನನ್ನ ಮನೆ ಪಾಠ ಮುಂದುವರೆಸಿದೆ....
ನಾಲ್ಕು ದಶಕಗಳ ಹಿಂದೆ ಈಗಿನಂತೆ ಊರಲ್ಲಿ ಮದುವೆಯ ಮಂಗಲ ಕಾರ್ಯಾಲಯಗಳು, ಕೇಟರಿಂಗ್ ಸರ್ವಿಸ್ ಇಲ್ಲದ ಸಮಯವದು. ನಮ್ಮ ಹಿರಿಯಕ್ಕನ ಮದುವೆ ಕಾರ್ಯಕ್ರಮಕ್ಕೆ ನಮ್ಮ ಮನೆಯ ಮುಂದೆ ಒಂದು ದೊಡ್ಡ ಶಾಮಿಯಾನಾ ಹಾಕಿ ಮನೆಯ ಹಿಂದೆ ಅಡುಗೆಯ ಭಟ್ಟರಿಗೆ ಅಡುಗೆ ತಯಾರಿಸುವ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಬಗೆಯ ತಿಂಡಿ, ಆಹಾರ ಖಾದ್ಯಗಳ ತಯಾರಿಕೆಗೆ ಬೇಕಾಗುವ ವಿವಿಧ ಬಗೆಯ ಕಾಳುಕಡಿ, ಅನೇಕ ಆಹಾರ ವಸ್ತುಗಳ ದಾಸ್ತಾನು ಮತ್ತು ವಿತರಣೆಮಾಡುವ ಕೊಠಿಖೋಲಿಯ ಜವಾಬ್ದಾರಿಯನ್ನು ನಮ್ಮ ಸೊದರತ್ತೆ ಸಮರ್ಪಕವಾಗಿ ಸಂಭಾಳಿಸಿದಳು. ಇದನ್ನೆಲ್ಲ ನೀನು ಹೇಗೆ ಮ್ಯಾನೇಜ ಮಾಡಿದೆ ಎಂದು ಇಂಜಿನೀಯರಿಂಗ್ ವಿದ್ಯಾರ್ಥಿಯಾಗಿದ್ದ ನಾನು ಅವಳಿಗೆ ಕೇಳಿದೆ. ಅದೇನು ಮಹಾ ನನ್ನ ಜೀವನಾನುಭವದ ಪಾಠ 'ತುಪ್ಪ ಉಪ್ಪಿನ ಲೆಕ್ಕ' ಎಂದು ಅವಳೆಂದಳು. ತುಪ್ಪ ಉಪ್ಪಿನ ಲೆಕ್ಕ... ಹಾಗೆಂದರೇನು ಎಂದು ಆಶ್ಚರ್ಯದಿಂದ ನಾನು ಕೇಳಿದೆ. ನೋಡು ಜಯಂತಾ, ಮದುವೆಯ ಬಹುತೇಕ ಖಾದ್ಯಗಳ ತಯಾರಿಕೆಗೆ ಬಳಕೆಯಾಗುವ ವಿವಿಧ ವಸ್ತುಗಳಲ್ಲಿ ತುಪ್ಪ ಹೆಚ್ಚು ಮೌಲ್ಯದ್ದಾದರೆ ಉಪ್ಪು ಬಹಳ ಕಡಿಮೆ ಮೌಲ್ಯದ ವಸ್ತು. ಅದರಂತೆ, ತುಪ್ಪದ ಬಳಕೆಯ ಪ್ರಮಾಣ ಕಡಿಮೆಯಾದರೆ ಉಪ್ಪಿನದು ಹೆಚ್ಚು ಮತ್ತು ಉಳಿದ ವಸ್ತುಗಳು ಇವೆರಡರ ಮಧ್ಯದಲ್ಲಿನವುಗಳು. ಅದಕ್ಕೆ ಅನುಗುಣವಾಗಿ ಅಂದರೆ ತುಪ್ಪದ ಬಳಕೆ ಪ್ರಮಾಣ ಕಡಿಮೆಯಾದರೂ ಅದರ ಮೌಲ್ಯ (ಮಾರುಕಟ್ಟೆಯ ಬೆಲೆ) ಜಾಸ್ತಿ, ಹಾಗಾಗಿ ಅದರ ಬಳಕೆಯ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಮತ್ತು ಅದಕ್ಕನುಗುಣವಾಗಿ ಅದರ ಲೆಕ್ಕ ಹಾಕಿ ಖರೀದಿ, ನಿರ್ವಹಣೆ ಆಗಿರಬೇಕು ಮತ್ತು ಅದರಂತೆ,ವಿವಿಧ ಆಹಾರ ಪದಾರ್ಥಗಳ ತಯಾರಿಕೆಗೆ ಬೇಕಾಗುವ ಉಪ್ಪಿನ ಪ್ರಮಾಣ ಜಾಸ್ತಿ ಆದ್ರೆ ಅದರ ಮೌಲ್ಯ ಕಡಿಮೆ, ಹೀಗಾಗಿ ಅದರ ಬಳಕೆಯ ಬಗ್ಗೆ ವಹಿಸುವ ನಿಗಾ ನಿರ್ವಹಣೆ ಕಡಿಮೆ ಇರಬೇಕು. ಉಂಡಿ, ಮೈಸೂರು ಪಾಕು ಮುಂತಾದ ಸಿಹಿ ಪದಾರ್ಥಗಳ ತಯಾರಿಕೆಗೆ ಎಷ್ಟು ಪ್ರಮಾಣದ ತುಪ್ಪ ಬೇಕೋ ಅಷ್ಟು ಮಾತ್ರ ಅಡುಗೆಯವರಿಗೆ ಕೊಡಬೇಕು ಆದರೆ ಬಹುತೇಕ ಉಳಿದೆಲ್ಲ ಆಹಾರ ಪದಾರ್ಥಗಳ ತಯಾರಿಗೆ ಬೇಕಾಗುವ ಉಪ್ಪನ್ನು ಸ್ವಲ್ಪ ಹೆಚ್ಚಾಗಿ ಶೇಖರಿಸಿ ಇಡಬೇಕು ಮತ್ತು ಅದರ ಬಳಕೆಯ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳದೇ ಅಡುಗೆಯವರು ಬೇಡಿದಷ್ಟು ಉಪ್ಪನ್ನು ಧಾರಾಳವಾಗಿ ನೀಡಬೇಕು, ಏಕೆಂದರೆ ಅದರ ಬೆಲೆ ಕಡಿಮೆ. ಇನ್ನು ಜನರು ಊಟಕ್ಕೆ ಕೂತಾಗ ಎಲ್ಲರ ಎಲೆಗೆ ಮೊದಲು ಹಾಕುವ ಉಪ್ಪನ್ನು ಬಡಿಸುವ ಜವಾಬ್ದಾರಿ ಯಾರಾದರೂ ನಿಭಾಯಿಸಲಿ ಆದರೆ, ತುಪ್ಪವನ್ನು ಮಾತ್ರ ಮನೆಯ ಯಜಮಾನಿಯೇ ಬಡಿಸಬೇಕು ಹೊರತು ಇತರರಲ್ಲ ಎಂಬ ಸಂಪ್ರದಾಯದ ಹಿಂದೆ ಇರುವ ಉದ್ದೇಶ ತುಪ್ಪದ ಬಳಕೆಯ ಮೇಲೆ ಹೆಚ್ಚಿನ ನಿಗಾ ಇರುವುದನ್ನು ಸೂಚಿಸುತ್ತದೆ ಎಂದು ನನ್ನ ಸೋದರತ್ತೆ ಹೇಳಿದಳು. ನಾನು ಹೌದಲ್ಲ ಎಂದು ಆಶ್ಚರ್ಯ ಪಟ್ಟೆ. ನನ್ನ ಸೋದರತ್ತೆ ಮುಂದೆ ಇನ್ನೊಂದು ಮಹತ್ವದ ಮತ್ತು ಅನುಭವದ ಮಾತು ಹೇಳಿದಳು. ಈ ತುಪ್ಪ ಉಪ್ಪಿನ ಲೆಕ್ಕ ಕೇವಲ ಆಹಾರ ಖಾದ್ಯಗಳ ತಯಾರಿಕೆ ಮತ್ತು ಬಳಕೆಗೆ ಮಾತ್ರ ಸೀಮಿತವಾಗದೇ ಮಾತುಗಳಿಗೂ ಅನ್ವಹಿಸುತ್ತದೆ, ಜನರಾಡುವ ಮಾತುಗಳಲ್ಲಿ ಒಳ್ಳೆಯ ಮಾತುಗಳು ವಿರಳ ಹಾಗಾಗಿ ಅವಕ್ಕೆ ತುಪ್ಪದ ಬೆಲೆ ಕೊಡಬೇಕು ಮತ್ತು ಇತರ ಸಾವಿರಾರು ಸುಳ್ಳು, ಚಾಡಿ, ಕೊಂಕು, ಧಿಮಾಕಿನ ಮಾತಿಗೆ ಉಪ್ಪಿನ ಬೆಲೆ ನೀಡಿ ಅವನ್ನು ನಿರ್ವಹಿಸಬೇಕು ಎಂದು ನೀತಿ ಪಾಠ ಹೇಳಿದಳು ಎಂದು ನನ್ನ ಶ್ರೀಮತಿಗೆ ವಿವರಿಸಿದೆ.
ನಿಜ, ಅವರದು ಬಹಳ ಅನುಭವದ ಮಾತು , ಇದೇ ತುಪ್ಪ ಉಪ್ಪಿನ ವಿಚಾರವಲ್ಲವೆ ಅಡುಗೆ ಮನೆಯ ಮತ್ತು ಮನೆಮಂದಿಯ ಮಾತಿನ ಸಮರ್ಪಕ ನಿರ್ವಹಣೆಯಲ್ಲಿ ಪ್ರತಿಯೊಬ್ಬ ಗೃಹಿಣಿಯರು ಮಾಡುವುದು. ನೀವು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕಲಿಸುವ ABC Analysis ಕಲಿಯಲು ಇಂಜಿನಿಯರಿಂಗ್ ಯಾಕೆ ಬೇಕು ನಿಮ್ಮ ಸೋದರತ್ತೆಯ ಮಾತುಗಳೇ ಸಾಕು ಅವು ವೈಜ್ಞಾನಿಕ ಮತ್ತು ತಾತ್ವಿಕ ವಿಚಾರವೆಂದಳು ನನ್ನಾಕೆ. ಹೌದು, ಭಾರತಿಯ ಸನಾತನ ಸಂಸ್ಕೃತಿ, ಪದ್ಧತಿಗಳು ಬಹಳ ವೈಜ್ಞಾನಿಕ ವಿಶ್ಲೇಷಣೆಯನ್ನು ಮೈಗೂಡಿಸಿಕೊಂಡು ಬೆಳೆದುಬಂದವುಗಳು ಎಂಬುದರಲ್ಲಿ ಸಂಶಯವಿಲ್ಲ. ವಿಪರ್ಯಾಸವೆಂದರೆ, ಪಾಶ್ಚಿಮಾತ್ಯರು ಅವುಗಳೆಲ್ಲ ತಮ್ಮದೇ ಆವಿಷ್ಕಾರವೆಂದು ಬಿಂಬಿಸುವುದು ಮತ್ತು ಇಂದಿನ ನಮ್ಮ ಯುವಪೀಳಿಗೆ ನಮ್ಮ ಸಂಸ್ಕೃತಿಯ ಆಳದ ಅರಿವಿಲ್ಲದೇ, ಒಂದು ತರಹದ ಕೀಳರಿಮೆ ಹೊಂದಿದ್ದು ನಮ್ಮ ಸಂಸ್ಕೃತಿಯನ್ನು ತಿರಸ್ಕರಿಸಿ ಪಾಶ್ಚಿಮಾತ್ಯರ ಅಂಧಾನುಕರಣೆ ಮಾಡುವುದು ಎಂದು ನಾನೆಂದೆ. ಅದೂ ನಿಜವೆನ್ನಿ ಎಂದು ನನ್ನಾಕೆ ನನ್ನ ಮಾತಿಗೆ ಸಮ್ಮತಿ ಸೂಚಿಸಿದಳು.
-ಡಾ. ಜಯಂತ ಕಿತ್ತೂರ
ಅಡುಗೆಮನೆಯ ಮ್ಯಾನೇಜ್ಮೆಂಟ್ ಪಾಠಗಳು❤️✨
ಪ್ರತ್ಯುತ್ತರಅಳಿಸಿಲೇಖನ ತುಂಬಾ ಚೆನ್ನಾಗಿದೆ
ಅನುಭವ iddalli ಅಮೃತತ್ವ ಇದೆ ಎಂಬುದು ಸುಳ್ಳಲ್ಲ..
ಪ್ರತ್ಯುತ್ತರಅಳಿಸಿಒಳ್ಳೇ ಬರಹ ಸರ್
ಪ್ರತ್ಯುತ್ತರಅಳಿಸಿYour writing skills with day to day life examples makes the story very interesting and teaches the younger generation (if at all they happen to read) the deep knowledge of our forefathers. How simple there analyses was. Each and every „ಗಾದೆ ಮಾತು is a treasure and with deep meaning. Everyday life lessons are interesting. Keep writing sir 🙏
ಪ್ರತ್ಯುತ್ತರಅಳಿಸಿVery true and correct sir
ಪ್ರತ್ಯುತ್ತರಅಳಿಸಿಸರ ತುಪ್ಪ ಇಲ್ಲದೇ ಊಟ ಆದೀತು ಉಪ್ಪಿಲ್ಲದಿದ್ಧರೆ __ಮಾರೀ ಕವುಚಬೇಡರೀ ಇದು C grade ನ ಮಹತ್ಪ
ಪ್ರತ್ಯುತ್ತರಅಳಿಸಿABC analysis... ತುಪ್ಪ ಉಪ್ಪಿನ ಲೆಕ್ಕ ಬದುಕಿನಲಿ ಒಳ್ಳೆಯ ಮಾತುಗಳು ನಡೆ ನುಡಿಗಳಿಗೆ, ಬಯ್ದು ಹೇಳುವರು ಒಳ್ಳೆಯದಕ್ಕ ಇಂಥ ಸಂದರ್ಭದಲ್ಲಿ ತುಪ್ಪದ ಲೆಕ್ಕ ಮಹತ್ವಪೂರ್ಣ.... ಇನ್ನೂ ಚಾಡಿ ಸುಳ್ಳು ಸಂಬಂಧ ಕೆಡಿಸುವರು ಜೀವನದಲ್ಲಿ ಹುಳಿ ಹಿಂದುವರಿಗೆ ಉಪ್ಪಿನ ಲೆಕ್ಕ... ಬದುಕನು ಅರ್ಥವತ್ತಾಗಿ ನಡೆಸುವುದು ತುಪ್ಪ ಉಪ್ಪಿನ ಲೆಕ್ಕ... ಬಹಳ ಸುಂದರ ವಿಶ್ಲೇಷಣೆ
ಪ್ರತ್ಯುತ್ತರಅಳಿಸಿSripad Algudkar ✍️
ಉತ್ತಮ ತುಲನಾತ್ಮಕ ವಿವರಣೆ ಆಸಕ್ತಿದಾಯಕವಾಗಿದೆ.
ಪ್ರತ್ಯುತ್ತರಅಳಿಸಿಜಯಂತ್, ಅಭಿನಂದನೆಗಳು.ಇದು ಬರೀ ಲೇಖನವಲ್ಲ ಜೀವನಾನುಭವ ಪಾಠ .ಇದನ್ನು ಇಂದಿನ ಪೀಳಿಗೆಗೆ ತಲುಪಿಸುವ ಮಹತ್ತರ ಹೊಣೆ ನಮ್ಮದು. ಧನ್ಯವಾದಗಳು
ಪ್ರತ್ಯುತ್ತರಅಳಿಸಿಅಡುಗೆ ಮನೆಯಲ್ಲಿ ಎರಡರ ಅನಿವಾರ್ಯತೆ ಇದ್ದರೂ ಅವಶ್ಯಕತೆಯನುಸಾರ ಬಳಸುವ ಜಾಣ್ಮೆ ಬಗ್ಗೆ ಸುಂದರ ಲೇಖನ.👏👏🙏
ಪ್ರತ್ಯುತ್ತರಅಳಿಸಿಎಂದಿನಂತೆ ಅತ್ಯುತ್ತಮ ಲೇಖನ....
ಪ್ರತ್ಯುತ್ತರಅಳಿಸಿಸರ್ ನಮಸ್ಕಾರ ಲೇಖನ ತುಂಬಾ ಚೆನ್ನಾಗಿದೆ ನಮ್ಮ ಹಿಂದಿನ ಹಿರಿಯರು ಬಹಳ ಜಾಣರು ಇಂದಿನ ಯುವ ಜನತೆಗೆ ನಮ್ಮ ಸಂಸ್ಕಾರ ಸಂಸ್ಕೃತಿ ಮೊದಲು ತಿಳಿಯಬೇಕು. ತಮ್ಮ ಬರವಣಿಗೆ ಹೀಗೆ ಮುಂದುವರಿಯಲಿ ಸರ್ ನಮಸ್ಕಾರ.
ಪ್ರತ್ಯುತ್ತರಅಳಿಸಿಸರ್ ನಮಸ್ಕಾರ ಲೇಖನ ತುಂಬಾ ಚೆನ್ನಾಗಿದೆ ಹೀಗೆ ಮುಂದುವರಿಯಲಿ ಸರ್.
ಪ್ರತ್ಯುತ್ತರಅಳಿಸಿReally inspiring to connect the links
ಪ್ರತ್ಯುತ್ತರಅಳಿಸಿWonderful correlation and narration, all management skills can be nurtured from managing kitchen and mother is the best manager. All 5S skills can be seen practiced from time immemorial and now they are taken as management tools. Delight reading sir❤️❤️
ಪ್ರತ್ಯುತ್ತರಅಳಿಸಿಒಳ್ಳೆಯ ಲೇಖನ ಜಯಂತ್
ಪ್ರತ್ಯುತ್ತರಅಳಿಸಿತುಪ್ಪ ಉಪ್ಪಿನ ಲೆಕ್ಕ ಹಿಡಿದು ಹೊರಟ ನಿಮ್ಮ ಬರವಣಿಗೆಯ ಕೌಶಲಕ್ಕೆ ನನ್ನದೊಂದು ಪ್ರೀತಿಯ ಸಲಾಂ ಸರ್
ಪ್ರತ್ಯುತ್ತರಅಳಿಸಿಸಿದ್ದಗಂಗಮ್ಮ ಕೆ ಆರ್
ಸುಮ್ಮನೆ ಒಂದು ನೆಪಪು-
ಪ್ರತ್ಯುತ್ತರಅಳಿಸಿ75 ವರ್ಷಗಳ ಹಿಂದೆ ಬೆಣ್ಣೆ ಒಂದು ಸೇರಿಗೆ( ಸುಮಾರು 1/4 kg) 6 ರಿಂದ 8 ಆಣೆ(36 -50 ಪೈಸೆ)ಗೆ ಸಿಗುತ್ತಿತ್ತು. ಸಾಧಾರಣ 6-7 ಜನರ ಕುಟುಂಬಕ್ಕೆ 2 ಸೇರು ಬೆಣ್ಣೆ( ರೂ.1/-)ಯ ತುಪ್ಪ ಸಾಕಾಗುತ್ತಿತ್ತು. ಇವತ್ತು ಅದೇ ತುಪ್ಪಕ್ಕೆ ಸುಮಾರು ರೂ. 360/- ಬೆಲೆಯಾಗಿದೆ.
ಚೆನ್ನಾಗಿದೆ. Interesting.
ಪ್ರತ್ಯುತ್ತರಅಳಿಸಿVery nicely written and interesting experience
ಪ್ರತ್ಯುತ್ತರಅಳಿಸಿಚೆನ್ನಾಗಿದೆ ☺️👌ಧನ್ಯವಾದಗಳು 🙏💐
ಪ್ರತ್ಯುತ್ತರಅಳಿಸಿ