ಪ್ರಶ್ನೆ ಕೇಳುವುದು
ದೆಹಲಿ ಮೂಲದ ಸರ್ಕಾರೇತರ ಸಂಶೋಧನಾ ಸಂಸ್ಥೆಯಾದ ಪಿಆರ್ಎಸ್ ಲೆಜಿಸ್ಲೇಟಿವ್ ರಿಸರ್ಚ್ ಫೆಬ್ರವರಿ 13, 2026 ರವರೆಗೆ ಸಂಗ್ರಹಿಸಿದ ಮಾಹಿತಿಯ ಪ್ರಕಾರ ಮತ್ತು ರಾಜ್ಯಸಭೆಯ ದಾಖಲೆಗಳು ಒದಗಿಸಿದ ದತ್ತಾಂಶದ ಪ್ರಕಾರ, ರಾಷ್ಟ್ರಪತಿಗಳಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡ ರಾಜ್ಯಸಭಾ ಸದಸ್ಯರೊಬ್ಬರು ತಮ್ಮ ಆರು ವರ್ಷಗಳ ಅವಧಿಯಲ್ಲಿ ಮೇಲ್ಮನೆಯಲ್ಲಿ ಒಂದೇ ಒಂದು ಪ್ರಶ್ನೆಯನ್ನು ಕೇಳಿಲ್ಲ ಅಥವಾ ಯಾವುದೇ ಖಾಸಗಿ ಸದಸ್ಯರ ಮಸೂದೆಯನ್ನು ಪರಿಚಯಿಸಿಲ್ಲ, ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳಲ್ಲಿ ಸಂಸದರು ಮಾಡುವ ಯಾವುದೇ 'ವಿಶೇಷ ಉಲ್ಲೇಖ'ಗಳು ಅವರ ಖಾತೆಯಲ್ಲಿ ಇಲ್ಲ ಎಂಬ ಪತ್ರಿಕಾ ವರದಿಯನ್ನು ತಾವೂ ಓದಿರಬಹುದು.
ರಾಷ್ಟ್ರಪತಿಗಳಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಸದಸ್ಯರು ತಮ್ಮ ವಿದ್ವತ್ತು, ಕಾರ್ಯಕ್ಷೇತ್ರ ಪರಿಣತಿಯ ವಿವಿಧ ದೃಷ್ಟಿಕೋನಗಳು ಮತ್ತು ಅನುಭವಗಳ ಮೂಲಕ ರಾಜ್ಯಸಭೆಯ ಚರ್ಚೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ಚರ್ಚೆಗಳ ಗುಣಮಟ್ಟವನ್ನು ಹೆಚ್ಚಿಸಬಹುದು. ಹೀಗಿರುವಾಗ ಆ ರಾಜ್ಯ ಸಭೆಯ ನಾಮ ನಿರ್ದೇಶನ ಸದಸ್ಯರು ಯಾವ ಚರ್ಚೆಯಲ್ಲಿಯೂ ಭಾಗವಹಿಸದೇ, ತಮ್ಮ ಅನಿಸಿಕೆ ಅಭಿಪ್ರಾಯ/ಸಲಹೆಗಳನ್ನು ನೀಡದೇ, ಆರು ವರ್ಷಗಳಲ್ಲಿ ಒಂದೇ ಒಂದು ಪ್ರಶ್ನೆಯನ್ನೂ ಕೇಳದೇ ಏನು ಕೊಡುಗೆ ಕೊಟ್ಟರು ಅಥವಾ ಕೊಡುಗೆ ಪಡೆದರು ಎಂಬುದನ್ನು ಆ ಭಗವಂತನೇ ಬಲ್ಲ. ಯಾಕೆಂದರೆ, ನಮ್ಮಲ್ಲಿ ಲೋಕಸಭೆಯಲ್ಲಿ ಪ್ರಶ್ನೆ ಕೇಳಲೂ ಹಣ ಪಡೆದ ಉದಾಹರಣೆಗಳೂ ಇವೆ.ಇರಲಿ, ಆ ಕೊಳಕು ರಾಜಕೀಯದ ವಿಷಯ ನಮಗೇಕೆ? ಆದರೆ, ಒಬ್ಬ ರಾಜ್ಯಸಭೆಯ ಸದಸ್ಯರು ತಮ್ಮ ಆರು ವರ್ಷಗಳ ಸದಸ್ಯತ್ವದ ಅವಧಿಯಲ್ಲಿ ಸರ್ಕಾರಕ್ಕೆ ಒಂದೇ ಒಂದು ಪ್ರಶ್ನೆಯನ್ನು ಕೇಳಲಿಲ್ಲ ಎಂದರೆ ತಾವು ಪ್ರತಿನಿಧಿಸುವ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿನ ವಿಷಯದಲ್ಲಿ ಯಾವುದೇ ಪ್ರಶ್ನೆಗಳು ಅವರ ತಲೆಯಲ್ಲಿ ಉದ್ಭವಿಸಲಿಲ್ಲವೇ? ಅಥವಾ ಪ್ರಶ್ನೆಗಳು ಉದ್ಭವಿಸಿದರೂ ಅವನ್ನು ಹೇಗೆ ಕೇಳಬೇಕು ಎಂದು ತಿಳಿಯಲಿಲ್ಲವೇ? ಇಲ್ಲವೇ, ರಾಜ್ಯ ಸಭೆಯ ಸದಸ್ಯನ ಸ್ಥಾನದಲ್ಲಿ ನಿಂತು ಪ್ರಶ್ನೆ ಕೇಳುವುದು ತಮ್ಮ ಮರ್ಯಾದೆ ಕಡಿಮೆ ಮಾಡುವುದೆಂದು ಅವರಿಗೆ ಅನಿಸಿತೋ? ಯಾಕೆಂದರೆ, ಕೋರ್ಟಗಳಲ್ಲಿ ನ್ಯಾಯಾಧಿಶರ ಆಸನದಲ್ಲಿ ಕೂತು ಅವರು ಕೇಳಿದ ಪ್ರಶ್ನೆಗೆ ವಕೀಲರು ನೂರು ಸಲ 'ಮೈ ಲಾರ್ಡ್, ಮೈ ಲಾರ್ಡ್' ಎಂದು ಉತ್ತರಿಸುವ ಪರಿಯಲ್ಲಿ ರಾಜ್ಯಸಭೆಯಲ್ಲಿ ಮಂತ್ರಿಗಳು ಉತ್ತರ ನೀಡುವುದಿಲ್ಲ. ಹಾಗಾಗಿ ಇದು ತಮ್ಮ ಘನತೆಗೆ ಧಕ್ಕೆ ಅನಿಸಿತೋ, ಇಲ್ಲವೇ ಆ ಪ್ರಶ್ನೆಗಳನ್ನು ರಾಜ್ಯಸಭೆಯಲ್ಲಿ ಕೇಳಿ ಯಾವ ಪ್ರಯೋಜನವಿಲ್ಲ ಎಂದು ಅವರಿಗೆ ಅನಿಸಿತೋ ಗೊತ್ತಿಲ್ಲ. ಅಂತೂ ಆರು ವರ್ಷದಲ್ಲಿ ರಾಜ್ಯಸಭೆಯ ಪ್ರಶ್ನಕಾಲದಲ್ಲಿ ಅವರದು ಶೂನ್ಯಸಾದನೆ.!!!
ಸಾಮಾನ್ಯವಾಗಿ ಮಾತನಾಡಲು ಕಲಿತ ಎಳೆಯ ಮಕ್ಕಳು ತಮ್ಮ ಪಾಲಕರಗೆ ನೂರಾರು ಪ್ರಶ್ನೆಗಳನ್ನು ಕೇಳುವುದು, ಅವರು ಈ ಜಗತ್ತನ್ನು ಬಹಳ ಆಸಕ್ತಿ, ಕುತುಹಲ ಅಥವಾ ವಿಸ್ಮಯದಿಂದ ಕಾಣುವುದನ್ನು ಸೂಚಿಸುತ್ತದೆ. ಹ಼ಾ, ಕೆಲವೊಂದು ಸಂದರ್ಭಗಳಲ್ಲಿ ಆ ಮಕ್ಕಳು ಕೇಳುವ 'ನಿಮ್ಮ ಮದುವೆಯ ಫೋಟೊದಲ್ಲಿ ನಾನೇಕಿಲ್ಲ?' ಎಂಬ ಪ್ರಶ್ನೆಗಳಿಂದಾಗಿ ಪಾಲಕರು ಮುಜುಗರವನ್ನು ಎದುರಿಸುವ ಸಾಧ್ಯತೆಗಳು ಇರುತ್ತವೆ. ಕೈಯಲ್ಲಿ ಡಿಗ್ರಿ ಪ್ರಮಾಣಪತ್ರ ಹಿಡಿದು ಊರೆಲ್ಲ ಅಲೆದರೂ ಸೂಕ್ತ ನೌಕರಿ ಸಿಗದೇ ಹತಾಶರಾದ ಯುವಕ ಅಮಿತಾಬ್ ಬಚ್ಚನ್ ತಮ್ಮ ತಂದೆಗೆ 'ನೀವೇಕೆ ನನ್ನನ್ನು ಹುಟ್ಟಿಸಿದಿರಿ?' ಎಂದು ಪ್ರಶ್ನೆ ಮಾಡಿದ್ದರಂತೆ. ಹಿಂದಿಯ ಪ್ರಸಿದ್ಧ ಕವಿಯಾಗಿದ್ದ ಅವರ ತಂದೆಯವರು, ನಾನೂ ಇದೇ ಪ್ರಶ್ನೆಯನ್ನು ನಮ್ಮ ತಂದೆಗೆ ಕೇಳಿದ್ದೆ, ಅವರು ತಮ್ಮ ತಂದೆಗೆ ಕೇಳಿದ್ದರಂತೆ ಮತ್ತೆ ಅವರ ತಂದೆ ತಮ್ಮ ತಂದೆಗೆ ಕೇಳಿದ್ದರಂತೆ ಆದರೆ ಯಾರಿಂದಲೂ ಸಮರ್ಪಕ ಉತ್ತರ ಸಿಕ್ಕಿಲ್ಲ, ನಾಳೆ ನಿನ್ನ ಮಗನೂ ನಿನಗೆ ಇದೇ ಪ್ರಶ್ನೆಯನ್ನು ಕೇಳಬಹುದು. ಬುದ್ಧಿವಂತನಾದ ನೀನು ಈಗಿನಿಂದಲೇ ಸಮರ್ಪಕ ಉತ್ತರ ಹುಡುಕಲು ಪ್ರಯತ್ನಿಸು ಎಂದು ಹೇಳಿದ್ದರಂತೆ.
'ಅಪ್ಪಾ ದೇವರು ಹೇಗಿರುವ?, ಅವನು ಎಲ್ಲಿರುವ?, ನೀವು ಭಗವಂತನನ್ನು ನೋಡಿದ್ದೀರಾ?' ಎಂಬಂಥಹ ಚಿಕ್ಕ ಮಕ್ಕಳ ಕುತೂಹಲದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಕೊಡುವ ಸಾಮರ್ಥ್ಯ/ ಸಂಯಮವನ್ನು ಅನೇಕ ಪಾಲಕರು ಹೊಂದಿರುವುದಿಲ್ಲ. ಹಾಗಾಗಿ, ಹಲವು ಬಾರಿ ಪಾಲಕರು ತಮ್ಮ ಮಕ್ಕಳ ಪ್ರಶ್ನೆ ಕೇಳುವ ಪ್ರವೃತ್ತಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಾರೆ ಎಂಬುದು ಒಂದು ವಿಪರ್ಯಾಸವೇ ಸರಿ. ಯುವಕ ನರೇಂದ್ರ ಇಂತಹ ಪ್ರಶ್ನೆಯನ್ನು ಶ್ರೀ ರಾಮಕೃಷ್ಣ ಪರಮಹಂಸರಿಗೆ ಕೇಳಿದ್ದನಂತೆ. ತನ್ನ ಗುರು ನೀಡಿದ ಸಮರ್ಪಕ ಉತ್ತರ ಯುವಕ ನರೇಂದ್ರನು ಮುಂದೆ ಸ್ವಾಮಿ ವಿವೇಕಾನಂದರಾಗಿ ಹೊರಹೊಮ್ಮಲು ಕಾರಣೀಭೂತರಾದದ್ದು ಇತಿಹಾಸ.
ನಾನು ಚಿಕ್ಕವನಿದ್ದಾಗ, ಒಮ್ಮೆ ನಮ್ಮೂರಿಗೆ ಬಂದ ನಮ್ಮ ಸಂಬಂಧಿಯೊಬ್ಬರು ನನ್ನ ಶಾಲೆ, ಶಿಕ್ಷಣ, ನನ್ನ ಗೆಳೆಯರು, ಇತ್ಯಾದಿ ವಿಷಯಗಳ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾ ನಿಧಾನವಾಗಿ 'ನಿನಗೆ ಅಪ್ಪ ಮತ್ತು ಅಮ್ಮ ಇಬ್ಬರಲ್ಲಿ ಯಾರು ಇಷ್ಟ?' ಎಂಬ ಕೊಳಕು ಪ್ರಶ್ನೆಯನ್ನು ಕೇಳಿ ನನ್ನನ್ನು ಇಕ್ಕಟ್ಟಿನ ಪರಿಸ್ಥಿತಿಗೆ ಒಡ್ಡಿದ್ದರು ಎಂಬುದನ್ನು ನಾನು ಇನ್ನೂ ಮರೆತಿಲ್ಲ. ಹೌದು, ನಾನೂ ನಮ್ಮ ಮನೆಗೆ ಬಂದ ಎಳೆಯ ಮಕ್ಕಳಿಗೆ ಅನೇಕ ಬಗೆಯ ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತೇನೆ. ಸಾಮಾನ್ಯವಾಗಿ ನಾನು ಕೇಳುವ ಪ್ರಶ್ನೆಗಳು ಆ ಮಕ್ಕಳ ವಿಚಾರ ಲಹರಿ ಮತ್ತು ಬೌದ್ಧಿಕ ಮಟ್ಟವನ್ನು ಅರಿಯುವ ಪ್ರಯತ್ನವಾಗಿರುತ್ತದೆ. ಒಂದು ಸಾರಿ, ನಮ್ಮ ಹತ್ತಿರದ ಸಂಬಂಧಿಗಳ ಐದಾರು ವರ್ಷದ ಚುರುಕು ಮಗನೊಬ್ಬನಿಗೆ 'ನೀನು ಯಾರು?' ಎಂಬ ಪ್ರಶ್ನೆ ಕೇಳಿದ್ದೆ. ಆ ಮಗು ಮುಗುಳುನಗೆ ಬೀರಿ, ತನ್ನ ಹೆಸರನ್ನು ಹೇಳಿದ. ನಾನು, 'ಅದು ನಿನ್ನ ಹೆಸರು, ಆದರೆ ನೀನು ಯಾರು?' ಎಂದು ಮತ್ತೆ ಕೇಳಿದಾಗ ತಾನು ಇಂಥವರ ಮಗ ಎಂದು ಉತ್ತರಿಸಿದ. 'ಅದು ನಿಜ, ಆದರೆ ನೀನು ಯಾರು?' ಎಂದು ಮತ್ತೆ ಪ್ರಶ್ನಿಸಿದಾಗ ಆ ಮುಗ್ಧ ಎಳೆಯ ಮಗುವಿಗೆ ಈ ಪ್ರಶ್ನೆ ತನ್ನ ವಯಸ್ಸಿಗೂ ಮೀರಿದ ವಿವೇಕದ್ದು ಎಂದು ಅರಿವಾಗಿ, 'ಅಂಕಲ್, ಇದೊಂದು ಪ್ರಶ್ನೆಯನ್ನು ಬಿಟ್ಟು ಬೇರೆ ಯಾವುದೇ ಪ್ರಶ್ನೆ ಕೇಳಿರಿ ನಾನು ಉತ್ತರಿಸುವೆ' ಎಂದು ಥಟ್ಟನೆ ಹೇಳಿದ್ದ.
ಮನುಷ್ಯನು ಸತ್ತ ನಂತರ ಏನಾಗುತ್ತಾನೆ? ಮೃತ್ಯುವನ್ನು ಜಯಿಸುವ ಮಾರ್ಗ ಯಾವುದು?ಎಂದು ಬಾಲಕ ನಚಿಕೇತನು ಯಮರಾಜನಿಗೆ ಪ್ರಶ್ನೆಗಳನ್ನು ಕೇಳಿದ ಉದಾಹರಣೆ ಕಠೋಪನಿಷತ್ತಿನಲ್ಲಿ ಉಲ್ಲೇಖಿಸಲಾಗಿದೆ. ಅದರಂತೆಯೇ, ಆರು ವಿದ್ಯಾರ್ಥಿಗಳು ಮಹರ್ಷಿ ಪಿಪ್ಪಲಾದರನ್ನು ಜೀವಿಗಳ ಮೂಲ, ಪ್ರಾಣ, ನಿದ್ರೆ, ಓಂಕಾರ ಮತ್ತು ಮೋಕ್ಷದ ಕುರಿತು ಆರು ಆಳವಾದ ಆಧ್ಯಾತ್ಮಿಕ ಪ್ರಶ್ನೆಗಳನ್ನು ಕೇಳುವ ಮತ್ತು ಪಿಪ್ಪಲಾದ ಮಹರ್ಷಿಗಳು ಶಿಷ್ಯರ ಆ ಪ್ರಶ್ನೆಗಳಿಗೆ ಉತ್ತರಿಸುವ ಸಂಭಾಷಣೆಯ ರೂಪದಲ್ಲಿರುವ ಅಥರ್ವವೇದಕ್ಕೆ ಸೇರಿದ ಪ್ರಶ್ನೋಪನಿಷತ್ತು ನಮ್ಮ ಸನಾತನ ಭಾರತದ ಶಿಕ್ಷಣ ಪ್ರಕ್ರಿಯೆಯ ರಚನೆ ಹಾಗು ಸಾಮಾಜಿಕ ಒಳನೋಟಗಳಿಗೆ ಮತ್ತು ಜ್ಞಾನಾನ್ವೇಷಣೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಅದು ಇರಲಿ ಬಿಡಿ, ಪ್ರತಿ ಹುಣ್ಣಿಮೆಯ ದಿನ ಅನೇಕರು ಆಚರಿಸುವ ಸತ್ಯನಾರಾಯಣ ಪೂಜೆಯ ಭಾಗವಾದ ಐದು ಅಧ್ಯಾಯಗಳ ಸತ್ಯನಾರಾಯಣ ಕಥೆಯು ಪ್ರಾರಂಭವಾಗುವುದೇ ನಾರದರು ವಿಷ್ಣುವನ್ನು ಕುರಿತು 'ಭುಲೋಕದ ವಿಷ್ಣುಭಕ್ತರು ಕಲಿಯುಗದಲ್ಲಿ ಬಹಳ ಕಷ್ಟದಲ್ಲಿದ್ದಾರೆ, ಅವರ ಈ ಕಷ್ಟ ಪರಿಹಾರಕ್ಕೆ ಸುಲಭ ಉಪಾಯ ಯಾವುದು?' ಎಂಬ ಪ್ರಶ್ನೆಯಿಂದ. ಅದೇ ರೀತಿ, ಕುರುಕ್ಷೇತ್ರ ಯುದ್ಧದಲ್ಲಿ ಶರಶೈಯ್ಯೆಯಲ್ಲಿರುವ ಭೀಷ್ಮ ಪಿತಾಮಹನನ್ನು ಧರ್ಮರಾಜನು ಕೇಳುವ 'ಯಾರನ್ನು ಜಪಿಸುವುದರಿಂದ ಮನುಷ್ಯನು ಈ ಜನ್ಮ-ಮೃತ್ಯುವೆಂಬ ಸಂಸಾರ ಬಂಧನದಿಂದ ಬಿಡುಗಡೆ ಹೊಂದುವನು?' ಎಂಬ ಪ್ರಶ್ನೆಗೆ ಉತ್ತರವಾಗಿ ನಮಗೆ ವಿಷ್ಣು ಸಹಸ್ರನಾಮ ಲಭಿಸಿದೆ.
ಇಂದಿನ ಇಪ್ಪತ್ತೊಂದನೆಯ ಶತಮಾನದಲ್ಲಿ ಮಲ್ಟಿ ಸ್ಪೆಷಾಲಿಟಿ ಕಾರ್ಪೋರೇಟ್ ಆಸ್ಪತ್ರೆಗಳ ICU ಗಳಲ್ಲಿನ ಪ್ರತಿಯೊಂದು ಹಾಸಿಗೆಯೂ ಒಂದು ತರಹದ ಶರಶಯ್ಯೆಯೇ ಅನ್ನಬಹುದು. ಹಾರ್ಟ-ಲಂಗ್ ಮಷಿನ್ನುಗಳು, ಡಯಾಲಿಸಿಸ್ ಮಷಿನ್ನುಗಳು, ವೆಂಟಿಲೇಟರ್, ನೆಬ್ಯುಲೈಜರ್, ಮುಂತಾದವುಗಳು ಅಲ್ಲಿರುವ ವಯೋವೃದ್ಧ ರೋಗಿಗಳನ್ನು ಸಾಯಲೂ ಬಿಡದ, ಬದುಕಲೂ ಬಿಡದ ಆಧುನಿಕ ಬಾಣಗಳೇ ಅಲ್ಲವೆ. ಅಂದು ಇಚ್ಛಾ ಮರಣದ ವರವನ್ನು ಹೊಂದಿದ್ದ ಭೀಷ್ಮ ಪಿತಾಮಹ ಪ್ರಾಣತ್ಯಾಗಕ್ಕೆಂದು ಉತ್ತರಾಯಣ ಪುಣ್ಯಕಾಲದ ಹಾದಿ ಕಾಯುತ್ತಿದ್ದರೆ, ಇಂದು ಕಾರ್ಪೋರೇಟ್ ಆಸ್ಪತ್ರೆಗಳು ಆರೋಗ್ಯ ವಿಮೆಯ ಪೂರ್ಣಮೊತ್ತ ವಸೂಲಿಗೆ ಇನ್ಸೂರೆನ್ಸ್ ಕಂಪನಿಗಳ ಸೂಚನೆಯ ಹಾದಿ ಕಾಯುತ್ತವೆ. ಅದರಂತೆ, ಇಂದಿನ ಅನೇಕ ಮಕ್ಕಳು/ ಮೊಮ್ಮಕ್ಕಳು ಅಜ್ಜನ ಲಾಕರ್ ನ ಸಿಕ್ರೆಟ ಕೀ/ಪಾಸ್ವರ್ಡ್, ಎಲ್ಲಾ ಚರಾಚರ ಆಸ್ತಿಗಳ ಸಂಪೂರ್ಣ ವಿವರದ ದಾಖಲೆಗಳ ಮತ್ತು ಅಜ್ಜ ಬರೆದಿಟ್ಟಿರಬಹುದಾದ ವಿಲ್ಲು-ಗಿಲ್ಲುಗಳ ವಿವರಗಳ ಬಗ್ಗೆ ಹತ್ತಾರು ಪ್ರಶ್ನೆಗಳನ್ನು ಕೇಳುತ್ತಾರೆ. ಇನ್ನು, ಮೂಗು ಬಾಯಿಗಳಲ್ಲಿ ನಾಲ್ಕಾರು ನಲ್ಲಿಗಳನ್ನು ಅಳವಡಿಸಿಕೊಂಡು ಯಮಯಾತನೆ ಪಡುತ್ತಾ ಇಹಲೋಕ ಯಾತ್ರೆಯ ಕಡೇ ಕ್ಷಣಗಳನ್ನು ಇದಿರುನೋಡುತ್ತಿರುವ ಆ ವೃದ್ಧರು ಏನು ಹೇಳಲು ಬಯಸುತ್ತಾರೋ ಆ ಭಗವಂತನೇ ಬಲ್ಲ, ಇರಲಿ.
ಮಹಾಭಾರತದ ಪ್ರಮುಖ ಭಾಗವಾದ ಭಗವದ್ಗೀತೆಯು ಪ್ರಾರಂಭವಾಗುವುದು ವ್ಯಾಸಮುನಿಗಳಿಂದ ದಿವ್ಯ ದೃಷ್ಟಿ ಪಡೆದ ಸಂಜಯನಿಗೆ ಕುರುಡು ರಾಜನಾದ ಧೃತರಾಷ್ಟ್ರನು 'ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ಸೇರಿದ ಯುದ್ಧದ ಇಚ್ಛೆಯುಳ್ಳ ನನ್ನವರು ಮತ್ತು ಪಾಂಡುವಿನ ಮಕ್ಕಳು ಏನು ಮಾಡಿದರು?' ಎಂಬ ಪ್ರಶ್ನೆಯಿಂದಲ್ಲವೇ? ಗೀತೆಯ ಮುಂದಿನ ಅಧ್ಯಾಯಗಳಲ್ಲಿ ಅರ್ಜುನ ತನ್ನ ಸಾರಥಿಯಾದ ಭಗವಾನ್ ಶ್ರೀ ಕೃಷ್ಣನಿಗೆ ಅನೇಕ ಪ್ರಶ್ನೆಗಳನ್ನು ಕೇಳಿ ಭಗವಂತನಿಂದ ಸಮರ್ಪಕ ಉತ್ತರಗಳನ್ನು ಪಡೆದದ್ದು, ಭಗವದ್ಗೀತೆಯ ವಿಶೇಷತೆ. ದ್ವಾಪರದಲ್ಲಿ ಭಗವದ್ಗೀತೆಯ ಬೋಧನೆಯ ಸಂದರ್ಭದಲ್ಲಿ ನಮ್ಮಂಥ ಪಾಮರರನ್ನು ಪ್ರತಿನಿಧಿಸುತ್ತ ಇಂದ್ರನ ಮಗನಾದ ಅರ್ಜುನನು, ಭಗವಂತನನ್ನು ಕುರಿತು ಅನೇಕ ಪ್ರಶ್ನೆಗಳನ್ನು ಕೇಳಿ, ನಮಗೆಲ್ಲ ಮಹದುಪಕಾರ ಮಾಡಿರುವನು ಎಂದು ಬಲ್ಲವರು ವ್ಯಾಖ್ಯಾನ ಮಾಡಿದ್ದಾರೆ.
ನಾನು ಬೇರೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆರೆಂಟು ವರ್ಷಗಳ ಪ್ರಾಧ್ಯಾಪಕ ವೃತ್ತಿಯ ಅನುಭವದ ನಂತರ ಬೆಳಗಾವಿಯ ಕಾಲೇಜಿನಲ್ಲಿ ಸೇವೆ ಆರಂಭಿಸಿದ ದಿನಗಳಲ್ಲಿ ಒಬ್ಬ ಹಿರಿಯ ಪ್ರಾಧ್ಯಾಪಕರೊಂದಿಗೆ ಕಂಪ್ಯೂಟರ್ ಪ್ರೋಗ್ರಾಮಿಂಗ ವಿಷಯದ ಒಂದು ಲ್ಯಾಬ್ ನ್ನು ವಿದ್ಯಾರ್ಥಿಗಳಿಗೆ ಕಲಿಸುವ ಸಂದರ್ಭದಲ್ಲಿ, ವಿದ್ಯಾರ್ಥಿಗಳ ತಲೆಯಲ್ಲಿ ಬರಬಹುದಾದ ಒಂದು ಪ್ರಶ್ನೆಯನ್ನು ಆ ವಿದ್ಯಾರ್ಥಿಗಳನ್ನು ಪ್ರತಿನಿಧಿಸುತ್ತ ಆ ಹಿರಿಯ ಸಹೋದ್ಯೋಗಿಗೆ ನಾನು ಕೇಳಿದೆ. ಅವರು ಸಮರ್ಪಕ ಉತ್ತರವನ್ನೆನೋ ನೀಡಿದರು. ಆದರೆ, ಮರುದಿನ ನನ್ನ ವಿಭಾಗದ ಮುಖ್ಯಸ್ಥರು ನನ್ನನ್ನು ಆ ಲ್ಯಾಬಿನಿಂದ ಎತ್ತಂಗಡಿ ಮಾಡಿದರು. ಎಷ್ಟಾದರೂ ಇದು ಕಲಿಯುಗವಲ್ಲವೇ.!!!
ನನ್ನ ಸಹೋದ್ಯೋಗಿಯೊಬ್ಬರು ತಮ್ಮ ಒಂದು ತಾಸು ಅವಧಿಯ ಕ್ಲಾಸಿನಲ್ಲಿ ಕಡೆಯ ಹತ್ತು ನಿಮಿಷಗಳನ್ನು ತಾವು ಕಲಿಸಿದ ಪಾಠಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಕೇಳಲು ಮೀಸಲಿಡುತ್ತಿದ್ದರು ಮತ್ತು ಒಳ್ಳೆಯ ಪ್ರಶ್ನೆ ಕೇಳಿದ ವಿದ್ಯಾರ್ಥಿಗಳಿಗೆ ಕ್ಲಾಸಿನಲ್ಲಿ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದರು. ಈ ರೀತಿಯ ಪಾಠಕ್ರಮ ತಾನು ವಿಷಯವನ್ನು ಎಷ್ಟು ಸಮರ್ಪಕವಾಗಿ ಕಲಿಸಿದೆ, ವಿದ್ಯಾರ್ಥಿಗಳು ಎಷ್ಟು ಏಕಾಗ್ರತೆಯಿಂದ ಪಾಠವನ್ನು ಕೇಳಿದರು ಮತ್ತು ವಿದ್ಯಾರ್ಥಿಗಳು ವಿಷಯವನ್ನು ಎಷ್ಟರಮಟ್ಟಿಗೆ ಅರಿತಿರುವರು ಎಂದು ಶಿಕ್ಷಕರು ತಿಳಿಯಲು ಸಹಕಾರಿ.
ಮುಂದೆ ಹಲವು ವರ್ಷಗಳ ನಂತರ, ಕರೋನಾ ಕಾಲದಲ್ಲಿ ನಾನು ಕಾಲೇಜಿನ ಪ್ರಾಂಶುಪಾಲರ ಜವಾಬ್ದಾರಿಯನ್ನು ಹೊತ್ತಾಗ ಕಾಲೇಜಿನ ಎಲ್ಲ ಕ್ಲಾಸುಗಳೂ ಆನ್ ಲೈನ್ ನಲ್ಲಿ ನಡೆಸುವ ಪ್ರಸಂಗ ಬಂದೊದಗಿತ್ತು. ಸಹಜವಾಗಿ ಮನೆಯಿಂದ ಲಾಗಿನ್ ಆಗುತ್ತಿದ್ದ ವಿದ್ಯಾರ್ಥಿಗಳ ಗಮನವು ಪಾಠದ ಕಡೆಗೆ ಕಡಿಮೆ ಇರುತ್ತಿತ್ತು. ಪ್ರಾಧ್ಯಾಪಕರು ತಮ್ಮ ಕ್ಲಾಸಿನ ಅಂತ್ಯದಲ್ಲಿ ಅಂದು ತಾವು ಮಾಡಿದ ಪಾಠದ ವಿಷಯಕ್ಕೆ ಸಂಬಂಧಿಸಿದಂತೆ ಕನಿಷ್ಠ ಪಕ್ಷ ಐದು MCQ (Multiple Choice Question) ಪ್ರಶ್ನೆಗಳನ್ನು ಕೇಳಿ ವಿದ್ಯಾರ್ಥಿಗಳು ಆನ್ ಲೈನ್ ನಲ್ಲಿ ತಮ್ಮ ಉತ್ತರಗಳನ್ನು ದಾಖಲು ಮಾಡಲಿ ಎಂಬ ಪ್ರಸ್ತಾಪವನ್ನು ನಾನು ಮಾಡಿದಾಗ, ಬಹಳಷ್ಟು ಸಹೋದ್ಯೋಗಿಗಳು ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು. ಇದಕ್ಕೆ ಮುಖ್ಯ ಕಾರಣವೆಂದರೆ ತಾವು ಪ್ರತಿ ಕ್ಲಾಸಿನ್ನೂ ಕ್ರಮಬದ್ಧವಾಗಿ ಪಾಠ ಯೋಜನೆ (ಲೆಸೆನ್ ಪ್ಲಾನ) ಮಾಡಿ ಅದಕ್ಕೆ ಅನುಗುಣವಾಗಿ ಪಾಠ ಮಾಡಬೇಕು ಮತ್ತು ಆ ವಿಷಯಕ್ಕೆ ಸಂಬಂಧಿಸಿದಂತೆ ಐದು MCQ ಪ್ರಶ್ನೆಗಳ ತಯಾರಿ ಮಾಡಿಕೊಳ್ಳಬೇಕೆಂಬುದಾಗಿತ್ತು. ಸಾಮಾನ್ಯವಾಗಿ ಪ್ರಶ್ನೆಗಳನ್ನು ಕೇಳುವುದು ಸುಲಭ ಮತ್ತು ಉತ್ತರ ಬರೆಯುವುದು ಕಷ್ಟ ಎಂದು ಅನಿಸುವುದು ಸಹಜೀಕ. ಆದರೆ ಒಂದು ವಿಷಯಕ್ಕೆ ಸಂಬಂಧಿಸಿದಂತೆ ತರ್ಕಬದ್ಧ ಮತ್ತು ಜಾಣತನದ MCQ ಪ್ರಶ್ನೆಗಳನ್ನು ಸೃಷ್ಟಿಸುವುದು ಕಷ್ಟದ ಕೆಲಸ ಹೊರತು ಉತ್ತರಿಸುವುದಲ್ಲ ಎಂಬುದು ಶಿಕ್ಷಕರ ಸಾಮಾನ್ಯ ಅನುಭವ.
ಇಂಜನಿಯರಿಂಗ ಕೋರ್ಸಗಳಲ್ಲಿನ ಲ್ಯಾಬ/practical ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಕೇವಲ ಪ್ರಯೋಗಗಳನ್ನು ಮಾಡಿ ಸಂಬಂಧಿತ ಲೆಕ್ಕಾಚಾರಗಳನ್ನು ಮತ್ತು ಫಲಿತಾಂಶವನ್ನು ಉತ್ತರ ಪತ್ರಿಕೆಗಳಲ್ಲಿ ನಮೂದಿಸಿದರೆ ಸಾಲದು, ಜೊತೆಗೆ ಪ್ರಯೋಗಶಾಲಾ ವಿಷಯಕ್ಕೆ ಸಂಬಂಧಿಸಿದ viva ಪರೀಕ್ಷೆಯಲ್ಲಿ ಪರೀಕ್ಷಕ ಪ್ರಾಧ್ಯಾಪಕರು ಕೇಳುವ ಮೌಖಿಕ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡುವ ಅವಶ್ಯಕತೆ ಇರುತ್ತದೆ. ಮೂರ್ನಾಲ್ಕು ದಶಕಗಳ ಹಿಂದೆ, ನಾನು ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾಗ ನಮ್ಮ ಪ್ರಯೋಗ ಶಾಲೆಯ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಕ್ರಮಬದ್ಧವಾಗಿ ಪ್ರಯೋಗಗಳನ್ನು ಮಾಡಿ ಸಂಬಂಧಿತ ಲೆಕ್ಕಾಚಾರಗಳನ್ನು ಮತ್ತು ಫಲಿತಾಂಶವನ್ನು ಉತ್ತರ ಪತ್ರಿಕೆಗಳಲ್ಲಿ ಸರಿಯಾಗಿ ನಮೂದಿಸಿದ್ದರೂ ಪ್ರಾಧ್ಯಾಪಕರು ವೈವಾದಲ್ಲಿ ಕೇಳುವ ಮೌಖಿಕ ಪ್ರಶ್ನೆಗಳಿಗೆ ಸಮರ್ಪಕ ಉತ್ತರಗಳನ್ನು ನೀಡದಿದ್ದಲ್ಲಿ ನಮ್ಮ ಪ್ರಾಧ್ಯಾಪಕರು ನಿರ್ದಾಕ್ಷಿಣ್ಯವಾಗಿ practical ಪರೀಕ್ಷೆಯಲ್ಲಿ ಫೇಲ್ ಮಾಡಿ ಆ ವಿದ್ಯಾರ್ಥಿಗೆ 'ಮುಂದಿನ ಸಲ ಚೆನ್ನಾಗಿ ಸಿದ್ಧತೆ ಮಾಡಿಕೊಂಡು ಪರೀಕ್ಷೆಗೆ ಬಾ' ಎಂದು ಹೇಳಿ ಕಳಿಸುತ್ತಿದ್ದರು. ಅನೇಕ ಸಲ ಹಿಂದಿನ ಬ್ಯಾಚನಲ್ಲಿ ಪ್ರಾಧ್ಯಾಪಕರು ಕೇಳಿದ ಕೆಲವು ಪ್ರಶ್ನೆಗಳು ಮುಂದಿನ ಬ್ಯಾಚನಲ್ಲಿಯೂ ಮರುಕಳಿಸುತ್ತಿದ್ದವು. ಅದಕ್ಕೆಂದು ವಿದ್ಯಾರ್ಥಿಗಳು ಮೊದಲಿನ ಬ್ಯಾಚನ ವಿದ್ಯಾರ್ಥಿಗಳಿಗೆ ಪ್ರಾಧ್ಯಾಪಕರು ಯಾವ ತರಹದ ವೈವಾ ಪ್ರಶ್ನೆಗಳನ್ನು ಕೇಳುತ್ತಿರುವರು ಎಂದು ತಿಳಿದು ಅದಕ್ಕನುಗುಣವಾಗಿ ವಿಷಯಕ್ಕೆ ಸಂಬಂಧಿಸಿದ ತಮ್ಮ ತಯಾರಿ ಮಾಡಿಕೊಂಡು ಬರುತ್ತಿದ್ದರು. ಆದರೆ ಕೆಲವು ಪ್ರಾಧ್ಯಾಪಕರು ಕೇಳುವ ಪ್ರಶ್ನೆಗಳ ತಳಬುಡ ವಿದ್ಯಾರ್ಥಿಗಳಿಗೆ ಅರ್ಥವಾಗುತ್ತಿರಲಿಲ್ಲ. ಉದಾಹರಣೆಗೆ "ಈ ಲ್ಯಾಬಿನಲ್ಲಿರುವ ನಾಲ್ಕು ಲೇತ್ ಮೆಷಿನ್ ಗಳಲ್ಲಿ ಮಿಲ್ಲಿಂಗ ಮೆಷಿನ್ ಯಾವುದು?" ಅಥವಾ "ಈ ಲ್ಯಾಬಿನ ಎದಿರು ಇರುವ ನಾಲ್ಕು ಬೇವಿನ ಮರಗಳಲ್ಲಿ ಮಾವಿನ ಮರ ಯಾವುದು?" ಎಂದು ಕೇಳಿದಾಗ ವಿದ್ಯಾರ್ಥಿಯೊಬ್ಬ ಆ ನಾಲ್ಕರಲ್ಲಿ ಯೋವುದೋ ಒಂದರ ಕಡೆಗೆ ಬೊಟ್ಟು ಮಾಡಿ ತೋರಿಸಿದ್ದ. ಇನ್ನೋಂದು ಉದಾಹರಣಾರ್ಥ ಪ್ರಶ್ನೆ " ಮಾನವನ ದೇಹದಲ್ಲಿರುವ ಎರಡು ಯಕೃತ್ತುಗಳಲ್ಲಿ ಹೃದಯ ಯಾವುದು?" ಇತ್ಯಾದಿ. ಕೆಲವು ಪ್ರಾಧ್ಯಾಪಕರು ಪ್ರತೀ ಬ್ಯಾಚನಲ್ಲಿ ಪ್ರತೀ ವಿದ್ಯಾರ್ಥಿಗಳಿಗೆ ಕೇಳುವ ಪ್ರಶ್ನೆಗಳು ತೀರಾ ವಿಭಿನ್ನವಾಗಿರುತ್ತಿದ್ದವು. ಹಾಗಾಗಿ ನಮ್ಮ ಕೆಲವು ಮಿತ್ರರು practical ಪರೀಕ್ಷೆಯನ್ನು ತೆಗೆದುಕೊಳ್ಳಲು ಅಂದು ಯಾವ ಪ್ರಾಧ್ಯಾಪಕರು ಬಂದಿರುವರೆಂದು ತಿಳಿದು ಪರೀಕ್ಷೆಗೆ ಹಾಜರಾಗುವುದೋ ಅಥವಾ ಬಿಡುವುದೋ ಎಂದು ನಿರ್ಧರಿಸುತ್ತಿದ್ದರು. ಆದರೆ, ಸಮಯ ಕಳೆದಂತೆ ಕೇವಲ ವೈವಾ ಪ್ರಶ್ನೆಗಳ ಉತ್ತರದ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಲ್ಯಾಬ/practical ಪರೀಕ್ಷೆಯಲ್ಲಿ ಪಾಸ್ ಅಥವಾ ಫೇಲ್ ಮಾಡುವ ಆ ಸ್ವಾತಂತ್ರ್ಯ ಪ್ರಾಧ್ಯಾಪಕರಿಂದ ಕ್ಷೀಣಿಸಿತು. ಮುಂದೆ ಲ್ಯಾಬ/practical ಪರೀಕ್ಷೆಯಲ್ಲಿ ಪ್ರಾಧ್ಯಾಪಕರು ಬಗೆಬಗೆಯ ವೈವಾ ಪ್ರಶ್ನೆಗಳನ್ನು ಕೇಳುವ ಮತ್ತು ವಿದ್ಯಾರ್ಥಿಗಳು ಸಮರ್ಪಕ ಉತ್ತರ ನೀಡುವ ಕೌತುಕ ಗಣನೀಯವಾಗಿ ಕಡಿಮೆಯಾಯಿತು. ಇತ್ತೀಚಿಗಂತೂ ಲ್ಯಾಬ/practical ಪರೀಕ್ಷೆಯಲ್ಲಿ ವೈವಾ ಪ್ರಶ್ನೆಗಳನ್ನು ಕೇಳುವುದು ಕೇವಲ ಒಂದು ಸಂಪ್ರದಾಯ/ವಾಡಿಕೆಯಾಗಿ ಮಾರ್ಪಟ್ಟಿದೆ. ನಮ್ಮ ಪಕ್ಕದ ಕಾಲೇಜಿನ ಪ್ರಾಧ್ಯಾಪಕರೊಬ್ಬರು practical ಪರೀಕ್ಷೆಯಲ್ಲಿ ವೈವಾ ಪ್ರಶ್ನೆಗಳನ್ನು ಕೇಳಲು ಇಬ್ಬರು ವಿದ್ಯಾರ್ಥಿಗಳಿಗೆ ಒಟ್ಟಿಗೆ ಆವ್ಹಾನಿಸಿ ಒಬ್ಬ ವಿದ್ಯಾರ್ಥಿ ಇನ್ನೊಬ್ಬ ವಿದ್ಯಾರ್ಥಿಗೆ ಪ್ರಯೋಗಾಲಯಕ್ಕೆ ಸಂಬಂಧಿಸಿದ ವಿಷಯದ ಐದು ಪ್ರಶ್ನೆಗಳನ್ನು ಕೇಳಲು ಹೇಳುತ್ತಿದ್ದರು. ಕೆಲವು ವಿದ್ಯಾರ್ಥಿಗಳು, ನಮ್ಮ ಮಾನ್ಯ ರಾಜ್ಯಸಭಾ ಸದಸ್ಯರಂತೆ ಪ್ರಶ್ನೆಗಳನ್ನು ಕೇಳಲು ತಿಣುಕಾಡಿದ ಉದಾಹರಣೆಗಳೂ ಉಂಟು. ಆದರೆ, ಅನೇಕಬಾರಿ ವಿದ್ಯಾರ್ಥಿಗಳು ಕಾಟಾಚಾರಕ್ಕೆ ತನ್ನ ಗೆಳೆಯನಿಗೆ ಸುಲಭವಾಗಿ ಉತ್ತರಿಸಲು ಬರುವ ಪ್ರಶ್ನೆಗಳನ್ನು ಕೇಳಿದ ಪ್ರಸಂಗವನ್ನು ನೋಡಿರುವೆ. ಒಂದು ಸಾರಿ ಆ ಪ್ರಾಧ್ಯಾಪಕರು ಮೌಖಿಕ ಪರೀಕ್ಷೆಯಲ್ಲಿ 'ಸುಲಭದ ಎರಡು ಪ್ರಶ್ನೆಗಳನ್ನು ಕೇಳಲೋ ಅಥವಾ ಕಠಿಣವಾದ ಒಂದನ್ನು ಕೇಳಲೋ?' ಎಂಬ ಆಯ್ಕೆಯನ್ನು ಒಬ್ಬ ವಿದ್ಯಾರ್ಥಿಗೆ ನೀಡಿದಾಗ ಆ ವಿದ್ಯಾರ್ಥಿ 'ಸರ್, ಕಠಿಣವಾದ ಒಂದನ್ನು ಕೇಳಿರಿ' ಅಂದ. ಪ್ರಾಧ್ಯಾಪಕರು ಕಾಗದದ ಮೇಲೆ ಒಂದು ಯದ್ವಾತದ್ವಾ ಚಿತ್ರ ತೆಗೆದು 'ಈ ಆಕೃತಿಯ ಗುರುತ್ವಾಕರ್ಷಣ ಕೇಂದ್ರ ಎಲ್ಲಿದೆ?'ಎಂದು ಪ್ರಶ್ನಿಸಿದರು. ವಿದ್ಯಾರ್ಥಿ ಒಂದೆರಡು ನಿಮಿಷ ಲೆಕ್ಕಮಾಡಿದಂತೆ ನಟನೆಮಾಡಿ, ಆ ಚಿತ್ರದ ಯಾವುದೋ ಒಂದು ಭಾಗದ ಮೇಲೆ ಬೊಟ್ಟಿಟ್ಟು 'ಸರ್ ಈ ಆಕೃತಿಯ ಗುರುತ್ವಾಕರ್ಷಣ ಕೇಂದ್ರ ಇಲ್ಲಿದೆ' ಎಂದು ಹೇಳಿದ. ಆಗ ಪ್ರಾಧ್ಯಾಪಕರು 'ಅದು ಹೇಗೇ ಲೆಕ್ಕ ಮಾಡಿದೆ?' ಎಂದು ಪ್ರಶ್ನೆ ಮಾಡಿದರು. ಆಗ ಆ ಜಾಣ ವಿದ್ಯಾರ್ಥಿ 'ಸಾರ್, ತಾವು ಎರಡನೇ ಪ್ರಶ್ನೆಯನ್ನು ಕೇಳುತ್ತಿರುವಿರಿ' ಎಂದು ನಯವಾಗಿ ಹೇಳಿ ಆ ಪ್ರಾಧ್ಯಾಪಕರಿಗೆ ಚಳ್ಳೆಹಣ್ಣು ತಿನ್ನಿಸಿ ತನ್ನ ವೈವಾ ಪರೀಕ್ಷೆಯನ್ನು ಪರಿಸಮಾಪ್ತಿ ಮಾಡಿದ್ದ. ಆ ವಿದ್ಯಾರ್ಥಿಯ ಜಾಣ್ಮೆಯನ್ನು ಮೆಚ್ಚಿದ ಪ್ರಾಧ್ಯಾಪಕರು ಆತನಿಗೆ ಬೋನಸ್ ಅಂಕಗಳನ್ನು ನೀಡಿದ್ದರು ಎಂಬುದು ಬೇರೆ ಮಾತು.
ಮೂರು ದಶಕಗಳ ಹಿಂದೆ ನನ್ನ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಭಾರತೀಯ ವಾಯುಪಡೆಯಲ್ಲಿ ಆಫೀಸರ್ ಹುದ್ದೆಗೆ ಆಯ್ಕೆಗೊಂಡಿದ್ದ. ಟ್ರೇನಿಂಗ ಮುಗಿಸಿಕೊಂಡು ಊರಿಗೆ ಬಂದಾಗ 'ನೀನು ಪಡೆದ ಮಿಲಿಟರಿ ಟ್ರೇನಿಂಗು ನಮ್ಮ ಇಂಜಿನಿಯರಿಂಗ್ ಟ್ರೇನಿಂಗಿಗಿಂತ ಹೇಗೆ ವಿಭಿನ್ನವಾಗಿತ್ತು?' ಎಂದು ನಾನು ಕುತೂಹಲದಿಂದ ಪ್ರಶ್ನಿಸಿದೆ. ಅವನು 'ಸರ್ ನೀವು ಕ್ಲಾಸಿನಲ್ಲಿ ವಿಷಯವನ್ನು ಕಲಿಸಿದ ನಂತರ ಯಾರಿಗಾದರೂ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿದ್ದರೆ ಧೈರ್ಯವಾಗಿ ಕೇಳಿರಿ' ಎಂದು ಹೇಳುತ್ತಿದ್ದಿರಿ ಮತ್ತು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡುತ್ತಿದ್ದಿರಿ. ಮಿಲಿಟರಿ ಟ್ರೇನಿಂಗನಲ್ಲಿ ಸಾಮಾನ್ಯವಾಗಿ ಯಾವುದೇ ಸಂಶಯ ಅಥವಾ ಪ್ರಶ್ನೆಗಳು ಉದ್ಭವಿಸದಂತೆ ಆದೇಶ/ಸೂಚನೆ ಅಥವಾ ವಿವರಣೆ ನೀಡುತ್ತಾರೆ. ಆದರೂ ಅಂತ್ಯದಲ್ಲಿ 'ಕೊಯಿ ಶಕ್ ಯಾ ಸವಾಲ್?' ಅಂದರೆ 'ಯಾವುದಾದರೂ ಸಂಶಯ ಅಥವಾ ಪ್ರಶ್ನೆಗಳಿವೆಯೇ?' ಎಂದು ಕೇಳುವ ಸಂಪ್ರದಾಯ ಇರುತ್ತದೆ. ಆದರೆ, ಪ್ರಶಿಕ್ಷಣಾರ್ಥಿಗಳು ಮಾತ್ರ ಯಾವುದೇ ಪ್ರಶ್ನೆಗಳನ್ನು ಕೇಳುವ ಧೈರ್ಯ ಮಾಡುವುದಿಲ್ಲ ಎಂದು ಹೇಳಿದ್ದ. ಆ ಪ್ರಸಂಗವನ್ನು ಕೇಳಿದಾಗ, ಅರವತ್ತರ ದಶಕದಲ್ಲಿ ಹಾವೇರಿಯ ಶಾಲೆಯಲ್ಲಿ ನನ್ನ ದೊಡ್ಡಣ್ಣ ತನ್ನ ಕ್ಲಾಸಿನಲ್ಲಿ ಮಾಸ್ತರಿಗೆ ಪ್ರಶ್ನೆಯನ್ನು ಕೇಳಿದ ಘಟನೆಯೊಂದು ನೆನಪಾಯಿತು. ನನ್ನ ದೊಡ್ಡಣ್ಣ ಶಾಲೆಯಲ್ಲಿದ್ದಾಗ ವಿಜ್ಞಾನದ ವಿಷಯದಲ್ಲಿ ಬಹಳ ಕುತುಹಲ ಹೊಂದಿದ್ದ. ಥಾಮಸ್ ಆಲ್ವಾ ಎಡಿಸನ್ ಅವನ ನೆಚ್ಚಿನ ವಿಜ್ಞಾನಿ. ಒಂದು ದಿನ ಮಾಸ್ತರರು ವಿಜ್ಞಾನದ ಯಾವುದೋ ಒಂದು ಪಾಠ ಮಾಡಿದ ನಂತರ ಕ್ಲಾಸಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ 'ಯಾರಿಗಾದರೂ ನಾನು ಮಾಡಿದ ಪಾಠದಲ್ಲಿ ಏನಾದರೂ ತಿಳಿದಿರದಿದ್ದರೆ ಕೈ ಎತ್ತಿರಿ' ಎಂದರಂತೆ. ಮುಂದಿನ ಬೆಂಚಿನಲ್ಲಿ ಕೂತಿದ್ದ ಈತ ಕೈ ಎತ್ತಿದ. ಮಾಸ್ತರರು ಅವನನ್ನು ತಮ್ಮ ಕುರ್ಚಿಯ ಹತ್ತಿರ ಬರಹೇಳಿ 'ನಿನಗೆ ಏನು ತಿಳಿದಿಲ್ಲ' ಎಂದು ಕೇಳಿದರಂತೆ. ಮುಗ್ಧ ಬಾಲಕ ಅವರ ಹತ್ತಿರ ಹೋಗಿ ತನಗೆ ತಿಳಿಯದ ವಿಷಯದ ಬಗ್ಗೆ ಹೇಳಿದಾಗ ಆ ಮಾಸ್ತರರು ಅವನ ಎರಡೂ ಕಿವಿಗಳನ್ನು ಹಿಡಿದು ಹುಡುಗನನ್ನು ಮೇಲೆತ್ತಿ 'ಈಗ ತಿಳಿಯಿತೋ' ಎಂದು ಕೇಳಿದರಂತೆ. ಇದನ್ನು ಕಂಡು ಮುಂದೆ ಯಾವ ವಿದ್ಯಾರ್ಥಿಯೂ ಆ ಮಾಸ್ತರರ ಕ್ಲಾಸಿನಲ್ಲಿ ಪ್ರಶ್ನೆಯನ್ನು ಕೇಳುವ ಧೈರ್ಯಮಾಡಲಿಲ್ಲವಂತೆ. ಮಾಸ್ತರರ ಈ ತರಹದ ಆಘಾತಕಾರಿ ನಡವಳಿಕೆಯ ಉತ್ತರ ನಿರೀಕ್ಷಿಸಿರದ ನನ್ನಣ್ಣನಿಗೆ ಆ ಮಾಸ್ತರ್ರು ಮತ್ತು ವಿಜ್ಞಾನ ವಿಷಯದ ಬಗ್ಗೆ ಮನಸ್ಸಿನಲ್ಲಿ ಎಲ್ಲಿಲ್ಲದ ಗಾಬರಿ ಉಂಟಾಗಿ ಮುಂದೆ ಪಿ.ಯು.ಸಿ. ಕಾಲೇಜು ಸೇರುವಾಗ ತಾನು ಸುತಾರಾಂ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಳ್ಳಲಿಲ್ಲ ಎಂದು ಇಂದಿಗೂ ನೆನೆಸುವನು.
ಸಾಮಾನ್ಯವಾಗಿ ವಿಷಯದ ಜ್ಞಾನಿಗಳಿಗೆ, ಹಿರಿಯ ಅನುಭವಿಗಳಿಗೆ ಪ್ರಶ್ನೆಗಳನ್ನು ಕೇಳುವ ಮೂಲಕ ನಾವು ಹೊಸ ವಿಷಯಗಳನ್ನು ಕಲಿಯಬಹುದು ಅಥವಾ ನಮ್ಮಲ್ಲಿರುವ ವಿಷಯದ ಸಂದೇಹಗಳನ್ನು ನಿವಾರಿಸಿಕೊಳ್ಳಬಹುದು. ಹಿಂದೆ ಪ್ರಜಾಮತ ಎಂಬ ಪತ್ರಿಕೆಯಲ್ಲಿ 'ಗುಪ್ತ ಸಮಾಲೋಚನೆ' ಎಂಬ ವಿಭಾಗವಿದ್ದು ಅಲ್ಲಿ ಅನೇಕರು ಪ್ರಶ್ನೆಗಳನ್ನು ಕೇಳುವ ಮೂಲಕ ತಮ್ಮ ಖಾಸಗಿ ಸಮಸ್ಯೆಗಳಿಗೆ ಪರಿಹಾರಗಳನ್ನು ಪಡೆಯುತ್ತಿದ್ದರು.ಆ ಪ್ರಶ್ನೋತ್ತರಗಳು ಇತರ ಓದುಗರ ಕುತೂಹಲವನ್ನೂ ತೃಪ್ತಿಪಡಿಸುತ್ತಿದ್ದವು ಮತ್ತು ಪತ್ರಿಕೆಯ ಹೆಚ್ಚಿನ ಮಾರಾಟಕ್ಕೂ ಅದು ಬಹಳ ಸಹಕಾರಿಯಾಗಿತ್ತು ಎಂಬ ಅಭಿಪ್ರಾಯ ಅನೇಕರಿಗಿತ್ತು. ಅದರಂತೆಯೇ ಆ ಕಾಲದಲ್ಲಿ ಬಸ್ಸು ಅಥವಾ ರೈಲು ಪ್ರಯಾಣ ಕಾಲದಲ್ಲಿ ಪಕ್ಕದಲ್ಲಿ ಕುಳಿತ ಸಹ ಪ್ರಯಾಣಿಕರಿಗೆ, 'ಯಾವ ಊರಿಗೆ ಹೊರಟಿರುವಿರಿ?' ಎಂಬ ಸಾಮಾನ್ಯ ಪ್ರಶ್ನೆಯನ್ನು ಕೇಳುವ ಮೂಲಕ ಅವರೊಂದಿಗೆ ಸಂವಹನ ಪ್ರಾರಂಭಿಸಿ, ಸಹಪ್ರಯಾಣಿಕನ ಕುಲಗೋತ್ರಗಳನ್ನು ಜಾಲಾಡುವುದರ ಮುಖಾಂತರ ದೂರ ಪ್ರಯಾಣದ ಆಯಾಸವನ್ನು ಪರಿಹರಿಸಿಕೊಳ್ಳುವುದು ಬಹಳ ಸಾಮಾನ್ಯವಾಗಿತ್ತು. ಈಗೆಲ್ಲಾ ಬಿಡಿ, ಎಲ್ಲ ಪ್ರಯಾಣಿಕರ ಕೈಯಲ್ಲಿ ಮೊಬೈಲು, ಅಗ್ಗದ ಡೇಟಾ ಹಾಗು ಕಿವಿಯಲ್ಲಿ ಇಯರ್ ಬಡ್ ಗಳು ಬಂದಿವೆ.
ನಮ್ಮ ಹೋಮಿಯೋಪತಿ ಚಿಕಿತ್ಸಾ ಪದ್ಧತಿಯಲ್ಲಿ ವೈದ್ಯರು ರೋಗಿಗೆ ಆತನ ದೇಹ, ಮನಸ್ಸು, ಸ್ವಭಾವ, ನಿದ್ದೆ, ಕನಸು, ನೀರಡಿಕೆ ಮುಂತಾದ ವಿಷಯವಾಗಿ ಅನೇಕ ಪ್ರಶ್ನೆಗಳನ್ನು ಕೇಳುವ ಮೂಲಕ ರೋಗ ಲಕ್ಷಣಗಳನ್ನು ಮತ್ತು ರೋಗದ ಮೂಲ ಕಾರಣಗಳನ್ನು ಪತ್ತೆಹಚ್ಚಿ ಸೂಕ್ತ ಔಷಧಿಗಳನ್ನು ನೀಡುವರು. ಹಿಂದೆ ಫ್ಯಾಮಿಲಿ ಡಾಕ್ಟರಗಳು ತಮ್ಮ ದವಾಖಾನೆಗೆ ಬಂದ ರೋಗಿಗಳ ತ್ರಾಸುಗಳನ್ನು ಆಲಿಸಿ, ವೈದ್ಯಕೀಯ ತಪಾಸಣಾ ಮೇಜಿನ ಮೇಲೆ ಮಲಗಿಸಿ ದೈಹಿಕ ಪರೀಕ್ಷೆ ಮಾಡಿ, ಒಂದೆರಡು ಪ್ರಶ್ನೆಗಳನ್ನು ಕೇಳಿ ಇಂಜೆಕ್ಷನ್-ಔಷಧಿ ಕೊಟ್ಟು ಸಾಂತ್ವನ ಹೇಳಿ ಕಳಿಸುತ್ತಿದ್ದರು. ಇದರ ವ್ಯತಿರಿಕ್ತವಾಗಿ, ಇಂದಿನ ಆಧುನಿಕ ಔಷಧ ಪದ್ಧತಿಯಲ್ಲಿ ತರಬೇತಿ ಪಡೆದ ಸುಪರ್ ಸ್ಪೇಷ್ಯಾಲಿಟಿ ವೈದ್ಯರುಗಳಲ್ಲಿ ಅನೇಕರು, ರೋಗಿಗೆ ಪ್ರಶ್ನೆಗಳನ್ನು ಕೇಳುವುದಂತೂ ದೂರ ಉಳಿಯಿತು, ರೋಗಿಗಳನ್ನು ನೋಡಲೂ ಇಚ್ಛೆಪಡದೇ ಕೇವಲ ವಿವಿಧ ಸ್ಕ್ಯಾನಿಂಗ್, ಟೆಸ್ಟ್ ರಿಪೋರ್ಟಗಳನ್ನು ಅವಲಂಬಿಸಿ ಔಷಧಿ ಉಪಚಾರಗಳನ್ನು ಶಿಫಾರಸು ಮಾಡುವರಂತೆ. ಆದರೆ, ಇಂದಿನ ಬುದ್ಧಿವಂತ/ಜಾಗ್ರತ ರೋಗಿಗಳು ಅಥವಾ ಅವರ ಸಂಬಂಧಿಕರು ಗೂಗಲ್, ಚಾಟ್ ಜಿಪಿಟಿಯಲ್ಲಿ ತಮ್ಮೆಲ್ಲ ಟೆಸ್ಟಗಳ ರಿಪೋರ್ಟಗಳನ್ನು ಹಾಕಿ ತಮಗಿರಬಹುದಾದ ರೋಗ ಮತ್ತು ಸಂಭಾವ್ಯ ಔಷಧಿ ಹಾಗು ಆ ಔಷಧಿಯ ಅಡ್ಡ ಪರಿಣಾಮದ ಉದ್ದನೆಯ ಪಟ್ಟಿಯನ್ನು ಕೈಯಲ್ಲಿಟ್ಟುಕೊಂಡು ವಿಚಾರಿಸುವ ಹತ್ತೆಂಟು ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲು ಸಮಯ ಮತ್ತು ಸಂಯಮ ಪಾಪ ಇಂದಿನ ವೈದ್ಯರಿಗೆ ಎಲ್ಲಿದೆ?
ಒಬ್ಬ ಸಾಮಾನ್ಯ ಮನುಷ್ಯನ ಮನಸ್ಸಿನಲ್ಲಿ ಪ್ರಶ್ನೆಗಳು ಉದ್ಭವಿಸುವುದು ಆ ಮನುಷ್ಯ ಹೊಸ ವಿಷಯಗಳನ್ನು ಕಲಿಯಲು ಮತ್ತು ಅರ್ಥಮಾಡಿಕೊಳ್ಳಲು ಬಯಸುತ್ತಿರುವುದನ್ನು ಸೂಚಿಸುತ್ತದೆ. ಅಥವಾ ನಮ್ಮ ಮನಸ್ಸಿನಲ್ಲಿ ಪ್ರಶ್ನೆಗಳು ಉದ್ಭವಿಸುವುದು ನಾವು ವಿಷಯಗಳನ್ನು ವಿಮರ್ಶಾತ್ಮಕವಾಗಿ ಯೋಚಿಸುತ್ತೇವೆ ಮತ್ತು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ, ಸೃಜನಶೀಲರಾಗಿದ್ದೇವೆ ಮತ್ತು ಹೊಸ ವಿಚಾರಗಳನ್ನು ಹುಡುಕುತ್ತೇವೆ, ಕೆಲವು ವಿಷಯಗಳ ಬಗ್ಗೆ ಅನಿಶ್ಚಿತತೆ ಅಥವಾ ಗೊಂದಲವನ್ನು ಅನುಭವಿಸುತ್ತಿದ್ದೇವೆ, ವಿಷಯಗಳನ್ನು ತಿಳಿಯಲು ಮತ್ತು ಅರ್ಥಮಾಡಿಕೊಳ್ಳಲು ಬಯಸುತ್ತಿದ್ದೇವೆ ಎಂಬುದನ್ನು ಸೂಚಿಸುತ್ತದೆ. ಒಟ್ಟಿನಲ್ಲಿ ಮನುಷ್ಯನ ಮನಸ್ಸಿನಲ್ಲಿ ಪ್ರಶ್ನೆಗಳು ಉದ್ಭವಿಸುವುದು ಒಂದು ಸಾಮಾನ್ಯ ಮತ್ತು ಸಕಾರಾತ್ಮಕ ವಿಷಯವಾಗಿದೆ. ಇದು ಮನಸ್ಸನ್ನು ಸಕ್ರಿಯವಾಗಿ ಮತ್ತು ಕುತೂಹಲದಿಂದ ಇರಿಸುತ್ತದೆ ಎಂಬುವದಂತೂ ನಿಜ.
ಅದೆಲ್ಲ ಸರಿ, ಆದರೆ...ಆ ರಾಜ್ಯಸಭಾ ಸದಸ್ಯರು ತಮ್ಮ ಆರು ವರ್ಷಗಳ ಅವಧಿಯಲ್ಲಿ ಒಂದೇ ಒಂದು ಪ್ರಶ್ನೆಯನ್ನು ಯಾಕೆ ಕೇಳಲಿಲ್ಲ ಎಂಬುದು ನನಗಿನ್ನೂ ಯಕ್ಷಪ್ರಶ್ನೆಯಾಗಿ ಉಳಿದಿದೆ. ಒಂದು ವೇಳೆ ನಿಮಗೇನಾದರೂ ಉತ್ತರ ಲಭ್ಯವಾದರೆ ನನಗೂ ತಿಳಿಸುವಿರಲ್ಲವೇ?
ಡಾ. ಜಯಂತ ಕಿತ್ತೂರ
ಪ್ರಶ್ನೆ ಕೇಳುವ ಲೇಖನ ಅಧ್ಯಾತ್ಮ , ಲೌಕಿಕ , ಕೌಟುಂಬಿಕ , ಶೈಕ್ಷಣಿಕ, ತಾಂತ್ರಿಕ, ಎಲ್ಲಾ ಭಾಗಗಳಲ್ಲಿ, ಸರಳವಾಗಿ ಬಂದಿದೆ. ಪ್ರಶ್ನೆಗೆ ಉತ್ತರ ಸಿಗುವ ಭಾಗ್ಯ ಕೂಡಾ ಇತಿಹಾಸದ ಪುಟಗಳಲ್ಲಿ ಬಹಳ ವಿರಳ. ಅದಕ್ಕೆ ಕೆಲವರು ನಚಿಕೇತ, ಧ್ರುವ, ಸ್ವಾಮಿ ವಿವೇಕಾನಂದ ರಾದ. ಸ್ವಯಂ ಪ್ರಯತ್ನ ಮತ್ತು ಛ La ಬೇಕು. ತುಂಬಾ ಮೈಗೂಡಿಸಿಕೊಂಡು ಬರೆದ ಲೇಖನ. ಬರೆಯುತ್ತ ಸಾಗಲಿ ಪಯಣ.
ಪ್ರತ್ಯುತ್ತರಅಳಿಸಿAmazing article🤩. As a child I was reluctant to ask any questions just for the fear that others may think I am stupid. But, after coming to USA I have learnt the habit of asking questions even if they are stupid. The education system here encourages kids to ask questions.Keep writing.
ಪ್ರತ್ಯುತ್ತರಅಳಿಸಿಓದುಗರನ್ನು ಪ್ರಶ್ನಾತೀತರನ್ನಗಿಸಿ ಸರಳವಾಗಿ ಓದಿಸಿಕೊಂಡು ಹೋಗುವ ಉತ್ತಮ ಲೇಖನ. "ಪ್ರಶ್ನೆ" ಯ ಸುತ್ತಲೂ ಹುಟ್ಟಿಕೊಂಡ ಅನೇಕ ಉಪ ಪ್ರಶ್ನೆಗಳು, ಅವುಗಳ ವಿಶ್ಲೇಷಣೆಯಲ್ಲಿ ಹುಟ್ಟಿಕೊಂಡ ಅನೇಕ ವಿಚಾರಗಳು ಓದುಗರನ್ನು ಚಿಂತನೆಗೆ ಹಚ್ಚುವ ಕೆಲಸ ಮಾಡಿದೆ.
ಪ್ರತ್ಯುತ್ತರಅಳಿಸಿಸರ್ ಸರಕ ಸುಂದರ ಪ್ರಶ್ನೆ ಹುಟ್ಟುಹಾಕುವ ಲೇಖನ ತುಂಬಾ ಪ್ರಾಕ್ಟಿಕಲ್ ಆಗಿದೆ..
ಪ್ರತ್ಯುತ್ತರಅಳಿಸಿವಿವಿಧ ಕ್ಷೇತ್ರಗಳಿಗೆ ಸಂಭಂದಪಟ್ಟ ಪ್ರಶ್ನೆಗಳು ಹಾಗೂ ಉತ್ತರಗಳ ವಿಶ್ಲೇಷಣೆ ನಿಮ್ಮ ಕ್ರಿಯಾಶೀಲತೆಗೆ ಹಿಡಿದ ಕನ್ನಡಿ. ಅದಕ್ಕಾಗೆ ಓದುವಾಗ ಕೂತುಹಲ ಹೆಚ್ಚಾಗುತ್ತಾ ಹೋಗುತ್ತದೆ. ಬರಹ ತುಂಬಾ ಹಿಡಿಸಿತು. ಅಭಿನಂದನೆಗಳು. GSK
ಪ್ರತ್ಯುತ್ತರಅಳಿಸಿOur education system is designed to only answer not seek it, that is why AI has been able to predict our behaviour. Children most creative till 5 and least creative by age 15, what comes between 5 and 15 is education which has curbed inquiry based learning.
ಪ್ರತ್ಯುತ್ತರಅಳಿಸಿAs of political scenario they also need to nurtured and trained without which this will continue to prevail.
An article to probe and find answers and develop framework at different levels to transform systems. Holistic perspective is need of hour sir.,,
ಲೇಖನ ತುಂಬಾ ಚೆನ್ನಾಗಿದೆ. ಹೈಸ್ಕೂಲಿನಲ್ಲಿ ಪ್ರಶ್ನೆಕೇಳಿ ಕ್ಲಾಸಿನಿಂದ ಹೊರಗೆ ಹಾಕಿಸಿಕೊಂಡವ ನಾನು.
ಪ್ರತ್ಯುತ್ತರಅಳಿಸಿVery good writeup Jayant
ಪ್ರತ್ಯುತ್ತರಅಳಿಸಿAsking question and expecting the response you like or asking generic question and expecting specific answer leads unexpected results.
One of my relative asked her kid, who do you like? She was expecting kid will say Mom or Dad. However the kid who spends most of the time in day with care taker replied Aunty. This had devastating effects on her and she immediately terminated care taker service and now struggling to manage kids and professional life.
ಪ್ರಶ್ನೆ ಕೇಳುವದು, ನೀನು ಬರೆದ ಈ ಲೇಖನದ ವ್ಯಾಸ ತುಂಬಾ ದೊಡ್ಡದು.ದ್ವಾಪರ ಯುಗದಿಂದ ಹಿಡಿದು ಇಂದಿನ ರಾಜ್ಯ ಸಭೆ ವರೆಗೂ ಪ್ರಶ್ನೆಗಳ/ಇಲ್ಲದ ಉದಾಹರಣೆಗಳೊಂದೆಗೆ ಸಮಗ್ರವಾಗಿ ವಿಷಯಗಳನ್ನು ಕ್ರೂಢಿಕರಸಿ ಹಾಗೂ ಅವುಗಳಿಗೆ ಸಮರ್ಪಕವಾದ ಉತ್ತರ ಗಳನ್ನು ನೀಡುತ್ತಾ ಬರೆದಿರುವ ಈ ಲೇಖನ ತುಂಬಾ ಶ್ಲಾಘನೀಯ. ಹೀಗೆ ಬರೆಯುತ್ತಿರು ಗೆಳೆಯ.
ಪ್ರತ್ಯುತ್ತರಅಳಿಸಿ