ಪ್ರೊಫೆಷನಲ್ ಸಲಹೆ (ಸಮಾನತೆಯ ಸುಂಟರಗಾಳಿ )
ಎಂದಿನ ಮುಂಜಾನೆಯ ವಾಕಿಂಗ್ ಮುಗಿಸಿ ಬಂದು ಬೆಳಗಿನ ಜಾವ ತಲೆಯಲ್ಲಿ ಹೊಳೆದ ವಿಷಯದ ಮೇಲೆ ಒಂದು ಲೇಖನ ಬರೆಯುತ್ತಾ ಕೂತಿದ್ದೆ. ಎರಡನೇಯ ಕಪ್ಪು ಚಹಾ ಕುಡಿಯಲು ಮನಸ್ಸು ಬಯಸಿತು. ಅಡುಗೆ ಮನೆಗೆ ಹೋಗಿ ಶ್ರೀಮತಿಯ ಮೂಡು ಸರಿಯಾಗಿ ಇರುವುದನ್ನು ಖಾತ್ರಿ ಪಡಿಸಿಕೊಂಡು ಮೆಲ್ಲಗೆ ಒಂದು ಕಪ್ ಚಹಾದ ನಿವೇದನೆಯನ್ನು ಮಾಡಿದೆ. 'ಈಗ ನೀವು ನಿವೃತ್ತಿಯಾಗಿದ್ದೀರಿ, ಇನ್ನು ಮೇಲೆ ನೀವು ತಾಸೆರಡುತಾಸಿಗೊಂದು ಕಪ್ ಚಹಾ ಕುಡಿಯುವುದನ್ನು ಬಂದ ಮಾಡಿರಿ, ಆರೋಗ್ಯಕ್ಕೆ ಒಳ್ಳೆಯದಲ್ಲ, ಇನ್ನು ಮೇಲೆ ಏನಿದ್ದರೂ ಬೆಳಗ್ಗೆ ಒಂದು ಕಪ್ಪು ಮತ್ತು ಸಂಜೆಗೆ ಒಂದು ಕಪ್ಪು ಚಹಾ ಮಾತ್ರ' ಎಂದಳು ನನ್ನ ಶ್ರೀಮತಿ.
ನಾಲಿಗೆ ಚಹಾ ಕುಡಿಯಬೇಕೆಂದು ಬಯಸುತ್ತಿತ್ತಾದರೂ, ಹೆಂಡತಿಯ ಖಂಡತುಂಡ ಮಾತಿನಿಂದ ಸ್ವಲ್ಪ ನಿರಾಸೆ-ಹತಾಶೆಯಿಂದ ಮನಸ್ಸು ಘಾಸಿಗೊಂಡು ಉಪಾಯವಿಲ್ಲದೇ ಲೇಖನ ಬರೆಯಲು ಮುಂದಾದೆ..ಆದರೇ, ಲೇಖನ ಮುಂದೋಡಲಿಲ್ಲ. ತಿರುಗಿ ಅಡುಗೆಮನೆಗೆ ಹೋಗಿ 'ಇಲ್ಲಿಯವರೆಗೆ ನಿನ್ನ ಎಲ್ಲ ಸಣ್ಣ ದೊಡ್ಡ ಇಚ್ಚೆ, ಬಯಕೆ, ಆಸೆಗಳನ್ನು ಒಂದನ್ನೂ ಬಿಡದೇ ಪೂರೈಸಿರುವೆ. ಇಂದು ನಾನು ನೌಕರಿಯಿಂದ ನಿವೃತ್ತಿಯಾದರೇನಾಯಿತು, ಈಗಲೂ ನಾನೇ ಈ ಮನೆಯ ಯಜಮಾನ, ಇಂದು ನನ್ನ ಒಂದು ಸಣ್ಣ ನಿವೇದನೆಯನ್ನು ನೀನು ಪೂರೈಸುವುದಿಲ್ಲ ಎಂದು ಇಷ್ಟು ಕಠೋರವಾಗಿ ಹೇಳಲು ನಿನಗೆ ಹೇಗಾದರೂ ಮನಸ್ಸಾಯಿತು' ಎಂದು ನಾಲಿಗೆ ಹರಿಬಿಟ್ಟು ಆಕೆಯನ್ನು ದಬಾಯಿಸಬೇಕು ಎಂಬ ವಿಚಾರ ತಲೆಯಲ್ಲಿ ಬಂತಾದರೂ, ಮತ್ತೆ ಇನ್ನೊಂದು ಮನಸ್ಸು ಅವಳದೇನು ತಪ್ಪು, ನನಗೂ ಈಗ ವಯಸ್ಸಾಗುತ್ತಾ ಇದೆ, ಈ ವಯಸ್ಸಿನವರಂತೆ ನನಗೂ ಬಿಪಿ, ಶುಗರ್ ಬಾರದಿರಲಿ ಎಂದು ನನ್ನ ಆರೋಗ್ಯದ ಕಾಳಜಿ ಆವಳಿಗಲ್ಲದೇ ಇನ್ನಾರಿಗೆ ಇರುತ್ತದೆ. ಪಾಪ, ಅವಳು ಬಯಸಿದ್ದು ನನ್ನ ಹಿತವನ್ನೇ ಅಲ್ಲವೇ ಎಂದು ಹೇಳಿತು. ಹೀಗಾಗಿ ಅವಳ ಬಗ್ಗೆ ಇದ್ದ ನನ್ನ ಅಭಿಮಾನ ಹೆಚ್ಚಾಯಿತು. ಆದರೂ, ಇಂದು ಇಂದೊಂದು ಕಪ್ಪು ಚಹಾ ಮಾಡಿಕೊಟ್ಟು ಸಮಾಧಾನದಿಂದ ಸಾವಧಾನವಾಗಿ, 'ನೋಡಿ, ಈ ತರಹ ಬಹಳ ಚಹಾ ಕುಡಿಯುವುದು ಇನ್ನು ನಿಮ್ಮ ವಯಸ್ಸಿಗೆ ಒಳ್ಳೆಯದಲ್ಲ, ನಾಳೆಯಿಂದ ದಿನಕ್ಕೆ ಕೇವಲ ಎರಡೇ ಕಪ್ಪು ಚಹಾ ಸಾಕು' ಎಂದು ಹೇಳಬಹುದಾಗಿತ್ತಲ್ಲ ಎಂದು ಇನ್ನೊಂದು ಮನಸ್ಸು ಹೇಳಿತು. ಇರಲಿ ಬಿಡು, ಆದದ್ದೆಲ್ಲ ಒಳಿತೇ ಆಯಿತು, ಅವಳ ನಿಷ್ಟುರ ಮಾತು ನನ್ನ ನೀಯತ್ತು, ಬದ್ಧತೆಯನ್ನು ಹೆಚ್ಚಿಸುವುದು ಎಂದು ಸಮಾಧಾನ ಮಾಡಿಕೊಂಡೆ.
ಅಷ್ಟರಲ್ಲಿ, ಬಿಸಿ ಬಿಸಿ ಚಹಾದ ಕಪ್ಪನ್ನು ನೀಡುತ್ತಾ, ನನ್ನ ಶ್ರೀಮತಿ, ' ನೋಡಿ ನಮಗೆ ಅರಿವಿಲ್ಲದಂತೆ ಇಷ್ಟು ವರ್ಷ ಗಂಡಸರಾದ ನೀವು ಮನೆಯಲ್ಲಿ ಹೆಂಡತಿಯರ ಮೇಲೇ ದಬ್ಬಾಳಿಕೆ ಮಾಡಿ ಶೋಷಣೆ ಮಾಡಿದ್ದೀರೀ, ಈಗ ನಮ್ಮ ಸ್ತ್ರಿ ಶಕ್ತಿ ಜಾಗ್ರತವಾಗಿದೆ, ನಮಗೆ ಮನೆಯಲ್ಲಿ ಸಮಾನತೆ ಬೇಕು, ಇಂದಿನಿಂದ ಬೆಳಗಿನ ಚಹಾ ಮತ್ತು ಮಧ್ಯಾಹ್ನದ ಅಡುಗೆ ನಾನು ಮಾಡಿದರೆ, ಸಂಜೆಯ ಚಹಾ ಮತ್ತು ರಾತ್ರಿಯ ಊಟದ ವ್ಯವಸ್ಥೆಯನ್ನು ನೀವು ಮಾಡಬೇಕು' ಎಂದು ಹಕ್ಕೊತ್ತಾಯ ಬಿಟ್ಟಳು. ಈ ಚಹಾದ ಕಪ್ಪಿನಲ್ಲಿ ಒಮ್ಮಿಂದೊಮ್ಮೆಲೆ ಎದ್ದ ಸಮಾನತೆಯ ಸುಂಟರಗಾಳಿಗೆ ಏನು ಕಾರಣ, ಮದುವೆಯಾಗಿ ಮೂರು ದಶಕಗಳಿಂದ ಇಲ್ಲದ ವಿಚಾರ, ಹಕ್ಕೊತ್ತಾಯ ಧಿಡೀರನೆ ಅವಳ ತಲೆಯಲ್ಲಿ ಬರಲು ಕಾರಣವೇನಿರಬಹುದು?, ಇಂದು ಯಾಕಾದರೂ ಇನ್ನೊಂದು ಕಪ್ ಚಹಾ ಬೇಕೆಂದು ಬೇಡಿದೆನೋ ಎಂದು ಮನದಲ್ಲೇ ಗೊಣಗುತ್ತಾ ಚಹಾ ಕುಡಿದೆ. ಯಾಕೋ ಅದು ರುಚಿಸಲಿಲ್ಲ ಅಷ್ಟೇಅಲ್ಲ, ನನ್ನ ಲೇಖನ ಬರವಣಿಗೆ ಮುಂದೋಡಲಿಲ್ಲ.
ಚಹಾ ಕುಡಿದ ಕಪ್ಪನ್ನು ಸಿಂಕದಲ್ಲಿ ಇಡುವ ನೆವಮಾಡಿ ಅಡುಗೆ ಮನೆಗೆ ಹೋಗಿ, 'ಈಗ ನೀನಾಡಿದ ಸಮಾನತೆಯ ಮಾತು ಚೆನ್ನಾಗಿದೆ, ಆದರೇ ಈ ಸಮಾನತೆ ಕೇವಲ ಮನೆಯ ಕೆಲಸಕ್ಕೆ ಮಾತ್ರ ಯಾಕೆ? ಇದು ಸರ್ವವ್ಯಾಪಿಯಾಗಿ ಲಾಗೂ ಆಗಬೇಕು ಎಂಬುದು ನನ್ನ ಅಭಿಪ್ರಾಯ' ಎಂದು ಒಂದು ದಾಳ ಉರುಳಿಸಿದೆ. ತನ್ನ ಸಮಾನತೆಯ ಹಕ್ಕೊತ್ತಾಯದ ಮಾತನ್ನು ನಾನು ಒಂದೇ ಮಾತಿನಲ್ಲಿ ಒಪ್ಪಿಕೊಂಡೆನೆಂಬ ಖುಷಿಯಲ್ಲಿ ನನ್ನವಳು 'ಹೌದು ಯಾಕಾಗಬಾರದು...ಅದು ಸರ್ವವ್ಯಾಪಿಯಾಗಿ ಲಾಗೂ ಆಗಬೇಕು' ಎಂದಳು. 'ಸರ್ವವ್ಯಾಪಿ ಎಂದರೆ ನಾವು ವಿಶ್ವದಿಂದಲೇ ಪ್ರಾರಂಭಿಸೋಣ, ಈಗಿರುವ ವಿಶ್ವಕ್ಕೆ ಅಧಿಪತಿ ಆ ವಿಷ್ಣು. ವಿಶ್ವದ ಅಧಿಪತಿಯ ಸ್ಥಾನಕ್ಕೂ ಸಮಾನತೆ ಬೇಡವೇ, ಲಕ್ಷ್ಮೀಗೂ ಸಮಾನ ಅವಕಾಶ ಬೇಕಲ್ಲವೇ?' ಎಂಬ ವಿಚಾರ ತೇಲಿ ಬಿಟ್ಟೆ. ಹೌದು ಅವಳಿಗೂ ಸಮಾನತೆ ಪಡೆಯುವ ಹಕ್ಕು ಇದೆ ಎಂದು ತನ್ನ ಸಮ್ಮತಿಯನ್ನು ಶ್ರೀಮತಿ ಸೂಚಿಸಿದಳು. 'ನಮ್ಮ ಮನೆಯ ಮಟ್ಟಿಗೆ ಬೆಳಗಿನ ಕೆಲಸಗಳನ್ನು ನಾನು ಮಾಡಿದರೆ ರಾತ್ರಿಯ ಅಡುಗೆ ನಿಮ್ಮ ಜವಾಬ್ದಾರಿ ಎನ್ನಬಹುದು. ಆದರೆ, ಆ ವಿಷ್ಣು ಲಕ್ಷ್ಮೀಯರ ಕೆಲಸಗಳನ್ನು ಹೇಗೆ ಸಮವಾಗಿ ಹಂಚುವುದು?' ಎಂತೆಂದಳು. 'ಅದಕ್ಕೇಕೆ ಚಿಂತೆ, ಒಂದು ಕಲ್ಪದ ಮಟ್ಟಿಗೆ ವಿಷ್ಣು ವಿಶ್ವದ ಅಧಿಪತಿಯಾದರೆ ಮುಂದಿನ ಕಲ್ಪದಲ್ಲಿ ಲಕ್ಷ್ಮೀ ಆ ಸ್ಥಾನ ಹೊಂದಬೇಕು. ಅಷ್ಟು ಸಮಯ ಕಾಯುವುದು ಬೇಡವೆಂದರೆ, ಒಂದೊಂದು ಮನ್ವಂತರ ಅಥವಾ ಒಂದೊಂದು ಯುಗ ಇಲ್ಲವೇ ಕನಿಷ್ಠ ಪಕ್ಷ ಒಂದು ಸಂವತ್ಸರದ ಅರ್ಧ ಭಾಗ ಅಂದರೆ ಉತ್ತರಾಯಣ, ಬ್ಯಾಡಾ ದಕ್ಷಿಣಾಯಣ ಎರಡರ ಪೈಕಿ ಒಂದು ಕಾಲ ಲಕ್ಷ್ಮೀಗೂ ವಿಶ್ವದ ಅಧಿಪತಿಯ ಸ್ಥಾನ, ಮಾನ ಎಲ್ಲವೂ ಸಿಗಬೇಕಲ್ಲವೇ?. ಅದೇ ತರಹ, ಬ್ರಹ್ಮನ ಸ್ಥಾನಕ್ಕೆ ಬಂದರೆ ಸರಸ್ವತಿಗೂ ಇದೇ ಮಾದರಿಯ ಸಮಾನತೆ ಬೇಕಲ್ಲವೇ?' ಎಂದು ನನ್ನ ಕುತರ್ಕ ಪ್ರಸ್ತುತ ಪಡಿಸಿದೆ. ಕೂಡಲೇ ಅದನ್ನು ಒಪ್ಪಿಕೊಂಡು 'ಹೌದು ಹೌದು ಲಕ್ಷ್ಮೀ, ಸರಸ್ವತೀಯರಿಗೂ ಸಮಾನತೆಯನ್ನು ಪಡೆಯುವ ಹಕ್ಕಿದೆ. ಈ ವಿಚಾರ ನನಗೆ ಹೊಳದೇ ಇರಲಿಲ್ಲ, ನಾಳೆಯೇ ನಮ್ಮ ಲೇಡಿಸ್ ಕ್ಲಬ್ ನಲ್ಲಿ ಇದರ ಪ್ರಸ್ತಾಪ ಮಾಡಿ ಒಂದು ಗೊತ್ತುವಳಿ ಹೊರಡಿಸುವುದಾಗಿ ನನ್ನವಳು ಉದ್ಗರಿಸಿದಳು. ಒಳ ಒಳಗೇ ಖುಷಿ ಪಟ್ಟ ನಾನು ಮುಂದುವರೆದು, 'ಇನ್ನು ನಮ್ಮ ಸೌರ ಮಂಡಲಕ್ಕೆ ಬಂದರೆ ಸೂರ್ಯನ ಜೊತೆ ಚಂದ್ರನಿಗೂ ಸಮಾನತೆ ಬೇಡವೇ? ಸೂರ್ಯ ಮಾತ್ರ ಪ್ರತೀ ದಿನ ಒಂದೇ ತೆರನಾಗಿ ಹುಟ್ಟುತ್ತಾನೆ ಮತ್ತು ಮುಳುಗುತ್ತಾನೆ. ಹಾಗಿದ್ದಮೇಲೆ ಚಂದ್ರನಿಗೇಕೆ ಹುಣ್ಣಿಮೆ, ಅಮಾವಾಸ್ಯೆಯ ಸಮಸ್ಯೆ. ಇದು ಜಾಗತಿಕ ತಾರತಮ್ಯದ ಪರಾಕಾಷ್ಠೆ ಅಲ್ಲವೇ? ಮೊದಲು ಈ ತಾರತಮ್ಯವನ್ನು ತೊಲಗಿಸಿ ಸಮಾನತೆಯನ್ನು ಸಾಧಿಸಲು ಪ್ರಯತ್ನಿಸಬೇಕು ಏನಂತಿಯ?' ಎಂದು ನನ್ನ ಶ್ರೀಮತಿಯನ್ನು ಖೆಡ್ಡಾದಲ್ಲಿ ಹಾಕಲು ಪ್ರಯತ್ನಿಸಿದೆ. ಕೂಡಲೇ ಎಚ್ಚೆತ್ತುಕೊಂಡ ನನ್ನವಳು, ಅದೆಲ್ಲ ಆಗದ ಮಾತು. ನಮ್ಮ ಸಮ ಸಮಾಜದ ನಿರ್ಮಾಣ, ಸಮಾನತೆಯ ಕಾರ್ಯ ಮನೆಯಿಂದ ಪ್ರಾರಂಭವಾದಾಗ ಮಾತ್ರ ಸಮಾಜದಲ್ಲಿ ಕ್ರಾಂತಿಯಾಗಲು ಸಾಧ್ಯ. ನಾನು ಆಗಲೇ ಹೇಳಿದಂತೆ ಇಂದಿನಿಂದ ಸಂಜೆಯ ಅಡುಗೆ ನೀವೇ ಮಾಡಬೇಕು ಎಂದು ಮತ್ತೊಮ್ಮೆ ಫರ್ಮಾನು ಹೊರಡಿಸಿದಳು.
ನನ್ನ ಈ ಪ್ರಯತ್ನ ಫಲಿಸದಾದಾಗ ನಾನು ಪಡೆದ ಇಂಜಿನಿಯರಿಂಗ್ ಶಿಕ್ಷಣದ ಎಲ್ಲಾ ತರ್ಕಬದ್ಧ ಸರಣಿಗಳನ್ನು ಉಪಯೋಗಿಸಿ ವಿಚಾರ ಮಾಡುತ್ತಾ ಕೂತೆ. ಉಹುಂ, ಸಾಯಂಕಾಲವಾದರೂ ಅವಳ ವರ್ತನೆಯಲ್ಲಿ ಧಿಡೀರನೆ ಆದ ಬದಲಾವಣೆಗೆ ಸೂಕ್ತ ಕಾರಣ ಮಾತ್ರ ಸಿಗಲಿಲ್ಲ. ಕೊನೆಗೆ ಬಹಳ ಬೋರ್ ಆಗಿ ಹಾಗೆಯೇ ಒಂದು ರೌಂಡ್ ಸಂಜೆಯ ವಾಯು ವಿಹಾರಕ್ಕೆ ಹೋದೆ.
ಅನೇಕ ತಿಂಗಳುಗಳ ನಂತರ ಹಾದಿಯಲ್ಲಿ ಭೇಟಿಯಾದ ಮಿತ್ರ, ಸಪ್ಪೆಯಾಗಿರುವ ನನ್ನ ಮುಖವನ್ನು ಗಮನಿಸಿ, 'ಯಾಕೋ ಗೆಳೆಯಾ, ಗ್ರಹಮಂತ್ರಿಗಳಿಂದ ಏನಾದರೂ ಫರ್ಮಾನು ಬಂದಿತೇ?' ಎಂದು ವಿಚಾರಿಸಿದ. ಅರೇ, ಅದು ನಿನಗೆ ಹೇಗೆ ಗೊತ್ತಾಯಿತು, ಎಂದೆ. ಅದೆಲ್ಲ ನನ್ನ ಪ್ರೊಫೆಷನಲ್ ಸಿಕ್ರೆಟ್. ಅದು ಬಿಡು, ಮನೆಯಲ್ಲಿ ಏನಾಯ್ತು ಹೇಳು ಎಂದು ಅವನು ಅಂದ. ಇಂದು ಮನೆಯಲ್ಲಿ ಧಿಡೀರನೆ ತಲೆ ಎತ್ತಿದ ನನ್ನ ಶ್ರೀಮತಿಯ ಸಮಾನತೆಯ ವಿಚಾರ ಮತ್ತು ಅವಳ ತಲೆಯಲ್ಲಿನ ಬದಲಾದ ಈ ವಿಚಾರ ಸರಣಿಯ ಮೂಲ ಸಿಗದಿರುವುದೇ ನಾನು ಹತಾಶನಾಗಿರಲು ಕಾರಣ ಎಂಬ ವಿಷಯ ಅವನಿಗೆ ತಿಳಿಸಿದೆ. ಆದರೂ ನನಗೆ ಕುತೂಹಲ ತಡೆದುಕೊಳ್ಳಲು ಆಗಲಿಲ್ಲ. 'ಹೌದುss, ಇಂದು ನನ್ನ ಶ್ರೀಮತಿ ಮನೆಯಲ್ಲಿ ಹೊರಡಿಸಿದ ಫರ್ಮಾನಿನ ವಿಷಯ ನಿನಗೆ ಹೇಗೆ ಗೊತ್ತಾಯಿತು?'ಎಂದು ಮತ್ತೆ ಕೇಳಿದೆ.
ಇತ್ತೀಚಿಗೆ ತನ್ನ ಮನೆಯವಳೂ ಇದೇ ತರಹದ ಹಕ್ಕೊತ್ತಾಯ ಮಾಡಿದಳು. ಕಳೆದೊಂದು ತಿಂಗಳಿನಿಂದ ರಾಜಕಾರಣಿಗಳ ಸಮಾನತೆ, ಸಮ ಸಮಾಜ ನಿರ್ಮಾಣದ ಹೇಳಿಕೆಯ ಸುದ್ದಿ ಮತ್ತು ಅವರ ಮಾತುಗಳನ್ನು ಬಲವಾಗಿ ಸಮರ್ಥಿಸಿ ಇನ್ನು ಮೇಲೆ ಬೆಳಗಿನ ಚಹಾ ಮತ್ತು ಮಧ್ಯಾಹ್ನದ ಅಡುಗೆ ಹೆಂಡತಿ ಮಾಡಿದರೆ, ಸಂಜೆಯ ಚಹಾ ಮತ್ತು ರಾತ್ರಿಯ ಊಟದ ವ್ಯವಸ್ಥೆಯನ್ನು ಪತಿರಾಯ ಮಾಡಬೇಕು, ಮನೆಯಲ್ಲಿ ಹೆಂಡತಿಯರಿಗೆ ಸಮಾನತೆ ಬೇಕು ಎಂದು ಯಾರೋ (ಕಿಡಿಗೇಡಿಗಳು) ಸೋಶಿಯಲ್ ಮೀಡಿಯಾದಲ್ಲಿ ಹಾಕಿದ ಪೋಸ್ಟ್ ಗೆ ಬಂದ ನೂರಾರು ಲೈಕುಗಳೇ ತನ್ನವಳ ತಲೆ ಕೆಡಿಸಿದೆ. ತನ್ನ ಮನೆಯವಳ ಮೊನ್ನೆಯ ಹಕ್ಕೊತ್ತಾಯಕ್ಕೆ ಈ ಸಾಮಾಜಿಕ ಮಾಧ್ಯಮವೇ ಕಾರಣ ಮತ್ತು ಆ ಸಮಾನತೆಯ ಹಕ್ಕೊತ್ತಾಯ ಇಂದು ನಿನ್ನ ಮನೆಯಲ್ಲಿ ಬೆಂಕಿ ಇಟ್ಟಿದೆ ಎಂದು ತನ್ನ ತರ್ಕವನ್ನು ನನ್ನ ಗೆಳೆಯ ಮಂಡಿಸಿದ. ಇರಬಹುದು, ಆದರೇ ನಿನ್ನ ಈ ತರ್ಕಕ್ಕೆ ಆಧಾರವೇನೆಂದು ನಾನು ಕೇಳಿದ್ದಕ್ಕೆ, ಮೊನ್ನೆ ನಮ್ಮಿಬ್ಬರ ಪತ್ನಿಯರು ಲೇಡಿಸ್ ಕ್ಲಬ್ ನಲ್ಲಿ ಈ ವಿಷಯವನ್ನು ಚರ್ಚಿಸಿದ್ದು ಮತ್ತು ಈ ವಿಷಯದಲ್ಲಿ ನಿರ್ಣಯವನ್ನು ಮಾಡಿರುವುದರ ಸಮಾಚಾರ ತಿಳಿಸಿದ. ಓಹೋ ಹಾಗೋ ಸಮಾಚಾರ, ಆದರೆ ನನ್ನದೊಂದು ಡೌಟು...ನನ್ನ ಪತ್ನಿ ನಿನ್ನ ಶ್ರೀಮತಿಯೊಂದಿಗೆ ಲೇಡೀಸ್ ಕ್ಲಬನಲ್ಲಿ ಏನು ಚರ್ಚೆಮಾಡಿದಳೆಂಬುದು ನಿನಗೆ ಹೇಗೆ ಗೊತ್ತಾಯಿತು ಎಂದೆ. 'ಅದೇನು ಮಹಾ ನಿನ್ನ ಡೌಟು, ಮುವತ್ತೈದು ವರ್ಷ ನೌಕರಿ ಎಂದು ನಾನು ಮನೆಯ ಹೊರಗೆ ಹೋದೆ, ಆಗೆಲ್ಲ ಹೊರಗಿನ ಸುದ್ದಿಯನ್ನು ನಾನು ಹೇಳಿದೆ ಮತ್ತು ಅವಳು ಮನೆಯಲ್ಲಿದ್ದು ಕೇಳಿದಳು. ನನ್ನ ನಿವೃತ್ತಿಯ ನಂತರ ಈಗ ಅವಳು ಹೊರಗೆ ಹೋಗುವುದು, ಅವಳು ಹೇಳುವುದು ಮತ್ತು ನಾನು ಕೇಳುವುದು' ಎಂದು ನನ್ನ ಮಿತ್ರ ಬಹಳ ಸಹಜವಾಗಿ ಹೇಳಿದ. 'ಅಂದರೇss, ಈಗ ನೀನು ಮನೆ ಕೆಲಸ ಮಾಡಲು ಪ್ರಾರಂಭಿಸಿರುವೆಯಾ' ಎಂದು ಕೇಳಿದೆ. ಅದಕ್ಕೆ ನನ್ನ ಗೆಳೆಯ, 'ನಿನಗೆ ಗೊತ್ತಲ್ಲss, ನಾನು ಮಾಡಿದ್ದು ಸರ್ಕಾರಿ ನೌಕರಿ. ಕಡ್ಡಾಯವಾಗಿ ಅರವತ್ತಿಗೆ ನಿವೃತ್ತಿ. ಸಂಬಳದ ಜೊತೆಗೆ ಗಿಂಬಳ, ಅಧಿಕಾರದ ಜೊತೆಗೆ ದರ್ಪ ಎಲ್ಲದಕ್ಕೂ ಈಗ ಇತಿಶ್ರೀ. ತಿಂಗಳ ನಿವೃತ್ತಿ ವೇತನ ಖಾತೆಗೆ ಜಮಾ ಆಗೋದು ಬಿಟ್ಟರೆ ನನ್ನ ಜೇಬೆಲ್ಲ ಖಾಲಿ ಖಾಲಿ, ಭಾರವೇ ಇರಲಿಲ್ಲ. ಹಾಗಾಗಿ ಮನೆಯಲ್ಲಿ ನನ್ನನ್ನು ಯಾರೂ ಕೇಳುವರಿಲ್ಲ, ಮಾತನಾಡಿಸುವವರಿರಲಿಲ್ಲ. ಹಾಗೆಯೇ ಸುಮ್ಮನೆ ದಿನವೆಲ್ಲಾ ಮನೆಯಲ್ಲಿ ಕೂತು ಬೇಸರಗೊಂಡಿದ್ದೆ. ನಾನು ಸರ್ಕಾರಿ ನೌಕರಿಯಲ್ಲಿ ಪಡೆದಿದ್ದ "ಬಿಲ್ಲು ವಿದ್ಯೆ"ಯ ಪರಿಣತಿಯ ಮಾಹಿತಿ ಅರಿತು ಅದಾವುದೋ ಫಾರಿನ್ ಸರ್ಕಾರೇತರ ಸಂಸ್ಥೆ( NGO) ಯವರು ತಮ್ಮಲ್ಲಿ ನನ್ನ ಸೇವೆಯನ್ನು ಬಯಸಿದರು. ನಾನು ಮನೆಯಲ್ಲಿ ಕೂತು ಮೂಲೆಗುಂಪಾಗಿ ಹೆಂಡತಿ ಮಕ್ಕಳಿಂದ ಹೀಯಾಳಾಸಿಕೊಳ್ಳುವುದಕ್ಕಿಂತ ಆ ಸರ್ಕಾರೇತರ ಸಂಸ್ಥೆಗೆ ಪ್ರೊಫೆಷನಲ್ ಕನ್ಸಲ್ಟಂಟ್ ಅಂತ ನನ್ನ ಸೇವೆಯನ್ನು ಪ್ರಾರಂಭಿಸಿದೆ. ಹೆಚ್ಚಾಗಿ ಕೆಲಸ ಆನ್ ಲೈನ್ ನಲ್ಲಿರುವುದರಿಂದ ಮನೆಯಿಂದ ಕೆಲಸ ಮಾಡುವೆ. ಯಾವಾಗಲಾದರೂ ಮೀಟಿಂಗು ಇಲ್ಲವೇ ಕಾನ್ಫರೆನ್ಸ್ ಇದ್ದಾಗ ಆಫೀಸಿಗೆ ಹೋಗುವುದು. ಅದಕ್ಕೆ ಭತ್ಯೆ ಬೇರೆ ಸಿಗುತ್ತದೆ. ನನ್ನ ಆಂಗ್ಲ ಭಾಷೆಯ ಮೇಲಿನ ಪ್ರಭುತ್ವ ಮತ್ತು ವಿಷಯವನ್ನು ಮಂಡಿಸುವ ಕಲೆಯನ್ನು ಗುರುತಿಸಿ ಆ ಸಂಸ್ಥೆಯು ನನಗೆ ಕಂಟೆಂಟ್ ಕ್ರಿಯೇಟರ್ ಕೆಲಸದ ಆಫರನ್ನು ಹೆಚ್ಚುವರಿಯಾಗಿ ನೀಡಿತು. ಈಗ ಕೈ ತುಂಬಾ ಕೆಲಸ ಮತ್ತು ಜೇಬಿನ ತುಂಬಾ ಹಣ ಬರುತ್ತಿದೆ. ಜೊತೆಗೆ ಮನೆಯಲ್ಲಿಯೂ ಮರ್ಯಾದೆ ಸಿಗುತ್ತದೆ' ಎಂತೆಂದನು.
ನನ್ನ ಗೆಳೆಯನಿಗೆ ಅವನ ನೌಕರಿಯ ಎರಡನೇಯ ಇನಿಂಗ್ಸ್ ಗೆ ನನ್ನ ಅಭಿನಂದನೆಗಳನ್ನು ತಿಳಿಸಿ, ಮಾತನ್ನು ಮುಂದು ಒರೆಸಿ 'ಈ ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಹಾಳು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ /ಜಾತಿ ಗಣತಿ, ಸಮಾನತೆ, ಸಮ ಸಮಾಜ ಎಂದು ಏನೇನೋ ಭಾಷಣಮಾಡಿ ರಾಜ್ಯದ ಮುಗ್ದ ಜನರ ತಲೆಯಲ್ಲಿ ಇಲ್ಲದ ಹುಳ ಬಿಡುತ್ತಾರೆ. ಅದರ ಅಡ್ಡ ಪರಿಣಾಮವನ್ನು ನನ್ನಂಥ ಬಡಪಾಯಿ ಶ್ರೀಸಾಮಾನ್ಯರು ಅನುಭವಿಸುವುದು. ಒಂದು ಸಮಾಜ ಸುಸ್ಥಿತಿಯಲ್ಲಿ ಇರಲು ಸಮಾಜದ ವಿವಿಧ ಅಂಗಗಳಲ್ಲಿ ಸಮನ್ವಯತೆ ಬೇಕೇ ಹೊರತು ಸಮಾನತೆಯಲ್ಲ ಎಂದು ಅವರಿಗೇನು ಗೊತ್ತಿಲ್ಲವೇ?' ಎಂದು ನನ್ನ ಅಳಲನ್ನು ಗೆಳೆಯನಲ್ಲಿ ತೋಡಿಕೊಂಡೆ. 'ಯಾಕೆ ಗೊತ್ತಿಲ್ಲ, ಚೆನ್ನಾಗಿ ಗೊತ್ತಿದೆ. ಸಭೆ ನೋಡಿ ಗಾಯನ ಮಾಡು, ಮಳೆ ನೋಡಿ ಕೊಡೆ ಎರಿಸು ಎಂಬುದು ಹಳೆಯ ಗಾದೆ. ಇಂದಿನ ರಾಜಕೀಯದ ಅವಶ್ಯಕತೆಗೆ ತಕ್ಕಂತೆ ರಾಜಕಾರಣಿಗಳು ಮೊದಲು ಮೋಡ ಬಿತ್ತನೆ ಮಾಡಿ ಕೃತಕ ಮಳೆ ಸುರಿಸಿ ಆಮೇಲೆ ಕೊಡೆ ಹಿಡಿಯುವುದು. ಅಂದರೆ, ಯಾವ ವಿಷಯ, ವಿಚಾರಗಳನ್ನು ಕೆದುಕಿದರೆ ಸಮಾಜದ ವಿವಿಧ ಸ್ಥರದ ಜನರ ಮನದಲ್ಲಿ ಯಾವ ತರಹದ ಭಾವನೆಗಳು ಹುಟ್ಟುತ್ತವೆ ಮತ್ತು ಆ ವಿಷಯದ ಮೇಲೆ ಯಾವ ರೀತಿ ತಾವು ಹೇಳಿಕೆಗಳನ್ನು ಕೊಡುವುದು ಅಥವಾ ಮಾತನಾಡುವುದು, ಯಾವರೀತಿ ಮತದಾರರ ಮನಸ್ಸನ್ನು ಗೆಲ್ಲುವುದು ಎಂದು ಯೋಜನೆ ರೂಪಿಸುವುದಕ್ಕಾಗಿಯೇ ಅವರು ವೃತ್ತಿಪರ (ಪ್ರೊಫೆಷನಲ್) ಕನ್ಸಲ್ಟಂಗ ಸಂಸ್ಥೆಗಳನ್ನು ನೇಮಿಸಿಕೊಳ್ಳುವುದು. ಇಂದು ನಮ್ಮ ರಾಜಕಾರಣಿಗಳು ಎಷ್ಟು ಪ್ರೊಫೆಷನಲ್ ಆಗಿದ್ದಾರೆ ನೋಡು. ನೀನೂ ಇದ್ದೀಯಾ ಪ್ರೊಫೆಷನಲ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ, ವಾಸ್ತವಿಕತೆಯಿಂದ ಬಹುದೂರ' ಎಂದು ನನ್ನ ಮಿತ್ರ ತಿರುಗೇಟು ನೀಡಿದ.
ಹೌದು, ನಾನು ಪಡೆದದ್ದು ಪ್ರೊಫೆಷನಲ್ ಶಿಕ್ಷಣ ಮತ್ತು ನಾವು ಇಂಜಿನಿಯರಿಂಗ್ ಕಾಲೇಜಿನಲ್ಲಿ ಮನೆ-ಮಠ, ರಸ್ತೆ-ಸೇತುವೆ ಹೇಗೆ ಕಟ್ಟಬೇಕೆಂದೇ ಕಲಿಸುವುದೇ ಹೊರತೂ, ಸಮಾಜದ ಸಮನ್ವಯವನ್ನು ಹಾಳುಮಾಡುವ ಮನೆ ಮುರುಕು ವಿಚಾರಗಳನ್ನಲ್ಲ. ನಾವು ಕಲಿಸುವುದು ಬಸ್ಸು, ರೈಲು, ವಿಮಾನಗಳನ್ನು ಹೇಗೆ ಉತ್ಪಾದನೆ ಮಾಡಬೇಕು ಎಂಬುದೇ ಹೋರತು ಸುಳ್ಳು ಭರವಸೆಗಳ ರೈಲು ಬಿಡುವುದನ್ನಲ್ಲ. ಟೀವಿ-ಫೋನು, ಕಂಪ್ಯೂಟರ್-ಅಂತರ್ ಜಾಲ, ಇಲ್ಲವೇ ಸಾಮಾಜಿಕ ಮಾಧ್ಯಮಗಳ ಮುಖಾಂತರ ಸಮಾಜ ಕಲ್ಯಾಣವನ್ನೇ ಹೊರತು, ವಿವಿಧ ಸಾಮಾಜಿಕ ಮಾಧ್ಯಮಗಳ ಪೋಸ್ಟ್, ರೀಲ್ ಗಳ ಮುಖಾಂತರ ಮುಗ್ಧ ಜನರ ವೇಳೆಯನ್ನು ಹಾಳುಮಾಡುವುದರ ಜೊತೆಗೆ ಮನೆ,ಮನಸ್ಸುಗಳಲ್ಲಿ ನಕಾರಾತ್ಮಕ ವಿಚಾರಗಳನ್ನು ಬಿತ್ತಿ ಜನರು ಬೀದಿಗಿಳಿದು ಬಸ್ಸಿಗೆ ಬೆಂಕಿ ಇಡುವುದನ್ನಲ್ಲ ಎಂದು ನನ್ನ ಪ್ರೊಫೆಷನಲ್ ಕಾಲೇಜು ಶಿಕ್ಷಕ ವೃತ್ತಿಯನ್ನು ಗೆಳೆಯನಲ್ಲಿ ಸಮರ್ಥಿಸಿಕೊಳ್ಳಬೇಕು ಅನ್ನುವಷ್ಟರಲ್ಲಿ, ಅತ್ತ ಮಿತ್ರನಿಗೆ ಅವನ ಮನೆಯಾಕೆಯಿಂದ ಫೋನ್ ಬಂದ ಕಾರಣ ಅವನು ತಕ್ಷಣ ತನ್ನ ಮನೆಯ ಕಡೆ ದೌಡಾಯಿಸಿದ್ದ. ಇತ್ತ ನನಗೆ ಅರ್ಥವಾಯಿತು, Idle mind is devil's workshop and social media is a monster ಎಂದು ಮತ್ತು ನನ್ನ ಶ್ರೀಮತಿಯ ಬದಲಾದ ವಿಚಾರಗಳ root cause ನಾನು ನೌಕರಿಯಿಂದ ನಿವೃತ್ತಿ ಹೊಂದಿ ಮನೆಯ ಕೆಲಸಗಳಲ್ಲಿ ಸ್ವಲ್ಪ ಆಸಕ್ತಿ ತೋರಿಸುತ್ತಿರುವುದು. ಇದರಿಂದಾಗಿ ನನ್ನಾಕೆಗೆ ಹೆಚ್ಚು ಹೊತ್ತು ಮೋಬೈಲಿನಲ್ಲಿ ಮುಳುಗಲು ಸಮಯ ಸಿಕ್ಕಿದ್ದು ಮತ್ತು ಯಾವುದೋ ಕಂಟೆಂಟ್ ಕ್ರಿಯೇಟರ್ ಪ್ರೊಫೆಷನಲ್ ಸಂಸ್ಥೆಯು ತಯಾರಿಸಿ ಸೋಶಿಯಲ್ ಮೀಡಿಯಾದಲ್ಲಿ ತೇಲಿಬಿಟ್ಟ ರೀಲು, ಪೋಸ್ಟಗಳನ್ನು ನೋಡಿ ಅದರ ಪ್ರಭಾವದಿಂದ ತನ್ನ ಹಕ್ಕೊತ್ತಾಯ ಮಂಡಿಸಿರುವುದು ಎಂದು.
ಬೆಳಿಗ್ಗೆ ಮಡದಿಯ ಮಾತಿನಿಂದ ಅರ್ಧ ತಲೆ ಕೆಟ್ಟ ನಾನು, ಸಂಜೆಗೆ ಗೆಳೆಯನ ಮಾತು ಕೇಳಿ ಇಂದು ಯಾರು ಮುಖ ನೋಡಿ ಎದ್ದೆನೋ ಎಂದು ಗೊಣಗುತ್ತಾ ಮನೆ ಸೇರಿದೆ. ಶ್ರೀಮತಿಯ ಬೆಳಗಿನ ಆಣತಿಯಂತೆ ತರಾತುರಿಯಲ್ಲಿ ಕುಕ್ಕರ್ ಇಳಿಸಿ ಅವಳೊಂದಿಗೆ ಊಟಕ್ಕೆ ಕುಳಿತೆ. ನಾನು ಮಾಡಿದ ಹಂಜಕ್ಕಿ ಅನ್ನ, ಉಪ್ಪುಕಟಿ ಸಾರು ಬಾಯಲ್ಲಿ ಹಾಕಿಕೊಂಡ ನನ್ನ ಶ್ರೀಮತಿ, 'ಯಾಕೆ ಏನಾಯ್ತು? ಸಂಜೆ ಗೆಳೆಯನ ಕೈಲಿ ಉಗಿಸಿಕೊಂಡು ಬಂದಿರಾ' ಎಂದು ವಿಚಾರಿಸಿದಳು. ಅದು ಹೇಗೆ ನಿನಗೆ ಗೊತ್ತಾಯಿತು ಎಂದು ಆಶ್ಚರ್ಯದಿಂದ ಕೇಳಿದೆ. ಅದೆಲ್ಲ ನನ್ನ ಪ್ರೊಫೆಷನಲ್ ಸಿಕ್ರೆಟ್. ಅದು ಬಿಡಿ, ಸಂಜೆ ಏನಾಯ್ತು ಹೇಳಿ ಅಂತಂದಳು. ಮೊದಲೆಲ್ಲ ಅವನು ಹೀಗಿರಲಿಲ್ಲ, ಯಾಕೆ ಅಂತ ಗೊತ್ತಿಲ್ಲ, ನಿವೃತ್ತಿಯ ನಂತರ ಈಗ ಅವನ ವಿಚಾರ ಲಹರಿ ತುಂಬಾ ಬದಲಾಗಿದೆ ಎಂದು ನನ್ನ ಗೆಳೆಯನ ಕುತರ್ಕದ ಮಾತುಗಳ ಪ್ರಸ್ತಾಪ ಮಾಡಿದೆ. ಅದಕ್ಕೇಕೆ ಮಂಡೆ ಬಿಸಿ ಮಾಡಿಕೊಳ್ಳುತ್ತೀರಿ, ನಾನು ಹೇಳುತ್ತೇನೆ ಕೇಳಿ. ನಿಮ್ಮ ಮಿತ್ರ, ನಿವೃತ್ತಿಯ ನಂತರ ನಿಮ್ಮಂತೆ ಮನೆಯಲ್ಲಿ ಕೂತಿಲ್ಲ, ಅದಾವುದೋ ಫಾರಿನ್ ಸಂಸ್ಥೆಯ ನೌಕರಿಗೆ ಸೇರಿದ್ದಾರೆ. ಈಗ ನಿಮ್ಮ ಗೆಳೆಯ ಆ ಸರ್ಕಾರೇತರ ಸಂಸ್ಥೆಗೆ ಅಕೌಂಟೆಂಟ್. ಮೇಲಾಗಿ ಆ ಸಂಸ್ಥೆಯ ಕಂಟೆಂಟ್ ಕ್ರಿಯೇಟರಾಗಿ ಕೈ ತುಂಬಾ ಕೆಲಸ ಮತ್ತು ಜೇಬಿನ ತುಂಬಾ ಹಣ, ಹಾಗೆಯೇ ತಲೆಯ ತುಂಬಾ ಹೊಸ ವಿಚಾರಗಳನ್ನು ಪಡೆಯುತ್ತಿದ್ದಾರೆ. ನೀವಾದರೋ ಖಾಸಗಿ ಕಾಲೇಜಿನಲ್ಲಿ ಕೆಲಸಮಾಡಿ ಆಡಳಿತ ಮಂಡಳಿಯ ನಿಯಮದಂತೆ ಐವತ್ತೆಂಟಕ್ಕೇ ನಿವೃತ್ತಿಹೊಂದಿ ಮನೆ ಸೇರಿದಿರಿ. ನೀವೂ ಇತರ ಸಹೋದ್ಯೋಗಿಗಳಂತೆ ಮತ್ತೇ ಇನ್ನೊಂದೆರಡು ವರ್ಷ ನೌ(ಚಾ)ಕರಿ ಕೊಡಿರೆಂದು ಕಾಲೇಜಿನ ಆಡಳಿತ ಮಂಡಳಿಗೆ ಅರ್ಜಿಹಾಕದೇ ಮನಿಯ (money) ಆಸೆ ಮಾಡದೇ ಮನೆಯಲ್ಲಿ ಇರಲು ಬಯಸಿದಿರಿ. ದಿನವೆಲ್ಲಾ ಅದೇನು ಪುಸ್ತಗಳನ್ನು ಓದುತ್ತೀರಿ ಮತ್ತು ಕನ್ನಡದಲ್ಲಿ ಲೇಖನಗಳನ್ನು ಬರೆಯುತ್ತೀರಿ, ಅದರಿಂದ ಏನೂ ಗಿಟ್ಟುವುದಿಲ್ಲ. ಕನಿಷ್ಟ ಪಕ್ಷ ಈಗಲಾದರೂ ನಿಮ್ಮ ಗೆಳೆಯನಂತೆ ಪ್ರೊಫೆಶನಲ್ ಕಂಟೆಂಟ್ ಕ್ರಿಯೇಟರ್ ಆಗಿರಿ. ಇಲ್ಲವೇ, ಸರಿಯಾಗಿ ಅನ್ನ ಬೇಯಿಸುವುದನ್ನು ಕಲಿಯಿರಿ ಎಂದು ಹೇಳಿ ಊಟ ಮುಗಿಸಿ ಕೈತೊಳೆದುಕೊಂಡಳು.
ಇಂದೇಕೋ, ಒಂದೇ ದಿನದಲ್ಲಿ ರಾಮೇಶ್ವರದ ಸ್ಪಟಿಕ ಲಿಂಗ ದರ್ಶನ ಪಡೆದು, ಅಲ್ಲಿಯ ಸಮುದ್ರದ ಮರಳನ್ನು ಕಾಶಿಯ ಗಂಗಾ ನದಿಯಲ್ಲಿ ಹಾಕಿ ವಿಶ್ವೇಶ್ವರನ ದರ್ಶನ ಮಾಡಿ, ಅಲ್ಲಿಯ ಮರಳನ್ನು ತಂದು ಮತ್ತೆ ರಾಮೇಶ್ವರದ ಸಮುದ್ರದಲ್ಲಿ ಹಾಕಿ ಯಾತ್ರೆಯನ್ನು ಪೂರ್ಣಗೊಳಿಸಿದ (ಪುಣ್ಯ ಪಡೆದ) ಅನುಭವ ನನಗಾಯಿತು, ಇರಲಿ.
ಬೆಳಗ್ಗೆ ಪ್ರಾರಂಭಿಸಿ ಅರ್ಧಕ್ಕೇ ನಿಂತ ಆ ಲೇಖನದ ಬರವಣಿಗೆಯನ್ನು ನಾನು ಮುಂದುವರೆಸಿ....ಕೆಲವು ಸಮಾನ ಮನಸ್ಕರು ಸುಮಾರು ವರ್ಷಗಳ ಹಿಂದೆ ಒಂದು ತೋಟ ಮಾಡಿ ಒಳ್ಳೆಯ ಮಾಲಿಗಳನ್ನು ನೇಮಿಸಿ ಅವರ ಪರಿಶ್ರಮ ಮತ್ತು ಅನುಭವದ ಲಾಭಪಡೆದು ಒಳ್ಳೆಯ ಗೊಬ್ಬರ, ನೀರು ನೀಡಿ ಆರೈಕೆ ಮಾಡಿ ಗಿಡಗಳಲ್ಲಿ ಹೇರಳವಾಗಿ ಹಣ್ಣುಗಳು ಬಿಡುವಂತೆ ಮಾವಿನ ತೋಪು ಬೆಳೆಸಿದರು. ಈಗ, ಫಾರೆನ್ನಿನ ಪ್ರೊಫೆಷನಲ್ ಡಿಗ್ರಿಪಡೆದು ಬಂದ ಇಂದಿನ ಪೀಳಿಗೆಯವರು ತೋಟದ ಜವಾಬ್ದಾರಿಯನ್ನು ವಹಿಸಿಕೊಂಡಿರುವರು. ಹಳೆಯ ತಲೆಮಾರಿನ ಮಾಲಿಗಳು ತಾರತಮ್ಯ ಮಾಡುತ್ತಾರೆ, ನೀರು ಗೊಬ್ಬರಗಳನ್ನು ಕೇವಲ ಮಣ್ಣು, ಬೇರಿಗೆ ಹಾಕುತ್ತಾರೆ ಮರದ ಇತರ ಭಾಗಗಳಿಗೆ ಏಕಿಲ್ಲ ಎಂಬ ಸಮಾನತೆಯ ವಿಚಾರವನ್ನು ತಲೆಯಲ್ಲಿ ತುಂಬಿಕೊಂಡು ಕಾಂಡ, ಎಲೆಗಳಿಗೂ ಬಣ್ಣದ ದ್ರವ ಸಿಂಪಡಿಸುವ ನಿರ್ದೇಶಕ ನೀಡಿ, ವರ್ಷದಿಂದ ವರ್ಷಕ್ಕೆ ಹಣ್ಣುಗಳ ಇಳುವರಿ ಕಡಿಮೆ ಆಯಿತೆಂದು ಹಳೇ ತಲೆಮಾರಿನ ಮಾಲಿಗಳನ್ನು ದೂಷಿಸುವ ಇಂದಿನ ತಲೆಮಾರಿನವರ ಲೇಖನ ಪೂರ್ತಿ ಬರೆಯುವುದರಲ್ಲಿ ತಲ್ಲೀನವಾಗಿದ್ದೆ. ಅಷ್ಟರಲ್ಲಿ ಫೋನು ರಿಂಗಿಸಿತು. ತಲೆ ಎತ್ತಿ ನೋಡಲು ಸಮಯ ಮಧ್ಯರಾತ್ರಿಯಾಗಿತ್ತು. ಫೋನು ಎತ್ತಿ 'ಹಲೋ' ಎಂದಾಗ ಆ ಕಡೆಯಿಂದ ನನ್ನ ಮಿತ್ರ, ಕೇಂದ್ರ ಸರ್ಕಾರದ ಅಧಿಕಾರಿಗಳು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಉಲ್ಲಂಘನೆಯ ಆರೋಪದ ಮೇಲೆ ತಾನು ಕೆಲಸ ಮಾಡುವ NGO ದ ಆಫೀಸ್ ಮೇಲೆ ರೇಡ್ ಮಾಡಿದ್ದು, ಅಲ್ಲಿ ಜಪ್ತಿಯಾದ ಹಣದ ಆಯ-ವ್ಯಯದ ದಾಖಲಾತಿ ಪುಸ್ತಕ ಮತ್ತು ವಿವಿಧ ಮುದ್ರಣ ಸಾಮಗ್ರಿಗಳಲ್ಲಿ ತಾನು ತರ್ಜುಮೆ ಮಾಡಿದ ಪ್ರೊಫೆಷನಲ್ ಲೇಖನಗಳು, ಸೋಶಿಯಲ್ ಮೀಡಿಯಾ ಕಂಟೆಂಟ್ ಗಳ ಬಗ್ಗೆ ವಿಚಾರಣೆ ಮಾಡುವುದಿದೆ ಹಾಗಾಗಿ ಕೂಡಲೇ ಬರಬೇಕು ಎಂದು ತಾಕೀತು ಮಾಡಿದ್ದಾರೆ, ಮತ್ತೆ ಆ ರೇಡ್ ಮಾಡಿದ ತಂಡದ ಮುಖ್ಯಸ್ಥ ನಿನ್ನ ಕಾಲೇಜಿನ ಹಳೆಯ ವಿದ್ಯಾರ್ಥಿಯಂತೆ, ನೀನು ಒಂದು ಮಾತು ಅವನಿಗೆ ನಾನು ನಿರಪರಾಧಿ ಎಂದು ಹೇಳುವೆಯಾ ಎಂದು ವಿನಂತಿಸಿದ. ನಾನು ಸಾಂತ್ವನ ಹೇಳುತ್ತಾ, 'ಧೈರ್ಯ ಕಳೆದುಕೊಳ್ಳಬೇಡ ಗೆಳೆಯಾ, ಆ ನನ್ನ ವಿದ್ಯಾರ್ಥಿ ನನ್ನಿಂದ ಪಡೆದ ಜ್ಞಾನದ, ಅರ್ಹತೆಯ ಆಧಾರದಲ್ಲಿ ನೌಕರಿ ಹೊಂದಿದ್ದು ಹೊರತು ಈ ರಾಜಕಾರಣಿಗಳು ಮಾತನಾಡುವ ಸಮಾನತೆಯ ನಿಯಮದಡಿಯಲ್ಲಿ ನೌಕರಿ ಪಡೆದವನಲ್ಲ. ಹೀಗಾಗಿ, ನನ್ನ ವಿನಂತಿಯನ್ನು ಅವನು ಮನ್ನಿಸುವುದು ಅನುಮಾನ. ಒಂದು ಕೆಲಸಮಾಡು, ಆ ಸಮಾನತೆಯ ಮಾತನಾಡುವ ನಿನ್ನ ಪ್ರೀತಿಯ ರಾಜಕಾರಣಿಗಳು ನೇಮಿಸಿಕೊಂಡ ಪ್ರೊಫೆಷನಲ್ ಕನ್ಸಲ್ಟಂಗ ಸಂಸ್ಥೆಗಳ ಸಲಹೆ ಪಡೆದು ಪರಿಸ್ಥಿತಿಯನ್ನು ನಿಭಾಯಿಸು' ಎಂದು ನನ್ನ ಪ್ರೊಫೆಷನಲ್ ಸಲಹೆ ನೀಡಿ ನಿದ್ರೆಗೆ ಜಾರಿದೆ.
ಡಾ. ಜಯಂತ ಕಿತ್ತೂರ
Very nice Sir
ಪ್ರತ್ಯುತ್ತರಅಳಿಸಿVery nice Sir
ಪ್ರತ್ಯುತ್ತರಅಳಿಸಿSuper sir
ಪ್ರತ್ಯುತ್ತರಅಳಿಸಿಸರ್ ನನ್ನದು ಇದೇ ಪರಿಸ್ಥಿತಿ ಆಗಿದೆ 100% ಖರೆ 😂😂
ಪ್ರತ್ಯುತ್ತರಅಳಿಸಿ