ಐಸ್ಕ್ರೀಮ್ ನ ಮಹಿಮೆ
ವಿದ್ಯಾಕಾಶಿ ಎಂದೇ ಹೆಸರುವಾಸಿಯಾದ ಧಾರವಾಡದಲ್ಲಿ ಮೂರು ವರ್ಷ ಬಿಎಸ್ಸೀ ನಂತರ ಒಂದು ವರ್ಷ ಬಿಎಡ್ ಪದವಿ ಪಡೆದು ನನಗೂ ನಮ್ಮ ತಾಯಿಯಂತೆ ಆದರ್ಶ ಶಿಕ್ಷಕಿಯಾಗುವ ಆಸೆ, ಆದರೆ ಅದೇ ತಾನೆ ಟಿಸಿಎಚ್ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ ತಂದೆಯವರಿಗೆ ಒಂದು ಒಳ್ಳೆಯ ಮನೆತನ ನೋಡಿ ನನ್ನ ಮದುವೆ ಮಾಡಿ ತಮ್ಮ ಜವಾಬ್ದಾರಿಯನ್ನು ಕಡಿಮೆ ಮಾಡಿಕೊಳ್ಳುವ ತವಕ. ಅಂತೂ ಮನೆಯ ಹತ್ತಿರದ ಒಂದು ಶಾಲೆಯಲ್ಲಿ ಪಾಠ ಮಾಡಲು ಪ್ರಾರಂಭಿಸಿದ ಕೆಲವೇ ತಿಂಗಳುಗಳಲ್ಲಿ ದೂರದ ಗುಲ್ಬರ್ಗಾ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರ ಮನೆತನದ ಸಂಬಂಧವನ್ನು ತಂದೆಯವರು ಪ್ರಸ್ತಾಪಿಸಿದರು.ಅವರದು ದೊಡ್ಡ ಕೂಡು ಕುಟುಂಬ. ಮನೆಯ ಮಕ್ಕಳು ಸೊಸೆಯಂದಿರು ಕನಿಷ್ಠವೆಂದರೂ ಸ್ನಾತಕೊತ್ತರ ಪದವಿಧರರು.ವಿಶೇಷ ವೆಂದರೆ ಮೂರೂ ಗಂಡು ಮಕ್ಕಳು ಕ್ರಮವಾಗಿ ಡಿಗ್ರೀ ಕಾಲೇಜು /ಮೆಡಿಕಲ್ ಕಾಲೇಜು/ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರುಗಳು ಎಂದೆಲ್ಲಾ ವಿವರಿಸಿ ಶಿಫಾರಸ್ಸು ಮಾಡಿದರು. ಅಂತೂ ನನ್ನ ಶಿಕ್ಷಕಿಯ ವೃತ್ತಿ ಕೆಲವೇ ತಿಂಗಳುಗಳಲ್ಲಿ ಸಮಾಪ್ತಿ ಹೊಂದಿ, ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕನೊಂದಿಗೆ ಮದುವೆಯಾಗಿ ಅತೀ ಬಿಸಿಲೂರು ಎಂಬ ಖ್ಯಾತಿಯ ಗುಲ್ಬರ್ಗಾ ಸೇರಿದೆ. ಮನೆಯ ಹಿರಿಯ ಸೊಸೆ, ನಗರದ ಪ್ರತಿಷ್ಠಿತ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ನಾನೂ ಅವರ ಶಾಲೆಯಲ್ಲಿ ಇಲ್ಲವೆ ಮನೆ ಸನಿಹದ ರೋಟರಿ ಸಂಸ್ಥೆಯ ಶಾಲೆಯಲ್ಲಿ ಟೀಚರ ಕೆಲಸ ಸೇರಿಕೊಂಡು ನನ್...