ತಪ್ಪು ನನ್ನದೇ...

ಮೊನ್ನೆ ಸೆಪ್ಟೆಂಬರ್ ತಿಂಗಳ ಐದನೇಯ ತಾರೀಖಿನಂದು ನನ್ನ ವಾಟ್ಸಾಪ್ ಇನ್ ಬಾಕ್ಸ್ ನಲ್ಲಿ ಶಿಕ್ಷಕರ ದಿನಾಚರಣೆಯ ಶುಭಾಶಯಗಳ ಸುರಿಮಳೆಯಾಯಿತು. ನಮ್ಮ ರಿಲಯನ್ಸ್ ಜೀಯೋದವರು ಟೆಲಿಕಾಂ ಕ್ಷೇತ್ರದಲ್ಲಿ ಮಾಡಿದ ಕ್ರಾಂತಿಯಿಂದ ಫೋನ್ ಕಾಲ್ ಫ್ರೀ ಇದ್ದರೂ ಯಾರೊಬ್ಬರೂ ಫೋನ್ ಮಾಡಿ ಅಭಿನಂದನೆ ತಿಳಿಸುವ ಧೈರ್ಯಮಾಡಲಿಲ್ಲ. ಪ್ರಾಯಶಃ ಫೋನ್ ಮಾಡಿ ಮಾತನಾಡುವಷ್ಟು ಸಮಯ, ವ್ಯವಧಾನ ಯಾರಲ್ಲೂ ಇಲ್ಲ, ಇಲ್ಲವೇ ಮಾತಿನಲ್ಲಿ ಹೇಗೆ ಅಭಿನಂದನೆಗಳನ್ನು ತಿಳಿಸುವುದು ಎಂದು ಗೊತ್ತಿರಲಿಕ್ಕಿಲ್ಲ ಅಥವಾ ಯಾರೋ ತಯಾರಿಸಿ ಕಳಿಸಿದ ಡಿಜಿಟಲ್ ಫ್ಲೈಯರ್ ಅಥವಾ ಮೆಸೇಜನ್ನು ಫಾರ್ವರ್ಡ್ ಮಾಡುವುದು ಅತೀ ಸುಲಭ ಎಂದು ಅನಿಸಿರಬೇಕು. ಇಲ್ಲವೇ, ಈ ಮೊದಲು ನನ್ನಂಥ ಶಿಕ್ಷಕರಾರಿಗೋ ಫೋನ್ ಮಾಡಿ ಅಭಿನಂದನೆ ತಿಳಿಸಿದಾಗ ಆ ಶಿಕ್ಷಕ ಮಹಾಶಯ ಫೋನಿನಲ್ಲಿ ಇವರನ್ನು ಭಯಂಕರವಾಗಿ ಕೊರೆದಿರುವ ಸಾಧ್ಯತೆಯನ್ನು ತಳ್ಳಿಹಾಕವಂತಿಲ್ಲ. ಇರಲಿ, ಆಂತೂ ಆ ಶುಭಾಶಯ ಸಂದೇಶಗಳಲ್ಲಿ ಮಿಂದೆದ್ದು ಆ ಎಲ್ಲ ಮೆಸೇಜು ಕಳಿಸಿದವರಲ್ಲಿ ನನ್ನಂತೆಯೇ ಶಿಕ್ಷಕರಾಗಿದ್ದವರಿಗೆ ಪರತ ಅಭಿನಂದನಾ ಸಂದೇಶ ಮತ್ತು ಉಳಿದವರಿಗೆ ಎರಡೂ ಕೈ ಜೋಡಿಸಿ ನಮಸ್ಕರಿಸಿದ ಇಮೋಜಿ ಕಳಿಸಿ ನನ್ನ ಕೈ ಬಟ್ಟುಗಳು ಸೋತು ಹೋದವು.

ಬಟ್ಟಿನ ಆ ದಣಿವನ್ನು ಆರಿಸಿಕೊಳ್ಳಲು ಒಂದು ವಾರ ಮೋಬೈಲ್ ಉಪವಾಸ ಮಾಡಬೇಕೆಂಬ ಹೋಮ ಫಿಜಿಯೋಥೆರಪಿ ಸಲಹೆ ನನ್ನ ಶ್ರೀಮತಿಯಿಂದ ಬಂತು. ಆದರೆ, ಇತ್ತೀಚಿನ ನಿವೃತ್ತಿಯ ಹೊಸತರಲ್ಲಿಯ ದಿನಗಳಲ್ಲಿ ಕಣ್ಣುಗಳು ಕೇಳಬೇಕಲ್ಲ, ಅವು ಫೋನಿನಲ್ಲಿ ದಿನವಿಡೀ ಏನೇನೋ ನೋಡ ಬಯಸುವುದು ರೂಢಿಯಾಗಿದೆ. ದಯವಿಟ್ಟು ನನ್ನನ್ನು ಅಪಾರ್ಥ ಮಾಡಿಕೊಳ್ಳಬೇಡಿರಿ. ನಾನೂ ನಿಮ್ಮಂತೆಯೇ ಸಭ್ಯ, ಸುಸಂಸ್ಕೃತ ವ್ಯಕ್ತಿ. ನಾನು ನಿವೃತ್ತ ಶಿಕ್ಷಕ. ಹಾಗಾಗಿ ಮೋಬೈಲ್ ನಲ್ಲಿ ಸಾಹಿತ್ಯದ ವಿಷಯದಲ್ಲಿ ಅದು ಇದು ಓದುವುದು, ಸಂಗೀತ ಕೇಳುವುದು ಇಲ್ಲವೇ ಏನಾದರೂ ಬರೆಯುವುದು ಅಷ್ಟೇ. ಅದು ನನ್ನ ತಪ್ಪೇ. ನಾನು ಓದಲು ಹಾಳೆಯ ಪುಸ್ತಕ ಮತ್ತು ಬರೆಯಲು ಕಾಗದ ಪೆನ್ನು ಉಪಯೋಗಿಸಬಹುದಿತ್ತು, ಇನ್ನು ಸಂಗೀತವನ್ನು ರೇಡಿಯೋ ಇಲ್ಲವೇ ಆಡಿಯೋ ಸಿಸ್ಟಂ ನಲ್ಲಿ ಕೇಳಬಹುದಿತ್ತು. ನಾನು ಕೆಲಸ ಮಾಡುತ್ತಿದ್ದ ಸಂಸ್ಥೆಯವರು ನಿವೃತ್ತಿಯ ವಯಸ್ಸನ್ನು ಇನ್ನೂ ಐವತ್ತೆಂಟಕ್ಕೆ ಮೋಟಕುಗೊಳಿಸಿದ್ದಾರೆ, ಹಾಗಾಗಿ ಶಿಕ್ಷಕ ವೃತ್ತಿಯಿಂದ ಕೊಂಚ ಬೇಗ ನಿವೃತ್ತಿಯಾಗಿದ್ದೀನಿ ಅಷ್ಟೇ. ಇದರಲ್ಲಿ ಅವರದೇನೂ ತಪ್ಪು. ನನಗೆ ಕೊಡುವ ಸಂಬಳದಲ್ಲಿ ಅವರು ಮೂರೋ ನಾಲ್ಕೋ ತರುಣ ಶಿಕ್ಷಕರನ್ನು ನೇಮಿಸಿಕೊಳ್ಳಬಹುದು. ಪ್ರಧಾನಿ ಮೋದಿ ಉತ್ತಮ ಕ್ವಾಲಿಟಿಯ ಬಗ್ಗೆ ಎಷ್ಟು ಬಡಕೊಂಡರೇನು ನಮ್ಮ ದೇಶದಲ್ಲಿ ವ್ಯಾಪಾರದಲ್ಲಿ ಲಾಭ ಪಡೆಯಲು ಕ್ವಾಂಟಿಟಿ ಮುಖ್ಯವೇ ಹೊರತು ಕ್ವಾಲಿಟಿಯಲ್ಲವಲ್ಲ. ಇದೇನು ಶಿಕ್ಷಕರ ದಿನದ ಬಗ್ಗೆ ಹೇಳುತ್ತಾ ನಾನು ವ್ಯಾಪಾರ,ಲಾಭದ ವಿಷಯ ಮಾತಾಡುವುದು ಎಂದಿರೇನು? ಖಂಡಿತ ಇಲ್ಲ ಸ್ವಾಮಿ, ನಾನು ಜೆ.ಎನ್.ಯು.ನ ಸೋಶಿಯಲ್ ಸೈನ್ಸಸ್ ಪ್ರಾಧ್ಯಾಪಕನಲ್ಲ. ನಾನು ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕನಾಗಿದ್ದೆ!!! ವಿಷಯಕ್ಕೆ ಸಂಬಂಧಿಸಿದ್ದುದನ್ನೇ ಹೇಳಲು ಹೊರಟಿದ್ದು. ಕೆಲವು ವರ್ಷಗಳಿಂದೀಚೀಗೆ ಎಲ್ಲ ಇಂಜಿನಿಯರಿಂಗ್ ಕಾಲೇಜುಗಳು ಕಂಪ್ಯೂಟರ್ ಸೈನ್ಸ್ , ಇನ್ಫರ್ ಮೇಶನ್ ಸೈನ್ಸ್, ಡೇಟಾ ಸೈನ್ಸ್,  ಏಐ& ಎಮ್ಮೆಲ್ ಎನ್ನುವ ವಿವಿಧ ಹೆಸರಿನ ಹೊಸತಲೆಮಾರಿನ ಕೋರ್ಸ್ಗಳನ್ನು ಪ್ರಾರಂಭಿಸಿ ಮನಬಂದಂತೆ ಸೀಟುಗಳನ್ನು ಹೆಚ್ಚಿಸಿಕೊಂಡು ಕೈ ತುಂಬಾ ಹಣ ಗಳಿಸಿವೆ. ಇನ್ನು ವಿದ್ಯಾರ್ಥಿ-ಶಿಕ್ಷಕ ಅನುಪಾತ ಹೊಂದಿಸಲು ಕನಿಷ್ಠ ವಿದ್ಯಾರ್ಹತೆಯ ಮತ್ತು ಕನಿಷ್ಠ ವೇತನ ಪಡೆಯುವ ಹೆಚ್ಚಿನ ಸಂಖ್ಯೆಯ ಶಿಕ್ಷಕರನ್ನು ನೇಮಕಮಾಡಿಕೊಳ್ಳುವುದು ಲಾಭದಾಯಕವೇ ಹೊರತು ಹೆಚ್ಚು ಸಂಬಳದ ಉತ್ತಮ ಗುಣಮಟ್ಟದ ನುರಿತ ಶಿಕ್ಷಕರನ್ನಲ್ಲ. ಅಲ್ಲದೇ ನುರಿತ ಶಿಕ್ಷಕರ ಅಗತ್ಯತೆ ವಿದ್ಯಾರ್ಥಿಗಳಿಗಾಗಲಿ, ಪಾಲಕರಿಗಾಗಲಿ ಅರಿವಾಗಿಲ್ಲ. ಅಷ್ಟೇ ಅಲ್ಲ, ನೌಕರಿ ಕೊಡುವ ಕಂಪನಿಗಳಿಗೂ ಅದರ ಅವಶ್ಯಕತೆಯಿಲ್ಲ  ಎಂಬುದು ವಿಪರ್ಯಾಸವೇ ಸರಿ. ಇದರಲ್ಲಿ ಅವರಾರದೂ ತಪ್ಪಿಲ್ಲ. ನಾವು ಆ ಮೂವರಿಗೆ ಸರಿಯಾಗಿ ಮನವರಿಕೆ ಮಾಡಿಸಿಲ್ಲ ಎಂಬುದು ನಮ್ಮ ತಪ್ಪು. ಇರಲಿ, 'ಲಾ ವಿಲ್ ಟೇಕ್ ಇಟ್ಸ್ ಓನ್ ಕೋರ್ಸ್' ಎಂಬಂತೆ ಇಂದಿನ ದಿನಮಾನಗಳಲ್ಲಿ ಗ್ರಾಹಕರ ಜಾಗೃತಿ ಹೆಚ್ಚಿ ಅವರು ಎಚ್ಚೆತ್ತಿರುವ ಕಾರಣ ಈ ವರ್ಷದ ಇಂಜಿನಿಯರಿಂಗ್ ಸೀಟು ಭರ್ತಿ ಪ್ರಕ್ರಿಯೆ ಪೂರ್ಣಗೊಂಡಿದ್ದು ಅನೇಕ ಸಾವಿರ ಕಂಪ್ಯೂಟರ್ ಸೈನ್ಸ್ ಸೀಟುಗಳು ಖಾಲಿ ಉಳಿದಿವೆ ಎಂದು ನೀವೂ ಪತ್ರಿಕೆಗಳಲ್ಲಿ ಓದಿರಬಹುದು, ಇರಲಿ.

ಅಂತೂ ನಾನು, ಹಾಗೆ ಹೀಗೆ ಮಾಡಿ ಮೋಬೈಲ್ ವಾಪರಿಕೆಯನ್ನು ಸ್ವಲ್ಪ ಕಡಿಮೆ ಮಾಡಿ ನನ್ನ ಕೈ ಬಟ್ಟಿನ ನೋವನ್ನು ಕಡಿಮೆಮಾಡಿಕೊಂಡಿದ್ದೆ. ಆದರೆ ಏನು ಮಾಡುವುದು, ಧುತ್ತೆಂದು ಹತ್ತು ದಿನಗಳಲ್ಲಿ ಅಂದರೆ ೧೫ ಸೆಪ್ಟೆಂಬರ್ ರಂದು ಭಾರತ ರತ್ನ ಮೋಕ್ಷ ಗುಂಡಮ್ ವಿಶ್ವೇಶ್ವರಯ್ಯನವರ ಜನ್ಮದಿನದ ಪ್ರಯುಕ್ತ ಇಂಜಿನಿಯರ್ಸ್ ಡೇ ಯ ಅಭಿನಂದನೆಗಳ ಸುರಿಮಳೆ ನನ್ನ ವಾಟ್ಸಾಪ್ ನ ಇನ್ ಬಾಕ್ಸ್ ನಲ್ಲಿ ಮುನ್ನಾದಿನ ರಾತ್ರಿಯಿಂದಲೇ ಭರ್ತಿ ಆಗಲು ಪ್ರಾರಂಭಿಸಿದವು. ಈಗ ಮತ್ತೆ ನಾನು ಪುನಃ ಪರತ್ ಮೆಸೇಜು ಕಳಿಸಿ ಮತ್ತೆ ಕೈಯ ಬಟ್ಟು ನೋಯಿಸಿಕೊಂಡು ಹತ್ತೆ ದಿನಗಳ ಅಂತರದಲ್ಲಿ ಮತ್ತೊಮ್ಮೆ ಮೋಬೈಲ್ ಉಪವಾಸ ಕೈಗೊಳ್ಳುವ ಅನಿವಾರ್ಯತೆ ಕಾಣಿಸಿಕೊಂಡಿದೆ. ಇದಕ್ಕೆಲ್ಲ ಮೂಲ ಕಾರಣವೆಂದರೆ ಕಳೆದ ತಿಂಗಳು ಯಾರೋ ಒಂದು ವಾಟ್ಸಾಪ್ ಗುಂಪೊಂದರಲ್ಲಿ ನಾಳೆ ಯಾವುದೋ ಹಬ್ಬ ಬರುತ್ತಿದೆ ಹಾಗಾಗಿ ಗುಂಪಿನಲ್ಲಿ ಶುಭಾಶಯಗಳ ಮಹಾಪೂರ ಬರುವ ಸಾಧ್ಯತೆ ಇದೆ ಆದಕಾರಣ ಗುಂಪಿನ ಎಡ್ಮಿನ್ ಗಳು ವಾಟ್ಸಾಪ್ ಗುಂಪಿನ ಸ್ಟೇಟಸನ್ನು 'ಎಡ್ಮಿನ್ ಓನ್ಲಿ ಕ್ಯಾನ್ ಸೆಂಡ ಮೆಸೆಜ್' ಮೋಡಿಗೆ ಹಾಕಿರೆಂದು ನೀಡಿದ ಪುಕ್ಕಟೆ ಸಲಹೆ. ಇದರ ಬದಲು, ಇತ್ತೀಚಿಗೆ ನೇಪಾಳದಲ್ಲಿ ಬಂದ ಮಹಾಪೂರದ ಮುನ್ಸೂಚನೆಯನ್ನು ನೀಡಿದ್ದಾರೆ ಪಾಪ ನೂರಾರು ಜನರ ಪ್ರಾಣವಾದರೂ ಉಳಿಯುತ್ತಿತ್ತು ಎಂಬುದು ಬೇರೆ ಮಾತು. ಒಟ್ಟಿನಲ್ಲಿ ಎಡ್ಮಿನ್ ಗಳಿಗೆ ನೀಡಿದ ಈ ಸಲಹೆ ವೈರಲ್ ಆಗಿ ನಾನಿರುವ ಬಹುತೇಕ ವಾಟ್ಸಾಪ್ ಗುಂಪುಗಳ ಎಡ್ಮಿನಗಳು ಎಚ್ಚೆತ್ತುಕೊಂಡಿದ್ದು 'ಎಡ್ಮಿನ್ ಓನ್ಲಿ ಕ್ಯಾನ್ ಸೆಂಡ ಮೆಸೆಜ್' ಮೋಡಿಗೆ ಹಾಕಿದ್ದರು. ಇದರಿಂದಾಗಿ ಸಾಮಾನ್ಯವಾಗಿ ವಾಟ್ಸಾಪ್ ಗುಂಪಿನಲ್ಲಿ ಬರುತ್ತಿದ್ದ 'ಈ ಗುಂಪಿನಲ್ಲಿನ ಸರ್ವ ಶಿಕ್ಷಕರಿಗೆ ಶಿಕ್ಷಕ ದಿನಾಚರಣೆಯ ಶುಭಾಶಯಗಳು' ಎಂಬ ಸಂದೇಶಗಳು ಈ ಸಲ ಬರದೇ ಎಲ್ಲ ಹಿತೈಷಿಗಳು ಪ್ರತ್ಯೇಕವಾಗಿ ಶುಭಾಶಯ ಸಂದೇಶಗಳನ್ನು ರವಾನಿಸುವಂತಾಯಿತು. ಮತ್ತು ಪ್ರತಿ ಸಾರಿ ಹಾಗೆ ಬಂದ ಕಾಮನ್ ಶುಭಾಶಯಗಳ ಸಂದೇಶಗಳಿಗೆ ನಾನೂ 'ಶುಭಾಶಯ ಹೇಳಿದ/ಹೇಳಬೇಕೆಂದು ಕೊಂಡಿದ್ದು ಮರೆತ/ ಹೇಳದ ಸರ್ವ ಸದಸ್ಯರಿಗೆ ಧನ್ಯವಾದಗಳು' ಎಂದು ರಾತ್ರಿ ಮಲಗುವುದಕ್ಕೂ ಮುನ್ನ ಒಂದು ರಿಪ್ಲೈ ಮೆಸೇಜು ಹಾಕಿಬಿಡುತ್ತಿದ್ದೆ, ಇಲ್ಲವೇ ನನಗಿಂತ ಮೊದಲು ಈ ತರಹದ ಧನ್ಯವಾದದ ಮೆಸೇಜನ್ನು ಯಾರಾದರೂ ಗುಂಪಿನಲ್ಲಿ ಹಾಕಿದ್ದರೆ ಆ ಮೆಸೇಜಿಗೆ ರಿಪ್ಲೈ ಆಗಿ '+೧ ' ಎಂದು ಬರೆದು ಕೈ ತೊಳೆದುಕೊಳ್ಳುತ್ತಿದ್ದೆ. ಆದರೆ, ಎಡ್ಮಿನ್ ಗಳಿಗೆ ರವಾನೆಯಾದ ಎಚ್ಚರಿಕೆಯ ಸಂದೇಶದಿಂದಾಗಿ ಈ ಸಲ ನನ್ನ ಎಲ್ಲ ಹಿತೈಷಿಗಳು ನನಗೆ ಶಿಕ್ಷಕರ ದಿನಾಚರಣೆಯ ಮತ್ತು ಇಂಜನಿಯರ್ಸ ಡೇ ದ ಮೆಸೇಜಗಳನ್ನು ಪ್ರತ್ಯೇಕವಾಗಿ ಕಳಿಸಿದರು ಹಾಗಾಗಿ ನಾನೂ ಅವರೆಲ್ಲರಿಗೂ ಪ್ರತ್ಯೇಕ ರಿಪ್ಲೈ ಮೆಸೇಜ್ ಕಳಿಸಬೇಕಾಗಿ ಬಂತು ಅಷ್ಟೇ. ಇದರಲ್ಲಿ ಆ ಪುಕ್ಕಟೆ ಸಲಹೆ ನೀಡಿದವರದೇನೂ ತಪ್ಪಿಲ್ಲ. ತಪ್ಪೆಲ್ಲ ನನ್ನದೇ. ಇಂಜಿನಿಯರಿಂಗ್ ಕಲಿತು ಸರ್ ಎಮ್ ವಿ ಅವರಂತೆ ನಾನೂ ಯಾವುದಾದರೂ ತಾಂತ್ರಿಕ ಸಂಸ್ಥೆಯಲ್ಲಿ ಉದ್ಯೊಗ ಮಾಡುವುದನ್ನು ಬಿಟ್ಟು ನಮ್ಮ ಮನೆತನದ ಉದ್ಯೋಗವಾದ ಶಿಕ್ಷಕ ವೃತ್ತಿಯನ್ನು ಆಯ್ದುಕೊಂಡಿದ್ದು. ಹಾಗಾಗಿ ಸೆಪ್ಟೆಂಬರ್ ತಿಂಗಳು ಹತ್ತೆ ದಿನಗಳ ಅಂತರದಲ್ಲಿ ಶಿಕ್ಷಕ ದಿನಾಚರಣೆಯ ಮತ್ತು ಇಂಜನಿಯರ್ಸ ಡೇ ಎಂಬ ಎರಡೆರಡು ದಿನಾಚರಣೆಗೆ ಅಭಿನಂದನೆಗಳನ್ನು ನಾನು ಪಡೆಯುವುದು. ಒಮ್ಮೆ ಆಲೋಚಿಸಿದರೆ ನಾನು ಅಥವಾ ನನ್ನಂಥವರು ಶಿಕ್ಷಕರೋ ಅಥವಾ ಇಂಜನಿಯರಗಳೋ? ಯಾವ ದಿನದ ಶುಭಾಶಯಗಳನ್ನು ಸ್ವಿಕರಿಸಲು ನಾವು ಅರ್ಹರು ಎಂಬ ವಿಚಾರ. ಈ ಸಂದೇಹಕ್ಕೆ ನನ್ನ ಮಿತ್ರರೊಬ್ಬರು ನೀಡಿದ ಪರಿಹಾರ‌... ನಾವು ಸಾಮಾನ್ಯರಲ್ಲ, ದೇಶ ಕಟ್ಟುವ ಇಂಜನಿಯರಗಳನ್ನು ತಯಾರು ಮಾಡುವ ಶಿಕ್ಷಕರು, ಹಾಗಾಗಿ ಎರಡೂ ದಿನಗಳ ಶುಭಾಶಯಗಳನ್ನು ಪಡೆಯಲು ಅರ್ಹರು ಎಂಬುದು. ಅದು ಹೌದಾದರೇ, ನನ್ನದೊಂದು ಪುಕ್ಕಟೆ ಸಲಹೆ... ಅದೇನೆಂದರೆ ಮುಂದಿನ ವರ್ಷದಿಂದ ನಮ್ಮಂಥವರ ಅಂದರೆ ಇಂಜಿನಿಯರಿಂಗ್ ಕಾಲೇಜಿನ ಶಿಕ್ಷಕರ ದಿನಾಚರಣೆಯನ್ನು ಸೆಪ್ಟೆಂಬರ್ ೫ರ ಶಿಕ್ಷಕರ ದಿನಾಚರಣೆ ಮತ್ತು  ಇಂಜಿನಿಯರ್ಸ್ ಡೇ ಆದ ಸೆಪ್ಟೆಂಬರ್ ೧೫ನೇ ದಿನಾಂಕಗಳ ಮಧ್ಯದ ೧೦ನೇ ಸೆಪ್ಟೆಂಬರ್ ರಂದು 'ಇಂಜಿನಿಯರಿಂಗ್ ಕಾಲೇಜಿನ ಶಿಕ್ಷಕರ ದಿನಾಚರಣೆ' ಎಂದು ಆಚರಿಸಬೇಕು ಎಂಬುದು. ಆದರೆ ಮುಂದಿನ ವರ್ಷದಿಂದ ಸೆಪ್ಟೆಂಬರ್ ತಿಂಗಳಲ್ಲಿ ಮೂರೂ ದಿನ ಅಂದರೆ ೫, ೧೦ ಮತ್ತು ೧೫ ನೇ ತಾರೀಕು ವಾಟ್ಸಾಪ್ ಶುಭಾಶಯಗಳ ಸುರಿಮಳೆ ಆಗಬಹುದೆಂಬ ಭೀತಿಯೂ ಇದೆ. 'ನೀಡ್ ಇಸ್ ದ ಮದರ್ ಆಫ್ ಇನ್ವೆಶ್ನ್' ಎಂಬಂತೆ ನನ್ನದು ಇನ್ನೋಂದು ಪುಕ್ಕಟೆ ಸಲಹೆ... ನನ್ನ ವಿದ್ಯಾರ್ಥಿಗಳಲ್ಲಿ ಯಾರಾದರೂ ಸೆಲ್ ಫೋನಿನ ಸ್ಕ್ರೀನ್ ಮೇಲೆ ಬಟ್ಟುಗಳನ್ನು ಆಡಿಸದೇ ಇನ್ ಬಾಕ್ಸ್ ನ ಸಂದೇಶಗಳನ್ನು ಅವಲೋಕಿಸಿ ಅವಶ್ಯಕತೆಗೆ/ಯೋಗ್ಯತೆಗೆ ತಕ್ಕಂಥ ಉತ್ತರ ತಾನೇ ನೀಡಿ ಅದರ ಕ್ರೆಡಿಟ್ ನನಗೆ ಕೊಡುವ ಮೋಬೈಲ್ App ಇಲ್ಲವೇ ಚಾಟ್ ಬಾಟ್ ತಯಾರಿಸಲಿ ಎಂಬುದು. ಆದರೆ, ಆ App ಹಾಗೆ ಮಾಡುವಲ್ಲಿ ಏನಾದರೂ ಯಡವಟ್ಟು ಮಾಡಿದರೆ ಅದರ ಜವಾಬ್ದಾರಿ ನನ್ನ ಮೇಲೆ ಹೊರಿಸಬಹುದು ಎಂಬ ಅಂಜಿಕೆಯೂ ಇದೆ. ಯಾಕೆಂದರೆ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕನಾಗಿ ಆ ರೀತಿಯ App ತಯಾರು ಮಾಡುವ ಸಲಹೆಯನ್ನು ಕೊಟ್ಟ ತಪ್ಪು ನನ್ನದೇ ಅಲ್ಲವೇ?


ಡಾ. ಜಯಂತ ಕಿತ್ತೂರ 

ಕಾಮೆಂಟ್‌ಗಳು

  1. ತಪ್ಪಿಲ್ ತಪ್ಪಿಲ್ಲ ತಪ್ಪುವುದಿಲ್ಲ

    ಪ್ರತ್ಯುತ್ತರಅಳಿಸಿ
  2. ಹೌದು ತಪ್ಪು ನಮ್ಮದೇ.. ಆದರೂ ಮಾತು ಮಾತಲ್ಲಿ ಒಂದಿಷ್ಟು ಛಡಿ ಏಟು ಕೊಟ್ಟಿರಿ.. ಅದು ಚೊಲೋ ಅದ.

    ಪ್ರತ್ಯುತ್ತರಅಳಿಸಿ
  3. ಇಂಜಿನಿಯರ್, ಹಾಗು ಶಿಕ್ಷಕ ಹೀಗೆ ಡಬಲ್ ಹುದ್ದೆ ಅಂದ ಮೇಲೆ ಡಬಲ್ ಸಂದೇಶ ಸಹಜ.
    ಮೊಬೈಲ್......
    ಬೆರಳಾಡಿಸಿದರೆ ಬಟ್ಟುನೋವು, ಕಣ್ಣಾಡಿಸಿದರೆ ಕಣ್ಣು ನೋವು, ಕಿವಿಗೊಟ್ಟರೆ ಕಿವಿ ನೋವು ಬಿಸಾಕಿ ಬಿಟ್ಟರೆ ಮನಸ್ಸಿಗೆ ನೋವು.!

    ಪ್ರತ್ಯುತ್ತರಅಳಿಸಿ
  4. #ಚಂದನ#ಚಂದ್ರಶೇಖರನವಲಗುಂದಸೆಪ್ಟೆಂಬರ್ 15, 2026 ರಂದು 10:25 PM ಸಮಯಕ್ಕೆ

    ತಪ್ಪು ಮಾಡೋದು!ಕ್ಷಮಾ ಮಾಡ್ರಿ ಅನ್ನೋದು☺️

    ಪ್ರತ್ಯುತ್ತರಅಳಿಸಿ
  5. #ಚಂದನ#ಚಂದ್ರಶೇಖರನವಲಗುಂದಸೆಪ್ಟೆಂಬರ್ 15, 2026 ರಂದು 10:27 PM ಸಮಯಕ್ಕೆ

    ತಪ್ಪಾದ್ರ ಕ್ಷಮಿಸ್ರಿ ಅನ್ನೋದು ಇಲ್ಲ ಹೊಟ್ಟ್ಯಾಗ ಹಾಕ್ಕೋಳ್ರಿ ಅನ್ನೋದು.☺️

    ಪ್ರತ್ಯುತ್ತರಅಳಿಸಿ
  6. ನಾನು ಕಾಲ್ ಮಾಡಿದ್ದೆ ಸರ್ .!!! ಆದರೂ ನಿಮ್ಮ ಸಲಹೆ ಚೆನ್ನಾಗಿದೆ

    ಪ್ರತ್ಯುತ್ತರಅಳಿಸಿ
  7. Another great article! I can understand your pain in replying to so many messages. But , I feel you should be proud to receive so many messages.. as long as they are personal messages. They all definitely tried to remember you.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸತ್ತ ಗುರು !!!

ನನ್ನ ಇಂಜಿನಿಯರಿಂಗ್ ಬ್ರ್ಯಾಂಚ...

ಸಮಸ್ಯೆಯ ಸಮಸ್ಯೆ