ಉ.ಸೇ.ಆ...
ನಮ್ಮೂರಿನಲ್ಲಿನ ಒಂದು ಸಾಂಸ್ಕೃತಿಕ ಸಂಘಟನೆ ಕಳೆದ ಹತ್ತಾರು ವರ್ಷಗಳಿಂದ ಪಕ್ಷಮಾಸ, ಅಧಿಕಮಾಸ, ಚಾತುರ್ಮಾಸ ಎನ್ನದೇ ಪ್ರತೀ ಮಾಸ ತಪ್ಪದೇ ನಗೆ ಸಂಜೆ ಕಾರ್ಯಕ್ರಮ ಏರ್ಪಡಿಸುತ್ತಾ ಬಂದಿದೆ. ಈ ಕಾರ್ಯಕ್ರಮ ಇಷ್ಟು ದೂರವನ್ನು ಕ್ರಮಿಸಿ ಬಂದಿರುವುದರ ಹಿನ್ನೋಟವನ್ನು ಅವಲೋಕಿಸಿದರೆ ಒಂದು ವಿಷಯ ಬಹಳ ಸ್ಪಷ್ಟವಾಗಿ ಕಾಣಿಸುತ್ತದೆ. ಪ್ರತೀ ತಿಂಗಳ ಕಾರ್ಯಕ್ರಮಗಳಲ್ಲಿ ರಸವತ್ತಾಗಿ ಮಾತನಾಡುವವರು, ಸ್ವರಚಿತ ಹಾಸ್ಯಪದ್ಯ/ಚುಟುಕು ಪ್ರಸ್ತುತ ಪಡಿಸುವವರು, ಅಥಿತಿ ಉಪನ್ಯಾಸಕರು, ಕಲಾಕಾರರು, ಭಾಷಣಕಾರರು, ಮತ್ತು ತಿಂಗಳ ಕಾರ್ಯಕ್ರಮದ ಥೀಮ್, ಕಾರ್ಯಕ್ರಮ ಜರುಗಿಸುವ ನವನವೀನ ಶೈಲಿ ಇತ್ಯಾದಿ ಬದಲಾದರೂ ಪ್ರತೀ ತಿಂಗಳ ಆಮಂತ್ರಣ ಪತ್ರಿಕೆಯಲ್ಲಿನ "ಉಪಹಾರ ಸೇವಿಸಿಯೇ ಆಸೀನರಾಗಿ" ಎಂಬ ಪೇಟೆಂಟ್ ರಿಜಿಸ್ಟರ್ ಮಾಡದ ಆ ಪಂಚ್ ಲೈನ್ ಮಾತ್ರ ಬದಲಾಗಿಲ್ಲ. ಅಷ್ಟೇಅಲ್ಲ, ಆ ಉಪಹಾರದ ಕಾಯಂ ಐಟಂ 'ಉಪ್ಪಿಟ್ಟು' ಮತ್ತು ಅದರ ರುಚಿ ಕೂಡಾ ಅಷ್ಟೇನೂ ಬದಲಾಗಿಲ್ಲ ಎಂಬುದು ಒಂದು ವಿಶೇಷ.
ಪ್ರತೀ ತಿಂಗಳು ಈ ಕಾರ್ಯಕ್ರಮ ತಪ್ಪದೇ ಒಂದು ನಿಶ್ಚಿತ ತಿಥಿಯಂದು ಸಂಜೆ ೪.೩೦ ರಿಂದ ಸುಮಾರು ಎರಡು-ಎರಡೂವರೆ ಗಂಟೆ ಜರುಗುತ್ತದೆ. ಕೆಲವೊಂದು ಸಲ ನಗರದಲ್ಲಿ ಇತರ ಯಾವುದೋ ಸಾಂಸ್ಕೃತಿಕ ಕಾರ್ಯಕ್ರಮ ಇದೇ ಸಮಯದಲ್ಲೇ ಏರ್ಪಟ್ಟಾಗ ಅಲ್ಲಿಯ ಪ್ರೇಕ್ಷಕರ ಉಪಸ್ಥಿತಿ ಕಡಿಮೆ ಇರುತ್ತದೆಯಂತೆ. ಆ ಕಾರ್ಯಕ್ರಮದ ಆಯೋಜಕರು, ನಮ್ಮ ಘನ ಸರ್ಕಾರ ಬಿಟ್ಟಿ ಭಾಗ್ಯಗಳನ್ನು ನೀಡಿ ಮತದಾರರನ್ನು ಒಲಿಸಿಕೊಂಡಂತೆ ನೀವೂ ನಿಮ್ಮ ಆಮಂತ್ರಣ ಪತ್ರಿಕೆಯಲ್ಲಿ "ಉಪಹಾರವನ್ನು ಸೇವಿಸಿಯೇ ಆಸೀನರಾಗಿ"ಎಂದು ಪ್ರಕಟಸಿ ನಗರದ ಎಲ್ಲ ಪ್ರೇಕ್ಷಕರನ್ನು ನೀವೇ ಆಕರ್ಷಿಸುವಿರಿ ಎಂದು ಗೊಣಗಿದ ಪ್ರಸಂಗಗಳಿವೆಯಂತೆ. ಒಟ್ಟಿನಲ್ಲಿ, ಈ ಪಂಚ್ ಲೈನ್ ಎಷ್ಟು ಪ್ರಸಿದ್ಧವಾಗಿದೆಯೆಂದರೆ ಇತ್ತೀಚಿಗೆ ರಾಜ್ಯದ ವಿವಿಧ ನಗರಗಳಲ್ಲಿ ಏರ್ಪಡಿಸುವ ವಿವಿಧ ಬಗೆಯ ಸಭೆ, ಸಮಾರಂಭ,ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜಕರೂ ಆಮಂತ್ರಣ ಪತ್ರಿಕೆಯಲ್ಲಿ "ಉಪಹಾರವನ್ನು ಸೇವಿಸಿಯೇ ಆಸೀನರಾಗಿ"(ಉ.ಸೇ.ಆ.) ಎಂದು ಮುದ್ರಿಸುವುದು ಮತ್ತು ಉಪಹಾರಕ್ಕೆ ಉಪ್ಪಿಟ್ಟನ್ನೇ ಆಯ್ಕೆ ಮಾಡುವುದೂ ಇದೆಯಂತೆ. ತಮ್ಮ ಈ ಕಾರ್ಯಕ್ರಮದ ಪಂಚ್ ಲೈನ್ ಇಷ್ಟೊಂದು ಜನಪ್ರಿಯತೆ ಮತ್ತು ಪ್ರಸಿದ್ಧಿ ಪಡೆಯಬಹುದು ಎಂದು ಮೊದಲೇ ತಿಳಿದಿದ್ದರೆ ಕಾರ್ಯಕ್ರಮದ ಆಯೋಜಕರು ಅದರ ಪೇಟೆಂಟ್ ಪಡೆಯುತ್ತಿದ್ದರೇನೋ ಗೊತ್ತಿಲ್ಲ, ಇರಲಿ.
ಅನೇಕ ವರ್ಷಗಳಿಂದ ಬೆಂಗಳೂರಿನಿಂದ ಬೆಳಗಾವಿಗೆ ಪ್ರಯಾಣಮಾಡಲು ನನ್ನ ಪ್ರಥಮ ಆಯ್ಕೆ ನಮ್ಮ ರಾಣಿ ಚೆನ್ನಮ್ಮ ರೈಲು. ಇತ್ತೀಚಿನ ವರ್ಷಗಳಲ್ಲಿ ನಮ್ಮ ಬೆಳಗಾವಿಯವರಿಗಾಗಿಯೇ ಪ್ರಾರಂಭವಾದ ಅಂಗಡಿ ಎಕ್ಸಪ್ರೆಸ್ ಬೆಳಿಗ್ಗೆ ಬೇಗ ಬೆಳಗಾವಿಯನ್ನು ತಲುಪಿ ಜನರು ತಮ್ಮ ಆಫೀಸಿಗೆ ಸರಿಯಾದ ಸಮಯಕ್ಕೆ ಹೋಗಲು ಬಹಳ ಅನುಕೂಲವಾಗಿದ್ದರೂ ಆ ಗಾಡಿ ನನ್ನ ಎರಡನೇಯ ಆಯ್ಕೆ. ಇದಕ್ಕೆ ಮುಖ್ಯ ಕಾರಣ ಆ ಗಾಡಿ ಬೆಳಗ್ಗೆ ಲೋಂಡಾ ಸ್ಟೇಷನ್ನಿಗೆ ಬರುವ ಸಮಯ. ಹೌದು ನಾನು ತಲುಪುವ ಸ್ಥಾನ ಬೆಳಗಾವಿಯಾಗಿದ್ದರಿಂದ ರೈಲು ಲೋಂಡಾ ಸ್ಟೇಷನ್ ಗೆ ಯಾವಾಗ ಬಂದರೇನು ಎಂಬ ಪ್ರಶ್ನೆ ನಿಮಗೆ ಬರುವುದು ಸಹಜ. ಆದರೆ, ನನ್ನ ತಿಪ್ಪಲು ಬೇರೇನೇ. ಬೆಳಿಗ್ಗೆ ಏಳೂವರೆ-ಎಂಟು ಗಂಟೆಯ ಆಸುಪಾಸಿನಲ್ಲಿ ಲೋಂಡಾ ಸ್ಟೇಷನನಲ್ಲಿ ಸಿಗುವ ಉಪ್ಪಿಟ್ಟು ಎಷ್ಟು ರುಚಿಕರ ಎಂದರೆ ನಾನು ರಾಣಿ ಚೆನ್ನಮ್ಮ ರೈಲಿನಲ್ಲಿ ತಡವಾಗಿ ಬೆಳಗಾವಿ ತಲುಪಿ ನನ್ನ ಕೆಲಸಕ್ಕೆ ಸ್ವಲ್ಪ ತಡವಾದರೂ ಪರವಾಗಿಲ್ಲ ಆದರೆ ಆ ಲೋಂಡಾ ಸ್ಟೇಷನ್ನಿನ ಉಪ್ಪಿಟ್ಟಿನ ಸವಿಯನ್ನು ನಾನು ಬಿಡಲಾರೆ. ಅದೇ ತರಹ ಯರಗಟ್ಟಿ ಬಸ್ ನಿಲ್ದಾಣದಲ್ಲಿನ ಕ್ಯಾಂಟೀನ್ ನಲ್ಲಿ ಮೊದಲು ಲಭ್ಯವಿರುತ್ತಿದ್ದ ಉಪ್ಪಿಟ್ಟುಕೂಡ. ನನ್ನ ಶ್ರೀಮತಿ ಪ್ರತಿ ಗುರುವಾರ ಸಂಜೆಯ ಉಪವಾಸಕ್ಕೆ ಮಾಡುವ ಉಪ್ಪಿಟ್ಟು ಗದಗ ಉಪ್ಪಿಟ್ಟೋ ಅಥವಾ ಲೋಂಡಾ/ಯರಗಟ್ಟಿ ಉಪ್ಪಿಟ್ಟೋ ಎಂಬ ನನ್ನ ಆಯ್ಕೆಯನ್ನು ಕೇಳುವಳು. ನನ್ನ ನಿವೃತ್ತಿಯ ನಂತರ ಇತ್ತೀಚೆಗೆ ಪ್ರತೀ ತಿಂಗಳು ತಪ್ಪದೇ ನಾನು ಹಾಜರಾತಿ ಹಾಕುವ ಈ ಕಾರ್ಯಕ್ರಮದ ಪರಿಣಾಮವಾಗಿ ನನ್ನ ಶ್ರೀಮತಿ ವಿಚಾರಿಸುವ ಉಪ್ಪಿಟ್ಟಿನ ಆಯ್ಕೆಯಲ್ಲಿ ಒಂದು ಹೊಸ ಸೇರ್ಪಡೆ ಆಗಿದೆ. ಅದೇ "ಉಸೇಆ" ಉಪ್ಪಿಟ್ಟು.
ಒಂದು ಸೃಜನಾತ್ಮಕ ಕಾರ್ಯಕ್ರಮವನ್ನು ಪ್ರತೀ ತಿಂಗಳು ತಪ್ಪದೇ ಇಷ್ಟು ವರ್ಷಗಳ ತನಕ ನಿರಂತರವಾಗಿ ಯಾವುದೇ ಸರ್ಕಾರ ಅಥವಾ ದೇಶಿ/ವಿದೇಶಿ ಎನ್. ಜಿ. ಓ.ಗಳ ಸದು(ದುರು)ದ್ದೇಶದ ಸಹಾಯ ಇಲ್ಲದೇ ಕೇವಲ ನಾಗರಿಕರ ವೈಯಕ್ತಿಕ ಪ್ರಾಯೋಜಕತ್ವದ ಆಧಾರದ ಮೇಲೆ ಯಶಸ್ವಿಯಾಗಿ, ನಿರಂತರವಾಗಿ ರಾಜ್ಯದ ಗಡಿ ಭಾಗವಾದ ನಮ್ಮೂರಿನಲ್ಲಿ ನಡೆಸುವುದು ಸಾಮಾನ್ಯ ಸಂಗತಿ ಏನಲ್ಲ. ರಾಜ್ಯದ ಬಹುತೇಕ ಎಲ್ಲ ನಿಜ ಹಾಸ್ಯ, ಲಘು ಹಾಸ್ಯ, ಗಂಭೀರ ಹಾಸ್ಯ ಸಾಹಿತಿ/ಮಾತುಗಾರರ ಮಾತಿನ ರುಚಿಯನ್ನು ಈ ಕಾರ್ಯಕ್ರಮದ ಆಯೋಜಕರು ತಮ್ಮ ಪ್ರೇಕ್ಷಕರಿಗೆ ಉಣಬಡಿಸಿದ್ದಾರೆ. ಅಷ್ಟೇಅಲ್ಲ, ಈ ಕಾರ್ಯಕ್ರಮ ನಮ್ಮೂರಲ್ಲಿ ಅನೇಕ ಹಾಸ್ಯ ಸಾಹಿತಿ/ಮಾತುಗಾರರನ್ನು ಗುರುತಿಸಿ, ಅವರ ಪ್ರತಿಭಾ ಪ್ರದರ್ಶನಕ್ಕೆ ಅವಕಾಶವನ್ನು ನೀಡಿ ಪ್ರೋತ್ಸಾಹಿಸಿ ಬೆಳೆಸಿದೆ. ಈ ಯಶಸ್ಸಿನ ಹಿಂದೆ ಆಯೋಜಕರ ತಂಡ ಮತ್ತು ಸಂಚಾಲಕರು ಪ್ರತೀ ತಿಂಗಳು ಪಡುವ ಪರಿಶ್ರಮ ಅಷ್ಟಿಷ್ಟಲ್ಲ. ಅದಕ್ಕಾಗಿ ಅವರಿಗೆ ನನ್ನದೊಂದು ಸಲಾಂ... ಅಲ್ಲಲ್ಲಾ, ದೀರ್ಘದಂಡ ನಮಸ್ಕಾರ.
ಇದು ಹತ್ತು ಹನ್ನೆರಡು ವರ್ಷಗಳ ಹಿಂದಿನ ಮಾತು, ಗುಲ್ಬರ್ಗಾ ವಿಶ್ವವಿದ್ಯಾಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕರಾಗಿದ್ದ ನಮ್ಮ ತಂದೆ ಅಲ್ಲಿನ ಬಿಸಿಲು ತಡೆಯದೇ ಬೇಸಿಗೆ ಕಳೆಯಲು ನನ್ನಲ್ಲಿಗೆ ಬರುತ್ತಿದ್ದರು. ಆಗ ಅನೇಕ ಸಾಹಿತ್ಯಾಸಕ್ತರು ಅವರನ್ನು ಭೇಟಿಯಾಗಿ ಸಾಹಿತ್ಯದ ಚರ್ಚೆ, ಹರಟೆಗೆಂದು ನಮ್ಮ ಮನೆಗೆ ಬರುತ್ತಿದ್ದರು. ಅವರಲ್ಲಿ ಈ ಕಾರ್ಯಕ್ರಮದ ಸಂಚಾಲಕರೂ ಒಬ್ಬರಾಗಿದ್ದರು. ನಾನು ನನ್ನ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ವೃತ್ತಿಯ ಒತ್ತಡದಲ್ಲಿರುತ್ತಿದ್ದ ಕಾರಣ ಮನೆಗೆ ಬಂದ ಸಾಹಿತ್ಯಾಸಕ್ತರನ್ನು ಸ್ವಾಗತಿಸುವುದು ಇಲ್ಲವೇ, ಅವರ ಚರ್ಚೆಯ ಮಧ್ಯದಲ್ಲಿ ಚಹಾ ಕೊಟ್ಟು ಉಭಯ ಕುಶಲೋಪರಿ ವಿಚಾರಿಸುವುದನ್ನಷ್ಟೇ ಮಾಡುತ್ತಿದ್ದೆ. ಒಂದೆರಡು ಸಲ ಈ ಕಾರ್ಯಕ್ರಮದ ಸಂಚಾಲಕರು ತಾವು ಪ್ರಾರಂಭಿಸಿದ ಕಾರ್ಯಕ್ರಮಕ್ಕೆ ಬರಬೇಕೆಂದು ನನಗೆ ಆವ್ಹಾನ ನೀಡಿದ್ದರು. ಆದರೆ, ನಿಜ ಹೇಳಬೇಕೆಂದರೆ ಆಗ ನಾನು ಒಂದು ಸಲವೂ ಕಾರ್ಯಕ್ರಮಕ್ಕೆ ಹೋಗುವ ವಿಚಾರ ಮಾಡಲಿಲ್ಲ. ಅದಕ್ಕೆ ಎರಡು ಕಾರಣಗಳು. ಒಂದು, ಆ ದಿನಗಳಲ್ಲಿ ಅದೇನೋ ಅಂತಾರಲ್ಲ, "Record for everything and everything for record sake" ಎಂಬಂತೆ, ನಮ್ಮ ಇಂಜಿನಿಯರಿಂಗ್ ಕಾಲೇಜಿನಲ್ಲಿ OBE (ಫಲಿತಾಂಶ ಆಧಾರಿತ ಶಿಕ್ಷಣ), NAAC,NBA, NIRF ದಂತಹ ಶೈಕ್ಷಣಿಕ ಗುಣಮಟ್ಟದ ಮೌಲ್ಯಮಾಪನದ ಹೊಸ ಹೊಸ ಮಾನದಂಡಗಳ ಬೇಕು ಬೇಡದ ದಾಖಲಾತಿ, ಪ್ರಮಾಣ ಪತ್ರಗಳ ಕಾಗದದ ಗುಡ್ಡೆಗಳನ್ನು ಉತ್ಪಾದನೆ ಮಾಡುವುದರಲ್ಲಿ ನಾವೆಲ್ಲ ದಿನಾಲೂ ಸಂಜೆಯ ತನಕ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೆವು. ಇನ್ನು ಎರಡನೇಯ ಮತ್ತು ಹೆಚ್ಚು ಮಹತ್ವದ ಕಾರಣವೆಂದರೆ ಕಾರ್ಯಕ್ರಮದ ಸಂಚಾಲಕರು LIC ಏಜೆಂಟ್ ಆಗಿದ್ದರು ಎಂಬ ವಿಷಯ. ಆಗಿನ ದಿನಮಾನಗಳಲ್ಲಿ LIC ಏಜೆಂಟರುಗಳು ಯಾವುದಾದರೂ ಒಂದು ವಿಷಯದ ಕುರಿತು ಕಾರ್ಯಗಾರ, ಕಾರ್ಯಕ್ರಮ ಏರ್ಪಡಿಸಿ ನೌಕರಿ ಮಾಡುವ ನನ್ನಂತಹ ಬಕರಾಗಳನ್ನು ಆವ್ಹಾನಿಸಿ ಕಾರ್ಯಕ್ರಮದಲ್ಲಿ ತಿಂಡಿ, ತೀರ್ಥ (ಅಂದರೆ ಚಹಾ/ಕಾಫಿ/ತಂಪು ಪಾನೀಯ ಹೊರತು ನೀವು ಅಂದುಕೊಂಡಂತಹ ತೀರ್ಥವಲ್ಲ) ನೀಡಿ ಆವ್ಹಾನಿತರನ್ನು ತಮ್ಮ ಹಂಗಿನಲ್ಲಿ ಸಿಲುಕಿಸಿ ಯಾವುದಾದರೊಂದು LIC ಪಾಲಿಸಿ ಮಾಡಿಸುವುದು ಸಾಮಾನ್ಯವಾಗಿತ್ತು. ನಮ್ಮ ತಂದೆಯವರು ಕಾಲವಾದ ನಂತರದಲ್ಲೂ ವಿವಿಧ ಸಂದರ್ಭಗಳಲ್ಲಿ ಭೇಟಿಯಾದಾಗಲೊಮ್ಮೆ ಸಂಚಾಲಕರು ನನ್ನನ್ನು ತಮ್ಮ ಕಾರ್ಯಕ್ರಮಕ್ಕೆ ಬರಬೇಕೆಂದು ತಪ್ಪದೇ ಒತ್ತಾಯಿಸುತ್ತಿದ್ದರು. ನಾನು ಪ್ರತೀಸಲವೂ ನಿವೃತ್ತಿಯ ನಂತರದಲ್ಲಿ ಬರುವುದಾಗಿ ಹೇಳಿ ತಪ್ಪಿಸಿಕೊಳ್ಳುತ್ತಿದ್ದೆ. ಅದೇ ಪ್ರಕಾರ, ಸೇವಾ ನಿವೃತ್ತಿಯ ನಂತರ ಇನ್ನಾವ LIC ಪಾಲಿಸಿ ಇಳಿಸುವ ಪ್ರಮೇಯವಿಲ್ಲವೆಂಬ ಧೈರ್ಯದಿಂದ ನಾನು ಅವರ ಆಮಂತ್ರಣ ಸ್ವೀಕರಿಸಿ ಕಾರ್ಯಕ್ರಮಕ್ಕೆ ಹೋಗಲು ಪ್ರಾರಂಭಿಸಿದೆ. ಆವಾಗಲೇ ಈ ಕಾರ್ಯಕ್ರಮದ ಉದ್ದೇಶ ಮತ್ತು ಅದನ್ನು ನಡೆಸುವ ಉತ್ಸಾಹ, ಉಮೇದಿ, ಅದಕ್ಕಾಗಿ ಆ ತಂಡ ಪಡುವ ಕಷ್ಟಕಾರ್ಪಣ್ಯಗಳ ಪರಿಚಯವಾಯಿತು. ಅಲ್ಲದೇ ಸಂಚಾಲಕರು ನಾನು ತಿಳಿದಂತಹ LIC ಏಜೆಂಟ್ ಅಲ್ಲವೆಂದು ತಡವಾಗಿ ಅರ್ಥವಾಯಿತು. ಬದಲಾಗಿ ಪ್ರತಿ ತಿಂಗಳು ಈ ಕಾರ್ಯಕ್ರಮ ನಡೆಯುವ ಸಭಾಂಗಣದಲ್ಲಿ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಒಂದು ದೊಡ್ಡ ಗೋಡೆ ಗಡಿಯಾರವನ್ನು ಹಾಕಿಸಿರುವರು.
ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಎಲ್ಲರೂ ಸ್ಟೇಜಿನ ಮೇಲೇರಿ ಮೈಕಾಸುರನ ಮಿತ್ರ ತಾ(ವಾಕ್)ನ್ಸೇನ್ ಆದರೆ ಹೇಗೆ? ಕೆಲವರಾದರೂ ಕೆಳಗೆ ಕುಳಿತು ಮಾತುಕೇಳುವ ಕಾನ್ಸೇನ್ ಆಗಬೇಕಲ್ಲ. ಹಾಗಾಗಿ ಸಾಮಾನ್ಯವಾಗಿ ನಾನು ಪ್ರೇಕ್ಷಕನಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಯಸುವವ. ಆದರೆ, ಆಯೋಜಕರು ಪ್ರತೀ ತಿಂಗಳು ಏನಾದರೊಂದು ಹೊಸ ತರಹದ ಕಾರ್ಯಕ್ರಮ ನೀಡುವ ತವಕದಲ್ಲಿರುತ್ತಾರೆ. ಒಂದು ದಿನ ಕಾರ್ಯಕ್ರಮದ ಸಂಚಾಲಕರು ನನಗೆ ಫೋನ್ ಮಾಡಿ ಈ ತಿಂಗಳು ಕೆಲವು ಪ್ರಸಿದ್ಧ ಹಾಸ್ಯ ಸಾಹಿತಿಗಳ ಲಲಿತ ಪ್ರಬಂಧಗಳನ್ನು ಓದುವ ಕಾರ್ಯಕ್ರಮ ಏರ್ಪಡಿಸಿದ್ದೇವೆ, ಅದಕ್ಕೆ ನೀವು ಒಬ್ಬ ಪ್ರಸಿದ್ಧ ಲೇಖಕರ ಪ್ರಬಂಧವನ್ನು ಓದಬೇಕು ಎಂದು ಆಗ್ರಹಿಸಿದರು. ನನಗೆ ಕಾಲೇಜಿನಲ್ಲಿ ಇಂಜಿನಿಯರಿಂಗ್ ವಿಷಯದ ಮೇಲೆ ಗಂಟೆಗಟ್ಟಲೆ ಲೆಕ್ಟರ್ ಕೊಟ್ಟು ರೂಢಿ ಇದೆಯೇ ಹೊರತು ಇತರ ಲೇಖಕರ ಅದರಲ್ಲೂ ಪ್ರಸಿದ್ಧ ಹಾಸ್ಯ ಸಾಹಿತಿಗಳ ಲಲಿತ ಪ್ರಬಂಧ ಓದುವುದು ಸ್ವಲ್ಪ ಕಷ್ಟ ಎಂದು ನನ್ನ ಅಳಲನ್ನು ತೋಡಿಕೊಂಡೆ. ಆದರೆ, ಆಗಲೇ ಅನೇಕ ಬಕರಾಗಳಿಗಾಗಿ ಪ್ರಯತ್ನಿಸಿ ಸೋತಿದ್ದ ಮಹನೀಯರು ನನ್ನನ್ನು ಈ ಕಾರ್ಯಕ್ಕೆ ಒತ್ತಾಯಿಸಿ ಒಪ್ಪಿಸಿದರು.
ಪ್ರತೀ ತಿಂಗಳಂತೆ ಅಂದೂ ಯಥಾ ಪ್ರಕಾರ ಪ್ರೇಕ್ಷಕರು ಬಂದು ಉಪಹಾರ ಸೇವಿಸಿಯೇ ಆಸೀನರಾಗಿ ಕಾರ್ಯಕ್ರಮ ತಡವಾಗಿ ಪ್ರಾರಂಭವಾಯಿತು. ಅನಿವಾರ್ಯವಾಗಿ ಆದಿನ ಸ್ಟೇಜಿನ ಮೇಲೆ ಕೂಡುವ ಪ್ರಸಂಗ ನನಗೆ ಒದಗಿಬಂದಿತ್ತು. ಸ್ಟೇಜಿನ ಎದುರಿಗೆ, ಪ್ರೇಕ್ಷಕರ ಹಿಂದಿನ ಗೋಡೆಗೆ ನೇತು ಹಾಕಿದ್ದ ದೊಡ್ಡ ಗೋಡೆ ಗಡಿಯಾರ ನನ್ನ ಕಣ್ಣಿಗೆ ಬಿದ್ದಿತು. ಅದರ ಮೇಲೆ ಕಾಣಿಕೆ ನೀಡಿದವರೆಂದು ನಮ್ಮ ಕಾರ್ಯಕ್ರಮದ ಸಂಚಾಲಕರ ಹೆಸರನ್ನು ನಮೂದಿಸಲಾಗಿತ್ತು. ಪ್ರಬಂಧ ಓದುವ ನನ್ನ ಪಾಳಿ ಬಂದಾಗ ಆಗಲೇ ಗಡಿಯಾರದಲ್ಲಿ ಗಂಟೆ ೬.೧೦ ಆಗಿತ್ತು. ಹಾಗೂ ಹೀಗು ಪ್ರಬಂಧವನ್ನು ಓದಿಮುಗಿಸಿ ಬಂದು ಕೂತು ನೀರು ಕುಡಿದು ಸಾವರಿಸಿಕೊಂಡು ಇತತರು ಓದುತ್ತಿದ್ದ ಹಾಸ್ಯ ಪ್ರಬಂಧಗಳನ್ನು ಕೇಳುವಲ್ಲಿ ಮಗ್ನನಾಗಿದ್ದೆ. ಇಬ್ಬರು, ಮೂವರು ಪ್ರಬಂಧ ಮಂಡಿಸಿ ಮುಗಿಸಿದರೂ ಎದುರಿಗಿನ ಗೋಡೆ ಗಡಿಯಾರ ೬.೧೦ ಗಂಟೆ ಎಂದೇ ತೋರಿಸುತ್ತಿತ್ತು. ನಾನು ಈ ವಿಷಯವನ್ನು ಪಕ್ಕದಲ್ಲಿ ಕೂತಿದ್ದ ಸಂಚಾಲಕರ ಗಮನಕ್ಕೆ ತಂದೆ. ಅವರು ಹೌದು ಇದು ನನ್ನ ಗಮನಕ್ಕೆ ಬಂದು ಸುಮಾರು ತಿಂಗಳುಗಳಾದವು. ಅದರ ಬ್ಯಾಟರಿ ಸೆಲ್ ಖಾಲಿಯಾಗಿದೆ. ನಾನೂ ಅದನ್ನು ಬದಲಿಸುವ ವಿಚಾರ ಮಾಡಿಲ್ಲ ಎಂದರು. ಸಾವಿರಾರು ರೂಪಾಯಿಗಳ ಗೋಡೆ ಗಡಿಯಾರ ದೇಣಿಗೆ ನೀಡಿ, ಒಂದು ಹತ್ತು ರೂಪಾಯಿಯ ಬ್ಯಾಟರಿ ಸೆಲ್ ಬದಲಿಸಲು ಯಾಕೆ ಇವರು ಕಂಜೂಸಿ ಮಾಡುವರು ಎಂದು ನಾನೂ ನಿಮ್ಮಂತೆಯೇ ಯೋಚಿಸಿದೆ. ಆದರೆ, ಅಷ್ಟರಲ್ಲಿಯೇ ಅವರು, 'ನೀವು ಯೋಚಿಸಿರುವುದು ಸರಿಯಾಗಿದೆ, ಆದರೆ ನನ್ನ ಉದ್ದೇಶವೇ ಬೇರೆ ಇದೆ,ಅದನ್ನು ನಂತರ ತಿಳಿಸುವೆ' ಎಂದು ಹೇಳಿದರು. ನನ್ನ ಮನಸ್ಸಿನಲ್ಲಿ ಬಂದ ವಿಚಾರ ಇವರಿಗೆ ಹೇಗೆ ತಿಳಿಯಿತು ಎಂದು ನನಗೆ ಸ್ವಲ್ಪ ಆಶ್ಚರ್ಯವಾಯಿತಾದರೂ ಅನಿವಾರ್ಯವಾಗಿ ಕಾರ್ಯಕ್ರಮ ಮುಗಿಯುವ ತನಕ ನನ್ನ ಕುತೂಹಲ ಹತ್ತಿಕ್ಕಿಕೊಂಡು ಕುಳಿತಿದ್ದೆ.
ಕಾರ್ಯಕ್ರಮ ಮುಗಿಸಿ ಕಾರಿನಲ್ಲಿ ಮನೆಯ ಕಡೆಗೆ ಬರುವಾಗ ನಾನು ಆ ಗೋಡೆ ಗಡಿಯಾರದ ಬ್ಯಾಟರಿ ಸೆಲ್ ಬದಲಿಸುವ ವಿಷಯವನ್ನು ಸಂಚಾಲಕರೊಂದಿಗೆ ಮತ್ತೆ ಪ್ರಸ್ತಾಪಿಸಿದೆ. ಅವರು, 'ನೋಡಿ ಸರ್, ನಮ್ಮ ಕಾರ್ಯಕ್ರಮಕ್ಕೆ ನೌಕರಸ್ಥ ಮತ್ತು ಗ್ರಹಸ್ಥ ಗ್ರಹಿಣಿಯನ್ನೂ ಒಳಗೊಂಡಂತೆ ಸಮಾಜದ ವಿವಿಧ ಸ್ಥರದ ಪ್ರೇಕ್ಷಕರು ನಗರದ ವಿವಿಧ ಬಡಾಣೆಗಳಿಂದ ಬಸ್ಸು, ಸ್ಕೂಟರ್,ಆಟೋ, ಕಾರು ಮುಂತಾದ ವಾಹನಗಳಲ್ಲಿ ಬರುವರು. ಹಾಗೆ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಸ್ ಹೋಗಲು ಎಲ್ಲರಿಗೂ ಅನುಕೂಲವಾಗಲೆಂದು ಸರ್ಕಾರಿ ರಜಾ ದಿನವಾದ ತಿಂಗಳ ಎರಡನೇ ಶನಿವಾರ ಸಂಜೆ ೪.೩೦ ರಿಂದ ೬.೩೦ ಗಂಟೆ ಎಂದು ನಿರ್ಧರಿಸಿ ಕಾರ್ಯಕ್ರಮ ಏರ್ಪಡಿಸುತ್ತೇವೆ ಮತ್ತು ಆಮಂತ್ರಣ ಪತ್ರಿಕೆಯಲ್ಲಿ ತಪ್ಪದೇ ಉಪಹಾರ ಸೇವಿಸಿಯೇ ಆಸೀನರಾಗಿ ಎಂದು ಬರೆಯುತ್ತೇವೆ. ಆದರೇ, ಅಂದು ಸರ್ಕಾರಿ ರಜಾ ದಿನವಾದುದರಿಂದ ಬಹಳಷ್ಟು ಜನ ಮಧ್ಯಾಹ್ನದ ಊಟ ಲೇಟಾಗಿ ಮಾಡಿರುತ್ತಾರೆ. ಅವರಿಗೆ ೪.೩೦ಕ್ಕೆ ನಮ್ಮ ಉಪಹಾರವಾದ ಉಪ್ಪಿಟ್ಟು ತಿನ್ನಲು ಹಸಿವೆ ಇರುವುದಿಲ್ಲ. ಹೀಗಾಗಿ ಸ್ವಲ್ಪ ನಿಧಾನವಾಗಿ ಬಂದು ಉಪಹಾರ ತಿಂದು ಆಸೀನರಾಗುವುದು. ಇದರಿಂದಾಗಿ ಸಾಮಾನ್ಯವಾಗಿ ನಮ್ಮ ಕಾರ್ಯಕ್ರಮ ಸ್ವಲ್ಪ ತಡವಾಗಿ ಪ್ರಾರಂಭವಾಗುವುದು. ಆಗ ೬.೧೦ ಗಂಟೆಗೆ ನಿಂತ ಗೋಡೆ ಗಡಿಯಾರವನ್ನು ಸ್ಟೇಜಿನ ಮೇಲಿರುವ ಅಂದಿನ ಕಾರ್ಯಕ್ರಮದ ಮಾತಿನ ಮಲ್ಲರಿಗೆ ತೋರಿಸಿ ತಮ್ಮ ಮಾತನ್ನು ಹಿತ ಮಿತವಾಗಿ ಹೇಳಲು ಉತ್ತೇಜಿಸುತ್ತೇವೆ. ಅನೇಕಸಲ ಕಾರ್ಯಕ್ರಮ ಮುಗಿಯಲು ತಡವಾದಾಗಲೂ ಪ್ರೇಕ್ಷಕರು ಗೋಡೆ ಗಡಿಯಾರ ನೋಡಿ ಅರೇ, ಕಾರ್ಯಕ್ರಮ ಬಹಳ ಚೆನ್ನಾಗಿತ್ತು ಎಷ್ಟು ಬೇಗ ಮುಗಿಯಿತು ಎಂದೂ ಅಂದುಕೊಳ್ಳುವರು. ಅಷ್ಟೇ ಅಲ್ಲದೇ, ಅನೇಕ ಗೃಹಿಣಿಯರು ಗೋಡೆ ಗಡಿಯಾರ ನೋಡಿ ಮನೆಗೆ ವಾಪಸ್ಸಾಗಲು ಇನ್ನೂ ಬಹಳ ಲೇಟೇನೂ ಆಗಿಲ್ಲ ಎಂದು ಟೆನ್ಷನ್ ಮಾಡಿಕೊಳ್ಳುವುದಿಲ್ಲ. ಈ ರೀತಿ ಆ ಗೋಡೆ ಗಡಿಯಾರ ೬.೧೦ ಗಂಟೆಗೆ ನಿಂತಿರಿವುದು ನನಗೆ ಅನುಕೂಲವೇ ಆಗಿದೆ, ಹಾಗಾಗಿ ನಾನು ಅದರ ಬ್ಯಾಟರಿ ಸೆಲ್ ಬದಲಿಸುವ ಗೋಜಿಗೆ ಹೋಗಲಿಲ್ಲ' ಎಂದರು. 'ಅದು ಸರಿ, ಆದರೆ ನನ್ನ ಮನಸ್ಸಿನಲ್ಲಿ ಬಂದ ವಿಚಾರ ನಿಮಗೆ ಹೇಗೆ ಗೊತ್ತಾಯಿತು' ಎಂದು ಕುತೂಹಲದಿಂದ ಕೇಳಿದೆ. ಅದಕ್ಕೆ ಅವರು 'ನೋಡಿ ಇಷ್ಟು ವರ್ಷಗಳ ಕಾರ್ಯಕ್ರಮದ ಸಂಚಾಲಕತ್ವ ನನಗೆ ಎಲ್ಲ ರೀತಿಯ ಜನರ ಸಂಪರ್ಕ ಮತ್ತು ಅವರ ಮಾತು, ವಿಚಾರಗಳಿಂದ ವಿವಿಧ ಜನರ ಮನಸ್ಸನ್ನು ಅರಿಯುವ ನನ್ನ ಜ್ಞಾನವನ್ನು ಸಮೃದ್ಧಿಗೊಳಿಸಿದೆ. ಅಷ್ಟೇ ಅಲ್ಲದೇ, ತಾಳ್ಮೆ, ಸಮಾಧಾನ ಮತ್ತು ಕೆಲವೊಂದು ಸಲ ಮೌನದ ಮಹತ್ವವನ್ನು ಮನದಟ್ಟು ಮಾಡಿಸಿದೆ' ಎಂದು ಮಾರ್ಮಿಕವಾಗಿ ಹೇಳಿದರು.
ಮಾರ್ಗ ಮಧ್ಯದಲ್ಲಿ ನಾವು ಚಹಾ ಕುಡಿಯಲೆಂದು ಕಾರು ನಿಲ್ಲಿಸಿ ಒಂದು ಪ್ರತಿಷ್ಠಿತ ಹೊಟೇಲಗೆ ನುಗ್ಗಿದೆವು. ಕ್ಯಾಶ್ ಕೌಂಟರ್ ನಲ್ಲಿದ್ದ ಹೊಟೇಲು ಮಾಲೀಕರು ಗುರುತಿನ ನಗೆ ಬೀರಿ ನಮ್ಮ ಸಂಚಾಲಕರನ್ನು ಸ್ವಾಗತಿಸಿದರು. ಸಂಜೆಯ ಸಮಯ ಹೊಟೇಲನಲ್ಲಿ ಗ್ರಾಹಕರು ಜಾಸ್ತಿ ಇದ್ದರೂ ಹೇಗೋ ಒಂದು ಟೇಬಲನಲ್ಲಿ ಇಬ್ಬರೇ ಗ್ರಾಹಕರು ಕೂತಿರುವುದನ್ನು ಗಮನಿಸಿ ನಾವು ಇನ್ನುಳಿದ ಎರಡು ಚೇರ್ ಎಳೆದು ಕೂತೆವು. ಬೈಟು ಚಹಾ ಎಂದು ಆರ್ಡರ್ ನೀಡಲು ವೇಟರನನ್ನು ನಮ್ಮ ಕಣ್ಣುಗಳು ಹುಡುಕುತ್ತಿದ್ದವು. ಅಷ್ಟರಲ್ಲೇ ಒಬ್ಬ ವೇಟರ್ ನಗುಮುಖದಿಂದ ಎರಡು ಪ್ಲೇಟ್ ಉಪ್ಪಿಟ್ಟು ನಮ್ಮ ಮುಂದೆ ತಂದಿಟ್ಟ. ನಾವು, ಬಹುಶಃ ಪಕ್ಕದ ಗ್ರಾಹಕರು ಮಾಡಿದ ಆರ್ಡರ್ ಇರಬಹುದೆಂದು ಅವರ ಕಡೆಗೆ ಆ ಉಪ್ಪಿಟ್ಟಿನ ಪ್ಲೇಟುಗಳನ್ನು ಸರಿಸಿದೆವು. ಅವರು ತಮ್ಮ ಮಾರಿಯನ್ನು ಸಿಂಡರಿಸಿ ಸಂಜೆಯ ವೇಳೆ ತಾವು ಪಾವ್ ಭಾಜಿ ತಿನ್ನಲು ಹೊಟೇಲಿಗೆ ಬಂದಿರುವುದೇ ಹೊರತು ಈ ಕಾಂಕ್ರೀಟ್ ಉಪ್ಪಿಟ್ಟು ತಿನ್ನಲು ಅಲ್ಲ, ನಿಮ್ಮ ತಿಂಡಿಯನ್ನು ನೀವೇ ತಿನ್ನಿರಿ ಎಂದು ಆ ಉಪ್ಪಿಟ್ಟಿನ ಪ್ಲೇಟುಗಳನ್ನು ನಮ್ಮತ್ತ ತಳ್ಳಿದರು. ನಾವು ಏನು ನಡೆಯುತ್ತಿದೆ ಎಂದು ತಿಳಿಯದೇ ಆ ವೇಟರನನ್ನು ಹುಡುಕಿ ಕರೆದು ನಮಗೆ ಬೈಟು ಚಹಾ ಬೇಕು ಮತ್ತು ಈ ಉಪ್ಪಿಟ್ಟನ್ನು ನಾವು ಆರ್ಡರ್ ಮಾಡಿಲ್ಲ ಎಂದು ಹೇಳಿದೆವು. ಅವನು ಮತ್ತೆ ಮುಗುಳು ನಗುತ್ತಾ 'ಸರ್ ನನಗೆ ಗೊತ್ತು ನೀವು ಉಪ್ಪಿಟ್ಟನ್ನು ಆರ್ಡರ್ ಮಾಡಿಲ್ಲ ಎಂದು. ಆದರೇ, ನಮ್ಮ ಹೊಟೆಲ್ ಮಾಲೀಕರು ತಮ್ಮ ಕಡೆಯಿಂದ ಇದನ್ನು ನಿಮಗೆ ಉಚಿತವಾಗಿ ನೀಡಲು ಹೇಳಿರುವರು' ಎಂದ. ನಾವು ಆಶ್ಟರ್ಯದಿಂದ ಮತ್ತು ಅನಿವಾರ್ಯವಾಗಿ ಆ ಉಪ್ಪಿಟ್ಟನ್ನು ಮಧ್ಯ ಮಧ್ಯ ನೀರು ಕುಡಿಯುತ್ತಾ ತಿಂದು ತೇಗಿದೆವು. ನಂತರ ಬಂದ ಬಿಸಿ ಬಿಸಿ ಬೈಟೂ ಚಹಾ ಸೇವಿಸಿ ಬಿಲ್ ಪಾವತಿಸಲು ಕೌಂಟರಗೆ ಹೋದಾಗ ಹೊಟೇಲ್ ಮಾಲೀಕರು 'ನಿಮ್ಮ ಉಪಹಾರ ಸೇವಿಸಿಯೇ ಆಸೀನರಾಗಿ ಉಪ್ಪಿಟ್ಟಿಗೆ ಹೋಲಿಸಿದರೆ ನಮ್ಮ ಹೊಟೆಲ್ ಉಪ್ಪಿಟ್ಟು ಹೇಗಿತ್ತು' ಎಂದು ಸಂಚಾಲಕರಿಗೆ ವಿಚಾರಿಸಿದರು. ನಿಮ್ಮ ಹೊಟೇಲಿನ ಚಹಾ ಅಮೃತ ಸಮಾನ ಎನಿಸಿತು ಎಂದು ಹೊಗಳಿ ಅಲ್ಲಿಂದ ಜಾಗ ಖಾಲಿ ಮಾಡಿ ನಮ್ಮ ಪ್ರಯಾಣ ಮುಂದುವರೆಸಿದೆವು.
ನಾನು ' ಹೌದುss, ನಿಮ್ಮ ಕಾರ್ಯಕ್ರಮದ ಈ ಪಂಚ್ ಲೈನ್ "ಉಪಹಾರ ಸೇವಿಸಿಯೇ ಆಸೀನರಾಗಿ" ತುಂಬಾ ಪ್ರಸಿದ್ಧವಾಗಿದೆ ಆದರೇ, ನೀವು ಪ್ರತೀಸಲವೂ ಆ ಉಪ್ಪಿಟ್ಟನ್ನೇ ಏಕೆ ಕೊಡುವುದು? ಮಿರ್ಚಿ-ಮಂಡಕ್ಕಿ, ಒಡಾಪಾವ್ ಮುಂತಾದವನ್ನೂ ನೀಡಬಹುದಲ್ಲಾ...'ಎಂದು ಮಾತಿಗೆಳೆದೆ. ಆಗ ಅವರ ಮತ್ತೊಂದು ಅನುಭವದ ಮಾತು ಹೊರಬಿತ್ತು.'ನೋಡಿ ಸರ್, ಈ ಮೊದಲೇ ಹೇಳಿದಂತೆ ನಮ್ಮ ಕಾರ್ಯಕ್ರಮದ ಬೆನ್ನೆಲುಬು ನಮ್ಮ ಪ್ರೇಕ್ಷಕರು ಮತ್ತು ಅವರ ಆರೋಗ್ಯದ ಕಾಳಜಿ ನಮ್ಮದು. ಅವರು ನಮ್ಮ ಹಾಸ್ಯ ಕಾರ್ಯಕ್ರಮಕ್ಕೆ ಬಂದು ಭಾಗವಹಿಸಿ ನಕ್ಕು ನಲಿದು ತಮ್ಮ ತಿಂಗಳ ಡೋಪಮೈನ್ ಡೋಜ ಪಡೆದು ಮನಸ್ಸನ್ನು ಹಗುರವಾಗಿಸಿಕೊಳ್ಳಲಿ ಎಂಬುದು ನಮ್ಮ ಉದ್ದೇಶ. ಈ ಧಾವಂತದಲ್ಲಿ ನಾವು ನಮ್ಮ ವಿವಿಧ ವಯಸ್ಸಿನ ಪ್ರೇಕ್ಷಕರ ಹಲ್ಲುಬಾಯಿ ಮತ್ತು ಹೊಟ್ಟೆಯ ಸ್ಥಿತಿಯ ಕಾಳಜಿ ಮಾಡಬೇಕಾದುದು ನಮ್ಮ ಜವಾಬ್ದಾರಿ. ಎಲ್ಲರೂ ಚಟ್ನಿ, ಸಾಂಬಾರಿನ ಅವಶ್ಯಕತೆ ಇಲ್ಲದೇ ಕೈಯಲ್ಲಿ ಪೇಪರ್ ಪ್ಲೇಟನಲ್ಲಿ ಹಿಡಿದು ಸಲೀಸಾಗಿ ಎಲ್ಲರೂ ಅಂದರೆ, ನೈಸರ್ಗಿಕ ಅಥವಾ ಕ್ರತಕ ಹಲ್ಲುಗಳಿದ್ದವರು ಮತ್ತು ಇಲ್ಲದವರೂ ಬಾಯಿಯಲ್ಲಿ ಹಾಕಿಕೊಂಡು, ಅದನ್ನು ಜಗಿಯುವಲ್ಲಿ ಜಾಸ್ತಿ ಪ್ರಯತ್ನ ಪಡದೇ ಹಾಗೂ ಸಮಯವನ್ನು ಹಾಳುಮಾಡದೇ ಅನಾಯಾಸವಾಗಿ ನುಂಗಿ ನೀರು ಕುಡಿಯಲು ಮತ್ತು ಒಮ್ಮೆ ಆಸೀನರಾದ ಮೇಲೆ ಕಾರ್ಯಕ್ರಮ ಮುಗಿಯುವ ತನಕ ಹೊಟ್ಟೆಯ ಕಡೆಗೆ ಗಮನ ಹರಿಯದಂತೆ ಮಾಡಲು ಯೋಗ್ಯ ಉಪಹಾರ ನಮ್ಮ ಈ ಉಪ್ಪಿಟ್ಟು' ಎಂದು ಬಹಳ ತಾರ್ಕಿಕವಾಗಿ ವಿವರಿಸಿದರು. ನಾನು 'ಈ ನಿಮ್ಮ ತರ್ಕ ಚನ್ನಾಗಿದೆ ಆದರೆ, ಈ ವಿಷಯದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರುವ ಪ್ರೇಕ್ಷಕರ ಅಭಿಪ್ರಾಯ ಏನು?' ಎಂದು ಕೇಳಿದೆ. 'ನಿಮ್ಮ ಕಾಲೇಜಿನಲ್ಲಿ ಪ್ರಾಧ್ಯಾಪಕರು ಹೇಗೆ ಉಪನ್ಯಾಸ ಮಾಡುವರು ಎಂದು ವಿದ್ಯಾರ್ಥಿಗಳಿಂದ ಪಡೆಯುವ ಫೀಡಬ್ಯಾಕ ದಂತೆ ನಾವು ನಮ್ಮ ಕಾರ್ಯಕ್ರಮದ ಯಶಸ್ಸನ್ನು ಸರ್ವಥಾ ಅಳೆಯುವುದಿಲ್ಲ. ಅನೇಕ ವರ್ಷಗಳಿಂದ ಪ್ರತೀ ತಿಂಗಳ ಕಾರ್ಯಕ್ರಮಕ್ಕೆ ತಪ್ಪದೇ ಬರುವ ನಮ್ಮ ಪ್ರೇಕ್ಷಕರು ನಮ್ಮ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿ. ರನ್ನನ ಗದಾಯುದ್ಧಕಾವ್ಯದಲ್ಲಿ "ನೆಲಕಿರಿವೆನೆಂದು ಬಗೆವಿರೆ ಛಲಕಿರಿವೆಂ..." ಎಂದು ದುರ್ಯೋಧನ ಹೇಳಿದಂತೆ ನಮ್ಮ ಅಭಿಮಾನಿ ದೇವತೆಗಳು ಪ್ರತೀ ತಿಂಗಳು ಬರುವುದು ಈ ಕಾರ್ಯಕ್ರಮದ ಆಸ್ವಾದನೆಗೆಯೇ ಹೊರತು ನಾವು ಕೊಡುವ ಉಪಹಾರಕ್ಕಾಗಿ ಅಲ್ಲ. ನಮ್ಮ ಪ್ರೇಕ್ಷಕರಲ್ಲಿ ಅನೇಕರು ನಾವು ನೀಡುವ ಉಪಹಾರ ಸೇವಿಸಿ ಆಸೀನರಾದರೆ ಅವರ ಸಂಪೂರ್ಣ ಲಕ್ಷ್ಯವೆಲ್ಲಾ ಕೇವಲ ಕಾರ್ಯಕ್ರಮದ ಕಡೆಗೇ ಇರುತ್ತದೆ. ಅಲ್ಲಿನ ಹಾಸ್ಯ ಪ್ರಸಂಗಗಳ ವಿವರಗಳನ್ನು ತುಂಬಾ ಆಸ್ವಾದಿಸುವರು. ಮತ್ತು ಅಂದಿನ ಅತಿಥಿಗಳ ಮಾತುಗಾರಿಕೆಯ ಆಕಲನ/ವಿಶ್ಲೇಷಣೆ ಚೆನ್ನಾಗಿ ಮಾಡುವರು. ಆದರೆ, ಇತರರಲ್ಲಿ ಕೆಲವರ ಪ್ರಥಮ ಗಮನ ಉಪಹಾರದ ಕಡೆಗೆ ನಂತರ ಕಾರ್ಯಕ್ರಮದ ಕಡೆಗೆ. ನಮ್ಮ ಎರಡೂ ತರಹದ ಪ್ರೇಕ್ಷಕರು ನಮ್ಮ ಉಪಹಾರ ವ್ಯವಸ್ಥೆಯ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇನ್ನೂ ಕೆಲವರು ನಮ್ಮ ಕಾರ್ಯಕ್ರಮಕ್ಕೆ ಬರುವ ವಿವಿಧ ಬಗೆಯ ಅತಿಥಿಗಳ ಮಾತಿಗಿಂತಲೂ ಉಪ್ಪಿಟ್ಟಿನ ರುಚಿಯಲ್ಲಿ ಆಗುವ ಸ್ವಲ್ಪ ವ್ಯತ್ಯಾಸವನ್ನು ಬಹಳ ಸೂಕ್ಷ್ಮವಾಗಿ ಗಮನಿಸಿ ನಮ್ಮ ಗಮನಕ್ಕೆ ತಂದ ಉದಾಹರಣೆಗಳೂ ಇವೆ. ಆದರೆ, ನಮಗೆ ಸಮಾಧಾನದ ಸಂಗತಿ ಎಂದರೆ ನಮ್ಮ ಎಲ್ಲ ಪ್ರೇಕ್ಷಕರೂ ಉಪಹಾರ ಸೇವಿಸಿಯೇ ಆಸೀನರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿವುದು' ಎಂದು ವಿವರಿಸುತ್ತಿದ್ದರು. ಅವರ ಮಾತನ್ನು ಆಲಿಸುವ ಭರದಲ್ಲಿ ನನಗರಿವಿಲ್ಲದಂತೆ ನನ್ನ ಕಾರು ರಸ್ತೆಯ ಕೆಂಪು ದೀಪವನ್ನು ಜಂಪ್ ಮಾಡಿತ್ತು. ಅಲ್ಲಿದ್ದ ಪೋಲಿಸ್ ನಮ್ಮನ್ನು ತಡೆದು ಚಲನ್ ಹರಿಯಲು ಮುಂದಾದ. ಕೂಡಲೇ ನನ್ನ ತಪ್ಪಿನ ಅರಿವಾಗಿ 'ಬನ್ನಿ ಪೋಲಿಸ್ ಸಾಹೇಬರೇ ಪಕ್ಕದ ಹೋಟೆಲ್ ನಲ್ಲಿ ಉಪಹಾರ ಸೇವಿಸಿಯೇ ಆಸೀನರಾಗಿ ವಿಷಯವನ್ನು ಬಗೆಹರಿಸುವಾ' ಎಂದು ನಾನು ವಿನಂತಿಸಿದೆ. ಕಾರಿನಲ್ಲಿ ಇಣುಕಿ, ನನ್ನ ಪಕ್ಕದ ಸೀಟಿನಲ್ಲಿದ್ದ ಸಂಚಾಲಕರನ್ನು ಕಂಡು 'ನಮಸ್ಕಾರ ಉಪಹಾರ ಸೇವಿಸಿಯೇ ಆಸೀನರಾಗಿ ಸಾಹೇಬರೇ, ನನ್ನ ಪತ್ನಿ ನಿಮ್ಮ ಕಾರ್ಯಕ್ರಮದ ಅಭಿಮಾನಿ ಪ್ರೇಕ್ಷಕರಲ್ಲಿ ಒಬ್ಬರು. ಒಮ್ಮೆ ನಮ್ಮ ಮನೆಗೆ ಬನ್ನಿ ಉಪಹಾರ ಸೇವಿಸಿಯೇ ಆಸೀನರಾಗಿ ಮಾತನಾಡುವಾ' ಎಂದು ಆವ್ಹಾನ ನೀಡಿದ ಪೋಲಿಸ್, ನಂತರ ನನ್ನಕಡೆಗೆ ತಿರುಗಿ, 'ಇನ್ನು ಮೇಲೆ ಈ ರೀತಿ ರೆಡ್ ಲೈಟ್ ಜಂಪ್ ಮಾಡಬೇಡಿರಿ, ಹಾಗೇನಾದರೂ ಮಾಡಿದರೆ ನಮ್ಮ ಸ್ಟೇಷನ್ ನ ಉಪಹಾರ ಸೇವಿಸಿ ಲಾಕಪ್ ನಲ್ಲಿ ಆಸೀನರಾಗಬೇಕಾದೀತು' ಎಂದು ಎಚ್ಚರಿಸಿದ!!!
ಡಾ.ಜಯಂತ ಕಿತ್ತೂರ
ಉ ಸೇ ಆ ಎಂಬ ಈ ಮೂರು ಅಕ್ಷರಗಳು ಈ ಲೇಖನಕ್ಕೆ ಪ್ರೇರಣೆ ಆಗಿದ್ದು ಉಪ್ಪಿಟ್ಟಿನ ರುಚಿ ಗಿಂತಲೂ ಅತ್ಯಂತ ಅದ್ಭುತ ತುಂಬಾ ಚೆನ್ನಾಗಿದೆ.. ಪೊಲೀಸ್ನ ಮಡದಿ ಕಾರ್ಯಕ್ರಮದ ಅಭಿಮಾನಿ. ಆಗಿದ್ದು ನಿಮ್ಮ ಪುಣ್ಯ😂😂👍👍👌👌
ಪ್ರತ್ಯುತ್ತರಅಳಿಸಿಊ ಮ ಹೇ in Gulbarga
ಪ್ರತ್ಯುತ್ತರಅಳಿಸಿಸ್ವಾರಸ್ಯಕರ ಹಾಸ್ಯದ ಲೇಪನದ ಬರಹ. ಸರಾಗವಾಗಿ ಓದಿಸಿಕೊಂಡು ಹೋಯಿತು. ಅಭಿನಂದನೆಗಳು
ಪ್ರತ್ಯುತ್ತರಅಳಿಸಿ👌 ಚೆನ್ನಾಗಿ ಬಂದಿದೆ ಲೇಖನ. ಉಪ್ಪಿಟ್ಟಿನ ಮಹಿಮೆಯೇ ಹಾಗೆ. ಪೊಲೀಸನನ್ನು ಸಹ ಬಗ್ಗಿಸಿದೆ😁
ಪ್ರತ್ಯುತ್ತರಅಳಿಸಿತುಂಬ ಚೆನ್ನಾಗಿ ಮೂಡಿ ಬಂದಿದೆ. ನವಿರಾದ ಹಾಸ್ಯದಿಂದ ಕೂಡಿದ ಲಲಿತ ಪ್ರಬಂಧ. ಓದಲು ಪ್ರಾರಂಭಿಸಿದಾಗ ಮುಗಿದುದೇ ಗೊತ್ತಾಗುವುದಿಲ್ಲ. ಪ್ರತಿಯೊಂದು ಘಟನೆಗಳು ಮುಂದೆನಾಗುತ್ತದೆ ಎಂಬ ಉತ್ಸುಕತೆಯನ್ನು ಉಳಿಸಿಕೊಂಡು ಹೋಗುತ್ತವೆ. ಅಭಿನಂದನೆಗಳು.
ಪ್ರತ್ಯುತ್ತರಅಳಿಸಿನಿಮ್ಮ ವೃತ್ತಿ ಅನುಭವದೊಂದಿಗೆ ಮಿಳಿತವಾದ ಸಾಹಿತ್ಯ ಲೇಖನಗಳು ಉತ್ತಮವಾಗಿ ಮೂಡಿ ಬರುತ್ತಿವೆ. ಹೀಗೇ ಮುಂದುವರೆಯಲಿ.
ಪ್ರತ್ಯುತ್ತರಅಳಿಸಿಉ ಸೇ ಆ ಒಂದು ಸೊಗಸಾದ ಹಾಸ್ಯ ಲೇಖನ ಸರ್... ಚೆನ್ನಾಗಿ ಮೂಡಿ ಬಂದಿದೆ. ಅಭಿನಂದನೆಗಳು
ಪ್ರತ್ಯುತ್ತರಅಳಿಸಿಲೇಖನvತುಂಬಾ ಚೆನ್ನಾಗಿ ಮೂಡಿ ಬಂದಿದೆ.. Uppittina ಮಹಿಮೆಯೇ ಹಾಗೆ.ಅಭಿನಂದನೆಗಳು
ಪ್ರತ್ಯುತ್ತರಅಳಿಸಿಉಪ್ಪಿಟ್ಟಿನ ಕಥೆ ಕುತೂಹಲದಿಂದ ತಯಾರಾಗಿದ್ದು,ಅದನ್ನು ಓದಿದೆ.ಸ್ವಾದಿಷ್ಟದ ಅನುಭವ ಆಯಿತು.
ಪ್ರತ್ಯುತ್ತರಅಳಿಸಿಅಭಿನಂದನೆಗಳು.
Ja
ಪ್ರತ್ಯುತ್ತರಅಳಿಸಿಪ್ರಿಯಜಯಂತ್ ತಮ್ಮ ಲೇಖನವು ಹರಟೆ ಮಾದರಿಯಲ್ಲಿ ಸೊಗಸಾಗಿ ಮೂಡಿ ಬಂದಿದೆ. ಕೊನೆಯ ವರೆಗೆ ಓದಿಸಿಕೊಂಡು ಹೋಗುತ್ತದೆ
ಪ್ರತ್ಯುತ್ತರಅಳಿಸಿ