ಅಲ್ಲಿದೆ ನಮ್ಮನೆ...
ಈ ಭೂಮಿಯ ಮೇಲೆ ಇಂದು ಇರುವವರಾರೂ ಸ್ವರ್ಗವನ್ನು, ಅಲ್ಲಿಯ ಸುಖ, ಸಮೃದ್ಧಿ, ಸಂತೋಷ, ಸಂಭ್ರಮ, ಸೌಲಭ್ಯ ಇತ್ಯಾದಿಗಳನ್ನು ಅಥವಾ ೫೬ ಸಖಿಯರ ಸ್ವಛಂದ ಸೇವಾಸುಖವನ್ನು ಆನಂದಿಸಿ ವಾಪಸ್ ಬಂದು ವಿವರಿಸಿದವರಿಲ್ಲ. ಆದರೂ, ಸ್ವರ್ಗದ ಬದುಕಿನ ಬಗ್ಗೆ ತಮ್ಮದೇ ಆದ ಕಲ್ಪನೆಗಳನ್ನು ವಿವಿಧ ಧಾರ್ಮಿಕ ಗ್ರಂಥಗಳನ್ನು ಓದಿ ಅಥವಾ ಕೇಳಿ ಅರಿಯದವರು ತೀರಾ ವಿರಳ. ಅಂತಹದರಲ್ಲಿ ಪುಟಾಣಿ ಏಜೆಂಟ್ 123 ಸಿನಿಮಾದಲ್ಲಿ 'ಇಲ್ಲೇ ಸ್ವರ್ಗ ಇಲ್ಲೇ ನರಕಾ ಮೇಲೇನಿಲ್ಲ ಸುಳ್ಳು...'ಎಂದು ನಮ್ಮ ರೆಬೆಲ್ ಸ್ಟಾರ್ ಅಂಬರೀಷ್ ಅವರು ಹಾಡಿನ ಮುಖಾಂತರ ಹೇಳಿರುವರು. ಅವರ ಮಾತುಗಳನ್ನು ಒಪ್ಪುವುದಾದರೆ, ಭೂಮಿಯ ಮೇಲಿನ ಸ್ವರ್ಗ ಎಂದು ನಮ್ಮಲ್ಲಿ ಬಹುತೇಕರು ಒಪ್ಪುವ ಸ್ಥಳ ಅಮೇರಿಕಾ ಎನ್ನುವುದರಲ್ಲಿ ದೂಸ್ರಾ ಮಾತಿಲ್ಲ ಅಲ್ಲವೇ?. ಮತ್ತೆ, ನಮ್ಮ ಶ್ರೀರಾಮಚಂದ್ರ 'ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ' ಎಂದು ಹೇಳಿದ್ದಾನಲ್ಲ ಎಂದರೆ, ಅಯ್ಯೋ ಬಿಡಿ ಅದು ತ್ರೇತಾಯುಗದಲ್ಲಿಯ ಮಾತು ಎಂದು ನೀವು ಮೂಗು ಮುರಿಯಬಹುದು, ಇಲ್ಲವೇ ಪ್ರಗತಿಪರ ಬುದ್ದಿ ಜೀವಿಗಳಾಗಿದ್ದರೆ ಶ್ರೀರಾಮ ಒಂದು ಕಾಲ್ಪನಿಕ ಪಾತ್ರವಷ್ಟೇ, ಅಲ್ಲದೇ ಅವನ ಮಾತಿಗೆ ಬೆಲೆ ಕೊಡುವುದು ನಮ್ಮ ಜಾತ್ಯಾತೀತ ಸಿದ್ಧಾಂತಕ್ಕೆ ವಿರುದ್ಧ ಎಂದೂ ಪ್ರತಿಪಾದಿಸಬಹುದು. ಅದು ಬಿಡಿ, ಅಂತರೀಕ್ಷದಿಂದ ಭಾರತ ಹೇಗೆ ಕಾಣಿಸುತ್ತದೆ ಎಂದು ನಾಲ್ಕು ದಶಕಗಳ ಹಿಂದೆ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಪ್ರಶ್ನೆಗೆ ಉತ್ತರಿಸ...